Wednesday, April 25, 2012

ಆಲೂ ಪುರಾಣ

ಮಸಾಲೆ ದೋಸೆ !! .. ಆ.. ಆಗ್ಲೇ ಬಾಯಲ್ಲಿ ನೀರಾ ? ನಿಮ್ಮಂಗೆ ನಂಗೂ.. ನಾನು ಸಣ್ಣೋನಿದ್ದಾಗ ಮನೇಲಿ ಮಸಾಲೆ ದೋಸೆ ಮಾಡ್ತಾರೆ ಅಮ್ಮ ಅಂದ್ರೆ ಭಾರಿ ಖುಷಿ ಪಡ್ತಿದ್ದೆ. ಅದ್ರಲ್ಲೂ ಅದ್ರಲ್ಲಿ ಆಲೂಗಡ್ಡೆ ಪಲ್ಯ ಇರುತ್ತೆ ಅನ್ನೋದಕ್ಕೆ. ಹೊರಗಡೆ ಹೋಟ್ಲಿಗೇನಾದ್ರೂ ಕರ್ಕೊಂಡೋದ್ರೂನೂ ದೋಸೆ ಹೇಳಿದ್ರೆ ಮಸಾಲೆ ದೋಸೇನೆ ಹೇಳ್ತಿದ್ದ ನೆನ್ಪು. ಸಾಗರದ ಸುಖಸಾಗರ, ಪೈಸ್ ಪರಿವಾರ, ಪವಿತ್ರ ಹೋಟ್ಲು.. ಹಿಂಗೆ ಮಸಾಲೆ ದೋಸೆ ಅಂದ್ರೆ ಮೂಗು, ಬಾಯಿಗೆ ಭಾರಿನೇ ನೆನ್ಪಾಗುತ್ತೆ. ಒಮ್ಮೆ ಪೂನಾಕ್ಕೆ ಹೋದಾಗ ಅಲ್ಲಿ ಹೋಟೆಲ್ ಒಂದ್ರಲ್ಲಿ ವೆಜ್ ಯಾವ್ದು ಅಂತ ಗೊತ್ತಾಗ್ದೆ ಮಸಾಲೆ ದೋಸೆ ತಗೊಂಡಿದ್ದು, ಅದ್ರ ಖಾರ ಹೆಚ್ಚಾಗಿ ಹೊಟ್ಟೆ ಎಲ್ಲಾ ಉರಿ ಎದ್ದಿದ್ದೂ ನೆನ್ಪಾಗತ್ತೆ. ದೆಲ್ಲಿಗೆ ಹೋದಾಗ ಅಲ್ಲಿ ಕರ್ನಾಟಕ ಡಾಬಾದಲ್ಲಿ ಹುಳಿ ಹುಳಿ ಇಡ್ಲಿ, ದೋಸೆ ತಿಂದು ಏನಂದ್ರು ನಮ್ಮ ಕರ್ನಾಟಕದ ನೆನ್ಪು ಭಾರಿ ಕಾಡಿದ್ದೂ ಉಂಟು.   ಇವತ್ಯಾಕೆ ಇದ್ದಕ್ಕಿಂದಂಗೆ ಆಲೂಗಡ್ಡೆ ನೆನ್ಪಾಯ್ತು ಅಂತೀರಾ ? ಫುಲ್ಲು ಮಳೆ. ಬೆಚ್ಚಗೆ ಏನಾದ್ರೂ ಇದ್ದಿದ್ರೆ ಚೆನ್ನಾಗಿರೋದು ಅಂತ  ಬಾಯಿ ಅಂದ್ಕೊಳ್ಳೋ ಹೊತ್ಗೆ ನೆನ್ಪಾಗಿದ್ದು ಇದು.. ಹಂಗೇ ಸ್ವಲ್ಪ ಹಸಿಬಿಸಿ ನೆನ್ಪುಗಳ್ನ ಹಂಚ್ಕೊಳ್ಳೋಣ ಅನಿಸ್ತು. ಬರೀತಿದೀನಿ .. ಓದಿ

ಸೊಲಾನಮ್ ತುಬೆರೋಸಮ್(Solanum Tuberosum) ಅನ್ನೋ ಸಸ್ಯಶಾಸ್ತ್ರೀಯ ಹೆಸರಿನ ಆಲೂಗಡ್ಡೆ ಮೊದಲು ಸ್ಪೇನಿಂದ ಯುರೋಪಿಗೆ ೧೬ನೇ ಶತಮಾನದ ಸುಮಾರಿಗೆ , ತದನಂತರ ಹಾಗೇ ಭಾರತಕ್ಕೆ ಬಂದಿರಬಹುದು ಎಂಬ ಅಂದಾಜು ಕೆಲವು ವಿದ್ವಾಂಸರದು. ಪ್ರಪಂಚದಲ್ಲಿ ಮನುಷ್ಯ ಅಂದಾಜು ೩೩ ಕೇಜಿ ಆಲೂಗಡ್ಡೆ ತಿಂತಾನಂತೆ ವರ್ಷಕ್ಕೆ .. ಇದು ನಾನು ಹೇಳಿದ್ದಲ್ಲ ಕಣ್ರ‍ಿ. ಇಲ್ಲೇ ಓದಿದ್ದು. ಅಬ್ಬಾ ಅಂದ್ರಾ ? ನಂಗೂ ಮುಂಚೆ ಹಾಗೇ ಅನಿಸ್ತಿತ್ತು. ಆದ್ರೆ ಯಾವಾಗ ಬೆಂದಕಾಳೂರಿನ ಪೀಜಿಗೆ ಬಂದ್ನೋ ಆಗ ಬರೀ ೩೩ ಆ ಅನ್ಸೋಕೆ ಶುರು ಆಯ್ತು .. ಯಾಕೆ ಅಂದ್ರಾ. .ಓದಿ ನೋಡಿ

ನಮ್ಮ ಪೀಜಿ ಅಡಿಗೆಭಟ್ಟಂಗೆ ಆಲೂಗಡ್ಡೆ ಮನೆದೇವ್ರ ಅಂತ ಸುಮಾರು ಸಲ ಅಂದ್ಕೊಂಡಿದೀನಿ. ಉದಾಹರಣೆಗೆ ಇವತ್ತು ಮಾಡಿದ್ದ ತಿಂಡಿ ಆಲೂ ಪೋಹ. ಅಂದ್ರೆ ಆಲೂಗಡ್ಡೆ ಅವಲಕ್ಕಿ!!! ಅವಲಕ್ಕಿ ಮಾಡಿ ಅದಕ್ಕೆ ಒಗ್ಗರಣೆಗೆ ಕೊತ್ತಂಬರಿ, ಮೆಣಸಿನಕಾಯಿ ಹಾಕೋ ಬದ್ಲು ಆಲೂಗಡ್ಡೆ ಹಾಕಿದ್ರೆ ಆಲೂ ಪೋಹ ರೆಡಿ! ನಿನ್ನೆ ಆಲೂ ಪರೋಟ. ಪೂರಿ ಮಾಡಿದ್ರೆ ಆಲೂ ಸಬ್ಜಿ, ಉಪ್ಪಿಟ್ಟಿಗೂ ಆಲೂ ಇಲ್ದಿದ್ದ್ರೆ ರುಚಿ ಇಲ್ಲ ಅಂತಾನೆ ಅವ್ನು !! ರಾತ್ರೆಗೆ ಆಲೂ ಸಬ್ಜಿ ಅಥವಾ ಗೋಬಿ ಸಬ್ಜಿ ಅಥವಾ ಚನಾ.. ಬಾಯಲ್ಲಿ ನೀರೂರಕ್ಕೆ ಶುರು ಆಯ್ತಾ ? ಯಾವುದೂ ಆಲೂ ಇಲ್ಲದೇ ಇಲ್ಲ. ಇನ್ನು ಮಧ್ಯಾಹ್ನ ಊಟಕ್ಕೆ ಅಂತ ಪಕ್ಕದ ಹೋಟ್ಲಿಗೆ ಹೋದ್ರೆ ಅಲ್ಲೂ ಆಲೂ ಪಲ್ಯ.. ಅಥವಾ ಪೂರಿಗೆ ಆಲೂ ಸಾಗು !!!

ಈ ರೀತಿ ಆಲೂ ತಿನ್ನೋದು ಒಳ್ಳೇದಲ್ಲ ಕಣೋ ಅಂತಾರೆ ಅಮ್ಮ. ಆದ್ರೆ ಏನು ಮಾಡೋಣ ? ನಮ್ಮ ಪೀಜಿ ಕುಕ್ಕು.. ಅದೇ ಮುಂಚೆ ಹೇಳಿದ್ನಲ್ಲಾ ಅವ್ನೆ.. ಒಡಿಸ್ಸಾದವನು. ಆಲೂಗಡ್ಡೆ ಒಂದೇ ತರಕಾರಿ ಅಂತ ಅಂದ್ಕೊಂಡಿದಾನೋ ಏನೋ ಗೊತ್ತಿಲ್ಲ. ಅಪರೂಪಕ್ಕೆ ನುಗ್ಗೇಕಾಯಿ, ಬದನೇಕಾಯಿ ಕಾಣಿಸಿದ್ರೂ ಆಲೂಗಡ್ಡೆ ಕಾಯಮ್ಮು ಎಲ್ಲದ್ರಲ್ಲೂ. ಏನಪಾ ಹಿಂಗೆ ಅಂದ್ರೆ.. ನಮ್ಮನೇಲಿ ದಿನಕ್ಕೆ ೨ ಕೆ.ಜಿ ಆಲೂ ನಾನೊಬ್ನೆ ತಿಂತೀನಿ. ಆಲೂ ತಿಂದ್ರೆ ಬಾಡಿ ಬರುತ್ತೆ ಗೊತ್ತಾ ಅಂತ ಸಲ್ಮಾನ್ ಖಾನ್ ಪೋಸ್ ತೋರಿಸ್ತಾನೆ. ಆ ಖಾನ್ ಸಾಹೇಬ್ರು ಏನು ತಿಂದ್ರೋ ಗೊತ್ತಿಲ್ಲ. ಆದ್ರೆ ದಿನಾ ಈ ರೀತಿ ತಿಂತಿಂದು ಬಾಡಿ ಬರದಿದ್ರೂ  ... ಬರುತ್ತೆ. . ಅದ್ರ ಬಗ್ಗೆ ಹೇಳದಿದ್ರೇನೆ ವಾಸಿ !

 ಅಮ್ಮ ಅಂದ ಕೂಡ್ಲೇ ನೆನ್ಪಾಯ್ತು. ಅಮ್ಮ ಆಲೂಗಡ್ಡೆ ಹುಳಿ(ಸಾಂಬಾರ್) ಚೆನ್ನಾಗಿ ಮಾಡ್ತಾರೆ. ನಮ್ಮತ್ತೆ ಆಲೂಗಡ್ಡೆ ಹಾಕಿ ಮಾಡೋ ಮೊಸರು ಬಜ್ಜಿ ರುಚಿ ಸೂಪರೋ ಸೂಪರು. ಆಲೂಗಡ್ಡೆ ಜೊತೆಗೆ ನನ್ನ ಅಪ್ಪನ ಫ್ಲಾಷ್ ಬ್ಯಾಕ್ ನೆನ್ಪೂ ಇದೆ. ನಾನು ಸಣ್ಣಕ್ಕಿದ್ದಾಗ ಹಿಂಗೆ ಚಳಿ ಇದ್ದ ರಾತ್ರೇಲಿ ಅಪ್ಪ ಇದು ನೋಡು ಸಮೋಸ ಅಂತ ಕೊಡ್ಸಿದ್ರು. ಆಗ ಸಾಗರಕ್ಕೆ ಬಂದ ಮೊದಲ ಸಮೋಸ ಸರ್ದಾರ್ಜಿ ಅವರೇ ಆಗಿದ್ರೇನೋ ಅಂದ್ಕೊಂಡಿದ್ದೆ !! ಈಗ ಬಿಡಿ ಹಾದಿ ಬೀದೀಲಿ ಮಸಾಲ ಪುರಿ ಸಿಗೋ ಸುಮಾರು ಕಡೇಲೆಲ್ಲಾ ಸಮೋಸ ಸಿಗುತ್ತೆ.. ಹೈದರಾಬಾದಲ್ಲೆಂತೂ ಅದು ಭಯಂಕರ ಕಾಮನ್ ಅನ್ಸಿತ್ತು.ಅಲ್ಲಿ ಚಾರ್ ಮಿನಾರ್ ಹತ್ರ ಸೌತೆಕಾಯಿ ಮಾರಿದಂಗೆ ಹತ್ರುಪಾಯಿಗೆ ೪ ಸಮೋಸ ಮಾರ್ತಾ ಇರ್ತಾರೆ. ಆಲೂ ಬಗ್ಗೆ ಬರದು ಆಲೂ ಬೋಂಡದ ಬಗ್ಗೆ ಬರಿದೇ ಇದ್ರೆ ಹೇಗೆ. ಮೆಣಸಿನಕಾಯಿ ಬೋಂಡ ಖಾರ..ಅಂತ ಇಷ್ಟಪಡದೇ ಇದ್ದೋರಿಗೂ, ಇಷ್ಟಪಟ್ಟೋರಿಗೂ ಆಲೂ ಬೋಂಡಾ ಅಂದ್ರೆ ಇಷ್ಟಾನೆ. ಈಗಲೂ ಸುಮಾರು ಕಡೆ ಮದುವೆ ಇತ್ಯಾದಿ ಕಾರ್ಯದ ಮನೆಗಳಲ್ಲಿ ಆಲೂ ಬೋಂಡಾ ಮಾಡ್ತಾರೆ..  ಹೀಗೆ ಆಲೂಗಡ್ಡೆ ಬಗ್ಗೆ ಬರೆದಷ್ಟೂ ಇದೆ ಕಣ್ರಿ.  ಅವೆಲ್ಲಾ ಆಲೂ ತಿಂದ ಸುಮಾರು ಹೊತ್ತಿನ ಬಳಿಕ ನೆನಪಾಗೋ ಗಾಳಿಯಂತೆ ಯಾವಾಗ್ಯಾವಾಗ್ಲೋ ನೆನಪಾಗ್ತಾ ಇರುತ್ತೆ !!

ನಮ್ಕಡೆ ಎಲ್ಲಾ ವಾಯು ಅಂತ ಸುಮಾರು ಜನ ಆಲೂಗಡ್ಡೆ ತಿನ್ನೋದೆ ಇಲ್ಲ. ತಿಂದ್ರೂ ಅದಕ್ಕೆ ಜೀರಿಗೇನೂ ಅಥವಾ ಬೇರೆ ಏನಾದ್ರೂ ಪರಿಹಾರ ಯೋಚ್ನೆ ಮಾಡೇ ಇರ್ತಾರೆ. ಆದ್ರೆ ಸದ್ಯಕ್ಕಂತೂ ಆಲೂಗಡ್ಡೆ ಮರ್ತು ಊಟನೇ ಇಲ್ಲ ಅನ್ನೋ ಹಾಗಿದೆ. ಅತಿಯಾದ್ರೆ ಅಮೃತನೂ ವಿಷ ಅಂತಾರಲ್ವಾ ? ಹಾಗಾಗಿ ಆಲೂಗಡ್ಡೆ ಬಿಟ್ಟು ಬೇರೆ ಹೋಳು ಹಾಕ್ಕೊಳೋದು, ಕುಕ್ಕಿಗೆ ಪುಸಲಾಯಿಸಿ ಬೇರೆ ಸಬ್ಜಿ ಮಾಡ್ಸೋದು ಹೀಗೆ ತರಾವರಿ ಉಪಾಯ ಮಾಡ್ಬೇಕಾಗಿದೆ !  ಮನೆಗೆ ಹೋದ್ರೂ ಆಲೂಗಡ್ಡೆ ಬಿಟ್ಟು ಬೇರೆ ಏನಾರು ಮಾಡ್ಕೊ, ತಂಬಳಿ ಮಾಡು, ಚಟ್ನಿ ಮಾಡು, ಸಾರು ಮಾಡು. ಹುಳಿ ಮಾಡಿದ್ರೂ ಆಲೂಗಡ್ಡೆ ಮಾತ್ರ ಹಾಕ್ಬೇಡ ಹೇಳೇ ಹೇಳೋದು ಅಮ್ಮಂಗೆ !!

7 comments:

 1. ನಾಳೆ ನಮ್ಗೂನು ವಾಯುದೋಷ ಬರೋ ಹಾಗಿದೆ ಎಲ್ಲಾ ಕಡೆ ಆಲೂ ಸೇರಿಸಿಬಿಟ್ಟಿದ್ದೀರಿ. ನಗುವಿನ ಜೀರಿಗೆ ಎರಡು ಬಾಯ್ಗೆ ಹಾಕ್ಕೋಂಡಿದ್ದೀನಿ ಯಾವುದಕೂ ಪರಿಹಾರವಾಗಿರಲಿ ಅಂಥ.
  ಚೆನ್ನಾಗಿದೆ ಲಘು ಬರಹ ಪ್ರಶಸ್ತಿ.

  ReplyDelete
  Replies
  1. ಹಹ:-) ಧನ್ಯವಾದಗಳು ಚೌಟರೇ :-)

   Delete
 2. ಆಲೂ ಬರಹ ಚೆನ್ನಾಗಿದೆ. ಮುಂದುವರೆಯಲಿ..

  ReplyDelete
  Replies
  1. ಧನ್ಯವಾದಗಳು ಕಿಣ್ಣಣ್ಣ :-)

   Delete
 3. ಹ್ಹೆ ಹ್ಹೆ ಹ್ಹೆ! ಆಲೂ ವಿಷ್ಯ ಕೇಳಿ ಬಾಯಲ್ಲಿ ಅದೆಷ್ಟು ನೀರು ಬಂತಂದ್ರೆ ತಡೆಯೋದೆ ಕಷ್ಟಾಗಿ ಒಂದು ಅರ್ಧ ಮುಷ್ಟಿ ಬಡವರ ಬಾದಾಮಿ ಬಾಯಿಗೆ ಹಾಕಿ ಬಂದೆ! ಉಸ್ಸಪ್ಪ! ಸಕ್ಕತ್ತಾಗಿದೆ ಆಲೂ ಪುರಾಣ!

  ಆಲೂ-ಗಡ್ಡೆಗೆ ಜೈ!

  ReplyDelete
  Replies
  1. ಧನ್ಯವಾದಗಳು ಸೂರಜ್ ಹೆಗ್ಡೇರೆ. ಬಹಳ ಕಾಲದ ನಂತರ ಬ್ಲಾಗಿಗೆ ಸ್ವಾಗತ :-) ನಮ್ಮ, ನಿಮ್ಮಂತ ಆಲೂಪ್ರೇಮಿಗಳಿಂದಲೇ ’ಬಡವರ ಕಡಲೆ’ ಉಳ್ಕೊಂಡಿರೋದು !!! :-) ಮತ್ತೊಮ್ಮೆ ಮೆಚ್ಚುಗೆಗೆ ಧನ್ಯವಾದಗಳು :-)

   Delete
 4. ಕನ್ನಡಪ್ರಭದ "ಕಾಲೇಜುರಂಗ" (ಪುಟ ೧೮) ರಲ್ಲಿ ಪ್ರಕಟವಾದ ನನ್ನ ಲೇಖನ :-)

  http://www.kannadaprabha.com/pdf/epaper.asp?pdfdate=6/2/2012

  ReplyDelete