Saturday, May 13, 2017

ಯಲಹಂಕ ಕರಗ

Yelahanka Karaga
ಬೆಂಗಳೂರು ಕರಗ ನೋಡಬೇಕಂತ ತುಂಬಾ ವರ್ಷಗಳಿಂದ ಇದ್ದ ಆಸೆ ಈ ವರ್ಷವೂ ನೆರವೇರಿರದಿದ್ದ ಕಾರಣ ಯಲಹಂಕದವರಾದ ರಾಜ್ ಕುಮಾರ್ ಯಲಹಂಕ ಕರಗದ ಬಗ್ಗೆ ಹೇಳಿದಾಗ ಕಿಮಿ ನಿಮಿರಿತ್ತು. ಯಲಹಂಕದಲ್ಲೂ ಕರಗ ನಡೆಯುತ್ತಾ ಅಂತ ಕೇಳಿ, ನಾನೂ ನೋಡಬೇಕಂತಿದ್ದೇನೆ ಎಂದೆ. ಸರಿ, ನಮ್ಮನೆಗೇ ಬನ್ನಿ ಅಂತ ಕರದ್ರು ರಾಜ್. ಸರಿ ಅಂತ ಕರಗ ನೋಡೋಕೆ ಹೋಗೋ ಪ್ಲಾನ್ ರೆಡಿಯಾಯ್ತು. ಕರಗ ಶುರುವಾಗೋದು ರಾತ್ರೆ ೧೨:೩೦ ಕ್ಕೆ. ಸಂಜೆಯೇ ಹೋಗಿ ಯಲಹಂಕದಲ್ಲಿರೋ ಕೆಂಪೇಗೌಡರ ಕಾಲದ ವೇಣುಗೋಪಾಲ ಸ್ವಾಮಿ ದೇವಸ್ಥಾನ ಮುಂತಾದ ದೇವಸ್ಥಾನಗಳನ್ನು, ಕರಗಕ್ಕೆ ಬರೋ ಉಳಿದ ಉತ್ಸವ ಮೂರ್ತಿಗಳ ಅಲಂಕಾರಗಳನ್ನು ನೋಡೋದಂತ ತೀರ್ಮಾನವಾಗಿತ್ತು.  ಆದರೆ ಅವತ್ತೇ ಆಫೀಸಲ್ಲಿ ಏನೋ ಅವಾಂತರವಾಗಿ ಆಫೀಸಿಂದ ಹೊರಡೋದೇ ಏಳಾಗಿತ್ತು. ಆಫೀಸತ್ರ ಮಳೆಯಿಲ್ಲ ಅಂತ ರಾಜ್. ನಮ್ಮನೆ ಹತ್ರ ಫುಲ್ ಮಳೆ ಗುರೂ ಅಂತ ನಾನು. ಅಂತೂ ರಾಜ್ ನಮ್ಮ ಏರಿಯಾಕ್ಕೆ ಬಂದು ಮಳೆಯಲ್ಲಿ ಸಿಕ್ಕಾಕಿಕೊಂಡು ನಾವು ಆ ಮಳೆಯಲ್ಲೇ ಅವರ ಮನೆಗೆ ಹೊರಡುವ ಹಾಗಾಯ್ತು. ಛತ್ರಿಯಿದ್ದರಿಂದ ನಿಧಾನವಾಗಿ ಹೋಗ್ತಾ ಮಳೆಯಲ್ಲಿ ಚೂರಾದ್ರೂ ಎಸ್ಕೇಪಾಗೋ ಪ್ರಯತ್ನ ನಡೆಸುತ್ತಾ ಕೆ.ಆರ್ ಪುರಂ ದಾಟೋದ್ರೊಳಗೆ ಮಳೆ ಕಮ್ಮಿ ಆಯ್ತು ಅಂತಾಯ್ತು. ಅಂತೂ ಇಂತು ರಾಜ್ ಮನೆ ಮುಟ್ಟಿದ್ವಿ. ಅಲ್ಲಿಂದ ಮುಂದೆ ಕಂಡು, ಕೇಳಿದ ಕರಗದ ಕತೆಗಳು,ಇತಿಹಾಸ ನಿಮ್ಮ ಮುಂದೆ.

ಕರಗವೆನ್ನೋ ಜನ ಜಾತ್ರೆ:
ನಾನು ಫೋಟೋದಲ್ಲಿ ನೋಡಿದ್ದಂತೆ, ಪೇಪರಿನಲ್ಲಿ ಓದಿದ್ದಂತೆ ಕರಗವೆಂದರೆ ಹೂವಿನ ಉದ್ದನೆಯ, ಟೋಪಿಯಂತದ್ದನ್ನು ಹೊತ್ತ ದೇಗುಲದ ಪ್ರಧಾನ ಅರ್ಚಕರು ಅದನ್ನು ಹೊತ್ತು ಊರಿನ ಪ್ರಮುಖ ಬೀದಿಗಳಲ್ಲೆಲ್ಲಾ ಸಂಚರಿಸುತ್ತಾರೆ. ರಾತ್ರೆ ಶುರುವಾಗೋ ಆಚರಣೆ ಬೆಳಗಿನ ಸೂರ್ಯೋದಯದವರೆಗೂ ನಡೆಯುತ್ತೆ ಅಂತ. ಆದರೆ ಕರಗಕ್ಕೆ ಬಂದಾಗ ಕಂಡ ದೃಶ್ಯಾವಳಿಗಳೇ ಬೇರೆ .ಆ ದಿನ ಊರ ತುಂಬೆಲ್ಲಾ ಲೈಟ ಸರಗಳು. ಮೂರು ದಿನ ನಡೆಯೋ ಆ ಸಂಭ್ರಮದಲ್ಲಿ ಹಿಂದಿನ ದಿನ ಹಸಿ ಅರಗ ಅಂತ ನಡೆಯುತ್ತಂತೆ. ಕೊನೆಯ ದಿನ ನಡೆಯೋದು ಮುಖ್ಯ ಕರಗ. ಅವತ್ತು ಸಂಜೆಯಿಂದಲೇ ಊರಲ್ಲೊಂದು ಕಡೆ ರಸಮಂಜರಿ, ನೃತ್ಯದ ಕಾರ್ಯಕ್ರಮ ನಡೀತಿದ್ದರೆ ಇನ್ನೊಂದು ಕಡೆ ಪ್ರಸಾದ ವಿನಿಯೋಗ ನಡೆಯುತ್ತಿತ್ತು. ಪೈಪೋಟಿಗೆ ಬಿದ್ದವರಂತೆ ಒಂದೊಂದು ಬೀದಿಯವರದ್ದೂ ಭರ್ಜರಿ ಡೆಕೊರೇಷನ್ನು. ರಜಾ ಸಮಯವಾದ್ದರಿಂದ ಎಲ್ಲಾ ಬೀದಿಗಳಲ್ಲೂ  ಒಟ್ಟು ಸೇರಿದ ಮಕ್ಕಳಿಂದ ಕ್ರಿಕೆಟ್ಟು, ಲಗೋರಿ, ಶಟಲ್ಲುಗು ರಾತ್ರಿ ಹತ್ತಾದರೂ ನಡೆಯುತ್ತಿತ್ತು. ಅಲ್ಲಲ್ಲಿ ಪಟಾಕಿ ಸದ್ದು. ರೇಷ್ಮೇ ಸೀರೆ, ಜರಿ ಚೂಡೀದಾರ, ಲಂಗ ಧಾವಣಿ ಧರಿಸಿದ ಹೆಣ್ಣುಮಕ್ಕಳು, ಹೊಸಬಟ್ಟೆಯುಟ್ಟ ಮಕ್ಕಳು ಎಲ್ಲೆಲ್ಲೂ ಕಣ್ಣಿಗೆ ಬೀಳುತ್ತಿದ್ದರು. ಮುಖ್ಯ ಬೀದಿಗಳಲ್ಲೆಲ್ಲಾ ಮಂಡಕ್ಕಿ,ಸಿಹಿ, ಬಲೂನು, ಆಟಿಕೆ ಮಾರೋರ ಅಂಗಡಿಗಳೇ ಅಂಗಡಿಗಳು. ಸಾಮಾನ್ಯ ಅಂಗಡಿಗಳಾದ ಬಟ್ಟೆಯಂಗಡಿ, ಕುಂಕುಮದಂಗಡಿಯವರೂ ರಾತ್ರಿಯಿಡೀ ಬಾಗಿಲು ತೆಗೆದು ಸಂಭ್ರಮಿಸುತ್ತಿದ್ದುದು ಒಂಥರಾ ಆಶ್ಚರ್ಯವೆನಿಸಿದ್ದು ಸುಳ್ಳಲ್ಲ. ಬಾಗಿಲು ಹಾಕಿದ ಒಂದು ಶಿವಾಲಯವನ್ನು ನೋಡಿ ಅದರ ಪಕ್ಕದಲ್ಲೇ "ಚೌಕ" ಚಿತ್ರದ ಅಲ್ಲಾಡಸ್ ಅಲ್ಲಾಡ್ಸ್ ಅಲ್ಲಾಡ್ಸು ಹಾಡಿಗೆ ನೃತ್ಯ ಮಾಡುತ್ತಿದ್ದವರ ನೃತ್ಯ, ಹಾಡಿಗೆ ತಲೆಯಾಡಿಸುತ್ತಾ ಮುಂದೆ ಬಂದೆವು.

ಮಹೇಶ್ವರಮ್ಮ ದೇವಾಲಯ:
ಯಲಹಂಕ, ಅದರಲ್ಲೂ ಯಲಹಂಕ ಓಲ್ಡ್ ಟೌನ್ ಅನ್ನೋದು ಒಂಥರಾ ದೇಗುಲಗಳ ನಗರಿಯಂತೆ, ಪೇಟೆಯೊಳಗಿನ ಹಳ್ಳಿಯಂತೆ ಕಾಣುತ್ತದೆ. ಯಾವ ಬೀದಿಗೆ ಹೋದರೂ ಅದು ಕೊನೆಯಾಗೋದ್ರೊಳಗೊಂದು ದೇವಸ್ಥಾನ ಸಿಕ್ಕುವಷ್ಟು ದೇಗುಲಗಳಿವೆ ಅಲ್ಲಿ. ಅದರಲ್ಲಿ ಮೊದಲು ನೋಡಿದ್ದು ಮಹೇಶ್ವರಮ್ಮ ದೇವಸ್ಥಾನ. ಯಲಹಂಕದ ಪ್ರಸಿದ್ಧ ಕರಗ ಶುರುವಾಗೋದು ಇಲ್ಲಿಂದಲೇ. ಇಲ್ಲಿರುವ ವಹ್ನಿಕುಲ ಎನ್ನುವ ಜನಾಂಗದವರೇ ಕರಗವನ್ನು ನಡೆಸೋದು. ಅವರಿಗೆ ಸಾಥಿಯಾಗಿ ಬರುವ ಕ್ಷತ್ರಿಯ(ತಿಗಳರು) ಖಡ್ಗಗಳನ್ನು ಹಿಡಿದು ಕರಗ ಸಾಗುವ ಅರ್ಚಕರ ಮುಂದೆ ದಾರಿಯಾಗುತ್ತಾರೆ. ಕರಗ ದೇಗುಲದಿಂದ ಹೊರಬೀಳೋದು ೧೨:೩೦ ಮೇಲೆ ಆದರೂ ಇವರು ಸಂಜೆ ಒಂಭತ್ತೂವರೆ, ಹತ್ತರ ಹೊತ್ತಿಗೇ ಗೋವಿಂದ, ಗೋವಿಂದ ಅನ್ನುತ್ತಾ ಕೈಯಲ್ಲಿ ಖಡ್ಗ ಹಿಡಿದು, ವೆಂಕಟರಮಣನ ನಾಮ ಬಡಿದು ಮಹೇಶ್ವರಮ್ಮನ ದೇಗುಲವನ್ನು ಪ್ರವೇಶಿಸುತ್ತಾರೆ. ಈ ದೇಗುಲವನ್ನು ನೋಡಿದ ನಂತರ ಮುಂದಿನ ದೇಗುಲಗಳನ್ನು ನೋಡೋಕೆ ಹೊರಟೆವು.

ಯಲಹಂಕದ ಉತ್ಸವ/ಕರಗ ಬೀದಿ:
ಯಲಹಂಕದ ಪಾಂಡುರಂಗ ವಿಠಲ ದೇವಸ್ಥಾನದಿಂದ ಶುರುವಾಗಿ, ಶನಿ ದೇವಸ್ಥಾನದ ಪಕ್ಕದಿಂದ ಸಾಗಿ ಮತ್ತೊಂದು ದೇಗುಲದೆದುರು ಸಾಗೋ ಡಾಂಬರ್ ರಸ್ತೆಯಲ್ಲಿಯೇ ಈ ಕರಗದ ದಿನ ಬರುವ ಸುತ್ತಲಿನ ಎಲ್ಲಾ ದೇವಸ್ಥಾನಗಳ ಉತ್ಸವ ಮೂರ್ತಿಗಳನ್ನು ತಂದಿರುತ್ತಾರೆ. ಇಲ್ಲಿ ಉತ್ಸವ ಮೂರ್ತಿಗಳನ್ನು ಕೂರಿಸೋ ಪಲ್ಲಕ್ಕಿಗಳ ಡೆಕೊರೇಶನ್ನುಗಳು ಒಂದಕ್ಕಿಂತ ಒಂದು ಚೆನ್ನಾಗಿರುತ್ತದೆ. ಅಯ್ಯಪ್ಪ ದೇವಸ್ಥಾನ, ಶ್ರೀ ಸತ್ಯನಾರಾಯಣ ದೇವಸ್ಥಾನ, ಪ್ಲೇಗಮ್ಮ ದೇವತೆ, ಹನುಮಂತ ದೇವಸ್ಥಾನ, ಶ್ರೀ ವೇಣುಗೋಪಾಲ ಸ್ವಾಮಿ ಹೀಗೆ ಹಲವಾರು ದೇವಸ್ಥಾನಗಳ ಪಲ್ಲಕ್ಕಿಗಳು ರಥಬೀದಿಯಲ್ಲಿ ತಯಾರಾಗಿ, ಇನ್ನೂ ಚೆಂದಗೊಳ್ಳುತ್ತಾ ನಿಂತಿದ್ದವು. ನಾವು ಮನೆಯಿಂದ ಊಟ ಮಾಡಿಕೊಂಡು, ಮಹೇಶ್ವರಮ್ಮನ ದೇಗುಲ ದರ್ಶನ ಮುಗಿಸಿ ಬರೋ ಹೊತ್ತಿಗೆ ರಾತ್ರಿ ಹತ್ತೂಕಾಲಾಗುತ್ತಾ ಬಂದಿತ್ತು. ಮುಖ್ಯ ದೇಗುಲಗಳಿಂದ ಮಹೇಶ್ವರಮ್ಮನ ಸನ್ನಿಧಿಗೆ ತಂದು ಅಲ್ಲಿ ಆರತಿ ಮಾಡಿ ನಂತರ ರಥಬೀದಿಯ ಪಲ್ಲಕ್ಕಿಗಳಿಗೆ ತುಂಬಿಸೋ ಸಂಪ್ರದಾಯವೂ ಇರೋದರಿಂದ ಕೆಲವು ಉತ್ಸವ ಮೂರ್ತಿಗಳನ್ನು ಮಹೇಶ್ವರಮ್ಮನ ಸನ್ನಿಧಿಯಲ್ಲೇ ನೋಡಾಗಿತ್ತು. ಈ ಉತ್ಸವದ ಸಮಯದಲ್ಲಿ ಮಹೇಶ್ವರಮ್ಮನ ಸನ್ನಿಧಿಗೆ ತಿಗಳರನ್ನು ಬಿಟ್ರೆ ಬೇರ್ಯಾರನ್ನೂ ಬಿಡೋಲ್ಲವೆಂದಿದ್ದರಿಂದ, ದೇವಸ್ಥಾನದಲಿ ವಿಪರೀತ ರಶ್ಶೂ ಇದ್ದರಿಂದ ಅಲ್ಲೇ ಹೊರಗಿನಿಂದ ನೋಡಿ ವಾಪಾಸಾಗಿದ್ವಿ. ರಥಬೀದಿಗೆ ಬಂದಾಗ ಅಲ್ಲಿದ್ದ ಪಲ್ಲಕ್ಕಿಗಳಲ್ಲಿ ಕೆಲವು ಪಲ್ಲಕ್ಕಿಗಳಲ್ಲಿ ದೇವರುಗಳನ್ನು ಕೂರಿಸಾಗಿದ್ದರೆ ಇನ್ನು ಕೆಲವು ದೇವರ ಆಗಮನದ ನಿರೀಕ್ಷೆಯಲ್ಲಿದ್ದೆವು.

ಯಲಹಂಕದ ದೇಗುಲಗಳು:
ರಥಬೀದಿಯಿಂದ ಮುಂದೆ ಬಂದ ನಮಗೆ ಸಿಕ್ಕಿದ್ದು ಪಾಂಡುರಂಗ, ರುಕ್ಮಿಣಿಯರು ಇದ್ದ ದೇಗುಲ. ಅದಕ್ಕೊಂದು ನಮಸ್ಕಾರ ಹಾಕಿ ಪಕ್ಕದಲ್ಲಿದ್ದ ಆಂಜನೇಯ ದೇವಸ್ಥಾನದ ಪಕ್ಕ ಮುಂದೆ ಬಂದೆವು. ಕೋಟೆ ಆಂಜನೇಯ ಅಥವಾ ರಥಬೀದಿ ಆಂಜನೇಯ ಅಂತ ಕರೆಯೋ ಆ ಆಂಜನೇಯನ ಗುಡಿ ಸಣ್ಣದಾಗಿದ್ದರೂ ಅಲ್ಲಿ ನೀಡೋ ಪ್ರಸಾದ ಸಖತ್ ರುಚಿಯಾಗಿರುತ್ತಂತೆ. ಅದಕ್ಕಾಗಿ ಸಖತ್ ಕ್ಯೂ ಇರುತ್ತೆ ಅಂತ ಸ್ಥಳೀಯ ನಿವಾಸಿ ಚೈತ್ರ ರಾಜ್ ಕುಮಾರ್ ಹೇಳುತ್ತಿದ್ದರು. ಬಾಗಿಲು ಹಾಕಿದ್ದ ಆ ದೇಗುಲದ ಪಕ್ಕದಿಂದ ವೇಣುಗೋಪಾಲ ಸ್ವಾಮಿ ದೇಗುಲಕ್ಕೆ ಬಂದೆವು. ಅದು ಯಲಹಂಕದ ಅತೀ ಪುರಾತನ ದೇಗುಲ. ಇಲ್ಲಿನ ಸಂಕೀರ್ಣದ ಮಧ್ಯದಲ್ಲಿ ವೈಷ್ಣವರ ವೇಣುಗೋಪಾಲ ಸ್ವಾಮಿ ದೇಗುಲವಿದ್ದರೆ, ಪಕ್ಕದಲ್ಲೇ ವಿಶ್ವನಾಥನ ಗುಡಿಯಿದೆ.  ಈ ವಿಶ್ವನಾಥನ ಗುಡಿಯೂ ಪುರಾತನವಾಗಿದ್ದು ೧೦-೦೩-೧೯೮೯ರಲ್ಲಿ ಜೀರ್ಣೋದ್ದಾರಗೊಂಡಿತು ಎಂಬುದನ್ನು ಇಲ್ಲಿರೋ ಫಲಕವೊಂದು ತಿಳಿಸುತ್ತದೆ. ಇಲ್ಲಿರುವ ಚಪ್ಪೆರಾಯ, ವಿಷ್ಣುವಿನ ಮತ್ಯಾವತಾರ ಮುಂತಾದ ಕೆತ್ತನೆಗಳನ್ನು ಹೊಂದಿರೋ ಕಂಬ, ಜಯ, ವಿಜಯರಿರಬಹುದೇನೋ ಎನ್ನಿಸೋ ದ್ವಾರಪಾಲಕರು ಮುಂತಾದ ಸಂರಕ್ಷಿಸಲೇ ಬೇಕಾದ ಸ್ಮಾರಕಗಳಿದ್ದರೂ ಈ ದೇಗುಲಕ್ಕೆ ಸಂರಕ್ಷಿತ ಸ್ಮಾರಕದ ಸ್ಥಾನಮಾನ ಸಿಕ್ಕಿಲ್ಲದಿರೋದು ಆಶ್ಚರ್ಯಕರ. ಅಲ್ಲಿಂದ ವಾಪಾಸ್ ಬರುತ್ತಾ ಬೆಸ್ತರ ಬೀದಿಯಲಿರೋ ಸತ್ಯನಾರಾಯಣ ಸ್ವಾಮಿ ದೇವಸ್ಥಾನ, ಮುಂದೆ ಬಂದಾಗ ಸಿಗೋ ಗಣೇಶ ದೇವಸ್ಥಾನಗಳನ್ನು ನೋಡಿದೆವು. ಅಲ್ಲಿಂದ ಹಾಗೇ ಮುಂದೆ ಬಂದು ಪಾಂಡುರಂಗನ ಗುಡಿಯ ಪಕ್ಕದಲ್ಲಿರುವ ಶನೈಶ್ಚರನ ಗುಡಿಯ ಬಳಿ ಬರುವಾಗ ಹಿಂದಿನಿಂದ ಆರತಿಯ ಪಲ್ಲಕ್ಕಿಯೊಂದು ಬರೋದು ಖಂಡಿತು. ಈ ಆಚರಣೆ ಸಾಮಾನ್ಯ ಎರಡನೇ ದಿನ ಇರುತ್ತೆ ಅಂತ ರಾಜ್ ಕುಮಾರ್ ಹೇಳ್ತಿದ್ರು. ಹಾಗೇ ಮುಂದೆ ಬಂದ ಆರತಿಯವರು ತಲೆಯ ಮೇಲೆ ಹಿಡಿದಿದ್ದ ವಿಭೂತಿಯಂತಹ ಗಂಟಿನೊಂದಿಗೆ ಪಲ್ಲಕ್ಕಿಯೊಂದಕ್ಕೆ ಮೂರು ಸಲ ಪ್ರದಕ್ಷಿಣೆ ಹಾಕಿ ಶನಿದೇಗುಲ ಹೊಕ್ಕರು.  ಇಲ್ಲಿ ಆರತಿಯೇ ಬರಲಿ, ಪಲ್ಲಕ್ಕಿಯ ಬಳಿ ಉತ್ಸವ ಮೂರ್ತಿಯೇ ಬರಲಿ, ಅದಕ್ಕೆ ತಮಟೆಯ ಮುಮ್ಮೇಳವಿಲ್ಲದೇ ಇಲ್ಲ. ಕರಗ ಹೊರಬರುವಾಗ, ಉತ್ಸವ ಮೂರ್ತಿ ಹೊರಬರುವಾಗ ಅದಕ್ಕೆ ಕಹಳೆಗಳ ಸಾತೂ ಇರುತ್ತೆ. ಹಾಗೆಯೇ ಮುಂದೆ ಬಂದಾಗ ಸಿಕ್ಕಿದ್ದು ಪ್ಲೇಗಮ್ಮ ದೇಗುಲ. ಹಿಂದೆಲ್ಲಾ ಪ್ಲೇಗು ಬಂದರೆ ಊರಿಗೆ ಊರೇ ನಾಶವಾಗಿ ಹೋಗುತ್ತಿತ್ತಂತೆ. ಅಂತಹ ಭಯಂಕರ ಸಮಯದಲ್ಲಿ ಊರನ್ನು ರಕ್ಷಿಸಿದ ದೇವಿಗೆ ಕಟ್ಟಿಸಿದ ದೇಗುಲವಿರಬೇಕಿದು. ಇಲ್ಲಿ ಪ್ಲೇಗಮ್ಮನಲ್ಲದೇ ಮುನೇಶ್ವರ ಮುಂತಾದ ದೇವತೆಗಳ ವಿಗ್ರಹಗಳೂ ಇದೆ. ಅಲ್ಲಿ ಉತ್ಸವ ಮೂರ್ತಿ ಹೊರಡೋಕೆ ಸಿದ್ದವಾಗಿತ್ತು ನಾವು ಹೋಗೋ ಹೊತ್ತಿಗೆ. ಆ ತಮಟೆ, ಕಹಳೆಗಳ ಸಂಭ್ರಮ ನೋಡುತ್ತಾ ಮನೆ ಹಾದಿ ಹಿಡಿದೆವು.

ಕರಗದ ಸುತ್ತಮುತ್ತಲ ಕತೆಗಳು:
ಪೇಟೆಬೀದಿಗಳನ್ನೆಲ್ಲಾ ಸುತ್ತಿ, ದೇಗುಲ ದರ್ಶನ ಮುಗಿಸಿ ಮನೆಗೆ ಬರೋ ಹೊತ್ತಿಗೆ ಹನ್ನೊಂದೂವರೆಯಾಗಿತ್ತು. ಇನ್ನೊಂದು ಘಂಟೆಯ ಕಾಲಕ್ಕೆ ಮನೆಗೆ ಬರೋ ಬದಲು ಅಲ್ಲೇ ಇರಬಹುದಿತ್ತೇನೋ. ಆದರೆ ಇರೋದಾದ್ರೂ ಎಲ್ಲಿ ? ಪೇಟೆಯಲ್ಲೆಲ್ಲಾ ಎಲ್ಲಿ ನಿಂತರೂ ಹಿಂದೋ, ಮುಂದೋ ತಳ್ಳೋ ಜನ. ತಿರು ತಿರುಗಿ ನೋಯುತ್ತಿದ್ದ ಕಾಲುಗಳು ಬೇರೆ. ಮನೆಗೆ ಬಂದು ಒಂದಿಷ್ಟು ನೀರು ಕುಡಿದು ಸುಧಾರಿಸಿಕೊಳ್ಳೋಣ ಅಂತ ಕೂತಾಗ ಚೈತ್ರ ರಾಜ್ಕುಮಾರ್ (ರಾಜಕುಮಾರರ ಶ್ರೀಮತಿ) ಕರಗದ ಕತೆ ಹೇಳೋಕೆ ಶುರು ಮಾಡಿದ್ರು. ಮುಂಚೆಯೆಲ್ಲಾ ಬೆಂಗಳೂರಿನ ಕರಗ ಮತ್ತು ಇಲ್ಲಿನ ಕರಗಗಳು ಸರಿ ಸುಮಾರು ಒಂದೇ ಸಮಯಕ್ಕೆ ನಡೆಯುತ್ತಿದ್ದವಂತೆ. ಅಲ್ಲಿ ಕರಗ ನಡೆಸೋರು ಇಲ್ಲಿ ಬಂದು, ಇಲ್ಲಿನವರು ಅಲ್ಲಿ ಹೋಗಿ ಮಾಡುತ್ತಿದ್ದರಂತೆ. ಕಾಲಕ್ರಮೇಣ ಕೆಲ ಮನಸ್ತಾಪಗಳಿಂದ ಅಲ್ಲಿನವರೇ ಬೇರೆ, ಇಲ್ಲಿನವರೇ ಬೇರೆಯದಾಗಿ ಕರಗ ನಡೆಸೋಕೆ ಶುರು ಮಾಡಿದರಂತೆ. ಈಗಿನ ಕರಗ ನಡೆಸೋರಿಗಿಂತ ಮುಂಚೆ ಕರಗ ಕೃಷ್ಣಪ್ಪ ಅಂತಲೇ ಪ್ರಸಿದ್ದರಾದೋರೊಬ್ಬರು ಕರಗ ಹೊರುತ್ತಿದ್ದರಂತೆ. ಅವರಿಂದ ಈಗ ಕರಗ ನಡೆಸುತ್ತಿರುವವರ ಕುಟುಂಬಕ್ಕೆ ಬಂದಿದೆಯಂತೆ. ಈ ಕುಟುಂಬದವರು ಜೋಡಿ ಕುಟುಂಬದಲ್ಲೇ ಇರುವುದರಿಂದ ಒಂದೊಂದು ವರ್ಷ ಒಬ್ಬರೆಂದು ಅಣ್ಣತಮ್ಮಂದಿರು ಹೊರುತ್ತಿದ್ದಾರಂತೆ. ಅದರಲ್ಲೂ ಕರಗ ಹೊರುವ ವ್ಯಕ್ತಿಗೆ ಎಂಟತ್ತು ದಿನ ಮುತ್ತೈದೆಗೆ ಮಾಡುವ ಎಲ್ಲಾ ಶಾಸ್ತ್ರಗಳನ್ನೂ ಮಾಡಿ ಅವರ ಪತ್ನಿಯನ್ನು ಆ ಎಂಟತ್ತು ದಿನ ವಿಧವೆಯಂತೆ ಇಟ್ಟಿರುತ್ತಾರಂತೆ.ಸೂರ್ಯನ ಬೆಳಕೂ ಸೋಕದಂತೆ ಅವರನ್ನು ಇಟ್ಟಿರೋ ಆಚರಣೆಗಳ ಬಗ್ಗೆ ಬರೆದರೆ ವಿಚಿತ್ರವೆನಿಸಬಹುದೆಂದು ಅದರ ಬಗ್ಗೆ ಬರೆಯದೇ ಮುಂದುವರೆಯುತ್ತಿದ್ದೇನೆ. ಅದೇ ರೀತಿ ಕತ್ತಿ ಹಿಡಿದು ಬರುವ ತಿಗಳಾರಿ ಯುವಕ, ಮುದುಕರ ಆಯ್ಕೆಗೂ ಹಲವು ವಿಧಾನಗಳಿವೆಯಂತೆ. ಮಕ್ಕಳಿಂದ ಐವತ್ತೈದು ವರ್ಷದವರೆಗೂ ಹಿಡಿಯಬಹುದಾದ ವ್ಯಕ್ತಿಗಳ ಆಯ್ಕೆಗಾಗಿ ಅವರ ಬಾಯಿಗೆ ಸಲಾಖೆ ಚುಚ್ಚಿ, ಕೈಗೆ ಕರ್ಪೂರವಿಟ್ಟು ಪರೀಕ್ಷೆ ಮಾಡಲಾಗುತ್ತದೆಯಂತೆ. ಆ ಪರೀಕ್ಷೆಯಲ್ಲಿ ಆತ ಉತ್ತೀರ್ಣನಾದರೆ ಮಾತ್ರ ಆತನಿಗೆ ಕತ್ತಿ ಹಿಡಿಯೋ ಯೋಗ್ಯತೆ. ಆತನ ಮರಣದ ತನಕ ಆತ ಪ್ರತೀ ವರ್ಷವೂ ಕರಗಕ್ಕೆ ಕತ್ತಿ ಹಿಡಿಯಲೇ ಬೇಕು, ಮಧ್ಯದಲ್ಲಿ ಸ್ವಂತ ತಂದೆ ತಾಯಿ ಸತ್ತರೂ ಆತ ಸಂಸ್ಕಾರ ಮಾಡುವಂತಿಲ್ಲ, ಆತನ ಬದಲು ಬೇರೆಯವರೇ ಮಾಡಬೇಕು, ಆತ ಸಂಪ್ರದಾಯ ಬಿಡಬೇಕೆಂದರೆ ಮನೆಯಲ್ಲಿನ ಬೇರೊಬ್ಬ ಪುರುಷನಿಗೆ ಅದನ್ನು ವಹಿಸಬೇಕು ಅಂತೆಲ್ಲಾ ಸುಮಾರಷ್ಟು ನಿಯಮಗಳಿವೆ. ಇಷ್ಟೆಲ್ಲಾ ನಿಯಮಗಳಿದ್ದರೂ ಇಲ್ಲಿನವರಿಗೆ ಅದನ್ನೆಲ್ಲಾ ಪಾಲಿಸೋದ್ರಲ್ಲಿ ವಿಶೇಷ ಆಸ್ತೆ.ಹಾಗಾಗಿ ಏಳೆಂಟು ವರ್ಷದವರಿಂದ ಹಣ್ಣಣ್ಣು ಮುದುಕರವರೆಗೆ ಸುಮಾರಷ್ಟು ಖಡ್ಗಧಾರಿಗಳು ನಮಗೆ ಸಿಕ್ಕಿದ್ದರು. "ಓ ಧೀ, ಧೀ, ಧೀ, ಧಿಕ್ ತೆ, ಧಿಕ್ ತೆ,ಧಿಕ್ ತೆ.." ಅಂತ ಖಡ್ಗದಿಂದ ಮೈಮೇಲೆ ಹೊಡೆದುಕೊಳ್ಳೋ ಚಿಕ್ಕ ಮಕ್ಕಳನ್ನು ಕಂಡಾಗ ಮೈಜುಮ್ಮೆನ್ನುತ್ತೆ. ಅವರ ಮೈಮೇಲಿನ ಹೂವ ಹಾರಗಳು ತುಂಡಾಗಿ ಬಿದ್ದರೂ ಅವರಿಗೇನೂ ಆಗಿರುವುದಿಲ್ಲ ! ಅವರಿಗೆಂದೇ ೨೦-೨೫ ದಿನ ಪಾಲಿಸಬೇಕಾದ ನಿಯಮಗಳನ್ನು ಪಾಲಿಸಿದರೆ ಏನೂ ಆಗೋದಿಲ್ಲ. ಇಲ್ಲವೆಂದರೆ ಮೈಮೇಲೆ ಕತ್ತಿಯ ಕಚ್ಚು ಬಿದ್ದು ಆಸ್ಪತ್ರೆಗೆ ಸೇರಿಸಿದ ಉದಾಹರಣೆಗಳೂ ಇದೆ ಅಂತ ಚೈತ್ರ ಹೇಳಿದ್ದನ್ನು ಕೇಳುತ್ತಾ ಈ ಖಡ್ಗಧಾರಿಗಳನ್ನು ನೋಡುತ್ತಿದ್ದರೆ ಒಮ್ಮೊಮ್ಮೆ ಭಯ, ರೋಮಾಂಚನ ಎರಡೂ ಆಗುತ್ತೆ. ಜನರನ್ನೆಲ್ಲಾ ದೂರ ಸರಿಸಿ ಇವರು ಎಚ್ಚರಿಕೆ ವಹಿಸಿದರೂ ಸುತ್ತಲಿದ್ದ ನಮಗೆ ಹೆದರಿಕೆ, ಎಲ್ಲಾದ್ರೂ ಖಡ್ಗ ಕೈತಪ್ಪಿ ಬಂದರೆ ಅಂತ !

ಅಂತೂ ಕರಗದ ದರ್ಶನವಾದಾಗ:
ಹನ್ನೆರಡೂವರೆಗೆ ಹೊರಬರಬೇಕಾದ ಕರಗ ಹೊರಬಂದು ರಥಬೀದಿಗೆ ಬರೋ ಹೊತ್ತಿಗೆ ೧:೫೦ ಆಗ್ತಾ ಬಂದಿತ್ತು.ಅದರ ಫೋಟೋ ತೆಗೆಯಬೇಕು, ವಿಡಿಯೋ ಮಾಡಬೇಕು ಅಂತ ಅಂದ್ಕೊಳ್ಳೋದೆಲ್ಲ್ ಅಂದುಕೊಳ್ಳುವಿಕೆ ಅಷ್ಟೆ. ಬರ್ತಿದ್ದ ಹಾಗೇ ಮೇಲಿನ ಕಟ್ಟಡಗಳ ಮೇಲಿದ್ದೋರು ಪುಷ್ಪವೃಷ್ಠಿ ಶುರು ಮಾಡ್ತಾರೆ. ಎಷ್ಟೇ ಪೋಲೀಸರಿದ್ರೂ , ಮೂಲೆಯಲ್ಲಿದ್ದವರನ್ನೂ ಜನ ಇನ್ನಷ್ಟು ಮೂಲೆಗೆ ತಳ್ತಾರೆ. ಬೆಂಗಳೂರು ಕರಗದಲ್ಲಿ ಕರಗಧಾರಿಯ ಸುತ್ತ ಫೋಟೋ ತೆಗೆಯೋರೇ ತುಂಬಿದ್ರೂ ಇಲ್ಲೊಂದಿಷ್ಟು ಜನ ವಿಡಿಯೋ ತೆಗಿಬೇಡಿ ಅಂತ ಕೂಗ್ತಿದ್ರು. ಬೆಳಗ್ಗೆ ನಾವಿದ್ದ ಬೀದಿಗೆ ಬಂದಾಗ್ಲೂ ಅದೇ ತರವಾಯ್ತು. ಹಾಗಾಗಿ ಕಣ್ತುಂಬಾ ನೋಡಲಾಯ್ತಾದ್ರೂ ಫೋಟೋಗೆ ಸಿಕ್ಕಿದ್ದು ಬ್ಲರ್ ಫೋಟೋಗಳೇ. ಒಂದೆರಡು ನಿಮಿಷದ ಅವಧಿಯಲ್ಲಿ ಘಟಿಸಿಹೋಗೋ ಈ ದೃಶ್ಯಾವಳಿಗಳಿಂದ ಚೇತರಿಸಿಕೊಳ್ಳೋ ಹೊತ್ತಿಗೆ ಕರಗ ಒಂದು ಪ್ರದಕ್ಶಿಣೆ ಮುಗಿಸಿ ಮತ್ತೊಂದು ಸುತ್ತು ಬಂದಿರುತ್ತೆ. ಮಧ್ಯ ಮಧ್ಯ ನೃತ್ಯವನ್ನೂ ಮಾಡೋ ಕರಗಧಾರಿಯ ನೃತ್ಯಕ್ಕೆ ನೆರೆದಿದ್ದವರ ಅಭಿಮಾನದ ಶಿಳ್ಳೆಗಳು ಮುಗಿಲುಮುಟ್ಟುತ್ತೆ. ಮೂರು ಬಾರಿ ಕರಗದವರ ದರ್ಶನವಾದ ನಂತರ ನಾವು ಮನೆಯತ್ತ ಹೊರಟೆವು. ಘಂಟೆ ಎರಡಾಗ್ತಾ ಬಂದು, ಮಾರನೆಯ ದಿನ ಆಫೀಸಿಗೆ ಹೋಗೋ ನಿರೀಕ್ಷೆಯಲ್ಲಿದ್ದರೂ ಅಲ್ಲಿದ್ದ ಜನ ಜಾತ್ರೆ ಹಾಗೇ ಇತ್ತು. ಮೊದಲಿಗಿಂತ ಕೊಂಚ ಕಮ್ಮಿಯಾಗಿದ್ದರೂ ಪೂರ್ತಿಯಾಗೇನೂ ಕರಗಿರಲಿಲ್ಲ.

ಕರಗದ ಪುರ ಸಂಚಾರ:

ರಥಬೀದಿಯಲ್ಲಿ ಮೂರು ಪ್ರದಕ್ಷಿಣೆ ಹಾಕಿದ ಕರಗ ನಂತರದಲ್ಲಿ ನಗರದ ಬೀದಿಗಳಲ್ಲಿ ಪ್ರದಕ್ಷಿಣೆ ಹಾಕುತ್ತದೆ. ನಾವಿದ್ದ ಬೀದಿಗೆ ಮೂರೂವರೆಗೆ ಬರುತ್ತೆ ಅಂದಿದ್ದರು. ಸರಿ, ಬಂದಾಗ ಎಬ್ಬಿಸಿ ಅಂತ ನಾವು ಮಲಗಿದ್ವಿ. ಅದು ಬರುವ ಹೊತ್ತಿಗೆ ಘಂಟೆ ಐದಾಗಿತ್ತು. ಗಾಢ ನಿದ್ರೆಯಲ್ಲಿದ್ದ ನಮಗೆ ಮನೆಯವರು ಬಾಗಿಲು ಬಡಿದಾಗಲೇ ಎಚ್ಚರ. ತಕ್ಷಣ ಎದ್ದು ಮುಖ ತೊಳೆದು ಹೋಗುವ ಹೊತ್ತಿಗೆ ಕರಗ ಮುಂದಿನ ಬೀದಿಯಿಂದ ನಮ್ಮ ಬೀದಿಯ ಕಡೆಗೆ ಬರುತ್ತಾ ಇತ್ತು. ಮೊದಲೇ ಲೇಟಾಗಿದ್ದ ಕಾರಣ ಈ ಬಾರಿ ಗಡಿಬಿಡಿಯಿಂದ ಹೊರಟಿದ್ದರಂತೆ. ಹಾಗಾಗಿ ಆರತಿ ಮಾಡೋಕಾಗಲಿ ಅಥವಾ ಕಣ್ತುಂಬಿಕೊಳ್ಳೋಕಾಗಲಿ ಅವಕಾಶವಿರಲಿಲ್ಲ. ಬರುತ್ತಿದ್ದ ಹಾಗೆಯೇ ಹೊರಟು ಹೋದ ಕರಗವನ್ನು ಕಣ್ತುಂಬಿಕೊಳ್ಳೋಕೆ ನಮಗೆ ಹತ್ತು ಹದಿನೈದು ಸೆಕೆಂಡುಗಳ ಅವಕಾಶವಿದ್ದಿರಬಹುದಷ್ಟೇ.ಅದರಲ್ಲೂ ಕ್ಯಾಮೆರಾ ಕಂಡೊಡನೆಯೇ ವಿಡಿಯೋ ಮಾಡುವಂತಿಲ್ಲವೆಂದ ಖಡ್ಗಧಾರಿಗಳ ಮಾತು ಕೇಳಿದ ನಾನು ಕ್ಯಾಮೆರಾ ಬದಿಗಿಟ್ಟು ಅಲ್ಲಿನ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳುವುದರಲ್ಲಿ ಮಗ್ನನಾಗಿದ್ದರಿಂದ ಕರಗದ ಮತ್ಯಾವ ಕ್ಲೋಸಪ್ ದೃಶ್ಯಗಳೂ ದಕ್ಕಲಿಲ್ಲ. ಮತ್ತೆ ಮೈಮರೆತು ಹತ್ತಿದ ನಿದ್ದೆಗೆ ಎಚ್ಚರಾಗಿದ್ದು ಬೆಳಗ್ಗೆ ಎಂಟಕ್ಕೇ. ಅಲ್ಲಿಯವರೆಗೆ ಅಮ್ಮ ಎರಡೆರಡು ಸಲ ಫೋನ್ ಮಾಡಿದ್ದೂ ಗೊತ್ತಿಲ್ಲ. ನಂತರ ಎದ್ದು ರೆಡಿಯಾಗಿ ರಾಜ್ ಕುಮಾರರ ಅತ್ತೆ ಮಾಡಿಕೊಟ್ಟ ಸಖತ್ ಉಪ್ಪಿಟ್ಟು ತಿಂದು ಆಫೀಸಿಗೆ ಹೊರಟ್ವಿ. ಅದು ಕಳೆದು ಈಗ ಮತ್ತೊಂದು ವೀಕೆಂಡ್ ಬಂದ್ರೂ ಅವರ ಮನೆ, ಅತ್ತೆ ಮಾವ, ಅಪ್ಪ, ಅಂದೇ ಹುಟ್ಟು ಹಬ್ಬವಿದ್ದ ಪುಟಾಣಿ ರೋಹನ್ ಕೃಷ್ಣ ಮತ್ತು ಉಳಿದ ಪುಟಾಣಿಗಳು, ತುಂಬಿದ ಸಂಸಾರ, ಅದ್ಭುತ ಕರಗ ಆಚರಣೆಗಳು ಮತ್ತು ಅದರ ಸುತ್ತಣ ಕತೆಗಳು ಈಗಷ್ಟೇ ಕಂಡು, ಕೇಳಿದಂತಿದೆ, ಕಣ್ಣೆದುರು ಹಾಯುವಂತಿದೆ. ಮತ್ತೊಂದು ಇಂತದ್ದೇ ಆಚರಣೆಯಲ್ಲಿ ಭೇಟಿಯೋಗೋ ನಿರೀಕ್ಷೆಯಲ್ಲಿ, ಅದ್ಭುತ ನೆನಪುಗಳಿಗೆ ಆಸರೆಯಾದ ರಾಜ್ ಕುಮಾರ್ ಮತ್ತು ಅವರ ಅತ್ತೆಯವರ ಮನೆಯವರಿಗೆ ಕೃತಜ್ಞತೆ ತಿಳಿಸುತ್ತಾ ಸದ್ಯಕ್ಕೊಂದು ವಿರಾಮ.

2 comments:

  1. This year I had witnessed the Bangalore Karaga in Majestic/Market area... Except that,in many areas Karaga will be there.

    ReplyDelete
  2. Ha. I heard Bangalore karaga and Yelahanka ones are the famous ones

    ReplyDelete