ಸೆಪ್ಟೆಂಬರ್ ೩೦,೨೦೧೪
ಅಂತರ್ಜಾಲದ ದೈತ್ಯ ಗೂಗಲ್ಲಿನ ಉತ್ಪನ್ನವಾಗಿದ್ದ ಆರ್ಕುಟ್ಟಿನ ಬಳಕೆದಾರರ ಪಾಲಿಗೆ ಕರಾಳ ದಿನ. ಸಮಾನ ಆಸಕ್ತರನ್ನು ಒಂದೆಡೆ ಸೆಳೆಯುವ ಆರ್ಕುಟ್ ಗ್ರೂಪುಗಳ ಮೂಲಕ ಸಹಸ್ರಾರು ಜನರನ್ನು ಒಂದೆಡೆ ಸೆಳೆದಿದ್ದ ಆರ್ಕೂಟ್ ಬಾಗಿಲು ಹಾಕಿದಾಗ ಮುಂದೇನಪ್ಪ ಅಂತ ಸುಮಾರು ಜನ ಬೇಸರಗೊಂಡಿದ್ದರು. ಆಗ ಅದು ಬಾಗಿಲು ಹಾಕೋಕೆ ಮುಖ್ಯ ಕಾರಣ ಅದರ ಪ್ರತಿಸ್ಪರ್ಧಿ ಫೇಸ್ಬುಕ್ಕು. ೨೦೦೪ರಲ್ಲೇ ಶುರುವಾದ ಫೇಸ್ಬುಕ್ಕು ಮತ್ತು ಅದರ ಪ್ರತಿಸ್ಪರ್ಧಿ ಗೂಗಲ್ಲಿನ ಜಟಾಪಟಿಗೆ ಈಗ ಹದಿನೈದರ ಹರೆಯ !
ಫೇಸ್ಬುಕ್ ವರ್ಸಸ್ ಗೂಗಲ್:
೨೦೦೪ರಲ್ಲಿ ಶುರುವಾಗಿದ್ದ ಆರ್ಕುಟ್ ಸೇವೆ ೨೦೦೬ ರ ಹೊತ್ತಿಗೆ ವಿಶ್ವದಲ್ಲಿ ಹೆಚ್ಚು ಬಳಸಲ್ಪಡುವ ಸಾಮಾಜಿಕ ಜಾಲತಾಣವಾಯಿತು. ಅದರ ೭೦% ಪ್ರತಿಶತ ಬಳಕೆದಾರರು ಬ್ರೆಜಿಲಿಯನ್ನರು ಎಂದು ಆಗ ಅಂದಾಜಿಸಲಾಗಿತ್ತು. ೨೦೦೯ರ ಹೊತ್ತಿಗೆ ಭಾರತದಲ್ಲೂ ಅದರ ಹೆಚ್ಚುತ್ತಿರುವ ಪ್ರಖ್ಯಾತಿಯನ್ನರಿತ ಫೇಸ್ಬುಕ್ಕಿನ ಸಿ.ಇ.ಒ ಮಾರ್ಕ್ ಜುಕರ್ ಬರ್ಗ್ ಭಾರತಕ್ಕೆ ಭೇಟಿಯಿತ್ತು ಇಲ್ಲಿನ ತಂತ್ರಜ್ಞರೊಂದಿಗೆ ಚರ್ಚಿಸಿ ಫೇಸ್ಬುಕ್ಕನ್ನು ಕನ್ನಡ, ಹಿಂದಿ, ತಮಿಳು ಮುಂತಾದ ಭಾರತೀಯ ಭಾಷೆಗಳಲ್ಲಿ ದೊರೆಯುವಂತೆ ಮಾಡಿ ಆರ್ಕುಟ್ಟಿಗೆ ಸಡ್ಡು ಹೊಡೆಯತೊಡಗಿದರು. ೨೦೦೬ರಲ್ಲಿ ಮೊದಲನೆಯ ಸ್ಥಾನದಲ್ಲಿದ್ದ ಮೈ ಸ್ಪೇಸನ್ನು ಹೇಳ ಹೆಸರಿಲ್ಲದಂತೆ ಮಾಡಿದ ಫೇಸ್ಬುಕ್ ಮತ್ತು ಆರ್ಕುಟ್ಟಿನ ಸಮರದಲ್ಲಿ ಮೊದಲನೇ ಸ್ಥಾನವನ್ನು ಆರ್ಕುಟ್ಟೇ ಹಲವು ವರ್ಷಗಳ ಕಾಲ ಕಾಯ್ದುಕೊಂಡಿತ್ತು. ಈ ಯಶಸ್ಸಿನಿಂದ ಪ್ರೇರೇಪಿತರಾದ ಗೂಗಲ್ಲಿನವರು ಗೂಗಲ್ ಪ್ಲಸ್ ಎಂಬ ಹೊಸ ಸಾಮಾಜಿಕ ತಾಣವನ್ನು ತಂದರು. ಇದರಿಂದ ಆರ್ಕುಟ್ಟಿನಿಂದ ತಲುಪಲಾಗದ ಜನರನ್ನು ತಲುಪೋದು ಮತ್ತು ಫೇಸ್ಬುಕ್ಕಿನ ಪ್ರಾಬಲ್ಯವನ್ನು ಕಡಿಮೆ ಮಾಡೋದು ಗೂಗಲ್ಲಿನ ಉದ್ದೇಶವಾಗಿರಬಹುದು. ಆದರೆ ನಿಧಾನವಾಗಿ ಹೆಚ್ಚುತ್ತಿದ್ದ ಫೇಸ್ಬುಕ್ಕಿನ ಪ್ರಖ್ಯಾತಿಯ ಮುಂದೆ ಇದು ನಿಲ್ಲಲಿಲ್ಲ ಮತ್ತು ೨೦೧೪ರಲ್ಲಿ ಗೂಗಲ್ಲು ಆರ್ಕುಟನ್ನು ಬಂದ್ ಮಾಡಬೇಕಾಯಿತು ! ಆಗ ಜನರಿಗಿದ್ದ ಆಶಾಕಿರಣವೆಂದರೆ ಗೂಗಲ್ ಪ್ಲಸ್. ಅದಾಗಿ ನಾಲ್ಕೇ ವರ್ಷಗಳಲ್ಲಿ ಗೂಗಲ್ ತನ್ನ ಮತ್ತೊಂದು ತಾಣವಾದ ಗೂಗಲ್ ಪ್ಲಸ್ ಅನ್ನೂ ಬಂದ್ ಮಾಡಬೇಕಾಗಿದೆ. ಕಮ್ಮಿಯಾಗುತ್ತಿರುವ ಬಳಕೆ ಮತ್ತು ಗ್ರಾಹಕರ ಮೆಚ್ಚಿನ ಉತ್ಪನ್ನವನ್ನು ನಿರ್ವಹಿಸೋಕೆ ಆಗುತ್ತಿರೋ ಕಷ್ಟದಿಂದ ಇಂತಹ ನಿರ್ಧಾರವನ್ನು ಕೈಗೊಳ್ಳಬೇಕಾಗ್ತಿದೆ ಅಂತ ಡಿಸೆಂಬರ್ ೨೦೧೮ರಲ್ಲಿ ಗೂಗಲ್ ಪ್ರಕಟಿಸಿದ್ದರೂ ಇದರ ಮುಖ್ಯ ಕಾರಣ ಕಮ್ಮಿಯಾಗುತ್ತಿರೋ ಬಳಕೆ ಅಂತಲೇ ಕಾಣುತ್ತಿದೆ.
ಎಂದು ಬಾಗಿಲು ಗೂಗಲ್ ಪ್ಲಸ್ಸಿನ ಮನೆಗೆ? :
ಫೆಬ್ರವರಿ ೩, ೨೦೧೯ರಂದು ಎಲ್ಲಾ ಗೂಗಲ್ ಪ್ಲಸ್ ಬಳಕೆದಾರರಿಗೆ ಗೂಗಲ್ ಕಳಿಸಿರುವ ಮಿಂಚೆಯ ಪ್ರಕಾರ ಏಪ್ರಿಲ್ ೨,೨೦೧೯ಕ್ಕೆ ಗೂಗಲ್ ಪ್ಲಸ್ ಬಾಗಿಲು ಹಾಕಲಿದೆ. ಅಂದರೆ ಇನ್ನು ಎರಡು ತಿಂಗಳೂ ಇಲ್ಲ !
ಫೆಬ್ರವರಿ ಮೂರಕ್ಕೇ ಯಾಕೆ ಮಿಂಚೆ? :
ಯಾವುದಾದ್ರೂ ಸೇವೆಯನ್ನ ಸ್ಥಗಿತಗೊಳಿಸೋಕೆ ಮುಂಚೆ ಮಾಹಿತಿ ತಿಳಿಸೋದು ಸಾಮಾನ್ಯವಾದ್ರೂ ಇಷ್ಟು ಮುಂಚೆ ಯಾಕೆ ಅಂತ ಕೆಲವರಿಗಾದ್ರೂ ಅನಿಸಿರಬಹುದು. ಆರ್ಕುಟ್ಟಿನಲ್ಲೆಂತೂ ಇಷ್ಟು ಮುಂಚೆ ತಿಳಿಸಿರಲಿಲ್ಲ. ಗೂಗಲ್ಲಿನ ಮಿಂಚೆಯನ್ನು ಓದಿದವರಿಗೆ ಅದರಲ್ಲಿನ ಒಂದು ಸಾಲು ಮಿಸ್ಸಾಗಿರಬಹುದು. ಅದೆಂದರೆ ಫೆಬ್ರವರಿ ನಾಲ್ಕರ ನಂತರ ಗೂಗಲ್ ಪ್ಲಸ್ಸಿನಲ್ಲಿ ಯಾವುದೇ ಹೊಸ ಪೇಜನ್ನೋ, ಪ್ರೊಫೈಲನ್ನೋ, ಸಮುದಾಯಗಳನ್ನೋ, ಘಟನೆಗಳನ್ನೋ ತೆರೆಯಲಾಗೋದಿಲ್ಲ ಅನ್ನೋದು ! ಲಕ್ಷಾಂತರ ಜನರು ಬಳಸಲ್ಪಡುವ ಯಾವುದೋ ಒಂದು ಸೇವೆಯನ್ನು ಏಕದಂ ಬಂದ್ ಮಾಡಲಾಗೋದಿಲ್ಲ. ಅದರಲ್ಲಿರೋ ಜನರು ತಮಗೆ ಸಂಬಂಧಿಸಿದ ಮಾಧ್ಯಮಗಳನ್ನು ಬೇರೆಡೆ ಸ್ಥಳಾಂತರಿಸೋಕೆ ಒಂದಿಷ್ಟು ಸಮಯ ಕೊಡಬೇಕಾಗುತ್ತೆ. ಆದರೆ ಅವರಿಗೆ ಹೊಸ ಮಾಧ್ಯಮಗಳನ್ನು ಇಲ್ಲಿ ಹಾಕೋಕೆ ಅವಕಾಶ ಕೊಟ್ರೆ ಅವರು ಅದನ್ನು ಇಲ್ಲಿ ಕೊನೆಯ ಕ್ಷಣದವರೆಗೂ ಹಾಕ್ತಾನೇ ಇರ್ತಾರೇ ಹೊರತು ಇರೋದನ್ನ ಬೇರೆಡೆ ಸ್ಥಳಾಂತರಿಸೋಲ್ಲ. ಹಾಗಾಗಿ ಸದ್ಯದಲ್ಲೇ ಇಲ್ಲಿಂದ ಜಾಗ ಖಾಲಿ ಮಾಡಿ ಅನ್ನೋ ಪರೋಕ್ಷ ಸೂಚನೆ ಇದು !
ಗೂಗಲ್ ಪ್ಲಸ್ ಬಾಗಿಲು ಹಾಕಿದ್ರೆ ಏನಾಗುತ್ತೆ?
೧. ಫೋಟೋಗಳು:
ನಿಮ್ಮ ಮೊಬೈಲಲ್ಲಿ ಜಿಮೇಲ್ ಐಡಿಯನ್ನ್ ಹಾಕಿದ್ರೆ ನಿಮ್ಮ ಫೋಟೋಗಳು ತಾವಾಗೇ ಗೂಗಲ್ ಡ್ರೈವಿನಲ್ಲಿ ಬ್ಯಾಕಪ್ ಆಗ್ತಿರೋದನ್ನು ನೀವು ಗಮನಿಸಿರಬಹುದು ! ಅದನ್ನು ಬದಲಾಯಿಸಬಹುದಾದರೂ ಸುಮಾರು ಜನ ಮೊಬೈಲ್ ತಗೊಂಡವ್ರು ಅದರಲ್ಲಿ ಬರೋ ಎಲ್ಲಾ ಮಾಹಿತಿಗೂ ಸರಿ ಸರಿ ಅಂತ ತಲೆಯಾಡಿಸೋದ್ರಿಂದ ಇದರ ಬಗ್ಗೆ ತಲೆ ಕೆಡಿಸಿಕೊಂಡಿರೋಲ್ಲ ! ಗೂಗಲ್ ಪ್ಲಸ್ ಬಾಗಿಲ್ ಹಾಕಿದ್ರೆ ಗೂಗಲ್ಲಿನ ಆ ಫೋಟೋಗಳೂ ಡಿಲಿಟ್ ಆಗುತ್ತಾ ಅಂತ ಕೆಲವರು ಅಂದುಕೊಂಡಿರಬಹುದು. ಆದರೆ ಹಾಗೇನೂ ಆಗೋಲ್ಲ. ಅವೆಲ್ಲಾ ಇರೋದು ಗೂಗಲ್ಲಿನ ಬೇರೊಂದು ಉತ್ಪನ್ನವಾದ ಗೂಗಲ್ ಫೋಟೋಸ್ ನಲ್ಲಿ. ಗೂಗಲ್ ಪ್ಲಸ್ಸಿನಲ್ಲಿ ನಿಮ್ಮದೊಂದು ಖಾತೆ ತೆಗೆದು ಅದರಲ್ಲೇ ನೇರವಾಗಿ ಅಪ್ಲೋಡ್ ಮಾಡಿರೋ ಫೋಟೋಗಳು ಆ ಅಕೌಂಟಿನಲ್ಲಿರುವ ಬೇರೆ ಮಾಹಿತಿಗಳಂತೆ ಏಪ್ರಿಲ್ ೨ರಂದು ಅಳಿಸಲ್ಪಡುತ್ತೆ.
೨. ಗ್ರೂಪುಗಳು:
ಇಲ್ಲಿರೋ ಗ್ರೂಪುಗಳೂ ಏಪ್ರಿಲ್ ೨ರಂದು ಅಳಿಸಲ್ಪಡುತ್ತೆ. ಆದರೆ ಇದರಲ್ಲಿರೋ ಗ್ರೂಪಿನಲ್ಲಿ ಸುಮಾರು ಮುಖ್ಯ ಇಮೇಲ್ ಐಡಿಗಳೆಲ್ಲಾ ಇದ್ವು. ಅದನ್ನೆಲ್ಲಾ ಏನು ಮಾಡೋದಪ್ಪ ಅಂತ ತಲೆಕೊಡಿಸಿಕೊಂಡಿದ್ದೀರಾ ? ಗೂಗಲ್ಲಿನವರ ಪ್ರಕಾರ ಅದಕ್ಕೆ ತಲೆಕೆಡಿಸಿಕೊಳ್ಳೋ ಆಗತ್ಯವಿಲ್ಲಾ. ಎಲ್ಲಾ ಗ್ರೂಪಿನ ಅಡ್ಮಿನ್ನು ಮತ್ತು ಮಾಡರೇಟರುಗಳಿಗೆ ಗುಂಪಿನ ಮಾಹಿತಿಯನ್ನು ಎಕ್ಸಪೋರ್ಟ್ ಮಾಡುವ ಸೌಲಭ್ಯ ಮಾರ್ಚಿನ ಮೊದಲ ವಾರದಿಂದ ಲಭಿಸಲಿದೆ. ಅದು ಎಂದಿನಿಂದ ಎಂದು ಹೇಳದಿದ್ದರೂ ಅದೂ ಮಾರ್ಚ್ ೨ಕ್ಕೇ ಶುರುವಾಗಬಹುದು ಎಂಬುದು ಹಲವರ ಅಂದಾಜು !
೩. ಬ್ಲಾಗರ್:
ಕನ್ನಡದ ಮಟ್ಟಿಗೆ ಅತೀ ಹೆಚ್ಚು ಅಂತರ್ಜಾಲದ ಬ್ಲಾಗರ್ರುಗಳಿರೋದು ಗೂಗಲ್ಲಿನ ಬ್ಲಾಗರ್ ಮತ್ತು ಪ್ರತಿಸ್ಪರ್ಧಿಯಾದ ವರ್ಲ್ ಪ್ರೆಸ್ಸಿನಲ್ಲಿ. ನೀವು ಈ ಬ್ಲಾಗುಗಳನ್ನ ಓದುತ್ತಿದ್ರೆ , ಮತ್ತು ಅಂತರ್ಜಾಲದ ಹಲವು ತಾಣಗಳನ್ನು ಓದುತ್ತಿದ್ರೆ ಅವುಗಳ ಪ್ರತೀ ಪೋಸ್ಟಿನ ಕೆಳಗೆ ಕಮೆಂಟ್/ಪ್ರತಿಕ್ರಿಯೆ ಎಂಬ ಆಯ್ಜೆಯಿರೋದನ್ನ ನೋಡಿರುತ್ತೀರಿ. ಅಲ್ಲಿ ಕಾಮೆಂಟ್ ಮಾಡಿದವರು ಯಾರು ಎಂಬುದನ್ನು ತಿಳಿಸೋಕೆ ಹಲವು ಆಯ್ಕೆಗಳಿರುತ್ತೆ. ಅಂದರೆ ಅಲ್ಲಿ ನಿಮ್ಮ ಫೇಸ್ಬುಕ್ ಐಡಿಯ ಮೂಲಕ ಕಾಮೆಂಟ್ ಮಾಡಬಹುದು. ಅಥವಾ ಗೂಗಲ್ ಪ್ಲಸ್ಸಿನ ಮೂಲಕ ಮಾಡಬಹುದು. ಇದೇ ತರಹ ಹಲವು ಆಯ್ಕೆಗಳಿರುತ್ತೆ. ಬ್ಲಾಗರ್ರುಗಳಿಗೆ ಈ ಗೂಗಲ್ ಪ್ಲಸ್ಸಿನ ಆಯ್ಕೆ ಫೆಬ್ರವರಿ ನಾಲ್ಕರಿಂದ ಮತ್ತು ಬೇರೆ ತಾಣಗಳಿಗೆ ಮಾರ್ಚ್ ಏಳರಿಂದ ಕಾಣೆಯಾಗುತ್ತೆ ! ನಿಮ್ಮದೇ ಆದ ಬ್ಲಾಗಿದ್ದರೆ ಆ ಬ್ಲಾಗಿನಲ್ಲಿ ಈ ಹಿಂದೆ ಗೂಗಲ್ ಪ್ಲಸ್ಸಿನ ಮೂಲಕ ಮಾಡಿದ ಕಾಮೆಂಟುಗಳೂ ಗೂಗಲ್ ಪ್ಲಸ್ಸಿನ ಬಾಗಿಲು ಹಾಕೋ ದಿನ ಅಂದರೆ ಏಪ್ರಿಲ್ ಎರಡರಂದು ಅಳಿಸಲ್ಪಡುತ್ತೆ ಅನ್ನುತ್ತೆ ಗೂಗಲ್ಲು ! ಹಾಗಾಗಿ ನೀವೊಬ್ಬ ಬ್ಲಾಗಿಗರಾಗಿದ್ದು ಅದಕ್ಕೆ ಬಂದಿದ್ದ ಹೆಚ್ಚಿನ ಕಮೆಂಟುಗಳು ಗೂಗಲ್ ಪ್ಲಸ್ಸಿನಿಂದಲೇ ಆಗಿದ್ದರೆ ಇದು ನಿಮ್ಮ ಪಾಲಿಗೆ ದೊಡ್ಡ ಹೊಡೆತವೇ ಸರಿ !
೪. ಉಳಿದೆಡೆ:
ಹಾಗಂತ ಎಲ್ಲೆಲ್ಲಿ ಗೂಗಲ್ ಪ್ಲಸ್ ಬಳಸಲ್ಪಡುತ್ತಿತ್ತೋ ಅಲ್ಲೆಲ್ಲಾ ಬಾಗಿಲು ಹಾಕಲಾಗಿದೆ ಅಂತಲ್ಲ. ನೀವು ಗೂಗಲ್ಲಿನ ಮತ್ತೊಂದು ಉತ್ಪನ್ನವಾದ ಜಿ-ಸೂಟನ್ನು ಬಳಸುತ್ತಿದ್ರೆ ಅದರಲ್ಲಿ ಮುಂದೆಯೂ ಗೂಗಲ್ ಪ್ಲಸ್ಸನ್ನು ಬಳಸಬಹುದೆಂದೂ , ಗೂಗಲ್ ಪ್ಲಸ್ಸಿನ್ ಡೆವಲಪರಾಗಿದ್ರೆ ಅಲ್ಲೂ ಸ್ವಲ್ಪ ಬದಲಾವಣೆಗಳು ಬೇಕಾದ ಹೊರತು ಬೇರೆ ಚಿಂತೆಯಿಲ್ಲವೆಂದು ಗೂಗಲ್ ತಿಳಿಸಿರೋದ್ರಿಂದ ಜನಸಾಮಾನ್ಯರ ಪಾಲಿಗೆ ಗೂಗಲ್ ಪ್ಲಸ್ ಮರೆಯಾದ್ರೂ ತೆರೆಮರೆಯಲ್ಲಿ ಅದು ಕಾರ್ಯ ನಿರ್ವಹಿಸುತ್ತಲೇ ಇರುತ್ತದೆ ಎಂದು ತಿಳಿದುಬರುತ್ತೆ.
ಮುಂದೇನು ?
ಆರ್ಕುಟ್ ಹೋಯ್ತು ಗೂಗಲ್ ಪ್ಲಸ್ ಬಂತು ಡುಂ ಡುಂ ಡುಂ. .. ಎಂದು ಹೇಳುತ್ತಿದ್ದ ಜನರಿಗೆ ಗೂಗಲ್ ಪ್ಲಸ್ ಹೋಯ್ತು.. ಮತ್ತೊಂದು ಬಂತು ಎನ್ನೋಕೆ ಆ ಮತ್ತೊಂದು ಯಾವುದು ಎಂದು ಹೇಳೋಕೆ ಗೂಗಲ್ ಯಾವ ಆಯ್ಕೆಯನ್ನೂ ನೀಡಿಲ್ಲ ಸದ್ಯದ ಮಟ್ಟಿಗೆಂತೂ. ಹಾಗಾಗಿ ಇಷ್ಟವಿದ್ದರೂ , ಇಲ್ಲದಿದ್ದರೂ ಫೇಸ್ಬುಕ್ಕಿನ ಪ್ರಾಬಲ್ಯ ಇನ್ನೂ ಹೆಚ್ಚಾಗೋ ಸಾಧ್ಯತೆಯಿದೆ. ವಿಶ್ವದ ಹಲವು ದೇಶಗಳಲ್ಲಿ ಬೇರೆ ಬೇರೆ ಜಾಲತಾಣಗಳಿದ್ದರೂ ಅವ್ಯಾವದೂ ಭಾರತದಲ್ಲಿ ಫೇಸ್ಬುಕ್ ಹೊಕ್ಕಿರುವಷ್ಟು ಹೊಕ್ಕಿಲ್ಲ. ಹಾಗಾಗಿ ಗೂಗಲ್ ಪ್ಲಸ್ಸಿನ ನಿರ್ಗಮನದಿಂದ ಖಾಲಿಯಾಗೋ ಜಾಗವನ್ನು ತುಂಬೋರು ಯಾರು ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು.