Tuesday, June 5, 2012

FB, ಮೊಬೈಲು ಮತ್ತು ನಾವು

ಲೇ ಲೇ.. ಯಾಕಿಂಗಾಡ್ತೀಯೋ,  
ಏನಾಗಿದ್ಯೋ ನಿಂಗೆ
FB ಗೆ ಯಾವಾಗ ಬಂದ್ರೂ ನೀನು ಹಾಕಿರೋ ೩-sad status ಕಾಣತ್ತೆ.  
ಮೆಸೇಜಿಗೆ ರಿಪ್ಲೆ ಇಲ್ಲ. ಫೋನ್ ಮಾಡಿದ್ರೂ ರಿಸೀವ್ ಮಾಡಲ್ಲ
ಕಾಲೇಜಲ್ಲಿ ಹೆಂಗಿದ್ದೋನು ಹೆಂಗಾಗಿದಿಯಲ್ಲೋ, ಏನೋ ಕರ್ಮ ನಿಂಗೆ 
ಪ್ರೇಮ್ ಅಂತ ಒಂದೇ ಉಸುರಿಗೆ ಬಯ್ದ ವಿಶ್ವ.  

ಹೂಂ ಕಣೋ , ನೀನೊಬ್ಬ ಕಮ್ಮಿ ಇದ್ದೆ ನೋಡು ನಂಗೆ ಬಯ್ಯಕ್ಕೆ..
ಕೆಲ್ಸ ಇಲ್ಲ ಅಂತ ನಾನು ಒದ್ದಾಡ್ತ ಇದ್ರೆ ನಿಂಗೆ ಅದು ಏನೂ ಅಲ್ಲ ಅಲ.  
ನಿಮ್ಗೇನಪ ಆರಾಮಗಿದೀರ.  
ಕಾಲೇಜು ಮುಗಿದು ಮೂರು ತಿಂಗ್ಳಲ್ಲಿ ಎಷ್ಟು ಮೆಸೇಜು ಹಾಕಿದ್ದೆ, ಎಷ್ಟು ಸಲ FB ಲಿ ಮೆಸೇಜು ಹಾಕಿದ್ದೆ, poke ಮಾಡಿದ್ದೆ,ಒಂದಕ್ಕಾದ್ರೂ ರಿಪ್ಲೆ ಮಾಡಿದ್ಯ ನೆನ್ಪು ಮಾಡ್ಕೊ.
 ಇಡೀ ದಿನ FB ಲಿ ಏನು ಮಾಡ್ತೀಯ ಅಂತ ಒಂದಿನ ಬಯ್ದಿದ್ಯಲ್ಲ, ಅವತ್ತು ಬೆಳಿಗ್ಗೆ ಅಷ್ಟೆ ನಾನು ನನ್ನ ನಂಗೇ ಲೆಕ್ಕ ಇಲ್ಲದ ಅದೆಷ್ಟನೇದೋ interview ನಲ್ಲಿ ಫೇಲಾಗಿ ಬಂದಿದ್ದೆ ಗೊತ್ತಾ?
ನಾಳೆ ಬೆಳಿಗ್ಗೆ ಯಾವ ಪೀರಿಯಡ್ ಫಸ್ಟು, internal ಗೆ ಯಾವ್ದು ಮುಖ್ಯ ಅಂತ ಒಂದೂ ಬಿಡ್ದೇ ಮೆಸೇಜು ಮಾಡ್ತಿದ್ರಿ..  
ಕ್ಲಾಸಲ್ಲಿದ್ದ ೬೦ ಜನರಲ್ಲಿ ಒಬ್ರಾದ್ರೂ ಈಗ ಬದ್ಕಿದ್ಯಾ ಸತ್ತಿದ್ಯಾ ಅಂತನಾದ್ರೂ ಮೆಸೇಜು ಮಾಡ್ತಿರೇನ್ರೋ..  
ಬಂದುಬಿಟ್ಟ ದೊಡ್ಡದಾಗಿ ಬುದ್ದಿ ಹೇಳಕ್ಕೆ ಅಂದ ಪ್ರೇಮ್..

ಈಗಿನ ತಲೆಮಾರಿನ ಪ್ರತೀ ಯುವಕ/ಯುವಕಿಯ ಬಾಳಿನ ಅವಿಭಾಜ್ಯ ಅಂಗ ಅನ್ನೋ ತರ ಆಗ್ಬುಟ್ಟಿದೆಯಲ್ಲಾ ಈ FB ಮತ್ತು ಮೊಬೈಲ್. ಉಂಡಿದ್ದು , ತಿಂದಿದ್ರಿಂದ ಹಿಡಿದು ಕೆಲ್ಸ ಸಿಕ್ಕಿದ್ದು, ಪ್ರಾಜೆಕ್ಟು ಮುಗ್ದಿದ್ದು, Internal , ಎಕ್ಸಾಂ ಬರ್ಯೋದು.. ಎಲ್ಲವೂ ಇಲ್ಲಿ Status ಗಳೇ. ದಿನಕ್ಕೆ ಕನಿಷ್ಟ ಆದ್ರೂ ೨೫-೩೦ ರಷ್ಟು ಸಂದೇಶ ಸುತ್ತಾಡ್ಸೋ ಮೊಬೈಲುಗಳು ಕೆಲವೊಂದು ಸಲ ಸ್ಮಶಾನ ಮೌನ ವಹಿಸಿಬಿಡುತ್ತೆ. ಕಾಲೇಜು ಸಮಯದಲ್ಲಿ ಪಾದರಸದಷ್ಟು ಗೆಲುವಾಗಿದ್ದೋರು ಮುಗಿದ ಕೆಲವೇ ಸಮಯದಲ್ಲಿ ಎಲ್ಲೋ ಕತ್ತಲೇಲಿ, ಯಾರಿಗೂ ಸಿಗದಂಗೆ ಮರೆಯಾಗಿಬಿಡ್ತಾರೆ. ಹಿಂಗ್ಯಾಕಾಗತ್ತೆ ಅನ್ನೋದಕ್ಕೆ ನಿರ್ದಿಷ್ಟ ಉತ್ರ ಇಲ್ದಿದ್ರೂ ಕೆಲ ಅಂಶಗಳೆಂತೂ ಸತ್ಯ...ಗುರಿ, ಬೇಸರ, ಹತಾಶೆ, ನಿರಾಸೆ.. ಅದೇ ಇಲ್ಲಿ ಪ್ರೇಮ್ ನ ಬಾಳಲ್ಲೂ ಆಗಿದ್ದು.

ಕೊನೆಯ ಎಕ್ಸಾಮು ಮುಗಿದ ದಿನ ಪ್ರೇಮಿಗೆ ತುಂಬಾ ಖುಷಿ. ಕೊನೆವರೆಗೂ ಕಾಂಟಾಕ್ಟಲ್ಲಿರೋಣ, ಎಂದೂ ಮರೀಬೇಡ ನನ್ನ ಅನ್ನೋ ಹುಡುಗಿಯರ ಮೆಸೇಜುಗಳು, ನಾಳೆ ಹಾಸ್ಟೆಲ್ ಖಾಲಿ ಮಾಡ್ತಾ ಇದೀನಿ. ಇನ್ಯಾವಾಗ್ಲಾದ್ರೂ ಸಿಗೋಣ ಲೈಫಲ್ಲಿ ಅನ್ನೋ ಪಕ್ಕದ ರೂಂ ಹುಡುಗ್ರು .. ಹಿಂಗೆ ಎಲ್ಲರ ಕಣ್ಣಲ್ಲೂ ನೀರು. ಅಂತೂ ಒಲ್ಲದ ಮನಸ್ಸಿಂದ ಊರಿಗೆ ಬಂದು ಎರಡು ದಿನ ಆಗಿತ್ತಷ್ಟೇ.. ಆಗ್ಲೇ ಮುಂದೆ ಕೆಲ್ಸ ಹುಡ್ಕಬೇಕಾದ ಅನಿವಾರ್ಯತೆ ನೆನ್ಪಾಗತೊಡಗಿತ್ತು. ಓದಕ್ಕೆ ಅಂತ ಮಾಡಿದ ಸಾಲ ಬೇರೆ ಇತ್ತಲ್ಲ.. ಗೂಗಲ್ಲು, ಮೈಕ್ರೋಸಾಫ್ಟು, ಇಂಟೆಲ್ಲು ಹೀಗೆ ದೊಡ್ಡ ದೊಡ್ಡ ಕಂಪನಿಗಳಿಗೆಲ್ಲಾ ಅರ್ಜಿ ಗುಜರಾಯಿಸಿದ. ಬೆಳಗಿಂದ ಸಂಜೆವರೆಗೆ ಅಂತರ್ಜಾಲದಲ್ಲೇ ಇದ್ದು ಸಿಕ್ಕ ಸಿಕ್ಕ ಕೆಲ್ಸಕ್ಕೆಲ್ಲಾ ಅರ್ಜಿ ಹಾಕೋದು, FB ಯಲ್ಲಿ , ಮೆಸೇಜಲ್ಲಿ ಗೆಳೆಯರಿಗೆ , Seniors ಗೆ ಎಲ್ಲಾದ್ರೂ ಉದ್ಯೋಗ ಇದ್ಯಾ ಅಂತ ಕೇಳೋದು.. ಇದೇ ಆಯ್ತು.

ಹಂಗೂ ಹಿಂಗೂ ಒಂದು ತಿಂಗ್ಳಾಯ್ತು. ಅಕ್ಕ ಪಕ್ಕದ ಮನೆ ಅವ್ರೆಲ್ಲಾ ಬಂದು ನಿಮ್ಮಗನಿಗೆ ಇನ್ನೂ ಕೆಲ್ಸ ಸಿಕ್ಕಿಲ್ವಾ, ನನ್ನ ಅಕ್ಕನ ಮಗಳಿಗೆ ಆ ಕಂಪೆನಿ, ಮಾವನ ಮಗಂಗೆ ಈ ಕಂಪನಿ ಅಂತ ಶುರು ಮಾಡೋರು. ಇವ್ರಿಗೆ ನೆರೆ-ಹೊರೆ ಅಂತ ಇಟ್ಟಿರೋ ಹೆಸ್ರಲ್ಲಿ ನೆರವಾಗಕ್ಕಾಗ್ದಿದ್ರೂ ಹೊರೆ ಆಗಿ ಹೆಸ್ರು ಸಾರ್ಥಕ ಮಾಡ್ಕೊಳ್ತಾರೆ. ನಾನು ಹೆಂಗಿದ್ರೆ ಇವ್ರಿಗೇನು ಅಂತ ಅನೇಕ ಸಲ ಗೊಣಗಿದ್ದ ಪ್ರೇಮ್. ಮನೇಲೆ ಖಾಲಿ ಕೂತು ಕೂತು ಬೇಜಾರು ಬೇರೆ. ಮುಂಚೆ ಎಲ್ಲಾ ದಿನಕ್ಕೆ ಐವತ್ತು ಸಲವಾದ್ರೂ ಹೊಡ್ಕೊಳ್ತಾ ಇದ್ದ ಸೆಲ್ಲು ಈಗ ತಣ್ಣಗೆ ಬಿದ್ಕೊಂಡಿರ್ತಿತ್ತು. ಮುಂಚೆ ಎಲ್ಲಾ ದಿನಾ ಫಾರ್ವಡ್ರು ಕಳುಸ್ತಿದ್ದವ್ರುದ್ದೂ ಈಗ ಸುದ್ದಿ ಇಲ್ಲ.ದಿನಾ ಬೆಳಗ್ಗೆ ಅತ್ವಾ ರಾತ್ರೆ ಇವ್ನು ತನ್ನ ಸೆಲ್ಲಲ್ಲಿರೋ ಎಲ್ಲ ಗೆಳೆಯರಿಗೂ ಮೆಸೇಜಿಸೋ ಅಭ್ಯಾಸನೂ ಮಾಡ್ಕಂಡಿದ್ದ ಊರಿಗೆ ಬಂದ ಹೊಸದ್ರಲ್ಲಿ. ಆದ್ರೆ ಈಗ ಅದೂ ಇಲ್ಲ. ರಿಪ್ಲೇನೆ ಇಲ್ಲ ಅಂದ್ರೆ one-way ಆಗಿ ಎಷ್ಟು ಮೆಸೇಜು ಅಂತ ಕಳ್ಸೋದು?

ಹಿಂಗೇ ಮತ್ತೊಂದು ತಿಂಗ್ಳೂ ಆಯ್ತು. ಯಾವ್ದೂ ಕೆಲ್ಸ ಇಲ್ಲ. ದೊಡ್ಡ ಕಂಪೆನಿಗಳು ಸಾಯ್ಲಿ ಅಂತ ಸಣ್ಣಸಣ್ಣದಕ್ಕೆ ಹಾಕದಕ್ಕೆ ಶುರು ಮಾಡಿದ್ದ ಈಗ ಪ್ರೇಮ್. ಕೇಳಿದ ನೆಂಟ್ರೆಲ್ಲಾ ಕ್ಯಾಂಪಸಲ್ಲಿ ಆಗಿಲ್ವಾ ಅಂತ ಇವ್ನಿಗೆ ಹಂಗ್ಸೋರು. ಆಮೇಲೆ ನೆಂಟ ಅನ್ನೋ ಸಂಕಟಕ್ಕೆ ಆಮೇಲೆ ನೋಡ್ತೀನಿ ಅನ್ನೋರು. ಹೀಗೆ ೨-೩ ಸಲ ಸುಮಾರು ಜನ ಕೇಳಿದ ಮೇಲೆ ಈ ನೆಂಟ್ರೆಲ್ಲಾ ಹಿಂಗೇ ಅಂತ ಗೊತ್ತಾಯ್ತು ಪ್ರೇಮಿಗೆ. ಇಂಟರ್ನಶಿಪ್ ಮಾಡಿದ್ರೆ, ಸರ್ಟಿಫಿಕೇಟ್ ಇದ್ರೆ ಅತ್ವಾ ರೆಫರೆನ್ಸ್ ಇದ್ರೆ ಅತ್ವಾ ಒಳ್ಳೇ ಪರ್ಸಂಟೇಜ್ ಇದ್ರೆ ಮಾತ್ರ ದೊಡ್ಡ ದೊಡ್ಡ ಕಂಪೆನಿಗಳೆಲ್ಲಾ ಕರೀತಾರೆ. ಇಲ್ಲಾಂದ್ರೆ ಹಾಕಿರೋ ಸಾವಿರಾರು ಅರ್ಜಿಗಳಲ್ಲಿ ನಿನ್ನ ಮೂಸೂ ನೋಡಲ್ಲ ಅಂದ ಒಬ್ಬ ಗೆಳೆಯ

ಇರೋ ಬೇಜಾರನ್ನ ಯಾರತ್ರ ಅಂತ ಹೇಳ್ಕೋಳ್ಳೋದು? ಅಪ್ಪ-ಅಮ್ಮಂಗೆ ಹೇಳ್ಕೊಂಡ್ರೆ ಅವ್ರು ಮತ್ತೂ ಬೇಜಾರಾಗ್ತಾರೆ. ಇವ್ನು ಹೀಗೇ ಬೇಜಾರು ಅಂತ ಹಾಕಿದ ಮೆಸೇಜುಗಳು ಇವ್ನ ಹೆಚ್ಚಿನ (ಹಳೆ)ಗೆಳೆಯರಿಗೆ ಹೋಗ್ತಾನೆ ಇರಲಿಲ್ಲ. ಸುಮಾರು ಜನ ನಂಬರ್ನೇ ಬದಲಾಯಿಸಿದ್ರೂ ಇವ್ನಿಗೆ ಕೊಟ್ಟಿರಲಿಲ್ಲ. ಏನೋ ದಿನಾ ನಿಂಕ್ಲಾಸು ಹುಡ್ಗೀರಿಗೆ ರೋದನೆ ಮೆಸೇಜು ಹಾಕಿ ಗೋಳು ಕೊಡ್ತೀಯಂತೆ ಅಂತ ಪಕ್ಕದ ಕ್ಲಾಸವ್ನೊಬ್ಬ ಬೇರೆ ಮೊನ್ನೆ ಹೇಳಿದ್ದ. ಹಾಗಾಗಿ ಹುಡ್ಗೀರ ನಂಬರನ್ನ ಇವನೇ ಅಳಿಸಿ ಹಾಕಿದ್ದ. ಅವ್ರೆಲ್ಲಿದಾರೋ ಚೆನ್ನಾಗಿ ಇರ್ಲಿ. ನನ್ನ "ಗೋಳು" ಅವ್ರಿಗೆ ಮುಟ್ದೇ ಇರ್ಲಿ ಅಂತ..ಆದ್ರೆ ಈ ಹಾಳಾದ ಬೇಜಾರು ಅನ್ನೋದು ಯಾರಿಗಾದ್ರೂ ಹೇಳ್ಕಳದಿದ್ರೆ ಕಮ್ಮಿ ಆಗೊಲ್ವಲ್ಲ ಅಂತ FB status ಗಳ ಮರೆ ಹೋಗಿದ್ದ ಪ್ರೇಮ್.FB ನಲ್ಲಿ ಇವ್ನು ಮೆಸೇಜು ಮಾಡಿದ ಕೂಡ್ಲೇ Offline ಹೋಗಿ ಬಿಡ್ತಿದ್ರು ಇವ್ನ ನೆಂಟ್ರು, ಗೆಳೆಯರೆಲ್ಲಾ.. ಒಳ್ಳೇ ಟಾರ್ಚರ್ ಕೇಸು ಅಂತ..
ಈಗ Good Bye all, Deleting FB Account ಅಂತ status ಹಾಕಿದ್ದಕ್ಕೆ ವಿಶ್ವನ ಕೈಲಿ ಬಯ್ಗುಳ ಸಿಕ್ಕಿತ್ತು !!..


ಕಾಲೇಜು ಮುಗಿದ ದಿನದಿಂದ್ಲೇ ಬೇಜಾರು ಸಾರಿಕಾಗೆ.ಕೆಲ್ಸ ಏನೋ ಸಿಕ್ಕಿತ್ತು. ಆದ್ರೆ ಜಾಯಿನ್ ಆಗಕ್ಕೆ ಇನ್ನೂ ಸುಮಾರು ಸಮಯ ಇತ್ತು. ಮನೇಲಿ ಬೇಜಾರಾಗ್ಡೇ ಇರ್ಲಿ ಅಂತ ಇಂಟರ್ನೆಟ್ ಹಾಕಸ್ಕಂಡಿದ್ಲು ಸಾರಿ.ಮೊನ್ನೆ ಯಾವನೋ ಗೊತ್ತಿಲ್ದೇ ಇರೋನ Friendship ರಿಕ್ವೆಸ್ಟ್ ಬಂದಿತ್ತು. ಯಾರು ಅಂತ ಗೊತ್ತೇ ಇಲ್ಲ ಅಂತ delete ಮಾಡಿದ್ಲು. ಸ್ವಲ್ಪ ದಿನ ಆದ್ಮೇಲೆ ಮತ್ತದೇ ವ್ಯಕ್ತೀದು. ನಿಮಗೆ ನಾನು ಗೊತ್ತ ಅಂತ ಮೆಸೇಜು ಹಾಕಿದ್ಲು. ಸಾರಿ, ಗೊತ್ತಿಲ್ಲ. suggestion ತೋರುಸ್ತು ಕಳ್ಸಿದೆ. ನಾವು FB ಲಿ ಗೆಳೆಯರಾಗ್ಬೋದಲ್ವಾ ಅಂತ ಉತ್ರ ಬಂದಿತ್ತು. ಹೂಂ ಅಂತ ಸಂತೋಷದಿಂದ್ಲೇ ಒಪ್ಪಿದ್ಲು. ಕೊನೆಗೆ ಇವಳು ಹಾಕಿದ್ದ ಫೋಟೋಗಳಿಗೆಲ್ಲಾ awesome, superb ಅಂತೆಲ್ಲಾ ಕಾಮೆಂಟುಗಳು ಬೀಳದು, ಪ್ರತಿಯೊಂದಕ್ಕೂ ಲೈಕುಗಳು ಬೀಳೋದು ಶುರು ಆಯ್ತು. ಇವತ್ತಿನ ಫೋಟೋ ಸಖತ್ತಾಗಿದೆ ಅನ್ನೋ ಮೆಸೇಜುಗಳೂ ಬರೋಕೆ ಶುರು ಆದ್ವು.ಇವ್ಳು ಫೋನ್ ನಂಬರೊಂದು ಕೊಟ್ಟಿರ್ಲಿಲ್ಲ .

ಯಾಕೋ ಒಂದಿನ ಇದ್ದಕ್ಕಿದ್ದಾಗ ನಿನ್ನ ಪ್ರೀತಿಸ್ತೀನಿ ಅಂತ ಮೆಸೇಜ್ ಹಾಕ್ದ. ಸಾರಿ ನಾನಿನ್ನ ಆ ತರ ನೋಡೇ ಇಲ್ಲ. ಸುಮ್ನೆ ಗೆಳೆಯನ ತರಹ ನೋಡಿದೀನಿ ಅಷ್ಟೇ ಅಂದ್ಲು. ಆಮೇಲಿಂದ ಇವ್ಳು ಆನ್ ಲೈನ್ ಹೋದಾಗೆಲ್ಲಾ ಅವ್ನ ಮೆಸೇಜುಗಳೇ ಕಾಣಕ್ಕೆ ಶುರು ಆದ್ವು.ದಿನಾ ಹೊಸ ತರ ರೋದನೆ. ನೀನಿಲ್ದೇ ನಾನಿಲ್ಲ. ನೀನಿಲ್ದೇ ಹೋದ್ರೆ ನಾ FB ಅಕೌಂಟ್ನೇ ಡಿಲಿಟ್ ಮಾಡ್ಬಿಟ್ತೀನಿ. ನನ್ಯಾಕೆ ಅವಾಯ್ಡ್ ಮಾಡ್ತೀಯ ಅಂತೆಲ್ಲಾ ಶುರು ಆಯ್ತು. ಅವ್ಳಿಗಷ್ಟೇ ಅಲ್ಲದೇ ಅವಳ ಗೆಳತಿಯರಿಗೂ ಅವಳಿಗೆ ಸಮಾಧಾನ ಹೇಳಿ ಅಂತ ಮೆಸೇಜು ಹಾಕ್ತಿದ್ದ. ಕೊನೆಗೊಂದು ದಿನ ಸಾರಿ ಗೆಳತಿ ಸಾರಿಗೆ ನಿಂಗೆ ಮೆಸೇಜು ಹಾಕ್ತಿರೋ ವ್ಯಕ್ತಿ ಸರಿ ಇಲ್ಲ ಅನ್ಸುತ್ತೆ ಅಂದ್ಲು. ಅವ್ನು ಅವ್ಳ ಫ್ರೆಂಡ್ ಲಿಸ್ಟಲ್ಲೂ ಇದ್ನಂತೆ. ಯಾವುದೋ ದಿನ ಯಾರದೋ ಫೋಟೋಗೆ ಆ ವ್ಯಕ್ತಿ ಅಶ್ಲೀಲವಾಗಿ ಕಾಮೆಂಟಿಸಿದ್ದನ್ನ ನೋಡಿ ಅವನನ್ನ ಗೆಳೆತನದಿಂದ್ಲೇ ತೆಗೆದು ಹಾಕಿದ್ಲು.. ಅವತ್ತಿಂದ ಸಾರಿ FB ಕಡೆ ಹೋಗೋದೆ ಕಡ್ಮೆ ಮಾಡಿದಾಳೆ. ಯಾರು ರಿಕ್ವೆಸ್ಟ್ ಕಳ್ಸಿದ್ರೂ accept ಮಾಡಲ್ಲ, ಭಾರಿ ಜಂಬ ಅಂತ ಸುಮಾರು ಜನ ಹಿಂದೆ ಬಿಟ್ಟು ಹೇಳ್ತಾರೆ. ಆದ್ರೆ ಸಾರಿ ಅದಕ್ಕೆಲ್ಲಾ ತಲೆ ಕೆಡ್ಸಿ ಕೊಳ್ಳೊಲ್ಲ. ಗೊತ್ತಿರೋರನ್ನ ಮಾತ್ರ ಗೆಳೆಯರನ್ನಾಗಿಸೋದು FB ಲಿ...


ಎರಡೂ ಸ್ವಲ್ಪ ಬೇರೆ ಬೇರೆನೆ ಕಥೆ. ಆದ್ರೆ ಎರಡರಲ್ಲೂ ಇದ್ದಿದ್ದು ನಾವು ನಮ್ಮ ಜೊತೆಗೆ ಇರೋರನ್ನ ಬಿಟ್ಟು ಈ ಮೊಬೈಲು, FB ಹೀಗೆ virtual world ನಲ್ಲೇ ಹೇಗೆ ಬದುಕ್ತಾ ಇದೀವಲ್ಲ ಅಂತ.. ಅದ್ರಲ್ಲಿ ಯಾರೋ ಏನೋ ಕಾಮೆಂಟು ಹಾಕಿದ್ರು, ಇವತ್ತು ಹಾಕಿದ ಫೋಟೋಗೆ ಕಾಮೆಂಟು ಬಿದ್ದಿಲ್ಲ, ಲೈಕು ಬಿದ್ದಿಲ್ಲ. ನನ್ನ ಪೋಸ್ಟು ಓದದೇ ಮತ್ತೊಂದು ದರಿದ್ರ ಪೋಸ್ಟಿಗೆ ಹೊಗಳ್ತಾ ಇದಾರಲ್ಲಾ.. ನಂಗೆ ಬೈದಿದ್ದಕ್ಕೆಲ್ಲಾ ಲೈಕು ಒತ್ತತಾರಲ್ಲಾ.. ಹಿಂಗೆ ಪ್ರತಿಯೊಂದಕ್ಕೂ ತಲೆ ಕೆಡಿಸಿಕೊಳ್ತಾ ಇದೀವಲ್ಲಾ.. ಈ ತರದ ಮನೋಭಾವದ ಬಗ್ಗೆ.ತಂತ್ರಜ್ನಾನವನ್ನ ಈ ತರ ಹ್ಸಚ್ಕೊಳ್ಳೋದು ಒಳ್ಳೇದೋ ಕೆಟ್ಟದ್ದೋ ಗೊತ್ತಿಲ್ಲ. ಪ್ರೇಮ್, ಸಾರಿ ಅಂತವರು ನಿಮ್ಮ್ ಮಧ್ಯೆನೂ ಇರಬಹುದು . ಅಂತ ಘಟನೆಗಳನ್ನ ನೀವೂ ನೋಡಿರಬಹುದು, ಕೇಳಿರಬಹುದು. ಹಾಗಾಗಿ ತೀರ್ಮಾನ ನಿಮ್ಮದೇ..

6 comments:

  1. ಹೌದು.. ಫೇಸ್ ಬುಕ್ ತೀರಾ ಆದ್ರೆ ಒಳ್ಳೆದಲ್ಲ.. ಯಾವ್ದದ್ರೂ ಅತಿ ಸರ್ವತ್ರ ವರ್ಜಯೇತ್.. ಅಲ್ಲವೇ..? ಎಚ್ಚರಿಕೆ ಅಗತ್ಯ.. ಒಳ್ಳೆ ಬರಹ..

    ReplyDelete
    Replies
    1. ಧನ್ಯವಾದಗಳು ಅಕ್ಕಾ :-) ನೀವು ಹೇಳದು ಸರಿ :)

      Delete
  2. face book is another way of wasting time after TV.

    ReplyDelete
  3. ಯಾವುದೇ ವಿಚಾರದಲ್ಲಿಯೇ ಆದರೂ, ಯಾವುದು,ಎಲ್ಲಿ,ಎಷ್ಟು, ಹೇಗೆ ಎ೦ಬ ಆಲೋಚನೆ ಮಾಡಿದರೆ ಮು೦ದೊದಗುವ ತಾಪತ್ರಯಗಳಿ೦ದ ದೂರವಿರಬಹುದು.
    ಸೂಕ್ತ ಎಚ್ಚರ ನೀಡುವ ಬರಹ.

    ReplyDelete
    Replies
    1. ಹೌದಲ್ವಾ ಲತಾಕ್ಕ.. ಮೆಚ್ಚುಗೆಗೆ ಧನ್ಯವಾದಗಳು :-)

      Delete