Tuesday, June 16, 2015

ಕಾಡೋ ಕಾಡು

ಅಡವಿ ದೇವಿಯ ಕಾಡು ಜನಗಳ ಈ ಹಾಡು.. ನಾಡಿನ ಜೀವ ತುಂಬಿದೆ..ರಾಯರು ಬಂದರು ಮಾವನ ಮನೆಗೆ ಚಿತ್ರದಲ್ಲಿ ಎಸ್.ಪಿ.ಬಿ ಸಂಗಡಿಗರು ಹಾಡಿದ ಮೇಲಿನ ಹಾಡು ಕೇಳದವರಿಲ್ಲ ಅನಿಸುತ್ತೆ(ಕೊಂಡಿ ೧). ಜಂಗಲ್ ಬುಕ್ಕಿನ ಮೋಗ್ಲಿಯ ಕತೆಗಳನ್ನು ಕೇಳದ ಒಂದು ಪೀಳಿಗೆಯವರೇ ಇಲ್ಲವೆನ್ನುವಷ್ಟು ಪ್ರಸಿದ್ದಿ ಪಡೆದಿತ್ತು ಒಂದು ಪುಸ್ತಕ ಒಂದು ಕಾಲಕ್ಕೆ.ಕಾಡಲ್ಲಿ ಕಳಲೆಯನ್ನೋ, ಮರಗೆಸವನ್ನೋ , ಜೇನನ್ನೋ ಕೊಯ್ಯಲು ಹೋಗುತ್ತಿದ್ದ ಅಪ್ಪ, ಅಜ್ಜ ಅಲ್ಲೇ ಸಿಗುತ್ತಿದ್ದ ಹಲಸಿನ ಹಣ್ಣು ತೀರಾ ದೊಡ್ಡದಿದ್ರೆ ಮಾತ್ರ ಮನೆಗೆ ತರುತ್ತಿದ್ದರಂತೆ. ಸಣ್ಣ ಪುಟ್ಟದ್ದೆಲ್ಲಾ ಅಲ್ಲೇ ಸ್ವಾಹಾ ! ಆಹಾ, ಈ ತರದ ಮಾತುಕತೆಗಳನ್ನ ಹಳ್ಳೀಬದಿಯ ಒಂದಿಷ್ಟು ಜನರೆಂತೂ ಕೇಳೇ ಇರುತ್ತೀರಿ. ಪೇಟೇಲಿರೋ ಮಕ್ಕಳೂ ಈ ತರದ ಕಥಾನಕಗಳನ್ನ ಅವರಜ್ಜನ, ಅಜ್ಜಿಯ ಬಾಯಲ್ಲಿ ಕೇಳ್ತಿದ್ದಾಗ ಅವರ ಕಾಡಿನ ಕಲ್ಪನೆಯಲ್ಲಿ ಮಾಡರ್ನ್ ಜಂಗಲ್ ಬುಕ್ ಬಂದಿರಲು ಸಾಕು.  ಜೂಲಿಯಾನೆ ಕೊಪ್ಕೆ ಅವರ Girl against the jungle ಪುಸ್ತಕದ ಭಾಗವೊಂದು(ಕೊಂಡಿ ೨)ನಮ್ಮ ಹೈಸ್ಕೂಲಿನ ಇಂಗ್ಲೀಷಿನಲ್ಲಿ ಪಾಠವಾಗಿತ್ತು. ಲಾಕ್ ಹೀಡ್ ಎಲೆಕ್ಟ್ರಾವೆಂಬ ವಿಮಾನದಲ್ಲಿ ತಾಯಿಯ ಜೊತೆಗೆ ಹೊರಟ ಹುಡುಗಿ ಆ ವಿಮಾನ ಕಗ್ಗಾಡಿನಲ್ಲಿ ಪತನವಾದಾಗ ಹೇಗೆ ಒಬ್ಬಂಟಿಯಾಗಿ ದಿನಗಳ ಕಾಲ ತನ್ನ ಜೀವವುಳಿಸಿಕೊಂಡು ಕೊನೆಗೂ ಕಾಡಿನಿಂದ ಹೊರಬರುವಲ್ಲಿ ಯಶಸ್ವಿಯಾಗ್ತಾಳೆ ಅನ್ನೋ ಕತೆ ಹೈಸ್ಕೂಲು ಪಟ್ಯವಾಗಿದ್ದರೂ ಆಸಕ್ತಿ ಹೊರಳಿಸುತ್ತಾ ಸಾಗೋದ್ರಲ್ಲಿ  ಲೇಖಕನ ನಿರೂಪಣೆಯಷ್ಟೇ ಅಮೇಜಾನಿನ ಕಾಡುಗಳ ದಟ್ಟ ಹಸಿರೂ ಕಾರಣವಲ್ಲವಾ ಅಂತ ಎಷ್ಟೋ ಬಾರಿ ಅನಿಸಿದ್ದಿದೆ. ಕಾಡೆಂದರೆ ಹೀಗೇ ಅಲ್ವೇ ? ಸದಾ ಕುತೂಹಲವನ್ನು, ಜೀವಚೈತನ್ಯವನ್ನು, ಉತ್ಸಾಹದ ಚಿಲುಮೆಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡ ತಾಣ. ಅದೆಷ್ಟೋ ಜೀವಿಗಳ ಕಲರವದ ತಾಣ. ಮಾನವನ ಮೂಲವೂ ಒಮ್ಮೆ ಇದ್ದಿದ್ದು ಅಲ್ಲೇ. ಹಾಗಿದ್ದೂ ಮಾನವ ತಾನು ಹತ್ತಿದ ಏಣಿಯನ್ನೇ ಒದೆವ ಮೂರ್ಖನಾಗಿರೋದು ಏಕೆ ?

ಮನೆ ಕಟ್ಟೋಕೆ ಮರ ಬೇಕಾ ? ಕಾಡು ಕಡಿ. ಫುಲ್ ವುಡನ್ ಪ್ಲೋರ್ ಬೇಕು, ರೆಸ್ಟೋರೆಂಟುಗಳಲ್ಲಿ ಮರಗಳದ್ದೇ ಚಮಚಮಿಸಬೇಕು. ಮರಗಳ ಮೇಲೆ ಮನೆಕಟ್ಟೋ ಶೋಕಿ. ಸರಿ ಅದಕ್ಕೆ ಮರ  ? ಕಡಿ ಇನ್ನೊಂದಿಷ್ಟು ಕಾಡು. ಗಂಧ, ತೇಗ, ಚಂದನಗಳನ್ನೆಲ್ಲಾ ದೊಡ್ಡ ಮಟ್ಟದಲ್ಲಿ ಸ್ಮಗಲ್ ಮಾಡಿ ಊರಬದಿ ಕಾಡುಗಳಲ್ಲಿ ಅವುಗಳೇ ಇಲ್ಲದ ಪರಿಸ್ಥಿತಿ ಬಂದು ಹೋಗಿದೆ ಈಗ. ದುಡ್ಡುಳ್ಳವರ ಶೋಕಿಗಳ ಮರಗಳ ಸಮಾಧಿಯ ಮೇಲಷ್ಟೇ ಅಲ್ಲ, ಅವರ ಭವಿಷ್ಯದ ಸಮಾಧಿಯ ಮೇಲೂ ಬದುಕುತ್ತಿವೆಯೆಂಬ ಅರಿವಾಗುತ್ತಿಲ್ಲ ಅವರಿಗೆ. ಇನ್ನು ಹಳ್ಳಿಯವರೇನು ಕಮ್ಮಿಯಿಲ್ಲ. ಉರುವಲಿಗೆ ಸೌದೆ ? ಕೊಟ್ಟಿಗೆಗೆ ಹಾಸೋಕೆ ಸೊಪ್ಪು ? ಟೇಬಲ್ಲು, ಕುರ್ಚಿ, ಬರೆಯೋ ಡೆಸ್ಕು.. ಎಲ್ಲಾ ಮರದ್ದೇ ಬೇಕು. ಅದಕ್ಕೆ ಬೇಕಾದ ಮರ ? ಮಾನವನೇ ನಿರ್ಮಿಸಿದ ಪ್ಲಾಂಟೇಷನ್ಗಳಿಂದಲೂ ಬರಬಹುದು. ಆದರೆ ತರಬೇಕಲ್ಲ ! ಸುಲಭವಾಗಿ ಸಿಕ್ಕೋ ಕಡಿಯೋಕೆ ಬರೋ ಕಾಡಿರಬೇಕಿದ್ರೆ, ಯಾರು ಬಿಡ್ತಾರೆ ? ಒಂದಿಷ್ಟು ಕೊಡಲಿ ಹಾಕು ಮತ್ತೆ ಸೈಕಲ್ಲೋ, ರಿಕ್ಷಾದಲ್ಲೋ ಅದನ್ನು ಹೊತ್ತು ಇನ್ನೆಲ್ಲೋ ಮಾರಿ ನಾಲ್ಕೈದು ದಿನ ಆರಾಮಾಗಿರೋಕೆ ಬೇಕಾದಷ್ಟು ದುಡ್ಡು ಸಂಪಾದನೆ ಮಾಡ್ಕೋ. ಕೂಲಿಗಾಗಿ ಕಾಳಿದೆ. ಆದ್ರೆ ಯಾರು ಅಲ್ಲಿ ಹೋಗಿ ದಿನಾ ಮೈಬಗ್ಗಿಸಿ ದುಡಿಯೋರು ? ಅದೂ ಯಾವಾಗ್ಲೋ ಒಮ್ಮೆ ಇರೋ ಕೆಲಸ. ಆದ್ರೆ ಈ ಕಾಡಿರೋ ತನಕ ಸೌದೆ ಮಾರೋ ಕೆಲಸಕ್ಕೇನೂ ತೊಂದ್ರೆ ಇಲ್ವಾ ? ನಾಳೆ ಏನೋ ಆಗುತ್ತೆ ಅಂತ ಕೂತ್ಕೊಂಡ್ರೆ ಇವತ್ತಿನ ಹೊಟ್ಟೆ ತುಂಬೋದು ಹೇಗೆ ಅನ್ನೋ ಪ್ರಶ್ನೆ ಮರ ಕಡಿಯುವವರದು !

ಈ ರೀತಿಯ ಹುಚ್ಚುತನದ ಪರಮಾವಧಿಗಳಿಂದ ೨೦೦೦ರಿಂದ ೨೦೧೦ರ ಬರೀ ಹತ್ತು ವರ್ಷದ ಅವಧಿಯಲ್ಲಿ ಇಡೀ ಪ್ರಪಂಚದಲ್ಲಿ ಕಡಿಯಲ್ಪಟ್ಟ ಕಾಡಿನ ಪ್ರಮಾಣ ಎಷ್ಟು ಗೊತ್ತೇ ? ಅಂದಾಜು ೧೩ ಮಿಲಿಯನ್ ಹೆಕ್ಟೇರ್/ವರ್ಷಕ್ಕೆ ಅನ್ನುತ್ತೆ FAO ದ ಒಂದು ವರದಿ !(ಕೊಂಡಿ ೩) ಈ ಒಂದು ಲಕ್ಷ ಹೆಕ್ಟೇರು ಅಂದ್ರೆ ಎಷ್ಟು ಅಂದ್ರಾ ? ಇಡೀ ಗೋವಾದ ಭೂಭಾಗ ೨೧,೦೩೮ ಹೆಕ್ಟೇರುಗಳಷ್ಟೆ ! ಶ್ರೀಲಂಕಾದಂತಹ ದೇಶದ ಒಟ್ಟು ಭೂಭಾಗ ೬.೫ ಮಿಲಿಯನ್ ಹೆಕ್ಟೇರುಗಳು(ಕೊಂಡಿ ೪). ಅಂತಾದ್ರಲ್ಲಿ ಪ್ರತೀ ವರ್ಷ ೧೩ ಮಿಲಿಯನ್ ಹೆಕ್ಟೇರಿನಷ್ಟು ಕಾಡು ಕಡೀತಿದಾರೆ ಅಂದ್ರೆ ಲೆಕ್ಕ ಹಾಕಿ ! ಅಬ್ಬಾ ಅಂದ್ರಾ  ? ೯೦ರಿಂದ ೨೦೦೦ರ  ಅವಧಿಯಲ್ಲಿ ಈ ಪ್ರಮಾಣ ವರ್ಷಕ್ಕೆ ೧೬ ಮಿಲಿಯನ್ ಹೆಕ್ಟೇರ್ ಇತ್ತಂತೆ ! ಇರೋ ಬರೋ ಕಾಡೆಲ್ಲಾ ಕಡಿದಾದ ಮೇಲೆ ಇನ್ನೇನು ಉಳಿದಿರುತ್ತೆ ಕಡಿಯೋಕೆ ಅಂದ್ರಾ ? ಕೆಟ್ಟ ಮೇಲೆ ಬುದ್ದಿ ಬಂತು ಅಂದ್ರಾ ? ಆದ್ರೆ ತಜ್ಞರ ಅಭಿಪ್ರಾಯ ಕೊಂಚ ಭಿನ್ನವೇ ಆಗಿದೆ. ಅರಣ್ಯನಾಶದ ಪ್ರಭಾವ ಕಮ್ಮಿಯಾಗೋಕೆ ಹೆಚ್ಚೆಚ್ಚು ಮರಗಳನ್ನು ಬೆಳೆಸಿ, ಕಾಡನ್ನು ಉಳಿಸಿಕೊಳ್ಳೋಕೆ ಇತ್ತೀಚೆಗೆ ನಡೆಯುತ್ತಿರೋ ಪ್ರಯತ್ನಗಳೂ ಕಾರಣ ಅಂತಾರೆ ತಜ್ಞರು. FAO ದ ವರದಿಯ ಪ್ರಕಾರ ಭಾರತ, ಚೀನಾ ಮತ್ತು ವಿಯಟ್ನಾಮಿನಂತಹ ದೇಶಗಳಲ್ಲಿನ ಅರಣ್ಯೀಕರಣದ ಕ್ರಮಗಳಿಂದ ವರ್ಷಕ್ಕೆ ಅಂದಾಜು ೪ ಮಿಲಿಯನ್ ಹೆಕ್ಟೇರುಗಳಷ್ಟು ಅರಣ್ಯ ಭೂಮಿ ಹೆಚ್ಚಾಗುತ್ತಿದೆ. ಅದಾಗ್ಯೂ ೨೦೦೦ರಿಂದ ೨೦೧೦ರ ನಡುವಿನ ಅರಣ್ಯನಾಶದ ಒಟ್ಟಾರೆ ಪ್ರಮಾಣ ವರ್ಷಕ್ಕೆ ೫ ಮಿಲಿಯನ್ ಹೆಕ್ಟೇರ್ ಎನ್ನುತ್ತಾರೆ. ಹಿಂದಿನ ಹತ್ತುವರ್ಷಗಳಲ್ಲಿ ವರ್ಷಕ್ಕೆ ೮.೩% ಇದ್ದ ನಾಶದ ಪ್ರಮಾಣ ಈಗ ಐದು ಚಿಲ್ಲರೆಗೆ ಇಳಿದಿರೋದ್ರ ಹಿಂದಿರೋ ಆ ಕಾರ್ಯಕ್ರಮಗಳಾವುದು ? ಅದೆಷ್ಟೋ ಕೊಡಲಿಗಳ ಮಧ್ಯೆಯೋ ಉಳಿದಿರೋ ನೀರೆರೆಯೋ ಕೈಗಳ ಬಗ್ಗೆಯೊಂದಿಷ್ಟು ಹೆಮ್ಮೆ ಪಡೋಣ ಅಂದ್ರಾ  ? ಮುಂದಿನ ಭಾಗ ಅದರ ಕುರಿತಾದ್ದೆ.

ಪರಿಸರ, ಕಾಡಿನ ರಕ್ಷಣೆ, ಅಭಿವೃದ್ಧಿಗೆ ಅಂತಲೇ ಕೇಂದ್ರ ಸರ್ಕಾರದವರು ೧೯೯೨ರಲ್ಲಿ National Afforestation and Eco-Development Board (NAEB) ಅಂತೊಂದು ಬೋರ್ಡನ್ನ ಸ್ಥಾಪಿಸಿದ್ದಾರೆ. ಅದರ ಮುಖ್ಯ ಉದ್ದೇಶ ಏನಪ್ಪಾ ಅಂದ್ರಾ ? ಅರಣ್ಯಗಳನ್ನು ಉಳಿಸೋ ಕ್ರಮಗಳಿಗೆ ಉತ್ತೇಜನ ಕೊಡೋದು, ಸಸಿ ನೆಡುವಿಕೆ,ಹಾಳಾದ ಕಾಡುಗಳನ್ನ ಮತ್ತೆ ಸಹಜ ಸ್ಥಿತಿಗೆ ತರುವಂತಹ ಪ್ರಯತ್ನಗಳನ್ನು ನಡೆಸುತ್ತಾರೆ. ಅಭಯಾರಣ್ಯಗಳು, ಸಂರಕ್ಷಿತ ಅರಣ್ಯಗಳು, ಪಕ್ಷಿಧಾಮಗಳಂತಹ ಕಾಡಿನ ಸುತ್ತಮುತ್ತಲಿನ ಜಾಗಗಳಲ್ಲೇನೋ ಕಾಡು ಕಡಿಯೋಕೆ ಅನುಮತಿ ಇರಲ್ಲ.ಆದ್ರೆ ಅದ್ರ ಅಕ್ಕಪಕ್ಕದ ಜಾಗಳಲ್ಲಿ ? ಆ ರೀತಿ ವಿಪರೀತ ಹಾನಿಗೀಡಾದ ಸುತ್ತಲ ಕಾಡನ್ನು ಅದರ ಗತವೈಭವದತ್ತ ಕೊಂಡೊಯ್ಯೋ ಪ್ರಯತ್ನ ಈ ಬೋರ್ಡಿನದು. ಹಿಮಾಲಯದ ಶ್ರೇಣಿ, ಪಶ್ಚಿಮ ಘಟ್ಟಗಳು, ಅರಾವಳಿ ಅರಣ್ಯ ಮತ್ತಿತರ ಕಡೆ ಸದ್ದಿಲ್ಲದಂತೆ ಕೆಲಸ ಮಾಡ್ತಿರೋ ಇವರ ಕೆಲ್ಸದ ಮಾಹಿತಿಯಿರ್ಲಿ, ಈ ತರವೂ ಒಂದು ಬೋರ್ಡಿದೆ ಎಂಬೋ ಸುದ್ದಿಯೇ ಎಷ್ಟು ಖುಷಿ ಕೊಡುತ್ತೆ ಅಲ್ವಾ ?   .ಈ NAEB ಅವ್ರು National Afforestation Programme (NAP) through Community Participation ಅಂತೊಂದು ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಅವರ ಜಾಲತಾಣವ ಹೊಕ್ರೆ ಅದರಲ್ಲಿ ರಾಜ್ಯಾವಾರು ನಡೆಯುತ್ತಿರುವ ಕಾರ್ಯಕ್ರಮಗಳ ವಿವರವನ್ನು ಪಡೆಯಬಹುದು. ಕೆಲವೊಂದು ಉಪಕೊಂಡಿಗಳಲ್ಲಿ ಇನ್ನೂ ಮಾಹಿತಿಯನ್ನು ತುಂಬಿಲ್ಲವಾದರೂ ಈ ತರದ್ದೊಂದು ಕಾರ್ಯ ನಡೆಯುತ್ತಿರುವುದನ್ನು ಕಂಡು ಖುಷಿಯಾಗುತ್ತೆ.

ಇನ್ನು ಕಾಡೆಂದ್ರೆ ಊರ ಹೊರಗೆ, ಜನದಟ್ಟಣಿಯಿಂದ ದೂರ ದೂರ ಇರಬೇಕೆಂಬ ಕಲ್ಪನೆಯೇ ಇರಬೇಕೆ ? ಆದಿ ಮಾನವ ಕಾಡಲ್ಲೇ ಬದುಕುತ್ತಿದ್ದನಂತೆ. ಅವನಂತೆ, ಊರನ್ನು ಕಾಡಾಗಿಸದಿದ್ದರೂ, ಕಾಡಲ್ಲಿ ಹೋಗಿ ಬದುಕಲಾಗದಿದ್ದರೂ ನಾವಿದ್ದೆಡೆ ಒಂದಿಷ್ಟು ಹಸಿರು ಬೆಳೆಸೊ ಪ್ರಯತ್ನವನ್ನೇಕೆ ಮಾಡಬಾರದು ? ಗೋಮಾಳ, ಬೆಟ್ಟಕ್ಕಂಟಿರೋ ಕಾಡನ್ನು ವರ್ಷವರ್ಷವೂ ಕಡಿದು ಹಾಕೋ ನಾವು, ಪಾಳು ಬಿದ್ದ ಜಾಗಗಳಲ್ಲೊಂದಿಷ್ಟು ಸಸಿಗಳ ನೆಡೋ ಕೆಲಸವನ್ನೇಕೆ ಮಾಡಬಾರದು ? ರಸ್ತೆ ಬದಿಯಲ್ಲಿನ ಬೋಳು ಗುಂಡಿಗಳಿಗಿಂತ ತಂಪೆರೆವ ಮರವೊಂದು ಕಾಡೆನಿಸಿಕೊಳ್ಳದಿದ್ದರೂ ಕಾಡು ಕಡಿತದಿಂದ ವಾಸ ಕಳೆದುಕೊಂಡು ಒಂದಿಷ್ಟು ಮಂಗಗಳಿಗಾದರೂ ಮನೆಯಾದೀತು ! ಗಿಳಿಗೊಂದಿಷ್ಟು ಗೂಡಾದೀತು. ತೋಟದ ಹಿಂದಿನ ಬೆಟ್ಟದಲ್ಲೇ ಒಂದಿಷ್ಟು ಮರಗಳಿದ್ರೆ ಪ್ರಾಣಿಗಳೇಕೆ ಹೊಟ್ಟೆಗಿಲ್ಲದೇ ತೋಟಕ್ಕೆ ದಾಳಿಯಿಡುತ್ವೆ ? ಬೆಟ್ಟಗಳ ನೆನಪು ವರ್ಷಕ್ಕೊಮೆ ತರಗೆಲೆ ಗುಡಿಸುವಾಗ ಮಾತ್ರ ಆಗದೇ ಅವನ್ನು ಕಾಡ್ಗಿಚ್ಚಿನಿಂದ, ಅಕ್ರಮ ಮರಗಳ್ಳತನದಿಂದ ಕಾಪಾಡಿಕೊಳ್ಳುವಾಗಲೂ ಆಗಬೇಕು. ಅಗಲೇ ಕಾಡೆನ್ನುವುದು ನಮ್ಮನ್ನು ಕನಸಲ್ಲೂ ಕಾಡದೇ ಎಂತಾ ಕಷ್ಟದಲ್ಲೂ ಕಾಪಾಡೋ ಸುರಕ್ಷಾ ಕವಚವಾಗಲು ಸಾಧ್ಯ

ಇದೆಲ್ಲಾ ಹೇಳೋಕೆ,ಕೇಳೋಕೆ ಚೆಂದ. ಒಬ್ಬ ಅಬ್ಬಬ್ಬಾ ಅಂದ್ರೆ ಎಷ್ಟು ಮರ ಬೆಳೆಸಬಹುದು ? ಒಂದೈದು ? ಹತ್ತು. ಅಬ್ಬಬ್ಬಾ ಅಂದ್ರೆ ನೂರು ? ಇದ್ರಿಂದ ಏನಾದ್ರೂ ಬದಲಾವಣೆ ಆಗುತ್ತಾ ? ಇದೆಲ್ಲಾ ಆಗಹೋಗದ ಮಾತು . ಸರ್ಕಾರದ ಸಹಾಯ ಇಲ್ಲದೇ , ಸಂಘ ಸಂಸ್ಥೆ ಅಂತ ಏನೂ ಕಟ್ಟಿಕೊಳ್ಳದೇ ಮರಬೆಳೆಸೋ ಕೆಲ್ಸ ಸಾಧ್ಯವಾ ಯಾರಿದ್ಲಾಂದ್ರೂ ಅಂದ್ರಾ ?ಈ ರೀತಿಯ ಪ್ರಶ್ನೆಗಳು ಬಂದಾಗ್ಲೆಲ್ಲಾ ಒಂದಿಬ್ಬರು ಮುಖ್ಯವಾಗಿ ನೆನಪಾಗ್ತಾರೆ. ಯಾವುದೇ ಯೋಜನೆಗಳ ನೆರವು ಪಡೆಯದೇ ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವ ಸಾಲುಮರದ ತಿಮ್ಮಕ್ಕ, ಇಲ್ಲಿಯವರೆಗೆ ೧.೩೩ ಲಕ್ಷ ಸಸಿಗಳನ್ನು ಬೆಳೆಸಿರುವ, ಈ ವರ್ಷದ ಪರಿಸರ ಪ್ರಶಸ್ತಿ ಪಡೆದ  ಬೆಂಗಳೂರಿನ ಶಿಕ್ಷಕ ಸಿ.ಲಕ್ಷ್ಮಣ್ ಅವರಂತಹ (ಕೊಂಡಿ ೬ರ ಪುಟ ೧೬) ಹಲವು ಜನರು ನಗರಗಳಲ್ಲೂ ಮರಗಳನ್ನು ಬೆಳೆಸಿ ಕಾಂಕ್ರೀಟೀಕರಣದ ಮಧ್ಯೆ ಹಸಿರನ್ನು ಉಳಿಸುವುದರಲ್ಲಿ ನೆರವಾಗುತ್ತಿದ್ದಾರೆ. ಲಕ್ಷ್ಮಣ್ ಅವರು ಹೇಳುವಂತೆ ಶಾಲೆಗೆ ಸೇರುವ ಪ್ರತೀ ವಿದ್ಯಾರ್ಥಿಯ ಪೋಷಕರಿಗೂ ಒಂದೊಂದು ಗಿಡ ಕೊಟ್ಟು , ಅದನ್ನ ನೆಡೆಸಿ ಆ ಗಿಡ ಚೆನ್ನಾಗಿ ಬೆಳೆದರೆ ಆ ವಿದ್ಯಾರ್ಥಿಯ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಲಾಗುತ್ತಿತ್ತಂತೆ. ಪೋಷಕರಿಗೂ ಆ ಗಿಡಕ್ಕೂ ಭಾವನಾತ್ಮಕ ಬಂಧ ಬೆಳೆಯುತ್ತಿದ್ದುದರಿಂದ ಅವರೂ ಆ ಗಿಡಕ್ಕೆ ಚೆನ್ನಾಗಿ ನೀರೆರೆದು ಅದು ಹೆಮ್ಮರವಾಗಿ ಬೆಳೆಯುವುದಕ್ಕೆ ಕಾಣಿಕೆ ನೀಡುತ್ತಿದ್ದರಂತೆ. ಎಂತಹ ಒಳ್ಳೆಯ ವಿಚಾರವಲ್ಲವೇ ? ಬೆಳಕಿಗೆ ಬಂದ ಇಂತಾ ಉದಾಹರಣೆಗಳು ಕೆಲವಾದರೆ ತೆರೆಮರೆಯ ಯೋಗಿಗಳು ಅದೆಷ್ಟೋ. ಆದರೆ ಕಾಡಿನ ಉಳಿವು ಅನ್ನೋದು  ಈ ತರಹ ಕೆಲವರಿಂದ ಆಗುವಂತಹ ಕೆಲಸವಲ್ಲ. ನಮ್ಮಲ್ಲಿ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಶ್ರಮವಹಿಸಬೇಕು. ಪರಿಸರದ ರಕ್ಷಣೆ ಮತ್ತು ಬೆಳವಣಿಗೆ ನಮ್ಮೆಲ್ಲರ ಕರ್ತವ್ಯ. ಕಾಡಿದ್ದರೆ ಮಳೆ, ಮಳೆಯಿದ್ದರೆ ಬೆಳೆ. ಬೆಳೆಯಿದ್ದರೆ ನಮ್ಮೆಲ್ಲರ ಉಳಿವು. ಅದಕ್ಕೇ ಅಲ್ಲವೇ, ನಮ್ಮ ಹಿರಿಯರು ಹೇಳಿದ್ದು.."ವೃಕ್ಷೋ ರಕ್ಷತಿ ರಕ್ಷಿತಃ" ಅಂತ.ಆದದ್ದಾಯಿತು. ಇನ್ನಾದರೂ ಅಳಿದುಳಿದ ಕಾಡನ್ನು ಉಳಿಸಿಕೊಳ್ಳುವತ್ತ, ಇನ್ನಷ್ಟು ಬೆಳೆಸುವತ್ತ ಗಮನಹರಿಸೋಣವೇ ?

ಇನ್ನೊಂದಿಷ್ಟು ಮಾಹಿತಿಗಾಗಿ ಕೆಳಗಿನ ಕೊಂಡಿಗಳನ್ನು ಕ್ಲಿಕ್ಕಿಸಿ:
೧)http://madhurageete.blogspot.in/2014/10/adavi-deviya-kadu-janagala-ee-hadu-from.html
೨)http://www.preservearticles.com/201105257058/summary-of-girl-against-the-jungle-by-julianekoepcke.html
೩)http://www.fao.org/news/story/en/item/40893/icode/
೪)https://books.google.co.in/books?id=J4VYBQAAQBAJ&pg=PA145&lpg=PA145&dq=what+is+the+land+area+of+srilanka+in+hectares&source=bl&ots=mZOxk2Oty0&sig=ih60ipEfSTbwyjZXtjEN2A_Pb00&hl=en&sa=X&ei=0pFyVYn3KtLjuQT7hYPABA&ved=0CDsQ6AEwBQ#v=onepage&q=what%20is%20the%20land%20area%20of
%20srilanka%20in%20hectares&f=false
೫)http://www.naeb.nic.in/progSchem.html
೬)http://www.vijaykarnatakaepaper.com/epapermain.aspx?queryed=9&eddate=6/4/2015 , page 16

ಈ ಲೇಖನ  "ಪಂಜು" ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ

No comments:

Post a Comment