Saturday, December 2, 2017

ದೇಶದ ಪ್ರಗತಿಯಲ್ಲಿ ಸುದ್ದಿ ಮಾಧ್ಯಮಗಳ ಪಾತ್ರ

ಶತಮಾನಗಳ ಹಿಂದಿದ್ದಂತೆ ನಮ್ಮ ಮನೆಗೆ ಹೊರಗಿನಿಂದ ಯಾರಾದರೂ ಬಂದಾಗಲೋ ಅಥವಾ ಪೇಟೆಯಲ್ಲಿ ಕಂಡು ಕೇಳಿದ ವರ್ತಮಾನಗಳಿಂದಲೋ ದೇಶದಲ್ಲಿ, ಪ್ರಪಂಚದಲ್ಲಿ ಏನಾಗ್ತಿದೆ ಅಂತ ತಿಳಿದುಕೊಳ್ಳಬೇಕಾದ ಪರಿಸ್ಥಿತಿ ಇಂದಿಲ್ಲ. ಬೆಳಗಾದರೆ ಮನೆಬಾಗಿಲಿಗೆ ಬಂದು ಬೀಳೋ ಪೇಪರ್ರು, ಸ್ವಿಚ್ ಅದುಮಿದರೆ ಬಿತ್ತರಗೊಳ್ಳೋ ಟಿವಿ, ಎಡತಾಕಿದರೆ ಸಿಗೋ ಮೊಬೈಲಲ್ಲಿನ ಅಂತರ್ಜಾಲ ಮತ್ತು ಅದರ ಮೂಲಕ ತೆರೆದುಕೊಳ್ಳೋ ಸುದ್ದಿಗಳ ಅಗಾಧ ಸಾಧ್ಯತೆಗಳು, ಹಳ್ಳಿಗಳಲ್ಲಿ ಈಗಲೂ ಸಕ್ರಿಯವಾಗಿರೋ ರೇಡಿಯೋ ಸೆಟ್ಟುಗಳು ಮತ್ತು ಅವುಗಳ ವಿಸ್ತೃತ ಜಾಲ, ಹಾಡುಗಳಿಗೆ  ಸೀಮಿತವಾಗಿರದೇ ಮಾಹಿತಿಗಳ ಬಿತ್ತರಕ್ಕೂ ತಮ್ಮನ್ನು ತೆರೆದುಕೊಂಡ  ಎಫ್ ಎಂಗಳು, ಕಾಲಹರಣಕ್ಕೆ ಸೀಮಿತಗೊಳ್ಳದೇ ಮಾಹಿತಿಗಳ ಬಿತ್ತರಕ್ಕೂ ಉಪಯೋಗವಾಗುತ್ತಿರೋ ಸಾಮಾಜಿಕ ಮಾಧ್ಯಮಗಳಾದ ಟ್ವಿಟ್ಟರ್, ಫೇಸ್ಬುಕ್, ವಾಟ್ಸಾಪ್ಪುಗಳು.. ಹೀಗೆ ದಿನಬೆಳಗಾದರೆ , ಕಣ್ಣುಹಾಯಿಸಿದತ್ತೆಲ್ಲಾ ಸುದ್ದಿಗಳು  ತೆರೆದುಕೊಳ್ಳುತ್ತಾ ಸಾಗುತ್ತವೆ. ಸಾವಿರಾರು ಸುದ್ದಿಗಳೇನೋ ನಿತ್ಯ ನಮ್ಮ ತಲುಪುತ್ತಿರುತ್ತೆ. ಆದರೆ ಈ ರೀತಿಯ ಸುದ್ದಿಗಳಿಂದ ಮನೋರಂಜನೆ, ಸಮಯಹರಣಗಳಾಗೋದು ಮಾತ್ರವಾ ಅಥವಾ ದೇಶದ ಪ್ರಗತಿಗೂ ಅವು ಕಾಣಿಕೆ ನೀಡುತ್ತವಾ ಅನ್ನೋದು ಸದ್ಯದ ಪ್ರಶ್ನೆ. ಅದಕ್ಕೆ ಉತ್ತರಹುಡುಕುವತ್ತ ನಮ್ಮ ಪಯಣವನ್ನು ಮುಂದುವರೆಸೋಣ


ಬೆಳಬೆಳಗ್ಗೆ ಒಂದು ಫೋನ್ ಕಾಲ್. 
ಹಲೋ, .. ಇವರಾ ? ಹೌದು ನೀವ್ಯಾರು ? 
ನಾನು ... ... ಬ್ಯಾಂಕಿನ ಮ್ಯಾನೇಜರ್. 
ಹೌದಾ. ಹೇಳಿ ಸಾರ್. ನನ್ನಿಂದೇನಾಗಬೇಕಿತ್ತು ? 
... ಇವರೇ ನಿಮ್ಮ ಎಟಿಎಂ ಕಾರ್ಡಲ್ಲಿ ತಾಂತ್ರಿಕ ದೋಷವೊಂದಿದೆ. ಅದನ್ನು ಸರಿಪಡಿಸುತ್ತಿದ್ದೇವೆ. ಅದಕ್ಕಾಗಿ ನಿಮ್ಮ ಕಾರ್ಡಿನ ನಂಬರ್ ಮತ್ತೆ ಪಿನ್ ಹೇಳ್ತೀರಾ ? 
ಇಂತಹ ಕಾಲ್ ಬಂದಿದ್ದು ಹಳ್ಳಿಗರೊಬ್ಬರಿಗೆ. ಯಾರು ಮಾಡಿರಬಹುದು ? ಅವರು ಕೇಳಿದ ಮಾಹಿತಿ ಕೊಟ್ಟರೆ ಏನಾಗಬಹುದು ? ಅಂತಲೂ ಅರಿಯದ ಮುಗ್ದರವರು. ಸರಿ ಅಂತ ಕೊಟ್ಟ ಅವರಿಗೆ ಐದು ನಿಮಿಷಗಳಲ್ಲೇ ಶಾಕ್ ಕಾದಿತ್ತು. ಪ್ರತೀ ಸಲ ಹತ್ತು ಸಾವಿರ ಅಂತ ಐವತ್ತು ಸಾವಿರ ಮುಂದಿನ ಮೂವತ್ತು ನಿಮಿಷಗಳಲ್ಲಿ ಅವರ ಖಾತೆಯಿಂದ ತೆಗೆಯಲ್ಪಟ್ಟಿತ್ತು ! ಈ ತರಹ ಎಷ್ಟು ಜನಕ್ಕೆ ಕಾಲ್ ಬಂದಿರಬಹುದು ? ಫೇಕ್ ಕಾಲ್ ಅಂತ ಗೊತ್ತಿರೋರಾದರೆ ಅದನ್ನು ಕಟ್ ಮಾಡಿರಲೂ ಬಹುದು. ಆದರೆ ಆದದ್ದಾಯಿತು. ಮುಂದೇನು ? ದುಡ್ಡು ಕಳೆದುಕೊಂಡವರು ಬ್ಯಾಂಕಿಗೆ ಹೋಗಿ ದೂರು ಕೊಟ್ಟರೂ ಏನೂ ಪ್ರಯೋಜನವಾಗಲಿಲ್ಲ. ಹೋದ ದುಡ್ಡು ಹೋಯಿತು.ಅದಕ್ಕೆ ಏನೂ ಮಾಡೋಕಾಗೋಲ್ಲ ಅನ್ನೋ ಬೇಜವಾಬ್ದಾರಿ ಉತ್ತರ  ಬ್ಯಾಂಕಿನವರಿಂದ !. ಯಾರೋ ಕಾಲ್ ಮಾಡಿದವರಿಗೆ ಇವರ ನಂಬರ್ ಸಿಕ್ಕಿದ್ದು ಹೇಗೆ ? ಕಾರ್ಡ್ ಇವರ ಬಳಿಯೇ ಇದ್ದರೂ ಇವರ ನಂಬರ್ ಪಡೆದು ಐದು ಸಲ ಇಂಟರ್ನೆಟ್ ಇಂದ ದುಡ್ಡು ತೆಗೆದದ್ದಾದರೂ ಹೇಗೆ ಅನ್ನೋ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ. ದಿಕ್ಕೇ ತೋಚದಂತೆ ಕೂತಿದ್ದ ಅವರ ನೆರವಿಗೆ ಬಂದದ್ದು ಸುದ್ದಿ ಮಾಧ್ಯಮಗಳು. ಪೇಪರ್ರಲ್ಲಿ ಈ ಸುದ್ದಿ ಬಂದದ್ದೇ ತಡ ... ಬ್ಯಾಂಕಿನವರು ಜಾಗೃತರಾದರು.  ಬ್ಯಾಂಕಿನ ಮಾಹಿತಿಗಳನ್ನು ಹ್ಯಾಕರ್ಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ, ಈ ತರಹ ಹೊರಗಡೆಯಿಂದ ದುಡ್ಡು ತೆಗೆಯೋಕೆ ಹೋದರೂ ಇಂಟರ್ನೆಟ್ ಬ್ಯಾಂಕಿಂಗ್ ಪೇಮೆಂಟ್ ಗೇಟ್ ವೇ ಗೆ ಯಾವ ಅನುಮಾನಗಳೂ ಬಾರದೇ, ಮೊಬೈಲ್ ಓಟಿಪಿಯನ್ನೂ ಕೇಳದೇ ಐದೈದು ಸಲ ದುಡ್ಡು ತೆಗೆದದ್ದಾರೂ ಹೇಗೆ ? ಕಾರ್ಡ್ ಇವರ ಬಳಿಯೇ ಇರುವ ಕಾರಣ ಎಲ್ಲೂ ಸ್ವೈಪ್ ಮಾಡಲೆಂತೂ ಸಾಧ್ಯವಿಲ್ಲ. ಹಾಗಾಗಿ ಇವರ ದುಡ್ಡು ಹೊಡೆದ ವ್ಯವಸ್ಥಿತ ಜಾಲವನ್ನು ಭೇದಿಸಿ ಮುಂದೆ ಇಂತಹ ಮೋಸಗಳಾಗದಂತೆ ತೆಡೆಯೋ  ಕೆಲಸ ಬ್ಯಾಂಕು ಮತ್ತು ಸೈಬರ್ ಸುರಕ್ಷತೆಯವರಿಂದ ನಡೆಯುತ್ತಿದೆ ಅಂತ ನಂತರ ವರದಿ ಬಂತು. ಒಬ್ಬನೇ ವ್ಯಕ್ತಿ ತನಗಾದ ಮೋಸದ ಬಗ್ಗೆ ಅಳುತ್ತಾ ಕೂತಿದ್ದರೆ ಏನೂ ಆಗುತ್ತಿರಲಿಲ್ಲ. ಸುದ್ಧಿ ಮಾಧ್ಯಮಗಳು ನೆರವಿಗೆ ಬಂದದ್ದೇ ತಡ, ಎಷ್ಟೆಲ್ಲಾ ಬದವಾವಣೆಗಳು ಶುರುವಾದವು ನೋಡಿ. ಈ ತರಹದ ಕಾಲ್ ಬರುತ್ತೆ , ಎತ್ತಲೇ ಬೇಡಿ ಅಂತ ವಾಟ್ಸಾಪಿನ ಎಲ್ಲಾ ಗ್ರೂಪುಗಳಲ್ಲಿ ತುಂಬಾ ಸಮಯದ ಹಿಂದಿನಿಂದಲೇ ಮಾಹಿತಿ ಹರಿದಾಡುತ್ತಿತ್ತು. ಈ ವಾಟ್ಸಾಪು, ಸುದ್ಧಿ ಮಾಧ್ಯಮಗಳಿರಲಿಲ್ಲ ಅಂದರೆ ಇಂತಹ ಸುದ್ಧಿಗಳು ಜನರಿಗೆ ತಲುಪೋದಾದರೂ ಹೇಗೆ ? ದೇಶದ ಅರ್ಥವ್ಯವಸ್ಥೆಯ ಆಧಾರಸ್ಥಂಭಗಳಾದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತ್ವರಿತಗತಿಯ ಬದಲಾವಣೆಗಳು ಆಗೋದಾದರೂ ಹೇಗೆ ? 


ಕೃಷಿ: 
ಏಟಿ, ಬಿಟಿ, ಸರ್ಕಾರಿ ನೌಕರಿ, ಖಾಸಗಿ ನೌಕರಿ ಅಂತ ಹತ್ತು ಹಲವು ಉದ್ಯೋಗಾವಕಾಶಗಳು ದಿನನಿತ್ಯ ತೆರೆದುಕೊಳ್ಳುತ್ತಿದ್ದರೂ ಭಾರತದಲ್ಲಿ ಇಂದಿಗೂ ಅರವತ್ತು ಪ್ರತಿಶತಕ್ಕಿಂತಲೂ ಹೆಚ್ಚು ಜನರ ಜೀವನ ಪ್ರತ್ಯೇಕ ಪರೋಕ್ಷವಾಗಿ ಕೃಷಿಯ ಮೇಲೆ ಅವಲಂಭಿತವಾಗಿದೆ ಅಂದರೆ ನಂಬುತ್ತೀರಾ ? ಅದೆಂಗೆ ಅಂದಿರಾ ? ಹೊಲದಲ್ಲಿ ನೇರವಾಗಿ ಬೆಳೆ ಬೆಳೆಯೋನು ರೈತ. ಆದರೆ ಅವನೊಬ್ಬನೇ ಎಲ್ಲವನ್ನೂ ಮಾಡಲಾದೀತೇ ? ಬೆಳೆಯೋಕೆ ಗೊಬ್ಬರ, ಬಿತ್ತನೆ ಬೀಜ, ರಾಸಾಯನಿಕ, ಯಂತ್ರಗಳು ಬೇಡವೇ ? ಬೆಳೆದದ್ದನ್ನು ಪೇಟೆಗೆ ತರಲು, ಅಲ್ಲಿ ಸಂಗ್ರಹಿಸಿಡಲು, ಅದನ್ನು ತಿನ್ನುವ ಪ್ರತೀ ಗ್ರಾಹಕನವರೆಗೆ ತಲುಪಿಸಲು.. ಹೀಗೆ ಪ್ರತಿಯೊಂದರಲ್ಲೂ ಸಾವಿರಾರು ಹಲವು ವರ್ಗದವರು ಬಂದು ಸೇರಿಕೊಳ್ಳುತ್ತಾರೆ. ಈಗ ಕೃಷಿಯೇ ಇಲ್ಲವೆಂದರೆ ಇವರೆಲ್ಲರ ಬದುಕು ಮೂರಾಬಟ್ಟೆಯಾಗಬಹುದು. ಸರಿ, ಕೃಷಿಯಿಂದ ಬರುವ ಆದಾಯದಿಂದ ದೇಶದ ಪ್ರಗತಿಗೆ ಸಹಾಯಕ ಅಂದುಕೊಂಡರೂ ಅದಕ್ಕೂ ಸುದ್ಧಿ ಮಾಧ್ಯಮಗಳಿಗೂ ಏನು ಸಂಬಂಧ ಅನ್ನುತ್ತೀರಾ ? ಇದೆ ಸ್ವಾಮಿ. ಭಾರತದಲ್ಲೆಂತೂ ಅವು ಬಹುದೊಡ್ಡ ಪಾತ್ರ ವಹಿಸುತ್ತಿದೆ. ಮಳೆ ನಕ್ಷತ್ರಗಳ ಮೇಲೆ ನಂಬಿಕೆಯಿಟ್ಟು ಬೇಸಾಯದ ಹಲವು ಋತುಗಳನ್ನು ಹಿರಿಯರು ನಿರ್ಧರಿಸುತ್ತಿದ್ದರು. ಆದರೆ ಈಗ ಭೂತಾಪ ಹೆಚ್ಚಳದ ಕಾರಣದಿಂದ ಋತುಗಳು ಬದಲಾಗುತ್ತಿದೆ. ಯಾವಾಗಲೋ ಮಳೆ ಬರುತ್ತೆ. ಇನ್ಯಾವಾಗಲೋ ಬಿಸಿಲು ಕಾಡುತ್ತೆ. ಕೃಷಿಗೆ ಅತೀ ಮುಖ್ಯವಾದ ಮುಂಗಾರು ಹಿಂಗಾರುಗಳೂ ಪ್ರತೀ ವರ್ಷ ಆಚೀಚೆಯಾಗುತ್ತಿವೆ. ಈ ಮುಂಗಾರು ಯಾವಾಗ ಬರುತ್ತೆ ಅನ್ನೋದೇ ರೈತನಿಗೆ ತಿಳಿಯದಿದ್ದರೆ ಆತ ಜಮೀನನ್ನು ಹಸನುಗೊಳಿಸೋದು ಯಾವಾಗ, ಬೀಜಗಳನ್ನೆಲ್ಲಾ ಕೊಂಡು ಬಿತ್ತನೆಗೆ ತಯಾರಾಗೋದು ಯಾವಾಗ ? ಜೂನಲ್ಲಿ ಮಳೆ ಬರುತ್ತೆ ಅಂತ ಪ್ರತೀ ವರ್ಷದಂತೆ ಜಮೀನು ಹಸನು ಮಾಡಿಕೊಂಡು ಕಾಯ್ತಾ ಇದ್ದು ಮುಂಗಾರು ಅದೇ ವರ್ಷ ಲೇಟಾದ್ರೆ ? ಹಸನುಗೊಳಿಸೋ ಮುಂಚೆಯೇ ಜೋರು ಮಳೆಗಾಲ ಶುರುವಾದ್ರೆ ? ಇಂತಹ ಸಮಯದಲ್ಲಿ ನೆರವಿಗೆ ಬರೋದು ಸುದ್ಧಿ ಮಾಧ್ಯಮಗಳು. ಕೇರಳಕ್ಕೆ ಮುಂಗಾರು ಇಂತಹ ದಿನ ಕಾಲಿಡ್ತಿದೆ. ಕರ್ನಾಟಕಕ್ಕೆ ಇಂತಹ ದಿನ ಬರಬಹುದು ಅಂತ ಹವಾಮಾನ ಇಲಾಖೆ ಕೊಡೋ ಮಾಹಿತಿಯನ್ನು ಪ್ರತೀ ರೈತನ ಬಳಿ ತಲುಪಿಸೋ ಕೆಲಸವನ್ನು ವೃತ್ತಪತ್ರಿಕೆಗಳು, ರೇಡಿಯೋ ಮತ್ತು ಟಿವಿ ಮಾಡುತ್ತಿವೆ. ಅನಾವೃಷ್ಠಿಯಾಗಿ ಬೆಳೆಹಾನಿಯಗ್ತಿದೆ, ಮಳೆ ಹೆಚ್ಚಾಗಿ ಫಸಲು ತೊಳೆದುಹೋಯ್ತು ಅನ್ನೋ ಅಳಲುಗಳೆಲ್ಲಾ ರೈತರಿಂದ ಅಧಿಕಾರಿಗಳಿಗೆ, ಅವರಿಂದ ಸರ್ಕಾರಕ್ಕೆ ತಲುಪೋಕೆ ತಿಂಗಳುಗಳೇ ಹಿಡಿಯುತ್ತಿದ್ದವು ಮುಂಚೆ. ಈಗ ಸುದ್ಧಿ ಮಾಧ್ಯಮಗಳು ಸಕ್ರಿಯವಾಗಿರುವುದರಿಂದ ಅವೆಲ್ಲಾ ಚಕಾಚಕ್ ! ಬರಗಾಲದ ತೀವ್ರತೆ ಸುದ್ಧಿ ಮಾಧ್ಯಮಗಳಲ್ಲಿ ಬಿತ್ತರಗೊಂಡು ರಾಜ್ಯಾದ್ಯಂತದ ಜನರಿಂದ ಸರ್ಕಾರದ ಬಗ್ಗೆ ಆಕ್ರೋಶ ಮುಗಿಲುಮುಟ್ಟೋಕೆ ಶುರುವಾದಾದ ಸರ್ಕಾರ ಮೋಡ ಬಿತ್ತನೆಗೆ ಮುಂದಾಗುತ್ತೆ ! ಅತೀವೃಷ್ಠಿಯಿಂದ ಜನ ಹಾಹಾಕಾರ ಮಾಡ್ತಿರೋ ಸುದ್ದಿ ಎಲ್ಲೆಡೆ ಬಿತ್ತನೆಗೊಂಡು ಜನ ರೊಚ್ಚಿಗೇಳುವ ಹೊತ್ತಿಗೆ ರಾಜ್ಯ , ಕೇಂದ್ರ ಸರ್ಕಾರಗಳು ಪ್ಯಾಕೇಜ್ ಘೋಷಿಸುತ್ತೆ. ನಕಲಿ ಬಿತ್ತನೆ ಬೀಜ, ಗೊಬ್ಬರ ಪೂರೈಸೋ ಧೂರ್ತರ ಸುದ್ದಿಯಾಗಿರಬಹುದು, ಸರ್ಕಾರದಿಂದ ಆ ಯೋಜನೆ ಈ ಯೋಜನೆ ಅಂತ ಸುಳ್ಳೇ ಹಳ್ಳಿಗಳಿಗೆ ಬಂದು ಹಣ ಪೀಕುವ ಏಜೆಂಟರುಗಳ ಬಗ್ಗೆಯಾಗಿರಾಹುದು, ಸುದ್ಧಿ ಮಾಧ್ಯಮಗಳಿಲ್ಲದ ದಿನಗಳಲ್ಲಿ ಅಂತಹ ಸುದ್ಧಿಗಳು ಎಲ್ಲರಿಗೂ ತಲುಪಿ ಅವರೆಲ್ಲಾ ಎಚ್ಚರಗೊಳ್ಳೋಕೆ ಎಷ್ಟು ಸಮಯ ಹಿಡಿಯುತ್ತಿತ್ತೋ ದೇವರೇ ಬಲ್ಲ. ಹಾಗಾದ್ರೆ ಸುದ್ಧಿ ಮಾಧ್ಯಮಗಳೇ ಇಲ್ಲವೆಂದರೆ ಸರ್ಕಾರಕ್ಕೆ ಮಾಹಿತಿಯೇ ಸಿಗುತ್ತಿರಲಿಲ್ಲವೇ, ಕೃಷಿ ಕ್ಷೇತ್ರ ಉಳಿಯೋಕೆ ಸಾಧ್ಯವೇ ಇಲ್ಲವೇ  ಅನ್ನುತ್ತೀರಾ ? ಖಂಡಿತಾ ಇದೆ. ಆದರೆ ಜನರಿಂದ ಜನರಿಗೆ, ಅಧಿಕಾರಿಗಳಿಂದ ಸರ್ಕಾರಕ್ಕೆ ಆ ಮಾಹಿತಿ ಸಿಕ್ಕು, ಅದಕ್ಕೆ ಪರಿಹಾರ ಸಿಕ್ಕೋ ಹೊತ್ತಿಗೆ ಅದೆಷ್ಟೋ ರೈತರ ಜೀವ ಹೋಗಿರುತ್ತಿತ್ತು. ಹಾಗಾಗಿ ಬದಲಾಗುತ್ತಿರೋ ಹವೆ ಮತ್ತು ಜಮಾನಾದಲ್ಲಿ ಕೃಷಿ ಸಾಯದೇ ಉಳಿಯಬೇಕಾದರೆ, ಉನ್ನತಿ ಹೊಂದಬೇಕಾದರೆ ಅದರ ಬಗ್ಗೆ ಸುದ್ಧಿ ಮಾಧ್ಯಮಗಳು ಮಹತ್ತರ ಪಾತ್ರ ವಹಿಸಬೇಕು. 


ಭ್ರಷ್ಟಾಚಾರ:
ಆದಾಯ ತೆರಿಗೆ ಇಲಾಖೆಗಳು ಅಲ್ಲಿ ದಾಳಿ ನಡೆಸಿದರು. ಇಲ್ಲಿ ದಾಳಿ ನಡೆಸಿದರು ಅನ್ನೋ ಸುದ್ಧಿ ನಿತ್ಯ ಪೇಪರ್ರುಗಳಲ್ಲಿ ಬರುತ್ತಲೇ ಇದೆ ಮತ್ತು ಅಂತಹ ಭ್ರಷ್ಟ ಅಧಿಕಾರ ಬಳಿಯಿದ್ದ ದುಡ್ಡು ಸರ್ಕಾರದ ಖಜಾನೆಗೆ ಸೇರ್ಪಡೆಗೊಳ್ಳತ್ತಲೇ ಇದೆ. ಸದ್ಯದ ಉದಾಹರಣೆ ಎಂದರೆ ತಮಿಳುನಾಡಿನ ಜಯಲಲಿತಾ ಒಡನಾಡಿ ಶಶಿಕಲಾ ಪ್ರಕರಣ. ಜನರಿಂದ ದೋಚಿದ್ದ ಕೋಟಿ ಕೋಟಿ ಹಣವನ್ನು ವಿದ್ಯಾರ್ಥಿನಿಲಯದಲ್ಲಿ ಬಚ್ಚಿಡಲಾಗಿತ್ತು ಎಂಬ ಮಾಹಿತಿ ಆದಾಯ ತೆರಿಗೆ ದಾಳಿಯ ವೇಳೆ ಸಮಸ್ತ ಜನರೆದುರು ಬಯಲಾಗಿದೆ ! ಅಮ್ಮ , ಚಿನ್ನಮ್ಮ ಅಂದ್ಕೊಂಡು ಮತ್ತದೇ ಭ್ರಷ್ಟ ರಾಜಕಾರಣಿಗಳನ್ನು ಆರಿಸಿ ಕಳಿಸೋ ಮುಗ್ದ ಜನರಿಗೆ ಈ ಮೂಲಕವಾದರೂ ಬುದ್ದಿ ಬಂದರೆ ಅದು ಸುದ್ದಿ ಮಾಧ್ಯಮಗಳ ಜಯವೇ ಮತ್ತು ಆ ಮೂಲಕ ಸಮರ್ಥ ರಾಜಕಾರಣಿಗಳು ಆಯ್ಕೆಯಾಗಿ ಬಂದರೆ ಅದು ದೇಶದ ಪ್ರಗತಿಗೆ ಸಹಾಯಕವೇ. ಅಮೇರಿಕಾದ ವಾಷಿಗ್ಟಂನ್ ಪೋಸ್ಟ್ ಪತ್ರಿಕೆಯ ಬಾಬ್ ವುಡ್ ವರ್ಲ್ಡ್ ಮತ್ತು ಕಾರ್ಲ್ ಬರ್ನ್ ಸ್ಟೀನ್ ಎಂಬ ಪತ್ರಕರ್ತರು ೧೯೭೩ರಲ್ಲಿ ವಾಟರ್ ಗೇಟ್ ಹಗರಣವನ್ನು ಬಯಲಿಗೆಳೆಯುತ್ತಾರೆ. ಅಮೇರಿಕಾದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರಿಗೆ ನಿಕಟವರ್ತಿಗಳಾಗಿದ್ದ ೧೯ಜನ ಮಾಡಿದ್ದ ಹಗರಣ ಜನಸಾಮಾನ್ಯರ ಎದುರಿಗೆ ಬಂದು ಅಮೇರಿಕಾದಲ್ಲಿ ರಾಜಕೀಯ ಅಲ್ಲೋಲ ಕಲ್ಲೋಲಗಳೇ ಆಗಿಹೋಗುತ್ತವೆ. ಅಲ್ಲಿಗೇಕೆ ಹೋಗಬೇಕು ? ನಮ್ಮ ಉದಾಹರಣೆಯನ್ನೇ ತೆಗೆದುಕೊಂಡರೆ ೧೯೮೭ರಲ್ಲಿ ದಿ ಹಿಂದು ಪತ್ರಿಕೆಯ ವರದಿಗಾರರಾದ ಚಿತ್ರಾ ಸುಬ್ರಹ್ಮಣ್ಯಂ ಮತ್ತು ಎನ್ ರಾಂ ಅವರು ಬೋಫೋರ್ಸ್ ಹಗರಣವನ್ನು ಬಯಲಿಗೆಳೆದ ರೀತಿ ನೆನಪಾಗುತ್ತೆ. ಆ ಸುದ್ದಿ ಅದೆಷ್ಟು ಹಾಹಾಕಾರವೆಬ್ಬಿಸಿತು ಅಂದರೆ ನಂತರವೇ ಬಂದ ಚುನಾವಣೆಯಲ್ಲಿ ಹಾಲಿ ಪ್ರಧಾನಿ ರಾಜೀವ್ ಗಾಂಧಿಯವರು ಅಧಿಕಾರ ಕಳೆದುಕೊಳ್ಳಬೇಕಾಯಿತು ! ಬಿಹಾರದ ಮೇವು ಹಗರಣ, ರಾಜ್ಯದ ಗಣಿ ಲೂಟಿ, ಜಮೀನುಗಳ ಅಕ್ರಮ ಡಿನೋಟಿಫಿಕೇಶನ್ ಹಗರಣ.. ಹೀಗೆ ಸಾಲು ಸಾಲು ಹಗರಣಗಳು ಜನರೆದುರು ಬಂದು ಭ್ರಷ್ಟ ರಾಜಕಾರಣಿಗಳು ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ ಅಂದರೆ ಸುದ್ಧಿಮಾಧ್ಯಮಗಳಿಗೆ ಅವುಗಳ ಈ ಕೆಲಸಕ್ಕೆ ಶ್ಲಾಘಿಸಲೇ ಬೇಕು

ಇಲಾಖೆಗಳ ಜನಪರ ನಡೆಗಳು ಮತ್ತು ತ್ವರಿತ ಕ್ರಮ:
ಮುಂಚೆಯೆಲ್ಲಾ ನಮ್ಮೂರುಗಳ ಮುನ್ಸಿಪಾಲಿಟಿ, ಕರೆಂಟ್, ಫೋನ್ ಇಲಾಖೆಗಳೆಂದರೆ ಹೇಳೋರಿಲ್ಲ ಕೇಳೋರಿಲ್ಲ ಅನ್ನುವ ಹಂಗಾಗುತ್ತಿತ್ತು. ಮನಸ್ಸಿಗೆ ಬಂದಾಗ ಕರೆಂಟ್ ತೆಗೆಯೋರು. ಟೆಲಿಫೋನ್ ವೈರು ತುಂಡಾಗಿ ವಾರಗಟ್ಟಲೇ ಆಗಿ ಇಲಾಖೆಗಳಿಗೆ ಕಂಪ್ಲೇಂಟ್ ಬರೆಯುತ್ತಾ ಅದೆಷ್ಟು ಅಲೆದರೂ ಕೆಲಸ ಆಗುತ್ತಿರಲಿಲ್ಲ. ಆದರೆ ಈಗ ಹಾಗಿಲ್ಲ. ಮನಸ್ಸಿಗೆ ಬಂದಂತೆ ಕರೆಂಟ್ ತೆಗೀತಿದ್ದಾರೆ ಅಂತ ಟಿವಿ ನೈನಲ್ಲೋ, ಪಬ್ಲಿಕ್ ಟೀವಿಯಲ್ಲೋ ಬಂತೋ ಮುಗೀತು. ಮುಟ್ಟಬೇಕಾದಲ್ಲಿ ಬಿಸಿ ಮುಟ್ಟತ್ತೆ. ಆ ದಿನವೇ , ಇಲ್ಲಾ ಮಾರನೇ ದಿನ ಟಿವಿಯಲ್ಲೋ ಪತ್ರಿಕೆಯಲ್ಲೋ ಆ ಇಲಾಖೆಯಿಂದ ೈಂತಿಂತಾ ಕೆಲಸಕ್ಕಾಗಿ ವಿದ್ಯುತ್ ತೆಗೆಯಲಾಗಿತ್ತು ಅಂತ ಸ್ಪಷ್ಟೀಕರಣ ಬರುತ್ತೆ. ಮುಂದೆ ಇಂತಹ ದಿನ ಇಂತಿಂತಾ ಸಮಯದಲ್ಲಿ ಕರೆಂಟ್ ತೆಗೆಯಲಾಗುತ್ತೆ ಅನ್ನೋ ಮಾಹಿತಿಯನ್ನೂ ಕೊಡಲಾಗುತ್ತೆ ! ಕರೆಂಟಿನ ಲಭ್ಯತೆಯನ್ನು ನಂಬಿಕೊಂಡು ಅದೆಷ್ಟೆಂದು ಜನರಿದ್ದಾರೆ . ಬೇಕಾಬಿಟ್ಟಿ ಕರೆಂಟ್ ತೆಗೆದು ಅವರೆಲ್ಲರ ಆರ್ಥಿಕ ಚಟುವಟಿಕೆಗಳಿಗೆ ಹಾನಿಗೊಳಿಸೋದು ಅಂದ್ರೆ ಹೇಗೆ ? ಮಂಚಿತವಾಗಿ ಹೇಳೋ ಮೂಲಕ ಅವರು ಅದಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಂಡು ಆರ್ಥಿಕತೆ ಎಂದಿನಂತೆ ಮುಂದುವರೆಯುತ್ತೆ. ಇದಕ್ಕೆ ಇನ್ನೊಂದು ಉದಾಹರಣೆ ಮುನ್ಸಿಪಾಲಿಟಿಯವರು ಎಲ್ಲೆಂದರಲ್ಲಿ ಕಸ ತಂದು ಸುರಿಯೋದು, ಇಲಾಖೆಗಳು ಕಂಡಲ್ಲೆಲ್ಲಾ ರಸ್ತೆ ಅಗಿಯೋದು ! ನಮ್ಮೂರ ಬಳಿ ಇದ್ದಕ್ಕಿದ್ದಂತೆ ಮುನ್ಸಿಪಾಲಿಟಿಯವರು ಕಸ ತಂದು ಸುರಿಯೋಕೆ ಶುರುಮಾಡಿದಾಗ ನಮಗೆಲ್ಲಾ ಶಾಕ್. ಯಾರೋ ಒಬ್ಬರೋ, ಇಬ್ಬರೋ ಇದರ ವಿರುದ್ದ ಹೋರಾಡಿ ಪ್ರಯೋಜನವಿಲ್ಲ ಎಂದು ಊರಿಗೆ ಊರೇ ಒಟ್ಟಾಗಿ ಹೋರಾಡಬೇಕಾಯಿತು. ವೃತ್ತ ಪತ್ರಿಕೆಗಳಲ್ಲಿ ಇದರ ಸುದ್ದಿ ಮುಟ್ಟಿ, ಅಂದಿನ ಜಿಲ್ಲಾ ಉಸ್ತುವಾರಿ ಸಚಿವರೇ ಅಲ್ಲಿಗೆ ಬಂದು ಮನವಿ ಸ್ವೀಕರಿಸಿದ್ದಾಯಿತು. ನಮ್ಮೂರ ಹೊರಗೊಂದು ಶಾಶ್ವತ ಕಸ ವಿಲೇವಾರಿ ಕೇಂದ್ರ ನಿರ್ಮಾಣವಾಗಿದೆ ಅಂದರೆ ಅದರ ಶ್ರೇಯದ ಕೊಂಚ ಪಾಲು ಮಾಧ್ಯಮಗಳಿಗೂ ಸಲ್ಲಬೇಕು. ಬದಲಾವಣೆಗಳ ಹರಿಕಾರ: 
ಉತ್ತರದಲ್ಲಿ ಸುಂದರ್ ಲಾಲ್ ಬಹುಗುಣ  ಅವರು ಮರಗಳನ್ನು ಉಳಿಸಲು ನಡೆಸುತ್ತಿದ್ದ ಚಿಪ್ಕೋ ಚಳುವಳಿಯ ಬಗೆಗಿನ ಮಾಹಿತಿ ಕರ್ನಾಟಕ್ಕೂ ತಲುಪಿ ಇಲ್ಲಿ ನಡೆದ ಅಪ್ಪಿಕೋ ಚಳುವಳಿ, ಸಾಲು ಮರದ ತಿಮ್ಮಕ್ಕನವರ ಬಗೆಗಿನ ಮಾಹಿತಿ ಎಲ್ಲೆಡೆ ತಲುಪಿ ಅನೇಕ ಜನ ಹಸಿರು ಯೋಗಿಗಳಾಗಿದ್ದು, ಸದ್ಯ ನಡೆಯುತ್ತಿರುವ ವೃಕ್ಷ ಲಕ್ಷ ಆಂದೋಲನ, ಮಳೆ ಕೊಯ್ಲಿನ ಬಗ್ಗೆ ಶ್ರೀಪಡ್ರೆ ಮುಂತಾದವರು ಬರೆದ ಅಂಕಣಗಳಿಂದ ಜನ ಸಾಮಾನ್ಯರಲ್ಲಿ ಆ ಬಗ್ಗೆ ಜಾಗೃತಿ ಮೂಡಿದ್ದು.. ಹೀಗೆ ಮಾಧ್ಯಮಗಳಲ್ಲಿ ಬರೋ ಮಾಹಿತಿಗಳಿಂದ ಹಲವು ಬದಲಾವಣೆಗಳು ಆ ಮೂಲಕ ದೇಶದ ಪ್ರಗತಿ ಸಾಧ್ಯವಾಗುತ್ತಿದೆ. ಟಿವಿ, ರೇಡಿಯೋ, ವೃತ್ತಪತ್ರಿಕೆಗಳು ಇರಲಿಲ್ಲ ಅಂದರೆ ನವೆಂಬರ್ ಎಂಟರ ಮಧ್ಯರಾತ್ರಿಯಿಂದ ಐನೂರು , ಸಾವಿರದ ನೋಟುಗಳು ಬ್ಯಾನಾಗುತ್ತಿವೆ ಅಂತ ಸಮಸ್ತ ದೇಶವಾಸಿಗಳಿಗೆ ತಿಳಿಯೋಕೆ ಸಾಧ್ಯವಾಗುತ್ತಿತ್ತಾ ? ತನ್ನೂರಲ್ಲಿ ಕರೆಂಟಿಲ್ಲ ಅಂತ ಪ್ರಧಾನಿ ಮೋದಿಯವರಿಗೆ ಶಾಲಾ ಬಾಲಕನೊಬ್ಬ ಬರೆದ ಪತ್ರದ ಬಗ್ಗೆ ಎಲ್ಲರಿಗೂ ತಿಳಿದು ಆ ಬಗೆಗಿನ ತ್ವರಿತ ಕೆಲಸವಾಗಿ ಆ ಊರಿಗೆ ಕರೆಂಟ್ ಬರುತ್ತಿತ್ತಾ ? ಅಣ್ಣಾ ಹಜಾರೆಯವರ ಬಗ್ಗೆ ಮತ್ತು ಅವರು ಹೋರಾಡುತ್ತಿದ್ದ  ಜನಲೋಕ್ ಪಾಲ್ ವಿಧೇಯಕದ ಬಗ್ಗೆ ಹಳ್ಳಿಹಳ್ಳಿಗೂ ತಿಳಿಯಿತೆಂದರೆ ಅದರ ಶ್ರೇಯ ಸುದ್ದಿ ಮಾಧ್ಯಮಗಳಿಗೆ ಸಲ್ಲಬೇಕು. ಜಲ್ಲಿಕಟ್ಟಿಗೆ ವಿಧಿಸಿದ್ದ ನಿಷೇಧ ತೆಗೆಯಬೇಕು ಅಂತ ತಮಿಳುನಾಡಿಗೆ ತಮಿಳುನಾಡೇ ಹೋರಾಡಿದ್ದು , ಅದೇ ಮಾದರಿಯಲ್ಲಿ ಕರ್ನಾಟಕದ ಕಂಬಳದ ಮೇಲಿನ ನಿಷೇಧದ ತೆರವಿಗೆ ಸರ್ಕಾರ ಪ್ರಯತ್ನಿಸಬೇಕು ಅಂತ ಒತ್ತಡ ಬಿದ್ದಿದ್ದರ ಹಿಂದೆ ಜನಾಭಿಪ್ರಾಯ ಮೂಡಿಸೋಕೆ ಸುದ್ದಿ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು ನೆರವಾಗಿದ್ದವು. 
ಹುಡುಕುತ್ತಾ ಹೋದರೆ ದೇಶದ ಒಪ್ಪುಓರೆಗಳನ್ನು ತಿದ್ದೋಕೆ ಸುದ್ಧಿ ಮಾಧ್ಯಮಗಳು ನೆರವಾದ ಅಸಂಖ್ಯಾತ ಉದಾಹರಣೆಗಳು ಸಿಗುತ್ತಾ ಹೋಗುತ್ತದೆ. 

ಹಾಗಂತ ಸುದ್ಧಿಮಧ್ಯಮಗಳು ಮಾಡಿದ್ದೆಲ್ಲಾ ಸರಿ ಅಂತಲ್ಲ. ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕಾಗಿದ್ದ ಪತ್ರಿಕೆಗಳು, ಟೀವಿ ಚಾನೆಲ್ಗಳು ಹಣದಾಸೆಗೆ ರಾಜಕೀಯ ಪಕ್ಷಗಳತ್ತ ವಾಲುತ್ತಿವೆ. ದುಡ್ಡಿಗಾಗಿ ನಕಲಿ ಕುಟುಕು ಕಾರ್ಯಾಚರಣೆ ನಡೆಸೋದು, ಇಂತಹ ಸುದ್ಧಿ ಬಿತ್ತರಿಸಬಾರದೆಂದರೆ ಇಷ್ಟು ದುಡ್ಡು ಕೊಡಿ ಅಂತ ಧಮಕಿ ಹಾಕೋ ಪ್ರಕರಣಗಳು ಆ ಮಾಧ್ಯಮಗಳ ಬಗ್ಗೆ ಹೇಸಿಗೆ ಹುಟ್ಟಿಸುತ್ತವೆ. ಈ ಚಾನೆಲ್ಲು, ಈ ಪತ್ರಿಕೆ ಇಂತಹ ಪಕ್ಷದ ಪರವಾಗಿದೆ. ಇಂತದ್ದು ಈ ಪಕ್ಷದ ಕಡೆಗಿದೆ ಅಂತ ಕೆಲವೇ ದಿನಗಳಲ್ಲಿ ಹೇಳಬಹುದಾದ ಪರಿಸ್ಥಿತಿ ಬಂದಿರುವುದು ಸದ್ಯದ ವಿಪರ್ಯಾಸ. ಕೆಲವೆಡೆಯೆಂತೂ ಕೊಲೆ ಸುಲಿಗೆಗಳೇ ಮುಖ್ಯ ಪುಟಕ್ಕೆ ಬಂದು ರಾಜಕೀಯ ನಾಯಕರುಗಳ ಬಹುಪರಾಕುಗಳೇ ಮೇಲಾಗಿ ಮುಖ್ಯವಾಹಿನಿಗೆ ಬರಬೇಕಾದ ಸುದ್ದಿ ಸಾಯುತ್ತಿರುವುದು ಬೇಸರ ತರಿಸುತ್ತೆ. ಕೆಲವೊಮ್ಮೆ ಉತ್ತರ ಕೊರಿಯಾದ ಪರಿಸ್ಥಿತಿಯ ನೆನಪೂ ತರಿಸುತ್ತೆ. ನಮ್ಮ ರಾಜ ಶಕ್ತಿಮಾನ್, ಅವ ಎಲ್ಲಕ್ಕಿಂತ ಮಹಾನ್ ..ಅಂತ ಶಾಲಾ ಮಕ್ಕಳು ದಿನನಿತ್ಯ ಹಾಡಬೇಕಾದಂತಹ ಅಲ್ಲಿನ ಪರಿಸ್ಥಿತಿಗೆ ಹೋಲಿಸಿದರೆ ಪ್ರಜಾಪ್ರಭುತ್ವದ ನಮ್ಮ ನಾಡು ಸ್ವರ್ಗವೆನಿಸುತ್ತೆ. ಕುಂಟುತ್ತಾದರೂ ಸಾಗುತ್ತಿರುವ ನಮ್ಮ ಆರ್ಥಿಕತೆಯ ಬಗ್ಗೆ, ಇಲ್ಲಾಗುತ್ತಿರುವ ಸುಧಾರಣೆಗಳ ಬಗ್ಗೆ ಹೆಮ್ಮೆಯೆನಿಸುತ್ತೆ. ಅದು ಇನ್ನೂ ಚುರುಕುಗೊಳ್ಳಬೇಕಾದರೆ ಆ ನಿಟ್ಟಿನಲ್ಲಿ ನಮ್ಮ ನಿಮ್ಮೆಲ್ಲರ ಕಾಣಿಕೆ, ಜನಾಭಿಪ್ರಾಯವನ್ನು ಮೂಡಿಸುವಲ್ಲಿ ಮಹತ್ತರ ಪಾತ್ರ ವಹಿಸೋ ಸುದ್ಧಿ ಮಾಧ್ಯಮಗಳು ಗಣನೀಯ ಪಾತ್ರ ವಹಿಸಬೇಕಾಗುತ್ತೆ. ಆ ನಿಟ್ಟಿನಲ್ಲಿ ಎಲ್ಲರ ಗಮನಹರಿಯಲಿ ಎಂದು ಆಶಿಸುತ್ತಾ ಇಂದಿನ ವಿಚಾರಲಹರಿಗೆ ಸದ್ಯಕ್ಕೊಂದು ವಿರಾಮ. 

No comments:

Post a Comment