Friday, April 22, 2016

ಅವನಿ


Scluptures @ Avani Ramalingeshwara temple

ಅರಳಗುಪ್ಪೆಯ ಹೊಯ್ಸಳರ ಕಾಲದ ಚನ್ನಕೇಶವ ದೇವಸ್ಥಾನ ನೋಡಹೋದಾಗ ಅಲ್ಲಿ ಅದಕ್ಕಿಂತ ಹಳೆಯದಾದ ಒಂಭತ್ತನೇ ಶತಮಾನದ ಆಸುಪಾಸಿನಲ್ಲಿ ಕಟ್ಟಿಸಿದ ಕಲ್ಲೇಶ್ವರ ದೇವಾಲಯವಿದೆ ಅಂತ ಗೊತ್ತಾಯ್ತು. ಅದನ್ನು ಕಟ್ಟಿಸಿದವರು ನೋಲಂಬ ಅರಸರು ಅಂತಲೂ ತಿಳಿಯಿತು. ಚಾಲುಕ್ಯರು ಗೊತ್ತು. ಅವರಿಗಿಂತ ಮುಂಚೆ ಬಂದ ನೆರೆ ರಾಜ್ಯಗಳಲ್ಲಿದ್ದ ಚೋಳರು, ರಾಷ್ಟ್ರಕೂಟರ ಬಗ್ಗೆ ಗೊತ್ತು. ಅದಕ್ಕಿಂತಲೂ ಮುಂಚೆ ಬಂದ ಗಂಗರು, ಕದಂಬರು ಕಟ್ಟಿಸಿದ ದೇವಾಲಯಗಳ ಬಗ್ಗೆಯೂ ಚೂರ್ಚೂರು ಗೊತ್ತು. ಇದ್ಯಾರು ನೋಲಂಬ ಅರಸರು ಅಂದರಾ ? ರಾಷ್ಟ್ರಕೂಟರ ಸಾಮಂತರಾಜರಾಗಿದ್ದ ಇವರು ಒಂಭತ್ತರಿಂದ ಹನ್ನೆರಡನೆಯ ಶತಮಾನದವರೆಗೆ ಆಳಿದ್ದರು ಎಂದು ಅವರು ಆ ಕಾಲದಲ್ಲಿ ಕಟ್ಟಿಸಿದ ಕೆಲವು ದೇವಸ್ಥಾನಗಳಿಂದ ತಿಳಿದುಬರುತ್ತದೆ. ಅರಸೀಕೆರೆಯಲ್ಲಿರುವ ನೇರಲಿಗೆಯಲ್ಲಿ ಸಿಕ್ಕ ೯೭೨ರ ಶಾಸನದ ಪ್ರಕಾರ ಗಂಗರಸ ಮಾರಸಿಂಹನು ನೋಲಂಬರಸರನ್ನು ಸೋಲಿಸಿ ನೋಲಂಬಕುಲಾಂತಕನೆಂಬ ಬಿರುದು ಪಡೆದನೆಂದು ತಿಳಿದುಬರುತ್ತದೆ. ಕೋಲಾರ ಜಿಲ್ಲೆಯಲ್ಲಿ ಸಿಕ್ಕ ಇನ್ನಿತರ ಶಾಸನಗಳಿಂದ ಇತರ ನೋಲಂಬ ಅರಸರ ಬಗ್ಗೆಯೂ ತಿಳಿದುಬರುತ್ತದೆ. ಅವರು ಕಟ್ಟಿಸಿದ ಮತ್ತೊಂದು ದೇವಸ್ಥಾನ ಕೋಲಾರದ ಮುಳಬಾಗಿಲಿನಿಂದ ೧೩ ಕಿ.ಮೀ ದೂರದಲ್ಲಿರುವ ಅವನಿ ನಾರಾಯಣೇಶ್ವರ ದೇವಸ್ಥಾನ.

Temple complex in Avani


ಹೋಗುವುದು ಹೇಗೆ ? 
ಬೆಂಗಳೂರಿನಿಂದ ಮುಳುಬಾಗಿಲಿಗೆ ಹೋಗುವ ಹಾದಿಯಲ್ಲಿ ಮುಳುಬಾಗಿಲಿಗೆ ೬.೫ ಕಿ.ಮೀ ಇದೆ ಎನ್ನುವಷ್ಟರಲ್ಲಿ ಬಲಬದಿಗೆ ಅವಣಿ/ಅವನಿ ಗೆ ದಾರಿ ಎಂಬ ಬೋರ್ಡ್ ಕಾಣುತ್ತದೆ. ಅದೇ ಹಾದಿಯಲ್ಲಿ ಬಲಕ್ಕೆ ಹೊರಳಿ ಸಾಗಿದರೆ ೬.೫ ಕಿ.ಮೀ ಸಾಗುವಷ್ಟರಲ್ಲಿ ಅವನಿ ಕ್ಷೇತ್ರ ಸಿಗುತ್ತದೆ.  


ಅವನಿಯಲ್ಲಿ ನೋಡಲೇನಿದೆ ? 
ಅವನಿಯಲ್ಲಿ ನೋಡಲಿರುವುದು ಅವನಿ ಬೆಟ್ಟ ಮತ್ತು ಅದರಲ್ಲಿರುವ ಜಾಂಬವ ಗುಹೆ ಮತ್ತು ಬೆಟ್ಟದ ಬುಡದಲ್ಲಿರುವ ದೇಗುಲಗಳು
ಅವನಿ ಬೆಟ್ಟ:
ರಾಮಾಯಣದಲ್ಲಿ ಬರುವ ಜಾಂಬವಂತ ಇದೇ ಬೆಟ್ಟದಲ್ಲಿದ್ದ ಎಂಬ ನಂಬಿಕೆಯಿದೆ. ನಂತರದ ಮಹಾಭಾರತದ ಕಾಲದಲ್ಲಿ ಶ್ಯಮಂತಕಮಣಿಯನ್ನು ಹುಡುಕುತ್ತಾ ಬರುವ ಶ್ರೀಕೃಷ್ಣನಿಗೂ ಜಾಂಬವಂತನಿಗೂ ಯುದ್ದವಾಗಿ ನಂತರ ಜಾಂಬವಂತನ ಮಗಳು ಜಾಂಬವತಿಯನ್ನು ಶ್ರೀಕೃಷ್ಣ ವಿವಾಹವಾಗುವ ಪ್ರಸಂಗವೂ ಬರುತ್ತದೆ. ಬೆಟ್ಟದ ಮೇಲೆಯೇ ಸೀತಾದೇವಿಯ ಗುಡಿಯೂ ಇದೆ. ಸೀತಾದೇವಿ ಪಾರ್ವತಿಯನ್ನು ಪೂಜಿಸುತ್ತಿದ್ದಳು ಎಂದು ನಂಬಲಾಗುವುದರಿಂದ ಗುಡಿಯಲ್ಲಿ ಸೀತೆ, ಪಾರ್ವತಿಯರ ವಿಗ್ರಹಗಳಿವೆ. ಬೆಟ್ಟದ ಬುಡದಲ್ಲಿರುವ ರಾಮಲಿಂಗೇಶ್ವರ ದೇಗುಲದಲ್ಲಿ ಇದರ ದ್ಯೋತಕವಾದ ಸೀತಾಪಾರ್ವತಿಯೆಂಬ ವಿಗ್ರಹವೂ ಇದೆ ! ಬೆಳಗ್ಗೆ ಒಂಭತ್ತರಿಂದ ಸಂಜೆ ನಾಲ್ಕರವರೆಗೆ ಬೆಟ್ಟದ ಮೇಲಿನ ದೇಗುಲ ತೆರೆದಿರುವುದರಿಂದ ಆ ಸಮಯದಲ್ಲೇ ಬೆಟ್ಟ ಹತ್ತೋದು ಬೆಟರ್ :-)  ಪುರಾಣೇತಿಹಾಸಗಳ ನಂಬದಿದ್ದರೂ ಇಲ್ಲಿನ ಸೌಂದರ್ಯ ವೀಕ್ಷಣೆಗಾದರೂ ಭೇಟಿ ಕೊಡಬಹುದಾದ ಸ್ಥಳ ಅವನಿ ಬೆಟ್ಟ

Sideview of Ganji Mantapa

Front view of Ramalingeshwara temple

Avani Utsava Murthy

Anantha Scluptures at Avani

ದೇಗುಲ ಸಂಕೀರ್ಣ:
ಅವನಿಯಲ್ಲಿರೋದು ಒಂದು ದೇಗುಲವಲ್ಲ. ಇಲ್ಲಿರೋದು ಹಲವು ದೇಗುಲಗಳ ಸಂಕೀರ್ಣ. ರಾಮ, ಲಕ್ಷಣ, ಭರತ , ಶತ್ರುಘ್ನರು ಕಟ್ಟಿಸಿದ್ದೆಂದು ನಂಬಲಾಗುವ ರಾಮಲಿಂಗೇಶ್ವರ, ಲಕ್ಷ್ಮಣೇಶ್ವರ, ಭರತೇಶ್ವರ, ಶತ್ರುಘ್ನೇಶ್ವರ ದೇಗುಲಗಳಿವೆ. ಇಲ್ಲಿನ ಅನಂತಶಯನ, ಶ್ರೀಕೃಷ್ಣ, ಸಿಂಹ ಮೊದಲಾದ ಶಿಲ್ಪಗಳಲ್ಲದೇ "ಗಂಜೀ ಮಂಟಪ" ಎಂಬಂತಹ ವಿಚಿತ್ರ ಮಂಟಪಗಳೂ ಗಮನ ಸೆಳೆಯುತ್ತದೆ. ಯುಗಾದಿ, ರಾಮನವಮಿ, ಕಾರ್ತೀಕಗಳಂದು ಇಲ್ಲಿನ ದೇವರ ಪಲ್ಲಕ್ಕಿ ಉತ್ಸವ ನಡೆಯುತ್ತದೆ.

ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ
Multiple animals combined in one image. One of the classic sclupture @Kurudumale
ಮುಂದಿನ ಭಾಗದಲ್ಲಿ: "ಕುರುಡುಮಲೆ"

No comments:

Post a Comment