Wednesday, March 6, 2019

ಹಾಲುಮುದ್ದೆ ಪುರಾಣ


Haalu mudde ಹಾಲುಮುದ್ದೆ 
ಭಾನುವಾರದ ಬೆಳಗೆದ್ದು ಹಾಲುಮುದ್ದೆ ಮಾಡಲಾ ಅಂತ ಮಡದಿ ಕೇಳ್ತಿದ್ರೆ ನಂಗೆ ಏನು ಹೇಳ್ತಿದ್ದಾಳಪ್ಪಾ ಇವ್ಳು ಅಂತ ! ರಾಗಿಮುದ್ದೆನಾ ಅಂತ ಒಮ್ಮೆ ಅನಿಸಿ ಆಂ ಅಂದ್ರೆ , ಹಾಲುಮುದ್ದೆ ಅಂದ್ಲು ಮತ್ತೆ.  ಆಫೀಸಲ್ಲಿ ಚಮಚ ತಗೊಂಡು ರಾಗಿಮುದ್ದೆ ತಿನ್ನೋ ಜನರೆಲ್ಲಾ ನೆನಪಾಗಿ, ಮುದ್ದೆಯ ವಿಚಾರವನ್ನೇ ರಾಜಕೀಯವಾಗಿಸೋ ಜನರೆಲ್ಲಾ ಕಣ್ಮುಂದೆ ಬಂದು ಮತ್ತೊಮ್ಮೆ ಆಂ ಅನ್ನೋ ಮೊದಲೇ ಹಾಲುಮುದ್ದೆ ಅನ್ನೋದು ಒಂದು ತಿಂಡಿ , ಸಿಹಿತಿಂಡಿ ಅಂದ್ರು ಹೋಂ ಮಿನಿಸ್ಟರ್ರು. ಓ, ಹೌದಾ, ಸರಿ. ಮಾಡು ಅಂದೆ. ನಂತರ ಹಾಲು ಮುದ್ದೆಯ ಚಿತ್ರ ಹಾಕಿದ್ದನ್ನ ನೋಡಿ ಅದನ್ನು ಮಾಡೋದು ಹೇಗೆ ಅಂತ ಎಲ್ಲಾ ಕೇಳುತ್ತಿದ್ದಾಗ ಅದನ್ನ ಮಾಡೋದು ಹೇಗೆ ಅಂತ ಎಲ್ರಿಗೂ ಮತ್ತೆ ಮತ್ತೆ ಹೇಳೋ ಬದ್ಲು ಒಂದೇ ಕಡೆ ಬರದ್ರೆ ಹೆಂಗೆ ಅಂತನಿಸಿ ಬರೆಯೋಕೆ ಕೂತಾಗ ನೆನಪಾಗಿದ್ದಿಷ್ಟು. ಇನ್ನೂ ಹೆಚ್ಚಿನ ಸುದ್ದಿಯಿಲ್ಲದೆ ಹಾಲು ಮುದ್ದೆಯ ತಯಾರಿ ಹೆಂಗೆ ಅನ್ನೋ ಅಲ್ಲಿಗೆ ಹೋಗೋಣ.

ಬೇಕಾದ ಸಾಮಗ್ರಿಗಳು: 
ರವೆ-೨ ಕಪ್ಪು
ಸಕ್ಕರೆ/ಬೆಲ್ಲ- ೨ ಕಪ್ಪು
ತುಪ್ಪ-೧ ಕಪ್ಪು
ಹಾಲು- ೪ ಕಪ್ಪು
ಏಲಕ್ಕಿ- ೧
ಲವಂಗ- ೪
ದ್ರಾಕ್ಷಿ- ಸ್ವಲ್ಪ

ಮಾಡೋ ವಿಧಾನ: 
ರವೆಯನ್ನು ಸಣ್ಣ ಉರಿಯಲ್ಲಿ ಸ್ವಲ್ಪ ಹುರಿದುಕೊಳ್ಳಿ. ಮತ್ತೊಂದು ಪಾತ್ರೆಯಲ್ಲಿ ಹಾಲನ್ನು ಕುದಿಸಿಕೊಂಡು ಅದಕ್ಕೆ ಹುರಿದ ರವೆಯನ್ನು ಹಾಕಿ. ರವೆಯನ್ನು ಹಾಕಿದ ತಕ್ಷಣ ನಿಧಾನವಾಗಿ ತೊಳೆಸುತ್ತಾ ಸಕ್ಕರೆ/ಬೆಲ್ಲ, ಸ್ವಲ್ಪ ತುಪ್ಪ  ಮತ್ತು ಪುಡಿ ಮಾಡಿದ ಏಲಕ್ಕಿ, ಲವಂಗಗಳನ್ನು ಹಾಕಬೇಕು. ಗಟ್ಟಿಯಾಗುವ ತನಕ ತಳಹಿಡಿಯದಂತೆ ತೊಳೆಸುತ್ತಾ ಇರಬೇಕು. ಸುಮಾರು ಹತ್ತು-ಹದಿನೈದು ನಿಮಿಷಗಳ ನಂತರ ಈ ಮಿಶ್ರಣ ಉಂಡೆ ಕಟ್ಟುವಷ್ಟು ಗಟ್ಟಿಯಾಗುತ್ತೆ. ಆಗ ದ್ರಾಕ್ಷಿ ಹಾಕಿ ಉಂಡೆಕಟ್ಟಿದ್ರೆ ಹಾಲುಮುದ್ದೆ ಸವಿಯಲು ಸಿದ್ದ. ಇದನ್ನು ತುಪ್ಪದೊಂದಿಗೆ ಅಥವಾ ಚಟ್ನಿಪುಡಿಯೊಂದಿಗೆ ತಿನ್ನಬಹುದು.

ರೆಸಿಪಿ ಕ್ರೆಡಿಟ್ಸ್: ಅಕ್ಷತಾನ ಅಜ್ಜಿ
ಮಾಡಿದ್ದು: ನಮ್ಮನೆ ಅಕ್ಷತಾ 

ಅಂದ ಹಾಗೆ ಇದನ್ನು ಶ್ರಂಗೇರಿ ಕಡೆ ಜಾಸ್ತಿ ಮಾಡ್ತಾರಂತೆ ಅಂತ ನಮ್ಮನೆಯವ್ರು ಹೇಳ್ತಾ ಇದ್ರು. ಇನ್ನೂ ಹೆಚ್ಚಿನ ಮಾಹಿತಿ ಗೊತ್ತಿರೋರು ಹಂಚ್ಕೊಂಡ್ರೆ ಇನ್ನೊಂದಿಷ್ಟು ತಿಳ್ಕೋಬೋದು

3 comments:

  1. ಧನ್ಯವಾದಗಳು. ಹೊಸ ತಿಂಡಿಯನ್ನು ತಿಳಿಸಿಕೊಟ್ಟದ್ದಕ್ಕೆ

    ReplyDelete
  2. This comment has been removed by the author.

    ReplyDelete
  3. ಚೆನ್ನಾಗಿದೆ ಆದರೆ ಸ್ವಲ್ಪ ಸಜ್ಜಿಗೆ ತರಹನೇ ಅನ್ನಿಸುತ್ತಿದೆ.

    ReplyDelete