Sunday, October 16, 2016

ಅಹೋಬಲಂ ಟ್ರಿಪ್ಪು

ನಂದ್ಯಾಲದಿಂದ ಅಹೋಬಿಲಂವರೆಗೆ:
ನಂದ್ಯಾಲದಲ್ಲಿ ರಾತ್ರಿ ೮:೫೦ಕ್ಕೆ ಬಂದಿಳಿದ ನಾವು ಒಂದು ವೆಜ್ ಹೋಟೇಲಿನ ಹುಡುಕಾಟದಲ್ಲಿ ಹೋಟೆಲ್ ಶ್ರೀನಿಧಿ ತಲುಪಿದ್ವಿ. ಅಲ್ಲಿಯ ತಲಾ ೫೦ರ ಪ್ಲೇಟೂಟದ ನಂತರ ಪಕ್ಕದಲ್ಲಿದ್ದ ಹೋಟೇಲ್ ಟೂರಿಸ್ಟ್ ತಲುಪಿದೆವು. ಇಲ್ಲಿ ಉಟಕ್ಕೆ ಕೊಡೋದು ಪಪ್ಪು, ಚಟ್ನಿ ಒಂದು ಪಲ್ಯ , ರಸಂ ಮತ್ತು ಸಾಂಬಾರುಗಳಾದ್ರೂ ಅವ್ರು ತಂದಿಡೋ ದೊಡ್ಡ ಥಾಲಿಯ ಅನ್ನ ನೋಡಿ ಇದಿಷ್ಟೂ ತಿನ್ನೋಕಾಗುತ್ತಾ ಅನಿಸಿಬಿಡುತ್ತೆ. ಆದ್ರೆ ಬೆಳಗ್ಗಿಂದ ಅಲೆದಲೆದು ಸುಸ್ತಾಗಿದ್ದ ನಮ್ಮೆಲ್ಲರ ಹೊಟ್ಟೆ ತುಂಬಿಸಿದ್ದು ಸುಳ್ಳಲ್ಲ. ಬಸ್ಟಾಂಡಿಗಿಂತ ಮೊದಲೇ ಸಿಗುವ ಸರ್ಕಲ್ಲಿನಲ್ಲಿ ಇಳ್ಕೊಂಡ್ರೆ ಅಲ್ಲಿ ಸಿಗೋ ಸುಮಾರು ಹೋಟೇಲ್, ಲಾಡ್ಜುಗಳಲ್ಲಿ ಇವೂ ಒಂದು. ಟೂರಿಸ್ಟ್ ಲಾಡ್ಜಿನಲ್ಲಿ ೬೫೦ರ ಡಿಲಕ್ಸ್ ರೂಂ ತಗೊಂಡ್ರೂ ಆ ರೂಮಲ್ಲಿದ್ದಿದ್ದು ಎರಡೇ ಚಾರ್ಜ್ ಸಾಕೇಟುಗಳು. ಅದ್ರಲ್ಲೂ ಒಂದು ಕಿತ್ತುಬಂದು ಯಾವಾಗ ಶಾಕ್ ಹೊಡ್ಯತ್ತೋ ಅನ್ನುವಂತಿತ್ತು.ಬೆಳಗ್ಗೆ ಏಳಕ್ಕೆ ಬಿಸಿನೀರು ಬರುತ್ತೆ ಅಂದವನಿಗೆ ಆರಕ್ಕಾದ್ರೂ ಕೊಡುವಂತೆ ಕೇಳಿದ್ದಕ್ಕೆ ಆರಕ್ಕೇ ಬಿಸಿನೀರು ಸಿಕ್ಕಿತ್ತು. ಏಳೂವರೆಗೆ ರೆಡಿಯಾಗಿ ರೂಮು ಖಾಲಿ ಮಾಡಿದ ನಾವು ಬಸ್ಟಾಂಡ್ ತಲುಪಿ ಅಲ್ಲಿನ ಅಲ್ಲಿನ ಸಸ್ಯಾಹಾರಿ ಹೋಟೆಲ್ ಮಧುವಿನಲ್ಲಿ ಮಂಡಕ್ಕಿ ಬಾತು(ಇಲ್ಲಿನ ಸ್ಪೆಷಲ್), ಇಡ್ಲಿ ವಡೆ ತಿಂದು ಎಂಟರ ಅಲ್ಲಗಡ್ಡದ ಬಸ್ಸು ಹತ್ತಿದ್ವಿ. ಇಲ್ಲಿನ ಬಸ್ಟಾಂಡಲ್ಲಿ ಮಧು ಬಿಟ್ರೆ ಹೋಟೇಲ್ ಬ್ಲೂಸ್ಟಾರ್ ಎಂಬೋ ಮತ್ತೊಂದು ಸಸ್ಯಾಹಾರಿ ಹೋಟೆಲ್ಲಿದೆ. ಅಹೋಬಿಲಂ ಅಥವಾ ಅಹೋಬಲಂಗೆ ನಂದ್ಯಾಲದಿಂದ ನೇರ ಬಸ್ಸುಗಳಿಲ್ಲ. ನಂದ್ಯಾಲದಿಂದ ಅಲ್ಲಗಡ್ಡಕ್ಕೆ ಬಂದು ಅಲ್ಲಿಂದ ೨೫ ಕಿ.ಮೀ ಇರೋ ಅಹೋಬಲಂಗೆ ಬಸ್ಸು ಅಥವಾ ಆಟೋದಲ್ಲಿ ಹೋಗಬಹುದು. ಅಹೋಬಲಂ ಒಂದೇ ನೋಡೋ ಉದ್ದೇಶವಿದ್ರೆ ನಂದ್ಯಾಲಕ್ಕೆ ಇರೋ ರೈಲಲ್ಲೂ ಬಂದು ನಂದ್ಯಾಲದಲ್ಲಿಳಿಯಬಹುದು.  ಆದರೆ ನಂದ್ಯಾಲಕ್ಕೆ ಬೆಂಗಳೂರಿಂದಿರುವ ರೈಲುಗಳ ಸಂಖ್ಯೆ ಕಮ್ಮಿ. ಇದ್ದರೂ ಅವು ಮಧ್ಯಾಹ್ನದ ಸಮಯದಲ್ಲಿ ಹೊರಡೋದ್ರಿಂದ ಶುಕ್ರವಾರ ರಾತ್ರೆ ಹೊರಡೋರಿಗೆ ಸೂಕ್ತವಲ್ಲ


ಅಲ್ಲಗಡ್ಡದ ಇರಾನಿ ಟೀ ಮತ್ತು ಚೌಕಾಸಿ ಪ್ರಸಂಗ
ಒಂಭತ್ತೂಮುಕ್ಕಾಲಿಗೆ ಅಲ್ಲಗಡ್ಡ ತಲುಪಿದ್ದ ನಮಗೆ ಅಹೋಬಲಂಗೆ ಮೊದಲ ಬಸ್ಸಿದ್ದಿದ್ದು ೯:೩೦ ಕ್ಕೆ, ಅದು ಹೋಗಾಗಿದೆ ಅಂತ ಗೊತ್ತಾಯ್ತು. ಮುಂದಿನ ಬಸ್ಸಿರೋದು ೧೧:೧೫ ಕ್ಕೆ ! ಅಲ್ಲಿಯವರೆಗೆ ಏನ್ಮಾಡೋದಪ್ಪ ಅಂದ್ಕೋತಿರುವಾಗ ಇಲ್ಲಿಂದ ಶೇರ್ ಆಟೋಗಳು ಹೋಗುತ್ತೆ. ಅದ್ರಲ್ಲಿ ಹೋದ್ರೆ ಹೋಗಬಹುದು ಅಂದ್ರು. ಕೆಳಗಿನ ಅಹೋಬಲಕ್ಕೆ ಅಲ್ಲಗಡ್ಡದಿಂದ ೨೫ ಕಿ.ಮೀ. ಅಲ್ಲಿಂದ ಮೇಲಿನ ಅಹೋಬಲಕ್ಕೆ ಮತ್ತೆ ಎಂಟು ಕಿ.ಮೀ. ಅಲ್ಲಗಡ್ಡದಲ್ಲಿ "ಇರಾನಿ ಟೀ" ಸಖತ್ ಫೇಮಸ್. ಒಂದ್ಸಲ ಕುಡುದ್ರೆ ಸುಮಾರು ಒಂದು ಘಂಟೆಯವರೆಗೂ ಕುಡಿದಿದ್ರ ಪ್ರಭಾವ ಉಳಿಯುವಂತಾ ಟೀ ಅದು. ಅದು ಸಖತ್ ಅಡಿಕ್ಷನ್ ಗುರು ಅಂತಂತಿದ್ದ ಗೆಳೆಯರ ಮಾತು ಎಷ್ಟು ಸತ್ಯವೆನ್ನೋದು ಇಲ್ಲಿ ಮೊದಲ ಬಾರಿ ಕುಡಿದಾಗ್ಲೇ ಗೊತ್ತಾಗಿದ್ದು. ಐದು ರೂಗೆ ಒಂದು ಟೀ ಕುಡಿದು ಅಲ್ಲೇ ಇದ್ದ ಒಂದು ಆಟೋನವನತ್ರ ಡೀಲ್ ಮಾಡೋಕೆ ಶುರು ಮಾಡಿದ್ವಿ. ಶೇರ್ ಆಟೋವಾದ್ರೆ ಪ್ರತಿಯೊಬ್ಬರಿಗೂ ಹದಿನೈದು ರೂ ಅಂತ ಅಲ್ಲಿನವರತ್ರ ಕೇಳಿದ್ದ ನಾವು ಆಟೋದವನತ್ರ ಎಷ್ಟಪ್ಪ ಅಂತ ಕೇಳೋಕೆ ಶುರು ಮಾಡಿದ್ವಿ.
ಅಹೋಬಲಂ ನ ಎಲ್ಲಾ ದೇವಸ್ಥಾನಗಳನ್ನೂ ತೋರಸ್ಕೊಂಡು ಬರೋದಾದ್ರೆ ೪೦೦ ರೂ ಅಂದ ಅವ. ಎಲ್ಲಾ ಒಂದೇ ಕಡೆ ಇರೋ ದೇವಸ್ಥಾನಗಳಿಗೆ ೪೦೦ ರೂ ತುಂಬಾ ಜಾಸ್ತಿಯಾಯ್ತು ಅಂದ ನಾವು  ಕೆಳಗಿನ ಅಹೋಬಲಕ್ಕೆ ಹದಿನೈದು ರೂ ತಲೆಗೆ ಕೊಟ್ಟು ಹೊರಡೋಕೆ ಶುರುವಾದ್ವಿ. ಆ ಆಟೋದವ ಊರೊಳಗೆಲ್ಲಾ ಜನರಿಗಾಗಿ ಸುತ್ತಿ ಸುತ್ತಿ , ನಿಲ್ಲಿಸಿ ನಿಲ್ಲಿಸಿ ನಿಧಾನಕ್ಕೆ ಹನ್ನೊಂದರ ಹೊತ್ತಿಗೆ ಅಹೋಬಲಕ್ಕೆ ತಗೊಂಡು ಹೋದ. ಮದ್ಯ ಮದ್ಯ ಊರಲ್ಲೆಲ್ಲಾ ನಿಲ್ಲಿಸಿ ಜನರನ್ನ ಹತ್ತಿಸಿಕೊಂಡಿದ್ದಕ್ಕೆ ಬೇಜಾರಿಲ್ಲ. ಅವ ಹೋಗಿದ್ದೇ ರಸ್ತೆಗಳಲ್ಲಿ ಮೂರ್ನಾಲ್ಕು ಬಾರಿ ಸುತ್ತಿಸಿದ್ದಕ್ಕೆ ಬೇಜಾರಾಗ್ತಿತ್ತು. ಅಲ್ಲಿಂದ ಮತ್ತೆ ಮೇಲಿನ ಅಹೋಬಲಕ್ಕೆ ತಲಾ ಹದಿನೈದರ ಚಾರ್ಜ್ ಕೊಡ್ಬೇಕಾಯ್ತು. ಅಲ್ಲಿ ಮತ್ತೆ ಅರ್ಧ ಘಂಟೆ ! ವಾಪಾಸ್ ಕೆಳಗಿನ ಅಹೋಬಲಕ್ಕೆ ಬರೋಕೆ ಒಂದು ಟೆಂಪೋದಲ್ಲಿ ಹದಿನೈದು ಜನರನ್ನ ಹೇರಿಕೊಂಡ್ರು ಬಂದ್ರೂ ತಲಾ ಹದಿನೈದು ! ಅರ್ಧ ಘಂಟೆ ಕಾಯಿಸಿದ್ರೂ ಹದಿನೆಂಟು ಜನರಾಗದೇ ಹೊರಡೋಲ್ಲವೆಂದು ಕೂತಿದ್ದ ಅವನನ್ನು ಹೊರಡಿಸೋದ್ರಲ್ಲಿ ಸಾಕು ಸಾಕಾಗಿದ್ದ ನಮಗೆ ಬೆಳಗ್ಗೆನೇ ನಾನೂರು ಕೊಟ್ಟು ಬಂದಿದ್ರೆ ಅವನೊಂದಿಗೆ ಎಲ್ಲಾ ನೋಡಬಹುದಾಗಿತ್ತಲ್ಲದೇ ಇಷ್ಟೆಲ್ಲಾ ಕಾಯೋ ಪ್ರಮೇಯವೂ ಇರ್ತಿರಲಲ್ವಪ್ಪ ಅನಿಸಿದ್ದು ಸುಳ್ಳಲ್ಲ. ಅಲ್ಲಗಡ್ಡದಿಂದ ಆಟೋದಲ್ಲಿ ಬರೋದಾದ್ರೆ ಮೇಲಿನ ಅಹೋಬಲಕ್ಕೆ ಆಟೋ ತಗೊಳ್ಳಿ. ಅದನ್ನ ತೋರಿಸಿ, ಕೆಳಗಿನ ಅಹೋಬಲಂನ ನಾಲ್ಕು ದೇವಸ್ಥಾನಗಳನ್ನೂ ತೋರಿಸ್ಬೇಕು ಅಂತ ಹೇಳೇ ಹೊರಡಿ. ನಾನೂರಲ್ಲ , ಸಾವಿರ ಕೊಟ್ರೂ ಅದು ಕೊಡಬಹುದಾದ ಚಾರ್ಜೇ. ಕೆಳಗಿನ ಅಹೋಬಲಂನ ಯೋಗಾನಂದ, ಚಕ್ರವಾಟ, ಭಾರ್ಗವ ಮತ್ತು ಬಸ್ಟಾಂಡಿನ ಪಕ್ಕದಲ್ಲೇ ಇರುವ ಲಕ್ಮೀನರಸಿಂಹ ದೇವಸ್ಥಾನ ತೋರಿಸೋಕೆ ೩೦೦ ಕೇಳ್ತಾರೆ ಇಲ್ಲಿನ ಆಟೋದವ್ರು ! ಬರೀ ಯೋಗಾನಂದ, ಚಕ್ರವಾಟ ತೋರ್ಸೋದಾದ್ರೆ ೧೫೦. ಅಲ್ಲಿಂದ ಅಲ್ಲಗಡ್ಡಕ್ಕೆ ಹೋಗೋಕೆ ೪೦೦ ! ಯೋಗಾನಂದ, ಚಕ್ರವಾಟ ತೋರಿಸ್ಕೊಂಡು ಅಲ್ಲಗಡ್ಡಕ್ಕೆ ತಗೊಂಡೋಗಪ್ಪ, ೫೦೦ ರೂ ಡೀಲ್ ಮಾಡು ಅಂದ್ರೂ ಸುತರಾಂ ಒಪ್ಪಲ್ಲ ! ಇಷ್ಟೆಲ್ಲಾ ರಾಮಾಯಣ ಬೇಡ ಅಂದ್ರೆ ಅಲ್ಲಗಡ್ಡದಿಂದ ಹೋಗಿ ಬರೋದಕ್ಕೆ ಆಟೋ ಮಾಡೋದು ! ಒಂದು ಐವತ್ತೋ , ನೂರೋ ಜಾಸ್ತಿ ಕೊಟ್ರೆ ಅವ್ನು ಯಾವ ದೇವಸ್ಥಾನಗಳಲ್ಲೂ ಗಡಿಬಿಡಿ ಮಾಡೋ ಸಾಧ್ಯತೆಯಿರಲ್ಲ. 

At Ahobilam
ಅಹೋಬಲಂನ ನವ ನರಸಿಂಹ ಕ್ಷೇತ್ರದಲ್ಲಿ:
ಅಲ್ಲಗಡ್ಡದಿಂದ ಮೇಲೆಂದಂತೆ ಎರಡು ಆಟೋ ಬದಲಿಸಿ ಮೇಲಿನ ಅಹೋಬಲಕ್ಕೆ ಬರೋ ಹೊತ್ತಿಗೆ ೧೧:೨೦. ಅಲ್ಲೇ ಬೀಳುತ್ತಿದ್ದ ಜಲಧಾರೆಯೊಂದರ ಎದ್ರು ಫೋಟೋ ತೆಗೆಸಿ ಕಾರಂಜ ಲಕ್ಷ್ಮೀನರಸಿಂಹವನ್ನು ನೋಡೋಕೆ ಹೋದೆವು. ಇಲ್ಲಿ ಕಾಲಿಡುತ್ತಿದ್ದಂಗೇ ಅನೇಕ ಭೋಜನಶಾಲೆಗಳು, ಸ್ನಾನಗೃಹಗಳೂ ಎದುರಾಗುತ್ತೆ. ಎಲ್ಲಾ ಭೋಜನಶಾಲೆಗಳಲ್ಲೂ ಮಧ್ಯಾಹ್ನ ಊಟಕ್ಕೆ ಬರೋದಾದ್ರೆ ಒಂದು ಘಂಟೆ ಮುಂಚೆ ಹೇಳ್ಬೇಕು ಅನ್ನೋ ನಿಯಮ. ಕ್ಷತ್ರಿಯ ಭೋಜನಶಾಲೆ ಮತ್ತೆ ಎರಡು ಭೋಜನಶಾಲೆಗಳನ್ನು ದಾಟಿ ಮುಂದೆ ಹೊರಟಿದ್ದ ನಮಗೆ ಬ್ರಾಹ್ಮಣ ಭೋಜನಶಾಲೆಯೆನ್ನೋ ಬೋರ್ಡ್ ಕಂಡು ನಮಗೆ ಇಲ್ಲೇ ಊಟಕ್ಕೆ ಹೇಳಿದ್ರೆ ಹೆಂಗೆ ಅನಿಸ್ತು. ಹೆಂಗಿದ್ರೂ ಇನ್ನೂ ಹನ್ನೊಂದೂವರೆ. ಎಲ್ಲಾ ಹತ್ತತ್ರ ಇದೆ ಅಂತ ಕೇಳಿದ್ದ ನಾವು ಎಲ್ಲಾ ನೋಡ್ಕೊಂಡು ಮಧ್ಯಾಹ್ನಕ್ಕೇ ವಾಪಾಸ್ ಬರ್ಬೋದು. ಊಟಕ್ಕೆ ಅಂತ ಮತ್ತೆಲ್ಲಿ ಅಲೆಯೋದು, ಇಲ್ಲೇ ಹೋದ್ರಾಯ್ತು ಅಂತ ಇಲೇ ನಾವು ಆರು ಜನ ಊಟಕ್ಕೆ ಬರ್ತೀವಿ ಅಂತ ಹೇಳಿ ಮುಂದೆ ಹೊರಟ್ವಿ. ಇಲ್ಲಿನ ಭೋಜನಶಾಲೆಗಳನ್ನ ಬಿಟ್ರೆ ಕೆಲವೊಂದು ಸಣ್ಣ ಕ್ಯಾಂಟೀನುಗಳಿವೆ.ಆದ್ರೆ ಒಮ್ಮೆ ದೇವಸ್ಥಾನಗಳನ್ನ ಸುತ್ತೋಕೆ ಶುರು ಮಾಡಿದ್ರೆ ಮಧ್ಯ ಏನಂದ್ರೆ ಏನೂ ಇಲ್ಲ. ಹಂಗಾಗಿ ಇಲ್ಲಿ ಊಟಕ್ಕೆ ಹೇಳಿದ್ದು ಎಷ್ಟು ಒಳ್ಳೇದಾಯ್ತು ಅಂತ ಆಮೇಲೆ ಗೊತ್ತಾಯ್ತು. ಇಲ್ಲಿನ ದೇವಸ್ಥಾನಗಳ ನಡುವೆ ಸಾಕಷ್ಟು ನೀರ ಧಾರೆಗಳು, ಜರಿಗಳು ಇದ್ದು ನೀರು ಒಯ್ಯದಿದ್ರೂ ಪರವಾಗಿಲ್ಲ. ಆದ್ರೆ ಸಾಕಷ್ಟು ದೂರ ನಡೆಯಬೇಕಾಗಿರೋದ್ರಿಂದ ಬೆಳಗ್ಗಿನ ತಿಂಡಿ ಚೆನ್ನಾಗಿ ತಿನ್ನಿ ಅಥವಾ ಬ್ಯಾಗಲ್ಲೇನಾದ್ರೂ ಗ್ಲೂಕೋಸೋ,ಬಿಸ್ಕೆಟ್ಟೋ, ಬಾಳೆಹಣ್ಣೋ ಇಟ್ಕೊಂಡಿರ್ರಿ ಅಂತ ಮುಂದುವರಿಯೋ ಮುಂಚೆ ಹೇಳ್ತೀನಿ. ಇಲ್ಲಿಗೆ ಬರೋ ಸುಮಾರು ಜನ ಊಟವನ್ನೂ ಜೊತೆಗೇ ಹೊತ್ತುತಂದು ಇಲ್ಲಿನ ಪ್ರಹ್ಲಾದಗುಡಿಯ ಬಳಿ ಅಥವಾ ವರಾಹ ನರಸಿಂಹ ಗುಡಿಯ ಬಳಿ ಊಟ ಮಾಡೋದೂ ಇಲ್ಲಿ ಸಾಮಾನ್ಯ ದೃಶ್ಯ.

ಮೊದಲು ಸಿಗೋ ಕಾರಂಜ ಲಕ್ಷ್ಮೀನರಸಿಂಹದ ಹತ್ತಿರ ಬರೋ ಹೊತ್ತಿಗೆ ಹನ್ನೊಂದು ನಲವತ್ತು. ಅದಕ್ಕೆ ಮೇಲಿನ ಅಹೋಬಿಲ ದೇವಸ್ಥಾನವೆಂದೂ ಹೆಸರು. ಅದನ್ನು ಆಮೇಲೆ ನೊಡೋಣವೆಂದು ಮುಂದೆ ಸಾಗಿದ ನಮಗೆ ಬಲಕ್ಕೆ ಸಾಗೋ ಮೆಟ್ಟಿಲುಗಳು ಸಿಗ್ತು. ಅದನ್ನೂ ಬರ್ತಾ ನೋಡೋಣವೆಂದು ನಾವು ಎಡಭಾಗದಲ್ಲಿ ನದಿಯ ಮೇಲಿದ್ದ ಸೇತುವೆ ದಾಟಿ ಮುಂದೆ ಸಾಗಿದ್ವಿ.  ಬಲಕ್ಕೆ ಸಾಗಿದ್ರೆ ಸಿಗ್ತಿದ್ದಿದ್ದು ಪಾವನ ಲಕ್ಷ್ಮೀ ನರಸಿಂಹ
One of the multiple bridges across the river Bhavanashini in Ahobilum
ವರಾಹ ಲಕ್ಷ್ಮೀ ನರಸಿಂಹ
ಪಾಳು ಬಿದ್ದ ಮಂಟಪವೊಂದನ್ನು ದಾಟಿ ಹಾಗೇ ಮುಂದೆ ಸಾಗಿದ ನಮಗೆ ಜುಳು ಜುಳು ಹರಿಯೋ ಭವನಾಶಿನಿಯ ಪಕ್ಕದಲ್ಲಿ ನಡೆಯೋ ರಮ್ಯ ಅನುಭವ. ಮಳೆಗಾಲದಲ್ಲಿ ಅಥವಾ ಅಕ್ಟೋಬರ್ ವರೆಗೂ ಬೆಟ್ಟದ ಅನೇಕ ಕಡೆ ಜಲಪಾತಗಳಾಗಿ ಧುಮುಕೋ ಇದನ್ನು ನೋಡೋದೇ ಒಂದು ಅನುಭವ. ಮೇಲಿನ ಅಹೋಬಿಲಂನ ಲಕ್ಷ್ಮೀನರಸಿಂಹಕ್ಕೆ ಸಾಗೋ ಹೊತ್ತಿಗೇ ಎದುರು ನಾಲ್ಕು ಜಲಧಾರೆಗಳು ಎದುರಿನ ಗುಡ್ಡದಿಂದ ಧುಮುಕೋದು ಕಾಣುತ್ತಿರುತ್ತೆ. ಅಲ್ಲಿಂದ ಶುರುವಾಗೋ ಜಲಪಾತಗಳ ಒಡನಾಟ ಸುಲಭಕ್ಕೆ ಬಿಡುವಂತದ್ದಲ್ಲ.
Near Karanja
View of Karanja/Upper Ahobilam temple
Four water Falls on the way to Karanja temple

Way to other Narasimha temples, View near Karanja
Ruins of Temple complex /Chatra before Varaha Narasimha
. ಇನ್ನು ನಮ್ಮ ಪಯಣಕ್ಕೆ ಬರೋದಾದ್ರೆ ನಾವು ಮೊದಲು ಹೊಕ್ಕ ದೇಗುಲ ವರಾಹ ನರಸಿಂಹ. 
One more waterstream in front of Varahanarasimha temple
ಇಲ್ಲಿಗೆ ಬರೋ ಹೊತ್ತಿಗೆ ೧೧:೫೪. ಇಲ್ಲಿ ಅಹೋಬಲಂನಲ್ಲಿನ ಎಲ್ಲಾ ದೇಗುಲಗಳ ಹೆಸರು ಮತ್ತು ಹೇಗೆ ಹೋಗೋದು ಎಂಬ ಮಾರ್ಗಸೂಚಿಯೂ ಇದೆ. 


ಇಲ್ಲಿಂದ ಮುಂದೆ ಎರಡು ದಾರಿಗಳಿವೆ. ಒಂದು ಎದುರಲ್ಲೇ ಹರಿಯೋ ನದಿಯಗುಂಟ ನಡೆದರೆ ಸಿಗೋ ಜ್ಲಾಲಾಲ ನರಸಿಂಹ ದೇಗುಲಕ್ಕೆ ಸಾಗೋ ಹಾದಿ. ಮತ್ತೊಂದು ಎಡಕ್ಕೆ ಸಾಗೋ ಮೆಟ್ಟಿಲುಗಳನ್ನು ಹಿಡಿದು  ಮಾಲೋಲ ದೇಗುಲಕ್ಕೆ ಸಾಗೋ ಹಾದಿ. ಆ ಹಾದಿಯಲ್ಲಿ ಕರ್ಕೊಂಡು ಹೋಗೋದಕ್ಕೆ ಆರ್ನೂರು ರೂಪಾಯಿ ಗೈಡಿಗೆ ಅಂತ ಇದ್ರು ಆ ಹಾದಿಯಲ್ಲಿನ ಜನ.  ನಾವು ಬೆಳಗ್ಗಿಂದ ಎಡದಿಕ್ಕಿನ ಹಾದಿಯನ್ನೇ ಹಿಡಿಯುತ್ತಿದ್ದಿದ್ರಿಂದ ಮೊದಲು ಎಡಗಡೆ ನೋಡಿ ಆಮೇಲೆ ಬಲಗಡೆ ಬಂದ್ರಾಯ್ತು ಅಂತ ಮಾಲೋಲ ಗುಡಿಯತ್ತ ಹೊರಟೆವು.
 
ಮಾಲೋಲ ನರಸಿಂಹ
 
 
ಇಲ್ಲಿಂದ ಮೇಲೆ ಹತ್ತೋ ಮೆಟ್ಟಿಲುಗಳನ್ನೇರಿ ಹನ್ನೆರಡೂಕಾಲರ ಹೊತ್ತಿಗೆ ಮಾಲೋಲ ನರಸಿಂಹ ಗುಡಿಯನ್ನು ತಲುಪಿದ್ವಿ.  ಇಲ್ಲಿ ಸಾಗೋ ಹಾದಿಯಲ್ಲಿ ಮರಕ್ಕೆ ಬಳೆ, ಬಟ್ಟೆಗಳನ್ನ ಹಾಕೋ ಹರಕೆಯ ವಿಚಿತ್ರ ಹರಕೆ ಕಾಣುತ್ತೆ. ಹಂಪಿಗೆ ಹೋದಾಗ ಅಲ್ಲಿನ ಮರಗಳಿಗೆ ಈ ತರ ಕಟ್ಟಿದ್ದನ್ನು ಮೊದಲು ನೋಡಿದ್ದ ನಮಗೆ ಇಲ್ಲಿ ಅದರ ಪುನರಾವರ್ತನೆಯಾದ ಅನುಭವ. 
 
 
ಇಲ್ಲಿನ ಗುಡಿಗೆ, ಅಲ್ಲಿನ ದ್ವಾರಪಾಲಕರಿಗೂ ಒಂದು ನಮಸ್ಕಾರ ಹಾಕಿ ಹೊರಬರೋ ಹೊತ್ತಿಗೆ ಹೊರಗೆ ಗುರುಕುಲಕ್ಕೆ ೦.೪ ಕಿ.ಮೀ ಅಂತ ಬೋರ್ಡು ಕಾಣ್ತು. ಬಲಕ್ಕೆ ಮುಂದಿನ ಗುಡಿಗೆ ಹೋಗೋ ಹಾದಿ. ಇಲ್ಲಿನ ಅರ್ಚಕರಲ್ಲಿ ಕೇಳಿದ್ರೆ its a wonderfull place , must see  ಅಂದ್ರು. ಅಬ್ಬಬ್ಬಾ ಅಂದ್ರೆ ಕಾಲು ಘಂಟೆ ಆಗ್ಬೋದು . ಅದ್ನ ನೋಡ್ಕೊಂಡೇ ಬರೋಣ ಅಂತ ಆ ಕಡೆ ಹೆಜ್ಜೆ ಹಾಕಿದ್ವಿ

ಪ್ರಹ್ಲಾದ ಬದಿ ಗುರುಕುಲ/ಪ್ರಹ್ಲಾದ ಗುಡಿ
ಅಲ್ಲಿಂದ ಪ್ರಹ್ಲಾದ ಗುಡಿಗೆ ಬರೋ ಹೊತ್ತಿಗೆ ಹನ್ನೆರಡೂವರೆ.ಪ್ರಹ್ಲಾದ ಗುಡಿಯ ಬಳಿಯೂ ಎರಡು ಜಲಪಾತಗಳಿವೆ. ಇಲ್ಲಿನ ಜಾಗದಷ್ಟೇ ಅಲ್ಲಿಗೆ ಸಾಗೋ ಹಾದಿಯ ಅನುಭವವೂ ರಮಣೀಯ. ಆ ಹಾದಿಯಲ್ಲಿ ಮೇಲಿಂದ ಕಾಣುವ ಅಹೋಬಲಂನ ದೇವಸ್ಥಾನದ ಆವರಣವನ್ನು ನೋಡೋದೇ ಒಂದು ಅದ್ಭುತ ಅನುಭವ. 

ಇಲ್ಲಿನ ಬಂಡೆಗಳಲ್ಲಿ ಓಂ ನಮೋ ನಾರಾಯಣಾಯ ಎಂಬ ಬರಹಗಳಿರೋದ್ರಿಂದ ಇದನ್ನು ಗುರುಕುಲವೆಂದೂ ಕರೆಯಲಾಗುತ್ತಂತೆ. ಭಕ್ತ ಪ್ರಹ್ಲಾದನ ವಿದ್ಯಾಭ್ಯಾಸ ಇಲ್ಲೇ ಆಯಿತೆಂದೂ , ಅವನಿಗಾಗಿ ಇಲ್ಲಿ ಪ್ರಹ್ಲಾದ ಗುಡಿಯಿದೆಯೆಂದೂ ಹೇಳುತ್ತಾರೆ. ಇಲ್ಲಿನ ಬಂಡೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಬರಹಗಳಿರೋದು ಸುಳ್ಳಲ್ಲವೆಂಬ ಸತ್ಯ ಗೋಚರಿಸುತ್ತೆ ! ಇಲ್ಲಿನ ಪರಿಸರವನ್ನು ವರ್ಣಿಸೋ ಬದಲು ಅಲ್ಲಿನ ಚಿತ್ರಗಳನ್ನು ಹಾಕೋದೇ ಮೇಲು ಅನಿಸುತ್ತೆ ! ಇಲ್ಲಿನ ಪರಿಸರವನ್ನು ಬಿಟ್ಟು ಹೊರಡೋಕೆ ಮನಸ್ಸಿಲ್ಲದ ಮನಸ್ಸಿಂದ ಹೊರಡೋ ಹೊತ್ತಿಗೆ ಒಂದು ಘಂಟೆ
Falls at Prahlada Gudi
Prahlada Gudi

 
ಜ್ವಾಲಾಲ
ಇಲ್ಲಿಂದ ಮತ್ತೆ ಮಾಲೋಲಕ್ಕೆ ವಾಪಾಸ್ ಬಂದು ಮುಂದೆ ಹೊರಟ್ವಿ. ಮುಂದೆ ದೇವಸ್ಥಾನಗಳಿವೆ ಅಂತ ಗೊತ್ತಿತ್ತು. ಆದ್ರೆ ಎಷ್ಟು ದೂರದಲ್ಲಿ ಅಂತ ಗೊತ್ತಿರ್ಲಿಲ್ಲ. ಸ್ವಲ್ಪ ದೂರ ನಡಿಯೋ ಹೊತ್ತಿಗೆ ಆ ಕಡೆಯಿಂದ ಬರ್ತಿದ್ದ ಜನ ಸಿಕ್ಕಿದ್ರು. 
People returning from Jwalala to Malala

ಬಲಗಡೆ ನೋಡಿದ್ರೆ ಬೀಳ್ತಿರೋ ಫಾಲ್ಸು. ಸಾಗಿದಷ್ಟೂ ಕಾಣ್ತಿದ್ದ ಮೆಟ್ಟಿಲುಗಳು. ಹತ್ತಿದ್ವಿ, ಇಳಿದ್ವಿ. ಎಲ್ಲೂ ದೇವಸ್ಥಾನದ ಸುಳಿವಿಲ್ಲ. ಸುಮಾರು ಇಪ್ಪತ್ತು ನಿಮಿಷ ಸಾಗೋ ಹೊತ್ತಿಗೆ ಕೆಳಗಿಂದ ಬರ್ತಿದ್ದ ಮತ್ತೊಂದು ಸಾಲಿನ ಮೆಟ್ಟಿಲುಗಳು ಸಿಕ್ಕಿದ್ವು. ಅಲ್ಲಿಂದ ಬಂದವರಿಗೆ ಕೇಳಿ ಇದು ವರಾಹ ದೇವಸ್ಥಾನದ ಕಡೆಯಿಂದ ಬಂದ ಹಾದಿಯೇ ಅಂತ ಖಚಿತಪಡಿಸಿಕೊಂಡೂ ಆಯ್ತು.  ಆದ್ರೆ ಅಲ್ಲಿಂದ ಮತ್ತೆ ಮೇಲತ್ತೋ ಮೆಟ್ಟಿಲುಗಳು ಕಂಡವು. ಅದೂ ಒಂದೇ ಉಸಿರಲ್ಲಿ ಹತ್ತುವಂತಹ ಏರಿನ ಮೆಟ್ಟಿಲುಗಳು. ಸ್ವಲ್ಪ ಹತ್ತೋ ಹೊತ್ತಿಗೆ ಇಲ್ಲಿಂದ ಮುಂದೆ ಹತ್ತೋಕೆ ಆಗೋಲ್ಲ. ಹತ್ತೋರಿದ್ರೆ ಹೋಗ್ಬನ್ನಿ ಅಂತ ಗಣೇಶ. ಇಲ್ಲಿಯವರೆಗೆ ಬಂದಾಗಿದೆ. ಮುಂದೆ ಹತ್ತೋದೇ ಅಂತ ನಾನು. ನಾನು ನನ್ನ ಸ್ಪೀಡಲ್ಲಿ ಹತ್ತುತೀನಿ. ಬೇಗ್ಬೇಗ ಹತ್ತೋಕಾಗಲ್ಲ. ಆದ್ರೆ ಹತ್ತೋದೆಂತೂ ಗ್ಯಾರಂಟಿ ಅಂತ ಸುಬ್ಬು. ಸರಿ ಅಂತ ಹತ್ತೋಕೆ ರೆಡಿಯಾದ ಮೂವರು. ಇಲ್ಲೇ ಇರ್ತೀವಿ, ನೀವು ನೋಡ್ಕೊಂಡು ಬನ್ನಿ ಅನ್ನೋ ಮಾಧವ, ಕೌಶಿಕ ಮತ್ತು ಗಣೇಶ. ಸರಿ, ಅಂತ ಬೆಳಗ್ಗಿಂದ ಹೊತ್ತಿದ್ದ ಬ್ಯಾಗು ಅಲ್ಲೇ ಇಟ್ಟು , ಒಂದಿಷ್ಟು ನೀರು ಕುಡಿದು ಮೇಲೆ ಹೊರಟ್ವಿ. ಅಲ್ಲಿಂದ ಹತ್ತೇ ನಿಮಿಷ ಹತ್ತಿದ್ದು, ಎದುರು ಒಂದು ಅಧ್ಬುತವೆನಿಸೋ ಜಲಧಾರೆ. ಅದರ ಆಚೆಬದಿ ಒಂದು ದೇವಾಲಯ. ಬೀಳ್ತಿರೋ ಜಲಪಾತದ ಮಧ್ಯೆ ಆ ಕಡೆ ದಾಟೋ ಹಾದಿ !
Falls At Jwalala
 ಈ ಜಲಧಾರೆಯ ಮಧ್ಯದಿಂದ ಹೆಂಗಪ್ಪಾ ಹೋಗದು ಅಂತ ಅಂದ್ಕೋತಾ ಮುಂದೆ ಹೆಜ್ಜೆ ಇಟ್ವಿ. ಒಂದಿಷ್ಟು ಜನ ಆ ಜಲಧಾರೆಗೆ ತಲೆ ಕೊಡ್ತಾ ಇದಾರೆ. ಕೆಲವರು ಆ ಕಡೆಯಿಂದ ಬರ್ತಾ ಇದಾರೆ. ಅದನ್ನು ದಾಟಿ ಮುಂದೆ ಸಾಗಿದ್ರೆ ನೀರಧಾರೆಯ ಹೊಡತಕ್ಕೆ ದೇವಾಲಯದ ಒಳಗೂ ನೀರು !ಆ ಜ್ವಾಲಾಲ ನರಸಿಂಹ ದೇಗುಲದಲ್ಲಿನ ದೇವರಿಗೊಂದು ಕೈಮುಗಿದು ಮುಂದೆ ನೋಡಿದ್ರೆ ಅಲ್ಲೊಂದು ಮನೆ ಮತ್ತು ಕಟ್ಟಿದ ಹಸು !! ಇಲ್ಲಿಗೆ ಒಂದ್ಸಲ ಬರೋಕೆ ಇಷ್ಟು ಕಷ್ಟ ಪಡ್ತಿದ್ದಾಗ ಇವರು ಹೆಂಗಪ್ಪಾ ಇಲ್ಲೇ ಜೀವನ ನಡೆಸ್ತಿರೋದು ಅನ್ನಿಸಿದ್ದು ಸುಳ್ಳಲ್ಲ. ಆಮೇಲೆ ಇಲ್ಲಿಗೆ ಬರೋಕೆ ಬೇರೆ ದಾರಿಯೇನಾದ್ರೂ  ಇರ್ಬೋದಾ ಅಂತನಿಸಿದ್ದೂ ಸುಳ್ಳಲ್ಲ.

ಉಗ್ರ ಧ್ವಜ ಸ್ಥಂಭ
ಅಲ್ಲಿಂದ ಮೇಲೆ ಅಂದ್ರೆ ಜಲಪಾತ ಧುಮ್ಮುಕ್ತಿರೋ ಜಾಗದತ್ತ ನೋಡಿದ್ರೆ ಅಲ್ಲೊಂದಿಷ್ಟು ಧ್ವಜಗಳು ಕಾಣುತ್ತೆ. ಅದ್ರ ಹೆಸ್ರೇ ಉಗ್ರ ಧ್ವಜ ಸ್ಥಂಭ. ಅಲ್ಲಿಗೆ ಮೇಲೆ ಹತ್ತೋಕೆ ಮೆಟ್ಟಿಲುಗಳಿಲ್ಲದಿದ್ರೂ ಪಕ್ಕದಲ್ಲಿರೋ ಹಾದಿಯಲ್ಲಿಂದ ಮೇಲೆ ಹತ್ತಬಹುದು. ಕೆಳಗಿದ್ದವರಿಗೆ ಮುಕ್ಕಾಲು ಘಂಟೆಯವೊಳಗೆ ಎಲ್ಲಿಗೆ ಹೋದ್ರೂ ವಾಪಾಸ್ ಬರ್ತೀವಿ ಅಂತ ಹೇಳಿದ್ರಿಂದ ಉಗ್ರ ಧ್ವಜಸ್ಥಂಭಕ್ಕೆ ಹೋಗದೇ ಕೆಳಗೆ ವಾಪಾಸ್ಸಾದ್ವಿ.
See Ugra Dwajastamba at the center of 2 flags, on top of waterfalls

ಅಲ್ಲಿಂದ ವಾಪಾಸ್ ಬಂದು ನದಿಯ ಹಾದೀಲಿ ಸಾಗೋ ಅನುಭವ ಮತ್ತೊಂತರ. ನದಿಯಲ್ಲಿ ಎಲ್ಲಿ ಆಳ ಕಮ್ಮಿಯಿದೆ ಅಂತ ನೋಡ್ಕೊಂಡು ದಾಟೋ ಅನುಭವವೇ ಬೇರೆ. ಎದ್ರಿಂದ ಗೈಡುಗಳ ಜೊತೆ ಬರ್ತಿರೋರನ್ನ ನೋಡಿ ದಾಟಬಹುದಾದ್ರೂ ಅದೊಂತರ ಮಜಾ ಅನುಭವ. ನಂತರ ಭೋಜನಶಾಲೆಗೆ ಹೋಗಬೇಕು ಅಂದ್ಕೋತಾ ಇದ್ರೂ ಮುಂದಿದ್ದೋರು ಎಲ್ಲಿದಾರೆ ಅಂತ ಕಾಣ್ತಿರಲಿಲ್ಲ. ಎಷ್ಟು ಬೇಗ್ಬೇಗ ಹೆಜ್ಜೆ ಹಾಕಿದ್ರೂ ಮಧ್ಯ ಮಧ್ಯ ಫೋಟೋಗೆ ಅಂತ ನಾನು, ಸುಬ್ಬು ನಿಂತಿದ್ರಿಂದ ಮುಂದಿದ್ದ ನಾಲ್ಕು ಜನ ಮಿಸ್ಸಾಗಿ ಹೋಗಿದ್ರು.
 

ಅಹೋಬಲಂನ ಬ್ರಾಹ್ಮಣ ಭೋಜನಶಾಲೆ
 ಭೋಜನಶಾಲೆಗೆ ಬಂದಿರ್ಬೋದಾ ಅಂತ ಅಲ್ಲಿ ಎದುರಿಗಿನ ಚಪ್ಪಲಿಗಳನ್ನ ನೊಡಿದ್ರೂ ಮಾಧವನ ವುಡ್ ಲ್ಯಾಂಡ್ಸ್ ಚಪ್ಪಲಿಗಳು ಕಾಣ್ತಿರಲಿಲ್ಲ. ನನ್ನ ಛತ್ರಿ ಕೌಶಿಕನ ಬಳಿ ಇದ್ದಿದ್ರಿಂದ ಸುಬ್ಬುಗೆ ನೀನಿಲ್ಲೇ ಇರು, ನಾನು ಮುಂದೆಲ್ಲಾದ್ರೂ ಇದ್ದಾರಾ ನೋಡ್ಕೊಂಡು ಬರ್ತೀನಿ ಅಂತ ಮುಂದಿದ್ದ ಭೋಜನ ಶಾಲೆಗಳ ಕಡೆ ಹೆಜ್ಜೆ ಹಾಕಿದೆ. ಕೆಳಗಿದ್ದ ಮೂರ್ನಾಲ್ಕು ಭೋಜನಶಾಲೆಗಳೆದ್ರು, ಕ್ಯಾಂಟೀನುಗಳಲ್ಲೆಲ್ಲಾ ಹುಡುಕಿದ್ರೂ ನಾಲ್ಕು ಜನ ಕಾಣ್ತಿಲ್ಲ. ಮತ್ತೆ ವಾಪಾಸ್ ಬಂದು ವರಾಹ ದೇವಸ್ಥಾನದ ಬಳಿಯೆಲ್ಲಾದ್ರೂ ನಮಗಾಗಿ ಕಾಯ್ತಿದ್ರಾ ಅಂತ ಹುಡುಕಿ ಅಲ್ಲೂ ಸಿಕ್ಕದಿದ್ದಾಗ ಮುಂದೆ ಎಲ್ಲಾದ್ರೂ ನಾಲ್ಕು ಜನ ಸಿಕ್ಕಿದ್ರಾ ಅಂತ ಕೇಳಿ, ಅವ್ರು ನಮ್ಮನ್ನ ಹುಡುಕ್ತಾ ನದಿಯ ಹಾದೀಲಿ ಮತ್ತೆ ವಾಪಾಸ್ಬಂದಿಲ್ಲ ಅಂತನೂ ಖಚಿತಪಡಿಸಿಕೊಂಡು ವಾಪಾಸ್ ಬರೋ ಹೊತ್ತಿಗೆ ಸುಮಾರು ಅರ್ಧಘಂಟೆ ಕಳೀತಾ ಬಂದಿತ್ತು. ಫೋನ್ ನೆಟ್ವರ್ಕಿಲ್ಲ. ಎಲ್ಲಂತ ಹುಡುಕೋದಪ್ಪ ಅಂತ ಅಂದ್ಕೋತಿರುವಾಗ ವರಾಹ ದೇವಸ್ಥಾನದತ್ರ ಒಂದು ಕಡ್ಡಿ ನೆಟ್ವರ್ಕು ಸಿಗ್ತಿತ್ತು. ಅಲ್ಲಿಂದ ಫೋನ್ ಮಾಡಿದ್ರೆ ಆ ಕಡೆ ನೆಟ್ವರ್ಕಿಲ್ಲ :-(
In search of people

 ಏನಪ್ಪ ಕತೆ ಅಂತ ಅಂದ್ಕಂಡು ವಾಪಾಸ್ ಬರ್ತಿದ್ದೆ. ಕಾರಂಜ ದೇವಸ್ಥಾನವನ್ನು ದಾಟಿ  ಭೋಜನಶಾಲೆಯ ಹತ್ರ ಬರುವಾಗ ಕೆಳಗಿಂದ ಮಾಧವ ಬರೋದು ಕಾಣ್ತಿತ್ತು. ಹೋದ ಜೀವ ಬಂದಂಗಾಯ್ತು. ಆಷ್ಟೇ ಸಿಟ್ಟೂ ಉಕ್ತಿತ್ತು. ಅವ ಬಂದವನೇ,ನೀನು ಒಂದು ಮಾತೂ ಆಡ್ಬೇಡ. ಸೀದಾ ಬಂದು ಊಟ ಮಾಡು, ಊಟ ಆದ್ಮೇಲೆ ಮಾತಾಡೋಣಂತೆ ಅಂದ ಅವ. ಸಿಟ್ಟಿನ ಕೈಗೆ ಬುದ್ದಿ ಕೊಡ್ಬಾರ್ದು ಅಂತಂದಂಗೆ ಭೋಜನಶಾಲೆಗೆ ಬಂದು ಊಟದ ಹಾಲಿಗೆ ಬಂದ್ರೂ ಅಲ್ಲಿ ಊಟ ಮುಗಿದೋಗಿತ್ತು. ಮತ್ತೆ ಅದಕ್ಕೆ ಅಂತ ಅರ್ಧ ಘಂಟೆ ಕಳೆದಾಯ್ತು. ಕೊನೆಗೂ ಅಲ್ಲಿನ ಎಲೆಯಲ್ಲಿ ಅನ್ನ, ಪಪ್ಪು, ಪಲ್ಯ, ಚಟ್ನಿ, ಮಜ್ಜಿಗೆಯ ಊಟ  ಮೂರೂಮುಕ್ಕಾಲರ ಹೊತ್ತಿಗೆ ಸಿಕ್ಕಾಗ ಅದು ಅಮೃತವೇ ಎನ್ನುವಷ್ಟು ಖುಷಿಯಾಗಿತ್ತು. ಫ್ಲಾಷ್ ಬ್ಯಾಕಲ್ಲಿ ಈ ಕಡೆಗೆ ನಡೆದ ಕತೆಗೆ ಬಂದ್ರೆ ಸುಸ್ತಾಗಿ ನಡ್ಕೊಂಡು ಬಂದಿದ್ದವರಿಗೆ ಭೋಜನಶಾಲೆಯಲ್ಲಿ ಊಟಕ್ಕಾಗಿದೆ ಅಂತ ಕರೀತಿದ್ದಿದ್ದು ಕಾಣ್ತಿತ್ತು. ಸರಿ ಅಂತ ಮೇಲೆ ಹತ್ತಿದವ್ರೇ ಚಪ್ಪಲಿಯನ್ನು ಮೇಲೇ ಮೂಲೇಲಿ ಬಿಟ್ಟಿದ್ರು. ಅವ್ರು ಬಿಟ್ಟ ಚಪ್ಪಲಿ ಮೆಟ್ಟಿಲುಗಳ ಮೇಲಿರದಿದ್ದರಿಂದ ಅವ್ರು ಒಳಕ್ಕೆ ಹೋಗಿದ್ದು ಗೊತ್ತಾಗಿರಲಿಲ್ಲ. ಮೆಟ್ಟಿಲು ಹತ್ತಿ ಮೇಲೆ ಹೋಗಿದ್ರೂ ಅವ್ರು ಕಂಡಿರಲಿಲ್ಲ ನನಗೆ.ಯಾಕಂದ್ರೆ ಅವ್ರು ಆಗ ಊಟಕ್ಕೆ ಕೂತಿದ್ರು ! ಬಾಗಿಲು ಹಾಕಿದ್ದ ಊಟದ ಹಾಲೊಳಗೆ ಹೊಕ್ಕು ನೋಡಿರಲಿಲ್ಲವಷ್ಟೇ ನಾನು. ನಾನು ಹೆಂಗಿದ್ರೂ ಅಲ್ಲಿಗೇ ಮುಂದಿನ ಪಂಕ್ತಿಗಾದ್ರೂ ಬರ್ತೀನಿ ಅಂತ ಅವರ ಲೆಕ್ಕಾಚಾರ, ನನ್ನ ಬಿಟ್ಟು ಅವ್ರು ಊಟಕ್ಕೆ ಕೂತಿರ್ಲಿಕ್ಕಿಲ್ಲ, ಮಿಸ್ಸಾದ ನಮ್ಮನ್ನ ಹುಡುಕ್ತಿದ್ದಾರೆ ಅಂತ ನನ್ನ ಲೆಕ್ಕಾಚಾರ :-)
Food at the Leaf plate of Ahobilam

ಪಾವನ
ಊಟ ಮುಗಿಯೋ ಹೊತ್ತಿಗೆ ನಾಲ್ಕಾಗಿತ್ತು. ಹಿಂದಿದ್ದ ಪಾವನಕ್ಕೆ ವಾಪಾಸ್ ಹೋಗೊಣ್ವಾ ಅಂತ ನಾವು ಮಾತಾಡ್ತಾ ಇದ್ದಾಗ ಅಲ್ಲಿದ್ದವರು ಪಾವನ ಮೂರಕ್ಕೆ ಬಾಗಿಲು ಹಾಕುತ್ತೆ . ಈಗ ಹೊದ್ರೂ ಉಪಯೋಗಿಲ್ಲ ಅಂದ್ರು. ಇಲ್ಲಿ ಪಾವನ ಅಂತಲ್ಲ, ಸುಮಾರು ಎಲ್ಲಾ ಜಾಗಗಳೂ ಮೂರರ ಮೇಲೆ ಬಾಗಿಲು ಹಾಕುತ್ತೆ. ಇಲ್ಲಿಂದ ಪಾವನಕ್ಕೆ ನಾಲ್ಕು ಕಿ.ಮೀ ನಡೆಯಬೇಕಿದ್ರಿಂದ ಕೆಳಗಿನ ಅಹೋಬಲದ ಯಾವುದನ್ನೂ ನೋಡೋಕಾಗುಲ್ಲ ಅಂತ ವಾಪಾಸ್ಸಾಗೋ ಮನಸ್ಸು ಮಾಡಿದ್ವಿ. ಸರಿ ನಾನು ಕಾರಂಜವನ್ನಾದ್ರೂ ನೋಡ್ಕೊಂಡು ಬರ್ತೀನಿ, ಹತ್ತೇ ನಿಮಿಷ ಅಂತ ನಾ ಕ್ಯಾಮರವನ್ನೆತ್ತಿ ಹಿಂದೋಡಿದೆ.

ಕಾರಂಜ ಲಕ್ಷ್ಮೀನರಸಿಂಹ
ಅಲ್ಲಿಂದ ಒಂದು ಏರಿಯನ್ನೇರಿದ್ರೆ ಕಾರಂಜ. ಅಲ್ಲಿ ಹೋಗಿ ಅಲ್ಲಿನ್ನೂ ತೆರೆದಿದ್ದ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿ ಅದರ ಮುಂದಿದ್ದ ಮಂಟಪದ ಶಿಲ್ಪಕಲೆಯನ್ನೂ ಸವಿದು ಹೇಳಿದಂತೆ ಹದಿನೈದು ನಿಮಿಷಕ್ಕೆ ವಾಪಾಸ್ಸಾಗಬೇಕು ಅಂತ ನೊಡ್ತೀನಿ, ಹಿಂದೆಯೇ ಸುಬ್ಬು, ದಾಸ್ ಅಲ್ಲಿದ್ದ ಮಂಟಪದ ಬಳಿ ಫೋಟೋ ತೆಗಿತಾ ನಿಂತಿದ್ದಾರೆ :-) ತಗಳ್ಳಪ್ಪ, ಸರಿಯಾಯ್ತು ಅಂತ ಎಲ್ಲಾ ಸೇರಿ ಕೆಳಗೋದ್ವಿ

ಕೆಳಗಿನ ಅಹೋಬಲ
ಕೆಳಗೆ ಬಂದ್ರೆ ವಾಪಾಸ್ ಹೋಗೋಕೆ ಒಂದೇ ಒಂದು ಬಸ್ಸಿಲ್ಲ. ಆಟೋವೂ ಇಲ್ಲ. ಎಂಟು ಕಿ.ಮೀ ನಡೆಯೋ ಬಾಬ್ತಲ್ಲ. ಅಲ್ಲೊಂದು ಟೆಂಪೋದಂಗೆ ನಿಲ್ಲಿಸಿಕೊಂಡಿದ್ದ. ನಾವಾರು ಜನ ಆರಾಮಾಗಿ ಹೋಗಬಹುದು ಅದ್ರಲ್ಲಿ ಅಂದ್ಕೊಂಡು ಹತ್ತಿ ಕೂತ್ರೆ ಅವ ಹೊರಡುವಂಗೇ ಕಾಣ್ತಿಲ್ಲ.ಅಲ್ಲಿಂದ ಮತ್ತೆ ಅರ್ಧ ಘಂಟೆ ಕಾಯಿಸಿದ ಅವ ಹದಿನೆಂಟು ಜನರಾಗ್ಬೇಕು ಅಂತ! ಅಂತೂ ಇಂತೂ ಕೆಳಗಿನ ಅಹೋಬಲ ತಲುಪೋ ಹೊತ್ತಿಗೆ ನಾಲ್ಕೂಮುಕ್ಕಾಲು. ಅಲ್ಲಿಂದ ಸೀದಾ ಕೆಳಗಿನ ಅಹೋಬಲದ ಲಕ್ಷ್ಮೀನರಸಿಂಹ ದೇಗುಲಕ್ಕೆ ಸಾಗುವಾಗ ಸಿಗುವ ಶಿಲ್ಪಕಲಾ ಪೂರ್ಣ ಮಂಟಪಗಳು, ಕಂಬಗಳು, ಅಲ್ಲಿನ ಶಿಲ್ಪಕಲೆ ನೋಡೋ ಹೊತ್ತಿಗೆ ಘಂಟೆ ಐದೂ ಹತ್ತು. ಇಲ್ಲಿನ ದೇವಸ್ಥಾನದಲ್ಲಿ ನೀನು ಹಾಫ್ ಪ್ಯಾಂಟ್ ಹಾಕ್ಕೊಂಡು ಬಂದಿದ್ದೀಯ. ನಿಂಗೆ ದರ್ಶನಕ್ಕೆ ಒಳಗೆ ಬಿಡೋಲ್ಲ ಅಂತ . ಯಾವತ್ತೂ ದೇವಸ್ಥಾನಕ್ಕೆ ಹೋಗ್ತಾ ಪ್ಯಾಂಟೋ, ಪಂಚೆಯಲ್ಲೋ ಹೋಗ್ತಿದ್ದವ ನಾನು ಇವತ್ತು ಟ್ರಿಪ್ಪು ಅಂತ ಚಡ್ಡಿಯಲ್ಲಿ ಬಂದಿದ್ದಕ್ಕೆ ಕೇಳಬೇಕಾದ ಮಾತೇ ಇದು. ವರದಳ್ಳೀಲಿ ಹಿಂಗೇ ಜೀನ್ಸ್ ಪ್ಯಾಂಟ್ ಹಾಕ್ಕೊಂಡು ಬಂದಿದ್ದೋರಿಗೆ ಗರ್ಭಗುಡಿಗೆ ಬಿಡೋಲ್ಲ ಅಂದಿದ್ದನ್ನ ಅವರು ದೇವಸ್ಥಾನಕ್ಕೆ ಬಿಡೋಲ್ಲ ಅಂತ ಫೇಸ್ಬುಕ್ಕಲ್ಲಿ ಗಲಾಟೆ ಮಾಡಿದ್ರು ಅಂತ ಕೇಳಿದ ನೆನಪಾಯ್ತು. ಅಲ್ಲಿ ಮಹಿಳೆಯರಾದ್ರೆ ಸೀರೆ, ಪುರುಷರಾದ್ರೆ ಪಂಚೆ, ಮಡಿ ಉಟ್ಕೊಂಡು ಹೋದ್ರೆ ಮಾತ್ರ ಅರ್ಚನೆಗೆ ಬಿಡೋದು, ನಾನು ಜೀನ್ಸ್ ಹಾಕ್ಕೊಂಡು ಹೋದ್ರೂ ಬಿಡೋಲ್ಲ , ಗುಡಿಯ ಒಳಗೋಗೋದಕ್ಕೂ, ಗರ್ಭಗುಡಿಗೆ ಹೋಗೋದಕ್ಕೂ, ದರ್ಶನಕ್ಕೆ ಬಿಡೋದಕ್ಕೂ ವ್ಯತ್ಯಾಸವಿದೆ ಅಂತ ಗೆಳೆಯನೊಂದಿಗೆ ಮಾತಾಡಿದ್ದು ನೆನೆಪಾಯ್ತು. ನಾನು ಹೋಗ್ತಿದ್ದಿದ್ದು ಗರ್ಭಗುಡಿಗಲ್ಲ, ಒಳಗಿದ್ದ ನವರಂಗ, ಅರ್ಧಮಂಟಪಕ್ಕೆ. ಸರಿ, ಅದಕ್ಕೂ ಪ್ರವೇಶವಿಲ್ವಾ ಅಂದ್ಕೋತಿರುವ ಹೊತ್ತಿಗೆ ನನ್ನ ಕತ್ತಲ್ಲಿದ್ದ ಟವೆಲನ್ನು ನೋಡಿ, ಅದನ್ನು ಸುತ್ಕೊಂಡು ಒಳಗೆ ಬಾ ಪರವಾಗಿಲ್ಲ ಅಂದ್ರು ಅಲ್ಲಿದ್ದೋರು. ಸರಿ, ಚಡ್ಡಿಯ ಮೇಲೆ ಟವೆಲ್ ಸುತ್ಕೊಂಡು ಒಳಗೆ ಹೋಗಾಯ್ತು. 
 
ಬ್ಯಾಗಲ್ಲಿದ್ದ ಪ್ಯಾಂಟ್ ಹಾಕ್ಕೊಂಡು ಹೋಗ್ಬೋದಿತ್ತು.ಆದ್ರೆ ಬರೋ ಹಾದಿಯಲ್ಲೆಲ್ಲಾ ಮಳೆ ಸಿಕ್ಕಿ ಬಟ್ಟೆ ಹಸಿಯಾಗ್ತನೇ ಇದ್ದಿದ್ರಿಂದ ಎಲ್ಲಾ ನೋಡಾದ ಮೇಲೆ ಹಾಕ್ಕೊಳ್ಳೋಣ ಅಂದ್ಕೊಂಡಿದ್ದೆ. ಈ ದೇಗುಲಗಳ ಶಿಲ್ಪಕಲೆಗಳು ಚೆನ್ನಾಗಿವೆ. ಕರ್ನಾಟಕದ ಬೇರೆಲ್ಲಾ ದೇಗುಲಗಳಲ್ಲಿದ್ದಂತೇ ಇಲ್ಲೂ ಮಿಥುನ ಶಿಲ್ಪಗಳಿವೆ. ಆದ್ರೆ ಅದೇ ಎದ್ದು ಕಾಣುವಂತೆ ಅದಕ್ಕೆ ಬಿಳಿ ಸುಣ್ಣವನ್ನೋ, ಕೆಂಬಣ್ಣವನ್ನೋ ಬಳಿದದ್ದು ಇಷ್ಟವಾಗಲಿಲ್ಲ. ಮಾನವನೆಂದ ಮೇಲೆ ಅದೊಂದು ಸಹಜ ಕ್ರಿಯೆಯಷ್ಟೇ. ಅದರ ವೈಭವೀಕರಣ ಇಷ್ಟವಾಗಲಿಲ್ಲವಷ್ಟೆ.
Scluptures at Lower Ahobilum

ಯೋಗಾನಂದ 
ಅಲ್ಲಿಂದ ಮುಂದೆ ಮೂರು ಕಿ.ಮೀ ಇರುವ ಯೋಗಾನಂದ ದೇಗುಲಕ್ಕೆ ಹೋಗ್ಬೇಕು ಅಂದ್ಕೊಂಡ್ರೂ ಅಲ್ಲಿಗೆ ಬಸ್ಸಿರಲಿಲ್ಲ.  ದೇಗುಲಗಳು ಐದೂವರೆಗೆ ಬಾಗಿಲು ಹಾಕುತ್ತೆ ಅಂತ ಬೇರೆ ಇಲ್ಲಿ ಹೇಳ್ತಾ ಇದ್ರು. ಬರೋದು ಬಂದಾಗಿದೆ ನೋಡೋದೇ ಸರಿ ಅಂತ ನಾನು. ಆದ್ರೆ ಅಲ್ಯಾವುದೂ ಆಟೋಗಳಿಲ್ಲ. ಆಟೋ ಸ್ಟಾಂಡು ಮುಂದೆಲ್ಲೋ ಇದೆ. ಬೆಳಗ್ಗಿಂದ ನಡೆನಡೆದು ಸುಸ್ತಾಗಿರೋದ್ರ ಜೊತೆ ಇರೋ ಎರಡು ಛತ್ರಿಗಳಲ್ಲಿ ಆರು ಜನ ನೆನ್ಕಂಡು ಆಟೋ ಹುಡುಕೋ ಬದ್ಲು ಇಬ್ಬರು ಹೋಗಿ ಆಟೋ ತರ್ಬೋದು, ಉಳ್ದೋರು ಅಲ್ಲೇ ಮಂಟಪವೊಂದರ ಬಳಿ ಇರ್ಬೋದು ಅನ್ನೋ ಐಡಿಯಾ ಬಂತು. ತಿರುಗೋ ಹುಚ್ಚಿದ್ದವ ನಾನು. ಸರಿ ಬಿಡ್ರಪ್ಪ ಅಂತ ಮುಂದೆ ಸಿಕ್ಕ ಹೋಟೆಲ್ಲು, ಕಾಫಿಯತ್ತ ಮನಸ್ಸು ಮಾಡಿದ್ದ ಸುಬ್ಬುವನ್ನೂ ಮುಂದಕ್ಕೆಳೆದುಕೊಂಡು ಮುಂದಕ್ಕೆ ಸಾಗಿ ಅಲ್ಲಿದ್ದ ಆಟೋದವನತ್ರ ಚೌಕಾಸಿ ಮಾಡಿ, ದೇವಸ್ಥಾನ ತೆಗೆದಿದ್ರೆ ಮಾತ್ರ ಕರ್ಕೊಂಡೋಗು ಅನ್ನೋ ಕಂಡೀಷನ್ನಿನ ಮೇಲೆ ಅವನನ್ನೂ ಒಪ್ಪಿಸಿ  ಕರ್ಕೊಂಡು ಬರೋ ತನಕ ಉಳಿದವ್ರು ಅಲ್ಲೇ ಇದ್ದ ಮಂಟಪದತ್ರ ಕುಳಿತಿದ್ರು. ಹುಚ್ಚಾಪಟ್ಟೆ ಸುರೀತಿದ್ದ ಮಳೇಲೆ ಮುಂದೆ ಮೂರು ಕಿ.ಮೀ ಸಾಗಿ ಯೋಗಾನಂದಕ್ಕೆ ತೆರಳಿದ್ರೆ ಅಲ್ಲಿ ದೇವರಿಗೆ ಅದೇನೋ ಅರ್ಚನೆ, ಭಜನೆಗಳು ನಡೀತಿದ್ವು. ಐದತ್ತು ನಿಮಿಷಗಳು ಕಳೆದ್ರೂ ಅದು ಮುಗಿಯೋ ಹಂಗಿರಲಿಲ್ಲ. ಇಲ್ಲೇ ಕೂತ್ರೆ ಚಕ್ರವಾಟ ನೋಡೋಕಾಗುಲ್ಲ ಅಂತ ಮುಂದೆ ಸಾಗಿದ್ವಿ. 
Yogananda temple

ಚಕ್ರವಾಟ
ಅಲ್ಲಿಂದ ಸುಮಾರು ಒಂದೂವರೆ ಕಿ.ಮೀ ಮುಂದೆ ಸಾಗಿದ್ರೆ ಸಿಗೋದು ಚಕ್ರವಾಟ. ಇಲ್ಲಿನ ಅರ್ಚಕರು ಗುಡಿಯ ಬಾಗಿಲು ಹಾಕಿ ಮನೆಗೆ ಹೋಗೋಕೆ ರೆಡಿಯಾಗಿದ್ರು. ಆದ್ರೆ ನಮ್ಮ ಡ್ರೈವರು ಅವರಿಗೆ ಫೋನ್ ಮಾಡಿ ಇರಿಸಿದ್ರಿಂದ ಅವ್ನಿಗೆ ಬಯ್ಯೋಕೆ ಶುರುಮಾಡಿದ್ರು ಅವ ಅಲ್ಲಿಗೆ ಹೋದ ತಕ್ಷಣವೇ. ಇಲ್ಲಿಗೆ ಬಂದು ಆಟೋ ತಗೊಂಡಿದ್ದು ದುಬಾರಿಯಾದ್ರೂ ಲೇಟಾದ್ರೂ ದೇವರ ದರ್ಶನವಾದದ್ದು ನಮ್ಮ ಪುಣ್ಯವಷ್ಟೇ. ಯೋಗಾನಂದ, ಚಕ್ರವಾಟಗಳೆರಡೂ ಇತ್ತೀಚಿನ ಗುಡಿಗಳಂತಿವೆ. ಇವುಗಳಲ್ಲಿ ಅಂತಹ ಶಿಲ್ಪಕಲಾ ಸೌಂದರ್ಯವೂ ಇಲ್ಲ. ಹಾಗಾಗಿ ಮೇಲಿನ ಅಹೋಬಲಂನ ಎಲ್ಲಾ ಗುಡಿಗಳನ್ನೂ ಸಂದರ್ಶಿಸೋಕೆ ಆಗಿ, ಕೆಳಗಿನ ಅಹೋಬಲದ ಲಕ್ಷ್ಮೀನರಸಿಂಹವನ್ನು ಸಂದರ್ಶಿಸಿದರೆ ಬಹುತೇಕ ಎಲ್ಲಾ ನೋಡಿದಂತೆಯೇ. ಇಲ್ಲೇ ನವನರಸಿಂಹ ಗುಡಿಯೂ ಇದೆ. ಇಲ್ಲಿ ಈ ಕ್ಷೇತ್ರದಲ್ಲಿರುವ ಎಲ್ಲಾ ಒಂಭತ್ತು ನರಸಿಂಹರ ಮೂರ್ತಿಗಳನ್ನೂ ಒಂದೇ ಕಡೆ ಸಂದರ್ಶಿಸುವ ಅನುಭವ ಪಡೆಯಬಹುದು. ಇಲ್ಲಿಂದ ಹೊರಡುವ ಹೊತ್ತಿಗೆ ಆರು ಘಂಟೆ ದಾಟಿತ್ತು. ಆರೂ ಕಾಲಿಗೆ ಅಲ್ಲಗಡ್ಡಕ್ಕೆ ಬಸ್ಸು ಅಂತ ಹೇಳಿದ್ರಿಂದ ಅದನ್ನು ಹಿಡಿಯೋ ಗಡಿಬಿಡಿಗೆ ವಾಪಾಸ್ ಹೊರಟ್ವಿ. ಆದ್ರೆ ನಾವು ಬರೋ ಹೊತ್ತಿಗೆ ಆರೂಹತ್ತಾಗಿದ್ರೂ ಆರೂ ಕಾಲಿನ ಬಸ್ಸು ಹೋಗಾಗಿತ್ತು !
Navanarasimha temple

ಭಾರ್ಗವ
ಉಳಿದಿದ್ದ ಒಂದೇ ದೇಗುಲವೆಂದ್ರೆ ಭಾರ್ಗವ ದೇಗುಲ. ಅದಕ್ಕೆ ಬೇರೆ ಕಡೆ ಹೋಗ್ಬೇಕಿತ್ತು ಮತ್ತು ಕಾಡಿನೊಳಗೆ ಹೋಗ್ಬೇಕಿತ್ತು. ಭಾರ್ಗವಕ್ಕೂ ಕರ್ಕೊಂಡು ಹೋಗೋದಾದ್ರೆ ಮುನ್ನೂರು ರೂ ಅಂತ ಡ್ರೈವರು ರೆಡಿಯಿದ್ರೂ ಹುಡುಗರೆಲ್ಲಾ ಅಲ್ಲಗಡ್ಡಕ್ಕೆ ಮತ್ತೆ ಮರಳೋ ಚಿಂತೆಯಲ್ಲಿದ್ರು. ಘಂಟೆ ಆರಾಗಿತ್ತು, ದೇಗುಲ ಬಾಗಿಲು ಹಾಕೋ ಸಮಯವೂ ಆಗಿದ್ರಿಂದ ಭಾರ್ಗವಕ್ಕೆ ಹೋಗದೇ ಅಲ್ಲಗಡ್ಡಕ್ಕೆ ಹೋಗೋಕೆ ಅದೇ ಆಡೋದವನನ್ನ ಕೇಳಿದ್ವಿ. 

ಮತ್ತೆ ಅಲ್ಲಗಡ್ಡಕ್ಕೆ
ಅವನ ಬಳಿ ನಾನೂರಕ್ಕೆ ಡೀಲ್ ಮಾಡಿ ಏಳರ ಹೊತ್ತಿಗೆ ಅಲ್ಲಗಡ್ಡ ತಲುಪಿದ್ವಿ. ಅಲ್ಲಿಂದ ಬೆಂಗಳೂರಿಗೆ ಹೋಗೋಕೆ ನಂದ್ಯಾಲದ ಬದಲು ಕಡಪವೇ ಹತ್ತಿರದ, ಸಖತ್ ಬಸ್ಸಿರೋ ದಾರಿ ಅಂತ ಕೇಳಿದ ನಾವು ಕಡಪದ ಬಸ್ಸು ಕಾದು ಅದನ್ನು ಹತ್ತಿದ್ವಿ. ಅಲ್ಲಿಂದ ಕಡಪ ತಲುಪಿದ್ದು, ಕಡಪದಿಂದ ಬೆಂಗಳೂರಿಗೆ ಹೊರಡೋ ಆಂಧ್ರದ ಬಸ್ಸು ಮಧ್ಯೆಯೇ ಪಂಚರ್ ಆಗಿ ರಾಯಚೂಣ ಅನ್ನೋ ಡಿಪೋ ಬಳಿ ಒಂದೂವರೆ ಘಂಟೆ ನಿಲ್ಲಿಸಿದ್ದರ ಬಗ್ಗೆ ಬರೆಯೋಕೆ ಹೊರಟ್ರೆ ಅದೇ ಒಂದು ದೊಡ್ಡ ಕತೆಯಾದೀತು.ಅಂತೂ ಇಂತೂ ಸೋಮವಾರ ಬೆಳಗ್ಗೆ ಆರೂಮುಕ್ಕಾಲಿಗೆ ಪೀಜಿ ತಲುಪಿದ್ವಿ ಅನ್ನುವಲ್ಲಿಗೆ ಈ ಪಯಣಕ್ಕೊಂದು ವಿರಾಮ.

No comments:

Post a Comment