Monday, February 25, 2013

ಹೀಗೊಂದು ಕಥೆ

ಗುಂಡಣ್ಣಂಗೆ ಕಥೆ ಬರೀಬೇಕು ಅನ್ನೋದೊಂದು ಕನಸು. ಮಾಲಳ್ಳಿ ಮಾಲಜ್ಜಿ ಮತ್ತು ಮಾಳ ಬೆಕ್ಕು, ಕುಂದಾಪ್ರುದ ಕಥೆ, ಮೂರಳ್ಳಿ ಕೋಟೆಯಲ್ಲೊಂದು ರಾತ್ರಿ, ನೀರ ರಾಣಿ ಮತ್ತು ನಂಜುಳ್ಳೆ.. ಹೀಗೆ ಹಲವಾರು ಶೀರ್ಷಿಕೆಗಳು, ಅರ್ದಂಬರ್ದ ಐಡಿಯಾಗಳು ಹೊಳೆದರೂ ಅದ್ಯಾವ್ದೂ ಕಥೆಯ ಮೂರ್ತ ರೂಪ ತಾಳ್ತಿರಲಿಲ್ಲ. ನಾಳೆ ಕಥೆ ಬರ್ದೇ ಬರೀತೀನಿ ಅಂತ ಪ್ರತೀದಿನ ರಾತ್ರೆ ಮಲಗೋವಾಗ ನಿರ್ಧಾರ ಮಾಡಿದರೂ ಮಾರ್ನೇ ದಿನ ಬೆಳಗಾಗಿ, ಮಧ್ಯಾಹ್ನ ಆಗಿ ಮತ್ತೆ ರಾತ್ರೆ ಆಗೇ ಬಿಡ್ತಿತ್ತು ! ಹೀಗೆ ದಿನಗಳು , ತಿಂಗಳುಗಳು ಉರುಳುತ್ತಿರಲು ಅವನ ಮನಸಲ್ಲಿ ಓಡುತ್ತಿದ್ದ ಕಥೆಯ ಕನಸುಗಳು ಕ್ರಮೇಣ ನಡೆಯೋಕೆ ಪ್ರಾರಂಭ ಮಾಡಿ, ತೆವಳಲಾರಂಭಿಸಿದ್ವು.ಕಥೆ ಬರೀಬೇಕು ಅಂತ ಗಂಟೆಗಟ್ಲೆ ಕೂರ್ತೂ ಒಂದು ಐಡಿಯಾಗಳೂ ತಲೆಗೆ ಬರದೇ ತನ್ನೊಳಗಿನ ಕಥೆಗಾರ ಸತ್ತೇ ಹೋದನಾ ಅಂತ ಗುಂಡಣ್ಣನ ಮನಸ್ಸಲ್ಲೇ ಗುಂಗಿ ಹುಳ ಕೊರೆಯೋಕೆ ಶುರು ಆಯ್ತು.

ಹೀಗೇ ಒಂದು ಶುಕ್ರವಾರ ಬಸ್ಸ ಕಿಟಕಿ ಸೀಟಲ್ಲಿ ಕೂತಿದ್ದ ಗುಂಡಣ್ಣನ ಭುಜಕ್ಕೆ ತಣ್ಣನೆಯದೇನೋ ಸವರಿದಂತಾಯ್ತು. ಏನಾಗ್ತಿದೆ ಅಂತ ಗೊತ್ತಾಗೋದ್ರೊಳಗೆ ಕಣ್ಣಗಳು ಮಂಜಾಗಿ ಬಣ್ಣ ಬಣ್ಣದ ಹೂಗಳ ಚಿತ್ರಗಳು ಮೂಡೋಕೆ ಶುರು ಆಯ್ತು. ಯಾವ್ದೋ ಬೆಕ್ಕೊಂದು ಕೂಗಿದ ಸದ್ದು ಕೇಳಿ ಎಚ್ಚರ ಆಯ್ತು. ಸುತ್ತ ಎಲ್ಲಿ ನೋಡಿದರೂ ಕತ್ತಲೆ. ಮಲಗಿರೋ ಗುಂಡಣ್ಣನ ಮೈಮೇಲೆ ಬೆಚ್ಚನೆಯ ಕಂಬಳಿಗಳ ಹೊದಿಕೆ. ಸುತ್ತ ಕೈ ಆಡಿಸಿದರೆ ಚಾಪೆಯ ಮೇಲೆ ಹಾಸಿದ್ದ ಹಾಸಿಗೆ ಬಿಟ್ಟು ಬೇರೇನೂ ಸಿಗ್ತಿಲ್ಲ. ಹೊರಗೆ ಉಧೋ ಅಂತ ಸುರೀತಿರೋ ಮಳೆಯ ಶಬ್ದ, ರಚ್ಚೆ ಹಿಡಿದ ಮಗುವಿನ ಅಳುವಂತೆ ಒಂದೇ ಸಮನೆ ಜೀಂಗುಡುವ ಝೀರುಂಡೆ ಶಬ್ದ ಬಿಟ್ಟರೆ ಬೇರೇನೂ ಇಲ್ಲ. ಹೀಗಿರಲು ಗುಂಡಣ್ಣಂಗೆ ಬಾಯಾರಿಕೆ ಶುರು ಆಯ್ತು.ಪಕ್ಕ ಎಲ್ಲಿ ತಡಕಿದರೂ ನೀರಿ ಲೋಟವೋ, ಚಂಬೋ ಸಿಗ್ಲಿಲ್ಲ. ತಾನೆಲ್ಲಿದ್ದೇನೆ ಮೊದಲೇ ಗೊತ್ತಿಲ್ಲ.ಸರಿ, ಮೇಲೆದ್ದು ಗೋಡೆಯೆಲ್ಲಾ ಲೈಟಿನ ಸ್ವಿಚ್ಚಿಗಾಗಿ ತಡಕಿದ. ತಾನೆಲ್ಲಿದ್ದೇನೆ ಅಂತ ಗೊತ್ತಾಗದಿದ್ದರೂ ಯಾವುದೋ ಮನೆಯ ಅಟ್ಟದ ಮೇಲಿರಬಹುದು ಅನಿಸಿತು. ಹೀಗೆ ಗೋಡೆ ಹಿಡಿದು ಸಾಗುತ್ತಿರುವಾಗ ಕಾಲಿಗೆ ಏನೋ ಸಿಕ್ಕಿದಂತಾಯ್ತು. ಇವನ ಕಾಲಿಗೆ ಸಿಕ್ಕಿದ ವಸ್ತು ಪಕ್ಕನೆ ಈ ಬದಿಗೆ ಜರುಗೋದಕ್ಕೂ, ಹಿಂದೆಲ್ಲಿಂದಲೋ ಬೆಕ್ಕೊಂದು ಕೂಗೋದಕ್ಕೂ ಸರಿ ಆಯ್ತು. "ಏ ಹಾಳು ಮಾಳ ಬೆಕ್ಕೇ, ನಿದ್ದೆ ಮಾಡಕ್ಕೂ ಬಿಡದಿಲ್ಯನ" ಅಂತ ಹೆಣ್ಣಿನ ಗದರೋ ದನಿ ಬಂತು ! ಭಯದಿಂದ ಒಣಗಿದ ಗಂಟಲಲ್ಲಿ ಕೂಗೂ ಹೊರಬರದೇ ಗುಂಡಣ್ಣ ಹಾಗೇ ಹಿಂದೆ ಹೆಜ್ಜೆ ಇಟ್ಟ.

ಹಾಸಿಗೆಯಲ್ಲಿ ಮಲಗಿದ್ದ ಗುಂಡಣ್ಣಂಗೆ ಮೈಯೆಲ್ಲಾ ಒದ್ದೆಯಾದ ಅನುಭವ. ಎದ್ದು ನೋಡಿದರೆ ಅದು ನೀರಲ್ಲ, ಬೆವರು. ಮೈಮೇಲಿ ಕಂಬಳಿಯಿರಲಿಲ್ಲ. ಇದ್ದೊಂದು ಬೆಡ್ ಶೀಟಿಗೇ ಈ ಪಾಟೀ ಬೆವರೇ ? ಯಾಕೋ ಸೆಖೆ. ಮತ್ತೆ ನೀರಡಿಕೆಯ ನೆನಪು. ಸರಿ ಅಂತ ಮತ್ತೆ ಏಳೋಕೆ ಹೋದ್ರೆ, ಕೈ ನೆಲಕ್ಕೆ ಸಿಗದೇ ಜೋಲಿತು. ಅತ್ತಿತ್ತ ತಡವಿ ನೋಡಿದರೆ ಇವ ಮಲಗಿರೋದು ನೆಲದ ಹಾಸಿಗೆಯ ಮೇಲಲ್ಲ, ಮಂಚದ ಮೇಲೆ ! ಹೇಗೋ ಎದ್ದು ಮತ್ತೆ ಗೋಡೆ ತಡವುತ್ತಿರೊವಾಗ ಸ್ವಿಚ್ಚೊಂದು ಸಿಕ್ಕಿತು. ಅದನ್ನ ಹಾಕಿದ್ರೆ ಪಕ್ಕದಲ್ಲಿ ಬುಸ್ಸಂತ ಶಬ್ದ ! ಅದನ್ನು ಹಾಗೇ ಆಫ್ ಮಾಡಿ ಉಳಿದ ಸ್ವಿಚ್ಗಳಿಗೆ ಹುಡುಕಾಟ. ಮತ್ತೊಂದು ಸ್ವಿಚ್ಚಿನಿಂದ ಬೆಗ್ಗನೆ ಬೆಳಗಾಯ್ತು. ಸುತ್ತ ನೋಡಿದಾಗ ಸಣ್ಣ ಕೋಣೆಯೊಂದರಲ್ಲಿ ಮಲಗಿದ್ದೀನಿ ಅಂತ ಗೊತ್ತಾಯ್ತು ಗುಂಡಣ್ಣಂಗೆ . ಹೊರಗೆ ನೋಡಿದರೆ ಹುಣ್ಣಿಮೆ ಬೆಳಕಲ್ಲಿ ದೂರದ ತೆಂಗು, ಕಂಗಿನ ಮರಗಳ ಬಳುಕಾಟ. ಒಳಗಿನ ಸೆಖೆ ತಡೆಯೋಕಾಗ್ದೇ ಗುಂಡಣ್ಣ ಕಿಟಕಿ ತೆಗೆದಾಗ ಮತ್ತೆ ಮೈಯೆಲ್ಲಾ ತಣ್ಣಗಾದ ಅನುಭವ.

ಯಾಕೋ ತುಂಬಾ ಛಳಿ ಅನಿಸಿ ಮತ್ತೆ ಎಚ್ಚರ ಆಯ್ತು ಗುಂಡಣ್ಣಂಗೆ. ತಾನೆಲ್ಲಿದ್ದೀನಿ ಅನ್ನೋದು ಎಂದಿನಂತೆ ಮತ್ತೆ ಡೌಟು. ಈಗ್ಯಾಕೋ ಮಲಗಿರೋದು ಹಾಸಿಗೆಯ ಮೇಲೋ ಕಲ್ಲಿನ ಮೇಲೋ ಅನ್ನೋ ಡೌಟು ಬಂತು. ಸುತ್ತ ಕೈಯಾಡಿಸಿದರೆ ಚಾಪೆಯೂ ಇಲ್ಲ, ಮಂಚವೂ ಇಲ್ಲ. ಕೈಗೆ ಎಲೆಗಳ ತರ ಏನೋ ಸಿಕ್ಕಂತೆ ಅನುಭವ ! ದೂರದಲ್ಲೆಲ್ಲೋ ಪಾಳೆಗಾರ ಕೂಗು. ತಾನೆಲ್ಲಿದ್ದೇನೆ ಅನ್ನೋದು ಗುಂಡಣ್ಣಂಗೆ ಮತ್ತೆ ಅಯೋಮಯ. ಎದ್ದು ಸುತ್ತೆಲ್ಲಾ ತಡಕಿದರೂ ಗೋಡೆಯೂ ಇಲ್ಲ, ಏನೂ ಇಲ್ಲ. ಹೆಜ್ಜೆ ಹೆಜ್ಜೆಗೆ ಸಿಗೋ ಕಲ್ಲು, ಮರಗಳು ! ಹಾಗೇ ಸ್ವಲ್ಪ ದೂರ ಸಾಗಿದಾಗ ಮೋಡಗಳ ಮರೆಯಿಂದ ಹಣುಕುತ್ತಿದ್ದ ಚಂದ್ರ ಕಂಡ. ಮರದ ಮರೆಯಲ್ಲೇ ಎಲ್ಲೋ ಮಲಗಿದ್ದ ಗುಂಡಣ್ಣ ಹೊರಬಂದು ನೋಡಿದರೆ ದೂರದಲ್ಲೆಲ್ಲಾ ಕೋಟೆಯ ಪಾಳುಬಿದ್ದ ಗೋಡೆಗಳು, ಕಂದಕಗಳು ಕಾಣೋಕೆ ಶುರು ಆದವು. ಛಳಿಯಿಂದ ನಡುಗುತ್ತಿದ್ದ ಗುಂಡಣ್ಣನಿಗೆ ಅಲ್ಲೇ ಕೋಟೆಯ ಗೋಡೆಯ ಮೂಲೆಯೊಂದರಲ್ಲಿ ಬೆಂಕಿಯಂತೇನೋ ಕಂಡಿತು.ಛಳಿಯಿಂದ ನಡುಗಿ ಸಾಯೋದನ್ನು ತಪ್ಪಿಸಲು, ಮೈಕಾಯಿಸಿಕೊಳ್ಳೋ ಬೆಂಕಿಯ ಆಸೆಯಿಂದ ಅತ್ತ ಹೆಜ್ಜೆ ಹಾಕಿದ. ಅಲ್ಲಿ  ಆದರೆ ಬೆಂಕಿಯ ಜೊತೆಗೇ, ಪಕ್ಕದಲ್ಲಿ ಒಲೆಯೊಂದು ಉರಿಯುತ್ತಿತ್ತು.ಅದರ ಮೇಲಿಟ್ಟಿದ್ದ ಅಕ್ಕಿ ಕೊತ ಕೊತ ಕುದಿಯುತ್ತಾ ಅನ್ನವಾಗುವ ಸಿದ್ದತೆಯಲ್ಲಿತ್ತು. ಆದರೆ ಬೆಂಕಿಯ ಪಕ್ಕ ಯಾರೂ ಇರಲಿಲ್ಲ. ಅನ್ನ ನೋಡಿದೊಡನೆಯೇ ಗುಂಡಣ್ಣನಿಗೆ ಹಸಿವು, ಬಾಯಾರಿಕೆಗಳು ಮತ್ತೆ ನೆನಪಾದವು. ಅಲ್ಲೇ ನೀರನ್ನು ಹುಡುಕುತ್ತಿರುವಾಗ ಯಾರೋ ಹೆಗಲ ಮೇಲೆ ಕೈಯಿಟ್ಟಂತಾಯಿತು. ಅತ್ತ ತಿರುಗಿದಾಗ ಎರಡು ಜೊತೆ ಕಣ್ಣುಗಳನ್ನು ನೋಡಿದ್ದೊಂದೇ ನೆನಪು.

ಮತ್ತೆ ಕೈಯೆಲ್ಲಾ ಒದ್ದೆಯಾದ ಅನುಭವ. ಪಕ್ಕನೆ ಕಣ್ಣು ಬಿಟ್ಟ ಗುಂಡಣ್ಣನಿಗೆ ತನ್ನ ಕೈ ಹುಲ್ಲಿನ ಮೇಲಿದ್ದಂತೆ  ಅನಿಸಿತು! ಪ್ರತ್ಯೂಷ ಸಮಯದ ಚಳಿ, ಮಸುಕಾಗುತ್ತಿರೋ ರಾತ್ರಿ, ತಯಾರಾಗುತ್ತಿರೋ ಮುಂಜಾನೆಗಳ ದ್ವಂದ್ವದ ಜೊತೆ ತಾನೆಲ್ಲಿದ್ದೇನೆ ಅನ್ನೋ ದ್ವಂದ್ವವೂ ಗುಂಡಣ್ಣಂಗೆ ಕಾಡೋಕೆ ಶುರು ಆಯ್ತು. ಪಕ್ಕ ಕೈಯಾಡಿಸಿದರೆ ಸಿಕ್ಕಿದೆಲ್ಲಾ ಹುಲ್ಲೇ ! ನದಿಯೊಂದು ಹರೀತಿರೋ ಶಬ್ದ. ಹಾಗೇ ಎದ್ದು ನೋಡಿದರೆ ಆ ಮಸುಕು ಬೆಳಕಲ್ಲಿ ಕಂಡಿದ್ದು ನದಿ ತೀರ. ನದಿಯನ್ನು ನೋಡಿದೊಡನೆಯೇ ಮತ್ತೆ ಬಾಯಾರಿಕೆಯ ನೆನಪಾಯ್ತು. ಹೊಳೆಯಾದರೇನು, ನದಿಯಾದರೇನು, ಬಾಯಾರಿದರೆ ಸಾಕೆಂದು ನೀರ ಹರಿವಿನ ಶಬ್ದ ಬಂದತ್ತ ಹೆಜ್ಜೆ ಹಾಕಿದ. ಇದ್ದಕ್ಕಿದ್ದಂತೆ ಕಾಲು ಹುಗಿಯೋಕೆ ಶುರು ಆಯ್ತು. ಏನಾಗ್ತಿದೆ ಅಂತ ನೋಡೊದ್ರೊಳಗೆ ಗುಂಡಣ್ಣ ಮುಳುಗೋಕೆ ಶುರು ಆದ. ಮುಳು ಮುಳುಗಿ ಕೆಸರು, ಎದೆ ಮಟ್ಟಕ್ಕೆ ಬಂತು, ಕುತ್ತಿಗೆಗೂ ಬಂತು. ತಾನು ಸತ್ತೆ ಅಂದುಕೊಳ್ಳುವಷ್ಟರಲ್ಲಿ ಮೆತ್ತನೆಯ ವಸ್ತುವೊಂದು ಇವನನ್ನು ಹಿಡಿದು ಮೇಲಕ್ಕೆ ಎಳೆದಂತಾಯಿತು. ಕುತ್ತಿಗೆಯವರೆಗೂ ಬಂದಿದ್ದ ಕೆಸರು ಮೂಗಿನವರೆಗೂ ಬಂದು ಒಳನುಗ್ಗಲಾರಂಭಿಸಿತು. ಗಾಳಿಯಿಲ್ಲದೇ ಉಸಿರುಗಟ್ಟಿದ್ದೊಂದೇ ನೆನಪು.

ಮತ್ಯಾವುದೋ ಗಡುಸು ಕೈ ಮೈಯೆಲ್ಲಾ ಅಲುಗಾಡಿಸಿದಂತಾಗಿ ಎಚ್ಚರ ಆಯ್ತು. ಶಿಮೊಗ್ಗ ಬಂತು ಏಳ್ರಿ. ಎಷ್ಟು ಸಲ ಅಂತ ಕರ್ಯೋದು ನಿಮ್ಗೆ, ಎಬ್ಸಿ ಎಬ್ಸಿ ಸಾಕಾಯ್ತು ಅಂತ ಕಂಡಕ್ಟರು ಎಬ್ಬಿಸುತ್ತಾ ಇದ್ದ.ಹಾಗೇ ಕಣ್ಣು ತೆರೆದರೆ ಬೆಳ್ಳನೆ ಬೆಳಗಾಗಿದೆ!
ಹಿಂದಿನ ದಿನ/ದಿನಗಳು ತಾನು ಎಲ್ಲಿದ್ದೆ , ಏನಾಗಿತ್ತು ಅನ್ನೋದು ಎಷ್ಟು ನೆನಪು ಮಾಡಿಕೊಂಡರೂ ನೆನಪಾಗ್ಲಿಲ್ಲ. ಅಷ್ಟರಲ್ಲಿ ಎಲ್ಲಿದ್ದೀಯೋ ಮಗನೆ, ಆಯನೂರು ಬಸ್ ಸಿಗ್ತೇನೋ ಅಂತ ಅಮ್ಮನ ಕರೆ. ಕನಸು, ವಾಸ್ತವಗಳ ಪರೀಕ್ಷೆಗೆ ಹೋಗದೇ ನಿದ್ದೆಯ ಜೊಂಪಲ್ಲೇ ಆಯನೂರು ಬಸ್ ಹಿಡಿದ ಗುಂಡಣ್ಣ.

"ಪಂಜು"ವಿನಲ್ಲಿ ಪ್ರಕಟಿತ
http://www.panjumagazine.com/?p=1031

6 comments:

  1. ಗುಂಡಣ್ಣನ ಕನಸು ಚೆನ್ನಾಗಿದೆ

    ReplyDelete
    Replies
    1. ಧನ್ಯವಾದಗಳು ಸೋಮಶೇಖರರೇ :-)

      Delete
  2. ಒಳ್ಳೇ ಗುಂಡಣ್ಣ.....

    ReplyDelete
  3. ಅಣ್ಣಾವ್ರ ತ್ರಿಮೂರ್ತಿ ಚಿತ್ರ ನೋಡಿದ ಅನುಭವವಾಯಿತು!

    ReplyDelete
    Replies
    1. Trimurti chitra innnu sikkilla. Nodbeku anista ide ! :-)

      Delete