Wednesday, January 25, 2017

ತೀರ್ಥಹಳ್ಳಿ ಟ್ರಿಪ್ಪು

ತೀರ್ಥಳ್ಳಿಗೆ ಮೊದಲು ಹೋಗಿದ್ದು ಕಾಲೇಜಿನ ದಿನಗಳಲ್ಲಿ. ನೋಕಿಯ ೨೭೦೦ ಕ್ಯಾಮಲ್ಲಿ ಕುಪ್ಪಳ್ಳಿಯ ಕವಿಶೈಲದ ಫೋಟೋಗಳನ್ನ ತೆಗೆದಿದ್ದು, ಸಂಜೆ ಆರೂವರೆ ಏಳರ ಹೊತ್ತಿಗೆ ಕವಿಶೈಲದಿಂದ ಬಸ್ಟಾಂಡಿಗೆ ಬರೋ ದಾರಿಯಲ್ಲಿನ ಮನೆಗೆ ಹೊಕ್ಕು ನೀರು ಕೇಳಿದ್ದು, ಅವರು ನಾವು ನಕ್ಸಲೈಟಿರಬಹುದಾ ಅಂತ ಭಯಬಿದ್ದಿದ್ದು , ನಂತರ ನಮ್ಮ ಊರು, ಟ್ರಿಪ್ಪ ಸುದ್ದಿ ಕೇಳಿ ಅವರ ಭಯ ಹೋಗಿದ್ದು ಎಲ್ಲಾ ಈಗ ವರ್ಷಗಳ ಹಿಂದಿನ ನೆನಪು. ಅದೇ ತರಹ ಆದರ್ಶನ ಮನೆ ಮೂಗುಡ್ತಿಗೆ ಹೋದಾಗ ಅಲ್ಲಿನ ಸುತ್ತಲ ಗುಳುಗುಳಿ ಶಂಕರ, ರಿಪ್ಪನಪೇಟೆ ಬೀದಿಗಳಲ್ಲಿ ಸುತ್ತಾಡಿದ್ದು , ಒಂದಿನ ಕರ್ಫ್ಯೂ ಬಿದ್ದು ಅನಿರೀಕ್ಷಿತವಾಗಿ ನಮ್ಮ ಟ್ರಿಪ್ಪು ಮುಂದುವರೆದಿದ್ದು ಎಲ್ಲಾ ಕಣ್ಣಿಗೆ ಕಟ್ಟಿದಂತಿದೆ. ಕೆಲ ವರ್ಷಗಳ ಹಿಂದೆ ಬಾಲಣ್ಣನ್ನ ತೀರ್ಥಹಳ್ಳೀಲಿ ಭೇಟಿಯಾಗೋ ಅವಕಾಶ ಸಿಕ್ಕಿತ್ತು. ಅವರ ಜೊತೆ ಕವಲೇದುರ್ಗ, ತೀರ್ಥರಾಮೇಶ್ವರ ಮತ್ತು ಸುತ್ತಮುತ್ತಲ ದೇವಸ್ಥಾನಗಳು, ಆಗುಂಬೆಯ ಅಮ್ಮ ಮನೆಗಳನ್ನು ನೋಡೋಕೆ ಮತ್ತು ಅನ್ನಪೂರ್ಣೇಶ್ವರಿ ಅಂತಿರೋ ಅಮ್ಮ ಅವರ ಸಂದರ್ಶನ ಮಾಡೋ ಅವಕಾಶವೂ ಸಿಕ್ಕಿತ್ತು. ಆದರೆ ಆ ಸಲ ಎಲ್ಲಾ ಮಿಸ್ಸಾಗಿದ್ದ ಕೆಲವು ಜಾಗಗಳಿದ್ವು. ಹಿಂದಿನ ಸಲ ಅಂಬುತೀರ್ಥ, ಅಚ್ಚಕನ್ಯೆ ಫಾಲ್ಸ್ ಬಗ್ಗೆ ಬಾಲಣ್ಣನವರಿಂದ ಕೇಳಿದ್ರೂ ಅಲ್ಲಿಗೆ ಹೋಗಕ್ಕಾಗಿರಲಿಲ್ಲ. ಹೋಗ್ಬೇಕು ಹೋಗ್ಬೇಕು ಅಂತ ಅದೆಷ್ಟೋ ಸಲ ಹಾಕಿದ್ದ ಪ್ಲಾನುಗಳು ಕ್ಯಾನ್ಸಲ್ ಆಗಿ ಆಗಿ, ಕೊನೆಗೆ ನಾನೇ ಗಾಡಿ ತಗೊಳ್ಳೋ ಮುಹೂರ್ತಕ್ಕೆ ಕಾಯ್ಬೇಕಾಗಿ ಬಂತು ! ತಗೊಂಡ್ಮೇಲೂ ಬೈಕ್ ಟ್ರಿಪ್ಪಿಗೆ ಬರ್ಬೇಕಾಗಿದ್ದ ಕೃಷ್ಣ, ಸುಮುಖ, ಪ್ರದೀಪ ಎಲ್ಲಾ ಮಿಸ್ಸಾಗಿ ಕೊನೆಗೆ ನಾನು, ಗೌತಮ ಹೋಗೋದು ಅಂತಾಯ್ತು. ಇಬ್ಬರ ಟ್ರಿಪ್ಪಾಗಿದ್ರೂ ಸಾಗರದಿಂದ ಹೊರಟು ಅಂಬುತೀರ್ಥ-ರಾಮನ ಪಾದ-ಅಚ್ಚಕನ್ಯೆ ಫಾಲ್ಸ್- ಅರುಣಗಿರಿ-ತುಂಗಾ ಬ್ರಿಡ್ಜ್ - ತೀರ್ಥರಾಮೇಶ್ವರ ದೇವಸ್ಥಾನಗಳನ್ನು ನೊಡಲಿಕ್ಕಾದ ೨೧೦ ಕಿ.ಮೀ ಗಳ ಟ್ರಿಪ್ಪು ಚೆನ್ನಾಗೇ ಇತ್ತು. ತೀರಾ ಇತಿಹಾಸ ಪ್ರಸಿದ್ದ ಜಾಗಗಳೋ, ಧುಮ್ಮಿಕ್ಕೋ ನೀರಿದ್ದ ಮಳೆಗಾಲವೋ ಇದಾಗದ ಕಾರಣ ಸ್ಥಳಗಳ ಬಗ್ಗೆ ಬರೆಯೋಕೆ ಹೆಚ್ಚೇನೂ ಇಲ್ಲದಿರಬಹುದು. ಆದರೆ ಇದರ ಮಧ್ಯೆ ಬರುವಂತಹ ರಾಮನ ಪಾದದಂತಹ ಜಾಗಗಳಿಗೆ ಹೋಗೋದು ಹೇಗೆ ಅಂತ ಬರೀಲೇ ಬೇಕು ಅನಿಸ್ತು. ಅದಕ್ಕಾಗಿ ಈ ಲೇಖನ

ಅಂಬುತೀರ್ಥ/Ambuteertha
ಸಾಗರದಿಂದ ಆನಂದಪುರ-ಯಡೇಹಳ್ಳಿ-ರಿಪ್ಪನ್ ಪೇಟೆ ಮಾರ್ಗವಾಗಿ ಸಾಗಿ ಅಲ್ಲಿಂದ ಮೂಗುಡ್ತಿ ದಾಟಿ ಹೆದ್ದಾರಿಪುರ, ಶಿವಪುರ, ಗರ್ತಿಕೆರೆ ದಾಟಿ ಕೋಣಂದೂರು - ಹುಂಚದ ಕಟ್ಟೆ ರಸ್ತೇಲಿ ಹುಂಚದ ಕಟ್ಟೆ ದಾಟಿದ್ರೆ ಶಂಕ್ರಳ್ಳಿಗೆ ಇಂತಿಷ್ಟು ಕಿ.ಮೀ ಅನ್ನೋ ಬೋರ್ಡುಗಳು ಶುರುವಾಗುತ್ತೆ. ಈ ಹೊಸನಗರ ಮಾರ್ಗದಲ್ಲಿ ಕೆಲವೆಡೆ ಅಂಬುತೀರ್ಥಕ್ಕೆ ಇಂತಿಷ್ಟು ಕಿ.ಮೀ ಅನ್ನೋ ಬೋರ್ಡುಗಳೂ ಕಾಣುತ್ತೆ. ನೇರ ಅಂಬುತೀರ್ಥಕ್ಕೆ ಬರೋದಾದ್ರೆ ಹೊಸನಗರದಿಂದ ಅದಕ್ಕೆ ೨೦ ಕಿ.ಮಿ ಅಷ್ಟೆ. ಅಂಬುತೀರ್ಥ ಊರಿಗೆ ೧ ಕಿ.ಮೀ ಇದೆ ಅನ್ನುವಾಗ ಕೆಳಗಿರುವ ಪ್ರವಾಸೋದ್ಯಮ ಇಲಾಖೆಯ ಬೋರ್ಡ್ ಕಾಣುತ್ತೆ.

 ಅಲ್ಲಿಂದ ಎಡಕ್ಕೆ ಸಾಗಿದ್ರೆ ಅಂಬುತೀರ್ಥದ ಶರಾವತಿಯ ಉಗಮಸ್ಥಾನ ಸಿಗುತ್ತೆ. ಇಲ್ಲಿ ಶಿವಲಿಂಗದ ಅಡಿಯಿಂದ ಉದ್ಭವಿಸುವ ಶರಾವತಿ ಅಲ್ಲೇ ಎದುರಿರುವ ಕೊಳಕ್ಕೆ ಸಾಗುವಂತೆ ದಾರಿ ಮಾಡಲಾಗಿದೆ. ಅಲ್ಲಿ ಶರಾವತಿಯನ್ನು ತಲೆಗೆ ಚಿಮುಕಿಸಿಕೊಳ್ಳುವ ಜನರು, ಬಾಟಲಿಯಲ್ಲಿ ತುಂಬಿಸಿಕೊಳ್ಳೋ ಜನರನ್ನು ಕಾಣಬಹುದು. ಅಲ್ಲಿಂದ ಮುಂಚೆ ಒಂದು ಸಣ್ಣ ಕೊಳಕ್ಕೂ, ಅದರಿಂದ ಮುಂದೆ ಮತ್ತೊಂದು ದೊಡ್ಡ ಕೊಳಕ್ಕೂ ಆಕೆ ಸಾಗುತ್ತಾಳೆ. ಹರಿಯುತ್ತಾ ದೊಡ್ಡದಾಗುವ ಆಕೆ ಮುಂದೆ ಜೋಗದಲ್ಲಿ ಬೃಹದಾಕಾರವಾಗಿ ೯೦೦ ಅಡಿಗಳ ಎತ್ತರದಿಂದ ಧುಮುಕುತ್ತಾಳೆ. ಬೆಳಕಾಗೋ ಸಲುವಾಗಿ ಊರಿಗೆ ಊರುಗಳನ್ನೇ ಕತ್ತಲಾಗಿಸುತ್ತಾಳೆ. ಆದರೆ ಅಂತಹ ಶರಾವತಿಯ ಉಗಮ ಸ್ಥಾನದ ೧೯೬೫ರಲ್ಲೇ ಕಲ್ಯಾಣಮಂಟಪವನ್ನು ಕಟ್ಟಿಸಿದ್ದರೂ ತದನಂತರ ಅಲ್ಲಿ ಏನೂ ಅಭಿವೃದ್ಧಿ ಆದ ಹಾಗೆ ಕಾಣೋದಿಲ್ಲ. ವಿಸೇಷ ಸಂದರ್ಭಗಳನ್ನು ಬಿಟ್ಟರೆ ಅಲ್ಲಿಗೆ ಬರೋ ಭಕ್ತರೂ ಕಮ್ಮೆಯಾ ಅಂತ ಅಲ್ಲಿನ ಪರಿಸರ ಇನ್ನೂ ಪ್ರಶಾಂತವಾಗಿರುವುದನ್ನು ನೋಡಿದಾಗಲೇ ಗೊತ್ತಾಗುತ್ತೆ. ಪ್ರವಾಸಿಗಳ ಅನುಕೂಲಕ್ಕಾಗಿ ಪ್ರವಾಸೋದ್ಯಮ ಇಲಾಖೆಯವರು ಕಟ್ಟಿಸಿದ ಯಾತ್ರಿನಿವಾಸ, ದೇಗುಲದಿಂದ ಸ್ವಲ್ಪ ಮುಂದಿರುವ ಶೌಚಾಲಯಗಳಿಗೆಲ್ಲಾ ಬೀಗ ಬಿದ್ದು ಬಿಕೋ ಎನ್ನುತ್ತಿವೆ. ಸದ್ಯದಲ್ಲೇ ಇವುಗಳ ಅಭಿವೃದ್ಧಿ ಕೆಲಸ ಶುರುವಾಗಲಿವೆ ಅಂತ ದೇಗುಲದ ಎದುರಿದ್ದ ಮರಳು, ಕಲ್ಲ ರಾಶಿ, ಭಟ್ಟರು ಹೇಳುತ್ತಿದ್ದರೂ ಅಭಿವೃದ್ಧಿಯ ನೆಪದಲ್ಲಿ ದೇಗುಲದ ಸಹಜ ಸೌಂದರ್ಯ, ಪ್ರಶಾಂತತೆ ಹಾಳಾಗದಿರಲಿ ಅನ್ನೋ ಕಾಳಜಿ ಕಾಡುತ್ತಿತ್ತು
 
 

 
 
Raamana Paada/ರಾಮನ ಪಾದ,ಸೀತಾ ಪಾದ ಮತ್ತು ಜಿಂಕೆ ಪಾದ
ಅಲ್ಲಿಂದ ಮುಂದೆ ಸಾಗುವಾಗ ಸಿಗುವ ಶೌಚಾಲಯದ ಪಕ್ಕದಲ್ಲಿ ಸಾಗೋ ಮಣ್ಣಿನ ರಸ್ತೆಯಲ್ಲಿ, ನಂತರ ಜಲ್ಲಿ ರಸ್ತೆಯಲ್ಲಿ ಸಾಗಿದ್ರೆ ಜೋಗೀಸರ ಅನ್ನೋ ಊರು ಸಿಗುತ್ತದೆ. ಅಲ್ಲಿಂದ ಹಾಗೇ ಮುಂದೆ ಸಾಗಿದ್ರೆ ಬಲಗಡೆ ಒಂದು ಸಣ್ಣ ನಾಗಬ್ರಹ್ಮ ಗುಡಿ ಸಿಗುತ್ತೆ. ಅದರ ಎಡಗಡೆಯಲ್ಲಿ ಮೇಲೆ ಹತ್ತೋಕಿರೋ ಸಣ್ಣ ಹಾದಿಯಲ್ಲಿ ಸುಮಾರು ಹತ್ತು ನಿಮಿಷ ಹತ್ತಿದ್ರೆ ಸಿಗೋದೇ ರಾಮನ ಪಾದ,ಸೀತಾ ಪಾದ ಮತ್ತು ಜಿಂಕೆ ಪಾದ. ರಾಮಾಯಣದ ವನವಾಸದ ಸಂದರ್ಭದಲ್ಲಿ ಅವರು ಇಲ್ಲಿ ಬಂದಿದ್ದರೆಂಬ ಪ್ರತೀತಿಯಿದೆ. ಹನುಮಂತ ಇಲ್ಲಿನ ಬೆಟ್ಟದಿಂದ ಅರಗ ಗೇಟಿನ ಬಳಿಯಿರುವ ಅರುಣಗಿರಿ ಎಂಬ ಬೆಟ್ಟಕ್ಕೆ ಹಾರಿದ್ದನೆಂದೂ ಹಾಗಾಗೇ ಇಲ್ಲಿ ಮತ್ತು ಅಲ್ಲಿ ಅವನ ಪಾದಗಲ ಗುರುತೂ ಇದೆಯೆಂಬ ಕತೆಯೂ ಇದೆ. ಅಂಬುತೀರ್ಥದ ದೇವಸ್ಥಾನದಿಂದ ಇಲ್ಲಿಗೆ ಸುಮಾರು ೨ ಕಿ.ಮೀ ದೂರ. ಆದರೂ ಇಲ್ಲಿನ ಬೆಟ್ಟ ಹತ್ತೋಕೆ ಮೆಟ್ಟಿಲುಗಳಾಗಲೀ, ದಾರಿ ಆಗಲೀ ಇಲ್ಲದೇ ಇರೋದ್ರಿಂದ ಪ್ರವಾಸಿಗರು ಒಬ್ಬೊಬ್ಬರೇ ಬರೋದು ಕಷ್ಟ. ಜೋಗೀಸರದ ಗ್ರಾಮಸ್ಥರಲ್ಲಿ ಯಾರಿಗಾದರೂ ಕೇಳಿದರೆ ಅವರೇ ದಾರಿ ತೋರಿಸುತ್ತಾರೆ. ಈ ವರ್ಷ ಅಂಬುತೀರ್ಥ ದೇವಸ್ಥಾನದ ಕಮಿಟಿ ವತಿಯಿಂದ ಇದಕ್ಕೆ ಮೆಟ್ಟಿಲು ಕಟ್ಟಿಸೋ ಕೆಲಸವಾಗುತ್ತೆ ಅಂತ ನಮಗೆ ದಾರಿ ತೋರಿಸೋಕೆ ಬಂದ ಜೋಗೀಸರದ ರಮೇಶ್, ಸುರೇಶ್, ನಿತೀಶ್, ರೋಹಿತ್ ಮತ್ತು ಗೆಳೆಯರು ಉತ್ಸಾಹದಿಂದ ಹೇಳ್ತಾ ಇದ್ರು.


Achakanya falls ಅಚ್ಚಕನ್ಯೆ ಫಾಲ್ಸು
ಅಲ್ಲಿಂದ ಹಾಗೇ ವಾಪಾಸ್ ಬಂದು ಎಡಕ್ಕೆ ಸಾಗಿದ್ರೆ ಅಚ್ಚಕನ್ಯೆ ಫಾಲ್ಸಿಗೆ ಸಾಗಬಹುದು. ಅಲ್ಲಿಂದ ೧ ಕಿ.ಮೀ ಮುಂದೆ ಸಾಗೋ ಹೊತ್ತಿಗೆ ಅರಳಸುರುಳಿಗೆ ೩.ಕಿ.ಮೀ ಅನ್ನೋ ಬೋರ್ಡ್ ಸಿಗುತ್ತೆ.

ಹಾಗೇ ಸಾಗಿದ್ರೆ ಅಚ್ಚಕನ್ಯೆ ಫಾಲ್ಸಿಗೆ ೧.೫ ಕಿ.ಮೀ ಅನ್ನೋ ಬೋರ್ಡು ಸಿಗುತ್ತೆ. ಅದರಲ್ಲೇ ಬಲಕ್ಕೆ ಸಾಗಿದರೆ ಫಾಲ್ಸಿಗೆ ತಲುಪಬಹುದು. ಅಚ್ಚಕನ್ಯೆ ಫಾಲ್ಸು ಅರಳಸುರುಳಿ ಗ್ರಾಮದಲ್ಲೇ ಇದ್ದರೂ ಅದನ್ನು ನೋಡಲು ಊರೊಳಗೆ ಹೋಗೋ ಅವಶ್ಯಕತೆಯಿಲ್ಲ. ಫಾಲ್ಸಿಗೆ ೪೫೦ ಮೀಟರ್ ಇದೆ ಅನ್ನೋವರೆಗೂ  ಕರೆದುಕೊಂಡು ಹೋಗುವ ಬೋರ್ಡುಗಳು ಕೊನೆಗೆ ಮರೆಯಾಗಿ ಬಿಡುತ್ತೆ. ಕೆಳಗೆ ಸಾಗೋ ಹಾದಿಯಲ್ಲಿ ಸಾಗಿದ್ರೆ ಅಲ್ಲೊಂದು ಸ್ಮಶಾನ ! ಎಲ್ಲಪ್ಪಾ ಫಾಲ್ಸು ಅಂತ ಸುತ್ತಮುತ್ತ ಹುಡುಕೋ ಹೊತ್ತಿಗೆ ಕೆಳಗೆ ಸಾಗೋ ದಾರಿಯೊಂದು ಕಾಣ್ತು. ಅಲ್ಲಿಗೆ ಸಾಗಿದಾಗ ಸ್ವಲ್ಪ ಸೊರಗಿದಂತಿದ್ದ ಜರಿಯೊಂದು ಕಾಣ್ತು . ಇನ್ನೂ ಕೆಳಗಿಳಿದ್ರೆ ಅದೇ ಅಚ್ಚಕನ್ಯೆ ಫಾಲ್ಸು ! ಮಳೆಗಾಲದಲ್ಲಿ ಹೋಗಿದ್ರೆ ಮಸ್ತಿರಬಹುದಾಗಿದ್ದ ಫಾಲ್ಸಲ್ಲಿ ಇನ್ನೂ ನೀರಿತ್ತು ಮತ್ತೆ ಫಾಲ್ಸಿನ ಬುಡಕ್ಕೆ ಸಾಗೋಕೆ ಇನ್ನೂ ಕಷ್ಟಪಡಬಹುದಾದಷ್ಟು ನೀರಿತ್ತು ಅನ್ನೋದೇ ಸದ್ಯದ ಖುಷಿ. ಅಲ್ಲೊಂದಿಷ್ಟು ಹೊತ್ತು ಕೂತು ಅಲ್ಲಿನ ಪ್ರಶಾಂತ ಪರಿಸರದ ಖುಷಿ ಅನುಭವಿಸಿದ್ವಿ
<script async src="https://pagead2.googlesyndication.com/pagead/js/adsbygoogle.js"></script>
<ins class="adsbygoogle"
     style="display:block"
     data-ad-format="fluid"
     data-ad-layout-key="-gq-2e-1k-1g+qa"
     data-ad-client="ca-pub-5071889101438500"
     data-ad-slot="7647446493"></ins>
<script>
     (adsbygoogle = window.adsbygoogle || []).push({});
</script>
 
 ಅರಳಸುರಳಿ ಅಂದಾಗ ನೆನಪಾಗೋದು ನನ್ನ ಮತ್ತೊಬ್ಬ ಬ್ಲಾಗ್ ಗೆಳೆಯ ವಿನಾಯಕ. ಶನಿವಾರವಾದ್ರಿಂದ ಅಪ್ಪಿ ತಪ್ಪಿ ಏನಾದ್ರೂ ಊರಿಗೆ ಬಂದಿರ್ಬೋದೇನೋ , ಬಂದಿದ್ರೆ ಸಿಗೋನ ಅಂತ ಅವರಿಗೆ ಫೋನ್ ಮಾಡಿದ್ರೆ ಅವರಿಲ್ಲ. ಅವರ ಊರಿಗೆ ಬರೋ ಪ್ಲಾನು ಮುಂದಿನ್ವಾರದ್ದಾಗಿತ್ತು :-(

Achakanya falls

 
 
Arunagiri/ಅರುಣಗಿರಿ
ಅಂಬುತೀರ್ಥಕ್ಕೆ ಬಂದ ದಾರಿಯಲ್ಲೇ ವಾಪಾಸ್ ಸಾಗಿ ಆರಗ ಊರನ್ನು ದಾಟಿ ಮುಂದೆ ದಾಟಿದ್ರೆ ಆರಗ ಗೇಟ್ ಅಂತ ಸಿಗುತ್ತೆ.
ಆರಗ ಗೇಟಿಗೆ ಸ್ವಲ್ಪ ಮುಂಚೆ ಅರುಣಗಿರಿ ಅಂತ ಬೋರ್ಡ್ ಸಿಗುತ್ತೆ. ಅಲ್ಲಿಂದ ಸುಮಾರು ಐದು ಕಿ.ಮೀ ಎಡಕ್ಕೆ ಸಾಗಿದ್ರೆ ಸಿಗೋದು ಅರುಣಗಿರಿ ವೆಂಕಟರಮಣ ದೇವಸ್ಥಾನ. ಪುರಾತನ ದೇಗುಲವನ್ನು ಸದ್ಯವೇ ಜೀರ್ಣೋದ್ದಾರ ಮಾಡಿದ್ರೂ ಪುರಾತನ ದೇಗುಲದ ಅವಶೇಶಗಳನ್ನು ಕಾಣಬಹುದು. ನೋಡೋಕೆ ಹತ್ತಿರ ಅನಿಸಿದರೂ ಬೆಟ್ಟದ ಮೇಲೆ ಸಾಗೋ ಹಾದಿ ಸುಲಭದ್ದೇನಲ್ಲ. ಬರುವಾಗ ಪೂರ್ತಿ ನ್ಯೂಟ್ರಲ್ಲು ಮತ್ತು ಬ್ರೇಕಿನ ಸಹಾಯದಿಂದಲೇ ಬರಬೇಕಾದ ಹಾದಿಯಿದು. ಇಲ್ಲಿನ ಬೆಟ್ಟದ ಮೇಲಿಂದ ಸುತ್ತಲ ಪರಿಸರದ ದೃಶ್ಯಗಳು, ಮೋಡಗಳು ಸುಂದರವಾಗಿ ಕಾಣುತ್ತೆ. ಸಂಜೆಯ ಸಮಯದಲ್ಲಿ ಸೂರ್ಯಾಸ್ತವನ್ನೂ ಸವಿಯಬಹುದು. ಆದರೆ ಸೂರ್ಯಾಸ್ತಕ್ಕೆ ಮುಂಚೆ ಸಾಗರದ ದಾರಿ ಹಿಡಿಯಬೇಕಾಗಿದ್ದ ಕಾರಣ ಇಲ್ಲಿಂದ ವಾಪಾಸ್ಸಾದ್ವಿ
 
Board to Arunagiri on the way to Hosanagara, would be at your right if you are returning from Ambuteertha towards araga gate



Arunagiri Laksmi Venkataramana temple

One of the old scluptures at Arunagiri

One of the old scluptures at Arunagiri

Side view of  Arunagiri

Me with my vehicle Kshipra(CB Shine SP 125)

Tunga Bridgeತುಂಗಾ ಬ್ರಿಡ್ಜ್: ಗೌತಮನಿಗೆ ತುಂಗಾ ಬ್ರಿಡ್ ನೋಡೋ ಆಸೆಯಿದ್ದರಿಂದ ವಾಪಾಸ್ ತೀರ್ಥಹಳ್ಳಿಗೆ ಬಂದು ಅಲ್ಲಿನ ಶಿವಮೊಗ್ಗ ರಸ್ತೆಯಲ್ಲಿರೋ ತುಂಗಾ ಸೇತುವೆ, ತೀರ್ಥರಾಮೇಶ್ವರ ದೇವಸ್ಥಾನಗಳನ್ನ ನೋಡಾಯ್ತು.

 
 




Rameshwara Temple complex




ವಾಪಾಸ್ ಸಾಗರ ರಸ್ತೆಗೆ ಬಂದು ಅಲ್ಲಿನ ದುರ್ಗಾ ಹೋಟೇಲಲ್ಲಿ ಮಧ್ಯಾಹ್ನದ ಊಟ ಅಂತ ಬನ್ನು,
ಪಲಾವುಗಳನ್ನ ತಿನ್ನೋ ಹೊತ್ತಿಗೆ ೫:೩೦ ಆಗಿತ್ತು ! (೨:೩೦ ಅಲ್ಲ), ಐದೂವರೆನೇ :-) .
ಅಲ್ಲಿಂದ ಮತ್ತೆ ಸಾಗರದ ಹಾದಿ ಹಿಡಿದು ರಿಪ್ಪನಪೇಟೆ, ಯಡೇಹಳ್ಳಿ, ಆನಂದಪುರ ದಾಟಿ ಸಾಗರ ಬರೋ ಹೊತ್ತಿಗೆ ಎಂಟೂಕಾಲು. ಎದ್ರಿಂದ ಬರ್ತಿರೋ ಗಾಡಿಗಳಲ್ಲಿ ಹೈ ಬೀಮು ಹಾಕ್ಕಂಡು ಬರೋರಿಗೆಲ್ಲಾ ಬೈಕೋತಾ, ನಲವತ್ತಕ್ಕಿಂತ ಕಮ್ಮಿ ಸ್ಪೀಡಲ್ಲಿ ಮನೆಗೆ ಬರ್ತಾ ಅಂದ್ಕೊಂಡಕ್ಕಿಂತಾ ಹೆಚ್ಚೇ ಟೈಂ ಹಿಡಿದಿದ್ರೂ ಸೇಫಾಗಿ ಬಂದದ್ದೇ ದೊಡ್ಡ ವಿಷ್ಯ ಅಂತ ಖುಷಿಪಡ್ಬೇಕಾಗಿತ್ತು ಅನ್ನುತ್ತಾ ಸದ್ಯಕ್ಕೊಂದು ವಿರಾಮ
Sunset on the way:


..

..

2 comments:

  1. ಬಹಳ ಖುಷಿಯಾಯ್ತು ಪ್ರಶಸ್ತಿ ಪ್ರಭಾಕರ್ ನಿಮ್ಮ ಜೊತೆ ಕಳೆದ ಆ ಒಂದು ದಿನ ಬಹಳ ಮಹತ್ವದ ದಿನವಾಗಿತ್ತು. ನಿಮ್ಮ ಸ್ನೇಹಪರತೆ ತುಂಬಾ ಆಪ್ತ ವಾಯಿತು . ತೀರ್ಥಳ್ಳಿಯ ನೆನಪುಗಳು ಮತ್ತೊಮ್ಮೆ ಕಣ್ಣಮುಂದೆ ಬಂತು.

    ReplyDelete