Saturday, January 19, 2019

ಶಿವಗಂಗೆ ಟ್ರಿಪ್ಪು

We at Shivagange
ನಮ್ಮ ಮೂರನೇ ಚಾರಣವಾದ ಸಾವನದುರ್ಗದ ನಂತರ ಎಲ್ಲಿಗೆ ಹೋಗೋದು ಅಂತ ಪ್ಲಾನ್ ಮಾಡ್ತಿದ್ದೆ. ನವದುರ್ಗಗಳಲ್ಲಿ ಮುಂದಿನ ದುರ್ಗವಾದ ಹುತ್ರಿದುರ್ಗಕ್ಕೋ, ಹುಲಿಯೂರು ದುರ್ಗಕ್ಕೋ ಹೋಗಿ ಬರೋಣ ಅಂತ ಪ್ಲಾನ್ ಹಾಕಿದ್ರೂ ಹೆಚ್ಚಿನ ಜನ ಸಿಗದೇ ಅದು ನೆರವೇರಲಿಲ್ಲ. ಸರಿ, ಶಿವಗಂಗೆಗೆ ಹೋಗಿ ಅಲ್ಲೇ ಹತ್ತಿರದಲ್ಲಿರೋ ದೇವರಾಯನದುರ್ಗಕ್ಕಾದರೂ ಹೋಗಿ ಬರೋಣ ಅಂದ್ಕೊಂಡ್ವಿ. ಆದರೆ ಒಮ್ಮೆ ಶಿವಗಂಗೆಯನ್ನು ಹೊಕ್ಕಾಗ ಅಲ್ಲಿರೋ ಅಷ್ಟ ಲಿಂಗಗಳು, ಅಷ್ಟ ವೃಷಭಗಳು, ಒಳಕಲ್ಲು ತೀರ್ಥ, ಪಾತಾಳಗಂಗೆ, ಗಂಗಾಧರೇಶ್ವರ, ಹೊನ್ನಮ್ಮ ದೇವಿಯ ಗುಡಿಗಳನ್ನು ನೋಡೋದರಲ್ಲೇ ಸಂಜೆಯಾಗುತ್ತೆ ಅಂತ ಅಂದ್ಕೊಂಡಿರಲಿಲ್ಲ. ಅದೆಷ್ಟೋ ಕಡೆ , ಬಂಡೆಗಳ ಮೇಲೆಲ್ಲಾ ನಂದಿ, ಕೆತ್ತನೆಗಳು, ಹಳಗನ್ನಡದ ಲಿಪಿಗಳು ನಮ್ಮನ್ನು ಕಾಲದಲೆಯಲ್ಲಿ ಹಿಂದಿಂದೆ ಕೊಚ್ಚಿಕೊಂಡು ಹೋದಂತನಿಸುತ್ತಿತ್ತು.
Entrance to the Old city of Shivagange 

ಅಷ್ಟ ಲಿಂಗಗಳು: 
ಶಿವಗಂಗೆಗೆ ಹೋದವರಿಗೆ ಅಲ್ಲಿನ ಗಂಗಾಧರೇಶ್ವರ ಗುಡಿಯ ಬಗ್ಗೆ ಗೊತ್ತಿರುತ್ತೆ. ಆದರೆ ಅದರ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಸ್ವರ್ಣಾಂಭ, ಶಾಂತೇಶ್ವರ, ಓಂಕಾರೇಶ್ವರ, ರೇವಣ ಸಿದ್ದೇಶ್ವರ, ಕುಂಭೇಶ್ವರ, ಸೋಮೇಶ್ವರ, ಮುದ್ದು ವೀರೇಶ್ವರ ಎಂಬ ಅಷ್ಟ ಲಿಂಗಗಳಿವೆ ಅಂತ ಗೊತ್ತಿರೋಲ್ಲ.ಈಗ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರ ಎಂಬ ಹೆಸರಲ್ಲಿ ಇನ್ನೂ ಹನ್ನೆರಡು ಲಿಂಗಗಳನ್ನು ಸ್ಥಾಪಿಸಲಾಗಿದೆಯಿಲ್ಲಿ
one of the less known rock in Shivagange with a Nandi 


ಅಷ್ಟ ವೃಷಭಗಳು/ಎಂಟು ಬಸವಗಳು: 
ಈ ಬೆಟ್ಟದ ಮೇಲೆ ನಂದಿ ವೃಷಭ/ಬಸವ, ಮಕರ ಬಸವ, ಎಮ್ಮ ಬಸವ/ಮಹಿಷ ಬಸವ, ಗಾರೇ ಬಸವ, ದೊಡ್ಡ ಬಸವ, ಕಡಲೆ ಬಸವ, ಗಿರಿ ಬಸವ ಮತ್ತು ಕೋಡುಗಲ್ಲು ಬಸವ ಎಂಬ ಎಂಟು ಬಸವನ ಮೂರ್ತಿಗಳಿವೆ.
One of the less known Nandi Mantapa in Shivagange 

ಅಷ್ಟ ತೀರ್ಥಗಳು: 
ಇಲ್ಲಿ ಅಗಸ್ತ್ಯ ತೀರ್ಥ, ಶಂಕರ ತೀರ್ಥ, ಕಣ್ವ ತೀರ್ಥ, ಕದಂಬ ತೀರ್ಥ, ಮೈಥಲ ತೀರ್ಥ, ಪಾತಾಳ ಗಂಗೆ, ಒಳಕಲ್ಲು ತೀರ್ಥ ಮತ್ತು ಕಪಿಲ ತೀರ್ಥಗಳೆಂಬ ಎಂಟು ತೀರ್ಥಗಳೂ ಇವೆಯಂತೆ. ಆದರೆ ಪಾತಾಳಗಂಗೆ ಮತ್ತು ಒಳಕಲ್ಲು ತೀರ್ಥಗಳನ್ನು ಬಿಟ್ಟು ಬೇರೆ ಯಾವುದಕ್ಕೂ ಬೋರ್ಡುಗಳಿಲ್ಲದಿರುವುದರಿಂದ ಇವುಗಳ ಬಗ್ಗೆ ತಿಳಿದವರನ್ನು ಕರೆದುಕೊಂಡು ಹೋಗದಿದ್ದರೆ ಇವೇ ಇವು ಅಂತ ಗೊತ್ತಾಗೋದು ಕಷ್ಟ.
One of the less known Theertha

One more Less Known Theertha



ಇತಿಹಾಸ, ದಂತಕತೆಗಳು ಮತ್ತು ಇಲ್ಲಿನ ವಿಶಿಷ್ಟ ಆಚರಣೆಗಳು: 
ಇಷ್ಟೆಲ್ಲಾ ವಿಶೇಷಗಳಿವೆಯಾ ಇಲ್ಲಿ ಅಂದ್ರಾ ? ಇಲ್ಲಿನ ಇತಿಹಾಸ, ದಂತಕತೆಗಳು ಬಹಳವೇ ಇದೆ. ಅದರಲ್ಲಿ ಮುಖ್ಯವಾದದ್ದು ಗಂಗಾಧರೇಶ್ವರ ಮತ್ತು ಹೊನ್ನಮ್ಮ ದೇವಿ ದೇಗುಲಗಳದ್ದು. ಇವನ್ನು  ಚೋಳರ ಕಾಲದಲ್ಲೇ ಕಟ್ಟಲಾಯಿತಂತೆ. ನಂತರ ಹೊಯ್ಸಳ ವಿಷ್ಣುವರ್ಧನ ಮತ್ತು ಕೆಂಪೇಗೌಡನ ಕಾಲದಲ್ಲಿಇವುಗಳನ್ನು  ಜೀರ್ಣೋದ್ದಾರ ಮಾಡಲಾಯಿತು.
Near the Gangadhareshwara temple at the base

ಮೇಲ್ಗಡೆ ಇರುವ ಗಂಗಾಧರೇಶ್ವರ ದೇವಸ್ಥಾನದ ಹಿಂಭಾಗದಲ್ಲೇ ಹೊಯ್ಸಳ ರಾಣಿ ಶಾಂತಲಾ ಜಿಗಿದು ಪ್ರಾಣ ತ್ಯಾಗ ಮಾಡಿದಳೆಂದು ಹೇಳಲಾದ ಜಾಗವೂ ಇದೆ. ಅವಳು ಕೆಳಗೆ ಹಾರುವಾಗ ಸೆರಗಲ್ಲಿ ಅರಳೀ ಬೀಜ ಕಟ್ಟಿಕೊಂಡು ಜಿಗಿದಳು. ಅಲ್ಲಿ ಕಾಣುವ ಅರಳೀ ಬೀಜಗಳು ಈಗಲೂ ಚಿಗುರುತ್ತವೆ. ಅವನ್ನು ತಂದು ಬೇಯಿಸಿದರೆ ರಕ್ತದ ತರ ಆಗುತ್ತೆ ಅಂತ ಸ್ಥಳೀಯರು ನಂಬುತ್ತಾರೆ. ಇಲ್ಲಿರುವ ಹೊನ್ನಮ್ಮ ದೇವಿಯ ದೇಗುಲದ ಬಗೆಯೂ ದಂತಕತೆಯೊಂದಿದೆ. ಈ ಬೆಟ್ಟದ ಮೇಲಿದ್ದ ಹೊನ್ನಮ್ಮ ದೇವಿಯು ಬಸರಿ ಹೆಂಗಸರನ್ನು ಬಲಿ ತೆಗೆದುಕೊಳ್ಳುತ್ತಿದ್ದಳಂತೆ. ಈ ಸರತಿಯಂತೆ ಕೋಟೆಯ ಕಾವಲುಗೈವ ನಾಯಕನ ಹೆಂಡತಿಯೂ ಹೋಗಬೇಕಾಗಿ ಬಂತಂತೆ. ಅವಳು ಕಣ್ಣೀರು ಹಾಕಿಕೊಳ್ಳುತ್ತಾ ಬಂದಾಗ ಎದುರು ಬಂದ ದೇವಿ ನೀನು ಕಣ್ಣೀರು ಹಾಕಿಕೊಂಡು ಬಂದ್ರೆ ಶ್ರೇಯಸ್ಸಲ್ಲ. ನಿನ್ನ ಗಂಡನ ಕೈಯಲ್ಲಿ ಮೂರು ಕವಲೊಡೆದಿರುವ ಬಸರೀ ಮರ ತಂದು ನೆಡೆಸಿ ಬೆಳಿಗ್ಗೆ , ಸಾಯಂಕಾಲ ಪೂಜೆ ಮಾಡಂಗಿದ್ರೆ ನಾನು ಇನ್ಮೇಲೆ ನರಬಲಿ ತಗೊಳ್ಳಲ್ಲ ಅಂತ ವಾಗ್ದಾನ ತಗೊಂಡ್ಲಂತೆ. ನಾಯಕರು ದೇವಿ ದೇವಸ್ಥಾನದ ಕಾವಲುಗಾರರಾಗಿದ್ದವರು, ಬಸರೀ ಮರ ತಂದು ನೆಟ್ಟು ಪೂಜೆ ಮಾಡತೊಡಗಿದರಂತೆ. ಆ ನೆನಪಿಗೆ  ಈಗಲೂ ಪ್ರತೀ ವರ್ಷದ ಯುಗಾದಿ ಆದ ನಂತರ ಬರುವ ಮಂಗಳವಾರದಂದು ದೇಗುಲಕ್ಕೆ ಏರುವಲ್ಲಿ ಸಿಗುವ ಚೌಕದಲ್ಲಿ ಬಸರೀ ಮರ ಇಟ್ಟು ಬೆಳಗ್ಗೆ, ಸಂಜೆಯ ಪೂಜೆಯನ್ನು ಮಾಡಲಾಗುತ್ತದೆ. ಪೂಜೆ ಮಾಡಿದಾಗ ನಮ್ಮ ಮುಖದಲ್ಲಿ ಹೇಗೆ ಬೆವರು ಸುರಿಯುತ್ತಿರುತ್ತೋ ಅದೇ ರೀತಿ ಹೊನ್ನ ದೇವಿ ದೇಗುಲದಲ್ಲಿ ನೀರು ಜಿನುಗುತ್ತಿರುತ್ತಂತೆ. ಹದಿನೈದು ದಿನ. ಅದನ್ನು ಉಗ್ರರೂಪ ಎನ್ನುತ್ತಾರೆ.  ಅದಾದ ನಂತರ ಹೊನ್ನಾ ದೇವಿ(ಹೊನ್ನಮ್ಮ ದೇವಿ/ಸ್ವರ್ಣಾಂಭ ದೇವಿ)ಗೆ ಹದಿನಾರು ಸೇರು ಆರತಿ, ಗಂಗಾಧರೇಶ್ವರನಿಗೆ ಐದು ಸೇರು ಆರತಿ, ಬೆಟ್ಟದ ಸುತ್ತಮುತ್ತ ಎಷ್ಟು ದೇವರಿದ್ದಾರೋ ಅವರಿಗೆಲ್ಲಾ ಒಂದೊಂದು ಸೇರು ಆರತಿ ಮಾಡಿ, ಅಡಿಕೆ ಹೊಂಬಾಳೆಯನ್ನು ತಗೊಂಡು ಹೋಗಿ ಬಸರಿ ಮರಕ್ಕೆ ಕೊಡ್ತಾರೆ. ಅದು ಐದು ದಿನಕ್ಕೆ ಹೊಸ ಗಿಡ ಚಿಗುರಿದಂತೆ ಚಿಗುರಿರುತ್ತೆ. ಅದನ್ನ ಬುಧವಾರ ದಿನ ಕಿತ್ತು ಕೆಳಗಿರೋ ಕಲ್ಯಾಣಿಗೆ ಬಿಡುತ್ತಾರೆ. ಗುರುವಾರದಿಂದ ಹೊನ್ನಾ ದೇವಿಗೆ ಹೊಸ ಕಾಯಿ, ಗಂಗೆ, ಗೌರಿಗಳನ್ನ ಕೊಡೋದು, ಗಂಗಾಧರೇಶ್ವರನಿಗೆ ವಾಹನ, ತೇರು, ತೆಪ್ಪೋತ್ಸವಗಳನ್ನು ನಡೆಸಲಾಗುತ್ತೆ. ಯುಗಾದಿ ಆದ ಮೇಲೆ ಬರುವ ಮಂಗಳವಾರದಂದು ಕಂಬ ಹಾಕೋದು.ಅದಾಗಿ ಹದಿನೈದು ದಿನಕ್ಕೆ ಹೊನ್ನಾದೇವಿಗೆ ಮಡೆ ಆರತಿ. ಬೆಟ್ಟದ ಮೇಲೆ ಗಂಗಾಧರೇಶ್ವರ, ವೀರಭದ್ರ ಸ್ವಾಮಿ ಗುಡಿಗಳ ಎದುರಿರೋ ಬಂಡೆಗಳ ಮೇಲೆ ಎರಡು ಕಂಬಗಳಿವೆ. ಬಾಂಡಲಿ ತರ ಇರೋ ಕಂಬದ ಮೇಲೆ ಪ್ರತೀ ಹುಣ್ಣಿಮೆಗೆ ದೀಪ ಹಚ್ಚುತ್ತಾರೆ. ಮತ್ತೊಂದು ಕಂಬಕ್ಕೆ ಉರಿಗಂಬ ಎಂದು ಹೆಸರು. ಸಂಕ್ರಾಂತಿ ಬರುವ ಜನವರಿಯ ಹದಿನಾರನೇ ತಾರೀಖು ಈ ಉರಿಗಂಬ/ಹುರಿಗಂಬ/ಹುಲಿಗಂಬ ದಲ್ಲಿ ಹಾಲು ಬರುತ್ತೆ ಅಂತ ನಂಬುತ್ತಾರೆ. ಆಗ ಗಂಗೆ, ಗೌರಿ, ಗಂಗಾಧರೇಶ್ವರನಿಗೆ ಧಾರೆ ಮುಹೂರ್ತವನ್ನು ನಿಶ್ವಯಿಸುತ್ತಾರೆ. ತೇರೇನು ಇರೋಲ್ಲ. ಅದರ ಮುಂಚಿನ ಹದಿನಾಲ್ಕರ ರಾತ್ರೆ ಹನ್ನೆರಡಕ್ಕೇ ಈ ಹುಲಿಗಂಬದಲ್ಲಿ ಒಸರೋ ತೀರ್ಥವನ್ನು ನೋಡೋಕೆ ಅಲ್ಲಿ ಜನ ಸೇರಿರುತ್ತಾರೆ. 


ಹೋಗೋದು ಹೇಗೆ ? 
ಬೆಂಗಳೂರಿನಿಂದ ತುಮಕೂರಿಗೆ ಹೋಗೋ ರಸ್ತೆಯಲ್ಲಿ ಸಾಗಿ, ಡಾಬಸ್ ಪೇಟೆಗಿಂತ ಮುಂಚೆ ಸಿಗೋ ಎಡಕ್ಕೆ ಸಾಗೋ ತಿರುವಿನಲ್ಲಿ ಆರೂವರೆ ಕಿ.ಮೀ ಸಾಗಿದರೆ ಶಿವಗಂಗೆ ಸಿಗುತ್ತೆ. ಡಾಬಸ್ ಪೇಟೆಯಿಂದ ರಾಮನಗರಕ್ಕೆ ಹೋಗೋ ಹೈವೆಗೆ ಬೆಂಗಳೂರು-ತುಮಕೂರು ಹೈವೇಯಿಂದ ಹೊರಬರುವ ನಾವು ಸೇರುವ ಜಾಗದಿಂದ ಒಂದು ಕಿ.ಮೀ ಒಳಗೆ ಹೋದರೆ ಶಿವಗಂಗೆ ಬೆಟ್ಟ ಸಿಗುತ್ತೆ. ಅಲ್ಲಿ ರಸ್ತೆಯನ್ನು ಅಡ್ಡ ಹಾಕುವ ಜನರಿಂದ ೨೦ ರೂ ಟಿಕೇಟ್ ಪಡೆದು ಒಳಹೋಗಬೇಕು. ದೇಗುಲದ ಎದುರು ಪಾರ್ಕಿಂಗಿಗೆ ಟಿಕೇಟ್ ಕೊಡೋಕೆ ಬರೋ ಜನರಿಗೆ ಮುಂಚೆ ತಗೊಂಡ ಟಿಕೇಟ್ ತೋರಿಸಿದ್ರೆ ನಡೆಯುತ್ತೆ. ಬೇರೆ ಟಿಕೇಟ್ ತಗೊಳ್ಳೋ ಅವಶ್ಯಕತೆಯಿಲ್ಲ. ದೇಗುಲದ ಎದುರಿಗೇ ಚಪ್ಪಲಿ ಬಿಟ್ಟು ಮೇಲೆ ಹತ್ತಬಹುದು. ಬೆಟ್ಟದ ತುದಿಯವರೆಗೂ ಹೋಗೋದಾದರೆ ಚಪ್ಪಲಿ/ಶೂ ಹಾಕಿಕೊಂಡೇ ಮೇಲೆ ಹತ್ತಬಹುದು. ಸ್ವಲ್ಪ ಮೇಲೆ ಹತ್ತಿದ ಮೇಲೆ ಬಲಕ್ಕೆ ಹೋದರೆ ಹೊನ್ನಮ್ಮ ದೇವಿ, ಗಂಗಾಧರೇಶ್ವರ ದೇಗುಲಕ್ಕೆ ಸಾಗುತ್ತೆ. ಎಡಕ್ಕೆ ಹೋದರೆ ಬೆಟ್ಟದ ಮೇಲೆ ಸಾಗುತ್ತೆ. ಬಲಕ್ಕೆ ಹೋದರೆ ಹೊನ್ನಮ್ಮ ದೇವಿಯ ದೇಗುಲದ ಬಳಿ ಚಪ್ಪಲಿ ಬಿಡೋಕೆ ಮತ್ತೆ ಅವಕಾಶವಿದೆ. ಸೀದಾ ಮೇಲೆ ಹೋದರೆ ಗಂಗಾಧರೇಶ್ವರ ದೇಗುಲದ ಉತ್ತರ ದ್ವಾರದ ಬಳಿಯಿಂದ ಬಂದು ಅಲ್ಲಿನ ಶಿಲ್ಪಕಲೆಯನ್ನು ನೋಡಬಹುದಾದರೂ ದೇಗುಲವನ್ನು ಪ್ರವೇಶಿಸಲು ಹೊನ್ನಮ್ಮ ದೇವಿಯ ಗುಡಿಯ ಪಕ್ಕದಲ್ಲಿರುವ ದಾರಕ್ಕೇ ಬರಬೇಕಾಗಿರುವುದರಿಂದ ದೇವಸ್ಥಾನಕ್ಕೆ ಹೋಗ್ತಾ ಚಪ್ಪಲಿ ಏನ್ಮಾಡೋದಪ್ಪ ಅನ್ನೋ ತಲೆಬಿಸಿಯಿಲ್ಲ. ಬೆಟ್ಟ ಏರುವಾಗ ಅಲ್ಲಿನ ಕಲ್ಲುಬಂಡೆಗಳ ಮೇಲೆ ಕಾಲು ಸುಡೋದರಿಂದ ಚಪ್ಪಲಿ/ಶೂ ಹಾಕ್ಕೊಂಡೇ ಹೋಗೋದು ಉತ್ತಮ ಅಂತ ನಮ್ಮ ಅನಿಸಿಕೆ


ಎಮ್ಮ ಬಸವ: 
ಊರ ಪ್ರವೇಶದ್ವಾರವ ದಾಟಿ, ಬೆಟ್ಟದ ಪ್ರವೇಶದ್ವಾರದ ಮೆಟ್ಟಿಲುಗಳನ್ನು ಹತ್ತುತ್ತಾ ಬಲಕ್ಕೆ ಸಿಕ್ಕ ದೇಗುಲಗಳತ್ತ ಹೊರಳದೇ ಎಡಕ್ಕೆ ತಿರುಗಿದ್ರೆ ದೊಡ್ಡ ನಂದಿಯೊಂದು ಎದುರಾಗುತ್ತೆ. ಅದಕ್ಕೆ ಎಮ್ಮ ಬಸವ/ಮಹಿಷ ಬಸವ ಅಂತ ಹೆಸರು. ಅದರ ಪಕ್ಕದಲ್ಲೇ ಶೌಚಾಲಯವೊಂದು, ಮೇಲಕ್ಕೆ ಹತ್ತೋ ಮೆಟ್ಟಿಲುಗಳು ಸಿಗುತ್ತೆ. ಇಡೀ ಬೆಟ್ಟದ ಆವರಣದಲ್ಲಿ ಸಿಗೋ ಶೌಚಾಲಯ ಇದೊಂದೇ. ಎಮ್ಮ ಬಸವನ ಬಳಿ ಫೋಟೋ ತೆಗೆಸಿಕೊಂಡು ಮುಂದೆ ಸಾಗಿದ್ವಿ.
Infront of Emma Basava

 ಕೆಂಪೇಗೌಡನ ಹಜಾರ:
ಇಲ್ಲಿನ ದೇಗುಲಗಳನ್ನು ಬೆಂಗಳೂರು ನಗರವನ್ನು ಕಟ್ಟಿದ ಕೆಂಪೇಗೌಡರ ಕಾಲದಲ್ಲಿ ಜೀರ್ಣೋದ್ದಾರ ಮಾಡಲಾಯಿತು ಅಂತ ಮೇಲೆ ಹೇಳಿದ್ದೆನಲ್ಲ. ಆ ಕಾಲದಲ್ಲಿ ಕಟ್ಟಿದ ಮಂಟಪವೊಂದು ಸಿಗುತ್ತೆ ಮೇಲೆ ಹತ್ತುವಾಗ. ಕೆಂಪೇಗೌಡನ ಹಜಾರ ಎಂದು ಕರೆಯಲ್ಪಡುವ ಇಲ್ಲಿ ಕುಳಿತು ಇಲ್ಲಿನ ಶಿಲ್ಪಗಳನ್ನು , ಸುತ್ತಲ ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದು. ಪಕ್ಕದಲ್ಲೇ ಧ್ವಜಸ್ಥಂಭ, ಇನ್ನೆರಡು ನಂದಿ ಮಂಟಪಗಳೂ ಕಾಣುತ್ತೆ. ಅಲ್ಲಿ ಬಲಕ್ಕೆ ಕೋಟೆಯ ಕುರುಹುಗಳೂ, ಗಂಗಾಧರೇಶ್ವರ ದೇಗುಲದ ಉತ್ತರ ದ್ವಾರಗಳೂ ಕಾಣುತ್ತೆ. ಅತ್ತ ಸಾಗದೇ ಸೀದಾ ಮೇಲಕ್ಕೆ ಹತ್ತಿದರೆ ಮತ್ತೊಂದು ನಂದಿ ದ್ವಾರದ ಮೂಲಕ ಬೆಟ್ಟ ಹತ್ತೋಕೆ ಶುರು ಮಾಡುತ್ತೀವಿ. ಇಲ್ಲೂ ಬಲಕ್ಕೆ ನಂದಿ ಮಂಟಪವೊಂದು ಕಾಣುತ್ತೆ.
At KempeGowdana Hajara

Remains of the Fort and one more Nandi mantapa at the Backdrop
Remains of the Fort

Ascending the hill











View of the Kalyani and One more Nandi Mantapa as seen from the top
 ಒಳಕಲ್ಲು ತೀರ್ಥ: 
ಸ್ವಲ್ಪ ಬೆಟ್ಟ ಹತ್ತೋ ಹೊತ್ತಿಗೆ ಒಳಕಲ್ಲು ತೀರ್ಥಕ್ಕೆ ದಾರಿ ಅಂತ ಬೋರ್ಡೊಂದು ಕಾಣುತ್ತೆ. ಅದರಲ್ಲಿ ಬಲಕ್ಕೆ ಇರೋ ಮುಖ್ಯ ದಾರಿಯಲ್ಲಿ ಎಲ್ಲರೂ ಸಾಗುತ್ತಾರೆ. ಅದರ ಬದಲು ಎಡಕ್ಕಿರೋ ದಾರಿಯಲ್ಲಿ ಸಾಗಿದರೆ ಮತ್ತೊಂದು ನಂದಿ ಮಂಟಪ ಸಿಗುತ್ತೆ. ಅಲ್ಲಿನ ಮಂಟಪ ಮತ್ತು ಮೂರ್ತಿಗಳನ್ನು ನೋಡಿಕೊಂಡು ಒಳಕಲ್ಲು ತೀರ್ಥಕ್ಕೆ ಸಾಗಬಹುದು.

One more Nandi Mantapa Near Olakallu Teertha
ಇಲ್ಲಿ ಹೆಸರೇ ಹೇಳುವಂತೆ ಒರಳ ರೀತಿಯಿರುವ ಕಲ್ಲೊಂದಿದೆ. ಅದರ ಒಳಗೆ ನೀರಿರುತ್ತೆ. ಅದರಲ್ಲಿ ಕೈ ಹಾಕಿದಾಗ ನೀರು ಸಿಕ್ಕಿದ್ರೆ ಪುಣ್ಯ ಮಾಡಿದ್ದೀವಿ ಅಂತ. ಇಲ್ಲಾಂದ್ರೆ ತಪ್ಪಾಗಿದೆಯಪ್ಪಾ ದೇವ್ರೆ, ಮುಂದಿನ ಸಲ ಬಂದಾಗಲಾದ್ರೂ ನೀರು ಸಿಗೋ ಹಾಗೆ ಮಾಡು ಅಂತ ಬೇಡ್ಕೋಬೇಕು ಅಂತ ಇಲ್ಲಿನವರ ನಂಬಿಕೆ.



ಹಿಂದಿನ ಸಲ ಗೆಳೆಯರೊಂದಿಗೆ ಬಂದಾಗ್ಲೂ ಸಿಕ್ಕಿತ್ತು ನನಗೆ. ಈ ಸಲ ಅಕ್ಷತಾಳೊಂದಿಗೆ ಬಂದಾಗ್ಲೂ ನೀರು ಸಿಕ್ಕಿತು ನಂಗೆ. ಹಿಂದಿನ ಸಲಕ್ಕಿಂತಲೂ ಮೇಲೇ ಇದೆಯೇನೋ ಈ ಬಾರಿ ಅನಿಸಿದ್ದು ಸುಳ್ಳಲ್ಲ ! ಆಳಕ್ಕೆ ಕೈ ಹಾಕಿದ್ರೆ ಸಿಗುತ್ತೆ ಅಂತ ಕೆಲವರೂ , ಪಾಪ ಪುಣ್ಯಗಳ ಆಧಾರದ ಮೇಲೆ ಕೆಲವರೂ ವಾದಿಸುತ್ತಾ ಇದ್ದಾಗ ನಮ್ಮ ಮುಂಚೆ ಹೋದವರಿಗೆ ನೀರು ಸಿಕ್ಕದ್ದು ಕಂಡು ಒಂದು ಬೊಗಸೆ ನೀರು ತೆಗೆದು ಮತ್ತೆ ಅದೇ ತೀರ್ಥಕ್ಕೆ ಹಾಕಿ , ಪಕ್ಕದ ವೀರಭದ್ರ ಸ್ವಾಮಿಗೆ ನಮಸ್ಕರಿಸಿ, ಅದರೆದುಗಿರೋ ಹಳೆಗನ್ನಡ ಶಾಸನಗಳ ಓದೋ ಪ್ರಯತ್ನದಲ್ಲಿ ಮುಂದೆ ಬಂದ್ವಿ. ಹಳೆಗನ್ನಡ ಶಾಸನಗಳ ಅಧ್ಯಯನ ಮಾಡೋ ಆಸಕ್ತಿಯಿರೋರು ಇಲ್ಲಿಗೊಮ್ಮೆ ಭೇಟಿ ಕೊಡಬಹುದು. ಇಲ್ಲಿ ಒಳಹೋಗೋಕೆ ೫ ರೂಗಳ ಟಿಕೇಟ್


ದ್ವಾದಶ ಜ್ಯೋತಿರ್ಲಿಂಗಗಳು: 
ಹನ್ನೆರಡು ಜ್ಯೋತಿರ್ಲಿಂಗಗಳನ್ನು ನೋಡೋಕೆ ಭಾರತದಾದ್ಯಂತ ತಿರುಗೋಕಾಗಲ್ಲ, ಅದರ ಬದಲು ಇಲ್ಲೇ ದರ್ಶನ ಮಾಡಬಹುದು ಎಂಬ ಉದ್ದೇಶದಿಂದ ಇಲ್ಲಿ ಹನ್ನೆರಡು ಜ್ಯೋತಿರ್ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆಯಂತೆ ! ನಂಬಿಕೆಗಳೇನೇ ಇದ್ರೂ ಸುಡೋ ಬಿಸಿಲಲ್ಲಿ ನೆರಳೀವ ಈ ಜಾಗ, ಇಲ್ಲಿರೋ ಶಿವ ಪಾರ್ವತಿ, ನಂದಿಗಳ ಹಿನ್ನೆಲೆಯಲ್ಲಿ ಕಾಣೋ ಶಿವಗಂಗಾ ಶಿಖರ, ಕೆಳಗೆ ಮನಸೆಳೆವ ಪ್ರಕೃತಿಗಳು ಖುಷಿಕೊಡುತ್ತೆ.
Near Dwadasha Jyotirlinga


ಬೆಟ್ಟದ ಹಾದಿ: 
ಈ ಲಿಂಗಗಳ ದಾಟಿ ಮುನ್ನಡೆದ ಮೇಲೆ ಮುಂದಿನ ಹಾದಿ ಕಷ್ಟವಾಗುತ್ತೆ. ಮೊದಲು ಸಿಗೋ ಮೆಟ್ಟಿಲುಗಳು, ನಂತರ ಸಿಗೋ ಗುಹೆ, ಗುಹೆಯಾದ ಮೇಲೆ ಸಿಗೋ ಬಂಡೆಗಳ ಮೇಲೆ ಮೇಲೆ ಹತ್ತಲು ಮಾಡಿರೋ ಗುರುತುಗಳಿಂದ ಹತ್ತೋದು ಒಂಥರಾ ಮಜವೆನಿಸುತ್ತೆ. ಸಾವನದುರ್ಗದ ರೀತಿಯ ಇಳಿಜಾರಿನ ಬಂಡೆಗಳು ಇರದಿದ್ದರೂ ಇಲ್ಲಿ ಸ್ವಲ್ಪ ಎಚ್ಚರವಹಿಸೋದು ಅಗತ್ಯ

Steep Steps starting towards the top of the hill
 ಬೆಟ್ಟದ ಮೇಲಿನ ನಂದಿ: 
ಬೆಟ್ಟದ ಮೇಲೆ ಸಾಗುತ್ತಿದ್ದಂತೆ ಹಾದಿ ಇನ್ನೂ ಕಠಿಣವಾಗುತ್ತಾ ಸಾಗುತ್ತೆ. ಬ್ಯಾಗಿಗೆ ಕೈ ಹಾಕೋಕೆ ಬರೋ ಮಂಗಗಳು, ಬೀಸೋ ಗಾಳಿ, ಕಡಿದಾದ ಮೆಟ್ಟಿಲು, ಮತ್ತೊಂದೆಡೆ ನೋಡಿದರೆ ಭಯ ಹುಟ್ಟಿಸೋ ಪ್ರಪಾತ ಕೆಲವು ಸ್ಥಳಗಳಲ್ಲಿ ಭಯ ಹುಟ್ಟಿಸಬಹುದೇನೋ. ಆದರೆ ಇಲ್ಲಿರೋ ಕಂಬಿಗಳನ್ನು ಹಿಡಿದುಕೊಂಡು ಅಗಲವಾದ ಮೆಟ್ಟಿಲುಗಳು ಇರುವ ಕಡೆ ಬಂದರೆ ಯಾವ ಅಪಾಯವೂ ಇಲ್ಲವಿಲ್ಲಿ. ಬೆಟ್ಟ ಹತ್ತಿ ಮುಗಿದ ಮೇಲೆ ಕಾಣೋ ಸಣ್ಣ ಬಂಡೆಯ ಮೇಲೆ ನಂದಿಯಿದ್ದಾನೆ. ಅಲ್ಲಿಗೆ ಸಾಗೋ ಹಾದಿಯಲ್ಲೂ ಸ್ವಲ್ಪ ಎಚ್ಚರವಹಿಸಬೇಕು.

Path to reach towards Nandi
ನಂದಿಯ ಸುತ್ತಲೂ ಪ್ರದಕ್ಷಿಣೆ ಹಾಕಲು ಕಬ್ಬಿಣದ ಕಂಬಿಗಳನ್ನು ಕಟ್ಟಿ ಕೆಳಗೆ ಬೀಳದಂತೆ ರಾಡುಗಳನ್ನು ಕಟ್ಟಿದ್ದರೂ ಅಲ್ಲಿ ಕೂತಿರೋ ಮಂಗಗಳಿಂದ ಸ್ವಲ್ಪ ಎಚ್ಚರವಹಿಸಬೇಕು . ಕೈಯಲ್ಲೊಂದು ಸಣ್ಣ ಕೋಲನ್ನು ಹಿಡಿದುಕೊಂಡೋ, ಕೈಯಲ್ಲಿದ್ದ ಬ್ಯಾಗನ್ನು ಕೆಳಗಿರುವವರ ಬಳಿ ಕೊಟ್ಟೋ ಮಾಡದಿದ್ದರೆ ಅಪಾಯ ತಪ್ಪಿದ್ದಲ್ಲ.
We at the top spot near the Nandi
View Seen from Nandi
 ಗಂಗಾಧರೇಶ್ವರ ಮತ್ತು ವೀರಭದ್ರ ಗುಡಿಗಳು: 
ನಂದಿಯನ್ನು ನೋಡಾದ ಮೇಲೆ ಪಕ್ಕದಲ್ಲಿರೋ ಹಾದಿಯಲ್ಲಿ ಸಾಗಿದರೆ ಮತ್ತೆರಡು ಗುಡಿಗಳು ಕಾಣುತ್ತೆ. ನಾವು ಹೋದಾಗ ಬಾಗಿಲು ಹಾಕಿತ್ತಾದರೂ ಹನ್ನೆರಡು ಘಂಟೆಯ ಹೊತ್ತಿಗೆ ಮತ್ತೆ ತೆಗೆದರು.
Gangadhareshwara temple. Veerabhadra temple is at its left 

ಅದರ ಹಿಂದೆಯೇ ಹೊಯ್ಸಳ ರಾಣಿ ಶಾಂತಲೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡ ಜಾಗವೂ ಇದೆ. ಆದರೆ ಈ ಬಗ್ಗೆ ಇಲ್ಲಿ ಯಾವುದೇ ಬೋರ್ಡಿರದೇ ಇರುವುದರಿದ ಸುಮಾರು ಜನ ಅದನ್ನು ನೋಡದೇ ಮುಂದೆ ಹೋಗುತ್ತಾರೆ. ಹಿಂದೆ ಹೊದರೆ ಈಗ ಹಾಕಿರೋ ಕಂಬಿಯ ಬಳಿಯೇ ಆಕೆ ಧುಮುಕಿದ್ದು ಎಂದು ಜನ ಹೇಳುತ್ತಾರೆ !  ಅದನ್ನು ದಾಟಿ ಬಲಕ್ಕಿರುವ ಮತ್ತೊಂದು ಬಂಡೆಗೆ ಬಂದರೆ ಅಲ್ಲಿ ಎಣ್ಣೆಗಂಬ ಮತ್ತು ಉರಿಗಂಬಗಳನ್ನು ಕಾಣಬಹುದು. ಆ ಕಂಬಗಳ ವೈಶಿಷ್ಟ್ಯವನ್ನು ಆಗಲೇ ಓದಿದ್ದೆವು.
Near Urigamba and Enne Kamba

ಪಾತಾಳಗಂಗೆ: 

ಮೇಲಿನ ಜಾಗಗಳನ್ನೆಲ್ಲಾ ನೋಡಿ ಕೆಳಗೆ ಬರೋ ಹೊತ್ತಿಗೆ ಮಧ್ಯಾಹ್ನವಾಗಿತ್ತು. ಮೇಲಿನವರೆಗೂ ಹೋದರೂ ಇಲ್ಲಿಗೆ ಹೋದಾಗ ನೋಡಲೇಬೇಕು ಎಂದುಕೊಂಡಿದ್ದ ಪಾತಾಳಗಂಗೆ ಸಿಕ್ಕಿರಲಿಲ್ಲ ! ಹಾಗಾಗಿ ಸಿಕ್ಕ ಅಂಗಡಿಗಳಲ್ಲೆಲ್ಲಾ ಪಾತಾಳಗಂಗೆ ಎಲ್ಲಿ ಅಂತ ಕೇಳಿಕೊಳ್ಳುತ್ತಲೇ ಕೆಳಗಿಳಿದೆವು . ಎಲ್ಲರೂ ಇನ್ನೂ ಕೆಳಗಿದೆ ಅನ್ನೋರೆ.  ಕೊನೆಗೆ ಹೊನ್ನಮ್ಮ ದೇವಿಯ ಗುಡಿಯ ಬಳಿ ಬಂದಾಗ ಅಲ್ಲೇ ಬಲಗಡೆ ಪಾತಾಳಗಂಗೆ ಅಂತ ಇದ್ದ ಬೋರ್ಡು ಕಂಡಿತು ! ಇಲ್ಲಿ ಬಂಡೆಗಳ ನಡುವೆ ಇರೋ ನೀರಿಗೇ ಪಾತಾಳಗಂಗೆ ಅಂತ ಕರೆದು ಪೂಜಿಸಲಾಗುತ್ತದೆ. ಇದಕ್ಕೆ ಹತ್ತು ರೂಗಳ ಟಿಕೇಟ್.
Near Patalagange 
ಮುಂಚೆಯೆಲ್ಲಾ ನೀರಿಗೆ ಹೂಗಳನ್ನು ತೇಲಿಬಿಟ್ಟು ನೀರನ್ನು ಹಾಳು ಮಾಡುತ್ತಿದ್ದರಿಂದ ಈಗ ನೀರಿಗೆ ಏನನ್ನೂ ಹಾಕುವಂತಿಲ್ಲ. ಇಲ್ಲಿನ ಬಂಡೆಗಳ ನಡುವಿನ ನೀರಲ್ಲದೇ ಬಂಡೆಯ ಮೇಲೆ ಕೆತ್ತಿರುವ ದೊಡ್ಡ ಗಾತ್ರದ ವೀರಭದ್ರನನ್ನು ನೋಡೋದೇ ಒಂದು ಚೆಂದ. ಇಲ್ಲಿಂದ ಕೋಟೆಯ ಪಳೆಯುಳಿಕೆಗಳು, ಪಾಳುಬಿದ್ದ ಪುಷ್ಕರಿಣಿ, ದೇಗುಲಗಳ ಕುರುಹುಗಳನ್ನೂ ಕಾಣಬಹುದು. ಇಲ್ಲಿ ಮಗು ತೇಲಿಬಿಟ್ಟು ಕಳ್ಕೊಂಡೋರೊಬ್ರಿಗೆ ಇಲ್ಲಿಂದ ಹದಿನೇಳು ಕಿ.ಮೀ ದೂರವಿರೋ ಕುದೂರು ಎಂಬಲ್ಲಿ ಸಿಕ್ಕಿತ್ತಂತೆ. ಹಾಗಾಗಿ ಈ ಪಾತಾಳಗಂಗೆ ಅಲ್ಲಿಗೆ ಹೋಗಿ ಸೇರುತ್ತಾಳೆ ಎಂದು ಹೇಳುತ್ತಾರೆ. ಅಲ್ಲೂ ಒಂದು ಪುರಾತನ ಗುಡಿಯಿದೆ ಎಂದು ತಿಳಿದು ಬಂತು.
Patala Gange
ಕೆಳಗಿನ ಗುಡಿಗಳು:
ಗಂಗಾಧರೇಶ್ವರ, ಸ್ವರ್ಣಾಂಭ ದೇವಸ್ಥಾನಗಳು  ಹೇಗಿದ್ರೂ ಬಾಗಿಲು ಹಾಕಿದ್ವು . ತೆಗೆಯೋದು ಐದು ಘಂಟೆಗೆ ಅಂತ ತಿಳಿದ ನಾವು ಇದನ್ನಾದರೂ ನೋಡಿಕೊಂಡು ಹೋಗೊಣ ಅಂತ ಪಾತಾಳಗಂಗೆಗೆ ಬಂದಿದ್ವಿ. ಆದರೆ ಪಾತಾಳಗಂಗೆಯನ್ನು ನೋಡಿ ಹೊರಬರೋ ಹೊತ್ತಿಗೇ ಘಂಟೆ ಮೂರೂಮುಕ್ಕಾಲಾಗುತ್ತಾ ಬಂದಿತ್ತು.  ಇಲ್ಲಿಯವರೆಗೆ ಬಂದದ್ದು ಬಂದಾಗಿದೆ , ಇಲ್ಲೇ ಊಟ ಮಾಡ್ಕೊಂಡು ಇವೆರಡನ್ನೂ ನೊಡ್ಕೊಂಡೇ ಹೋಗೋಣ ಅಂದ್ಕೊಂಡ್ವಿ. ಕೆಳಗಡೆ ಅನ್ನಸಂತರ್ಪಣೆ ನಡೀತಾ ಇರ್ಬೋದು ಇನ್ನೂ ಅಂದ್ರು ಅಲ್ಲೇ ಯಾರೋ. ಅಲ್ಲಿಗೆ ಹೋಗುವ ಹೊತ್ತಿಗೆ ಅದು ಮುಗಿದ್ರೂ ಇನ್ನೂ ಕೆಳಗಿಳಿದು ಕೆಳಗಿದ್ದ ಹೋಟೆಲ್ ಸ್ವರ್ಣಾಂಭದಲ್ಲಿ ಅನ್ನ ಸಾಂಬಾರ್, ಮತ್ತು ಸೂಪರ್ರಾಗಿದ್ದ ಫ್ರೈಡ್ ರೈಸ್ ತಿಂದು ಮತ್ತೆ ಮೇಲೆ ಬರುವ ಹೊತ್ತಿಗೆ(ನಾಲ್ಕೂವರೆಗೇ) ಗಂಗಾಧರೇಶ್ವರ ದೇಗುಲ ತೆಗೆದಿತ್ತು. ಅದರೊಳಗಿರುವ ಮೂರ್ತಿಗಳು, ನಂದಿ ಮಂಟಪ, ಹೊಯ್ಸಳ ಶಿಲ್ಪಗಳು ಮುಂತಾದವನ್ನು ನೋಡಿಕೊಂಡು ಹೊರಬರುವ ಹೊತ್ತಿಗೆ ಸ್ವರ್ಣಾಂಭಾ ದೇಗುಲವೂ ತೆಗೆದಿತ್ತು. ಬೆಟ್ಟದ ಬಂಡೆಗಳ ಕೆಳಗಿನ ಗುಡಿಯದು. ಅಲ್ಲೂ ನಮಸ್ಕರಿಸಿ ಹೊರಬಂದ ನಾವು ಸೀದಾ ಮನೆಯ ಹಾದಿ ಹಿಡಿದೆವು.
Sculptures at Gangadhareshwara temple

Architecture of Gangadhareshwara temple at the base of the hill


3 comments:

  1. ಶಾಂತಲೆ ಬೆಟ್ಟದಿಂದ ಹಾರಿ


    ಆತ್ಮಹತ್ಯೆ ಮಾಡಿಕೊಂಡಳು ಎನ್ನುವುದು.. ಶುದ್ಧ ಶುಳ್ಳು ಪ್ರಚಾರ.. ದಯವಿಟ್ಟು ಸುಳ್ಳು ಪ್ರಚಾಇ ಮಾಡದಿರಿ...ಆಕೆ ಸಲ್ಲೇಖನ ವಿಧಿ ಪೂರ್ವಕ ಸಮಾಧಿ ಮರಣ ಹೊಂದಿದ್ದಾಳೆ

    ReplyDelete
    Replies
    1. ನಾನು ಆ ಸ್ಥಳದಲ್ಲಿ ಕೇಳಿದ ಮಾಹಿತಿಯನ್ನು ಅಲ್ಲಿ ಹೀಗೆ ಹೇಳುತ್ತಿದ್ದಾರೆ ಅನ್ನೋ ದಾಟಿಯಲ್ಲೇ ಬರೆದಿದ್ದೇನೆ. ಆಕೆ ಸಲ್ಲೇಖನೆ ವಿಧಿಪೂರ್ವಕ ಸಮಾಧಿ ಹೊಂದಿದ್ದಾಳೆ ಅನ್ನೋದಾದರೆ ಆ ಬಗೆಗಿನ ಮಾಹಿತಿಹ ಕೊಂಡಿಯನ್ನು ಇಲ್ಲಿ ಕೊಡಿ. ನನ್ನ ಲೇಖನವನ್ನು ಸರಿಪಡಿಸಿಕೊಳ್ಳುತ್ತೀನಿ.

      Delete