Unexpected pic at night at kumara parvata |
ಮುಂದಿದ್ದವರಿಗೆ, ಹಿಂದಿದ್ದವರಿಗೆ ಬ್ಯಾಟರಿ ಹೊಡೆಯುತ್ತಾ ಕಾಡಿನ ಮಧ್ಯೆ ಸಾಗುವಾಗ ಸಹಜವಾಗೇ ವೇಗ ಕುಂಠಿತವಾಗುತ್ತೆ. ಎಷ್ಟು ಹೊತ್ತು ನಡೆದರೂ ದಾರಿ ಸಾಗುತ್ತಲೇ ಇರಲಿಲ್ಲ. ಎಲ್ಲಾದರೂ ಬೋರ್ಡ್ ಸಿಕ್ಕಿತು ಅಂತ ನೋಡಿದರೆ ಬರೀ ೨೫೦ ಮೀಟರ್ ಅಷ್ಟೇ ಮುಂದೆ ಬಂದಿರುತ್ತಿದ್ದೆವು! ಪ್ರತೀ ೨೫೦ ಮೀಟರ್ ಗೂ ಫಲಕ ಬರೆದ ಅರಣ್ಯ ಇಲಾಖೆಯವರ ಶ್ರಮ ನಿಜಕ್ಕೂ ಶ್ಲಾಘನೀಯ. ಸೋಮವಾರ ಪೇಟೆಯ ಕಡೆಯಿಂದ ಹತ್ತುವವರಿಗೆ ಕಾಡಿನ ಮಧ್ಯೆ ಹತ್ತುವುದರಿಂದ ಕುಮಾರಪರ್ವತದ ತುದಿ ಎಲ್ಲಿದೆ ಎಂದು ಕಾಣುವುದಿಲ್ಲ. ಹಾಗಾಗಿ ಈ ಫಲಕಗಳಿಲ್ಲದಿದ್ದರೆ ದಾರಿ ತಪ್ಪುವ ಸಾಧ್ಯತೆ ತುಂಬಾ ಹೆಚ್ಚು. ದಾರಿಯ ಎಡಮಗ್ಗುಲಲ್ಲೇ ಸಾಗಬೇಕು. ಕೆಲವು ಕಡೆ ಬಲಬಾಗದಲ್ಲಿ ಸ್ವಲ್ಪ ಆಯತಪ್ಪಿದರೆ ಪ್ರಪಾತ !.
ತಂತ್ರಜ್ನಾನ ಅನ್ನೋದು ಎಲ್ಲಿ ಉಪಯೋಗ ಆಗುತ್ತೆ ಅನ್ನೋಕೆ ಇಲ್ಲೊಂದು ಸಣ್ಣ ಉದಾಹರಣೆ. ನಮ್ಮ ಜೊತೆಗೆ ಬಂದಿದ್ದ ಗುಂಪಿನವರೊಬ್ಬರು ಐಪಾಡ್ ತಂದಿದ್ದರು. ಅದರಲ್ಲಿದ್ದ ಗೂಗಲ್ ಮ್ಯಾಪಿನಿಂದ ನಾವು ಹೋಗ್ತಾ ಇರೋ ದಾರಿ ಸರಿ ಇದೆಯಾ, ಬೆಟ್ಟದ ತುದಿಯತ್ತಲೇ ಸಾಗ್ತಾ ಇದ್ದೇವಾ ಅಂತ ವಿಶ್ರಾಂತಿಗೆ ಕೂತಲ್ಲೆಲ್ಲಾ ಪರೀಕ್ಷಿಸುತ್ತಿದ್ದರು ! ಆ ಕಾಡಿನ ಮಧ್ಯೆಯೂ ಅಲ್ಲಲ್ಲಿ ಸಿಗುತ್ತಿದ್ದ ಬಿಎಸ್ಎನ್ನೆಲ್ ನೆಟ್ವರ್ಕಿಗೂ, ಆ ಐಪ್ಯಾಡಿಗೂ, ಗೂಗಲ್ಲಿಗೂ ಒಂದು ಧನ್ಯವಾದ ! ಅಂತೂ ಅಲ್ಲಲ್ಲಿ ಕೂತು, ನಡೆದು ನಡೆಯುತ್ತಲೇ ಕಾಡಿನ ದಾರಿ ಯಾವಾಗ ಮುಗಿಯುತ್ತಪ್ಪಾ ಅಂತ ಬೇಡುವ ಪರಿಸ್ಥಿತಿ ಎದುರಾಯಿತು. ಅದೇ ದಿನ ಬೆಳಗ್ಗೆ ಬಿಸಿಲಲ್ಲಿ ಬೇಯುವ ಹೊತ್ತಿಗೆ ಕಾಡಿನ ದಾರಿ ಸಿಕ್ಕರೆ ಸಾಕಪ್ಪಾ ಅಂತ ಬೇಡಿದ್ದು ನೆನಪಾಗಿ ನಗು ಬಂತು. ಅಂತೂ ಕಾಡಿನ ದಾರಿ ಕ್ರಮಿಸೋ ಹೊತ್ತಿಗೆ ಮತ್ತೆ ಬೆಟ್ಟ ಎದುರಾಯಿತು. ಬೆಟ್ಟ ಅಂದ್ರೆ ಕಲ್ಲು ಬಂಡೆಗಳಷ್ಟೇ. ಬಂಡೆಗಳನ್ನು ಏರುತ್ತಾ ಹತ್ತುತ್ತಾ ಹೋಗಬೇಕು.
Random pic during kumara parvata trecking- Day 1 |
ಅಲ್ಲಿ ಹತ್ತುವಾಗ ಹಿಡಿದು ಕೊಳ್ಳಲು ಮರಗಿಡಗಳೂ ಇಲ್ಲ, ಏನೂ ಇಲ್ಲ ! ಕೆಳಗೆ ನೋಡಿದರೆ ಅಥವಾ ಮೇಲೆ ಎಷ್ಟು ಹತ್ತಲಿಕ್ಕಿದೆ ಅಂತ ನೋಡಿದರೆ ಭಯ ಆಗ್ತಿತ್ತೇನೋ. ಆದರೆ ಕತ್ತಲಾದ ಕಾರಣ ನಮಗೆ ಏನೂ ಸರಿಯಾಗಿ ಕಾಣ್ತಿಲ್ಲ. ದಾರಿಯ ಪ್ರಕಾರ ಆ ಬೆಟ್ಟ ಹತ್ತಬೇಕು, ಹತ್ತುತ್ತಿದ್ದೇವೆ ಅಷ್ಟೇ. ಆ ಬೆಟ್ಟ ಹತ್ತಿದ್ದು ನೆನೆಸಿಕೊಂಡರೆ ಬೆಂಗಳೂರಿನ ಮಾಗಡಿಯ ಬಳಿಯ ಸಾವನದುರ್ಗದ ಚಾರಣ ನೆನಪಾಯಿತು. ಅಷ್ಟರಲ್ಲೇ ನಮ್ಮ ಗುಂಪಿನಲ್ಲಿದ್ದ ದಪ್ಪನೆಯ ಗೆಳೆಯ ಕಿರಣ್ ಗೆ ಕೈಕಾಲು ನಡುಗೋಕೆ ಶುರು ಆಯ್ತು. ನಾನು ಕೆಳಗೆ ಬೀಳ್ತೀನಿ ಅನ್ನೋ ಭಯ ಶುರು ಆಯ್ತು ಅವನಿಗೆ. ನಾನು ಬರೋಲ್ಲ, ಇಲ್ಲೇ ಇರ್ತೀನಿ ಅನ್ನೋ ಹಟ ಅವನದ್ದು. ಆ ಘೋರ ಕಾಡಿನ ಮಧ್ಯೆ ಅವನನ್ನು ಹೇಗೆ ಬಿಡೋದು ? ಹಾಗಂತ ನಾವೆಲ್ಲಾ ಅಲ್ಲೇ ಉಳಿಯೋದೂ ಸಾಧ್ಯವಿರಲಿಲ್ಲ. ಅವನ ಬ್ಯಾಗನ್ನು ನಾವೇ ಹೊತ್ತು, ಅವನಿಗೆ ಧೈರ್ಯ ತುಂಬುತ್ತಾ ಒಂದೊಂದೇ ಹೆಜ್ಜೆ ಮೇಲೆ ಹತ್ತಿಸುತ್ತಾ ಸಾಗೋ ಹೊತ್ತಿಗೆ ಮೊದಲೇ ನಿಧಾನವಾಗಿದ್ದ ನಮ್ಮ ಹತ್ತುವಿಕೆ ಇನ್ನೂ ನಿಧಾನವಾಯಿತು.
Climbing one of the rocky hill on the way to kumara parvata.. |
ಈ ತರದ ಕಲ್ಲುಬೆಟ್ಟ ಒಂದಲ್ಲಾ, ಮಧ್ಯೆ ಮಧ್ಯೆ ಹಲಬಾರಿ ಸಿಗುತ್ತೆ. ಅದರಲ್ಲೆಲ್ಲಾ ಹೀಗೇ ಆಗಿ, ಕೆಲವೆಡೆ ಕೆಲವರು ಮುಂದೆ ನಡೆಯೋದು ಅಸಾಧ್ಯ ಅಂತ ಕೂತು.. ಅವರಿಗೆಲ್ಲಾ ಗ್ಲೋಕೋಸು, ಹಣ್ಣುಗಳ ಸಪ್ಲೆ ಮಾಡಿ, ನಾವೂ ತಿಂದು ಮತ್ತೆ ಮುಂದೆ ಸಾಗುವಂತ ಪರಿಸ್ಥಿತಿ ಬಂತು . ಕೂತಲ್ಲೆಲ್ಲಾ ಮೇಲೆ ನೋಡಿದ್ರೆ ಬರೀ ಮಂಜು. ನೀಲಾಕಾಶದಲ್ಲಿನ ನಕ್ಷತ್ರಗಳೂ ಕಾಣ್ತಿರಲಿಲ್ಲ. ಕಣ್ಣು ಹಾಯಿಸದತ್ತೆಲ್ಲಾ ಮಂಜು. ಆ ಮಂಜಲ್ಲಿ ಮೇಲಕ್ಕೆ ಬ್ಯಾಟರಿ ಬಿಟ್ಟರೆ ಆ ಬೆಳಕಿನ ಆಟ, ಲೇಸರ್ ಶೋ ನೋಡಿದಂತೆ ಆಗುತ್ತಿತ್ತು. ಇದೇ ಬ್ಯಾಟರಿ ಆಟ ಆಡಿಕೊಂಡು ಕೂರೋಕೂ ಟೈಮಿಲ್ಲ. ಬ್ಯಾಟರಿಗಳೆಲ್ಲಾ ಖಾಲಿ ಆಗೋದ್ರೊಳಗೆ ಮೇಲೆ ಹತ್ತಬೇಕು ! ಹೀಗೆ ಸುಸ್ತಾಗಿ ಕೂತ ಸಮಯದಲ್ಲೆಲ್ಲಾ ತಂದಿದ್ದ ಕಾಲು ನೋವಿನ ವೋಲಿನಿ ಸ್ಪ್ರೇ, ಹೊತ್ತು ತಂದಿದ್ದ ಹೆಚ್ಚುವರಿ ನೀರಿನ ಬಾಟಲಿಗಳು ಕೆಲವರ ನೆರವಿಗೆ ಬಂತು !
ಅಂತೂ ಬೆಟ್ಟದ ತುದಿ ತಲುಪಿದ್ವಿ. ಅಲ್ಲಿ ಅಲ್ಲಲ್ಲಿ ಟೆಂಟುಗಳು. ಏನಿಲ್ಲ ಆಂದರೂ ೨೫- ೩೦ ಟೆಂಟುಗಳ್ನ ತುತ್ತತುದಿ ತಲುಪೋವರೆಗೆ ಕಂಡಿರಬಹುದು. ಟೆಂಟು, ಸ್ಲೀಪಿಂಗ್ ಬ್ಯಾಗುಗಳೆಲ್ಲಾ ಸುಮ್ಮನೇ ವಜೆ. ಎರಡೂ ಸೇರಿ ೭-೮ ಕೇಜಿ ಆಗತ್ತಂತೆ. ಅದನ್ನು ಹೊತ್ತು ಬೆಟ್ಟ ಹತ್ತೋಕೆ ಆಗೋದೆ ಇಲ್ಲ ಅಂತ ಜಗಳ ಮಾಡಿದೋರಿಗೆಲ್ಲಾ ಅಲ್ಲಿನ ಮೈಕೊರೆಯುವ ಚಳಿಗೆ ಟೆಂಟು ಏಕೆ ಅನಿವಾರ್ಯ ಅನ್ನೋದು ಅರಿವಾಗತೊಡಗಿತು. ಹೇಗಿದ್ದರೂ ಟೆಂಟು, ಸ್ಲೀಪಿಂಗ್ ಬ್ಯಾಗ್ ಇರುತ್ತಲ್ಲಾ ಅಂತ ಸ್ವೆಟರನ್ನೂ ತರದಿದ್ದ ನನಗೆ ಯಾವಾಗ ಟೆಂಟು ಹುಗಿದು ಅದರ ಒಳಸೇರುತ್ತೇನೋ ಅನಿಸೋಕೆ ಶುರು ಆಯ್ತು ! ನಮಗೆ ಅಂತ ಎರಡು ಟೆಂಟುಗಳಿಗಾಗೋ ಅಷ್ಟು ಜಾಗ ಹುಡುಕಿದ್ವಿ. ಅಲ್ಲಿ ಟೆಂಟು ಹುಗಿಬೇಕಲ್ಲ.. ಆದರೆ ನಮ್ಮ ಗುಂಪಿನ ಯಾರಿಗೂ ಟೆಂಟು ಹುಗಿಯೋದು ಗೊತ್ತಿಲ್ವೇ ! ಪಕ್ಕದ ಗುಂಪಿನೋರಿಗೆ ಕೇಳಿದ್ರೂ ಅವರು ತಮ್ಮ ಟೆಂಟು ಹುಗಿಯೋದ್ರಲ್ಲಿ ಬ್ಯುಸಿ ! ಟೆಂಟು ಹೇಗೋ ಆಗತ್ತೆ, ಆದರೆ ಚಳಿ ಹೊಡೆಯೋಕೆ ರಾತ್ರಿಗೆ ಬೆಂಕಿಯೂ ಬೇಕಲ್ವೇ.. ಎಲ್ಲಾ ಟೆಂಟಿನ ಬಗ್ಗೆ ತಲೆ ಕೆಡಿಸಿಕೊಂಡರೆ ಬೆಂಕಿ ಹಾಕೋಕೆ ಬೇಕಾದ ಕಾಡಿನ ದರಗೆಲೆ, ಪುಳ್ಳೆಗಳನ್ನ ಆರಿಸೋದು ಯಾರು ? ಹಾಗಾಗಿ ಸ್ವಲ್ಪ ಜನ ಆ ಕೆಲಸ , ಸ್ವಲ್ಪ ಜನ ಈ ಕೆಲಸ ಅಂತ ಭಾಗ ಮಾಡಿಕೊಂಡೆವು. ನಾನು ಟೆಂಟು ಹಾಕೋ ಕೆಲಸದ ಗುಂಪಲ್ಲಿ ಸೇರ್ಕೋಂಡೆ. ಅಂತೂ ಪಕ್ಕದ ಗುಂಪಿನಲ್ಲಿದ್ದ ಒಬ್ಬರು ಬಂದು ಟೆಂಟಿನ ಮಧ್ಯಭಾಗದಲ್ಲಿರೋ ಎಕ್ಸ್ ನ್ನು ಗುರಿಯಾಗಿಸಿ ಟೆಂಟಿನ ಕೋಲುಗಳನ್ನ ಹೇಗೆ ಕೊಕ್ಕೆಗಳಲ್ಲಿ ತೂರಿಸೋದು ಅಂತ ಆ ಟೆಂಟಿನಲ್ಲೇ ಇದ್ದ ಮ್ಯಾನುಯೆಲ್ ನೋಡಿ ತೋರಿಸಿದರು. ಕಲಿಯೋವರೆಗೆ ಬ್ರಹ್ಮವಿದ್ಯೆ, ಕಲಿತ ಮೇಲೆ ಕೋತಿವಿದ್ಯೆ ಅಂತಾರಲ್ಲ ಹಾಗೆ ಒಂದು ಕೋಲು ತೂರಿಸಿದ್ದೇ ತಡ ಉಳಿದದ್ದನ್ನ ನಾವೇ ಮುಂದುವರಿಸಿದೆವು, ಸ್ಚಲ್ಪ ಹೊತ್ತಿನಲ್ಲೇ ಎರಡು ಟೆಂಟುಗಳು ಮೇಲೆದ್ದವು.
Near our tents in kumara parvata @ night |
ಅಷ್ಟರಲ್ಲೇ ತರಗೆಲೆ ಆರಿಸೋಕೆ ಹೋಗಿದ್ದ ಆದಿ, ನಿರೂಪ್ ಕೂಡ ಒಣಗಿದ್ದ ಸುಮಾರಷ್ಟು ಕೊಂಬೆಗಳೊಂದಿಗೆ ಬಂದ್ರು. ವರುಣ್, ನಿಕೇತ ತಾವು ತಂದಿದ್ದ ರೊಟ್ಟಿ, ಚಟ್ನಿಪುಡಿಗಳನ್ನು, ರಾಜೇಶ್ ತಾನು ತಂದಿದ್ದ ಹೋಳಿಗೇನ ಹೊರಗೆ ತೆಗೆಯೋ ಅಷ್ಟೊತ್ತಿಗೆ ನಾವು ಬೆಂಕಿಯ ಮುಂದೆ ಊಟಕ್ಕೆ ರೆಡಿ ಆದೆವು. ೨ ರೊಟ್ಟಿ,೧ ಹೋಳಿಗೆಗೆ ಹೊಟ್ಟೆ ತುಂಬಿತು. ಎಲ್ಲಾ ನಮ್ಮ ನಮ್ಮ ಟೆಂಟಿನೊಳಗೆ ಸೇರಿದೆವು. ಟೆಂಟಲ್ಲಿ ಎರಡು ಪದರ ಇರುತ್ತೆ. ಮೇಲ್ಗಡೆ ಇರುವ ದಪ್ಪನೆಯ ಟಾರ್ಪಲ್ ತರದ ನೀಲಿ ಪದರ ಒಂದಾದರೆ ಕೆಳಗೆ ಮಲಗೋಕೆ ಮತ್ತೆ ಮೇಲೆ ಮುಚ್ಚೋ ಬಿಳಿ ಪದರ ಇನ್ನೊಂದು. ಇದರ ಒಳಹೊಕ್ಕು ಅದರ ಜಿಪ್ ಎಳೆದುಕೊಂಡರೆ ಹೊರಗಿನ ಗಾಳಿ ಒಳನುಗ್ಗದೇ ಕ್ರಮೇಣ ಬೆಚ್ಚಗಾಗುತ್ತಾ ಹೋಗುತ್ತೆ. ಹಾಗಾಗಿ ಹೊರಗೆ ಎಷ್ಟೇ ಚಳಿ ಇದ್ದರೂ ಟೆಂಟೊಳಗೆ ಇರೋರಿಗೆ ಗೊತ್ತಾಗಲ್ಲ. ದಪ್ಪ ಮತ್ತು ಉದ್ದಗಿದ್ದ ಕಿರಣ್ ಇದ್ದ ಕಾರಣ ನಮ್ಮ ಟೆಂಟಲ್ಲಿ ೪ ಮತ್ತು ಮತ್ತೊಂದು ಟೆಂಟಲ್ಲಿ ೫ ಜನ ಅಂತ ಅಲ್ಲೇ ಒಪ್ಪಿ ಟೆಂಟೊಳಗೆ ಸೇರಿ ಮಲಗೋಕೆ ಅಣಿ ಆದ್ವಿ. ಅಲ್ಲಿ ಬೀಳ್ತಿದ್ದ ಸಿಕ್ಕಾಪಟ್ಟೆ ಮಂಜಿನ ಕಾರಣದಿಂದ ನಮ್ಮ ಬ್ಯಾಗು, ಶೂ ಯಾವುದನ್ನೂ ಹೊರಗಿಡೋಕೆ ಸಾಧ್ಯ ಇರಲಿಲ್ಲ. ಹಾಗಾಗಿ ಅವನ್ನೂ ಟೆಂಟಿನ ಬಿಳಿ ಪದರದ ಹೊರಗೆ, ನೀಲಿ ಪದರ ಮರೆಯಾಗುವಂತೆ ಇಟ್ವಿ. ಟೆಂಟಿನೊಳಗೆ ಸ್ಲೀಪಿಂಗ್ ಬ್ಯಾಗೊಳಗೆ ಸೇರಿದಾಗ ನಿಜಕ್ಕೂ ಸ್ವರ್ಗ ಸುಖ. ನಡೆದಿದ್ದ ಆಯಾಸವೆಲ್ಲಾ ಸ್ವಲ್ಪ ಸ್ವಲ್ಪವೇ ಮಾಯವಾದ ಅನುಭವ. ಹಾಗೇ ಸ್ವಲ್ಪ ಹೊತ್ತಿನಲ್ಲಿ ನಿದ್ದೆಗೆ ಜಾರಿದೆವು.
ಮಧ್ಯ ಮಧ್ಯ ಟೆಂಟಿನ ಮೇಲೆ ಪರ ಪರ ಏನೋ ಹರಿದಂತೆ ಶಬ್ದ ಆಗಿ ಎಚ್ಚರಾಗ್ತಾ ಇತ್ತು. ಬಹುಶ ಬೆಟ್ಟದ ಮೇಲಿನ ಗಾಳಿಗೆ ಹಾಗೆ ಅನ್ನಿಸಿರಬಹುದು. ಅದು ನಿಜವಾಗಲೂ ಏನು ಅಂತ ಎದ್ದು ನೋಡೋಕೆ ಯಾರಿಗೂ ಮನಸ್ಸಿಲ್ಲದೇ ಇದ್ದದ್ದರಿಂದ ಮತ್ತು ನಾಳೆ ಬೆಳಗ್ಗೆ ಎದ್ದ ಮೇಲೆ ಮತ್ತೆ ನಡೆಯಬೇಕಾದ ಪ್ರಮೇಯ ಇದ್ದಿದ್ರಿಂದ ಮತ್ತೆ ಹಾಗೇ ಮಲಗಾ ಇದ್ದೆವು. ಸ್ವಲ್ಪ ಹೊತ್ತಿನಲ್ಲೇ ಗಾಡ ನಿದ್ರೆ. ಬೆಳಿಗ್ಗೆ ೬ ಘಂಟೆ ಹೊತ್ತಿಗೆ ಎಚ್ಚರ ಆಯ್ತು. ಅಷ್ಟು ಕಷ್ಟಪಟ್ಟು ಬೆಟ್ಟ ಹತ್ತಿದ ಮೇಲೆ ಸೂರ್ಯೋದಯ ನೋಡದಿದ್ರೆ ಹೇಗೆ. ಸರಿ, ಟೆಂಟಿನ ಹೊರಗೆ ಕಾಲಿಟ್ರೆ ಮತ್ತೆ ಮೈಕೊರೆಯೋ ಅಷ್ಟು ಚಳಿ.
ಸ್ವೆಟರು, ಜರ್ಕೀನು ತರದಿದ್ದ ನಾನು ನನ್ನ ಮರೆಗುಳಿತನಕ್ಕೆ ಶಪಿಸೋ ಹೊತ್ತಿಗೆ ತಂದಿದ್ದ ಸ್ಲೀಪಿಂಗ್ ಬ್ಯಾಗ್ ನೆನಪಾಯ್ತು. ಅದನ್ನೇ ಅರ್ಧ ಜಿಪ್ ತೆರೆದು ಕಂಬಳಿ ಕೊಪ್ಪೆಯಂತೆ ಹೊದ್ದಾಗ ಹೊರಗೆ ಕಾಲಿಡಲು ಸಾಧ್ಯವಾಯಿತು. ಅಲ್ಲಿ ಕಲ್ಲು, ಹುಲ್ಲಿನ ಮೇಲೆ ಬರಿಗಾಲಿಟ್ಟರೆ ಅದು ಐಸಿನ ಮೇಲೆ ಇಟ್ಟಂತೆ ಅನುಭವವಾಗುತ್ತಿತ್ತು. ಆ ಚಳಿಗೆ ಏಳಲು ಸೂರ್ಯನಿಗೂ ಬೇಸರ ಬಂದಿರಬೇಕು. ಬರಲೊಲ್ಲೆ ಅನ್ನುತ್ತಿದ್ದ ಬಾಲಸೂರ್ಯನಿಗೆ ಕೊರೆಯೋ ಚಳಿಯಲ್ಲಿ ಕಾಯೋ ಬದಲು ನಿದ್ರಾ ದೇವಿಗೆ ಶರಣೆನ್ನುವುದೇ ಸರಿಯೆನ್ನಿಸಿ ಮತ್ತೆ ಟೆಂಟ್ ಗೆ ಹೊಕ್ಕೆ.
Morning at Kumara Parvata (Me in Blue Sleeping bag to cover myself from shivering cold :-) ) |
ಆದರೆ ಒಮ್ಮೆ ಎಚ್ಚರಾದ ಮೇಲೆ ನಿದ್ರೆ ಬರಬೇಕಲ್ಲ.. ಹಂಗೂ ಹಿಂಗೂ ಸ್ವಲ್ಪ ಹೊತ್ತು ಮಲಗೋ ಹೊತ್ತಿಗೆ ಸೂರ್ಯೋದಯ ಆಗಿರಬಹುದಾ ಅಂತ ಮತ್ತೆ ಕುತೂಹಲ ಮೂಡಿ ಹೊರಬಂದೆ. ಮಂಜನ್ನು ಕೊರೆಯುತ್ತಾ ಮೂಡಲಾರಂಬಿಸಿದ ಕಿತ್ತಳೆ ಕಿರಣಗಳು ಕುಮಾರ ಪರ್ವತ ಹತ್ತಿದ ಎಲ್ಲರಿಗೂ ಶುಭಕೋರಲೆಂದೇ ಮೂಡುತ್ತಿದೆ ಅನ್ನಿಸಿತು.
Photo session @ kumara parvata |
ಮೂಡುತ್ತಿದ್ದ ಆ ಸೂರ್ಯನ ಜೊತೆ ಗೆಳೆಯರ ಫೋಟೋ ಸೆಷನ್ನು !
Sunrise at Kumara Parvata |
ಅಂತೂ ಹೀಗೇ ಏಳೂವರೆ ಆಗುತ್ತಿದ್ದಂಗೆ ಅಲ್ಲಿದ ಎಲ್ಲಾ ಟೆಂಟ್ ಕಿತ್ತು ಹೊರಡಲನುವಾದೆವು. ಅಷ್ಟರಲ್ಲೇ ಒಬ್ಬ ಬಂದು ನಮ್ಮ ಬಳಿ ಅದೆಂತದೊ ಮಾದಕ ಪದಾರ್ಥ ಇದೆಯಾ ಅಂದ. ಅದಿಲ್ಲ ಅಂದೆವು. ಹೋಗಲಿ ಹುಕ್ಕಾ, ತಂಬಾಕು, ಗುಟ್ಕಾ ಇದೆಯಾ ಅಂದ. ಅದೂ ಇಲ್ಲ ಅಂದೆವು. ಇದ್ಯಾವ್ದೂ ಇಲ್ಲದೇ ಈ ಬೆಟ್ಟ ಹತ್ತಿ ಅದೇನು ಮಜಾ ಮಾಡೋಕೆ ಬಂದರೂ ಇವರು ಅನ್ನೋ ತರದ ವಿಚಿತ್ರ ಮೋರೆ ಮಾಡಿ ಅವನು ವಾಪಾಸ್ ಹೋದ !
Poses by friends |
ಬೆಳಿಗ್ಗೆ ಎದ್ದಾಗ ಅಲ್ಲಿದ್ದ ಸಗಣಿ ನೋಡಿದೆ. ಹಿಂದಿನ ದಿನ ರಾತ್ರಿಯೇ ನೋಡಿದ್ದೆವು ಅದನ್ನ. ಅಷ್ಟು ಎತ್ತರ ಆನೆ ಬರುವುದು ಸಾಧ್ಯ ಇಲ್ಲ. ಹಾಗಾಗಿ ಕಾಡೆಮ್ಮೆ/ಕಾಡುಕೋಣದ್ದಾಗಿರಬಹುದೆಂದು ಊಹಿಸಿದೆವು. ತೀರಾ ಆಲೋಚಿಸಿದರೆ ಹಿಂದಿನ ರಾತ್ರಿ ಅಲ್ಲೇ ಮಲಗಿದ ನಮ್ಮ ಮೈ ಜುಂ ಅನಿಸುತ್ತಿತ್ತೇನೋ !ಫೋಟೋ ಸೆಷನ್ ಮುಗಿಸಲೊಲ್ಲದ ಗೆಳೆಯರನ್ನೆಲ್ಲಾ ಮಣಿಸಿ ಟೆಂಟು ಕೀಳೋ ಹೊತ್ತಿಗೆ ಘಂಟೆ ಎಂಟಾಗ್ತಾ ಬಂತು. ಇಳಿಯೋಕೆ ಶುರು ಮಾಡಿದ ಆ ದಾರಿಯ ದಾರಿಯ ಕೊನೆ ಕುಕ್ಕೆ ಸುಬ್ರಮಣ್ಯದಲ್ಲಿ.
Our group starting downhill journey from Kumara Parvata |
ಈಗ ಇಳಿಯೋ ಹೊತ್ತಿಗೆ ಮತ್ತೊಂದು ಕಲ್ಲಿನ ಬೆಟ್ಟ ಇಳಿಯಬೇಕು. ಇಲ್ಲಿ ಕಿರಣ್ ನನ್ನು ನೀಟಾಗಿ ಉತ್ಸಾಹ ತುಂಬುತ್ತಾ ಕೆಳಗಿಳಿಸಿದೆವು. ಇದರಿಂದ ಅವನಿಗೆ ಎಷ್ಟು ಸ್ಪೂರ್ತಿ ಬಂತೆಂದರೆ ಇಲ್ಲಿಂದ ಮಧ್ಯ ಬರುವ ಭಟ್ಟರ ಮನೆಯ ತನಕ ಆತನೇ ಎಲ್ಲರಿಗಿಂತ ಮುಂದೆ ಸಾಗುತ್ತಿದ್ದ!
Starting downhill journey from kumara parvata |
ನಾವು ಇಳಿಯುವಾಗ ಹಿಂದಿನ ದಿನ ಬಂದು ಟೆಂಟು ಹಾಕಿದ, ಕುಕ್ಕೆಯ ಕಡೆಯಿಂದ ಹತ್ತುತ್ತಿದ್ದ ಜನ ಸಿಗಲಾರಂಭಿಸಿದರು
ಅಲ್ಲಿ ನಮಗೆ ಗುಂಪಿನ ಜೊತೆಗೆ ಬಂದಿದ್ದ ಇಬ್ಬರು ಯುವತಿಯರು ಕಂಡರು! ಈ ದುರ್ಗಮ ಚಾರಣದಲ್ಲಿ, ಎರಡು ದಿನ ಸ್ನಾನವಿಲ್ಲದೇ ಇರುವಂತಹ, ಕಂಡಲ್ಲಿ ಬಿಡಾರ ಹೂಡುವಂತಹ ಪರಿಸ್ಥಿತಿಗೆ ಯುವತಿಯರೂ ಬಂದಿದ್ದು ಸ್ವಲ್ಪ ಆಶ್ಚರ್ಯವೇ ಅನಿಸಿತು. ಕುಕ್ಕೆಯ ಕಡೆಯಿಂದ ಬಂದವರಿಗೆ ದಾರಿಯಲ್ಲೇ ಭಟ್ಟರ ಮನೆಯೊಂದು ಸಿಗುವ ಬಗ್ಗೆ,ಅಲ್ಲೇ ಊಟದ, ವಾಸ್ಥವ್ಯದ ವ್ಯವಸ್ಥೆ ಇರುವ ಬಗ್ಗೆ ನಂತರ ತಿಳಿಯಿತು.
Near Naga Parvata |
ನಂತರ ನಾವು ಹತ್ತಿದ್ದ ಸೋಮವಾರಪೇಟೆಯ ದಾರಿಯಲ್ಲಿ ಬರೀ ಕಾಡಾದರೆ, ಇಳಿಯುತ್ತಿದ್ದ ಕುಕ್ಕೆಯ ದಾರಿಯಲ್ಲಿ ಹುಲ್ಲುಗಾವಲು. ಕಣ್ಣೆತ್ತಿ ನೋಡಿದತ್ತೆಲ್ಲಾ ಹಸಿರು ಹುಲ್ಲುಗಾವಲು. ಅದರ ಮಧ್ಯೆ ಜನರ ಸಂಚಾರದಿಂದ , ನೀರಿನ ಹರಿತದಿಂದ ಸವೆದಿದ್ದ ಒಂದೇ ದಾರಿ. ದೂರದಲ್ಲೆಲ್ಲೋ ಸಾಗುತ್ತಿದ್ದ ಚಾರಣಿಗರು ಇರುವೆಗಳಂತೆ, ಹಸಿರು ಹುಲ್ಲ ಮಧ್ಯದ ಸವೆದ ದಾರಿ ಬೈತಲೆ ತೆಗೆದ ಹೆಣ್ಣಿನ ತಲೆಯಂತೆ ಕಾಣುತ್ತಿತ್ತು.
View Downhill .. |
ಕುಮಾರ ಪರ್ವತ ಇಳಿಯುತ್ತಿದ್ದಂತೆಯೇ ನಾಗಪರ್ವತ ಅಂತ ಸಿಗುತ್ತೆ. ಕುಮಾರ ಪರ್ವತದಿಂದ ಸ್ವಲ್ಪ ಇಳಿಯುತ್ತಾ , ಸಣ್ಣ ಪುಟ್ಟ ಬೆಟ್ಟಗಳನ್ನ ಹತ್ತಿ ಇಳಿತಾ ಇಲ್ಲಿಗೆ ತಲುಪುತ್ತೇವೆ. ಅಲ್ಲಿ ದಾರಿ ಮಧ್ಯೆ ಕುಮಾರ ಪರ್ವತದತ್ತ ಕಣ್ಣು ಹಾಯಿಸಿದರೆ ಮುಂಜಾನೆಯ ಆ ದೃಶ್ಯ ಅದ್ಭುತ. ಹಾಗೇ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ನಾಗಪರ್ವತಕ್ಕೆ ತಲುಪಿದೆವು. ಈ ಬೆಟ್ಟವನ್ನು ದೂರದಿಂದ ನೋಡಿದರೆ ಹಾವಿನ ಹೆಡೆಯಂತೆ ಕಾಣುವುದರಿಂದ ಅದಕ್ಕೆ ಹಾಗೆ ಹೆಸರಂತೆ. ಅಲ್ಲಿ ಎಲ್ಲಾ ಕಂಪೆನಿಯ ಮೊಬೈಲ್ ಸಿಗ್ನಲ್ ಗಳೂ ಸಿಗುತ್ತೆ ! ಮನೆಗೆ ಹಿಂದಿನ ದಿನವೆಲ್ಲಾ ಫೋನ್ ಮಾಡದ ಬಗ್ಗೆ ಮಂಗಲಾರತಿ ಆಯ್ತು ಬೆಳಬೆಳಗ್ಗೆಯೇ ! ನಾವೆಲ್ಲಾ ಜೋಪಾನವಾಗಿ, ಆರಾಮಾಗಿ ಇದ್ದೇವೆ. ಇನ್ನೇನು ಬೆಟ್ಟ ಹತ್ತಿದ ಕಷ್ಟಗಳೆಲ್ಲಾ ಮುಗಿಯುತು, ಇಳೀತಾ ಇದ್ದೇವೆ ಅಂತ ಮನೆಯವರಿಗೆಲ್ಲಾ ಸಮಾಧಾನ ಮಾಡಿ ಅಲ್ಲಿಂದ ಮತ್ತೆ ಕೆಳಗೆ ಇಳಿಯೋಕೆ ಶುರು ಮಾಡಿದ್ವಿ.
Grasslands route ..downhill Kumara parvata |
ಹಿಂದಿನ ದಿನದ ನಮ್ಮ ಪ್ರಾರ್ಥನೆಗೆ ಓಗೊಟ್ಟೋ ಏನೋ ಇವತ್ತು ಸೂರ್ಯ ಸ್ವಲ್ಪ ಜೋರಾಗೇ ತನ್ನ ಕಿರಣಗಳನ್ನು ಬೀರುತ್ತಿದ್ದ. ಬೆಳಗಿನ ಕಿರಣಗಳಿಗೇ ನಮ್ಮ ಮುಖ ಸುಡೋಕೆ ಶುರು ಆಯ್ತು. ಮಧ್ಯ ಮಧ್ಯ ಸ್ವಲ್ಪ ಸ್ವಲ್ಪ ಮರದ ಕಾಡುಗಳು ಮರುಭೂಮಿಯಲ್ಲಿನ ಓಯಸಿಸ್ಗಳ ತರ ಅನಿಸೋಕೆ ಶುರು ಆಯ್ತು. ಸ್ವಲ್ಪ ನೆರಳಿದ್ದಲ್ಲಿ ಕೂತು ಏನಾದರೂ ತಿನ್ನುತ್ತಾ ಮತ್ತೆ ಬೆಟ್ಟ ಇಳಿಯೋಕೆ ಶುರು ಮಾಡಿದ್ವಿ. ರಂಜನ್ನಿನ ಮಂಡಕ್ಕಿ, ನನ್ನ, ಗೌತಮಿನ ಬ್ರೆಡ್ಡು, ರಾಜೇಶ್ ನ ಕೇಕುಗಳು ಬೆಳಗ್ಗಿನ ತಿಂಡಿಯಂತೆ ಖಾಲಿ ಆದವು. ಮಧ್ಯಾಹ್ನದವರೆಗಿನ ಆ ಇಳಿತದ ಬಗ್ಗೆ ಬರೆದರೆ ಬರೀ ಪ್ರಕೃತಿ ಸೌಂದರ್ಯದ ಬಗ್ಗೆ ಬರೆಯಬೇಕು. ಇಳಿಯುತ್ತಾ ಅಷ್ಟು ಸುಸ್ತೇನೂ ಅನಿಸುತ್ತಿರಲಿಲ್ಲ.
Downhill Kumara Parvata |
ಒಂದು ೩.೫ ಕಿ.ಮೀ ಇಳಿದ ಮೇಲೆ ಮಂಟಪವೊಂದು ಸಿಗುತ್ತೆ. ಅಲ್ಲಿ ನೀರಿನ ವ್ಯವಸ್ಥೆ ಇದೆ. ವ್ಯವಸ್ಥೆ ಅಂದರೆ ಬೆಟ್ಟದೊಳಗೇ ಹರಿಯುತ್ತಾ ಸಾಗೋ ನೀರು ಇಲ್ಲಿ ಸಣ್ಣ ಧಾರೆಯಂತೆ ಹೊರಬರುತ್ತೆ. ಖಾಲಿಯಾಗಿದ್ದ ನಮ್ಮ ಬಾಟಲಿಗಳನ್ನ ಅದರಲ್ಲೇ ತುಂಬಿಸಿಕೊಂಡು ಸ್ವಲ್ಪ ಹೊತ್ತು ಕೂತು ಅಲ್ಲಿಂದ ಮುಂದೆ ಸಾಗಿದ್ವಿ. ಮಧ್ಯ ಒಂದು ಸಣ್ಣ ಬೆಟ್ಟ.ಅದನ್ನು ಯಾರು ಬೇಗ ಹತ್ತುತ್ತಾರೆ ಅನ್ನೋ ಪಂದ್ಯದಂತೆ ಓಡುತ್ತಾ ಹತ್ತಿದೆವು. ಅಲ್ಲಿಂದ ಕುಮಾರ ಪರ್ವತ ಇದೇ ಅಂತ ಗುರುತು ಹಿಡಿಯೋದು ಕಷ್ಟ. ನಾವು ಬಂದ ದಾರಿ ದೂರದ ಬೆಟ್ಟವೊಂದರ ಹಿಂದೆ ಮರೆಯಾಗೋದೊಂದೇ ನೋಡೋಕೆ ಸಿಗೋದು!
ಕುಕ್ಕೆ ದಾರಿಯಲ್ಲಿ ಬಂದರೆ ಇದೇ ಕುಮಾರ ಪರ್ವತ ಅನ್ನೋ ಭ್ರಮೆಯಲ್ಲಿ ಹತ್ತಿ ಕೊನೆಗೆ ಓ, ಇದಲ್ಲಾ , ಕುಮಾರಪರ್ವತ ಇನ್ನೂ ಮುಂದಿದೆ ಅಂತ ಹಲವಾರು ಭಾರಿ ಭ್ರಮನಿರಸನ ಆಗೋ ಸಾಧ್ಯತೆ ತುಂಬಾ ಇದೆ. ಆದರೂ ಹುಡುಗಿಯರಿಗೆ, ಯುವದಂಪತಿಗಳಿಗೆ, ಸ್ವಲ್ಪ ಸೇಫಾದ ದಾರಿ ಬೇಕು ಅನ್ನೋರಿಗೆ ಕುಕ್ಕೆಯ ಕಡೆಯ ದಾರಿಯೇ ಲೇಸು.
Our Group near one of the view point in kumara parvata |
ಅಂತೂ ಮಧ್ಯಾಹ್ನದ ಹೊತ್ತಿಗೆ ಕೆಳಗಿನ ಚೆಕ್ ಪೋಸ್ಟ್ ಬಳಿ ತಲುಪಿದೆವು. ಅಲ್ಲೇ ಸ್ವಲ್ಪ ಹೊತ್ತು ಕೂತಿದ್ದ ನಮಗೆ ಚೆಕ್ ಪೋಸ್ಟಿನ ಸಿಬ್ಬಂದಿ ಇಲ್ಲೇ ಕೂರಬೇಡಿ, ಸಂಜೆ ಆಗೋ ಅಷ್ಟರ ಹೊತ್ತಿಗೆ ಕುಕ್ಕೆ ಸೇರಬೇಕು ನೀವೆಲ್ಲ.. ಊಟ ಆಗಿಲ್ಲ ಅಂದರೆ ಇಲ್ಲೇ ಭಟ್ಟರ ಮನೆ ಸಿಗುತ್ತೆ ಅಲ್ಲಿ ಊಟ ಮಾಡಿ ಬೇಗ ಮುಂದೆ ಸಾಗಿ ಅಂದ್ರು.ರಘು ಭಟ್ಟರ ಮನೆ ( 9448647947,9480257056) ಬೆಟ್ಟದ ಬುಡದಲ್ಲಿ ಇದೆ. ಸುಮಾರು ೭೦ ವರ್ಷದ ಹಿಂದೆ ರಘು ಭಟ್ಟರ ತಂದೆ ಕಾಸರಗೋಡಿನಿಂದ ಇಲ್ಲಿ ಬಂದು ನೆಲೆಸಿದ್ದಾರಂತೆ. ಅಲ್ಲಿಂದ ಭಟ್ಟರು ಕುಟುಂಬದೊಂದಿಗೆ ಇಲ್ಲೇ ಇದ್ದಾರಂತೆ. ಇಲ್ಲೊಂದು ಮನೆ ಇರುವುದು ಈ ಮಾರ್ಗದಲ್ಲಿ ಬರೋ ಚಾರಣಿಗರಿಗೆ ನಿಜಕ್ಕೂ ಅನುಕೂಲಕರ. ಇಲ್ಲಿಂದ ಕುಕ್ಕೆ ತಲುಪಲು ೪-೫ ಕಿ.ಮೀ ನಡೆಯಬೇಕಾದರೂ ಇಲ್ಲಿಗೆ ತಲುಪಿದಿರೆಂದರೆ ಹೋದ ಜೀವ ಬಂದಂಗೆ ಆಗತ್ತೆ. ಹಿಂದಿನ ದಿನ ಸಂಜೆಯೇ ಬಂದು ಸುಮಾರು ಜನ ಇಲ್ಲೇ ಉಳಿಯುತ್ತಾರಂತೆ. ಬೆಳಿಗ್ಗೆ ಎದ್ದು ಬೆಟ್ಟ ಹತ್ತಿ, ಸಂಜೆಯ ವೇಳೆಗೆ ಇಳಿದು ರಾತ್ರಿಗೆ ಕುಕ್ಕೆ ತಲುಪಿ ಮತ್ತೆ ತಮ್ಮೂರಿಗೆ ವಾಪಾಸಾಗುತ್ತಾರಂತೆ. ಕುಕ್ಕೆಯ ಕಡೆಯಿಂದ ಬರೋ ಸುಮಾರು ಜನ, ಇಲ್ಲಿಗೆ ಬಂದು ಮಂಟಪದವರೆಗೆ ಬಂದು ಸೂರ್ಯಾಸ್ತ ನೋಡಿ ರಾತ್ರೆಗೆ ಭಟ್ಟರ ಮನೆಗೆ ವಾಪಾಸಾಗಿ ಮಲಗುತ್ತಾರಂತೆ. ಮತ್ತೆ ಬೆಳಗ್ಗೆ ೫ ಘಂಟೆ ಸುಮಾರಿಗೆ ಎದ್ದು ಬೆಟ್ಟದ ಚಾರಣಕ್ಕೆ ಹೊರಡುತ್ತಾರಂತೆ. ಹಾಗಾಗಿ ಮುಂಚೆಯೇ ಹೇಳಿದಂತೆ ಕುಕ್ಕೆಯ ಕಡೆಯ ಮಾರ್ಗ ಸ್ವಲ್ಪ ಉದ್ದವಾದರೂ ಚಾರಣಿಗರಿಗೆ ಸೇಫ್ !ಇಲ್ಲಿ ಸೂರ್ಯಾಸ್ತ, ಸೂರ್ಯೋದಯ ನೋಡಲು ಅರಣ್ಯ ಇಲಾಖೆಯವರು ಕಟ್ಟಿದ ೨ view point ಗಳೂ ಇದೆ. ಅಂತದ್ದೆ ಒಂದು ಸ್ಥಳದಲ್ಲಿ ನಮ್ಮ ಗುಂಪು ಕೂತು ತೆಗೆಸಿದ ಚಿತ್ರ ಮೇಲಿನದ್ದು.ಈ ಸ್ಥಳದಲ್ಲಿ ಗಾಳಿಯೂ ಚೆನ್ನಾಗಿ ಬೀಸುವುದರಿಂದ ಇಲ್ಲಿ ಸ್ವಲ್ಪ ಹೊತ್ತು ಕೂತು ವಿಶ್ರಾಂತಿ ಪಡೆಯಬಹುದು.
One of the view point |
ಇಂತದ್ದೆಲ್ಲಾ ಬರೆಯೋದು ಸಾಧುವೋ ಗೊತ್ತಿಲ್ಲ. ಆದರೆ ಒಂದೂವರೆ ದಿನದ ನಂತರ ಅಲ್ಲಿ ಕಂಡ ಲ್ಯಾಟ್ರೀನು ನಮ್ಮ ನೈಸರ್ಗಿಕ ಕರೆಗೆ ಓಗೊಡೋಕೆ ತುಂಬಾ ಸಹಾಯಕ ಆಯ್ತು. ಈ ಭಟ್ಟರ ಮನೆಯೂ ಇಲ್ಲದಿದ್ದರೆ ನೀರಿಲ್ಲದ ಬೆಟ್ಟದಲ್ಲಿನ ೨ ದಿನ ಸ್ವಲ್ಪ ಕಷ್ಟ ಇತ್ತು. ತೀರಾ ಅನಿವಾರ್ಯ ಆದರೆ ಪೇಪರೇ ಗತಿ ಅಂತ ಅಂದುಕೊಂಡಿದ್ವಿ. ಹಾಗೇನೂ ಆಗಲಿಲ್ಲ ! ಭಟ್ಟರ ಮನೆಯಲ್ಲಿ ಊಟಕ್ಕೆ 70 ರೂ. ಅಲ್ಲೇ ಸ್ಚಲ್ಪ ತಯಾರಾದ ನಾವು ಊಟ ಮಾಡಿ ೧ ಘಂಟೆ ಮಲಗಿದ್ವಿ. ೩ ಘಂಟೆ ಹೊತ್ತಿಗೆ ಭಟ್ಟರ ಮನೆ ಪೂರ್ತಿ ಖಾಲಿ. ನಾವು ಬಂದ ಹನ್ನೆರಡೂವರೆ ಹೊತ್ತಿಗೆ ಗಿಜಿ ಗಿಜಿಗುಡುತ್ತಿದ್ದ ಭಟ್ಟರ ಮನೆಯಲ್ಲಿದ್ದ ಚಾರಣಿಗರ ತಂಡಗಳು ಪೂರ್ತಿ ಖಾಲಿ ಆಗಿದ್ದವು. ನಾವೂ ಭಟ್ಟರ ಜೊತೆಗೆ ಫೋಟೋ ತೆಗೆಸಿಕೊಂಡು ಅಲ್ಲಿಂದ ಕುಕ್ಕೆಯತ್ತ ಸಾಗಿದೆವು.
Bhattara Mane.. |
ಈ ದಾರಿಯ ಬಗ್ಗೆ ಬರೆಯಲೇ ಬೇಕು. ನಡೆದಷ್ಟೂ ಮುಗಿಯದ ದಾರಿ. ದಕ್ಷಿಣ ಕನ್ನಡದ ಸೆಖೆ, ನೆತ್ತಿಯ ಮೇಲೆ ಸುಡೋ ಸೂರ್ಯ.. ಹೀಗೆ ಈ ದಾರಿ ಎಂದೂ ಮುಗಿಯದ ಪಯಣವೋ ಎಂದು ಕೆಲ ಬಾರಿ ಅನಿಸಿದ್ದುಂಟು. ಬಾಟಲಿಯಲ್ಲಿ ನೀರು, ಹಿಂದಿನ ದಿನದ ಬ್ರೆಡ್ಡು, ಬಿಸ್ಕೆಟ್ಟುಗಳು ಉಳಿದಿದ್ದರಿಂದ ಅಲ್ಲಲ್ಲಿ ಕೂತು ವಿಶ್ರಾಂತಿ ಪಡೆಯುತ್ತಾ ಮುಂದೆ ಸಾಗಿದೆವು.
Forest Pit Stop .. as rightly said by Goutham :-) |
Never Ending journey |
ಸಂಜೆ ಏದೂವರೆ, ಆರರ ಸುಮಾರಿಗೆ ಕುಕ್ಕೆ ತಲುಪಿದೆವು.
Finally reached Kukke.. |
ನಮ್ಮ ಬಸ್ಸಿದ್ದಿದ್ದು ರಾತ್ರೆ ೧೦:೩೦ ಕ್ಕೆ. ಎಂದೋ ಕುಕ್ಕೆಯ ದೇವರ ದರ್ಶನ ಮಾಡಬೇಕು ಅಂದುಕೊಂಡಿದ್ದ ನಮ್ಮ ಆಸೆ ಈ ಬಾರಿ ಅನಿರೀಕ್ಷಿತವಾಗಿ ನೆರವೇರಲಿದೆ. ಆದರೆ ಸ್ನಾನ ಆಗದೇ ದೇವರ ದರ್ಶನ ಹೇಗೆ ? ಅಲ್ಲಿದ್ದ ಲಾಡ್ಜ್ ಗಳನ್ನು ಹುಡುಕಿ ಒಂದನ್ನು ಬುಕ್ ಮಾಡುವಷ್ಟರಲ್ಲೇ ೭ ಘಂಟೆ. ಅಂತೂ ಒಂದು ಲಾಡ್ಜಿನಲ್ಲಿ ನಮಗೆ ರೆಡಿಯಾಗಿ , ದೇವರ ದರ್ಶನ ಪಡೆದು , ವಾಪಾಸಾಗುವಷ್ಟರ ಸಮಯಕ್ಕೆ ಲಾಡ್ಜ್ ಕೊಡಲು ಒಪ್ಪಿದರು. ಅಲ್ಲಿ ೯ ಜನರಿಂದ ೪೦೦ ಕೊಟ್ಟು ಎಲ್ಲಾ ರೆಡಿ ಆಗಿ ಕುಕ್ಕೆ ದೇವರ ಸನ್ನಿಧಿಗೆ ಬರುವ ಹೊತ್ತಿಗೆ ೮ ಘಂಟೆ. ಕುಕ್ಕೆಯಲ್ಲಿರೋ ಸುಬ್ರಹ್ಮಣ್ಯ ಮತ್ತು ಪರಿವಾರ ದೇವತೆಗಳ ದರ್ಶನ ಪಡೆದು ಎರಡು ದಿನದ ಚಾರಣ ಸುಖಾಂತ್ಯವಾದದ್ದಕ್ಕೆ ವಂದಿಸಿ, ದೇವದರ್ಶನದ ಸಾರ್ಥಕತೆ ಪಡೆದೆವು. ಅಲ್ಲಿನ ಪ್ರಸಾದ ಭೋಜನಕ್ಕೆ ಅಂದು ತುಂಬಾ ಜನ ಸರತಿಯಲ್ಲಿದ್ದರು. ಅಲ್ಲಿ ಕಾದರೆ ಬಸ್ಸು ತಪ್ಪೋ ಭಯದಿಂದ ಅಲ್ಲೇ ಹೊರಗಿದ್ದ ಹೋಟೇಲ್ ಒಂದರಲ್ಲಿ ಊಟ ಮಾಡಿದೆವು. ನಡೆದೂ ನಡೆದೂ ಹೊಟ್ಟೆ ಚೆನ್ನಾಗಿ ಹಸಿದಿತ್ತು.(ಕುಮಾರ ಪರ್ವತದಿಂದ ಕುಕ್ಕೆಗೆ ೧೩ ಕಿ.ಮೀ). ಬಸ್ಸಿನ ಹತ್ತಿರ ತಲುಪುತ್ತಿದ್ದಂತೆಯೇ ನಮ್ಮೆಲ್ಲರ ಬ್ಯಾಗು ಸೇರಿದ್ದ ಸ್ಲೀಪಿಂಗ್ ಬ್ಯಾಗುಗಳನ್ನ ತೆಗೆದು, ಜೊತೆಗೆ ಸುತ್ತಿ ಹಿಡಿದಿದ್ದ ಎರಡು ಟೆಂಟುಗಳನ್ನೂ ತಂದಿದ್ದ ಸಿಮೆಂಟ್ ಚೀಲವೊಂದರಲ್ಲಿ ತುಂಬಿ ಬಸ್ಸಿನ ಡಿಕ್ಕಿಗೆ ಹಾಕಿದೆವು. ಊಟವಾದ ನಂತರ ಬಸ್ಸಲ್ಲಿ ಹೋಗಿ ಕೂತ ನಮಗೇ ತಿಳಿಯದಂತೆ ನಿದ್ರಾ ದೇವಿ ಆವರಿಸಿದ್ದಳು. ಬೆಳಗಾಗೋ ಹೊತ್ತಿಗೆ ಮತ್ತೆ ಬೆಂಗಳೂರು. ನಾಲ್ಕೂಕಾಲಿಗೆ ಬೆಂಗಳೂರಿಗೆ ಬಂದ ನಮ್ಮಲ್ಲಿ ಟೆಂಟು ವಾಪಾಸ್ ಕೊಡೋ ಕೆಲಸ ರಂಜನ್ನೇ ತಗೊಂಡ ಕಾರಣ ನಾವೆಲ್ಲಾ ಶುಭವಿದಾಯ ಹೇಳಿ ಬೀಳ್ಕೊಟ್ಟೆವು.
ಅಂದು ನನಗೆ ಬೆಳಿಗ್ಗೆ ಆರಕ್ಕೇ ಆಫೀಸು! ಸರಿ ಅಂತ ಹೋದ ನನ್ನ ಸುಟ್ಟ ಮುಖದ ಮೇಲೇ ಎಲ್ಲರ ಕಣ್ಣು ! ಬಿಸಿಲಿಗೆ ಸುಟ್ಟ ಮುಖ ನಿಧಾನವಾಗಿ ಪೊರೆ ಕಳಚಿ ತನ್ನ ಸಹಜ ಬಣ್ಣಕ್ಕೆ ಬರಲು ೧ ವಾರ ಬೇಕಾಯ್ತು. ಅಲ್ಲಿವರೆಗೂ ಕೇಳಿದವರಿಗೆಲ್ಲಾ ದಿನಾ ಕುಮಾರ ಪರ್ವತದ ಕತೆ !
ನೀವು ಇದನ್ನೆಲ್ಲಾ ಓದಿ ಮುಗಿಸಿದ್ದೀರೆಂದರೆ ನಿಮ್ಮ ಸಹನೆಗೆ , ಪ್ರೋತ್ಸಾಹಕ್ಕೆ ಮೊದಲ ಧನ್ಯವಾದ . ಇದನ್ನು ಓದಿದ ಮೇಲೆ ನಿಮಗೂ ಅಲ್ಲಿಗೆ ಹೋಗಬೇಕೆಂದು ಅನಿಸಿದರೆ ನನ್ನ ಬರಹ ಧನ್ಯವಾದ ಅನುಭವ ನನಗೆ. ಹಾಗೇನೂ ಅನಿಸದೇ ಈ ರೀತಿ ೨ ದಿನದ ಚಾರಣದಲ್ಲಿ ಭಾಗಿಯಾದ, ಟೆಂಟು ಸ್ಲೀಪಿಂಗ್ ಬ್ಯಾಗ್ ಗಳಲ್ಲಿ ಮಲಗಿದ, ದಿನಗಟ್ಟಲೇ ನಡೆದ ನನ್ನ ಮೊದಲ ಮಧುರ ಅನುಭವದ ಕೆಲವು ತುಣುಕುಗಳಾದರೂ ಪದಗಳಾಗಿ ಮೂಡಿ ನಿಮ್ಮ ಕಲ್ಪನೆಗಳಲ್ಲಿ ಮತ್ತೆ ಜೀವ ತಳೆದರೆ ಮತ್ತೊಮ್ಮೆ ಧನ್ಯತೆಯ ಅನುಭಾವ. ಇದನ್ನು ಬರೆಯುವಾಗ ಮತ್ತೊಮ್ಮೆ ಕುಮಾರ ಪರ್ವತಕ್ಕೆ ಹತ್ತಿ ಬಂದಂತೆ ನೆನಪುಗಳೆಲ್ಲಾ ಹಸಿರಾಗಿ ನಾನು ಸಂತೋಷಿಸಿದ್ದೆಂತೂ ನಿಜ. ಮತ್ತೊಮ್ಮೆ ವಂದಿಸುತ್ತಾ ಮುಂದಿನ ಬರಹದವರೆಗೆ ವಿರಾಮ