Tuesday, October 14, 2014

ಚತುರವಾಣಿ ಸಹವಾಸ

ಈ ಆಸೆ ಅನ್ನೋದಿದ್ಯಲ್ಲಾ ? ಅದೊಂತರ ಬಿರುಬೇಸಿಗೇಲಿ ಜಿಮುರುಮಳೇನ, ಹಟಬಿಡದ ವಾರ ಮಳೆಯ ಮಧ್ಯೆ ಹನಿಬಿಸಿಲನ್ನ ಎದುರುನೋಡೋ ಹುಚ್ಚು ಮನದ ತರ. ಹಲಸಿನಹಣ್ಣು ಹೆಚ್ಚಿ ಕೈಯೆಲ್ಲಾ ಮೇಣವಾಗಿದ್ದಾಗ್ಲೂ ಅಲ್ಲೆಲ್ಲೋ ದೂರದಲ್ಲಿ ಮಾವಿನಹಣ್ಣಿನ ಪರಿಮಳ ಬಾಯಲ್ಲಿ ನೀರೂರಿಸೋ ತರ. ದಕ್ಕದ್ದು ಸಿಕ್ಕೋ ತನಕ ಅದರದ್ದೇ ಚಿಂತೆ. ಅದು ಸಿಕ್ಕಾಗ ಮನಸ್ಸಲ್ಲಿ ಇನ್ಯಾವುದರದೋ ಸಂತೆ. ಹುಚ್ಚು ಮನಸಿನ ಆಸೆಗಳೆಂದರೆ ಅವು ಮಳೆಗಾಲದ ಹುಚ್ಚು ಹೊಳೆಗಳಂತೆ. ಯಾವಾಗ ಉಕ್ಕಿ ಯಾರನ್ನ ತನ್ನಲ್ಲಿ ಸೆಳೆಯುತ್ತೆಂಬುದು ಅವಕ್ಕೂ ಗೊತ್ತಿರೋದು ಸುಳ್ಳೆ. ಜಗದಲ್ಲಿನ ನೂರೆಂಟು ಆಸೆಗಳಲ್ಲಿ ಹೊಸ ಮೊಬೈಲು ತಗೋಬೇಕು ಅನ್ನೋದೂ ಒಂದು ಆಸೆ. ಈ ಹೊಸದೆಂಬುದು ಯಾವುದು ಅಂದ್ರಾ ? ಮೊಬೈಲೇ ಇಲ್ಲದ ಮಧ್ಯಮವರ್ಗದವನೊಬ್ಬನಿಗೆ ಎಂಟ್ನೂರೊಂಭೈನೂರರ  ಸೆಕೆಂಡ್ ಹ್ಯಾಂಡ್ ಸೆಟ್ಟೋ, ನೋಕಿಯಾ 1600ವೇ ಒಂದು ಸ್ವರ್ಗ. ಅದೇ ಈ ಮೂಲಭೂತ ಸೌಕರ್ಯದ ಜಂಗಮವಾಣಿಗಳ ಸಹವಾಸದಲ್ಲಿ ಒಂದೆರಡು ವರ್ಷವೋ, ಪದವಿಯನ್ನೋ ಮುಗಿಸಿದ ವಿದ್ಯಾರ್ಥಿಯಾಗಿದ್ರೆ, ಅವ ಮುಂದಿನ ಹಂತಕ್ಕೆ ಹೋಗುವಾಗ ಹೊಸ ಫೋನು ಬೇಕನ್ನೋ ಬಯಕೆ ಮೂಡಿರತ್ತೆ. ೧೬೦೦ ಇಂದ ಕ್ಯಾಮರಾವಿರೋ ೨೭೦೦ ಮೊಬೈಲು ಅಧ್ಬುತ, ಹೊಚ್ಚ ಹೊಸದೆನಿಸುತ್ತೆ. ಅದಾಗಿ ಕೆಲ ವರ್ಷಗಳಲ್ಲೋ, ಮುಂದಿನ ಹಂತದ ಪದವಿ ಮುಗಿಯೋ ಹೊತ್ತಿಗೋ ಅದೂ ಬೇಜಾರು.ಆಗ ಮೂಡೋದೇ ಚತುರವಾಣಿ ಅಥವಾ ಸ್ಮಾರ್ಟ್ ಫೋನ್ ಹೊಂದಬೇಕೆಂಬ ಬಯಕೆ.

ಈ ಸ್ಮಾರ್ಟನ್ನೋ ಹೆಸರಲ್ಲೇ ನಮ್ಮನ್ನು ಮಂಗ ಮಾಡೋ ಪ್ರಯತ್ನ ಅಡಗಿದ್ಯಾ ಅನ್ನೋ ಅನುಮಾನ ಎಷ್ಟೋ ಸಲ ಮೂಡಿದ್ದಿದೆ. ಏಳೂವರೆಗೆ ಐದು ಪಿಕ್ಸಲ್ ಕ್ಯಾಮರಾ ಅಂತ ಒಬ್ಬನಂದ್ರೆ ಅಷ್ಟಕ್ಕೆ ಏಳೇನಕ್ಕೆ , ಐದಕ್ಕೆ ಕೊಡ್ತೀನಿ ಅಂತ ಇನ್ನೊಬ್ಬ ಅಂತಾನೆ .. ಥೇಟ್ ಸಂತೆ ಮಾರ್ಕೇಟಿನ ಚೌಕಾಸಿಯಂತೆ. ಏಳೂವರೆ ಸಾವಿರದ ಸಾಮ್ಸಂಗಿನಲ್ಲಿ ಜೀಮೇಲು, ಕ್ಯಾಮೆರಾ,  ವೀಡಿಯೋ ಕಾಲು, ಮತ್ತೆಂದದೋ ಮೇಲಿದೆಯಂತ ಜಾಹಿರಾತು ಕೊಡೋ ಜಾಹಿರಾತಿಣಿಯೇ ನಲವತ್ತೈದರ ಐಫೋನಲ್ಲೂ ಜೀಮೇಲು, ಕ್ಯಾಮೆರಾ, ಎಂತೆಂದದೋ ಕಾಲಿದೆ ಅಂತಾಳೆ. ಫೋನಿರೋದು  ಕಾಲ್ ಮಾಡೋಕಪ್ಪಾ. ಎಲ್ಲಾ ಫೋನಲ್ಲೂ ಇರೋದು ಅದೇ ಆದ ಮೇಲೆ ಈ ಮೇಲು-ಕೀಳಿನ ಜಗಳ ಬೇಕಾ ಅಂತೇನಾದ್ರೂ ಅಂದ್ರಿ ಅಂದ್ರೆ ಯಾವ ಪ್ರಪಂಚ ಜ್ನಾನವೂ ಇಲ್ಲದ  ಕೂಪ ಮಂಡೂಕನನ್ನಾಗಿಸಿಬಿಡ್ತಾರೆ ನಿಮ್ನ ಈ ಮೊಬೈಲು ಕಂಪೆನಿಗಳು. ಮೂರರಿಂದ , ಇಪ್ಪತ್ತು  ಮೆಗಾಪಿಕ್ಸಲಿನ ಕ್ಯಾಮರಾ ಅಂತ ಹೆಚ್ಚೆಚ್ಚು ದುಡ್ಡು ಕೊಟ್ಟು ಜನ ತಗೋಬೇಕಿದ್ರೆ ಈ ಮೆಗಾಪಿಕ್ಸೆಲ್ಲು ಏಳೆಂಟರ ಕ್ಯಾಮೆರಾದಲ್ಲೇ ಸಿಗತ್ತಲ್ಲೋ ಅನಿಸುತ್ತೆ. ಆ ಫೋನು, ಈ ಫೋನಂತ ತಗೊಳ್ಳೊ ಜನ ಆ ಫೋನಲ್ಲಿ ಮಾತಾಡೋಕೆ ಪಾಡು ಒಂದೆರಡಲ್ಲ. ಕಲ್ಲಂಗಡಿ ಹಣ್ಣು ತಗೋತಾ ದೊಡ್ಡದು ಆರ್ಸಿ , ಕಮ್ಮಿ ರೇಟಿಗೆ ಚೌಕಾಸಿ ಮಾಡಿ ತಗೋತೀವಲ್ಲ, ಹಂಗೇ ಯಾವ್ದೋ ಚೈನಾ ಸೆಟ್ಟು ..ದೊಡ್ಡದು ತಗೊಬಿಡ್ತಾರೆ. ಆಮೆಲೆ ಹೊಟ್ಟೆಕಡೆ ಸರಿಯಿಲ್ಲದವ ಮನೆಯೊಳಗೇ ಇರುವಂತೆ ಆ ಫೋನೊಡೆಯ ಚಾರ್ಚರ್ ಬಳಿಯೇ ಇರ್ತಾನೆ . ಇಂಟರ್ನೆಟ್ಟಿದೆ, ವೀಡಿಯೋ ಇದೆ.ಮತ್ತೇನೋ ಇದೆ. ಇದ್ದೇನುಪಯೋಗ ? ಬ್ಯಾಟ್ರಿಯೇ ಇಲ್ವೆ. ಯಾವುದೋ ಮೊಬೈಲು ಗೇಮು ಸಖತ್ತಾಗಿದೆ ಅಂತ ಅದ್ನೇ ಆಡಿ ಆಡಿ ಮುಖ್ಯವಾದ ಯಾವ್ದೋ ಕರೆ ಬರೋ ಹೊತ್ತಿಗೆ ಮೊಬೈಲೇ ಮಖಾಡೆ ಮಲಗಿಬಿಟ್ಟಿರುತ್ತೆ ! ಇದೊಂಥರಾ ಸಖಲ ಸೌಲಭ್ಯವಿರೋ ಗ್ಲಾಸಿನ ಮನೆಯ ಹೊರಗೆ ನಿಲ್ಸಿ ಅದ್ರ ಕೀನೇ ಕೊಡ್ದೇ ಹೋದಂಗೆ !

ಇನ್ನು ನೋಡೋಕೆ ದೊಡ್ಡ ಸ್ಲೇಟಿನಂಗೆ ಕೆಲ ಫೋನುಗಳು. ಜೈಲಿನ ಕೈದಿಗಳು ಸ್ಲೇಟಿನಲ್ಲಿ ಹೆಸರು ಬರೆದು ತೂಗುಹಾಕಿಕೊಂಡಂತೆ ಸ್ಲೇಟಿನಂತಾ ಚತುರವಾಣಿಯನ್ನು ಕಿವಿಗಾನಿಸಿ ಮಾತಾಡೋದೊಂದು ಘನತೆಯ ಪ್ರಶ್ನೆ ಈಗ. ಮೊಬೈಲೆಂದರೆ ಕಿಸೆಯ ಮೂಲೆಯಲ್ಲಿ ಆರಾಮಾಗಿರುತ್ತಿದ್ದ ಕಾಲ ಹೋಗಿ ಅದಕ್ಕೇ ಒಂದು ಚೀಲ ರೆಡಿ ಮಾಡುವಂತ ಕಾಲ ಬಂದಿದೆ ಈ ಚತುರವಾಣಿಗಳಿಂದ. ಇವನ್ನು ನಮ್ಮ ಹಳೇಕಾಲದ ಪಾಠೀಚೀಲ(ಪುಸ್ತಕದ ಚೀಲ)ದಂತಹ ಭದ್ರಚೀಲಗಳಲ್ಲಿಡೋದಲ್ಲದೆ ಅದನ್ನ ಯಾರಾದ್ರೂ ಕದ್ದುಕೊಂಡು ಹೋಗಿ ಬಿಟ್ರೆ ಅಂತ ಕಾಯೋ ಕೆಲ್ಸ ಬೇರೆ. ಫ್ರೆಂಡೊಬ್ಬನ ಚತುರವಾಣಿಗಳು ಮೂರು ಬಾರಿ ಚತುರಗಳ್ಳರ ಒಡೆತನಕ್ಕೆ ಸೇರಿ ಬೆ.ಮ.ಸಾ.ಸಂ ಅನ್ನೋದು ಅವನ ಪಾಲಿಗೆ ಬೆಂಗಳೂರಿನ ಮಹಾ ಕಳ್ಳರ ಸಾರಿಗೆ ಆದ  ಮೇಲೆ ಅವ ಮತ್ತೆ ಮೊದಲಿನ ಚಿಲ್ಲರೆವಾಣಿಯ ಮೊರೆ ಹೋಗಿದ್ಡಾನೆ. ಸಿಕ್ಕದ ಫೋನಿನದೊಂದು ಚಿಂತೆಯಾದ್ರೆ ಹರಿದ ಚೊಕ್ಕಣ(ಜೇಬು)ನದು ಮತ್ತೊಂದು ಚಿಂತೆ. ಇನ್ನು ಮೊಬೈಲೇನಾದ್ರೂ ಕೈಜಾರಿತು ಅಂದ್ರೆ ಹೃದಯವೇ ಜಾರಿ ಬಾಯಿಗೆ ಬಂದ ಅನುಭವ. ಚೂರಾದ ಪರದೆಗೆ ತೇಪೆ ಹಾಕೋಕೆ ಹೊಸ ಮೊಬೈಲಷ್ಟೇ ಕೇಳುವ ದಿನ ಬಂದಿರೋ ಸಂದರ್ಭದಲ್ಲಿ ಮೊಬೈಲು ಬೀಳಿಸ್ಕೊಂಡ ಕನಸೂ ದಿಗಿಲು ಮೂಡಿಸುತ್ತೆ. ಸಾಮಾನ್ಯ ಜಂಗಮವಾಣಿಗಳು ಎಷ್ಟು ಬಿದ್ರೂ ಊಹೂಂ ಏನೂ ಆಗೋಲ್ಲ. ಆದ್ರೆ ಈ ಕೋಮಲವಾಣಿಗಳು ಬಿದ್ರೆ ಮುಗ್ದೇ ಹೋಯ್ತು.ಸಿಮ್ಮೊಂದು ತೀರ ಕವರೊಂದು ತೀರ. ಬೀಳ್ಸಿಕೊಂಡವನ ಕಣ್ಣೆಲ್ಲಾ ನೀರಾ ? ಅಂತ ಕೇಳೋದು ತಮಾಷೆ ಅನ್ಸಬಹುದು. ಆದ್ರೆ ರಿಪೇರಿಗೆ ತಗುಲೋ ಸಾವಿರ ಸಾವಿರ ರೂಪಾಯಿಗಳಲ್ಲ. ಇನ್ನು ರೈಲೂ ಮತ್ತದರ ಕಳ್ಳರು.ರೈಲಲ್ಲಿ ಚಾರ್ಚಿಗೆ ಅಂತ ಹಾಕಿದ ಚತುರವಾಣಿಯ ಚಾರ್ಜರು ಒಂಟಿ ಭೇತಾಳನಂತೆ  ನೇತಾಡ್ತಿತ್ತು ಮೊನ್ನೆ. ಕ್ಷಣಮಾತ್ರದಲ್ಲಿ ಫೋನ ಲಪಟಾಯಿಸಿದ್ದ ಕಳ್ಳ ಪಲಾಯನಗೈದದ್ದ ನೋಡಿದ್ರೆ ಸ್ಮಾರ್ಟ್ ಫೋನ್ ಸಹವಾಸ ತಿಂಗ್ಳೆಲ್ಲಾ ಉಪವಾಸ ಅನಿಸುತ್ತೆ.
  
ಇನ್ನು ಆ ಫೋನ ಸುರಕ್ಷತೆ ಬಗ್ಗೆ. ತಮ್ಮ ಫೋನ ಬೇರೆ ಯಾರೂ ಉಪಯೋಗಿಸದಿರ್ಲಿ ಅಂತ ಅದಕ್ಕೆ ತರಹೇವಾರಿ ಬೀಗಗಳು. ಮುಂಚೆ ಅಂದ್ರೆ ಬರೀ ಸಂಖ್ಯಾಬೀಗಗಳಿದ್ವು. ಈಗ ಒಂದು ಚುಕ್ಕಿಯಾಟದಂತಹ ರೇಖಾಚಿತ್ರದ ಬೀಗ,  ಮುಖ ಚಹರೆ. ಕಣ್ಣ ದೃಷ್ಟಿ, ಸಂಖ್ಯೆ ಹೀಗ ಹೊಸ ಬಗೆ ಬೀಗಗಳು.ಇನ್ನು ಇವುಗಳ ಸಮಸ್ಯೆ ಹೇಳತೀರೆ . ಮೊನ್ನೆ ಊರಿಗೆ ಬಂದವರ ಚತುರವಾಣಿಯನ್ನು ನೋಡಿದ ಹುಡುಗರು ಅದರಲ್ಲೇನಾದ್ರೂ ಆಟ ಇರಬಹುದು ಅಂತ ನೋಡಿದ್ದಾರೆ. ಲಾಕಾಗಿರೋ ಅದನ್ನು ಅನ್ಲಾಕ್ ಮಾಡಲು ಏನೇನೋ ಆಕಾರಗಳನ್ನು ಉಜ್ಜಿದ್ದಾರೆ. ಬೇಸತ್ತ ಫೋನೇ ಲಾಕಾಗಿಬಿಟ್ಟಿದೆ ಆ ಇಡೀ ದಿನಕ್ಕೆ. ಮೊಬೈಲಲ್ಲಿ ಇಂಟರ್ನೆಟ್ಟಿದ್ರೆ ಅದು ಜೀಮೇಲಿಗೆ ತಾಗಿ ಪಾಸ್ವರ್ಡು ಹೊಂದಿಸಿ ಸರಿಯಾಗ್ತಿತ್ತಂತೆ. ಆದ್ರೆ ಮಳೆಗಾಲದಲ್ಲಿ ಕೈಕಾಲು ಹೊತ್ತುಕೊಂಡು ಹೋಗೋದೇ ಕಷ್ಟವಾಗಿರೋ ಹಳ್ಳಿ ಮೂಲೆಯಲ್ಲಿ ಇಂಟರ್ನೆಟ್ಟೆಲ್ಲಿ ಬರ್ಬೇಕು ? ಮತ್ತೆ ಪೇಟೆಗೆ ಮರಳಿ ರಿಪೇರಿಯಂಗಡಿ ಹೊಕ್ಕೋ ತನಕ ಅವನ ಮೊಬೈಲು ಇದ್ದೂ ಮೇಲು ಹೋಗ್ಲಿ,ಒಂದು ಕಾಲೂ ಮಾಡೋಕಾಗದೆ ಸತ್ತಂತಾಗಿತ್ತು. ಇನ್ನು ಒಂದು ಕೈಯಲ್ಲಿ ಏನೋ ತಿಂತೀದರ ಅಂತಿಟ್ಕೊಳ್ಳಿ. ಮತ್ತೊಂದು ಕೈಯಲ್ಲಿ ಮೊಬೈಲ ಕವರ ಓಪನ್ ಮಾಡಿ , ಅದರ ಅನಲಾಕಿನ ಚಿತ್ರ ಬರೆಯೋದೇ ಒಂದು ಸಾಹಸ. ಇನ್ನು ಒಂದು ಕೈಯಲ್ಲಿ  ಫೋಟೋ ತೆಗ್ಯೋದು ಮತ್ತೊಂದು ಸಾಹಸ. ಈ ಸಾಹಸಕ್ರೀಡೆಯಲ್ಲಿ ವಿಜೇತರಾದವರಿಗೂ ಒಂದು ಕೊರಗು.ಕ್ಯಾಮೆರಾದಂತಲ್ಲವಿದು. ಮೊಬೈಲಲ್ಲಿ ಬೇರೆ ಅವ್ರಿಗೆ ಫೋಟೋ ತೆಗೆಯೋಕೆ ಬರದಿದ್ದರೆ ಅಂತ್ಲೋ, ದುಬಾರಿ ಫೋನು ಬೀಳಿಸಿಬಿಟ್ರೆ ಅಂತ್ಲೋ ಭಯದಲ್ಲಿ ಎಲ್ಲಾ ಫೋಟೋಕ್ಕೂ ಇವ್ರೇ ಫೋಟೋಗ್ರಾಫರ್ರು.ಫೋನಿದ್ದರೇನು ಬಾಸು ಅದರಲ್ಲೊಂದು ಫೋಟೋ ಆಗುವ ಪುಣ್ಯವೂ ಇಲ್ಲದಿದ್ದ ಮೇಲೆ ಅನ್ನೋ ಪರಿಸ್ಥಿತಿ ಬಂದಿದೆ ಈ ಚತುರವಾಣಿ ಚತುರರಿಗೆ.

ಇನ್ನು ತೂತಾದ ಜೇಬಿನ ಹಾಗೇ, ಈ ಮೊಬೈಲಿಂದ ಹರಿದುಹೋಗುತ್ತಿರುವ ಸಮಯ ಮತ್ತು ಆರೋಗ್ಯ. ಮುಂಚೆಯೆಲ್ಲಾ ಮನೆಮಂದಿಯೊಂದಿಗೆ ಹರಟಲೋ, ಹೊರಗೆ ಆಟ ಆಡಲೋ ಸಮಯ ಸಿಗುತ್ತಿತ್ತು ಜನರಿಗೆ. ಈಗಿನ ಮೊಬೈಲಿನ ತರಾವರಿ ಗೇಮುಗಳ ಗೆಲ್ಲೋದೇ ಜೀವನದ ಪರಮೋಚ್ಛ ಗುರಿ ಅಂತ ಭಾವಿಸಿರೋ ಮಂದಿಗೆ ಇದರಿಂದ ತಮ್ಮ ಕಣ್ಣ ಮೇಲೆ ಎಷ್ಟು ಒತ್ತಡವಿದೆ, ಎಷ್ಟು ಸಮಯ ಪೋಲಾಗಿದೆಯೆಂಬ ಅರಿವೇ ಇಲ್ಲ. ಕ್ಯಾಂಡಿ ಕ್ರಷ್ ಆಡೋ ಹುಡುಗನಿಗೆ ಪರೀಕ್ಷೆಗೆ ಸರಿಯಾಗಿ ಓದದಿದ್ರೆ ತನ್ನ ಜೀವನವೇ ಕ್ರಷ್ಷಾಗಿಹೋಗೋ ಅಪಾಯ, ಆಂಗ್ರಿ ಬರ್ಡ್ ಆಡುವವನಿಗೆ ಇವತ್ತು ಕೆಲಸ ಮುಗಿಸದಿದ್ದರೆ ನಾಳೇ ಬಾಸು ಸಿಟ್ಟಾಗೋ ಕಲ್ಪನೆ ಬರೋದಿಲ್ಲ. ಆದ್ರೆ ಇದು ಸ್ಮಾರ್ಟ್ ಫೋನುಗಳ ಸಮಸ್ಯೆಯಲ್ಲ. ಸಮಯವರಿಯದ ನಮ್ಮದೇ. ಪ್ರಯಾಣದಲ್ಲಿದ್ದಾಗ್ಲೂ ಕೆಲಸ ಮಾಡೋಕೆ ಸಹಾಯಮಾಡೊಕೆ, ಸಮಯವುಳಿಸೋಕೆ ಅಂತ ಬಂದಿದ್ದೀ ಸ್ಮಾರ್ಟ್ ಫೋನು. ಆದ್ರೆ ಆಗಿದ್ದೇನು ? ಮಂಗನ ಕೈಯ ಮಾಣಿಕ್ಯದಂತೆ ಇದು ಮಕ್ಕಳ ಕೈಗೂ ದಕ್ಕೋ ವೀಡಿಯೋ ಗೇಮಾದಂತಾಗಿದೆ.ಆರಾಮದ ಸಾಧನವಾಗಬೇಕಾದ ಇದು ಹೋದಲ್ಲೆಲ್ಲೂ ಆರಾಮ ಕೊಡದೇ ತನ್ನ ಚಿಂತೆಯನ್ನೇ ಹೊರಿಸೋ ಹೊಣೆಗಾರಿಕೆಯಾಗಿದೆ. ಎಲ್ಲಕ್ಕೂ ಮುಖ್ಯ ಕಾರಣ ? ನಾವೇ. ಫೋನೆಂಬುದ ಅಗತ್ಯಕ್ಕೆ ಬದಲಾಗಿ ಘನತೆಯ ಸಾಧನವಾಗಿ ಖರೀದಿಸಿದ್ದೇನು ಕಮ್ಮಿ ಸಾಧನೆಯೇ ? ಮನುಷ್ಯನನ್ನು ಅವನ ವಿದ್ಯೆಯಿಂದ ಅಳೆಯುವ ಕಾಲವೊಂದಿತ್ತಂತೆ. ಆಮೇಲೆ ಅವನ ಬಟ್ಟೆ ಮೇಳೆ ಅಳೆಯೋ ಕಾಲ ಬಂತು. ಈಗಿರೋದೇನಿದ್ರೂ ಅವನ ಮೊಬೈಲ್ ಸೈಜಿನ ಮೇಲೆ, ಅದ್ರ ರೇಟಿನ ಮೇಲೇ ಅಳೆಯೋದು. ಹಾಗಾಗಿ ಜೇಬಲ್ಲಿ ದುಡ್ಡಿಲ್ಲದಿದ್ರೆ ಸಾಲ ಮಾಡಾದ್ರೂ ಸ್ಮಾರ್ಟ್ ಫೋನು ತಗೊಳ್ಳುವಂತಹ ಕಾಲ ಬಂದುಬಿಟ್ಟಿದೆ. ಮೂರು ದಿನ ಚಾರ್ಚ್ ಮಾಡದಿರೂ ಬದುಕಿರುತ್ತಿದ್ದ ಆಪದ್ಭಾಂದವ ಫೋನುಗಳ ಮಧ್ಯೆ ಈ ಪದೇ ಪದೇ ಜಾರ್ಜು ಕೇಳೋ ಫೋನುಗಳ ನಿವಾರಿಸಿ ಬಿಸಾಕಬೇಕೆನಿಸಿಬಿಡುತ್ತೆ ಕೆಲೋ ಸಲ. ಆದ್ರೇನು ಮಾಡೋಣ. ದೇವರೇನಾದ್ರೂ ಪ್ರತ್ಯಕ್ಷನಾದ್ರೂ ಶೀಘ್ರಮೇವ ಸ್ಮಾರ್ಟ್ ಫೋನ್ ಪ್ರಾಪ್ತಿರಸ್ತು ಅಂತ ಆಶೀರ್ವದಿಸೋ ಕಾಲ ಬಂದು ಬಿಟ್ಟಿದೆ. ಕಾಲಾಯ ತಸ್ಮೈ ನಮಃ. !!

ಈ ಲೇಖನ ಅಮೇರಿಕಾದ "ಅಕ್ಕ" ಸಮ್ಮೇಳನದಲ್ಲಿ ಬಿಡುಗಡೆಗೊಂಡ "ಹರಟೆ ಕಟ್ಟೆ"-ನೂತನ ಪ್ರಬಂಧಗಳ ಸಂಕಲನದಲ್ಲಿ ಪ್ರಕಟಣೆಗೊಂಡಿದೆ

No comments:

Post a Comment