Monday, May 12, 2014

"ಭಾವತೀರ ಯಾನ"ದಲ್ಲಿ

ಪ್ರೀತಿಸಿದವಳು ನಾಲ್ಕು ವರ್ಷಗಳ ಕಾಲ ನೆನಪಿನ ಶಕ್ತಿಯೇ ಇಲ್ಲದಂತಿದ್ದರೂ ಅವಳ ಪೋಷಕರಿಗಿಂತ ಚೆನ್ನಾಗಿ ನೋಡಿಕೊಂಡ ಸನ್ನಿ ಪವಾರ್, ತಿಂಗಳಿಗೆ ಐದರಿಂದ-ಹತ್ತು ಲಕ್ಷದಷ್ಟು ಔಷಧಿಗಳನ್ನು ಸಂಗ್ರಹಿಸಿ ಬಡರೋಗಿಗಳ ಉಚಿತವಾಗಿ ಹಂಚುವ "ಮೆಡಿಸಿನ್ ಬಾಬಾ", ಕಾಲೇಜ್ ಡ್ರಾಪೌಟ್ ಆಗಿ ಆಫೀಸ್ ಬಾಯ್ ಆಗಿದ್ದರೂ ೨೦೦೦ ಜನಕ್ಕೆ ಉದ್ಯೋಗ ನೀಡುವಂತಾಗಿರೋ ವಿಜಯ್ ಕುಮಾರ್, ಅಂಗವೈಕಲ್ಯಕ್ಕೆ ತುತ್ತಾಗಿ ಒಂದು ಮಾತಾಡಲು ನಾಲ್ಕು ನಿಮಿಷ ಕಷ್ಟಪಡಬೇಕಾದರೂ ಕಂಪ್ಯೂಟರ್ ಕೀಲಿಮಣೆ ಮುಂದೆ ಕೂತರೆ ಏನು ಬೇಕಾರೂ ಸಾಧಿಸಬಲ್ಲ, ಕಂಪ್ಯೂಟರ್ ತಂತ್ರಾಂಶಗಳ ಬಗ್ಗೆ ಏನು ಕೇಳಿದ್ರೂ ಹೇಳಬಲ್ಲ ಐಕ್ಯಾನ್(i can) ಸಂಸ್ಥೆಯ ಸ್ಥಾಪಕ.. ಒಬ್ಬೊಬ್ಬರದ್ದೂ ಮೈನವಿರೇಳಿಸೋ ಕತೆಗಳು. ಕತೆಯಲ್ಲ ವಾಸ್ತವವದು. ಇಂತಹ ಸಾಧಕರ ಯಶೋಗಾಥೆಯನ್ನು ಒಂದು ಅಂಕಣಮಾಲೆಯಾಗಿ ನಮ್ಮ ಮುಂದೆ ತೆರೆದಿಟ್ಟೋರು ಕನ್ನಡಪ್ರಭ ಪತ್ರಿಕೆಯ ಉಪಸಂಪಾದಕ ಎ.ಆರ್.ಮಣಿಕಾಂತ್. ಅವರನ್ನು ಮೊದಲ ಬಾರಿಗೆ ಕಾಣಲು ವೇದಿಕೆಯಾಗಿದ್ದು ನಿನ್ನೆಯ ಭಾವತೀರಯಾನ ಪುಸ್ತಕ ಬಿಡುಗಡೆ ಸಮಾರಂಭ.

ನಿನ್ನೆಯ ಕಾರ್ಯಕ್ರಮಕ್ಕೆ ಹೋಗ್ಲಾ ಬೇಡ್ವಾ ಅಂತೊಂದು ಅಳುಕಿತ್ತು. ಕಾರಣ ಪುಸ್ತಕ ಬಿಡುಗಡೆ ಸಮಾರಂಭಗಳಿಗೆ ಹೋಗದೇ ಹತ್ತತ್ರ ವರ್ಷವೇ ಆಗಿತ್ತು. ಗುಂಪುಗಳಿಗೆ ತಲೆಹಾಕಿಯೂ ಹತ್ತತ್ರ ಅಷ್ಟೇ ಸಮಯವಾದ್ದರಿಂದ ಮುಖಗಳೇ ಮರೆತುಹೋಗಿರಬಹುದೇನೋ ಎಂಬ ಭಯವೂ ಇತ್ತು. ಏನಾದ್ರಾಗಲಿ ಅಂತ ರವೀಂದ್ರ ಕಲಾ ಕ್ಷೇತ್ರಕ್ಕೆ ಕಾಲಿಟ್ಟವನಿಗೆ ಕಂಡಿದ್ದು ಚಿನ್ಮಯ್ ಮತ್ತು ಹಳೇ ಗೆಳೆಯ ಮತ್ತು ಭಾವೀ ನಿರ್ದೇಶಕ ವಿಶು. ಎದ್ರಿಗಿದ್ರೆ ಮಿಸ್ಸಾಗೋಕೆ ಸಾಧ್ಯವೇ ಇರದಷ್ಟು ಆಕ್ಟೀವ್ ಕಿಣ್ಣ ಕಂಡ್ರು. ಹಂಗೇ ಕಾಲಿಡುವಷ್ಟರಲ್ಲಿ ನಾಲ್ಕೈದು ಕ್ಯಾಮರಾಗಳ ಬೆಳ್ಳಂಬೆಳಕಿನ ಸ್ವಾಗತ. ಪ್ರಕಾಶಣ್ಣ, ನಿಮ್ಮೊಳಗೊಬ್ಬ ಬಾಲು, ಶ್ರೀಕಾಂತಣ್ಣನ ದೊಡ್ಡ ದೊಡ್ಡ ಕ್ಯಾಮರಾಗಳ ಹಿಂದೆ ಯಾರಾರೂ ಸಣ್ಣ ಹುಡುಗ್ರು ಕೂಕಿ ಅನ್ಬೋದಿತ್ತೇನೋ !. ಶ್ರೀಕಾಂತಣ್ಣನ ಕುಟುಂಬ,  ಸುಷುಮ, ಬದ್ರಿ ಭಾಯ್ ಕಂಡ್ರು. ಸುಮಾಕ್ಕ, ಆ.ಸು ಭಾಯ್ ಹತ್ರ ಪರಿಚಯ ಮಾಡ್ಕೊಳ್ಳೋ ಹೊತ್ತಿಗೆ ಮತ್ತೊಂದಿಷ್ಟು ಕ್ಯಾಮರಾ ಫಳಫಳ. ನಾನೊಂದಿಷ್ಟು ಕಡೆ ಬಿದ್ದಿರಬಹುದೆಂಬ ಸ್ಯಾನೆ ಖುಷೀಲಿರುವಾಗ ಯಾರೋ ತಿಂಡಿ ರೆಡಿಯಾಗಿದೆ ಬನ್ನಿ ಅಂದ್ರು.

ಸರಿ ತಿಂಡಿಗೆ ಹೊರಡೋ ಹೊತ್ಗೆ ವತ್ಸಣ್ಣ, ಅಮರ, ರಘುನಂದನ್ ಹೆಗ್ಡೆ ಗ್ಯಾಂಗೂ, ಅಬ್ದುಲ್ ಸತ್ತಾರ್ ಕೊಡಗು ಸಿಕ್ರು. ಅವರಿಗೆಲ್ಲಾ ಹಾಯೆನ್ನೋ ಹೊತ್ತಿಗೆ "ಗಿರಿಶಿಖರ"ದ ಗಿರೀಶಣ್ಣ , ಕನ್ನಡ ಬ್ಲಾಗಿನ ಪುಷ್ಪಣ್ಣ, ಪರೇಶಣ್ಣ ಕಂಡ್ರು. ತಿಂಡಿ ಮುಗಿಸಿ ಒಳಬಂದು ಕೂತ್ರೆ ಶಮ್ಮಿ ಅಕ್ಕ ಪಕ್ಕದಲ್ಲೇ ಬಂದು ಕೂರಬೇಕೇ ? ಸಮಯಕ್ಕೆ ಸರಿಯಾಗಿ ಕಾರ್ಯಕ್ರಮದ ಆರಂಭ ಭರತನಾಟ್ಯದಿಂದ. ಗಣೇಶ ಸ್ತುತಿ, ದಶಾವತಾರಗಳು ಕ್ಯಾಮರಾ ತಂದು ರೆಕಾರ್ಡ್ ಮಾಡಿಕೊಳ್ಳಬಹುದಿತ್ತಲ್ಲಾ ಅಂತ ಬಯ್ಕೊಳ್ಳುವಂತೆ ಮಾಡಿದ್ರೆ ಉಪಾಸನಾ ಮೋಹನ್, ಪಂಚಂ ಹಳಿಬಂಡಿ, ವರ್ಷ , ನಾಗಚಂದ್ರಿಕಾ ಭಟ್ ಅವರ ಸಂಗೀತವಂತೂ ವಾವ್ ಅನಿಸಿಬಿಟ್ತು. ನಂತರ ಶುರುವಾದ್ದು ಮಾತಿನ ಜುಗಲ್ ಬಂದಿ.

ಇಬ್ಬರು ಭಟ್ಟರ ನಡುವೆ ಶೆಟ್ಟರು ಅನ್ನುವಂತೆ ಯೋಗರಾಜ್ ಭಟ್, ವಿಶ್ವೇಶ್ವರ ಭಟ್ ಮಧ್ಯೆ ಪ್ರಕಾಶ್ ರೈ!. ಪ್ರಕಾಶ್ ರೈ ಅಷ್ಟು ಸುಸ್ಪಷ್ಟವಾಗಿ ಕನ್ನಡ ಮಾತಾಡ್ತಾರೆ ಅಂತ ನಿಜವಾಗೂ ಅಂದುಕೊಂಡಿರದ ನನಗೆ ನಿಜಕ್ಕೂ ಅಚ್ಚರಿ. ತಮ್ಮ ಅಪ್ಪ-ಅಮ್ಮ, ಸೋದರಮಾವ, ಅಂಗಡಿ ಬಾಬಣ್ಣ ಹೀಗೆ ನೆರವಾದ ಎಲ್ಲರನ್ನೂ ನೆನೆಸಿಕೊಂಡ ಮಣಿಕಾಂತಣ್ಣ ಅಂತೂ ಮೊದಲ ಕಾರ್ಯಕ್ರಮದಲ್ಲೇ ಮನದೊಳಗಿಳಿದುಬಿಟ್ರು.ನಾಗಮಂಡಲ ಖ್ಯಾತಿಯ ಗೋಪಾಲ ವಾಜಪೇಯಿ, ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣ್ ನಂತಹ ಹಿರಿಯ ಚೇತನಗಳಿಗೊಂದು ಸನ್ಮಾನ. ಅವರಲ್ಲಿ ಕೆಲವರನ್ನು ಮೊದಲ ಬಾರಿಗೆ ನೋಡೋ ಭಾಗ್ಯ ಸಿಕ್ಕೋರ ಖುಷಿಯಂತೂ ಹೇಳತೀರದು.

ಇನ್ನು ಅರುಣ್ ಸಾಗರ್, ನವೀನ್ ಸಾಗರ್ರಂತಹ ಹೊಸ ಪೀಳಿಗೆಯವರಿಗೇನು ಕಮ್ಮಿಯಿರಲಿಲ್ಲ.ಕಾರ್ಯಕ್ರಮ ಮುಗುದ್ರೂ ಭೇಟಿಯಾಗೋರಿಗೇನು ಕಮ್ಮಿಯಿರಲಿಲ್ಲ. ಸತೀಶ್, ಮಲ್ಲೇಶ್, ಭರತ್, ಸ್ವಾನಂದ ಹೆಗ್ಡೆ, ಹೃದಯ ಶಿವಣ್ಣ.. ಹಿಂಗೆ ಬರೆದಷ್ಟೂ ಜನ. ಯೋಗರಾಜ್ ಭಟ್ ಹೇಳಿದಂಗೆ ಪುಸ್ತಕವೊಂದು ಲೋಕವೆಲ್ಲಾ ಮಲಗಿರುವಾಗ ಲೋಕಾರ್ಪಣೆಯಾಗದೇ ಭಾನುವಾರವೂ ಜನರೆದ್ದು ಬರುವಂತೆ ಮಾಡಿದೆ ಅಂದ್ರೆ ಕನ್ನಡ ಸಾಹಿತ್ಯದ ಬಗ್ಗೆ ಹೆಮ್ಮೆಯಾಗದಿರಲ್ಲ..ರಶ್ಮಿ, ವಿನೋದ್ ರಾಯ್ ಬೆಂಗಳೂರು ಹಿಂಗೆ ಕೆಲವು ಫೇಸ್ಬುಕ್ಕಲ್ಲಿ ಕಂಡವರನ್ನ ಮುಖಃತ ಪರಿಚಯ ಮಾಡಿಕೊಳ್ಳಲು ಆಗದಿದ್ರೂ ಮುಂದೊಮ್ಮೆ ಅಂತಹ ಅವಕಾಶ ಸಿಗೋದೆಂಬ ನಿರೀಕ್ಷೆಯಲ್ಲಿ...

2 comments:

  1. ನನಗೆ ಅದು ಶುಭ ಭಾನುವಾರ.
    ಮಣಿಕಾಂತರ ನಿಜ ಜೀವನದ ಹೀರೋಗಳ ಜೊತೆಗೆ ನನ್ನ ಮುಖಪುಟ ಮತ್ತು ಬ್ಲಾಗ್ ಹೀರೋಗಳನ್ನು ಭೇಟಿಯಾದ ಸೌಭಾಗ್ಯ ನನ್ನದು.

    ReplyDelete
  2. ಒಳ್ಳೆಯ ದಿನ ಅದು :)..ಮತ್ತೆ ನೆನಪಿಸಿದಿರಿ...ವಂದನೆಗಳು :)

    ReplyDelete