Sunday, March 22, 2015

ಬೆಂಗಳೂರ ಅತೀ ಪುರಾತನ ದೇವಾಲಯ -೪:ಹಲಸೂರು ಸೋಮೇಶ್ವರ ದೇಗುಲ



outside wall of Halasooru someshwara temple
ಪೀಠಿಕೆ:
ಬೆಂಗಳೂರ ಅತೀ ಪುರಾತನ ದೇಗುಲ ಯಾವುದು ಅಂದಾಗ ಕೆಲವರು ಬೇಗೂರು ಪಂಚಲಿಂಗೇಶ್ವರ ಅಂದ್ರೆ ಕೆಲವರು ದೊಮ್ಮಲೂರ ಚೊಕ್ಕನಾಥೇಶ್ವರ ಎಂದೂ ಕೆಲವರು ಮಡಿವಾಳದ ಸೋಮೇಶ್ವರನೆಂದೂ ಹೇಳುತ್ತಾರೆ. ಇನ್ನು ಕೆಲವರ ಪ್ರಕಾರ ಅದು ಹಲಸೂರು ಸೋಮೇಶ್ವರ ದೇಗುಲ. ಸೋಮೇಶ್ವರ ದೇಗುಲಕ್ಕೆ ಹೋಗೋ ಹೊತ್ತಿಗೆ ಆಂಜನೇಯನ ಗುಡಿ ಯಾಕೆ ಸಿಗುತ್ತೆ(ಹಿಂದಿನ ಎರಡು ಭಾಗಗಳಲ್ಲಿ ಸಿಕ್ಕಂತೆ ಇಲ್ಲೂ ಸಿಗುತ್ತಾ ?) ಮತ್ತು ಸೋಮೇಶ್ವರ ಕಟ್ಟಿದ್ದು ಯಾರ ಕಾಲದಲ್ಲಿ, ಉಳಿದ ಮೂರು ದೇಗುಲಗಳಿಗೂ ಇದಕ್ಕೂ ಇರೋ ಸಮಾನತೆಯೇನು, ಭಿನ್ನತೆಗಳೇನು ಅನ್ನೋ ಒಂದಿಷ್ಟು ಪ್ರಶ್ನೆಗಳನ್ನು ಹೊಕ್ಕು ಇಂದು ಹೊಕ್ಕಿದ್ದು ಹಲಸೂರು ಸೋಮೇಶ್ವರನ ಸನ್ನಿಧಿಗೆ
Praveshadwara, See the lday and flower designs

ಇಲ್ಲಿಯವರೆಗೆ ನೋಡಿದ ಬೆಂಗಳೂರ ಚೋಳರ ದೇಗುಲಗಳಲ್ಲೇ ಅತೀ ಸುಂದರವಾದ ಮತ್ತು ತನ್ನ ಮೂಲ ಸ್ವರೂಪವನ್ನು ಬಹಳಷ್ಟು ಮಟ್ಟಿಗೆ ಉಳಿಸಿಕೊಂಡಿರುವುದು ಹಲಸೂರು ಸೋಮೇಶ್ವರ ದೇಗುಲ. ಇಲ್ಲಿಯವರೆಗೆ ನಾ ಕಂಡ ಬೆಂಗಳೂರ ಪುರಾತನ ದೇಗುಲಗಳಲ್ಲೇ ಅತೀ ಸುಂದರ ದೇಗುಲವಿದು.ಸ್ವಾಗತ ದ್ವಾರದಲ್ಲಿರುವ ಬಾಲೆಯರೇ ಆಗಲಿ, ಅವುಗಳ ಮೇಲಿರುವ ಹೂವಿನ ಹಲವು ಕೆತ್ತನೆಗಳೇ ಆಗಲಿ, ಪ್ರವೇಶಗೋಪುರದ ನಾಲ್ಕು ದಿಕ್ಕಿನಲ್ಲಿರುವ ಕೆತ್ತನೆಗಳೇ ಆಗಲಿ, ನಂತರ ಒಳಗೆ ಸಿಗುವ ಕಂಬಗಳಲ್ಲಿರುವ ಕೆತ್ತನೆಗಳೇ ಆಗಲಿ ತಮ್ಮ ಶಿಲ್ಪಕಲೆಯಿಂದ ಮನಸೂರೆಗೊಳ್ಳುತ್ತವೆ

ಹೋಗೋದು ಹೇಗೆ ?
ದೊಮ್ಮಲೂರಿನಿಂದ ಬರೋದಾದ್ರೆ ಬಸ್ ಸಂಖ್ಯೆ ೨೦೧.
ಮಾರತ್ತಳ್ಳಿ ಕಡೆಯಿಂದ ಬರೋದಾದ್ರೆ: ಶಿವಾಜಿನಗರದ ಬಸ್ಸಿನಲ್ಲಿ ಟ್ರಿನಿಟಿ ವೃತ್ತದಲ್ಲಿ ಇಳಿದು, ಐ.ಎನ್.ಜಿ ವೈಶ್ಯ ಬ್ಯಾಂಕಿನ ಎದುರಿನಲ್ಲಿರುವ ರಸ್ತೆಯಲ್ಲಿ ಎಡಕ್ಕೆ ತಿರುಗಿ 1MG ಮಾಲಿನ ಎದುರಿನಲ್ಲಿರುವ ರಸ್ತೆಯಲ್ಲಿ(ಹಳೇ ಮದ್ರಾಸ್ ರಸ್ತೆ)  ಹಾಗೇ ಮುಂದೆ ಬಂದರೆ ಮತ್ತೊಂದು ಸರ್ಕಲ್ ಸಿಗುತ್ತೆ.ಅದರಲ್ಲಿ ಬಲಕ್ಕಿರುವ ಬಜಾಜ್ ಸ್ಟ್ರೀಟ್ ರಸ್ತೆಯಲ್ಲಿ ಸ್ವಲ್ಪ ಹೊತ್ತು ಸಾಗಿದರೆ ಒಂದು ಆಂಜನೇಯನ ದೇಗುಲ ಸಿಗುತ್ತದೆ. ಅಲ್ಲಿಂದ ಹಾಗೇ ಸ್ವಲ್ಪ ಮುಂದಕ್ಕೆ ಸಾಗಿದರೆ ಒಂದು ಹಳೇ ಕಾಲದ ಕಾಂಪೌಂಡ್ ಸಿಗುತ್ತೆ. ಅದೇ ಸೋಮೇಶ್ವರ ದೇಗುಲ.  
ಮಾರತ್ತಳ್ಳಿಯಿಂದ ಮೆಜೆಸ್ಟಿಕ್ ಬಸ್ಸು ಹತ್ತಿದ್ರೆ: ಹಲಸೂರು ಪೋಲೀಸ್ ಸ್ಟೇಷನ್ ಬಳಿ ಇಳಿದು ಅಲ್ಲಿಂದ ಟ್ರಿನಿಟಿ ವೃತ್ತಕ್ಕೆ ತೆರಳಿದ್ರೆ ಅಲ್ಲಿಂದ ಮೇಲಿನಂತೆ ತೆರಳಬಹುದು.
ವಾಪಾಸ್ ಮೆಜೆಸ್ಟಿಕ್/ಶಿವಾಜಿನಗರ/ದೊಮ್ಮಲೂರಿಗೆ ಬರೋಕೆ: ಸೋಮೇಶ್ವರನ ದೊಡ್ಡ ತೇರಿನ ಹಿಂಭಾಗದಲ್ಲೇ ಸಿಗ್ನಲ್ಲು ಮತ್ತೆ ಬಸ್ಟಾಪಿದೆ. ಅಲ್ಲಿಂದ ಕೆ.ಆರ್ ಮಾರ್ಕೆಟ್, ಮೆಜೆಸ್ಟಿಕ್, ದೊಮ್ಮಲೂರು , ಟಿನ್ ಫ್ಯಾಕ್ಟರಿ, ಶಿವಾಜಿನಗರ.. ಹೀಗೆ ಹಲವೆಡೆಗೆ ಬಸ್ಸುಗಳು ಸಿಗುತ್ತೆ.


Degulada Ratha

 ಇತಿಹಾಸ:
೧)ದೇಗುಲದ ಸುತ್ತಮುತ್ತಲು ನಡೆದ ಪುರಾತತ್ವ ಇಲಾಖೆಯ ಅಗೆತಗಳಿಂದ ೧೨೦೦ ವರ್ಷಗಳಷ್ಟು ಹಳೆಯದಾಗಿರಬಹುದು ಎಂದು ಅಂದಾಜಿಸಲಾದ ಕಲ್ಯಾಣಿ ದೊರಕಿದ್ದು ಇದು ಚೋಳರ ಕಾಲದ ದೇಗುಲವಿರಬಹುದು, ನಂತರದಲ್ಲಿ ಯಲಹಂಕ ನಾಡಪ್ರಭು ಜಯಪ್ಪಗೌಡ(೧೪೨೦-೫೦)ಮತ್ತು ನಂತರದಲ್ಲಿ ವಿಜಯನಗರದ ಕಾಲದಲ್ಲಿ ಬಂದ ಕೆಂಪೇಗೌಡನ ಕಾಲದಲ್ಲಿ ಒಂದಿಷ್ಟು ನವೀಕರಣಗಳಾಗಿರಬಹುದು ಎನ್ನುತ್ತವೆ ಕೆಲವು ಮೂಲಗಳು.
೨)ಮತ್ತೊಂದು ಮೂಲಗಳ ಪ್ರಕಾರ ಪ್ರಸಕ್ತ ಹಲಸೂರಿನ ಬಳಿ ಬೇಟೆಗೆ ಬಂದಿದ್ದ ಜಯಪ್ಪಗೌಡ ಸುಸ್ತಾಗಿ ಒಂದು ಮರದ ಕೆಳಗೆ ಮಲಗುತ್ತಾನೆ. ಆಗ ಅವನ ಕನಸಿನಲ್ಲಿ ಪ್ರತ್ಯಕ್ಷನಾದ ವ್ಯಕ್ತಿಯೊಬ್ಬ ಆತ ಮಲಗಿರುವ ಜಾಗದಲ್ಲಿ ಶಿವಲಿಂಗವಿದೆಯೆಂದೂ ,ಅದನ್ನು ಅಗೆಸಿ ಅಲ್ಲೇ ದೇಗುಲವನ್ನು ನಿರ್ಮಿಸಬೇಕೆಂದೂ ತಿಳಿಸುತ್ತಾನೆ. ಜಯಪ್ಪಗೌಡ ಅಲ್ಲೇ ಅಗೆಸಲಾಗಿ ಶಿವಲಿಂಗವೂ, ನಿಧಿಯೂ ದೊರೆಯಿತೆಂದೂ ಅದರಿಂದ ದೇಗುಲ ನಿರ್ಮಾಣವಾಯಿತೆಂದೂ ತಿಳಿಸುತ್ತವೆ ಮೂಲಗಳು.

೩)ಮತ್ತೊಂದು ಕೊಂಚ ಭಿನ್ನವಾದ ಮೂಲಗಳ ಪ್ರಕಾರ ಯಲಹಂಕವನ್ನು ತನ್ನ ರಾಜಧಾನಿಯನ್ನಾಗಿಸಿಕೊಂಡಿದ್ದ  ಕೆಂಪೇಗೌಡನು ಬೇಟೆಗೆ ತೆರಳಿದ್ದಾಗ ತನ್ನ ರಾಜಧಾನಿಯಿಂದ ದೂರ ದೂರಕ್ಕೆ ತೆರಳಿ ಈ ಪ್ರದೇಶಕ್ಕೆ ಬರುವಷ್ಟರಲ್ಲಿ ಸುಸ್ತಾಗಿ ಹೋಗುತ್ತಾನೆ.ಇಲ್ಲೇ ರಾತ್ರಿಯಾಗಿ ಒಂದು ಮರದಡಿ ಮಲಗಿರಲು ಆತನ ಕನಸಿನಲ್ಲಿ ಇಲ್ಲಿಯ ದೇವನಾದ ಸೋಮೇಶ್ವರನು ಪ್ರತ್ಯಕ್ಷನಾಗಿ ತನಗೊಂದು ದೇಗುಲವನ್ನು ಕಟ್ಟಿಸುವಂತೆ ಕೋರುತ್ತಾನೆ. ತದನಂತರದಲ್ಲಿ ಕೆಂಪೇಗೌಡನಿಗೆ ಅದೇ ಜಾಗದಲ್ಲಿ ನಿಧಿಯೂ ದೊರಕಿ ದೇಗುಲ ನಿರ್ಮಾಣವಾಗುತ್ತದೆ.
೪)ಮದ್ರಾಸ್ ಮತ್ತು 1890 ಎಂದು ಇಂಗ್ಲೀಷ್ ಅಕ್ಷರ/ಅಂಕಿಗಳಲ್ಲಿಯೂ , ಕೆಳಗೆ ತಮಿಳಿನ ಲಿಪಿಯಲ್ಲಿಯೂ ಬರೆಯಲ್ಪಟ್ಟ ದೀಪದ ಕಂಬದಂತಹ ಕಂಬವೊಂದು ದೇಗುಲದ ಹಿಂಭಾಗದಲ್ಲಿವೆ. ಆಗಿನ ಮದ್ರಾಸ್ ಸರ್ಕಾರದಿಂದ ದೇಗುಲಕ್ಕೆ ಸಿಕ್ಕಿರಬಹುದಾದ ಅನುದಾನ/ಮರ್ಯಾದೆಯ ಕುರುಹೇ ಇದು ಎಂಬ ಪ್ರಶ್ನೆಗೆ ಸದ್ಯಕ್ಕೆಂತೂ ಉತ್ತರ ಸಿಕ್ಕಿಲ್ಲ. ಆಗಿನ ಸರ್ಕಾರ ಮತ್ತು ಈ ದೇವಸ್ಥಾನದ ಸಂಬಂಧದ ಬಗೆಗೆ ಯಾರಾದರೂ ಬೆಳಕು ಚೆಲ್ಲಿದರೆ ಅದೂ ಕುತೂಹಲಕರವಾದೀತು.
ನಿರ್ಮಾಣ ಹೇಗೆ ಆಗಿರಲಿ, ಯಾರಿಂದಲೇ ಆಗಿರಲಿ.ಒಂದಂತೂ ಸ್ಪಷ್ಟ. ಮಹಿಷ ಮರ್ಧಿನಿ, ನರಸಿಂಹನ ಕೆತ್ತನೆಗಳಿರುವ ಮಂಟಪದ ಶಿಲ್ಪಗಳಿಗೂ ಹೊರಾಂಗಣದಲ್ಲಿರುವ ತಮಿಳು ಋಷಿಗಳಂತಹ ಶಿಲ್ಪಗಳ ಶೈಲಿಗೂ ಭಿನ್ನತೆಯಿದೆ. ಹಾಗಾಗಿ ಒಂದು ಕಾಲದಲ್ಲಿ ನಿರ್ಮಾಣಗೊಂಡ ದೇಗುಲ ನಂತರ ಬೇರೆ ಬೇರೆ ಕಾಲದಲ್ಲಿ ಹಲವು ರೂಪಾಂತರಗಳನ್ನು ಕಂಡಿರಬಹುದು ಅನ್ನೋ ಊಹೆಯಷ್ಟೆ. ಇಲ್ಲಿನ ಕೆಲವೆಡೆ ಶಾಸನಗಳಿದ್ದಿರಬಹುದಾದ ಕುರುಹಿದ್ದರೂ ಯಾವ ದಾನಪತ್ರ, ಶಿಲಾಶಾಸನಗಳೂ ಕಾಣದಿರುವುದು ಇಲ್ಲಿಯವರೆಗೆ ನೋಡಿದ ಚೋಳ ದೇಗುಲಗಳಿಗಿಂತ ಇದನ್ನು ಭಿನ್ನವಾಗಿಸುತ್ತದೆ.

Line of Munis and Devas
Stamba having inscription about Madras and 1890

A Closer look

ಕೆತ್ತನೆಗಳು:
ಪ್ರಧಾನ ದೇಗುಲದ ಗರ್ಭಗೃಹದಲ್ಲಿ ಸೋಮೇಶ್ವರನಿದ್ದರೆ , ಹೊರಭಾಗದಲ್ಲಿರುವ ಮತ್ತೊಂದು ದೇಗುಲದಲ್ಲಿ ಮೀನಾಕ್ಷಾಂಬ ಇದ್ದಾಳೆ. ನಂತರದಲ್ಲಿ ಆಂಜನೇಯನ ಗುಡಿಯಿದ್ದರೂ ಅದು ಇತ್ತೀಚೆಗೆ ಕಟ್ಟಲಾಗಿದೆಯೆಂದು ಭಾಸವಾಗುತ್ತದೆ. ಪ್ರಧಾನ ದೇಗುಲದ ಪ್ರದಕ್ಷಿಣಾ ಪಥದಲ್ಲಿ ಮಹಾಗಣಪತಿ, ನಾಗದೇವತೆಗಳು ಮುಂತಾದ ಹಲವು ದೇವತೆಗಳು ದೇಗುಲದ ಸಣ್ಣ ಸಣ್ಣ ಗೂಡುಗಳಲ್ಲಿ ಪ್ರತಿಷ್ಟಾಪಿಸಲ್ಪಟ್ಟಿದ್ದಾರೆ.ಸೋಮೇಶ್ವರನ ಎದುರಿಗಿರುವ ಸಿಂಹದ ಕಂಬವನ್ನು ನೋಡಲು ಮರೆಯದಿರಿ. ಎದುರು ಬದರಾಗಿರುವ ಎರಡು ಕಂಬಗಳಲ್ಲೂ ನೆಲಕ್ಕೆ ತನ್ನ ಕಾಲು ಮತ್ತು ಕೈಗಳನ್ನು ಅಪ್ಪಳಿಸಿ ಕೂತಿರುವ ಸಿಂಹದ ಬೆನ್ನ ಮೇಲೆ ಕಂಬ ಇದ್ದು, ದೊಡ್ಡ ಕಂಬ ಮುಕ್ತಾಯಗೊಳ್ಳುವ ಭಾಗದಲ್ಲಿ ಮತ್ತೊಂದು ಸಿಂಹ. ಅದರ ಮೇಲೆ ಮತ್ತೊಂದು ಸಿಂಹವಿದ್ದು ಅದರ ಮೇಲೆ ಮತ್ತೊಂದು ಸಣ್ಣಕಂಬವಿರುವಂತಹ ಕೆತ್ತನೆಯಲ್ಲಿ ಸಿಂಹಗಳೇ ಕಂಬಗಳನ್ನು ಹೊತ್ತಂತಾ ಸುಂದರ ರಚನೆಯಿದೆ.


ಹಾಗೇ ಹೊರಬಂದರೆ ಸೋಮೇಶ್ವರನ ಎದುರಿಗೆ ನಂದೀಶ್ವರ ವಿರಾಜಮಾನನಾಗಿದ್ದಾನೆ. ಅವನ ತಲೆಯ ಮೇಲಿನ ಮೇಲ್ಛಾವಣಿಯಲ್ಲಿ ಹಲವು ಭಂಗಿಯ ತೋಳಗಳು, ಹಸುಗಳ ಸಾಲಿದೆ.  ನಂದಿಯ ಎದುರಿನ ಪ್ರವೇಶದ್ವಾರದ ಎಡಭಾಗದಲ್ಲಿ ಕೈಲಾಸವೆತ್ತಲು ಪ್ರಯತ್ನಿಸುತ್ತಿರುವ ದಶಾನನ ಮತ್ತು ಕೈಲಾಸದಲ್ಲಿ ಕುಳಿತಿರುವ ಶಿವ ಪಾರ್ವತಿ ಮತ್ತು ಪರಿವಾರದ ಚಿತ್ರಣವಿದೆ. ಬಲದ್ವಾರದ ಪಕ್ಕದಲ್ಲಿ ಮಹಿಷಾಸುರ ಮರ್ಧಿನಿಯ ಕೆತ್ತನೆಯಿದೆ. ದ್ವಾರದ ಎಡಪಾರ್ಶ್ವದಲ್ಲಿ ದೇವದೇವಿಯರು ಕೂತಿರುವ ರತ್ನಗನ್ನಡಿ ಮತ್ತು ಉಯ್ಯಾಲೆ ಮಂಟಪವಿದೆ. ಹಲವು ಸಾಲಿನ ಕಲ್ಲುಗಳ ಮಂಟಪಗಳಲ್ಲಿ ಒಂದು ಕಾಲಲ್ಲಿ ಸಿಂಹ, ಮತ್ತೊಂದು ಕಾಲಲ್ಲಿ ಆನೆಯನ್ನು ಹಿಡಿದಿರುವ ಎರಡು ತಲೆಯ ಪಕ್ಷಿ ಗಂಡಭೇರುಂಡ, ಮಂಟಪವನ್ನು ಹೊತ್ತಿರುವ ಸಿಂಹ, ನಂದಿ, ಆನೆ, ಶಿವಲಿಂಗ ಮುಂತಾದ ಕೆತ್ತನೆಗಳು ಕಂಡುಬರುತ್ತವೆ. ಇಲ್ಲಿಯವರೆಗೆ ನೋಡಿದ ಎಲ್ಲಾ ಚೋಳ ದೇಗುಲಗಳಲ್ಲಿರುವ ಶಿಲ್ಪಗಳು ಇಲ್ಲಿವೆ, ಅಲ್ಲೆಲ್ಲೂ ಇಲ್ಲದ ಹಲವು ಇಲ್ಲಿವೆ ಅಂದ್ರೆ ಶಿಲ್ಪಕಲೆಯ ಅಗಾಧತೆಯನ್ನು ನೀವು ಊಹಿಸಬಹುದು. ಉದಾಹರಣೆಗೆ ಅಂಬೆಗಾಲಿಡುತ್ತಿರುವ ಬೆಣ್ಣೆ ಕೃಷ್ಣ, ಹಾವಿನೊಂದಿಗೆ ಆಡುತ್ತಿರುವ ಮಂಗ, ಬೇಡರ ಕಣ್ಣಪ್ಪನ ತರಹದ ಶಿಲ್ಪ, ಕುದುರೆಯೇರಿ ಹೊರಟ ಸವಾರ ಮುಂತಾದ ಹಲವು ಶಿಲ್ಪಗಳಿವೆ. ಫೋಟೋ ತೆಗೆಯಹತ್ತಿದರೆ ಪ್ರತೀ ಕಂಬದ ನಾಲ್ಕು ಕೋನಗಳನ್ನೂ ತೆಗೆಯಬೇಕಾದೀತು. ಇನ್ನು ದೇಗುಲದ ಹೊರಾವರಣದಲ್ಲಿರುವ ಷಣ್ಮುಖ, ಬ್ರಹ್ಮದೇವ, ವಿಷ್ಣುವಿನ ಅವತಾರಗಳು, ಋಷಿಮುನಿಗಳು.. ಹೀಗೆ ಫೋಟೋಗಳದ್ದೇ ಒಂದು ದೊಡ್ಡ ರಾಶಿಯಾದೀತು. ಆನೆಯ ಮೇಲಿನ ಸಿಂಹವನ್ನು ಸವಾರಿ ಮಾಡುತ್ತಿರುವ ಶಿಲ್ಪ ಇದರ ನಂತರ ಬಂದ ಹಲವು ದೇಗುಲಗಳಲ್ಲಿ ಕಾಣಸಿಗುತ್ತದಾದರೂ ಸಿಂಹದ ಹಲ್ಲುಗಳನ್ನು, ಕೇಶರಾಶಿಯನ್ನೂ ಗುರುತಿಸುವಷ್ಟು ಸುಂದರ ಶಿಲ್ಪವನ್ನು ಇಲ್ಲಿಯವರೆಗೂ ಕಂಡಿರಲಿಲ್ಲ. ದೇಗುಲದ ಪ್ರಾಂಗಣದಲ್ಲಿ ಫೋಟೋಗ್ರಫಿಗೆ ಅನುಮತಿಯಿರದ ಕಾರಣ ಮತ್ತು ನೀವು ಅಲ್ಲೇ ಹೋಗಿ ಆ ಸೌಂದರ್ಯವನ್ನು ಸವಿಯಲೆಂಬ ಉದ್ದೇಶದಿಂದ ಆ ಸುಂದರ ಶಿಲ್ಪಗಳ ಫೋಟೋಗಳನ್ನಿಲ್ಲಿ ಹಾಕುತ್ತಿಲ್ಲ.

Outside of Temple
Back view
A closer look at the shikhara from the back. Stamba of Madras lies infront of this

ಹಂಸವಾಹನ ಬ್ರಹ್ಮ ಮತ್ತು ಮಯೂರವಾಹನ ಕಾರ್ತೀಕೇಯ
one more shot
ದೇಗುಲದ ಪಕ್ಕದಲ್ಲಿರುವ ನಾಗಪುಷ್ಪ
Gap between somwshwara and Kamakshamba temple. This pathway is also having lots of scluptures

ಸಿಂಹಸವಾರ. ಕೆತ್ತನೆಯ ಸೂಕ್ಷ್ಮತೆಗಳನ್ನು ಗಮನಿಸಿ
 ದೇಗುಲದ ಸೌಂದರ್ಯ ಬರೀ ಒಳಗಡಗಿಲ್ಲ. ಪ್ರವೇಶದ್ವಾರದಲ್ಲಿ ಮತ್ತು ನಾಲ್ಕು ದಿಕ್ಕಿನಲ್ಲೂ ನಂದಿಗಳಿಂದ ಕೂಡಿದ ನಂದಿಧ್ವಜದ ಶಿಲ್ಪಗಳಲ್ಲೂ ಇದನ್ನು ಕಾಣಬಹುದು

Dhwaja stambha
ಧ್ವಜಸ್ಥಂಭದಲ್ಲಿರುವ ದೇವಿಯ ಎರಡು ರೌದ್ರಾವತಾರಗಳು,ನಂದಿ ಮತ್ತು ಗಣಪತಿಯ ಕೆತ್ತನೆಗಳನ್ನು ನೋಡಲು ಮರೆಯದಿರಿ




 ಸದ್ಯದಲ್ಲಿ ಭೇಟಿ ಕೊಡಬಹುದಾದ ವಿಶೇಷ ಸಮಯ: ಇದೇ ಬರುವ ಏಪ್ರಿಲ್ ೪ ರಂದು ದೇಗುಲದಲ್ಲಿ ಬ್ರಹ್ಮ ರಥೋತ್ಸವ ನಡೆಯಲಿದ್ದು ಬೆಳಗ್ಗೆ ೮:೩೦ ಇಂದ ಮಧ್ಯಾಹ್ನ ಒಂದರವರೆಗೆ ಅದರ ಕಾರ್ಯಕ್ರಮಗಳು ನಡೆಯುತ್ತವೆಯಂತೆ. ಆ ಸಮಯದಲ್ಲಿ ಸಜ್ಜುಗೊಳ್ಳುವ ರಥವನ್ನು ಕೆಳಗಿನ ಚಿತ್ರದಲ್ಲಿ ಕಾಣಬಹುದು




1 comment:

  1. ಹಲಸೂರು ಸೋಮೇಶ್ವರ ದೇವಾಲಯದ ಕುರಿತಂತೆ ಒಳ್ಳೆಯ ಮಾಹಿತಿ.

    ReplyDelete