Tuesday, August 26, 2014

ಮೋಡಗಳ ಚಿತ್ತಾರ:ಪಾವಗಡ ನೋಡುವ ಬಾರಾ..

On the way to Pavagada Fort
On the way to Pavagada - Modagala chittara


ಪಾವಗಡಕ್ಕೆ ಹೋಗಬೇಕೆನ್ನೋ ಬಯಕೆ ಸುಮಾರು ದಿನದಿಂದ ಇದ್ರೂ ಅದಕ್ಕೊಂದು ಕಾಲ ಕೂಡಿ ಬಂದಿರ್ಲಿಲ್ಲ. ಕೊನೆಗೂ ಹರೀಶಣ್ಣಂಗೆ ಹೋಗನಾ ಅಂದಾಗ ಜೈ ಅಂದ. ರಾತ್ರೆ ಹನ್ನೆರಡೂವರೆಗೆ ಫಿಕ್ಸಾದ ಪ್ಲಾನಿಗೆ ಪಕ್ಕಾ ಆದ ನಾವು ೯ಕ್ಕೆ ಮನೆ ಬಿಟ್ಟಿದ್ವು. ಪಾವಗಡಕ್ಕೆ ಹೋಗೋಕೆರಡು ಮಾರ್ಗ. ಹೋಗ್ತಾ ಡಾಬಸ್ ಪೇಟೆ-ಮಧುಗಿರಿ ಮಾರ್ಗವಾಗಿ ಹೋಗಿದ್ದ ನಾವು ಬರ್ತಾ ಬಂದಿದ್ದು ಹಿಂದೂಪುರ-ಲೇಪಾಕ್ಷಿ ಮಾರ್ಗವಾಗಿ.

ಹಿಂದೂಪುರ ಮಾರ್ಗ ಸ್ವಲ್ಪ ಉದ್ದ ಅನಿಸಿದ್ರೂ ಅಲ್ಲಿ ರಸ್ತೆ ಚೆನ್ನಾಗಿದೆ. ಮಧುಗಿರಿ ಮಾರ್ಗದಲ್ಲಿ ಅಲ್ಲಲ್ಲಿ ರಸ್ತೆ ರಿಪೇರಿ ಕಾರ್ಯ ಕೈಗೊಂಡಿರೋದ್ರಿಂದ ಹನ್ನೊಂದೂವರೆಗೆ ಬೆಂಗಳೂರು ಬಿಟ್ಟ ನಾವು ಪಾವಗಡ ತಲುಪಿದ್ದು ಮೂರೂವರೆ ಆಗಿದ್ರೆ ಬರ್ತಾ ಏಳು ಘಂಟೆಗೆ ಬಿಟ್ಟೋರು ಬೆಂಗ್ಳೂರು ತಲುಪಿದ್ದು ಹತ್ತೂಮುಕ್ಕಾಲು. ರಸ್ತೆ ಚೆನ್ನಾಗಿದ್ದಿದ್ರೆ ಮಧುಗಿರಿ ರೂಟ್ ಚೆನ್ನ. ಇಲ್ಲದಿದ್ದರೆ ಹಿಂದೂಪುರದ್ದೇ ಕ್ಷೇಮ. ಪಾವಗಡ ಕೋಟೆ ಅಂದ್ರೆ ನೆನಪಾಗೋದು ಪಾವಗಡದ ಪ್ರಸಿದ್ಧ ಶನಿ ದೇವಸ್ಥಾನ. ಇತಿಹಾಸ ಅಂದ್ರೆ ನೆನಪಾಗೋದು ಟಿಪ್ಪು ಸುಲ್ತಾನನ ಬ್ರಿಟಿಷರ ವಿರುದ್ದ ಇಲ್ಲಿ ಮಾಡಿದ ಎನ್ನಲಾದ ಒಂದು ಯುದ್ದ.

ಕೋಟೆಯ ಬಗ್ಗೆ ಹೆಚ್ಚು ಹೇಳೋದಕ್ಕಿಂತ ಅಲ್ಲಿನ ಚಿತ್ರಗಳನ್ನ ಹಾಕೋದೇ ಒಳಿತು ಅನಿಸುತ್ತೆ. ಕೋಟೆ ಅಂದ್ರೆ ಚಿತ್ರದುರ್ಗ ಕೋಟೆಯ ತರವೋ, ಸಾವನ ದುರ್ಗದ ತರವೋ ಸಿಕ್ಕಾಪಟ್ಟೆ ಜನರಿರುತ್ತಾರೆ ಹತ್ತೋಕೆ, ಹತ್ತೋ ದಿಕ್ಕುಗಳಿರುತ್ತೆ ಅಂದುಕೊಳ್ಳೋರಿಗೆ ಪ್ರಾರಂಭದಲ್ಲೇ ಒಂದು ಕಿವಿಮಾತು. ಇಲ್ಲಿ ಎಲ್ಲೆಡೆ ಸಾಲಾಗಿ ಮೆಟ್ಟಿಲುಗಳಿವೆ. ಕಾಲುದಾರಿಯೂ ಇದೆ. ಹಾಗಾಗಿ ಕಳೆದುಹೋಗೋ ಭಯವಿಲ್ಲ. ಹಾಗಾಗಿ ಮಾರ್ಗದರ್ಶಕ ಗುರುತುಗಳೂ ಇಲ್ಲ. ನಾವು ಹೋಗಿದ್ದು ಭಾನುವಾರ ಮಧ್ಯಾಹ್ನವಾಗಿದ್ದರಿಂದಲೋ ಏನೋ ಒಂದು ಮೂರ್ನಾಲ್ಕು ಜನ ಬೆಟ್ಟ ಇಳಿಯುತ್ತಿದ್ದೋರ್ನ ಬಿಟ್ರೆ ಹೆಚ್ಚು ಜನರು ಕಾಣಲಿಲ್ಲ.

Dalavaayi beedi ishwara devastana
 ಬೆಟ್ಟ ಹತ್ತೋದೆಲ್ಲಿ ಅಂತ ಊರಲ್ಲಿ ಯಾರಿಗೆ ಕೇಳಿದ್ರೂ ಶನಿ ದೇವಸ್ಥಾನದ ಪಕ್ಕದಲ್ಲಿರೋ ರಸ್ತೆಯ ಕಡೆ ತೋರಿಸ್ತಾರೆ. ಅದರಲ್ಲಿ ಹೋದರೆ ಮೊದಲು ಸಿಗೋ ಕೋಟೆ ಆಂಜನೇಯನ ಪಕ್ಕದಲ್ಲಿರೋ ಸಿಮೆಂಟ್ ರಸ್ತೆಯಲ್ಲಿ ಮುಂದೆ ಹೋಗಿ ಮುಂದಿನ ರಸ್ತೆಯಲ್ಲಿ ಎಡಕ್ಕೆ ತಿರುಗಿದ್ರೆ ದಳವಾಯಿ ಬೀದಿ ಈಶ್ವರ ದೇವಸ್ಥಾನ ಅಂತ ಸಿಗುತ್ತೆ. ಇಲ್ಲಿಯವರೆಗೆ ಕಾರು ಬರುತ್ತೆ. ಅಲ್ಲೇ ನಮ್ಮ ಕಾರು ನಿಲ್ಲಿಸಿದ ನಾವು ಅಲ್ಲಿದ್ದ ಸಣ್ಣ ಅಂಗಡಿಯಲ್ಲಿ ಒಂದಿಷ್ಟು ಬೋಟಿ , ಬಿಸ್ಕೇಟು ತಗೊಂಡು ಬೆಟ್ಟ ಹತ್ತೋಕೆ ಶುರು ಮಾಡಿದಾಗ ಮಧ್ಯಾಹ್ನದ ಮೂರೂ ಮುಕ್ಕಾಲುಬೆಟ್ಟದ ಮೊದಲು ಸಿಗೋದೊಂದು ಪಾಳುಗುಡಿ. ದೂರದಿಂದ ಕಾಲಭೈರವನೋ , ಗಣೇಶನೋ, ಗ್ರಾಮದೇವತೆಯೋ ಅಂದುಕೊಳ್ಳಬೇಕು. ತೀರಾ ಹಿಂದಿನ ಕಾಲದ್ದೇನಲ್ಲದ ಈ ಗುಡಿ ಹುಣ್ಣಿಮೆ ಅಮವಾಸ್ಯೆಗಳಿಗೋ , ಇನ್ಯಾವುದೋ ಹಬ್ಬಗಳ ಹೊರತಾಗಿ ಬೇರೆ ಸಮಯದಲ್ಲಿ ಪೂಜೆ ಕಾಣದ ಗುರುತೆಂಬಂತೆ ಶಿಥಿಲಗೊಳ್ಳುತ್ತಿದೆ. ಅದರ ಬಲದಿಂದ ಹಾಗೇ ಮುಂದೆ ಬಂದರೆ ಕೋಟೆಗೆ ಹತ್ತೋ ಮೆಟ್ಟಿಲುಗಳು ಕಾಣುತ್ತವೆ. ಕೋಟೆಯ ಗೋಡೆಗಳ, ಬುರುಜುಗಳ ದೃಶ್ಯ ಕಂಡು ಹತ್ತೋ ಹುರುಪು ಮೂಡುತ್ತದೆ. ಅಲ್ಲಲ್ಲಿ ಸಿಕ್ಕ ಕಲ್ಲು ಹೂವುಗಳ , ಚಿತ್ರ ವಿಚಿತ್ರ ಆಕಾರ ಮೂಡಿಸುತ್ತಿದ್ದ ಮೋಡಗಳ ಚಿತ್ರ ಕ್ಲಿಕ್ಕಿಸುತ್ತಾ ಮುಂದೆ ಸಾಗಿದೆವು. ಇಲ್ಲಿನ ವಿಶೇಷತೆ ಅಂದ್ರೆ ಎಲ್ಲೆಂದರಲ್ಲಿ ಕಣ್ಣಿಗೆ ಬೀಳೋ ಕಪ್ಪು, ಕೇಸರೀ ಓತಿಕ್ಯಾತಗಳು. ಐದಾರು ಜಾತಿಯ ಹೂವುಗಳು, ಕಳ್ಳಿಗಳು ಮತ್ತು ಮೋಡಗಳ ಚಿತ್ತಾರ. ಬೆಳಗಿನಿಂದ ಮೋಡಗಳು ಕಣ್ಣಾಗಿ, ನಾಯಿಯಾಗಿ, ಬೆಟ್ಟ ಹಾರೋ ಕುದುರೆಯಾಗಿ, ಆನೆಯಾಗಿ , ಸೂರ್ಯನ ನುಂಗೋ ರಾಹು ಕೇತುಗಳಾಗಿ.. ಹೀಗೆ ಹಲತರದಲ್ಲಿ ಕಂಡು ಕಲ್ಪನೆಗಳ ಲೋಕದಲ್ಲಿ ಹಲವು ರಂಗೋಲಿ ಹಾಕಿದ್ದೆವು. ಇವುಗಳ ಸವಿಯೋ ಹೊತ್ತಿಗೆ ಕೋಟೆಯ ಮೊದಲ ದ್ವಾರ ನಮ್ಮನ್ನು ಸ್ವಾಗತಿಸಿತ್ತು.


ಒಟ್ಟು ಎಂಟು ದ್ವಾರಗಳಿರೋ ಈ ಕೋಟೆಯಲ್ಲಿ ಒಂದೊಂದು ದ್ವಾರವೂ ಒಂದೊಂದು ಬಗೆಯಲ್ಲಿದೆ. ಒಂದರ ಎರಡೂ ಬದಿಯಲ್ಲಿ ಬೇರೆ ಬೇರೆ ಕೆತ್ತನೆಗಳಿದ್ದರೆ ಮತ್ತೊಂದು ಕುಳ್ಳನಾಗಿ ಯಾವುದೇ ಅಲಂಕಾರಗಳಿಲ್ಲದೇ ಇದೆ. ಮತ್ತೊಂದರಲ್ಲಿ ಓಂ, ನಮಃ ಅಂತ ಮುಂದೆ ಹನುಮನ ಗುಡಿ ಬರುತ್ತೆ ಅನ್ನೋ ಮುನ್ಸೂಚನೆ ಇದ್ದರೆ ಮತ್ತೊಂದು ಯಾವ ಸೂಚನೆಯನ್ನೂ ಕೊಡದೆ ಕುತೂಹಲವನ್ನ ಕೆರಳಿಸುತ್ತೆ.
Kinna showing how Stones are cut into pieces using the horizontal hole concept
Different designs near the doors of the Fort


ಎರಡು ಬಾಗಿಲಾದ ಮೇಲೆ ಸಿಗೋ ಹನುಮನ ಗುಡಿಗೆ ದಿನವೂ ಪೂಜೆ ಸಿಗುತ್ತಿದೆ ಅನ್ನೋದನ್ನ ಹನುಮನ ಮೇಲಿರೋ ಹೂವಿನ ಹಾರಗಳು ಹೇಳುತ್ತಿದ್ದವು. ಕುಂಕುಮಲೇಪಿತ ಆಜಾನುಬಾಹು ಹನುಮನ ನೊಡಿದ್ರೆ ಯಾರಿಗಾದರೂ ಅಡ್ಡಬೀಳೋ ಮನಸ್ಸಾಗದೇ ಇರದು. ಹಂಚಿಲ್ಲ, ಬಾಗಿಲಿಲ್ಲದ ಹನುಮನ ಗುಡಿ ಕಂಡಾಗ ಜಗದೆತ್ತರ ಬೆಳೆವವಗೆ ಸೂರು ಹೊಂದಿಸೋದುಂಟೇ ಅನಿಸಿತೊಮ್ಮೆ. ಹಾಗೇ ಹನುಮನಿಗೊಮ್ಮೆ ನಮಸ್ಕರಿಸಿ ಮುಂದೆ ಸಾಗಿದೆವು ಬೆಟ್ಟದ ಸೌಂದರ್ಯ ಸವಿಯುತ್ತ, ಹೂವು , ಹಕ್ಕಿಗಳ ಚಿತ್ರ ತೆಗೆಯುತ್ತಾ.


ಪಾವಗಡ ಕೋಟೆ ಹತ್ತಿದಷ್ಟೂ ಮೇಲೆ ಮತ್ತೊಂದು ಬುರುಜೋ, ಧ್ವಜವೋ ಕಾಣುತ್ತೆ. ಹುಡುಕಿದರೆ ಅಲ್ಲಿಗೆ ಹೋಗೋಕೂ ಒಂದಿಷ್ಟು ಮೆಟ್ಟಿಲು. ಅಲ್ಲಿ ಹತ್ತಿದರೆ ಮತ್ತೊಂದು ಮಗ್ಗುಲಲ್ಲಿ ಮತ್ತೇನೋ ಕಾಣುತ್ತೆ. ಮೇಲೊಂದು ಮಳೆ ಕೊಯ್ಲ ನೀರಿಂದ ತುಂಬುವಂತೆ ಕಾಣೋ ಕೊಳ, ಅಲ್ಲಲ್ಲಿ ಮದ್ದುಗುಂಡುಗಳ ಸಂಗ್ರಹದ ಕೊಣೆಗಳು, ಕುದುರೆ ಲಾಯದಂತಹ ರಚನೆಗಳು ಕಾಣುತ್ತೆ.Inside a storage space

At the top of Pavagada fort


ಕೊನೆಗೂ ಎಂಟು ದ್ವಾರಗಳ ದಾಟಿದ ನಮಗೆ ಕೆಳಗಿನ ದೃಶ್ಯಗಳು ಎಷ್ಟು ಸುಂದರವಾಗಿ ಕಾಣ್ತಿದ್ದವು ಅಂದ್ರೆ ಕೆಳಗಿನ ಮನೆಗಳು ನೆರೋಲ್ಯಾಕ್ ಪೇಂಟಿನಂತೆ ಕಾಣ್ತಿದ್ದ ಮನೆಗಳ ಬಗ್ಗೆಯಾಗಲೀ, ಕಾಣುತ್ತಿದ್ದ ಕುದುರೆಲಾಯದಂತಹ ರಚನೆಗಳ ಬಗ್ಗೆಯಾಗಲೀ , ಮೋಡಗಳ ರಂಗವಲ್ಲಿಯ ಬಗ್ಗೆಯಾಗಲೀ ಬರೆಯಹತ್ತಿದರೆ ಅದೇ ಒಂದು ದೊಡ್ಡ ಲೇಖನವಾದೀತೇನೋ. ಆ ಸೌಂದರ್ಯವನ್ನರಿಯಲು ಅಲ್ಲೇ ಬಂದು ಸವಿಯಬೇಕು.
ಕೊನೆಗೂ ಆರರ ಹೊತ್ತಿಗೆ ಕತ್ತಲಾವರಿಸಲು ಆರಂಭಿಸಿತ್ತು.ಇಳಿಯಲಾರಂಭಿಸಿದ ನಾವು ಆರೂವರೆಗೆ ಕೆಳತಲುಪಿದ್ದೆವು. ಶನಿ ದೇವಸ್ಥಾನ ಹೊಕ್ಕ ನಮಗೆ ಮಧ್ಯಾಹ್ನದ ಊಟವಾಗದ ಅರಿವು ಮೂಡಲಾರಂಭಿಸಿತ್ತು. ಇಲ್ಯಾವ ಹೋಟೇಲಪ್ಪ ಅಂತ ಹುಡುಕಿದ್ದ ನಮಗೆ ಅಲ್ಲಿನ ಸಖತ್ತಾದ ಮಲ್ಲಿಗೆ ಇಡ್ಲಿ ಹೊಟ್ಟೆ ತುಂಬಿಸಿತ್ತು. ಎಷ್ಟೊ ಕಾಲದ ನಂತರ ಒಂದೊಳ್ಳೇ ಇಡ್ಲಿ ಸಿಕ್ಕ ಅನುಭವ ಆಗಲೇ ಆರೂಮುಕ್ಕಾಲಾಗಿದೆ. ಮನೆ ಸೇರೋ ಹೊತ್ತೆನ್ನೋ ನೆನಪನ್ನೂ ಹೊತ್ತು ತಂದಿತ್ತು. 2 comments:

  1. ನನ್ಮ ಹಳ್ಳಿಗೆ ತೀರಾ ದೂರವಿರದ ಪಾವಗಡದ ಬೆಟ್ಟವನ್ನು ನಾನೂ ಸಂಧರ್ಶಿಸಿದ್ದೆ. ಇಷ್ಟು ಸೂಕ್ಷ್ಮವಾಗಿ ವಿವರಿಸಿದ್ದಕ್ಕಾಗಿ ದನ್ಯವಾದಗಳು.

    ReplyDelete
    Replies
    1. ಧನ್ಯವಾದಗಳು ಬದ್ರಿ ಭಾಯ್..

      Delete