Monday, January 20, 2025

ಮ್ಯಾಮೋತ್ ಕೇವ್ ನ್ಯಾಷನಲ್ ಪಾರ್ಕ್ ಚಾರಣ

ನಾನೂರು ಮೈಲು ದೊಡ್ಡ ಗುಹೆ!

Mammoth Cave Historic Tour Entrance
ತುಮಕೂರಿನ ಸಿದ್ದರ ಬೆಟ್ಟ, ಕೋಲಾರದ ಅಂತರಗಂಗೆ , ಉತ್ತರ ಕನ್ನಡದ ಯಾಣ, ಬಾದಾಮಿಯ ಗುಹಾಂತರ ದೇಗುಲಗಳು , ಎಲಿಫೆಂಟಾ ಗುಹೆಗಳನ್ನು ನೋಡಿದ್ದ ನಮಗೆ ಗುಹೆ ನೋಡೋದು ಅಂದರೆ ಒಂದೋ ಎರಡೋ ಘಂಟೆಗಳಲ್ಲಿ ಮುಗಿಯೋ ಕಾರ್ಯಕ್ರಮ ಅನ್ನೋ ಕಲ್ಪನೆ. ಆದರೆ ಗುಹೆ ಅಂದರೆ ಅದು ೪೦೦ ಮೈಲುಗಳಷ್ಟು ದೊಡ್ಡದಿರುತ್ತೆ, ಇಡೀ ದಿನ ಇದ್ದರೂ ಅದರ ಎರಡು ಭಾಗದ ಟೂರ್ ಮಾಡಬಹುದಷ್ಟೇ ಅಂತ ಗ್ಯಾರಂಟಿ ಅಂದುಕೊಂಡಿರಲಿಲ್ಲ. ಆ ಬೃಹತ್ ಗುಹೆಯೇ ಹೆಸರಿಗೆ ತಕ್ಕನಾಗಿರೋ ಮ್ಯಾಮೋತ್ ಕೇವ್. ಅಮೇರಿಕಾದಲಿರೋ ೬೩ ನ್ಯಾಷನಲ್ ಪಾರ್ಕುಗಳಲ್ಲಿ ಒಂದಾಗಿರೋ ಇದು ಅಮೇರಿಕಾದ ಕೆಂಟುಕಿ ರಾಜ್ಯದಲ್ಲಿದೆ.

ಇಲ್ಲಿರೋ ಗುಹೆಗಳ ಬಗ್ಗೆ ಗೊತ್ತಾಗಿದ್ದು ಹೇಗೆ ?
ಈ ಗುಹೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದರೂ ಇವು ಮುಂಚೆ ಪ್ರವಾಸಿ ತಾಣವಾಗಿರಲಿಲ್ಲ.  ಅಮೇರಿಕಾದ ಮೂಲ ನಿವಾಸಿಗಳು ಗಣಿಗಾರಿಕೆ ಮಾಡುತ್ತಿದ್ದ ಮ್ಯಾಮೋತ್ ಗುಹೆ ಸುಮಾರು ೧೮೦೦ ರ ಹೊತ್ತಿಗೆ ಇಲ್ಲಿಗೆ ಬಂದ ಯುರೋಪಿಯನ್ ವಸಾಹತುಗಾರರ ಗಮನ ಸೆಳೆಯೋಕೆ ಶುರುವಾಯಿತು. ಮೊದಲಿಗೆ ಗಣಿಗಾರಿಕೆಯ ದುಡ್ಡಿಗಾಗಿ ಇಲ್ಲಿಗೆ ಬಂದ ಜನರಿಗೆ ಗಣಿಗಾರಿಕೆಯ ರಿಸ್ಕು ಮತ್ತು ಬರೋ ಕಡಿಮೆ ದುಡ್ಡಿಗಿಂತ ಇದನ್ನು ಪ್ರವಾಸಿ ತಾಣವನ್ನಾಗಿ ಮಾಡಿದರೆ ಹೆಚ್ಚು ಲಾಭ ಅನ್ನಿಸಿರಬೇಕು. ಈ ಪ್ರದೇಶದಲ್ಲಿದ್ದ ದೊಡ್ಡ ಗುಹೆಯೇ ಮ್ಯಾಮೋತ್ ಕೇವ್. ಇದಕ್ಕೆ ಬರೋ ಜನರನ್ನು ನೋಡಿ ಗುಹೆಯೊಳಗೆ ಜನರನ್ನು ಕರೆದುಕೊಂಡು ಹೋಗೋ ಗೈಡುಗಳಿಗೆ, ಗುಹೆಗಳ ಒಳಗೆ ಹೊಸ ದಾರಿಗಳನ್ನು ಕಂಡುಹಿಡಿಯೋರಿಗೆ, ಒಳಗಿಳಿಯಲು ಮತ್ತು ಮೇಲೆ ಸರಾಗವಾಗಿ ವಾಪಾಸ್ ಬರಲು ಅನುಕೂಲವಾಗುವಂತೆ ಮೆಟ್ಟಿಲುಗಳನ್ನು ಮಾಡೋರಿಗೆ, ಇಲ್ಲಿನ ಪ್ರವಾಸಿಗರಿಗೆ ಬೇಕಾದ ಹೋಟೇಲ್ ಉದ್ಯಮದಲ್ಲಿರೋರಿಗೆ ಅಂತ ಈ ಜಾಗ ಹೊಸ ದುಡ್ಡಿನ ಖಜಾನೆಯಾಗಹೊರಟಿತ್ತು. ಕೆಂಟುಕಿಯ ನಿಯಮದ ಪ್ರಕಾರ ನೀವು ಭೂಮಿಯ ಒಡೆಯರಾದರೆ ಅದರ ಕೆಳಗಿರೋದೆಲ್ಲ ನಿಮ್ಮದೇ ಸ್ವತ್ತು.  ಹಾಗಾಗಿ ಕಾಲ ಕಳೆದಂತೆ ಪ್ರವಾಸಿಗರನ್ನ ತಮ್ಮ ಜಾಗದಲ್ಲಿರೋ ಗುಹೆಗೇ ಕರೆತಂದು ದುಡ್ಡು ಮಾಡಬೇಕು ಅಂತ ತಮ್ಮ ಒಡೆತನದ ಭೂಮಿಯ ಕೆಳಗೆ ಗುಹೆ ಹುಡುಕುವವರ ಸಂಖ್ಯೆ ಹೆಚ್ಚಾಯ್ತು. ಆ ತರದ ಹೊಸ ಗುಹೆಗಳು ಸಿಕ್ಕಂತೆ ಇಲ್ಲಿನ ಭೂಮಾಲೀಕರಲ್ಲಿ ಮ್ಯಾಮೋತ್ ಗುಹೆಗೆ ಬರೋ ಪ್ರವಾಸಿಗರನ್ನು ತಮ್ಮ ಹೊಸ ಗುಹೆಗೆ ಸೆಳೆಯೋಕೆ ಗಲಾಟೆಗಳು ನಡೆಯೋಕೆ ಶುರುವಾಯ್ತು. ೧೯೨೦ರ ಹೊತ್ತಿಗೆ ಇಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ಭೂಮಾಲೀಕರ ವಿವಿಧ ಗುಹೆಗಳ ಟೂರುಗಳಿತ್ತು ಎನ್ನುತ್ತೆ ಇತಿಹಾಸ. ಕೊನೆಗೆ ಇವರನ್ನೆಲ್ಲಾ ಒಂದುಗೂಡಿಸಿ ಮ್ಯಾಮೋತ್ ಕೇವ್ ನ್ಯಾಷನಲ್ ಪಾರ್ಕ್ ಎಂದು ಮಾಡಿ ೧೯೪೧ರ ಸುಮಾರಿಗೆ ಸಾರ್ವಜನಿಕರ ಪ್ರವೇಶಕ್ಕೆ ಬಿಡಲಾಯಿತು.

ಟೈಮ್ ಜೋನ್ ಚೇಂಜಿನ ಮಜಾ:
 ನಾವಿದ್ದ ಜಾಗದಿಂದ ಮ್ಯಾಮೋತ್ ಕೇವಿಗೆ ಹೋಗೋಕೆ ಸುಮಾರು ಮೂರು ತಾಸು ಬೇಕು. ಆದರೂ ನಾವು ಹನ್ನೊಂದೂವರೆಗೆ ಹೊರಟು ಎರಡೂವರೆಗೆ ಅಲ್ಲಿಗೆ ತಲುಪಿದೆವು. ಅದೇಗೆ ಅಂದ್ರಾ ? ಅದೇ ಟೈಂ ಜೋನಿನ ಮಜಾ. ಅಮೇರಿಕಾದ ನಾವಿರೋ ಜಾಗದ ಸಮಯಕ್ಕೆ ಇ.ಎಸ್.ಟಿ(ಈಸ್ಟರ್ನ್ ಸ್ಟಾಂಡರ್ಡ್ ಟೈಂ) ಅನ್ನುತ್ತಾರೆ. ಮ್ಯಾಮೋತ್ ಕೇವ್ ಇರೋದು ಸಿ.ಎಸ್.ಟಿ(ಸೆಂಟ್ರಲ್ ಸ್ಟಾಂಡರ್ಡ್ ಟೈಂ)ನಲ್ಲಿ. ಇವೆರಡಕ್ಕೂ ಒಂದು ತಾಸಿನ ವ್ಯತ್ಯಾಸ. ಹಾಗಾಗಿ ಹನ್ನೊಂದುವರೆ ಈಸ್ಟರ್ನ್ ಟೈಂನಲ್ಲಿ ಹೊರಟ ನಾವು ಒಂದೂವರೆ ಸೆಂಟ್ರಲ್ ಟೈಂನಲ್ಲಿ ಆ ತಾಣಕ್ಕೆ ತಲುಪಿದೆವು ! ಒಂದು ತಾಸು ಎಲ್ಲೋಯ್ತು ಅಂದ್ರಾ ?  ಹೋಗ್ತಾ ಒಂದು ತಾಸು ಲಾಭವಾಗಿರುತ್ತಲ್ಲ. ಆ ಒಂದು ತಾಸು ವಾಪಾಸ್ ಬರ್ತಾ ಕಳೆದುಹೋಗುತ್ತೆ ಅಷ್ಟೆ

ಈ ಪಾರ್ಕಿನ ಪ್ರವೇಶ ಶುಲ್ಕ ಎಷ್ಟು?
ಈ ಪಾರ್ಕಿನೊಳಗೆ ಪ್ರವೇಶಿಸೋಕೆ ದುಡ್ಡು ಕೊಡಬೇಕಿಲ್ಲ.ಈ ಪಾರ್ಕು ಶುರುವಾದದ್ದು ಹೇಗೆ ಎಂಬಿತ್ಯಾದಿ ಮಾಹಿತಿ ಇರೋ ಮಾಹಿತಿ ಕೇಂದ್ರ, ಸುತ್ತಮುತ್ತಲಿರೋ ಗಿಫ್ಟ್ ಶಾಪುಗಳು, ಹೋಟೇಲುಗಳ ಪ್ರವೇಶಕ್ಕೆ, ಇಲ್ಲಿನ ಮೊದಲ ಟೂರ್ ಶುರುವಾದ ಚಾರಿತ್ರಿಕ ಮ್ಯಾಮೋತ್ ಕೇವಿನ ದ್ವಾರದವರೆಗೆ , ಸುತ್ತಮುತ್ತಲ ಕಾಡಿನಲ್ಲಿರುವ ಚಾರಣದ ಹಾದಿಗಳಲ್ಲಿ ಓಡಾಡೋಕೂ ಯಾವುದೇ ಶುಲ್ಕವಿಲ್ಲ. ಆದರೆ ಈ ಪಾರ್ಕಿನಲ್ಲಿ ಕ್ಯಾಂಪಿಂಗ್ ಮಾಡಬೇಕೆಂದರೆ ಅಥವಾ ಈ ಗುಹೆಗಳ ಟೂರ್ ಮಾಡಬೇಕೆಂದರೆ ಆಯಾ ಟೂರುಗಳ ಪ್ರವೇಶ ಶುಲ್ಕ ಕೊಡಬೇಕಾಗುತ್ತದೆ. ಉದಾಹರಣೆಗೆ ಇಲ್ಲಿನ ವೈಲ್ಡ್ ಕೇವ್ ಟೂರ್ ಎಂಬ ಸುಮಾರು ಆರು ಘಂಟೆಗಳ ಕಾಲ ನಡೆಯುವ ಟೂರಿಗೆ ತಲಾ ೭೯ ಡಾಲರ್ ಪ್ರವೇಶ ಶುಲ್ಕ. ಈ ಟೂರಿನಲ್ಲಿ ಸುಮಾರು ಭಾಗ ತೆವಳುತ್ತಲೇ ಸಾಗಬೇಕು. ಜೊತೆಗೆ ಈ ತರದ್ದೇ ಶೂ ಧರಿಸಬೇಕು, ೪೨ ಇಂಚುಗಳಿಗಿಂತ ಕಮ್ಮಿಯಿರಬೇಕು ಮುಂತಾದ ಕಠಿಣ ನಿಯಮಗಳಿವೆ. ನಮ್ಮ ಸಣ್ಣ ಮಗನೊಂದಿಗೆ ಹೋಗಿದ್ದ ಕಾರಣ ಈ ಸಾಹಸಕ್ಕೆ ಕೈಹಾಕದೇ ಉಳಿದ ಜನಪ್ರಿಯ ಟೂರಾದ ಡೋಮ್ಸ್ ಅಂಡ್ ಡ್ರಿಪ್ ಸ್ಟೋನ್ಸ್ ಎಂಬ ಟೂರಿಗೆ ತಲಾ ಇಪ್ಪತ್ತು ಡಾಲರುಗಳ ಪ್ರವೇಶ ಶುಲ್ಕ ಕೊಟ್ಟು ಹೋಗೋಕೆ ನಿರ್ಧರಿಸಿದೆವು.


ಡೋಮ್ಸ್ ಮತ್ತು ಡ್ರಿಪ್ ಸ್ಟೋನ್ಸ್ ಟೂರ್:
ಇಲ್ಲಿನ ಚೆಂದದ ಟೂರುಗಳ ಟಿಕೆಟುಗಳು ಬಹಳ ಬೇಗನೆ ಖಾಲಿಯಾಗುತ್ತದೆ. ಇದೂ ಅಂತಹದ್ದರಲ್ಲಿ ಒಂದಾಗಿದ್ದರಿಂದ ನಾವು ಮುಂಚೆಯೇ ಆನ್ ಲೈನಿನಲ್ಲಿ ಬುಕ್ ಮಾಡಿಕೊಂಡು ಬಂದಿದ್ದವು. ಸುಮಾರು ಎರಡು ಘಂಟೆ ಹಿಡಿಯೋ ಈ ಟೂರಿನಲ್ಲಿ ಗುಹೆಯ ಪ್ರವೇಶ ದ್ವಾರದವರೆಗೆ ಸುಮಾರು ಹತ್ತು ನಿಮಿಷದ ಪಾರ್ಕಿನ ಬಸ್ಸಿನ ಪಯಣ.   ಅಲ್ಲಿಂದ ನಮ್ಮ ಗೈಡುಗಳ ಜೊತೆಗೆ ಗುಹೆಯ ಒಳಗೆ ಅಲ್ಲಿರೋ ಮೆಟ್ಟಿಲಲ್ಲಿ ಕೆಳಗೆ ಇಳಿಯಬೇಕು.ಇಲ್ಲಿ ಒಂದು ಸಿಂಕ್ ಹೋಲ್ ಅಂತ ಇದೆ. ಇಲ್ಲಿ ಕೂತಿದ್ದ ಭೂಮಾಲೀಕನ ಮಗ ಅಲ್ಲಿದ್ದ ಸಣ್ಣ ಕಲ್ಲಿನ ಸಂದಿಯಿಂದ ತಂಪಾದ ಗಾಳಿ ಬರುತ್ತಿದ್ದಿದ್ದನ್ನು ಗಮನಿಸಿದ್ದನಂತೆ. ಇಲ್ಲೊಂದು ಗುಹೆ ಇರಬಹುದು ಅಂತ ಆ ಜಾಗವನ್ನು ಡೈನಾಮೈಟ್ ಇಟ್ಟು ಒಡೆದಾಗ ಅಲ್ಲಿಂದ ಕೆಳಗೆ ಇಳಿಯೋ ದಾರಿ ಕಂಡಿತ್ತಂತೆ. ಆ ಜಾಗವನ್ನೇ ಅಭಿವೃದ್ಧಿಪಡಿಸಿ ಸದ್ಯದ ಹಂತಕ್ಕೆ ತರಲಾಗಿದೆಯಂತೆ.

ಮ್ಯಾಮೋತ್ ಕೇವೆಂಬ ಕಲ್ಪವೃಕ್ಷ:
ಈ ಬೆಟ್ಟದ ಮೇಲೆ ಬಿದ್ದ ಮಳೆನೀರು ಕೆಳಗೆ ಇಂಗುತ್ತಾ ಅಕ್ವೀಫರ್ಸ್ ಎಂಬ ಕಲ್ಲುಗಳ ಮೂಲಕ ಅಂತರ್ಜಲ ಮರುಪೂರಣಕ್ಕೆ ಸಹಾಯವಾಗುತ್ತಂತೆ. ಐವತ್ತೈದು ಸಾವಿರ ಎಕರೆಗಳಿರುವ ಮ್ಯಾಮೋತ್ ಕೇವಿನ ಈ ಕಲ್ಲುಗಳು ಅಮೇರಿಕಾದ ಸುಮಾರು ೪೦% ಜನಕ್ಕೆ ಶುದ್ಧ ಕುಡಿಯುವ ನೀರು ಒದಗಿಸುತ್ತೆ ಎಂಬ ಒಂದು ಅಂದಾಜಿದೆ.  ಇಲ್ಲಿಂದ ಕೆಳಗಿಳಿಯೋ ನೀರು  ಗುಹೆಯ ಚಾರಣದ ಸಮಯದಲ್ಲಿ  ಕೆಲವು ಸಣ್ಣ ಸಣ್ಣ ಜಲಪಾತಗಳಾಗಿ , ತೊರೆಗಳಾಗಿ, ನಮ್ಮ ತಲೆ ಮೇಲೇ ಬೀಳುವ ಹನಿಗಳಾಗೂ ಕಾಣಸಿಗುತ್ತೆ. ಗುಹೆಯ ಕೆಲವು ಭಾಗಗಳಲ್ಲಿ ಇದು ಸ್ಟಾಲಕ್ಟೈಟ್ಸ್ ಮತ್ತು ಸಾಲಗ್ಮೈಟ್ ಎಂಬ ರಚನೆಗಳಾಗಿಯೂ ಕಾಣುತ್ತೆ. ಗುಹೆಯ ಮೇಲ್ಭಾಗದಿಂದ ಕೆಳಗಿಳಿವ ನೀರು ಹಾಗೇ ಹೆಪ್ಪುಗಟ್ಟಿ ಹಲವು ಆಕಾರಗಳಾಗಿ ಮೇಲಿಂದ ನೇತಾಡತೊಡಗುತ್ತೆ. ಆ ರಚನೆಗಳೇ ಸ್ಟಾಲಕ್ಟೈಕ್ಟ್ಸ್. ಗುಹೆಯ ಮೇಲಿಂದ ನೆಲಕ್ಕೆ ಬಿದ್ದ ವಸ್ತುಗಳಿಂದ ನೆಲದ ಮೇಲೆ ಹಾವಿನ ಹುತ್ತದಂತಹ ಎತ್ತರೆತ್ತರದ ರಚನೆಗಳು ಮೇಲೇಳೋಕೆ ಶುರುವಾಗುತ್ತೆ. ಅವೇ ಸ್ಟಾಲಗ್ಮೈಟ್ಸ್

ಕಗ್ಗತ್ತಲಲ್ಲಿ ಇಳಿದಷ್ಟೂ ಮುಗಿಯದ ಮೆಟ್ಟಿಲುಗಳ ಹಾದಿ
ಸಿಂಕ್ ಹೋಲಿನಿಂದ ಗುಹೆಯ ಟೂರಿಗೆ ಸುಮಾರು ೬೪೦ ಮೆಟ್ಟಿಲುಗಳನ್ನು ಇಳಿದು ಹತ್ತಬೇಕು. ಪ್ರತೀ ಗ್ರೂಪಿನಲ್ಲೂ ಸುಮಾರು ನೂರು ಜನರನ್ನು ಒಳಗೆ ಬಿಡುತ್ತಾರೆ. ಕೆಲವೊಂದು ಕಡೆ ಮಾತ್ರ ಕೈ ಕೈ ಹಿಡಿದುಕೊಂಡು ಇಬ್ಬರು ಇಳಿಯುವಷ್ಟು ಅಥವಾ ನಡೆಯುವಷ್ಟು ಜಾಗವಿದ್ದರೆ ಹೆಚ್ಚಿನ ಜಾಗಗಳಲ್ಲಿ ಒಬ್ಬರಷ್ಟೇ ಇಳಿಯಬಹುದಾದಷ್ಟು ಸಣ್ಣ ಕಬ್ಬಿಣದ ಮೆಟ್ಟಿಲುಗಳು ! ಕಗ್ಗತ್ತಲಲ್ಲಿ ಲೈಟುಗಳ ಬೆಳಕಿನಲ್ಲಿ ಇಲ್ಲಿನ ಸುಣ್ಣದ ಕಲ್ಲುಗಳ ಗುಹಾ ರಚನೆಗಳನ್ನು, ಮಿನಿ ಜಲಪಾತಗಳನ್ನು ನೋಡೋದೆ ಒಂದು ವಿಸ್ಮಯ. ಮೆಟ್ಟಿಲುಗಳ ಆಚೆ ನೋಡಿದರೆ ಪ್ರಪಾತ. ಒಂದೊಂದೆಡೆ ತಲೆಗೆ ಹೊಡೆಯೋ ಗುಹೆಯ ರಚನೆಗಳು. ಕೆಲವೊಂದು ಕಡೆ ಸ್ವಲ್ಪ ವಿಶ್ರಾಂತಿ ಪಡೆಯುವಷ್ಟು ಸಮತಟ್ಟಾದ ಜಾಗವಿದೆಯಾದರೂ ಬಹುತೇಕ ಕಡೆ ಇಳಿದಷ್ಟೂ ಮುಗಿಯದ ಪ್ರಪಾತದ ಕಡೆಗಿನ ಮೆಟ್ಟಿಲುಗಳು ! ಹೆಸರೇ ಹೇಳುವಂತೆ  ಟೂರಿನ ಮೊದಲ ಭಾಗವಾದ ಇಲ್ಲಿ ಸುಮಾರು ವಿಶಾಲವಾದ ಡೋಮ್ಸ್ (ಕಮಾನುಗಳು) ಸಿಗುತ್ತೆ. ಇದರಲ್ಲಿ ಪ್ರಸಿದ್ಧವಾದದ್ದು ಅಮೇರಿಕಾದ ಅಧ್ಯಕ್ಷರಾಗಿದ್ದ ಥಿಯೋಡರ್ ರೂಸ್ವೆಲ್ಟ್ ಅವರ ಹೆಸರಿನಲ್ಲಿರುವ ರೂಸ್ವೆಲ್ಟ್ ಡೋಮ್. ಇದು ಸುಮಾರು ೧೩೦ ಅಡಿ ಎತ್ತರವಿದೆ. ಅದೇ ತರಹ ಸಿಲೋ ಪಿಟ್ ಎಂಬ ಹೆಸರಿನ ಸುಮಾರು ೧೬೦ ಅಡಿ ಆಳದ ಕುಳಿಯೂ ಈ ಹಾದಿಯಲ್ಲಿ ಸಿಗುತ್ತದೆ. ಇಲ್ಲಿನ ಗುಹೆಗಳ ಮೂಲಕ ಇಳಿಯೋ ನೀರಿಂದ ಈ ರೀತಿಯ ರಚನೆಗಳಾಗಿವೆ ಎನ್ನುತ್ತಾರೆ.


ಮುನ್ನೂರಡಿ ಕೆಳಗೊಂದು ಸ್ಟೇಷನ್ನು!:
ಈ ಅದ್ಭುತ ನೈಸರ್ಗಿಕ ರಚನೆಗಳನ್ನು ನೋಡುತ್ತಾ ಅಲ್ಲಲ್ಲಿ ಬಗ್ಗುತ್ತಾ ತಲೆ ಮೇಲೆ ಹೊಡೆಯೋ ಗುಹೆಯ ಭಾಗಗಳಿಂದ ಸರಿಯುತ್ತಾ ಈ ಮೆಟ್ಟಿಲುಗಳನ್ನಿಳಿದು ಉಸ್ಸಪ್ಪಾ ಅನ್ನುವಷ್ಟರಲ್ಲಿ ಅಲ್ಲೊಂದು ವಿಶಾಲವಾದ ಬಯಲು ! ಆ ಬಯಲಿಗೆ ಸಾಗೋ ಹಾದಿಯನ್ನು ನ್ಯೂಯಾರ್ಕ್ ಸಬ್ವೇ ಎನ್ನುತ್ತಾರೆ. ನಂತರ ಸಿಗುವ ಬಯಲಿಗೆ ನ್ಯೂಯಾರ್ಕಿಯ ಅತೀ ದೊಡ್ಡ ಸಬ್ವೇ ಮೆಟ್ರೋ ಸ್ಟೇಷನ್ನಿನ ಹೆಸರಾದ ಗ್ರಾಂಡ್ ಸೆಂಟ್ರಲ್ ಸ್ಟೇಷನ್ ಎಂದು ಹೆಸರಿಡಲಾಗಿದೆ. ಅಲ್ಲಿ ನಮಗೆಲ್ಲಾ ಕೂರೂಕೆ ಬೇಕಾದಷ್ಟು ಮರದ/ಕಲ್ಲಿನ ಬೆಂಚುಗಳು ! ನೂರು ಜನ ಕೂತರೂ ಇನ್ನೂ ಹೆಚ್ಚಿನ ಜನಕ್ಕೆ ಸಾಕಾದಷ್ಟು ಜಾಗ ಅಲ್ಲಿ. ಭೂಮಿಯಿಂದ ಸುಮಾರು ೩೦೦ ಅಡಿ ಕೆಳಗಿರುವ ಇಲ್ಲಿ  ನಮ್ಮನ್ನೆಲ್ಲಾ ಕೂರಿಸಿದ ಪಾರ್ಕಿನ ರೇಂಜರ್ ಈ ಜಾಗವನ್ನು ೧೯೨೦ರ ಸುಮಾರಿಗೆ ಕಂಡು ಹಿಡಿದ ಬಗ್ಗೆ ಮತ್ತು ಇಲ್ಲಿನ ಕಲ್ಲುಗಳ ಕತೆ ಹೇಳಿದರು.


Exit from Grand Central Station
ಬಿಗ್ ಬ್ರೇಕ್ ಮತ್ತು ಫೈರಿ ಸೀಲಿಂಗ್:
ಮುಂಚೆ ಗ್ರಾಂಡ್ ಸೆಂಟ್ರಲ್ಲಿಗೆ ಬಂದ ಜನ ಹಾಗೇ ವಾಪಾಸ್ ಹತ್ತಬೇಕಿತ್ತಂತೆ. ಆಗ ಅಲ್ಲಿನ ಮೇಲಿಂದ ಕಲ್ಲುಗಳ ಮೂಲಕ ಟೂರಿನ ಗೈಡುಗಳ ದೀಪದ ಹೊಗೆ ಮೇಲೆ ಹೋಗೋದನ್ನು ನೋಡಿದ ಗೈಡುಗಳು ಅಲ್ಲಿಂದ ಮೇಲೆ ಹತ್ತೋಕೆ ಬೇರೆ ದಾರಿಯಿರಬಹುದೇನೋ ಎಂದು ಗ್ರಹಿಸಿದರಂತೆ. ಆಗ ಡೈನಮೇಟುಗಳನ್ನು ಇಟ್ಟು ಒಡೆದಾಗ ಮೇಲೆ ವಾಪಾಸ್ ಹೋಗೋಕೆ ಹೊಸ ಹಾದಿ ಕಂಡಿತಂತೆ. ಮೇಲೆ ಹತ್ತುವ ಈ ಸುಲಭದ ಹಾದಿ ಶುರುವಾದ ಹಾದಿಯೇ ಬಿಗ್ ಬ್ರೇಕ್. ಇಲ್ಲಿಂದ ಸ್ವಲ್ಪ ಮೇಲೆ ಹತ್ತಿದ ನಂತರ ಮತ್ತೊಂದು ವಿಶಾಲವಾದ ಛಾವಣಿ ಸಿಗುತ್ತದೆ. ಅದನ್ನು ಫೈರಿ ಸೀಲಿಂಗ್ ಎಂದು ಕರೆಯುತ್ತಾರೆ. ಇಲ್ಲಿಂದ ಇಲ್ಲಿನ ಶಿಲಾ ರಚನೆಗಳ ಬಗ್ಗೆ, ಇಲ್ಲಿನ ಝರಿಗಳ ಬಗ್ಗೆ, ಬಾವಲಿಗಳ ಬಗ್ಗೆ ಗೈಡು ಮತ್ತೊಮ್ಮೆ ಲೆಕ್ಚರ್ ಕೊಟ್ಟರು

ಫ್ಲಾಟ್ ಸೀಲಿಂಗ್:
ಫೈರಿ ಸೀಲಿಂಗಿನ ನಂತರ ಸುಮಾರು ದೂರ ಸಮತಟ್ಟಾದ ಹಾದಿಯಲ್ಲಿ ನಡೆಯಬಹುದು. ಇದನ್ನು ಫ್ಲಾಟ್ ಸೀಲಿಂಗ್ ಎನ್ನುತ್ತಾರೆ. ಇಲ್ಲಿಂದ ಮುಂದೆ ಸುಮಾರು ಮೂವತ್ತು ಅಡಿ ಎತ್ತರದ ಕಲ್ಲಿನ ರಚನೆ ಲವರ್ಸ್ ಫೈತ್ ಮತ್ತು ಬಣ್ಣ ಬಣ್ಣದ ರಚನೆಗಳಿರುವ ಥ್ಯಾಂಕ್ಸ್ ಗೀವಿಂಗ್ ಹಾಲ್ ಸಿಗುತ್ತೆ. ಅದಾದ ನಂತರ ಸಿಗೋದೇ ಟೂರಿನ ಮತ್ತೊಂದು ಆಕರ್ಷಣೆಯಾದ ಫ್ರೋಜನ್ ನಯಾಗರ

ಫ್ರೋಜನ್ ನಯಾಗರ ಎಂಬ ವಿಸ್ಮಯ:
Frozen Niagara in Mammoth Cave
ಸುಮಾರು ನೂರು ವರ್ಷಗಳಿಂದ ಪ್ರಖ್ಯಾತವಾಗಿರುವ ಈ ಟೂರಿನಲ್ಲಿ ಸ್ಟಾಲಕ್ಟೈಕ್ಟ್ಸ್ ಮತ್ತು ಸ್ಟಾಲಗ್ಮೈಟ್ಸ್ ಎರಡು ರಚನೆಗಳನ್ನು ನೋಡಬಹುದಾದ ಜಾಗ ಇದು. ದೂರದಿಂದ ಇದು ಹೆಪ್ಪುಗಟ್ಟಿರುವ ನಯಾಗರ ಜಲಪಾತದಂತೆ ಕಾಣೋದರಿಂದ ಅದಕ್ಕೆ ಈ ಹೆಸರು. ಹೊಳೆಯುವ ಹಲವು ಬಣ್ಣದ ಲೈಟುಗಳ ಬೆಳಕಿನಲ್ಲಿ ಇದನ್ನು ನೋಡೋದೇ ಒಂದು ಅದ್ಭುತ. ಆ ಬೆಳಕಿನ ಜಗಮಗದಲ್ಲಿ ಈ ಚಿತ್ರವಿಚಿತ್ರ ರಚನೆಗಳು ಯಾರದೋ ಮುಖದಂತೆ, ಯಾವುದೋ ಪ್ರಾಣಿ ಪಕ್ಷಿಗಳಂತೆ, ಮೇಲಿಂದ ಇಳಿಬಿಟ್ಟ ಶಾಂಡೆಲಿಯರ್ನಂತೆ,  ಬೆಟ್ಟ ಗುಡ್ಡಗಳಂತೆ ನಮ್ಮ ಕಲ್ಪನೆಗಳನ್ನು ಹಲವು ತರದಲ್ಲಿ ತೆರೆದು ತಮ್ಮದೇ ಲೋಕಕ್ಕೆ ಕರೆದೊಯ್ಯುತ್ತೆ.  ಇಲ್ಲಿಗೆ ಮುಗಿಯೋ ಈ ಟೂರಿನ ಹೊರ ಬಾಗಿಲಿಗೆ ಭಾರದ ಮನಸ್ಸಿನೊಂದಿಗೆ, ಅದೆಷ್ಟೋ ಅದ್ಭುತ ಅನುಭವಗಳೊಂದಿಗೆ ಹೊರಬಂದೆವು. ಅಲ್ಲಿಂದ ಮತ್ತೆ ಬಸ್ಸಿನಲ್ಲಿ ವಿಸಿಟರ್ ಸೆಂಟರಿಗೆ ಬಂದು ಅಲ್ಲಿಂದ ನಮ್ಮ ಕಾರಿನಲ್ಲಿ ಮನೆಯತ್ತ ಹೊರಟೆವು. ಹಾದಿಯುದ್ದಕ್ಕೂ ಮ್ಯಾಮೋತ್ ಕೇವಿನ ಹಲವು ರಚನೆಗಳು, ಅದ್ಭುತ ಕತೆಗಳ ನೆನಪು ನಮ್ಮನ್ನು ರಂಜಿಸುತ್ತಿದ್ದವು.

ಈ ಲೇಖನ ಡಿಸೆಂಬರ್ ೨೨,2024 ರಂದು ವಿ.ಕ ದಲ್ಲಿ ಪ್ರಕಟವಾಗಿದೆ