Friday, May 5, 2017

ಕೊಡೈಕೆನಾಲ್ ಪ್ರವಾಸ:

ಕೊಡೈಕೆನಾಲಿಗೆ ಹೋಗಬೇಕಂತ ಸುಮಾರು ದಿನದಿಂದ ಇದ್ರೂ ಮುಹೂರ್ತ ಕೂಡಿಬಂದಿರಲಿಲ್ಲ. ಅಲ್ಲಿಗೆ ಹೋಗಿ ಬರೋ ಸುದ್ದಿ ಹೇಳಿದಾಗ ಟ್ರಾವೆಲ್ ಏಜೆಂಟ್ ಅಲ್ಲೇನು ಇಲ್ಲ ಸಾರ್. ಬರೀ  ೬ ಕಿ.ಮೀ ಗಳ ಜಾಗಕ್ಕೇ ಬೇರೆ ಬೇರೆ ಹೆಸರುಗಳಿಂದ ಕರೀತಾರೆ ಅಂದಿದ್ದ. ಗೂಗಲ್ಲಲ್ಲಿ ನೋಡಿದ್ರೆ ಎಲ್ಲಾ ಸ್ಥಳಗಳನ್ನ ನೋಡೋಕೆ ೭೮ ಕಿ.ಮೀ ಆಗ್ತಿತ್ತು. ಏನಾದರಾಗಲಿ, ಹೋಗಿ ಬರೋದೇ ಸೈ ಒಂದು ದಿನಕ್ಕೆ ಅಂತ ಪಳನಿಯಿಂದ ಕೊಡೈಕೆನಾಲಿಗೆ ಹೊರಟ್ವಿ.

ಪಳನಿಯಿಂದ ಹೊರಟು ಕೊಡೈಕೆನಾಲಿಗೆ ಬರೋಕೆ ೬೫ ಕಿ.ಮೀ ಆದರೂ ಘಾಟಿಯ ದಾರಿಯಾದ್ದರಿಂದ ಏನಿಲ್ಲವೆಂದರೂ ಎರಡೂವರೆ ಘಂಟೆ ಬೇಕಿತ್ತು.  ಪಳನಿಯ ಉರಿಬಿಸಿಲಿನಿಂದ ಕೊಡೈಕೆನಾಲಿನ ಅರಣ್ಯ ಪ್ರದೇಶದ ಹತ್ತಿರತ್ತರ ಬರುತ್ತಿದ್ದಂತೆಲ್ಲಾ ಗಾಳಿ ತಣ್ಣಗಾಗುತ್ತಿದ್ದರಿಂದ ಆ ಎರಡೂವರೆ ಘಂಟೆ ಕಷ್ಟದ ಹಾದಿ ಎನಿಸಲಿಲ್ಲ. ದಾರಿಯಲ್ಲಿ ಸಿಕ್ಕ ಗಿರಿಕಂದರಗಳು, ಅರೆ ತುಂಬಿದ ಹಳ್ಳಗಳು, ಮುಳುಗುತ್ತಿರುವ ಸೂರ್ಯ ಬೆಟ್ಟದಾಚೀಚೆ ಮೂಡಿಸುತ್ತಿದ್ದ ರಂಗುಗಳ ಗಮನಿಸುತ್ತಾ, ತಣ್ಣನೆಯ ಗಾಳಿಗೆ ತಲೆಯೊಡ್ಡಿ, ಫೋಟೋ ಬಯಕೆಯಲ್ಲಿದ್ದ ಕ್ಯಾಮೆರಾವೊಡ್ಡಿ ಮುಂದೆ ಸಾಗಿದೆವು. ಮಧ್ಯದಲ್ಲೊಬ್ಬ ಜೇನು ಮಾರುವವ ಸಿಕ್ಕಿದ. ನಮ್ಮ ಕಡೆ ಎಮ್ಮೇಟಿಯಲ್ಲಿ ಬರೋ ಮೀನವನಂತೆ ಇಲ್ಲಿ ತನ್ನ ಎಮ್ಮೇಟಿಯ ಹಿಂಬದಿಗೆ ಜೇನು ತತ್ತಿಯ ಕಟ್ಟಿ ಹೊರಟಿದ್ದ ಜೇನವ ಇವ. ನಮ್ಮಲ್ಲೆಲ್ಲಾ ಎಲ್ಲೋ ಕಾಡಲ್ಲಿ ಕಟ್ಟಿದ್ದ ಜೇನಿಗೆ ಹೊಗೆ ಹಾಕಿ ಹಿಡಿದೋ, ತೋಟದಲ್ಲಿಟ್ಟಿದ್ದ  ಜೇನುಪೆಟ್ಟಿಗೆಯಲ್ಲಿದ್ದ ಜೇನನ್ನು ಹಿಂಡಿಯೋ ಒಂದೆರಡು ಬಾಟಲಿ ಜೇನು ತೆಗೆದು ಅದನ್ನು ಅಪರೂಪಕ್ಕೆ ವ್ಯಾಪಾರ ಮಾಡೋದನ್ನ ನೋಡಿದ್ದೆ. ಆದರೆ ಇಲ್ಲಿ ಜೇನಿನ ಸಂಸಾರವನ್ನೇ ಸರ್ವನಾಶ ಮಾಡುವವನಂತೆ ಬುಟ್ಟಿಗಟ್ಟಲೇ ಜೇನುಗೂಡು ಹಿಡಿದು ಹೊರಟವನ ಕಂಡು ಒಂಥರಾ ಆಯ್ತು. ಹೇಗಿದ್ರೂ ಎದುರಿಗಿದ್ದ ಜಲಧಾರೆಯ ಫೋಟೋ ತೆಗೆಯಲೆಂದು ನಿಲ್ಲಿಸಾಗಿತ್ತು. ಪೋಸು ಕೊಡುತ್ತಿದ್ದ ನಮ್ಮತ್ತ ಬಂದವ ತಮಿಳಾ, ಹಿಂದಿಯಾ ಅಂದ. ನಮ್ಮ ಮುಖ ನೋಡಿ ಇವರು ಹೊರಗಿನವರು ಅನ್ನಿಸಿರಬೇಕು. ಹಿಂದಿ ಅಂದೆವು. ಒಂದು ಲೀಟರ್ ಬಾಟಲಿಗೆ ಐನೂರರಿಂದ ಸಾವೈರದೈನೂರರ ವರೆಗೆ ಹೇಳುತ್ತಿದ್ದ ಅವ ! ಶುದ್ದ ಜೇನುತುಪ್ಪ ಸಾರ್ ಅಂದರೂ ನಮಗೆ ಅನುಮಾನ. ಜೇನುತತ್ತಿಯನ್ನು ಹಿಡಿದು ಹೊರಟಿದ್ದರೂ ಅವ ಮಾರಹೊರಟಿದ್ದು ಶುದ್ಧ ತುಪ್ಪವೋ, ಸಕ್ಕರೆಪಾಕವೋ ಯಾರಿಗೆ ಗೊತ್ತು ? !  ಎಲ್ಲರೂ ಒಂಚೂರ್ಚೂರು ಟೇಸ್ಟ್ ನೋಡಿದರು. ನನಗೆ ಜೇನುತುಪ್ಪ ಕೊಳ್ಳೋ ಉಮೇದಿರದಿದ್ದರಿಂದ, ಅದಕ್ಕಿಂತ ಸುತ್ತಣ ಪ್ರಕೃತಿ ಸವಿಯೋದೇ ಮುಖ್ಯವಾಗಿದ್ದರಿಂದ ನಾನು ಟೇಸ್ಟ್ ನೋಡೋ ಗೋಜಿಗೆ ಹೋಗಿರಲಿಲ್ಲ. ಶಿರಸಿಯವನಾದ ಹೆಗಡೆಗೆ ಅದರಲ್ಲೇನೋ ಮೋಸ ಖಂಡಿತ್ತೇನೋ. ಇದು ಒರಿಜನಲ್ ಅಲ್ಲ ಕಣ್ರೋ ಅಂದ. ಉಳಿದವರಿಗೂ ಆ ದುಬಾರಿ ತುಪ್ಪದವನಿಂದ ಪಾರಾಗಲು ಒಂದು ಕಾರಣ ಬೇಕಾಗಿತ್ತೇನೋ. ಈ ಬೇಡ , ಬೇಡ ಅಂತ ಗಾಡಿ ಹತ್ತಿದ್ರು. ನಾನು ಫೋಕಸ್ ಮಾಡಿದ್ದ ೭೦-೩೦೦ ಲೆನ್ಸ್ ಒಳಗಿಟ್ಟು ೧೮-೫೫ ಲೆನ್ಸ್ ಜೋಡಿಸುತ್ತಾ ಗಾಡಿಯ ಒಳಸೇರಿದೆ. ಕತ್ತಲಾಗೋದ್ರೊಳಗೆ ಊರು ಸೇರೋ ಗಡಿಬಿಡಿಯಲ್ಲಿದ್ದ ನಮ್ಮ ಡ್ರೈವರ್ರು ಆ ಘಾಟಿಯಲ್ಲಿ ಗಾಡಿ ಭರ್ರೆನಿಸಿದ. ಒಂದೆರೆಡು ಸೆಕೆಂಡ್ ಜೇನವನ ಬುಲಾವು ಕೇಳುತ್ತಿತ್ತು.

ಸಿಲ್ವರ್ ಕಾಸ್ಕೇಡ್ ಪಾರ್ಕು ಮತ್ತು ಜಲಪಾತ:
ಕೊಡೈಕೆನಾಲಿಂದ ೧೨ ಕಿ.ಮೀ ಮುಂಚೆ ಪೆರುಮಾಳ್ ಎಂಬ ಊರು ಸಿಗುತ್ತೆ. ಅದಕ್ಕಿಂತ ಮೂರ್ನಾಲ್ಕು ಕಿ.ಮೀ ಮುಂಚೆ ಕೊಡೈಕೆನಾಲಿನ ಟೋಲ್ ಗೇಟ್ ಸಿಗುತ್ತೆ. ದಿನಕ್ಕೆ ೫೦ರಂತೆ ಟೋಲ್ ಕೊಟ್ಟು ಒಳಸೇರಿದ್ವಿ. ಟೋಲಿಂದ ಸ್ವಲ್ಪ ಮುಂದೆ ಬರುತ್ತಿದ್ದಂತೆಯೇ ರಸ್ತೆಯ ಪಕ್ಕದಲ್ಲೊಂದು ಜಲಪಾತ ಕಾಣುತ್ತೆ. ಅದೇ ಸಿಲ್ವರ್ ಕಾಸ್ಕೇಡ್ ಜಲಪಾತ. ಸದಾ ಪ್ರವಾಸಿಗರಿಂದ ಗಿಜಿಗಿಜಿಗುಡೋ ಈ ಜಲಪಾತದ ಬುಡದವರೆಗೂ ಹೋಗಲಾಗದಿದ್ದರೂ ದೂರದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳಲಡ್ಡಿಯಿಲ್ಲ. ಸೂರ್ಯಾಸ್ತವಾಗುತ್ತಿದ್ದ ಸಮಯದಲ್ಲಿ ಇಲ್ಲಿಗೆ ಬಂದದ್ದರಿಂದ ಜಲಪಾತದ ತಲೆಯಿಂದ ನೀರ ಜೊತೆಗೆ ಸೂರ್ಯರಶ್ಮಿಗಳೂ ಕೆಳಧುಮುಕುತ್ತಿದ್ದವೋ ಎನಿಸುತ್ತಿತ್ತು. ಎದುರು ನಿಂತು ಒಂದಿಷ್ಟು ಫೋಟೋ ತೆಗೆಸಿಕೊಳ್ಳುವಷ್ಟರಲ್ಲೇ ಕತ್ತಲಾಗಿಹೋಯ್ತು. ಅಲ್ಲೇ ನಿಂತು ಜೋಳ ತಿನ್ನುತ್ತ, ಸುತ್ತ ನಿಂತು ಗುಳ್ಳೆಗಳ ಹಾರಿಸುತ್ತಿದ್ದ ಚಿಣ್ಣರ, ಹುಡುಗ-ಹುಡುಗಿಯರ ಗುಂಪು ನೋಡ ನೋಡುತ್ತಲೇ ಫೋಟೋದಲ್ಲಿ ಜಲಪಾತ ಕಂಡರೆ ಮುಖ ಕಾಣದ, ಮುಖ ಕಂಡರೆ ಜಲಪಾತ ಕಾಣದಂತ ಪರಿಸ್ಥಿತಿಯಾಗೋಯ್ತು. ಅಲ್ಲಿನ ವಾತಾವರಣವನ್ನು ಸವಿಯುತ್ತಾ , ಜೋಳ ತಿನ್ನುತ್ತಾ ೨೦-೨೫ ನಿಮಿಷ ಅಲ್ಲೇ ಇದ್ದೆವು. ಪೂರ್ಣ ಕತ್ತಲಾಗಿ, ಅಲ್ಲಿನ ದೀಪಗಳು ಮಿನುಗೋ ಹೊತ್ತಿಗೆ ಮತ್ತೆ ಕೊಡೈಕೆನಾಲಿನ ಹಾದಿ ಹಿಡಿದೆವು.

ಪೆರುಮಾಳ್ ಆಂಟಿ ಮತ್ತು ಇಲ್ಲದ ಪೀಕು
ಇಲ್ಲಿಗೆ ಬರೋ ಹೊತ್ತಿಗೆ ಅಸ್ತಂಗತನಾಗಿದ್ದ ಸೂರ್ಯ ಆಗಸದಲ್ಲಿ ಬಿಡಿಸಿದ್ದ ಬಗೆ ಬಗೆ ಚಿತ್ತಾರಗಳು ಕಾಣತೊಡಗಿದ್ದವು. ಒಂದಿಷ್ಟು ಪಿಂಕು, ಒಂದಿಷ್ಟು ಕೇಸರಿಯ ರೇಖೆಗಳು ತಮ್ಮವೇ ಕಲ್ಪನೆಗಳನ್ನು ತರುತ್ತಿದ್ದವು. ಒಂದಿಷ್ಟು ಜನ ಇಲ್ಲೊಂದು ಟೀ ಕುಡಿಯೋಣವೆಂದು ನಿಂತರೆ ನಾನು "ಸಿಕ್ಕೀತೆ ಮುಂದಿನ ದಾರಿ, ನನ್ನೆಲ್ಲಾ ಕಲ್ಪನೆ ಮೀರಿ.." ಅಂತ ಕಿರಿಕ್ ಪಾರ್ಟಿಯ ಹಾಡನ್ನು ನನ್ನದೇ ಅವತರಣಿಕೆಯಲ್ಲಿ ಗುನುಗುತ್ತಾ  ಮೋಡಗಳ ಚಿತ್ತಾರದಲ್ಲಡಗಿರಬಹುದಾದ ಅನಂತ ಸಾಧ್ಯತೆಗಳಲ್ಲಿ ಒಂದಿಷ್ಟಾದರೂ ದಕ್ಕಿಸಿಕೊಳ್ಳೋ ಪ್ರಯತ್ನದಲ್ಲಿದ್ದೆ. ಅಲ್ಲೇ ಬಂದಿದ್ದು ನಮ್ಮ ಮಾರನೆಯ ದಿನ ಹಾಳು ಮಾಡಿದ ಆಂಟಿ ! ಇಲ್ಲೇ ಅರ್ಧ ಕಿ.ಮೀ ಹೋದ್ರೆ ಪೆರುಮಾಳ್ ಪೀಕ್ ಅಂತ ಇದೆ. ಅಲ್ಲಿಂದ ಐದು ಕಿ.ಮೀ ಹೋದ್ರೆ ಸಖತ್ತಾದ ಜಾಗವಿದೆ ಅಂದ್ರು. ಗೂಗಲ್ಲಲ್ಲೂ ಆ ತರದ್ದೊಂದು ಜಾಗ, ಅಲ್ಲಿನ ಚಿತ್ರಗಳೆಲ್ಲಾ ಇದ್ದಿದ್ರಿಂದ, holidayIQ, tripadvisor ಲೂ ಅದರ ಬಗ್ಗೆ ಇದ್ದಿದ್ರಿಂದ ನಾವೂ ಹೌದಿರಬೇಕು ಅಂದ್ಕೊಂಡೆವು. ಕೊಡೈಕೆನಾಲಿಂದ ಬರೀ ೧೨ ಕಿ.ಮೀ. ಹಾಗಾದ್ರೆ ನಾಳೆಯ ಮೊದಲ ಸ್ಥಳ ಇದೇ ಅಂತ ಡಿಸೈಡ್ ಮಾಡಿದ್ವಿ. ಆದ್ರೆ ಅಲ್ಲಿ ಆ ತರದ ಪೀಕಿದ್ರೂ ಗೂಗಲ್ ಮ್ಯಾಪು ಇನ್ನೂ ೮ ಕಿ.ಮೀ ಮುಂದೆ ತೋರ್ಸತ್ತೆ. ತೋರ್ಸಿದ ಜಾಗದಲ್ಲಿ ಯಾವ ಪೀಕೂ ಇಲ್ಲವೆಂದೂ, ಪೆರುಮಾಳಿನ ಪಕ್ಕದಲ್ಲಿ ಇರುವ ಪೀಕಿಗೆ ಅರಣ ಇಲಾಖೆಯವರು ಈಗ ಹೋಗೋಕೆ ಬಿಡೋಲ್ಲವೆಂದು ನಮಗೆ ಗೊತ್ತಿರಲಿಲ್ಲ. ಮಾರನೆಯ ದಿನ ಒಂಭತ್ತೂವರೆಗೆ ಹೊರಟವರು ಟ್ರಾಫಿಕ್ಕಿನಲ್ಲಿ ಒದ್ದಾಡುತ್ತಾ ಇಲ್ಲಿಗೆ ಬರುವಾಗಲೇ ಹನ್ನೆರಡು ಘಂಟೆ ಮಾಡಿಕೊಂಡಾಗಲೂ ಗೊತ್ತಾಗಿರಲಿಲ್ಲ. ಇವತ್ತು ಸಂಜೆಯೇ ವಾಪಾಸ್ ಹೊರಡಬೇಕೆಂದು ಡ್ರೈವರ್ ವರಾತ ತೆಗೆದು, ಟ್ರಾವೆಲ್ ಏಜೆಂಟನ ಜೊತೆಗೆ ಅದರ ಬಗ್ಗೆ ಗಲಾಟೆ, ಸಂಧಾನಗಳನ್ನು ನಡೆಸಿದಾಗಲೂ ಗೊತ್ತಾಗಿರಲಿಲ್ಲ.   ಕೊಡೈಕೆನಾಲ್ ಲೇಕಿಗಾದರೂ ಹೋಗೋಣವೆಂದು ಮತ್ತೆ ವಾಪಾಸ್ ತಿರುಗಿಸಿ ಅಲ್ಲೂ ಟ್ರಾಫಿಕ್ ಕಂಡು ತಲೆಕೆಟ್ಟು ಮೂರನೆಯ ದಿನದ ಪ್ಲಾನಾದ  ಥೇನಿಯತ್ತ  ಹೊರಟಾಗಲೂ ಗೊತ್ತಾಗಿರಲಿಲ್ಲ. ಕೊಡೈಕೆನಾಲಿನ ಬೆಟ್ಟಗಳ ನೋಡೋದು, ಅಲ್ಲಿನ ರಸ್ತೆಗಳಲ್ಲಿ ನಡೆಯೋದರಲ್ಲೇ ಎರಡನೆಯ ಮಧ್ಯಾಹ್ನದವರೆಗೆ ಕಳೆದಿದ್ದ ನಾವು ಮತ್ತೆ ಪೆರುಮಾಳಿಗೆ ವಾಪಾಸ್ ಬಂದು ಅಲ್ಲಿಂದ ಮಧುರೈಯ ರಸ್ತೆಯಲ್ಲಿ ಮುಂದೆ ಹೊರಟವರು ಯಾಕೋ ಸ್ವಲ್ಪ ಮುಂದೆ ಬಂದಾಗ ರಸ್ತೆ ಖಚಿತಪಡಿಸಿಕೊಳ್ಳಲು ಒಬ್ಬನ್ನ ಕೇಳೋಣ ಅಂತ ನಿಲ್ಲಿಸಿದ್ವಿ. ಆಗ ಏನಕ್ಕೂ ಇರಲಿ ಅಂತ ಅಲ್ಲೊಬ್ಬನನ್ನು ಇಲ್ಲಿ ಪೆರುಮಾಳ್ ಪೀಕ್ ಎಲ್ಲಿದೆ ಎಂದೆ. ಪೀಕ್ ಇಲ್ಲೇ ಸ್ವಲ್ಪ ಮುಂದಿದೆ. ಆದ್ರೆ ಈಗ ಅರಣ್ಯ ಇಲಾಖೆಯವರು ಅಲ್ಲಿಗೆ ಬಿಡುತ್ತಿಲ್ಲ ಅಂದ.ಅಯ್ಯೋ ಶಿವನೇ. ನೀನು ನಿನ್ನೆಯೇ ಸಿಕ್ಕಿದ್ರೆ ಏನಾಗಿತ್ತು. ಬೆಳಗ್ಗೆಯಾದರೂ ಸಿಕ್ಕಿದ್ರೆ ಏನಾಗ್ತಿತ್ತು ಅಂತ ತಪ್ಪು ಮಾಹಿತಿ ಕೊಟ್ಟ ಎಲ್ಲರಿಗೂ ಶಾಪ ಹಾಕುತ್ತಾ ಮುಂದೆ ಸಾಗಿದ್ವಿ. ಬೆಳಗ್ಗಿಂದ ಪೋಲೀಸಿಂದ ಹಿಡಿದು ಅಲ್ಲಿ ಬೈಕ್ ಹಿಡಿದು ಸುತ್ತುತ್ತಿದ್ದ ಹುಡುಗರವರೆಗೆ ಅದೆಷ್ಟು ಜನಕ್ಕೆ ಕೇಳಿದ್ವೋ? ಊಹೂಂ, ಒಬ್ರಿಗೂ ಗೊತ್ತಿರಲಿಲ್ಲ ಇಲ್ಲಾ, ಅಲ್ಲಂತೆ, ಇಲ್ಲಂತೆ , ಸರಿಯಾಗಿ ಗೊತ್ತಿಲ್ಲ ಅನ್ನೋರೇ ! ನೂರಿನ್ನೂರು ಕಿ.ಮೀ ದೂರದಲ್ಲಿರೋದಲ್ಲಪ್ಪ, ಪಕ್ಕದೂರಲ್ಲಿ ಇರೋ , ಸದ್ಯಕ್ಕೆ ಬಂದಾಗಿರೋ ಜಾಗದ ಬಗ್ಗೆಯಾದರೂ ಮಾಹಿತಿ ಬೇಡವಾ ?


ತಮಿಳೆಂದರೆ ಸುಲಿಗೆಯಾ ಗುರು ?
ತಮಿಳುನಾಡಿನ ಗಾಡಿಯಲ್ಲ ಅಂತ ಗೊತ್ತಾದ ತಕ್ಷಣ ಫೀ ಪಾರ್ಕಿಂಗಿದ್ದರೂ ಪಾರ್ಕಿಂಗ್ ಫೀ ಕೇಳಲು ಬರುತ್ತಿದ್ದ ಪಳನಿಯ ಜನ, ೫೦ ರೂ ಚೀಟಿಯಿದ್ದರೂ ೬೦ ರೂ ತಗೊಳ್ಳುತ್ತಿದ್ದವ, ಪಳನಿಯ ದೇವಸ್ಥಾನದಲ್ಲಿ ದೇವರಿಗೆ ಹಾಕುತ್ತೀವಿ ಅಂತ ಕ್ಯೂನಲ್ಲಿ ನಿಂತ ಜನರಿಂದ ದುಡ್ಡು ವಸೂಲು ಮಾಡುತ್ತಿದ್ದ ಅರ್ಚಕರು.. ಹೀಗೆ ತಮಿಳುನಾಡೆಂದರೆ ಒಂಥರಾ ಬೇಸರ ಹುಟ್ಟಿಹೋಗಿತ್ತು. ಜೊತೆಗೆ ಎರಡನೆಯ ದಿನದ ಅರ್ಧ ದಿನ ಹಾಳು ಮಾಡಿದ್ದೂ ಸೇರಿದಂತೆ ಸಖತ್ ಸಿಟ್ಟು ಬಂದಿತ್ತು ಇಲ್ಲಿನ ಸುಲಿಗೆಕೋರ ವ್ಯವಸ್ಥೆಯ ಬಗ್ಗೆ. ಪೆರುಮಾಳ್ ದಾಟಿ ಅಂತೂ ಇಂತೂ ಕೊಡೈಕೆನಾಲಿಗೆ ಬಂದ್ವಿ. ಬಂದಾದ ನಂತರ ಎಲ್ಲುಳಿಯೋದು ? ಹಾದಿಯಲ್ಲಿ ಉಳಿಯೋದು ಅಂತ ಅಂತ್ಕೊಂಡಿದ್ದ ಹೋಟೇಲೀಗೆ ಫೋನ್ ಮಾಡಿದರೆ ರೂಮಿಲ್ಲ. ಇರೋದೆಲ್ಲಾ ೮-೧೦ ಸಾವಿರ ಹೇಳುತ್ತಿದ್ದ. ಪಳನಿಯಲ್ಲಿ ಆದಂತೆ ಆಗೋದು ಬೇಡ ಅಂತ ಒಬ್ಬೊಬ್ಬರು ಒಂದೊಂದು ಕಡೆ ರೂಮು ಹುಡುಕೋಕೆ ಹೋದ್ವಿ.  ರೂಬಿ ಅಂತೊಂದು ಸಿಗ್ತು. ಅಲ್ಲಿ ೨ ರೂಮಿಗೆ ೫ ಸಾವಿರ ಹೇಳಿದ್ದ. ಅಂತೂ ನಾಲ್ಕಕ್ಕೆ ಬುಕ್ ಮಾಡಿ, ನಂಬರ್ ತಗೊಂಡು ಬಂದಿದ್ರು ಇಬ್ರು. ಪದ್ಮಾ ಅಂತೊಂದು ಲಾಡ್ಜ್ ನೋಡೋಕೆ ಹೋದೋರು ಅಲ್ಲಿ ಮೂರು ಸಾವಿರದ ರೂಮಿದ್ದರೂ ಅಲ್ಲಿ ೭ ಜನ ಇರೋಕಾಗಲ್ಲ. ಬೇರೆ ರೂಮುಗಳು ಖಾಲಿ ಇದ್ರೂ ಕೊಡ್ತಿಲ್ಲ ಅವ ಅಂದ್ರು. ಅಷ್ಟರಲ್ಲಿ ರಸ್ತೆ ಬದಿಯಲ್ಲಿ ಗಾಡಿ ನಿಲ್ಲಿಸಿದ್ದರೂ ಇದು ನಮ್ಮ ಜಾಗ, ಇಲ್ಯಾಕೆ ನಿಲ್ಲಿಸಿದ್ದೀಯ ಅಂತ ತಮಿಳು ಗಾಡಿಯವನೊಬ್ಬ ಜಗಳಕ್ಕೆ ಬಂದ. ಅವನಿಗೆ ಸಮಾಧಾನ ಮಾಡಿ ಗೂಗಲ್ಲಲ್ಲಿ ಸಿಕ್ತಿದ್ದ, ತಮಿಳು ಟೂರಿಸಂ ವೆಬ್ ಸೈಟಲ್ಲಿ ಸಿಕ್ಕಿದ್ದ ಹೋಟೇಲ್ ರೂಮುಗಳಿಗೆಲ್ಲಾ ಫೋನ್ ಮಾಡಿದ್ರೂ ಯಾವುದ್ರಲ್ಲೂ ರೂಮು ಸಿಕ್ತಿರಲಿಲ್ಲ. ಎಲ್ಲಾ ಒಂದು ರೂಮಿಗೆ ೮-೧೦ ಸಾವಿರ ಹೇಳುತ್ತಿದ್ದರೂ ಇಲ್ಲಾ ಖಾಲಿ ಅನ್ನುತ್ತಿದ್ದರು. ಅಷ್ಟರಲ್ಲಿ ೫ ಸಾವಿರಕ್ಕೆ ರೂಮು ಕೊಡಿಸ್ತೇವೆ. ರೂಮಿಗೆ ೫ ಸಾವಿರ ಅಂತ ಒಂದಿಷ್ಟು ಜನ ಮುಂದೆ ಬಂದ್ರು. ಆದರೆ ಅವರೆಲ್ಲಾ ರೂಮು ಅಲ್ಲಿದೆ, ಇಲ್ಲಿದೆ ಅಂತ ಹೇಳುತ್ತಿದ್ದರೇ ಹೊರತು ೩೫೦೦ ಕ್ಕಿಂತ ಕೆಳಗಿಳಿಯಲು ಒಪ್ಪುತ್ತಿರಲಿಲ್ಲ. ಬಸ್ಟಾಂಡತ್ರ ಹೋಗಿ, ಅಲ್ಲಿ ಸುಮಾರು ರೂಮಿರತ್ತೆ ಅಂದ ಒಬ್ಬ. ಸರಿಯಂತ ಬಸ್ಟಾಂಡಿಗೆ ಬರೋ ಹೊತ್ತಿಗೆ ಘಂಟೆ ಏಳೂಮುಕ್ಕಾಲಾಗುತ್ತಾ ಬರುತ್ತಿತ್ತು. ಹೊಟ್ಟೆ ಚುರುಗುಟ್ಟುತ್ತಿತ್ತು.ಮೊದಲು ಊಟ ಮಾಡ್ಕೊಂಡು ರೂಂ ಹುಡುಕೋಣ ಅಂದೆ ನಾನು. ಇಲ್ಲ. ಮೊದಲು ರೂಂ ಅಂದ್ರು ಕೆಲವರು.ಸರಿ ಅಂತ ಮೂರು ಗುಂಪು ಮಾಡ್ಕೊಂಡು ಮೂರು ದಿಕ್ಕಲ್ಲಿ ಹೊರಟ್ವಿ. ನಾನು, ವರುಣ, ಪ್ರಮೋದ್ ಹೋದ ದಿಕ್ಕಲ್ಲಿ ಒಂದಿಷ್ಟು ಲಾಡ್ಜುಗಳೇನೋ ಸಿಕ್ತು. ಆದ್ರೆ ಅವುಗಳಲ್ಲೆಲ್ಲೂ ರೂಮಿರಲಿಲ್ಲ. ಕೆಲವು ಕಡೆ ಓಯೋ ರೂಂಗಳೂ ಕಾಣ್ತು. ಬೇರ್ಬೇರೆ ಬುಕಿಂಗ್ ಆಪ್ಗಳಲ್ಲಿ ರೂಂ ಕಂಡರೂ ಅವು ೮ರೊಳಗೆ ಇರಲಿಲ್ಲ. ಕೆಲವರು ರೂಂ ನೋಡಿ ಆಮೇಲೆ ಮಾತಾಡಿ ಅನ್ನುತ್ತಿದ್ದರೂ ನಾವು ಮೊದಲು ರೇಟ್ ಹೇಳಿ, ಬಜೆಟ್ ಹೊಂದಿಕೆಯಾದ್ರೆ ಮಾತ್ರ ನೋಡ್ತೇವೆ ಅನ್ನುತ್ತಿದ್ವಿ. ನಡೆದು ನಡೆದು ಕೊಡೈಕೆನಾಲಿನ coakers walk ಅನ್ನೋ ಸ್ಥಳದವರೆಗೂ ಬಂದ್ವಿ. ಆ ಜಾಗ ಬಂದಾಗುತ್ತಿತ್ತು. ರೂಮುಗಳಿರಲಿಲ್ಲ. ಅಲ್ಲೇ ಇದ್ದ ಚರ್ಚಿನ ಪಕ್ಕದ ಹಾದಿ ಹಿಡಿದು ಕೊಡೈಕೆನಾಲಿನ ಶಾಪಿಂಗ್ ರಸ್ತೆಗಳಲ್ಲಿ ನೇತಾಕಿದ್ದ ಸ್ವೆಟರು, ಮಫ್ಲರುಗಳನ್ನೆಲ್ಲಾ ನೋಡುತ್ತಾ ಹಾಗೇ ಮುಂದೆ ಬಂದೆವು. ಲೈಟಾಗಿ ಚಳಿ ಕಾಡುತ್ತಿದ್ದರೂ ನಡೆಯುತ್ತಿದ್ದರಿಂದ ಸ್ವೆಟರಿನ ಅಗತ್ಯ ಕಾಣಲಿಲ್ಲ. ಹಾಗೇ ಮುಂದೆ ಬಂದು ಕೊಡೈಕೆನಾಲ್ ಆಸ್ಪತ್ರೆಯವರೆಗೂ ಬಂದೆವು. ಎಲ್ಲೂ ರೂಮಿಲ್ಲ. ಅಲ್ಲಲ್ಲಿ ನಿಲ್ಲಿಸಿದ್ದ ಟಿ.ಟಿಗಳು ಕಾಣುತ್ತಿದ್ದರಿಂದ ಇಲ್ಲಿ ರೂಮಿರಬಹುದಾ, ಇನ್ನು ಹತ್ತು ಹೆಜ್ಜೆ ಮುಂದಿರಬಹುದಾ ಅನ್ನೋ ಆಸೆ ಜಾಗೃತವಾಗುತ್ತಿತ್ತು. ಆದರೆ ಆ ಆಸೆ ನೀರ ಮೇಲಿನ ಗುಳ್ಳೆಯಂತೆ ಕೆಲ ಹೊತ್ತಲ್ಲೇ ಒಡೆಯುತ್ತಿತ್ತು. ಕಾಫಿ ಬೋರ್ಡ್, ಮ್ಯೂಸಿಯಂ ಎಲ್ಲಾ ಸಿಕ್ತು. ಆದ್ರೆ ರೂಂ, ಕಾಟೇಜ್ ಮಾತ್ರ ಸಿಗಲೇ ಇಲ್ಲ.  ಬೀದಿಯಲ್ಲಿದ್ದ ಲೈಟುಗಳ ಬೆಳಕು ಕೊಂಚ ಕೊಂಚವೇ ಕಮ್ಮಿಯಾಗುತ್ತಿತ್ತು.  ಇನ್ನು ಇಲ್ಲಿ ನಡೆದು ಉಪಯೋಗವಿಲ್ಲವೆಂದು ವಾಪಾಸ್ ನಡೆದೆವು.

ವಾಪಾಸ್ಬರುತ್ತಿದ್ದ ಹಾದಿಯಲ್ಲಿ ೪ ಸಾವಿರಕ್ಕೆ ಕೊಡೋಕೆ ರೆಡಿಯಾದ ರೂಬಿಗೇ ಹೋದರೆ ಹೇಗೆ ಅನಿಸಿತು. ಸರಿ, ಅಲ್ಲೇ ಹೋಗೋಣ ಅಂತ ಹುಡುಕುತ್ತಿದ್ದ ಉಳಿದವರಿಗೆ ಫೋನ್ ಮಾಡ್ದೆ. ಅವರಿಗೂ ಎಲ್ಲೂ ಸಿಕ್ಕಿರಲಿಲ್ಲ. ಎಲ್ಲಾ ಗಾಡಿಯಿಟ್ಟಲ್ಲಿಗೆ ಬನ್ನಿ. ರೂಬಿಗೇ ಹೋಗೋಣ ಅಂದೆ. ಅವರಿಗೂ ಅದೇ ಸರಿಯೆನ್ನಿಸಿತೋ, ಇನ್ನು ಈತರ ಹುಡುಕಿ ಪ್ರಯೋಜನವಿಲ್ಲವೆನಿಸಿತೋ ಗೊತ್ತಿಲ್ಲ. ಎಲ್ಲಾ ಸ್ವಲ್ಪ ಹೊತ್ತಲ್ಲೇ ಗಾಡಿಯತ್ರ ಬಂದಿದ್ರು

ಧಿಮಾಕಂದ್ರೆ ಹಿಂಗಿರಬೇಕು:
ರೂಂ ಹುಡುಕಹೋದ ಒಬ್ಬೊಬ್ಬರದು ಒಂದೊಂದು ಕತೆಯಾಗಿತ್ತು. ಎಂತೆಂತೋ ರೂಂಗೆ ಅಡತಾಕಿದ ಹೆಗಡೆ, ತೇಜಸ್ಸಿಗೆ ಒಬ್ಬ ಧಡಿಯ ಸಿಕ್ಕಿದ್ದನಂತೆ. ಹಿಂದಿಯಲ್ಲಿ ಕೇಳಿದ್ದಕ್ಕೆ "ಮುಜೆ ಹಿಂದಿ ನಹೀ ಆತ.ತಮಿಳ್ ಮೇ ಬೋಲೋ" ಅಂದಿದ್ನಂತೆ. "ನಹಿ ಆತಾ" ಅನ್ನೋಕೆ ಬರುತ್ತೆ. ಕೇಳಿದ್ದಕ್ಕೆ ಹೇಳೋಕೆ ಬರಲ್ವಾ ? ಬರೀ ಇಲ್ಲಿ ಅಂತಲ್ಲ. ತಮಿಳುನಾಡಿನ ಸುಮಾರು ಕಡೆ ಈ ಅನುಭವವಾಗಿದ್ದುಂಟು. ರಸ್ತೆ ಬದಿಯಲ್ಲಿ ನಿಂತ ಜನರು ಬಿಡಿ ಪೋಲೀಸರನ್ನ ಕೇಳಿದ್ರೂ ಅವರು ಮಾತಾಡೋದು ತಮಿಳಲ್ಲೇ ! ಭಾಷಾಪ್ರೇಮ ಇರಲಿ ಗುರು . ಆದ್ರೆ ಈ ರೇಂಜಿಗಾ ? ಎಲ್ಲಾ ಬಂದಾದ ಮೇಲೆ ರೂಬಿಗೆ ಫೋನ್ ಮಾಡಿದ್ವಿ. ಆದ್ರೆ ಅವನು ರೂಂ ಇಲ್ವೇ ಇಲ್ಲ ಅನ್ನಬೇಕಾ ? ಸ್ವಲ್ಪ ಹೊತ್ತಿನ ಮುಂಚೆಯಷ್ಟೇ ಕೇಳ್ಕೊಂಡು ಬಂದಿದ್ವಿ. ಈಗ ನೋಡಿದ್ರೆ ಈ ಕತೆ. ಅದೇ ತರ ಇಲ್ಲ ಅಂದ ಕೆಲವು ಲಾಡ್ಜವರು ಮತ್ತೆ ಫೋನ್ ಮಾಡಿ ಇದೆ ಅನ್ನೋದು, ಇನ್ನೊಂದಿಷ್ಟು ರೇಟೇರಿಸೋದು ನಡೆಯುತ್ತಿರುವಾಗ ನಾವು ಬಂದ ದಾರಿಯಲ್ಲೇ ಹೋಗೋಣ. ರೂಬಿಯಲ್ಲದಿದ್ದರೆ ಅದರ ಪಕ್ಕದಲ್ಲಿ ಯಾವುದಾದ್ರೂ ಸಿಕ್ಕೀತು ಅಂತ ವಾಪಾಸ್ ಹೊರಡೋಕೆ ಹೊರಟ್ವಿ.

ಕೊನೆಗೂ ಸಿಕ್ತೊಂದು ಬಂಗಾರದ ರೂಮು !
ಎಲ್ಲೂ ಸಿಗಲಿಲ್ಲ ಅಂದ್ರೆ ಕೊನೆಗೆ ಗಾಡಿಯಲ್ಲೇ ಮಲಗೋದು ಅಂತ ಕೆಲವರು. ಆದ್ರೆ ನಿನ್ನೆಯೂ ನಿದ್ರೆಯಾಗಿಲ್ಲ. ಪಳನಿಯ ಬಿಸಿಲಲ್ಲಿ ಸುಟ್ಟು ಹೈರಾಣಾಗಿ ಇಲ್ಲಿಗೆ ಬಂದಿದ್ದೀವಿ. ಇವತ್ತೂ ಮಲಗದಿದ್ದರೆ ಮೂರನೇ ದಿನದ ಟ್ರೆಕ್ಕಿಂಗ್ ಹೊಗೆ ಹಾಕಿಸ್ಕೊಳ್ಳತ್ತೆ. ಏನಾದ್ರಾಗಲಿ ರೂಂ ಹುಡುಕಲೇಬೇಕು ಅಂತ ನಾನು. ಹಾಗೇ ಸ್ವಲ್ಪ ದೂರ ಬರುವಷ್ಟರಲ್ಲಿ ದಾರಿ ತಪ್ಪಿಸ್ಕೊಂಡಿದ್ದು ಗೊತ್ತಾಯ್ತು. ಸರಿ,ಇದ್ರಲ್ಲೇ ಮುಂದೆ ಹೋಗೋಣ, ಯಾವುದಾದ್ರೂ ಹೋಟೇಲ್ ಸಿಗಬಹುದು ಅಂತ ಬರುತ್ತಿದ್ದಾಗ ಗೋಲ್ಡನ್ ಪಾಮ್ ಲಾಡ್ಜ್ ಅಂತೊಂದು ಲಾಡ್ಜ್ ಕಾಣುಸ್ತು. ಅಲ್ಲಿ ರೂಮುಗಳಿವೆ ಅಂತ ಕಂಡ ಬೋರ್ಡ್ ನೋಡಿ ನಾನು ಇಲ್ಲಿ ನೋಡಿ ಬರ್ತೇನೆ ಅಂತ ನಾನು, ಪ್ರಮೋದ ಅಲ್ಲಿಗೆ ಬಂದ್ವಿ. ಅದೃಷ್ಟಕ್ಕೆ ಅವನಿಗೆ ಸ್ವಲ್ಪ ಸ್ವಲ್ಪ ಹಿಂದಿ ಬರುತ್ತಿತ್ತು. ಒಂದು ರೂಮಿದೆ. ೫ ಸಾವಿರ ಅಂದ. ಅಂತೂ ಇಂತೂ ಚೌಕಾಸಿ ಮಾಡಿ ಚಾರ್ ಹಜಾರ್ ಅಂದ. ಪ್ರಮೋದ್ ನಾಲ್ಕೂವರೆಗೆ ಕೇಳೋಣ ಕಣೋ ಅಂತಿದ್ದ. ಗುರೂ, ಅವನು ಕೇಳ್ತಿರೋದೇ ನಾಲ್ಕು ಸಾವಿರಕ್ಕೆ. ಸ್ವಲ್ಪ ಸುಮ್ನಿರು ಅಂತ ರೂಂ ನೋಡ್ಬೋದಾ ಅಂದೆ. ಸರಿ ಅಂತ ರೂಂ ಬಾಯನ್ನ ಜೊತೆಮಾಡಿ ಕಳಿಸಿದ. ರೂಂ ನಂ ೨೦೪. ವಿಶಾಲವಾದ ೨ ಬೆಡ್ ಗಳಿದ್ದವು. ಒಂದೊಂದರಲ್ಲೂ ೩ ಜನ ಆರಾಮವಾಗಿ ಮಲಗಬಹುದಿತ್ತು. ಆದ್ರೆ ನಾವಿದ್ದಿದ್ದು ೭ ಜನ. ಎಕ್ಸಟ್ರಾ ಬೆಡ್ಡಿಗೆ ಎಷ್ಟಪ್ಪಾ ಅಂದೆ. ಮತ್ತೆ ೩೦೦ ಆಗುತ್ತೆ ಅಂದ ಅವ. ಹೋಟೇಲಿನವನ ಹತ್ರ ಚೌಕಾಶಿ ಮಾಡೋಣ ಅಂದ್ರೆ ೩೫೦೦ ಅಂತೆಲ್ಲಾ ಅನ್ನೋದಾದ್ರೆ ಹೋಗ್ಬುಡಿ. ನಾನು ಕೊಡೋದೇ ಇಲ್ಲ ಅಂತ ಖಡಾಖಂಡಿತವಾಗಿ ಹೇಳಿಬಿಟ್ಟಿದ್ದ ಅವ. ಕೊನೆಗೂ ಅವನತ್ರ ೪೦೦೦ ಕ್ಕೆ ಒಂದು ಎಕ್ಸಟ್ರಾ ಬೆಡ್ಡನ್ನೂ ಡೀಲ್ ಮಾಡಾಯ್ತು. ಸರಿ, ಹೊರಗಡೆ ನನ್ನ ಫ್ರೆಂಡ್ಸ್ ಇದ್ದಾರೆ. ಕರ್ಕೊಂಡು ಬರ್ತೀನಿ ಅಂದ್ರೆ ನೀವು ಇಲ್ಲಿ ಇರೋವರೆಗೆ ಮಾತ್ರ ಆಫರ್. ಹೊರಗೆ ಹೋದ್ರೆ ಮತ್ತೆ ಈ ರೂಮಿರೋಲ್ಲ ಅಂದ ಹೋಟೇಲ್ಲವ! ಎಲ್ಲಂದ್ರೂ ಇಷ್ಟು ಕೊಡ್ಲೇಬೇಕು ಇವತ್ತು. ಇಲ್ಲೇ ಇದ್ಬಿಡೋಣ ಉಳ್ದವ್ರನ್ನ ಕರ್ಕೊಂಡು ಬಾ ಅಂತ ಪ್ರಮೋದಿಗೆ ಹೇಳಿ ನಾನಲ್ಲೇ ನಿಂತೆ. ಉಳಿದವ್ರು ಬಂದ್ರೂ ಪ್ರಮೋದ್ ವರುಣ ಎಲ್ಲೋ ಮಾಯವಾಗಿದ್ರು. ರೂಮಿಗೆ ಬಂದು ಬ್ಯಾಗಿಡುವಷ್ಟರಲ್ಲಿ ವರುಣನ ಫೋನು. ಇಲ್ಲೊಬ್ಬ ೨೦೦೦ ಕ್ಕೆ ೨ಬಿಹೆಚ್ಕೆ ಮನೆ ಬಿಟ್ಟುಕೊಡೋಕೆ ರೆಡಿ ಇದ್ದಾನೆ ಒಂದು ರಾತ್ರಿಗೆ ಅಂತ. ! ತತ್ತೆರೀಕೆ. ದುಡ್ಕೊಟ್ಟಾಗೋಯ್ತಲ್ಲ. ಇನ್ನೇನು ಮಾಡೋದು?ಇಲ್ಲೇ ಬನ್ನಿ ಅಂತ ಅವರನ್ನು ಕರೆದಾಯ್ತು. ಆ ಮನೆಯವ್ನೂ ಮನೆಯೆಲ್ಲಿದೆ ಅಂತ ಸರಿಯಾಗಿ ಹೇಳ್ತಿರಲಿಲ್ಲವಂತೆ. ಅಲ್ಲಿದೆ,ಇಲ್ಲಿದೆ ಅಂತ ಕತೆ ಹೇಳೋನೆ. ಅವನಿನ್ನು ಎಲ್ಲೆಲ್ಲಿ ಸುತ್ತಿಸಿ ಟೋಪಿ ಹಾಕ್ತಿದ್ನೋ ,ಎಂತಾ ದುಸ್ಥಿತಿಯ ಮನೆ ತೋರುಸ್ತಿದ್ನೋ ಯಾವನಿಗೆ ಗೊತ್ತು ಅಂದುಕೊಳ್ತಾ ಗೋಲ್ಡನ್ ಪಾಮಿನ ಒಳಗಡಿಯಿಟ್ವಿ.

ಊಟವೆಂದ್ರೆ ಇಡ್ಲಿ ದೋಸೆ ಇಲ್ಲಾ ಬಿರಿಯಾನಿ !
ಸರಿ, ಬ್ಯಾಗಿಟ್ಟಾಯ್ತು. ಇನ್ನು ಹೊಟ್ಟೆಯ ಕತೆ ನೋಡ್ಕೋಳ್ಳೋಣ ಅಂತ ಅಲೆದ್ವಿ ಅಲೆದ್ವಿ. ಎಲ್ಲಿ ನೋಡಿದ್ರೂ ಬಿರಿಯಾನಿ ಕಾರ್ನರ್ರುಗಳೇ. ಒಂದು ಕಡೆ ರಸ್ತೆಬದಿ ಅಂಗಡಿ ಕಂಡರೂ ಅಲ್ಲಿ ಸಿಗ್ತಿದ್ದದು ಬರೀ ಇಡ್ಲಿ ದೋಸೆ ಮಾತ್ರವೇ. ಪೇಟೆಯ ಮಧ್ಯದಲ್ಲಿ ಲಾಡ್ಜುಗಳಿಗೆ ಅಲೆಯುತ್ತಿದ್ದಾಗ ಒಂದೆರಡು ಸಸ್ಯಾಹಾರಿ ಹೋಟೇಲುಗಳು ಕಂಡಿದ್ರೂ ನಾವಿದ್ದ ಏರಿಯಾದಲ್ಲಿ ಯಾವ್ದೂ ಕಾಣುತ್ತಿರಲಿಲ್ಲ. ಅಂತೂ ಅಲೆಯುತ್ತಿರುವಾಗ ಕೊಡಾಯಿ ಹೋಟೆಲ್ ಮತ್ತು ಅದರ ಪಕ್ಕದಲ್ಲಿ ಲಿಂಬ್ರಾ ಅಂತ ದೋಸೆ, ಪಲಾವಿನ ಚಿತ್ರವಿದ್ದ ಹೋಟೇಲೊಂದು ಖಂಡಿತು. ತಮಿಳುನಾಡಲ್ಲೇ ಹುಟ್ಟಿ ಬೆಳೆದಿದ್ರೂ, ತಂದೆ ಆಂಧ್ರದವನಾದ, ಹಿಂದಿ ಬರುತ್ತಿದ್ದವನೊಬ್ಬ ಇದ್ದ ಆ ಹೋಟೇಲಲ್ಲಿ ಫ್ರೈಡ್ ರೈಸ್, ವೆಜ್ ಬಿರಿಯಾನಿ, ದೋಸೆ ಸಿಕ್ದಾಗ ಕೊನೆಗೂ ಇಷ್ಟೆಲ್ಲಾ ಅಲೆದಿದ್ದು ಸಾರ್ಥಕ ಆಯ್ತು ಅಂದ್ಕೊಂಡ್ವಿ. ಮಾರನೆಯ ದಿನದ ತಿಂಡಿಯೂ ಅಲ್ಲಿಯೇ ಆಗಿತ್ತು. ತೀರಾ ಚೆನ್ನಾಗಿರದಿದ್ದರೂsomething is better than nothing ಎಂಬ ಭಾವ.

ಸುಲಿಗೆ continues..:
ಡ್ರೈವರು, ಲಾಂಗ್ ವೀಕೆಂಡಿನ ಟ್ರಾಫಿಕ್ಕು, ಇಕ್ಕಟ್ಟಾದ ರೋಡುಗಳು, ದಾರಿ ತಪ್ಪಿಸಿದ ಗೂಗಲ್ಲು, ಟ್ರಿಪ್ ಅಡ್ವೈಸರು, ಸ್ಥಳೀಯರು ಎಲ್ಲಾ ಸೇರಿ ಎರಡನೆಯ ದಿನದ ಅರ್ಧ ದಿನ ಹಾಳಾದ ಬಗ್ಗೆ ಆಗಲೇ ಬರೆದಿದ್ದೇನೆ. ಅದರ ಬಗ್ಗೆ ಮತ್ತೆ ಬರೆದು ನಿಮ್ಮ ಸಮಯವನ್ನೂ ಹಾಳು ಮಾಡೋ ಬದಲು ಮುಂದೆ ಹೋಗುತ್ತೇನೆ. ಪೆರುಮಾಳ್ ದಾಟಿ ಹಾಗೇ ಮುಂದೆ ಬರುತ್ತಿದ್ದಂತೆ ಮತ್ತೆ ಸೆಖೆ ಶುರುವಾಗಲಾರಂಭಿಸಿತ್ತು. ಹೊಟ್ಟೆ ಹಸೀತಿತ್ತು. ಮಧ್ಯ ಒಂದು  ವೀವ್ ಪಾಯಿಂಟಲ್ಲಿ ನಿಲ್ಲಿಸಿದೆವು. ದೂರದಿಂದ ನೋಡಿದರೆ ಅದೊಂದು ಡ್ಯಾಮಂತೆ ಕಂಡರೂ ಅದು ಡ್ಯಾಮಾಗಿರಲಿಲ್ಲ. ಯಾವುದೋ ಊರ ಕೆರೆಯಷ್ಟೆ. ಅದಕ್ಕೆ ಕಟ್ಟಿದ ವೀವ್ ಪಾಯಿಂಟು ಈಗಲೋ ಆಗಲೋ ಅನ್ನುವ ಸ್ಥಿತಿಯಲ್ಲಿದ್ದರೂ ತಮಿಳು ಟೂರಿಸಂ ಅತ್ತ ಗಮನಹರಿಸಿರಲಿಲ್ಲ. ಅಲ್ಲಿನ ಸುಲಿಗೆ ಯಾವ ಪರಿ ಎಂದರೆ ಸಾಧಾರಣ ಎಳನೀರಿಗೆ ೪೦ ರೂ ಅನ್ನುತ್ತಿದ್ದ ಅಲ್ಲಿದ್ದ ವ್ಯಾಪಾರಿ. ನೀರಿರೋದು ಕೊಡು ಅಂದ್ರೂ ನುಸಿರೋಗ ಬಂದಂತಹ ಸಣ್ಣದು ಕೊಡ್ತಿದ್ದ ಅಂತ ವರುಣನಿಗೆ ಮೊದಲೇ ಬೇಜಾರಾಗಿತ್ತು. ಅಲ್ಲೇ ಪಕ್ಕದಲ್ಲಿದ್ದವ ೩೦ರೂ ಮಾರುತ್ತಿದ್ದರೆ ಇವನದು ೪೦ ! ಇಲ್ಲಿಯವರೆಗೆ ಹೇಳಿದ್ದಷ್ಟೆಲ್ಲ ಕೇಳಿ ಕೊಟ್ಟು ಬಂದಿದ್ದ ಹುಡುಗರಿಗೆ ಪಿತ್ತ ನೆತ್ತಿಗೇರಿತ್ತು. ಆವನತ್ರ ಜಗಳ ಕಿತ್ತು ಎಳನೀರಿಗೆ ಮೂವತ್ತೇ ಕೊಟ್ಟು ಬಂದರು !

ವೈಗಾಯಿ ಡ್ಯಾಂ:
ಹಂಗೇ ಮುಂದೆ ಬಂದು ಥೇನಿ ಹೈವೇ ಹಿಡಿದ್ವಿ. ಅಲ್ಲಿ ಹಾದಿಬದಿಯಲ್ಲಿ ಸುಮಾರು ಡಾಬಾದಂತಹ ಹೋಟೇಲುಗಳಿದ್ದವು. ಅಲ್ಲೊಬ್ಬ ಆಂಧ್ರದವನ ಹೋಟೇಲ್ ಸಿಕ್ತು ! ಹೊರಗಿಟ್ಟಿದ್ದ  ಕೈತೊಳೆಯುವ ನೀರೂ ಬಿಸಿಲಿಗೆ ಕುದಿನೀರಾಗಿದ್ದಂತಹ ಪರಿಸ್ಥಿತಿಯಲ್ಲಿ ಹೊಟ್ಟೆತುಂಬಾ ಊಟ ಬಡಿಸಿದ ಆತನ ಹೊಟ್ಟೆ ತಣ್ಣಗಿರಲೆಂದು ಈಗಲೂ ಅಂದುಕೊಳ್ಳುತ್ತೇನೆ. ಆತನೇ ಮುಂದೆ ವೈಗಾಯಿ ಡ್ಯಾಂ ಅಂತ ಇದೆ. ಅದನ್ನು ನೋಡಿ ಹೋಗಿ ಅಂತ ಹೇಳಿದ್ದು.  ಹಾಗೇ ಮುಂದೆ ಹೋಗುತ್ತಿದ್ದಂತೆ ರಸ್ತೆಯಲ್ಲಿ ಎರಡು ಡ್ಯಾಂಗಳ ಬೋರ್ಡ್ ಸಿಗುತ್ತೆ. ಬಲಕ್ಕೆ ೧೦ ಕಿ.ಮೀ ಹೋದರೆ ಕೊತ್ತನೂರು ಡ್ಯಾಂ. ಎಡಕ್ಕೆ ೧೬ ಕಿ.ಮೀ ಹೋದರೆ ವೈಗಾಯಿ ಡ್ಯಾಂ. ಅಲ್ಲಿನ ಸ್ಥಳೀಯರನ್ನು ಕೇಳಿದಾಗಲೂ ಅವರು ವೈಗಾಯಿ ಡ್ಯಾಮೇ ಚೆನ್ನಾಗಿದೆ ಅಂದಿದ್ದರಿಂದ ಅತ್ತ ತಿರುಗಿದ್ವಿ. ಮಧ್ಯ ಸಿಕ್ಕ ಟಾಟಾ ಟೀ ಫ್ಯಾಕ್ಟರಿಯನ್ನು ನೋಡಿ ಒಮ್ಮೆ ಹೆಮ್ಮೆಯಾಯ್ತು . ಎಲ್ಲಿಯ ನನ್ನ ಕಂಪೆನಿ.ಇನ್ನೆಲ್ಲಿಯ ಟೀ ಫ್ಯಾಕ್ಟರಿ.ಆದರೂ, ಹೆಸರಲ್ಲೇನೋ ಇದೆ ಅಂತಾರಲ್ಲ.ಹಾಗೆ :-) ತಲಾ ಐದು ರೂ ಟಿಕೇಟ್ ಮತ್ತು ಕ್ಯಾಮೆರಾಕ್ಕೆ ೨೦ , ಪಾರ್ಕಿಂಗಿಗೆ ೨೦ ಅಂತ ಕೊಟ್ಟು ಒಳಸೇರಿದ್ವಿ. ಯಾವುದಕ್ಕೂ ಟಿಕೇಟ್ ಇಲ್ಲ !

ಡ್ಯಾಮೆಂದರೆ ಭರಪೂರ ನೀರಿರುವ ಡ್ಯಾಮಲ್ಲ. ಆದ್ರೂ ಸಂಜೆಯ ಸೂರ್ಯಾಸ್ತ ಸವಿಯೋಕೆ ಒಳ್ಳೆಯ ಜಾಗ. ನೀರ ಕೆಳಗಿನವರೆಗೂ ಇಳಿಯುವ ಹಾದಿಯಿರುವುದರಿಂದ ಅಲ್ಲೇ ಒಂದಿಷ್ಟು ಹರಟುತ್ತಾ, ನೀರಿಗೆ ಕಲ್ಲೆಸೆದು ಯಾರ ಕಲ್ಲು ಹೆಚ್ಚು ಬಾರಿ ಪುಟಿಯುತ್ತೆ ಅಂತ ಪಂದ್ಯ ಕಟ್ಟುತ್ತಾ, ಫೋಟೋ ತೆಗೆಯುತ್ತಾ ಸಂದ್ಯೆಯ ಸಮಯ ಕಳೆದವು. ಇಲ್ಲೊಂದಿಷ್ಟು ಪ್ಲೈನ್ ಟೈಗರ್ ಜಾತಿಯ ಚಿಟ್ಟೆಗಳು ಸಿಕ್ಕರೂ ಅವ್ಯಾವೂ ಪೋಸುಕೊಡೋ ಮೂಡಲ್ಲಿರಲಿಲ್ಲ. ಅಲ್ಲಿಂದ ಸೂರ್ಯ ಮುಳುಗೋ ಹೊತ್ತಲ್ಲಿ ಹೊರಟು ನಮ್ಮ ಕೊನೆಯ ದಿನದ ಪ್ಲಾನಾದ ಕುರಂಜಿನಿ ಹಳ್ಳಿಯಿಂದ ೧೬ ಕಿ.ಮೀ ದೂರವಿರುವ ಬೋದಿ ಅಥವಾ ಬೋದಿನಾಯಕ್ಕನೂರು ತಲುಪಿದೆವು.

ಬೋದಿಯಲ್ಲಿ ಬಂಪರ್ ಲಾಟರಿ:
ಬೋದಿಯಲಿ ಎರಡು ಮೂರು ಲಾಡ್ಜ್ ಕೇಳಿದ್ರೂ ಖಾಲಿಯಾಗಿತ್ತು. ಹಾಗೇ ಮುಂದೆ ಬರುತ್ತಿದ್ದಾಗ ಅಲ್ಲಿದ್ದ ಹೋಟೇಲ್ ಬಾಲಾಜಿ ಭವನವೆಂಬ ಸಸ್ಯಾಹಾರಿ ಹೋಟೇಲ್ ಎದುರು ಎಸ್.ಪಿ.ಎಸ್ ಲಾಡ್ಜ್ ಎಂಬ ಬೋರ್ಡ್ ಕಾಣಿಸ್ತು. ಅಲ್ಲಿನವನಿಗೂ ಸ್ವಲ್ಪ ಸ್ವಲ್ಪ ಹಿಂದಿ, ಇಂಗ್ಲೀಷ್ ಬರ್ತಿತ್ತು. ಎರಡು ಜನರ ಎರಡು ರೂಮಿದೆ. ರೂಮಿಗೆ ೩೦೦ ಅಂದ. ನಮಗೋ ಸ್ಗರ್ಗವೇ ಧರೆಗಿಳಿದು ಬಂದ ಭಾವ ! ಸರಿ, ರೂಂ ನೋಡೋಣ ಅಂತ ಹೋದರೆ ಅಲ್ಲಿ ಎರಡು ಬೆಡ್ಡಿನ ಮಧ್ಯ ಅರ್ಧ ಬೆಡ್ ಹಾಕಲಷ್ಟೇ ಜಾಗವಿದ್ದಿದ್ದು ! ಒಬ್ಬರು ಕೆಳಗೆ ಮಲಗಬಹುದು ಅಂದರೂ ಕಷ್ಟವೇ. ಸರಿ ,ಮೂರು ರೂಂ ತಗೊಳ್ಳೋಣ ಅಂದರೆ ಕೆಳಗೆ ಮಲಗುವ ಒಬ್ಬ ಯಾರು  ಅನ್ನುವ ಯೋಚನೆಯಲ್ಲಿದ್ದಾಗ ಸಿಂಗಲ್ ರೂಮೂ ಇದೆ , ಅದಕ್ಕೆ ಇನ್ನೂರು ಅಂದ ಅವ. ಕೊನೆಗೆ ನಾಲ್ಕೂ ರೂಂ ಸೇರಿ ೧೦೦೦ ಕ್ಕೆ ಬುಕ್ ಮಾಡಿದ್ವಿ. ಎಲ್ಲಿಯ ೪೦೦೦ ಕ್ಕೆ ಒಂದು ರೂಂ ಮತ್ತು ಎಲ್ಲಿಯ ೧೦೦೦ಕ್ಕೆ ನಾಲ್ಕು ರೂಂ ಶಿವಾ ? !! ಅಲ್ಲೊಂದಿಷ್ಟು ಹೊತ್ತು ರೆಸ್ಟ್ ಮಾಡಿ ೭:೩೦ ಕ್ಕೆ ಹೊರಗೆ ಸುತ್ತಾಡೋಕೆ, ಊಟಕ್ಕೆ ಹೊರಡೋಣ ಅಂತಾಯ್ತು. ಹಾಗೇ ಹರಟುತ್ತಾ ಮಲಗಿದ್ವಿ.

ಮುಂದಿನ ಭಾಗದಲ್ಲಿ: ಬೋದಿಯಲ್ಲಿ ಜ್ಞಾನೋದಯ ಮತ್ತು ಟಾಪ್ ಸ್ಟೇಷನ್

No comments:

Post a Comment