Sunday, December 14, 2014

ನಾನೋದಿದ ಹೊತ್ತುಗೆ :ರವಿ ಬೆಳಗೆರೆಯವರಿಂದ ಅನುವಾದಿತ ಬ್ರಿಗೇಡಿಯರ್ ಜಾನ್ .ಪಿ.ದಳವಿಯವರ "ಹಿಮಾಲಯನ್ ಬ್ಲಂಡರ್" !

ಈ ಪುಸ್ತಕದ ಪುಟಪುಟಗಳ ಓದ್ತಾ ಹೋದಂಗೆ ಮೈಯೆಲ್ಲಾ ಉರಿದೋಗತ್ತೆ ಕೆಲೋ ಜನಗಳ ಬಗ್ಗೆ :-( ಆ ಮುಖ್ಯವಾದ ನಾಲ್ಕು  ಜನ ಮತ್ತು ಪ್ರತ್ಯಕ್ಷ, ಪರೋಕ್ಷವಾಗಿ ಸಾಥಿಯಾದ ಉಳಿದವ್ರು ಯಾರಂತ ಹೇಳೋ ಅವಶ್ಯಕತೆ ಈ ಪುಸ್ತಕವನ್ನು ಈಗಾಗಲೇ ಓದಿದೋರಿಗೆ ಖಂಡಿತಾ ಇಲ್ಲ ಅಂದ್ಕೋತೀನಿ. ಇನ್ನೂ ಓದದೇ ಇದ್ದ ಗೆಳೆಯರ್ಯಾರಾದ್ರೂ ಇದ್ದರೆ ಅವರಿಗೆ ಅದ್ರ ಬಗ್ಗೆ ಪುಸ್ತಕವನ್ನೋದದೇ ಹೇಳೋದು ಲೇಖಕನ ಕರಾವುವಾಕ್ ಮಾಹಿತಿಗಳಿಗೆ, ಕಣ್ಣಿಗೆ ಕಟ್ಟುವಂತಹ ವಿವರಣೆಗಳಿಗೆ ಅವಮಾನ ಮಾಡಿದಂತೇ ಅಂತ ಭಾವಿಸಬಹುದೇನೋ. ೧೯೬೨ರ ಚೀನಾ ಯುದ್ದ ಆಕಸ್ಮಿಕವಲ್ಲದಿದ್ದರೂ ಅದರ ನೈಜ ಚಿತ್ರಣ ನಮ್ಮ ಜನಕ್ಕೆ ಸಿಕ್ಕಿದ್ದು ತೀರಾ ಆಕಸ್ಮಿಕವೆನ್ನೋ ಪರಿಸ್ಥಿತಿ ನಿರ್ಮಾಣವಾಗಿ ಹೋಗಿತ್ತಂತೆ. ಪೀಯುವಿನಲ್ಲೇ ಗೆಳೆಯ ಶ್ರೀಧರ ಈ ಪುಸ್ತಕದ ಬಗ್ಗೆ ಹೇಳಿದ್ರೂ ಹುಡುಕಿದ ಅನೇಕ ಗ್ರಂಥಾಲಯಗಳಲ್ಲಿ ಸಿಕ್ಕದ ಈ ಪುಸ್ತಕ ಇತ್ತೀಚೆಗೆ ಕೊಂಡು ಓದಿದ ನನ್ನಂತವರು, ಇನ್ನೂ ಓದದೇ ಇರುವಂತಹವರೂ ಅನೇಕರಿರಬಹುದಾದ ಸಾಧ್ಯತೆಯ ಊಹಿಸುತ್ತಾ ಆ ಹೊತ್ತಿಗೆಯ ಬಗ್ಗೆ ಒಂದಿಷ್ಟು ಸಾಲುಗಳು.

ಇಪ್ಪತ್ತು ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಚೈನಾ ಯೋಧರು ಹತ್ತು ವರ್ಷಗಳಿಂದ್ಲೂ ನಮ್ಮ ಗಡಿಯುದ್ದಕ್ಕೂ ಭದ್ರ ರಸ್ತೆಗಳನ್ನು ನಿರ್ಮಿಸಿ, ಯುದ್ದಕ್ಕೆ ಸನ್ನದ್ದರಾಗಿ ನಿಂತಿದ್ರೂ ಅವರೇನು ಯುದ್ದ ಮಾಡಲಿಕ್ಕಿಲ್ಲ ಬಿಡಿ ಅಂತ ಕೊನೆಯವರೆಗೂ ತಳ್ಳಿ ಹಾಕಿ ಕೊನೆಗೆ ಫಾರ್ವರ್ಡ್ ಪಾಲಿಸಿ ಅಂತ ಬರೀ ಸಾವಿರ ಚಿಲ್ಲರೆ ಸೈನಿಕರನ್ನು ಏಕಾಏಕಿ ಹಿಮಾಲಯಕ್ಕಟ್ಟಿ ಮಾರಣ ಹೋಮಗೈದುದರ ಬಗ್ಗೆ ಆ ಯುದ್ದದ ಸಂದರ್ಭದಲ್ಲಿ ಶತ್ರುಗಳ ಸೆರೆ ಸಿಕ್ಕಿ ನಂತರ ಬಿಡುಗಡೆಯಾದ ಆರು ವರ್ಷಗಳ ನಂತರ ಬ್ರಿಗೇಡಿಯರ್ ದಳವಿಯವರು ಬರೆಯುತ್ತಾರೆ. ಹೋರಾಟ ಮಾಡಲು ತಕ್ಕಷ್ಟು ಸಂಖ್ಯೆಯ ಬುಲೆಟ್ಟುಗಳಿಲ್ಲದೆ, ಊಟವಿಲ್ಲದೆ, ಹೊದೆಯಲೊಂದು ಬೆಚ್ಚನೆ ವಸ್ತ್ರವಿಲ್ಲದೆ , ಹಿಮದಲ್ಲಿ ನಡೆಯೋ ಬೂಟಿಲ್ಲದೆ ನಮ್ಮ ಸೈನಿಕನ ಕಾಲುಗಳು ಕೊಳೆತು ಹೋಗುತ್ತಿದ್ದರೆ, ಫ್ರಾಸ್ಟ್ ಬರ್ನ್ನಂತಹ ತೊಂದರೆಗಳು,ಹಿಮಾಲಯಲದ ಪರಿಸ್ಥಿತಿಗೆ ಹೊಂದಿಕೊಳ್ಳಲು ಬೇಕಾದಂತಹ ಅಕ್ಲಮಟೈಜ್(ಹಿಮಪರ್ವತಗಳ ಚಾರಣದ ಸಂದರ್ಭ ಏರುಪೇರಾಗೋ ಒತ್ತಡ, ಶೈತ್ಯಕ್ಕೆ ರಕ್ತಕಾರಿಯೋ ಉಸಿರುಗಟ್ಟದೆಯೋ ಸಾಯದಂತೆ ಅಲ್ಲಿನ ವಾತಾವರಣಕ್ಕೆ ನಮ್ಮ ದೇಹವನ್ನು ಒಗ್ಗಿಸಿಕೊಳ್ಳುವುದು), ಪರ್ವತ ಯುದ್ದ ತರಬೇತಿ ಯಾವುದೂ ಇಲ್ಲದೇ, ಕೊನೆ ಪಕ್ಷ ಹಿಮಗಡ್ಡೆಗಳ ಮೇಲೆ ಪ್ರತಿಫಲಿಸೋ ಸೂರ್ಯಕಿರಣಗಳಿಂದ ಹೋಗುತ್ತಿರೋ ತಮ್ಮ ಕಣ್ಣುಗಳನ್ನು ಉಳಿಸೋ ಕನ್ನಡಕವೂ ಇರದ ಪರಿಸ್ಥಿತಿಯಲ್ಲಿ ನಮ್ಮ ಸೈನಿಕ ಒದ್ದಾಡುತ್ತಿದ್ದರೆ ನಾಯಕರೆನಿಸಿಕೊಂಡವರು ವಿದೇಶಿ ಪ್ರವಾಸ ಮಾಡುತ್ತಿರುತ್ತಾರೆ. ಅಲ್ಲೇನಿದೆ, ಹುಲ್ಲುಕಡ್ಡಿಯೂ ಹುಟ್ಟುವುದಿಲ್ಲ,ಸೈನ್ಯಕ್ಕೆ ಆದಷ್ಟು ಕಡಿಮೆ ಖರ್ಚು ಮಾಡಿ ಆಯ್ತಾ ಅನ್ನುವಂತಹ ಬೇಜವಬ್ದಾರಿ ಹೇಳಿಕಗಳ ನೀಡುತ್ತಿರುತ್ತಾರೆ.

ಅಂತಹ ಕೆಲ ಸ್ಯಾಂಪಲ್ಗಳು ನೋಡಿ:
**ಪಂಜಾಬ್ ಮತ್ತು ಗೂರ್ಖಾಗಳ ಒಂದು ತಂಡ ಬೀಡುಬಿಟ್ಟಿರುವಲ್ಲಿ ದಳವಿಯವರು ಬರುತ್ತಾರೆ. ಚಪಾತಿ ಇಷ್ಟ ಪಡೋ, ಅನ್ನ ತಿನ್ನುವುದನ್ನೇ ಹಿಂಸೆಯೆಂದು ಭಾವಿಸೋ ಅವರು ಅನ್ನ ಬೇಯಿಸುತ್ತಾ ಇರುತ್ತಾರೆ ಆ ಹೊತ್ತಲ್ಲಿ. ಏನಪ್ಪಾ ಹೀಗೆ ಅಂತ ಕೇಳಿದ್ರೆ.
ತೊಲೆಗಳನ್ನ ಹೊತ್ತುಕೊಂಡು ಬರಲು ಎಂಟು ಜನ ಬೇಕು ಸಾರ್. ಅದ್ರ ಬದ್ಲು ಎಂಟು ಜನವೂ ಮದ್ದುಗುಂಡುಗಳನ್ನು ತಂದಿದ್ದೀವಿ ಅನ್ನುತ್ತಾರೆ ಆ ಧೀರೋದಾತ್ತ ಯೋಧರು
**ಗುಂಡೇಟಿಗೆ ತನ್ನೆರಡು ಕಾಲುಗಳನ್ನು ಕಳೆದುಕೊಂಡರೂ ಧೃತಿಗೆಡದೆ ತನ್ನ ಸಿಬ್ಬಂದಿಗಳನ್ನು ಪ್ರೇರೇಪಿಸೋ ಮೇಜರ್ ಬಿ.ಕೆ ಅನ್ನುವ ಅಧಿಕಾರಿಯ ದೇಹದೊಳಕ್ಕೆ ೧೧೪ ಬುಲೆಟ್ ಹೊಕ್ಕಿರುತ್ತದೆ !
**ಬ್ರಿಗೇಡಿಯರ್ ದಳವಿಯವರ ಬಳಿ ಬಂದು ಒಬ್ಬ ಸೈನಿಕ ಹೇಳುತ್ತಾನೆ. ಆ ನದಿಯಾಚೆ ಕೂತ ಚೈನಾ ಸೈನಿಕರು ಚಳಿ ಕಾಯಿಸಿಕೊಳ್ಳುತ್ತಿದ್ದಾರೆ ಸಾರ್ ಅಂತ. ಚಳಿಯೇ ಸಾಯಿಸಿಬಿಡಬಹುದಾಗಿದ್ದ ಇವರಿಗೆ ಬೇಸರವಾಗೋದು ಅದಕ್ಕಲ್ಲ. ಶತ್ರು ಸೈನ್ಯ ತಮ್ಮೆದುರೇ ಕೂತು ಬೆಂಕಿ ಹಾಕಿ ತನ್ನ ಇರುವಿಕೆಯನ್ನು ತೋರಿಸಿಕೊಂಡ್ರೂ ಏನೂ ಮಾಡಲಾಗದ ಅಸಹಾಯಕತೆಗೆ ತಳ್ಳಿದ ಶಸ್ತ್ರಾಸ್ತ್ರಗಳ , ಮೂಲ ಸೌಕರ್ಯಗಳ, ತಕ್ಕಷ್ಟು ಸೈನಿಕರ ಬೆಂಬಲವಿಲ್ಲದಂತೆ ಮಾಡಿದ ಜನಗಳ ಬಗ್ಗೆ.
** ಒಬ್ಬ ಅಧಿಕಾರಿ ರೊಟ್ಟಿಯ ಮೇಲೆ ವರದಿ ಬರೆದು ಕಳಿಸುತ್ತಾನೆ. ಸೇನಾ ಶಿಸ್ತು ಉಲ್ಲಂಘಿಸಿದ ನಿನ್ನ ಮೇಲೇಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಅಂತ ಅವನಿಗೆ ಉತ್ತರ ಹೋಗುತ್ತದೆ. ಕಾಗದ ಅಂತಿದ್ದರೆ ತಾನೆ ಬರೆಯೋದು. ಇಲ್ಲಿ ದಕ್ಕುತ್ತಿರೋದು ಕೊಂಚ ರೊಟ್ಟಿಯ ಹಿಟ್ಟು ನತ್ತು ಈ ಮುರುಕು ರೊಟ್ಟಿಯಷ್ಟೇ ಅನ್ನೋ ಕರುಣಾಜನಕ ಉತ್ತರ ಬರುತ್ತೆ.
**ಎರಡು ದಿನ ನಡೆದುಹೋಗುವ ದಾರಿಗೆ ಎರಡು ಕಿ.ಮೀ ಅಂತ ಕಾಣೋ ತರ ಬರೆದಿರುತ್ತಾನೆ. ಮ್ಯಾಪ್ ಬರೆದಿರೋನು. ಏನಪ್ಪಾ ಹೀಗೆ ಅಂದ್ರೆ .. ಸಾರ್ ನನ್ನತ್ರ ಇದ್ದಿದ್ದೇ ಒಂದು ಫುಲ್ ಸ್ಕೇಪ್ ಹಾಳೆ. ಇಲ್ಲಿಯವರೆಗಿನ ಮ್ಯಾಪ್ ಬರೀತಾ ಬರೀತಾ ಅದು ಖಾಲಿಯಾಗ್ತಾ ಬಂತು. ಹೊಸ ಹಾಳೆಯಿಲ್ಲ. ಹಾಗಾಗಿ ಆ ಎರಡು ಸ್ಥಳಗಳನ್ನ ಅಲ್ಲೇ ಮೂಲೆಯಲ್ಲಿ ತೋರಿಸಿದೆ ಅನ್ನುತ್ತಾನೆ.!!
** ಸುದ್ದಿಯೇ ಆಗದ ಅನಿಮಲ್ ಟ್ರಾನ್ಸಪೋರ್ಟ್ ಮೆನ್ ಅಂತ ಕರೆಸಿಕೊಳ್ಳೋ ಸೈನಿಕರಿಗೆ ಅವರ ಕುಟುಂಬದ , ಇನ್ನಿತರ ಸಂದೇಶ ತಲುಪಿಸೋ ಹೇಸರಗತ್ತೆಯ ಸಹಾಯದಿಂದ ಹೊರಡೋ ಕರುಣಾಜನಕ ಸ್ಥಿತಿಯಲ್ಲಿರೋ ಅಂಚೆಯಣ್ಣನ ಬಗ್ಗೆ, ಕೆಲ ಕಡೆ ಸಿಕ್ಕ ವೈದ್ಯರ ಬಗ್ಗೆ, ಮೆಸೆಂಜರ್ಗಳು, ಆಹಾರ ತಲುಪಿಸಲು ಹೋಗಿ ಪ್ರಾಣ ಕಳೆದುಕೊಂಡ ಹೆಲಿಕ್ಯಾಪ್ಟರುಗಳು.. ಹೀಗೆ ಯುದ್ದಭೂಮಿಯಲ್ಲಿ ತಮ್ಮ ಪ್ರಧಾನಭೂಮಿಕೆಯಲ್ಲಿದ್ದದಿದ್ದಊ ಸಾವಿಗಾಹುತಿಯಾದ ಅನೇಕ ಜನರ ಬಗ್ಗೆ ಬರೆಯುತ್ತಾ ಹೋಗುತ್ತಾರೆ ಬ್ರಿಗೇಡಿಯರ್.
** ಬರೀ ಇಷ್ಟೇ ಆಗಿದ್ದರೆ ಏನೂ ಅನಿಸುತ್ತಿರಲಿಲ್ಲವೇನೋ. ಭಾರತ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ೧೯೪೭ ರಿಂದ ೧೯೬೨ರವರೆಗೂ ಸೇನೆ ಅನ್ನೋದನ್ನು ಕಡೆಗಣಿಸುತ್ತಲೇ ಬಂದ ನಾಯಕರ ಬಗ್ಗೆ, ಅಧಿಕಾರಿವರ್ಗದ ಬಗ್ಗೆ ತೆಗೆದುಕೊಳ್ಳಬೇಕಿದ್ದ ನಿರ್ಧಾರಗಳು ಬಾರದ ಬಗ್ಗೆ, ಬೇಕಿಲ್ಲದ ನಿರ್ಧಾರಗಳಿಂದಾದ ರಕ್ತಪಾತದ ಬಗ್ಗೆಯೂ ವಿಶ್ಲೇಷಿಸುತ್ತಾ ಹೋಗುತ್ತಾರೆ.
** ಮೇಜರ್ ಚೌಧರಿ, ಕ್ಯಾಪ್ಟನ್ ಮಂಗತ್, ಲೆಫ್ಟಿನೆಂಟ್ ಕರ್ನಲ್ ರೀಖ್.. ಹೀಗೆ ಹತ್ತು ಹಲವು ಜನ ದೇಶಕ್ಕಾಗಿ ತಮ್ಮ ಜೀವ ತೆತ್ತ ಪ್ರಸಂಗಗಳು ಮನ ಕಲಕಿಸಿದರೆ, ಜನರಲ್ ತಿಮ್ಮಯ್ಯನವರನ್ನೇ ನಿರ್ಣಯಗಳ ಕೈಗೊಳ್ಳಲು ಬಿಡದ ಸಚಿವಾಲಯ, ಗಡಿ ಹೊತ್ತಿ ಉರಿಯುತ್ತಿದ್ದರೆ ಅದನ್ನು ಅಲ್ಲೇ ಅತಂತ್ರವಾಗಿಸಿ ಕಾಶ್ಮೀರ ಕಣಿವೆಯಲ್ಲಿ ಕುಟುಂಬದೊಂದಿಗೆ ಮೋಜು ಮಾಡಲು ತೆರಳೋ ಅಧಿಕಾರಿ.. ಇನ್ನಿತರ ಪ್ರಸಂಗಗಳು ಮೈಯೆಲ್ಲಾ ಉರಿಯುವಂತೆ ಮಾಡುತ್ತವೆ.


ರಾಷ್ಟ್ರದ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತದೆ ಅಂತ ಅಂದು ನಿಷೇಧಿಸಲ್ಪಟ್ಟ ಪುಸ್ತಕ ಕನ್ನಡಕ್ಕೆ ಅನುವಾದಗೊಂಡಿದ್ದು ಕಾರ್ಗಿಲ್ ಕದನದ ಹೊತ್ತಿಗೆ.ಆಗ ವೀರಾವೇಷವಾಗಿದ್ದ ನಮ್ಮ ದೇಶಪ್ರೇಮ ಮತ್ತೆ ಹೊದ್ದು ಮಲಗಿ ಬರೀ ಜೂಮ್ಗೇಟು, ಕಲ್ಲಿದ್ದಲು, ಜೀಜೀ ಹಗರಣಗಳಲ್ಲಿ ಆಸಕ್ತಿ ತೋರುವಂತಾಗಿರೋದು ಬೇಸರದ ಸಂಗತಿ.ಯಾವ ತಂಟೆಯೂ ಇಲ್ಲದೆ ಆರಾಮಾಗಿ ಮನೆಯಲ್ಲಿ ಹೊದ್ದು ಕುಳಿತು, ದೇಶ ನಂಗೇನು ಕೊಟ್ಟಿದೆ, ಇಲ್ಲಿರುವುದು ಬರೀ ಅದು ಇದು ಅಂತ ಭಾಷಣ ಬಿಗಿಯೋ ಮೊದಲು ಇಂತಹ ನೆತ್ತರಗಾಥೆಗಳನ್ನು ಓದಿಕೊಳ್ಳದ ಶ್ರೀಸಾಮಾನ್ಯರಲ್ಲಿ ನಾನೂ ಒಬ್ಬನಾಗಿದ್ದ ಬಗ್ಗೆ ನಾಚಿಕೆಯಾಗುತ್ತಿದೆ :-( ಎಲ್ಲೋ ಉಗ್ರಗಾಮಿಗಳಿಗೆ ಬೆಂಬಲಿಸುತ್ತಿದ್ದವ ಇಂದು ಸೆರೆಸಿಕ್ಕದ್ದು ದೊಡ್ಡ ಸಾಧನೆಯಂದು ಮತ್ತೆಲ್ಲೋ ಒಂದು ಪಂದ್ಯವನ್ನು ಸೋತದ್ದು ಇಡೀ ದೇಶಕ್ಕೆ ಅವಮಾನವೆಂದು ಬಿಂಬಿಸೋ ವರ್ಗಕ್ಕೆ ಗಡಿಯಲ್ಲಿ ಹಗಲಿರುಳೂ ನಮ್ಮ ಕಾಯೋ ಯೋಧ ಒಮ್ಮೆಯಾದರೂ ನೆನಪಾಗುತ್ತಾನಾ ? ಕೆಲಕ್ಷಣವಾದರೂ ಅಂತ ಧೀರರ ನೆನೆಯುವಂತಾದರೆ, ದೇಶಕ್ಕೆ ಪ್ರಾಣವನ್ನೇ ತೆರೋ ಯೋಧನಿಗೆ, ಅವನ ಕುಟುಂಬದವರಿಗೆ ಇನ್ನಾದರೂ ಸೂಕ್ತ ಸೌಲಭ್ಯಗಳು ದಕ್ಕವಂತಾದರೆ ಈ ಪುಸ್ತಕದ, (ಹೀಗೇ ಬಂದಿರಬಹುದಾದ ಇನ್ನೂ ಅಸಂಖ್ಯಗಾಥೆಗಳ) ಆಶಯ ಸಾರ್ಥಕವಾಗಬಹುದೇನೋ.. 

4 comments:

 1. ರಾಜಕಾರಣಿಯೊಬ್ಬನ ತೆವಲಿಗೆ ಬಲಿ ಬಿದ್ದವರೆಷ್ಟೋ!
  ಹದಿನೈದು ವರ್ಷಗಳ ಹಿಂದೆ ಓದಿ, ನಾನು ಕಣ್ಣೀರಾದ ಅನುವಾದಿತ ಕಾದಂಬರಿಯನ್ನು ನೆನಪಿಸಿದ ತಮಗೆ ವಂದನೆಗಳು.

  ReplyDelete
 2. Nija ,prashasti nanoo odidde ee pustakava 9th allo 10th allo...bahushaha idoo ondu kaarana iddeetu naa 'gandhi' kutumbava teera ketta reetiyalli tiraskarisodakke.....yaako nee bareditta ee bhaava matte kannancha oddeyaagisi bidtu...
  Irali gadi kaayo jeevagala bagegondu hemmeya preeti ellaralloo

  ReplyDelete
 3. ರಾಷ್ಟ್ರೋತ್ಥಾನ ಪರಿಷತ್ ಪ್ರಕಟಿಸಿರುವ 'ರಣವೀಳ್ಯ' ಪುಸ್ತಕ ಸಿಕ್ಕರೆ ಓದು. ಯುದ್ಧದ, ಯೋಧರ ಅನೇಕ ದೃಷ್ಟಾಂತಗಳಿವೆ. ಓದುತ್ತಾ ಹೋದರೆ ರೋಮಾಂಚನದ ಜೊತೆಗೆ ಬೇಸರ, ಸಿಟ್ಟು, ಕಿಚ್ಚು.... ಅದರೊಂದಿಗೆ ದೇಶಭಕ್ತಿ ಜಾಗೃತಿ.

  ReplyDelete
  Replies
  1. ಧನ್ಯವಾದಗಳು ಬದ್ರಿ ಭಾಯ್,ಭಾಗ್ಯ ಮತ್ತು ವಿ.ರಾ.ಹೆ.. ನೀವೆಂದಿರೋ ಬುಕ್ಕು ಓದ್ಲೆ ಇನ್ನೂ. ಓದಕ್ಕು :-)

   Delete