Saturday, November 5, 2016

ಕರೆಂಟಿಲ್ಲದ ಕಾರ್ತೀಕವೂ ಕನ್ನಡವಿಲ್ಲದ ಮಾಲ್ಗಳೂ

Karthika @Kundalahalli Nagalingeshwara temple
ಇವತ್ತು ನಮ್ಮ ಕೆ.ಇ.ಬಿಯವ್ರಿಗೆ ಅದೆಷ್ಟು ಒಳ್ಳೆಯ ಬುದ್ಧಿ ಬಂದು ಬಿಟ್ಟಿದೆ ಅಂತೀರಾ ? ನಮ್ಮ ನಾಗಲಿಂಗೇಶ್ವರ ದೇವಸ್ಥಾನದ ಕಾರ್ತೀಕ ಎಲ್ಲರೂ ನೋಡ್ಲಿ ಅಂತ ಇಡೀ ಏರಿಯಾದ ಕರೆಂಟು ತೆಗ್ದಿದಾರೆ ! ಬೀದೀಲಿ ಎಲ್ಲರ ಮನೆಯೆದ್ರಿಟ್ಟಿರೋ ದೀಪಗಳ್ನ ನೋಡೋದು ಅದೆಷ್ಟು ಚೆಂದ ಅಂತೀರಿ. ಕೆ.ಇ.ಬಿಯವರ ಈ ಸೌಂದರ್ಯಪ್ರಜ್ಞೆ ಒಂದು ಸಮುದಾಯದ ಪರವಾಗಿದೆ, ಉರುಸ್, ಚರ್ಚುಗಳ ಕಾರ್ಯಕ್ರಮಗಳಲ್ಲೂ ಇದೇ ತರ ಮಾಡಿ ಅವುಗಳನ್ನೂ ಚೆಂದಗಾಣಿಸಿಕೊಡಬಹುದು. ಆದರೆ ಆ ತರ ಮಾಡದ ಕೆ.ಇ.ಬಿಯವ್ರನ್ನ ನಾವು ಖಂಡಿಸ್ತೀವಿ, ಖಂಡಿಸ್ತೀವಿ ಅಂತ ಯಾವ ಬುದ್ಧಿಜೀವಿಗಳೂ ಈ ಕಡೆ ಬರದೇ ಇದ್ದಿದ್ದು ಯಾಕೋ ಬೇಸರ ತರಿಸ್ತಿದೆ. ಬಹುಷಃ ಯಾವ ಪ್ರಚಾರ, ಪತ್ರಿಕೆಗಳೂ ಬಾರದ ಪ್ರದೇಶ ಇದು ಅಂತ ಕೈಬಿಟ್ಟಿರಬೇಕು ಅಂತೊಂದಿಷ್ಟು ಗುಸುಗುಸುಗಳು ಕತ್ಲಲ್ಲೇ ಕೇಳಿಬರ್ತಿದ್ವು ಅಂತ ನಮ್ಮ ಪ್ರತಿನಿಧಿ ಗುಂಡಣ್ಣ ವರದಿ ಮಾಡ್ತಿದ್ದಾರೆ- ಕತ್ಲಳ್ಳಿ ನ್ಯೂಸ್, ಕುಂದ್ಲಳ್ಳಿ

ಕುಂದ್ಲಳ್ಳಿ ಅನ್ನೋಕೆ ಅವಮಾನ ಅಂತ ನಮ್ಮದು ಕಾಸ್ಮೋಸ್ ಅಂತನ್ನೋ ಜನರ ಹೆಮ್ಮೆಗೆ ಮುಕುಟವಿಟ್ಟಂತಿರೋ ಕಾಸ್ಮೋಸು ಮಾಲಿನಲ್ಲಿ ಈಗ ದೀಪಾವಳಿ ಸಂಭ್ರಮ. ಕೆಳ ಮಹಡಿಯಲ್ಲಿರೋ ಟ್ಯಾಕೋ ಬೆಲ್ಲು,ಫ್ಯಾಬ್ ಇಂಡಿಯಾ, ಪ್ಯಾಂಟಲೂನ್ಗಳಲ್ಲಿ ಕನ್ನಡದ ಲವಲೇಶವಿಲ್ಲ. ಸರಿಯಪ್ಪ ಅಂತ ಮೇಲಿನ ಮಹಡಿಯಲ್ಲಿ, ಅಲ್ಲೂ ಇಲ್ಲ. ಮೂರನೇ ಮಹಡಿ ? ಊಹೂಂ. ನಾಲ್ಕನೇ ಮಹಡಿಯಲ್ಲಿರೋ ಐನಾಕ್ಸಲ್ಲಾದ್ರೂ ಕನ್ನಡ ಚಿತ್ರಗಳಿರ್ಬೋದಾ ಅಂತಂದ್ರೆ ಒಂದೂ ಇರ್ಬಾರ್ದಾ ? ಹಿಂದಿ, ಇಂಗ್ಲೀಷುಗಳು ಹೋಗ್ಲಿ ಮಲೆಯಾಳಂ, ತಮಿಳು, ತೆಲುಗು ಚಿತ್ರಗಳಿಗೆಲ್ಲಾ ಮೂರ್ನಾಲ್ಕು ಶೋ. ಕನ್ನಡ ಚಿತ್ರನ ದುರ್ಬೀನಲ್ಲಿ ಹುಡ್ಕಿದ್ರೂ ಸಿಗ್ಬಾರ್ದಾ ? ನಾಲ್ಕೈದು ನಿಮಿಷ ಹುಡುಕಿದ್ಮೇಲೆ ಸಾಗರ, ಶಿವಮೊಗ್ಗ ಹೀಗೆ ಸುಮಾರಷ್ಟು ನಗರಗಳಲ್ಲಿ ಯದ್ವಾತದ್ವಾ ಓಡ್ತಿರೋ ಸಂತು ಸ್ಟ್ರೇಟ್ ಫಾರ್ವರ್ಡಿಗೆ ಎರಡು ದಿನಕ್ಕೊಂದು ಶೋ ಅಂತ ಗೊತ್ತಾಯ್ತು. ನಮ್ಮ ಬಿ.ಎಂ.ಟಿ.ಸಿಯ ಬಸ್ಸುಗಳಲ್ಲೇ ಕನ್ನಡ ಬರುತ್ತೆ ಸಾರ್. ಇನ್ನು ಮಾಲ್ಗಳಲ್ಲಿರೋ ಎಲ್.ಇ.ಡಿಗಳಲ್ಲಿ ಕನ್ನಡ ಬರಲ್ವಾ ಅನ್ನೋ  ಪ್ರಶ್ನೆಗೆ ಉತ್ತರ ಕೊಡೋಕೆ ಅಲ್ಲಿನ ನಾಲ್ಕು ಮಹಡಿಗಳಲ್ಲೂ ಯಾರಿರಲಿಲ್ಲ ಅಂತ ನಮ್ಮ ಪ್ರತಿನಿಧಿ ಇಳಾ ಮೇಡಂ ಸಿಟ್ಟಿಂದ ವರದಿ ಮಾಡಿದ್ದಾರೆ- ಕತ್ಲಳ್ಳಿ ನ್ಯೂಸ್, ಕಾಸ್ಮೋಸ್ ಮಾಲ್ ಅಲಿಯಾಸ್ ಕುಂದಲಹಳ್ಳಿ

ಇದೆಂತಾ ಮರ್ಲು ಮಾರ್ರೆ. ಊರಲ್ಲೆಲ್ಲಾ ಕರೆಂಟಿಲ್ಲ. ಇಲ್ನೋಡಿದ್ರೆ ಈ ನಮ್ನಿ ಕರೆಂಟ್ ವೈರ್ ನೇತಾಕಿರೂ. ದೀಪಾವಳಿ ಅಂತ ದೀಪ ಹಚ್ಚೋದು ಬಿಟ್ಟು ಹಿಂಗೆ ಕರೆಂಟು ವೈರು ನೇತಾಕೂದಾ ಅಂತ ಬೈಯ್ತಿದ್ದ ನಮ್ಮ ಮಂಜಣ್ಣ. ಅಲ್ದಾ ಮಂಜಣ್ಣ. ಇದು ಕರೆಂಟು ವೈರಲ್ದೋ. ಎಲೆಕ್ಟ್ರಿಕ್ ದೀಪ. ಹೊಸ ಫ್ಯಾಷನ್ನಿದು. ಈಗಿನ ಜನ ಬಲ್ಬು ಹಾಕಿದ್ರೆ ಕರೆಂಟು ವೇಸ್ಟು ಹೇಳಿ ಎಲ್.ಇ.ಡಿ, ಸಿ.ಎಫ್. ಎಲ್ಲು ಹೇಳಿ ಹಾಕ್ತ. ಆದ್ರೆ ಕೊನೆಗೆ ಹಿಂಗೆ ಕರೆಂಟ್ ವೇಸ್ಟ್ ಮಾಡ್ತ ಅಂತಂತಿದ್ಲು ಸರಿತಾ. ಹೇ ಇವ್ರು ನಮ್ಮೂರ ಪ್ರಶಸ್ತಿ, ರಂಜನ್ ಅಲ್ದನಾ ? ನಾವೂ ಇವ್ರು ಜತೆಗೊಂದು ಸೆಲ್ಫಿ ತೆಕ್ಕಳನ ಬಾರಾ ಅಂತ ಸರಿತಾ ವಿಷಯಾಂತರ ಮಾಡಿ ಸಮಾಧಾನ ಮಾಡೋವರೆಗೂ ಮಂಜಣ್ಣನ ಬೈಗುಳ ಮುಗಿದಿರಲಿಲ್ಲ. ದೇವಸ್ಥಾನದ ದೀಪಕ್ಕೆ ಎಣ್ಣೆ ಹಾಕೂದು ಎಣ್ಣೆ ವೇಸ್ಟು ಅಂಬ್ರು ಈ ಜನ. ಈಗ್ನೋಡಿರೆ ಬೀದಿಲಿರೋ ಕರೆಂಟೆಲ್ಲಾ ಇವ್ರೊಬ್ಬದ್ದೇ ಹೇಳೂ ಹಂಗೆ ಮಾಡ್ತ್ರಪ. ಹೇಳೂದು ಶಾಸ್ತ್ರ, ತಿನ್ನೂದು ಬದ್ನೇಕಾಯೇ ಅಂತ ಬಯ್ಕೊಳ್ತಾ ಕಾಸ್ಮೇಸ್ ಮಾಲಿನ ಝಗಮಗಿಸೋ ದೀಪಾಲಂಕಾರದ ಬಗ್ಗೆ ವರದಿ ಮಾಡಿದ್ದಾರೆ ನಮ್ಮ ಪ್ರತಿನಿಧಿಗಳಾದ ಸರಿತಾ ಸಾಗರ ಮತ್ತು ಮಂಜುನಾಥ್ ಮಂಗಳೂರು-ಕತ್ಲಳ್ಳಿ ನ್ಯೂಸ್, ಕುಂದಲಹಳ್ಳಿ

ನಮ್ಮೂರ ಟಿ.ವಿ ಪ್ರತಿನಿಧಿಗಳೇನೋ ಭೇಟಿಯಾಗಿದ್ರು. ಆದ್ರೆ ಕರೆಂಟು ಕಂಬಕ್ಕೆ ಕಲ್ಲೊಡೆಯಬೇಕು ಅನ್ನೋ ಪುಂಡುಡ್ರೂ ಮೊಬೈಲು ಬ್ಯಾಟರೀನೋ, ಇನ್ಯಾರದೋ ಮನೆಯ ಹಣತೆನೋ ಎತ್ಕಂಡು ಬಂದು ಕಲ್ಲೊಡೆಯಬೇಕಾದಂತಹ ಕತ್ಲು ಅವತ್ತು. ಬೇರೆ ದಿನದಲ್ಲೆಂತೂ ಬರಲ್ಲ. ಇವತ್ತಾದ್ರೂ ಆಫೀಸಿಗೆ ಬರ್ರಿ ಅಂತ ಕರದ್ರೂ ಅಂತ ಅಲ್ಲಿಗೆ ಹೋದ್ರೆ ಅಲ್ಲೂ ಕತ್ಲು. ಅದೇನು ರಾಜಕೀಯ ಪಕ್ಷದವರ ಚಾನಲ್ಲೇ ?  ದುಡ್ಡು ಹೇರಳವಾಗಿದ್ದು ೨೪ ಘಂಟೆ ಯು.ಪಿ.ಎಸ್ ಬ್ಯಾಕಪ್ ಇಡೋಕೆ ? ಇದ್ದೊಂದು ಯು.ಪಿ.ಎಸ್ ಆದ್ರೂ ಮಧ್ಯಾಹ್ನದಿಂದ ಕರೆಂಟಿಲ್ಲದ ದಿನದಲ್ಲಿ ಎಷ್ಟೊತ್ತು ಬಂದೀತು ? ಗುಂಡ, ಇಳಾ, ಸರಿತಾ ಮತ್ತು ಮಂಜಣ್ಣನ ರಿಪೋರ್ಟುಗಳನ್ನ ಒಪ್ಪವಾಗಿಸಿ ಒಂದು ನ್ಯೂಸ್ ಮಾಡೋಕೆ ಕರೆಂಟ್ ಯಾವಾಗ ಬರುತ್ತೋ ಅನ್ನೋ ಬೇಜಾರಲ್ಲಿ ನಮ್ಮ ಮ್ಯಾನೇಜರ್ ಪುಂಡಣ್ಣ ಅಲ್ಲೇ ತಿರುಗ್ತಾ ಇದ್ರು. ಅವ್ರ ಪ್ರತಿನಿಧಿಗಳು ಕತ್ಲು ಅಂತ ರಿಪೋರ್ಟೇ ಕೊಡದೆ ಹಂಗೇ ಮನೆಗೆ ಎಸ್ಕೇಪ್ ಆಗ್ಬುಟ್ರಾ ಅಂತ ತಲೆಕೆಡಿಸ್ಕೊಂಡಿದ್ದ ಅವ್ರಿಗೆ ನಮ್ಮನ್ನ ನೋಡಿ ಖುಷಿ ಆಯ್ತು. ಕರೆಂಟು ಬರೋ ತನಕ ಏನಾದ್ರೂ ಟೈಂ ಪಾಸ್ ಮಾಡ್ಬೇಕಲ್ಲ. ಇವತ್ತಿನ ನ್ಯೂಸನ್ನು ಪ್ರಸಾರ ಮಾಡದೇ ಮನೆಗೋಗಂಗಿಲ್ಲ. ಹಂಗೇ ಸುಮ್ಮನೇ ಕೂತ್ರೆ ಇಲ್ಲಿರೋರೆಲ್ಲಾ ಮನೆಗೋಗಿ ಬಿಡ್ತಾರೆ ಅನ್ನೋ ದೂರಾಲೋಚನೆ ಬಂದ ಪುಂಡಣ್ಣ ನಿಮಗೆಲ್ಲಾ ನೆರಳು ಬೆಳಕಿನ ಆಟ ತೋರುಸ್ತೀನಿ ಅಂತ ಬೇಡ ಬಿಡಿ ಅಂದ್ರೂ ಬಿಡದಷ್ಟು ಒತ್ತಾಯ ಮಾಡಿ ಒಳಗೆ ಕರ್ಕೊಂಡೋದ್ರು. ಪುಂಡಣ್ಣ ಮೂಲೆಯಲ್ಲೊಂದು ಮೊಬೈಲ ಬ್ಯಾಟರಿಯಿಟ್ಟು ಅದ್ರ ಬೆಳಕಿಗಡ್ಡ ತಮ್ಮ ಕೈಯನ್ನಿಟ್ಟು ನೆರಳಲ್ಲೇ ಆನೆ, ಮೊಲ, ಬೊಗಳೋ ನಾಯಿ, ಗಿಳಿ, ಅರಮನೆ ಎಲ್ಲಾ ಮಾಡ್ತಿದ್ರೆ ಎಲ್ರಿಗೂ ಬಾಲ್ಯದ ನೆನಪುಗಳ ಮೆರವಣಿಗೆ. ಅದ್ರ ಮಧ್ಯೆ ಒಂದಿಷ್ಟು ಮಾತು, ನಗೆಯಲ್ಲಿ ಕಳೆದು ಹೋಗಿದ್ದ ನಮಗೆ ಯಾವಾಗ ಇನ್ನೊಂದು ಘಂಟೆ ಕಳೆದುಹೋಯ್ತೋ, ಕರೆಂಟಿಲ್ಲದೇನೇ ಖುಷಿಯಾಗಿರೋ ಜನರ ಖುಷಿಗೆ ಭಂಗ ತರೋ ಉದ್ದೇಶದಿಂದ ಕೆ.ಇ.ಬಿಯವ್ರು ಯಾವಾಗ ಕರೆಂಟು ಕೊಟ್ರೋ ಗೊತ್ತಾಗಲಿಲ್ಲ.  ಈ ಮೊಬೈಲು, ಇಂಟರ್ನೆಟ್ಟು, ವಾಟ್ಸಾಪು, ಫೇಸ್ಬುಕ್ಕು, ಟ್ವಿಟ್ಟರುಗಳೆಂಬ ಕೃತ್ತಿಮ ಜಗತ್ತಲ್ಲೇ ಕಳೆದುಹೋಗೋ ನಾವು ಪರಸ್ಪರ ಮುಖ ಕೊಟ್ಟು ಮಾತಾಡದೇ ಎಷ್ಟು ಕಾಲವಾಗಿತ್ತೋ. ಅದಕ್ಕೊಂದು ಅವಕಾಶ ಮಾಡಿಕೊಟ್ಟ ಈ ಕರೆಂಟಿಲ್ಲದ ದಿನಕ್ಕೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಕಮ್ಮಿ ಅನಿಸಿದ್ದು ಸುಳ್ಳಲ್ಲ. ಹಿಂಗೆ ಆಗಾಗ ಕರೆಂಟು ಹೋಗ್ತಾ ಇದ್ರೆ ಒಂದಿಷ್ಟು ಜೀವಗಳು ಹತ್ರವಾಗುತ್ತೆ ಅಂದ್ರೆ ಅದೇ ಒಳ್ಳೇದೇನೋ ಅನ್ಸಿದ್ದೂ ಸುಳ್ಳಲ್ಲ.
ನೆರಳು ಬೆಳಕಲ್ಲಿ ನಾಯಿಯನ್ನು ತೋರಿಸೋ ಪ್ರಯತ್ನ. ಫೋಟೋಗ್ರಫಿ ಕೃಪೆ: ನಂ ರೂಂ ಮೇಟು ಸಿದ್ದಾರೂಡ ಅವ್ರುದ್ದು

2 comments:

  1. ಹಾಸ್ಯ-ವಾಸ್ತವ-ಚಿಂತನೆ ಮೂರೂ ಬೆರೆತ ಬರಹ.. ಚೆನ್ನಾಗಿದೆ

    ReplyDelete