Tuesday, February 4, 2014

ಸೂರ್ಯಾಸ್ತವನರಸುತ್ತಾ -೨

ಬಿಡಲೇ ಆಗದಂತೆ ಉರಿಯುತ್ತಿದ್ದ ಕಣ್ಣುಗಳು, ಕೈ ಕಾಲುಗಳೆಲ್ಲಾ ಹಗ್ಗದಿಂದ ಜಗ್ಗಿದಂತೆ. ಎದ್ದೇನೆಂದರೂ ಏಳಲಾಗದಂತೆ ಧಿಮ್ಮೆನ್ನುತ್ತಿರುವ ತಲೆ.. ಎಲ್ಲಿದ್ದೇನೆಂದು ಅರಿವಿಗೆ ಬರಲು ಸ್ವಲ್ಪ ಹೊತ್ತೇ ಬೇಕಾಯಿತು. ಕಣಿವೆಯೊಂದರ ಸೂರ್ಯಾಸ್ತ ನೋಡಬೇಕೆಂದು ಹೊರಟ ಗೆಳೆಯರ ಗುಂಪಿನ ಉದ್ದೇಶ ಸೂರ್ಯಾಸ್ತಕ್ಕಷ್ಟೇ ಸೀಮಿತವಾಗದೇ ಮುಳುಗುರವಿಯ ದೃಶ್ಯಕಾವ್ಯಕ್ಕೆ ಇನ್ನೊಂದಿಷ್ಟು ರಂಗು ಹಚ್ಚುವಂತೆ ಪಾನ ಗೋಷ್ಟಿಯಲ್ಲಿ ತೊಡಗಿತ್ತು. ಈ ಪಾನವೆಂಬುದು ಪೌರುಷದ, ಸ್ಟೇಟಸ್ಸಿನ ಸಂಕೇತವೆಂಬ ಭಾವ ಗುಂಪಿನ ಗೆಳೆಯರದ್ದು ! ಕುಡಿಯದವರನ್ನು ಹೀಯಾಳಿಸುತ್ತಾ ಎಷ್ಟು ಬಾಟಲ್ ಏರಿಸುತ್ತೇವೆ ಅನ್ನುವುದರ ಮೇಲೆ ತಮ್ಮ "ಕೆಪ್ಯಾಸಿಟಿ"ಯ ಗುಣಗಾನ ಮಾಡುವುದರಲ್ಲಿ ಸೂರ್ಯ ಸದ್ದಿಲ್ಲದೇ ಮುಳುಗಿ ಹೋಗಿದ್ದ. ಮಳೆ ನಿಂತರೂ ನಿಲ್ಲದ ತುಂತುರಿನಂತೆ ಸೂರ್ಯ ಮುಳುಗಿದರೂ ಅವನ ಕಂಪಿನ ಕೆಂಪು ಆಗಸದಲ್ಲೆಲ್ಲಾ ಹರಡಿತ್ತು.  ದಿನಕರನು ಬೆಟ್ಟಗಳ ಮರೆಯ ಮನೆ ಸೇರೋ ಹೊತ್ತಿಗೆ ಇವರ ಹೊಟ್ಟೆ ಸೇರಿದ್ದ ಪರಮಾತ್ಮನ ಆಟ ಪ್ರಾರಂಭವಾಗಿತ್ತು. ಆ ಅಮಲಲ್ಲೇ ಅವರ ಹಿಂದಿನ ಸೂರ್ಯಾಸ್ತದ ನೆನಪುಗಳು ಬಿಚ್ಚಿಕೊಳ್ಳುತ್ತಿದ್ದವು


ಹೊತ್ತು ಮುಳುಗುವ ಹೊತ್ತಿನಲೊಂದು ಕಡಲ ಕಿನಾರೆ. ಮೀನುಗಾರರ ದೋಣಿಗಳೆಲ್ಲಾ ಮನೆ ಸೇರೋ ಸಮಯ. ಮಧ್ಯಾಹ್ನದ ಬಿಸಿಲಿಗೆ ನೀರಲ್ಲಿ ಆಡೋಕೆ ಬಂದ ಹುಡುಗರಿಗೆಲ್ಲಾ ಸಂಜೆಯಾಗುತ್ತಿದ್ದಂತೆ ಚಳಿಯಾಗಲು ಶುರುವಾಗಿ ಮನೆ ನೆನಪಾಗುವ ಸಮಯ. ಟಾರ ರಸ್ತೆ, ಕಾರ ಟಾಪು, ಜನರ ನೆತ್ತಿ..ಹೀಗೆ ತನ್ನ ಛಾಯೆಗೆ ಸಿಕ್ಕವರನ್ನೆಲ್ಲಾ ಸುಟ್ಟಿದ್ದಲ್ಲದೇ  ಹಗಲೆಲ್ಲಾ ಭೂಮಿಯ ಸುತ್ತಿ ಜಗದ ಧೂಳನ್ನೆಲ್ಲಾ ಸುತ್ತಿಕೊಂಡಿರೋ ತನ್ನ  ಸ್ನಾನಕ್ಕೆ ಕಡಲ ನೀರನ್ನೇ ಕಾಯಿಸಿಬಿಟ್ಟಿದ್ದಾನೆ! ದಿವಾಕರನ ದಿನದ ಚೇಷ್ಟೆಗಳನ್ನು ನೆನೆ ನೆನೆದು ಸಾಗರೆ ನಗುತ್ತಿದ್ದರೆ ಅವಳ ನಗೆ ಅಲೆಯಲೆಯಾಗಿ ತೀರದಲ್ಲಿ ಆಡುತ್ತಿದ್ದ ಮಕ್ಕಳು, ಮುದಿಯರಾದಿಯಾಗಿ ಎಲ್ಲರಿಗೂ ತಾಕುತ್ತಿದೆ. ಸ್ನಾನಕ್ಕೆ ಹೊರಟ ಸೂರ್ಯನಿಗೆ ಅಲ್ಲಲ್ಲಿ ಕೆಂಪು ಟವೆಲ್ ತೇಲಿಬಿಟ್ಟಂತೆ ಕಡಲ ಅಲ್ಲಲ್ಲಿ ಕೆಂಪು ಕಾಂತಿ ಪ್ರತಿಬಿಂಬಿಸುತ್ತಿದೆ. ನೆತ್ತಿಯ ಮೇಲಿದ್ದ ಸೂರ್ಯ ನಿರಲ್ಲಿ ನೀರಾಗುವಂತೆ ಕಾಣುವ ಪರಿಯ ನೋಡುವುದೇ ಒಂದು ಹಬ್ಬ.   ಊಹೂಂ. ಇಷ್ಟೇ ಆಗಿಬಿಟ್ಟರೆ ಮಜವೆಲ್ಲಿದೆ. ಕೈಯಲ್ಲೊಂದು ಬಾಟಲಿ ಗುಂಡಿಲ್ಲದಿದ್ದರೆ ಗುಂಡಿಗೆಗೆ ಕಿಕ್ಕೇ ಏರೋಲ್ಲ. ಬೀಚ ಬಳಿ ಬಾಟಲ್ ಬಿಡದ ಪೋಲೀಸರ ಕಣ್ಣು ತಪ್ಪಿಸಿ ಬಾಟಲ್ ಒಯ್ಯೋದೇ ಒಂದು ಕಿಕ್ಕು . ಬಾಟಲ್ ಬಿಡದಿದ್ದರೇನಂತೆ. ಮುಂಚೆಯೇ ಏರಿಸಿ ನಡೆಯೋರನ್ನು ತಡೆಯೋರುಂಟೆ ? ಲಿವರಂತೆ ,ಆರೋಗ್ಯವಂತೆ. ನನಗೆ ಬೇಕಾದಾಗೆ ನಾ ಬದುಕುತ್ತೀನಿ.ಬೇಕಾದಾಗೆ ಸಾಯುತ್ತೀನಿ ಕೇಳುವ ಹಕ್ಕು ಜಗಕ್ಕುಂಟೇ ? ಹೂಂ. ಇಲ್ಲದೇ ಏನು ? ಕುಡಿದಿದ್ದರೂ ನೀರಲ್ಲಿ ಆಡುತ್ತೇನೆಂದು ಹೋಗಿ ಜಾರಿ ಬಿದ್ದು ಬಂಡೆಗೆ ತಲೆ ಹೊಡೆದು, ಅಲೆಗಳ ಮಧ್ಯೆ ಕೊಚ್ಚಿಕೊಂಡು ಹೋಗದೇ ಬದುಕಿದ್ದೇ ಹೆಚ್ಚು. ಆದರೂ ಅದು ಕಾಲು ಜಾರಿದ್ದಷ್ಟೇ ಆಗಿರಬಹುದಾ ? ಇನ್ನೊಂದು ಪೆಗ್ ಏರಿಸಿದ್ದರೂ ನನಗೆ ಏನೂ ಆಗುತ್ತಿರಲಿಲ್ಲವಾ ಅಂತ..


ಹೂಂ. ಸೂರ್ಯಾಸ್ತಗಳೆಂದರೆ ಹೇಗಿದ್ದವಲ್ಲವಾ ಬಾಲ್ಯದಲ್ಲಿ. ಪರಮನಮನಹಳ್ಳಿ ಪೇಟೆ ಸಂತೆ ದಿನ ಅಂದ್ರೆ ಏನೋ ಖುಷಿ. ಅವತ್ತಿನ ಸಂತೆಗಿಂತ ಸಂತೆ ಮೈದಾನದ ಹಿಂದಿನ ಬೆಟ್ಟದ ಮೇಲಿನ ಸೂರ್ಯಾಸ್ತ ಹೆಚ್ಚು ಖುಷಿ ಕೊಡುತ್ತಿತ್ತು. ಸಂತೆಗೆ ಅಂತ ಬಂದವರಿಗೆ ನಿಧಾನವಾಗಿ ಬೆಟ್ಟ ಹತ್ತಿ ಸೂರ್ಯಾಸ್ತ ನೋಡುವಷ್ಟು ಹೊತ್ತು, ತಾಳ್ಮೆ ಇಲ್ಲ. ಸೂರ್ಯ ಹತ್ತರಿಂದ ಹದಿನೈದು ನಿಮಿಷದ ಅವಧಿಯಲ್ಲೇ ನಾವು ಬರದಿದ್ದರೆ ಮುನಿಸಿಕೊಂಡು ರವಿ ಮುಳುಗೇ ಬಿಡುತ್ತಿದ್ದ. ಅವ ಮುಳುಗೋದ್ರೊಳಗೆ ಒಂದೇ ಉಸುರಿನಲ್ಲಿ ಬೆಟ್ಟ ಹತ್ತಿ ಸೂರ್ಯಾಸ್ತ ನೋಡ್ಲಿಲ್ಲ ಅಂದ್ರೆ ಆದಿತ್ಯವಾರದ ಸಂತೆಯಲ್ಲಿ ಏನೋ ಮಿಸ್ಸಾದ ಅನುಭವ. ದೂರದಲ್ಲಿ ಕಾಣುತ್ತಿದ್ದ ಮುಳುಗಡೆ ಪ್ರದೇಶ, ಹಿನ್ನೀರು ಅದರ ಮೇಲೆ ತಂದೇ ವೇದಿಕೆಯೆಂಬಂತೆ ಗಾಂಭೀರ್ಯವನ್ನು ಬೀರೋ ಸೂರ್ಯನನ್ನು ನೋಡುವುದೇ ಒಂದು ಚೆಂದ. ಒಂದು ಕಡೆ ಜಾಸ್ತಿ ಬೆಳಕು,ಒಂದು ಕಡೆ ಮೋಡದ ಮರೆಯಾಗಿ ಕಮ್ಮಿ ಬೆಳಕಾಗಿ ಹಸಿರಲ್ಲೇ ಅದೆಷ್ಟೋ ಪರಿ. ಹಸಿರ ಸಿರಿಯ ನಡುವಿನ ರವಿಯ ಕೆಂಪು ರವಿವರ್ಮನ ಚಿತ್ರಗಳಂತೆ ಹಲವು ಚಿತ್ತಾರಗಳನ್ನು ಬಿಡಿಸುತ್ತಿತ್ತು. ದಿನಾ ಸೂರ್ಯ ಮುಳುಗುವುದು ಗೊತ್ತು . ಆದರೆ ಅದೇನಿದು ಬದುಕ ನಿಲುಗಡೆ ? ಮುಳುಗಡೆ ? ನಮಗೆಲ್ಲಾ ಬೆಳಕ ಕೊಡಬೇಕೆಂದು ನಮ್ಮ ಪೂರ್ವಿಕರು ತಮ್ಮ ಜಮೀನು ಮನೆಗಳನ್ನೆಲ್ಲಾ ತ್ಯಾಗ ಮಾಡಿದರಂತೆ. ಅವರು ಬಿಟ್ಟಿದ್ದ ಆ ಜಾಗವೇ ಮುಳುಗಡೆ. ಹಾಗಾಗಿ ಪ್ರತೀ ಬಾರಿ ಬೆಳಕ ಸೂರ್ಯ ಆ ಮುಳುಗಡೆಯ ಹಿನ್ನೀರಲ್ಲಿ ಮುಳುಗುವುದನ್ನ ನೋಡಿದಾಗೆಲ್ಲಾ ಅವರ ನೆನಪಾಗುತ್ತದೆ. ಸೂರ್ಯ ಮುಳುಗದೇ ರಾತ್ರಿಯೂ ಶಕ್ತಿಯ ಜನಕನಾಗೇ ಇದ್ದುಬಿಟ್ಟಿದ್ದರೆ ಅಷ್ಟೆಲ್ಲಾ ಜನ ತಮ್ಮ ಜೀವವೆನಿಸಿದ್ದ ಭೂಮಿ ಬಿಡೋ ದುರ್ದಿನ ಬರ್ತಿರ್ಲಿಲ್ವಾ ಅಂತ.  ಹಾಗಾಗಿ ಪ್ರತೀ ಸಲ ಸೂರ್ಯ ಮುಳುಗುವುದನ್ನ ನೊಡುತ್ತಿದ್ದಾಗ್ಲೂ ಪೂರ್ವಿಕರ ನೆನಪಾದಂತೆ, ಏನೋ ಕಳೆದುಕೊಂಡಂತೆ ನಾನೇ ಎಲ್ಲೋ ಮುಳುಗುತ್ತಿದ್ದಂತೆ..
ಮನಸ್ಸು ಬಾಲ್ಯ , ಹುಡುಗಾಟಗಳ ಹುಡುಕಾಟ ಮುಗಿಸಿ ಮತ್ತೆ ಯೌವನಕ್ಕೆ ಮರಳುತ್ತಿತ್ತು.

 ಹೌದು ಮುಳುಗಡೆ ? ತನ್ನ ಮೆಚ್ಚಿನ ಸೂರ್ಯನಂತೆ ತನ್ನ ಬದುಕೂ ಮುಳುಗುತ್ತಿದೆಯಾ ? ನೋವ ಮರೆಯಲೆಂದೇ ಇರೋದು ನಶೆಯೆಂದು ಈ ಹುಚ್ಚು ಹಚ್ಚಿದರು ಗೆಳೆಯರು. ಗೆಳೆಯರು ಹಚ್ಚಿದ್ದಾ ಅಥವಾ ನಾನೇ ಇದಕ್ಕೆ ದಾಸನಾಗುತ್ತಿದ್ದೇನಾ ? ಮಗನಿಗೆ ನೋವಾದರೆ ತಾಯ ಕರುಳು ಚುರುಕ್ಕೆನ್ನುತ್ತಂತೆ. ನನ್ನ ಕರುಳೇ ಸುಟ್ಟಂತೆ ಅನಿಸ್ತಾ ಇದೆಯಲ್ಲಾ ಇತ್ತೀಚೆಗೆ. ಮೊದಲ ಬಾಟಲಿ ಕೊಟ್ಟ ಗೆಳೆಯನೇ ಇವನು ಹುಚ್ಚು ಕುಡುಕನೆಂದು ನನ್ನಿಂದ ದೂರಾದ ದಿನವ ಮರೆಯಲೇಗೆ ? ಈಗಾಗಲೇ ಯಾವ್ಯಾವ ಅಂಗಾಂಗ ಎಷ್ಟೆಷ್ಟು ಸುಟ್ಟು ಹೋಗಿದೆಯೋ ಗೊತ್ತಿಲ್ಲ ನನ್ನ ಕುಡಿತದಿಂದ. ಆಗೋಗ್ಯವಂಚಿತನಾಗಿ, ಅಂಗವಿಕಲನಾಗಿ ಅದಕ್ಕೆ ನಾನೇ ಕಾರಣನಾದೆನೆಂಬ ನಿಕೃಷ್ಟ ಭಾವನೆಯಲ್ಲಿ, ಪಾಪ ಪ್ರಜ್ನೆಯಲ್ಲಿ ಬಾಳುವ ಬದಲು ಒಂದೇ ಸಲ ಪ್ರಾಣ ಕೊಟ್ಟು ಬಿಡಲಾ ? ಕಣ್ಣೆದುರಿಗಿನ ಸೂರ್ಯ ಮುಳುಗಿ ಹೋದಂತೆ ಬಾಳಲ್ಲಿನ ಅವಕಾಶಗಳು ಕರಗಿಹೋಗುತ್ತಿವೆಯಾ ? . ಸೂರ್ಯನ ಸಾಧನೆಗಳು ಮುಳುಗೋ ವೇಳೆ ಯಾರಿಗೂ ನೆನಪಿಲ್ಲದ ಹಾಗೆ ನನ್ನ ಬಾಳ ಶುರುವಿನ ಸಂಕಲ್ಪಗಳು ಮುಳುಗಿಹೋಗುತ್ತಿವೆಯಾ ? ನಶೆಯ ನಿಶೆಯಲ್ಲಿ ಮುಳುಗುತ್ತಿರುವ ರವಿ ನಾನೇನಾ ಅನಿಸುತ್ತಿತ್ತು.


ಕುಡಿದು ಗಾಡಿ ಓಡಿಸಬಾರದೆಂದು ರೂಲ್ಸಿದೆಯಂತೆ ಪೇಟೆಯಲ್ಲಿ ! ಅದು ಪೇಟೆಯಲ್ಲಿ ಮಾತ್ರವಾ ? ಟ್ರೆಕ್ಕಿಗೆಂದು ಬಟ್ಟೆಗಿಂತ ಬಾಟಲಿಯನ್ನೇ ಜಾಸ್ತಿ ಒಯ್ಯುವ ಮಂದಿಗೆ, ಕುಡಿದ ಮೇಲೇ ಜಾಸ್ತಿ ಸ್ಪೀಡಾಗಿ ಓಡಿಸೋ ಯುವಕರಿಗೆ ಇದು ಸಂಬಂಧವಿಲ್ಲದ್ದೇನೋ.  ಗಾಡಿಯಲ್ಲಿ ಹಿಂದೆ ಕೂತಿದ್ದಾನೆ ಅಂದ್ರೆ ಸಿಕ್ಕಾಪಟ್ಟೆ ಕುಡಿದಿದ್ದಾನೆ ಎಂದೂ , ಮುಂದೆ ಕೂತಿದ್ದಾನೆ ಅಂದ್ರೆ ಸ್ವಲ್ಪ ಕಡಿಮೆ ಕುಡಿದಿದ್ದಾನೆ ಎಂದು ಅರ್ಥ !. ಈ ಕುಡಿತದ ಕೂಟದ ಬೈಕ್ ರೇಸಿನಲ್ಲಿ ಹಿಂದೆ ಕೂತಿದ್ದ ನನಗೆ ಆಗಲೇ ಕಣ್ಣುಗಳು ಎಳೆಯುತ್ತಿದ್ದವು. ರಾತ್ರಿ ಚಳಿಯ ಹೊತ್ತು ಹೆಪ್ಪುಗಟ್ಟುತ್ತಿದ್ದ ಹೊತ್ತು.ಅಪರೂಪಕ್ಕೊಂಬಂತೆ ಅಲ್ಲೊಂದು ಇಲ್ಲೊಂದು ವಾಹನ ಸಿಗುತ್ತಿದ್ದ  ನಿರ್ಜನ ಕಾಡ ರಸ್ತೆಯ ರಾತ್ರೆಯ ಹೊತ್ತು ಸ್ವಲ್ಪ ಹೊತ್ತು ಗಾಳಿ ಮುಖಕ್ಕೆ ಸೋಕಿದ್ದೊಂದೇ ಗೊತ್ತು. ಆಮೇಲೆ ಧಡ್ ಎಂದು ತಲೆ ಏನಕ್ಕೋ ಬಡಿದಂತೆ..ಆಮೇಲೆ ಏನಾಯಿತೋ ಗೊತ್ತಿಲ್ಲ… ಈಗ ನೋಡಿದರೆ ಎಲ್ಲೋ ಹಾಸಿಗೆಯ ಮೇಲಿದ್ದೇನೆ. ಪಕ್ಕದ ಕಿಟಕಿಯಿಂದ ಸೂರ್ಯಾಸ್ತದ ದೃಶ್ಯ ಕಾಣ್ತಾ ಇದೆ. ಕಿಟಕಿಯ ಚೌಕದಲ್ಲಿ ಗುಂಡಗಿರೋ ಸೌರ್ಯನಿಗೆ ಚೌಕಟ್ಟು ಮೂಡುವುದು ನೋಡೋದು ಎಷ್ಟು ಚೆನ್ನ ಅಲ್ವಾ ? ಅಂದಾಗೆ ಬಿದ್ದಾಗ ನಿನ್ನೆ ರಾತ್ರಿಯಾಗಿತ್ತು. ಈಗ ಮತ್ತೆ ಸೂರ್ಯಾಸ್ತವೆಂದರೆ ಆಗಲೇ ಒಂದು ದಿನವಾಗಿದೆಯಾ ? ಬಿದ್ದದ್ದು ನಿನ್ನೆಯಾ ಅಥವಾ ? .. ಅಂದರೆ ನಾನು ಹೀಗೇ ಮಲಗಿ ಎಷ್ಟು ದಿನಗಳಾಯ್ತು ? ಹೀಗೆ ಸ್ವಲ್ಪ ಹೊತ್ತಿನ ತನಕ ಪ್ರಶ್ನಾ ಸಮೂಹ ಕಾಡತೊಡಗಿತ್ತು.. ಆದರೆ ಸೂರ್ಯ ಕಿಟಕಿನ ಚೌಕದ ಪರಿಧಿಯ ಹೊರ ಹೋಗುತ್ತಿದ್ದಂತೆಯೇ ಕನಸು, ವಾಸ್ತವಗಳ ನಡುವಿನ ಅಂತರದ ಅರಿವು ಕಮ್ಮಿಯಾಗುತ್ತಾ ಜೀವವೊಂದು ಮತ್ತೆ ಕನಸ ಲೋಕದಲ್ಲಿ ಮುಳುಗತೊಡಗಿತ್ತು.. 
*****