Tuesday, July 15, 2014

ಕಾಡೋ ಸಾಲುಗಳು..

ಎನ್ನ ಜೀವವ ಕಾಡಲೆಂದೇ
ನಿನ್ನ ಭಾವಗಳ ಕೊಂಡಿಯೇ ?
ಕಾಲಮಾರುತಕೆ ನೆನಪ ಬೂದಿಯೊಳು
ಜೀವ ತಳೆದಿಂದು ನಿಂತವೇ ?

ಮಸುಕು ನೆನಪುಗಳು ನಿನ್ನೆ ಮುಸುಕಿಂದ
ಎದ್ದು ಬರಲೇನು ಕಾರಣ ?
ಕಳೆದ ಕಂದರದಿ ಹೊಳೆವ ರವಿ ಹುಡುಕಿ
ಏಕೆ ಶುರುವಾಯ್ತೊ ಚಾರಣ ?

ನನ್ನ ನೋವುಗಳ ಕಸಿದು ನಿಂತೆ ನೀ
ನಿನ್ನ ನಗೆ ಮರೆತು ತ್ವರಿತದಿ
ದಿನದ ಪೆಟ್ಟುಗಳ , ನೋವ ಮುಚ್ಚಿಟ್ಟೆ
ನನ್ನ ಕ್ಷಣ ನಗೆಯ ತುಡಿತದಿ

ಇಂದು ನಿನ್ನೆಗಳ ನೆನಪು, ವಾಸ್ತವವು
ನಾಳೆ ಕನಸೊಂದ ಕಟ್ಟಿರೆ
ಭಾವತೀರ್ವತೆಯ ಪಾಯವಿಟ್ಟವಿಗೆ
ಸುಖದ ಸೌಧವನೆ ಕಟ್ಟಿರೆ

ಕಾಲದೊಂದಿಗೇ ಕರಗಿಹೋಯಿತೆ ನಿನ್ನ ಜೀವ, ಛಾಯೆ
ಕುರುಹನುಳಿಸದೇ ಕಳೆದುಹೋಯಿತೇ ನಿನ್ನ ನೆನಪ ನಾವೆ
ನೆನೆದ ಪ್ರತಿಕ್ಷಣ ಸ್ಪೂರ್ತಿಯಂಕುರ ನಿನ್ನ  ಬದುಕು, ನಿಲುವು
ಜೊತೆಗೆ ಇಲ್ಲದಿಹ ನಿಜವು ಹೊಳೆದೊಡೆ ಕಣ್ಣೆ ನೀರ ಮಡುವು
ಅಲೆವ ಗಾಳಿಯೊಡೆ ತೇಲಿಬಂದಂತೆ ಮತ್ತೆ ನಿನ್ನ ನೆನಪು
ಉಳಿಸಿದಾ ಕನಸಾ ನಿಜವಗಯ್ಯಲೇ ಮತ್ತೆ ಹೆಚ್ಚಿ ಹುರುಪು

ದಿನವು ತಲೆಯೆತ್ತೆ ಹೊಳೆದು ಕಾಣಲು ನೀನು ತಾರೆಯಲ್ಲ
ಆದರುದಯಿಸಿಹ ಜ್ಞಾನಜ್ಯೋತಿಗಳ ಬೆಳಕು ಕಮ್ಮಿಯಲ್ಲ
ನೋವ ಜೊತೆಗೊಂದು ಸ್ಪೂರ್ತಿ ಸಿಂಚನ ಕನಸ ಬೆಳೆಸಲೆಂದು
ನೋವ ಕಂದಕದಿ ಕಳೆದು ಕೂರದಿರು ಬರುವ ನಲಿವೆಗೆಂದು

4 comments:

  1. ನಿಮ್ಮ ಪ್ರತಿಭೆಗೆ ಕನ್ನಡಿಯಂತಹ ಕವನವಿದು.
    ಕಾವ್ಯ ಗುಣಗಳಿಂದಲೂ ಮತ್ತು ಭಾವ ತೀವ್ರತೆಯಿಂದಲೂ ಮನ ಸೆಳೆಯಿತು.

    And,
    ತಮ್ಮ ಪ್ರವಾಸೀ ಮನಸೂ ಇಲ್ಲಿ ಸಾಲುಗಳಾಗಿವೆ:
    "ಕಳೆದ ಕಂದರದಿ ಹೊಳೆವ ರವಿ ಹುಡುಕಿ
    ಏಕೆ ಶುರುವಾಯ್ತೊ ಚಾರಣ ?"

    ReplyDelete
    Replies
    1. ಧನ್ಯವಾದಗಳು ಬದ್ರಿ ಭಾಯ್ :-)

      Delete
  2. ಚಂದದ ಸಾಲುಗಳು...
    ಸಣ್ಣ ಸಾಲುಗಳಾದ್ರೂ ಭಾವ ತೀವ್ರತೆ ಮತ್ತೆ ಮತ್ತೆ ಓದಿಸ್ತು ಎಲ್ಲಾ ಸಾಲುಗಳನ್ನೂ..
    ಇಷ್ಟವಾಯ್ತು.

    ReplyDelete
    Replies
    1. ಧನ್ಯವಾದ ಭಾಗ್ಯ. ಸುಮಾರ್ ದಿನ ಆತು ಸಿಗ್ದೆ ಭಾವಗಳ* ತೇರಲ್ಲಿ. ಶೀಘ್ರವಾಗಿ ಭೇಟಿ ಆಗೋಣ ಒಮ್ಮೆ

      Delete