Saturday, July 30, 2011

ರೈಲ್ವೆ ನೆನಪುಗಳು-೨: ರೈಲಲ್ಲೊಂದಿಡೀ ದಿನ ಕಳೆದದ್ದು

ಬೆಳಗ್ಗೆ ಇನ್ನೂ ಸೂರ್ಯ ಏಳೋ ಮುನ್ನವೇ ದಗ್ಗನೆ ಎಚ್ಚರ ಆಯ್ತು. ಮನೆಯಲ್ಲಿ ಎದ್ದಂತೆ ಏಳಕ್ಕೋ, ಎಂಟಕ್ಕೋ ಎದ್ದರೆ ಪ್ರಕೃತಿಯ ಕರೆ ಪೂರೈಸಲು ಪ್ರತೀ ಭೋಗಿಯಲ್ಲಿರೋ ನಾಲ್ಕೇ ರೂಮುಗಳೆದುರು ದೊಡ್ಡ ಕ್ಯೂ ಆಗಿರುತ್ತೆ ಅಂತ ಯಾರೋ ಹೇಳಿದ್ದು ನೆನಪಾಯ್ತು.ಮನೆಯಲ್ಲಿ ಎಂದೂ ಬೇಗ ಏಳದ ನಂಗೆ ಏನು ಕಾದಿದೆಯೋ ಅಂತ ಗಡಿಯಾರ ನೋಡಿದರೆ ನಾಲ್ಕೂವರೆ. ಗಡಿಯಾರದ ಮುಳ್ಳು ನಿಂತಿದೆಯೋ ನಡೀತಿದ್ಯೋ ಅಂತ ಆ ಮಬ್ಬುಗತ್ತಲಲ್ಲಿ ನಂಗೆ ಸಂಶಯ ಬರೋದ್ರೊಳಗೆ ಪ್ರಕೃತಿ ಕರೆಗಾಗಿ ಹಾಸಿಗೆಯಿಂದೆದ್ದೆ. ಕರಾಗ್ರೆ ವಸತೇ, ಸಮುದ್ರವಸನೇ.. ಯಂತ ಪ್ರಾತಃಸ್ಮರಣೆಗಳು ಎಂದಿನಂತೆ ತಮ್ಮ ಕೆಲಸ ಮಾಡಿದವು. "ನಾವೂ ಬರ್ತೀವಿ, ನಿನ್ನ ಬ್ಯಾಗ ಬಂಧನದಿಂದ ಬಿಡಿಸು" ಅಂತ ಬ್ರಷ್ಷು, ಸೋಪುಗಳೂ ಹೇಳಿದಂತಾಯ್ತು. ಸರಿಯೆಂದು ಆ ಸಹಚರರೊಂದಿಗೆ ಮುಖಮಾರ್ಜನೆಗೆ ತೆರಳಿದೆ. ಭೋಗಿಯಲ್ಲಿ ಹೆಚ್ಚಿನವರೆಲ್ಲಾ ನಿದ್ರಾದೇವಿಯ ಸವಿಯಪ್ಪುಗೆಯಲ್ಲಿ ಸುಖವಾಗಿದ್ದರಿಂದ ಪ್ರಕೃತಿಯ ಕರೆಗಾಗಿ ಕ್ಯೂನಲ್ಲಿ ನಿಲ್ಲೋ ಪ್ರಮೇಯ ಬರಲಿಲ್ಲ. ದಿನಾ ಸ್ನಾನವಾಗೋವರೆಗೆ ಹನಿ ನೀರೂ ಕುಡಿಯದಂತ ಸಂಪ್ರದಾಯ ಪಾಲಿಸದಿದ್ರೂ, ಮನಸ್ಸಿಗೆ ಸ್ವಲ್ಪ ಕಿರಿಕಿರಿಯಾದ್ರೂ ಅಲ್ಲಿ ಸ್ನಾನದ ಸಾಹಸ ಮಾಡಲಿಲ್ಲ. "ಸಂಚಾರೀ ಶೂದ್ರವದಾಚರೇತ್" ಎಂಬ ಮಾತು ನೆನಪಾಯ್ತು.


ಗಂಟೆ ಐದಾಗ್ತಾ ಬಂತು. ಇನ್ನೂ ಪೂತ್ರಿ ಬೆಳಕು ಹರಿದಿಲ್ಲ. ಆಗ್ಲೇ ಮುಂಚೆ ಹೇಳಿದಂತೆ ಕ್ಯೂ ಬೆಳೆಯೋಕೆ ಶುರು ಆಯ್ತು. ಬೇಗ ಎದ್ದು ತಯಾರಾದ ನಂಗೆ ಇನ್ನೇನು ಕೆಲಸ? ಮತ್ತೆ ಮಲಗುವುದು. ನಿದ್ರಾದೇವಿ ಮತ್ತೆ ಬರಲಾ, ಬಿಡಲಾ ಅಂತ ಆಡುತ್ತಾಳೆ. ನಿದ್ದೆ ಬಂದಾಗ ಹೊಟ್ಟೆ ಹಸಿಯೋದಿಲ್ಲ ಅನ್ನೋ ಸತ್ಯದ ಅರಿವಾದದ್ದು ಆಗಲೇ. ನಿದ್ದೆ ಬರ್ದಿದ್ರೂ ಎದ್ದೇನು ಮಾಡೋದು ಅಂತ ಅಲ್ಲೇ ಹೊರಳಾಟ. ಕಿಟಕಿಯಾಚೆಯ ರಮಣೀಯ ಪ್ರಕೃತೀನ ನೋಡೋದು, ಮಗ್ಗುಲು ಬದಲಾಯಿಸುತ್ತಾ ಕಣ್ಣು ಮುಚ್ಚೋದ್ರಲ್ಲಿ ಸಮಯ ಕಳೀತು.

ಮನೇಲಿ ನಾವೆಲ್ಲಾ ಏಳೋ ಏಳು ಘಂಟೆ ಹೊತ್ತಿಗೆ ಭೋಗಿಲಿರೋ ಜನರೆಲ್ಲಾ ತಯಾರಾಗಿ ಈ ಕ್ಯೂ ಮುಗೀತು.
ಕಾಫಿ, ಟೀ ಅವರು, ಇಡ್ಲಿ, ವಡೆ, ಉಪಮ, ಬ್ರೆಡ್ ಆಮ್ಲೇಟ್ ನವರು ಪ್ಯಾಂಟ್ರಿಯಿಂದ ಬರೋಕೆ ಶುರು ಮಾಡಿದ್ರು.( ಕಾಫಿ, ಟೀ, ನೀರು, ಕೂಲ್ ಡ್ರಿಂಕ್ ನವರು ಇಡೀ ದಿನ ಬರ್ತಾರೆ ಅನ್ನೋದು ಆಮೇಲೆ ತಿಳೀತು ಬಿಡಿ).ನಾವು ವಡೆ, ಉಪಮ ತಂಗೊಂಡ್ವಿ.ಕೋಡು ಬಳೆಯಂತಿದ್ದ ೨ ವಡೆ, ಸೌಟು ಉಪಮಾ ನೋಡಿ ಅಳಬೇಕೋ ನಗಬೇಕೋ ಗೊತ್ತಾಗ್ಲಿಲ್ಲ.ಇದನ್ನು ತಗಂಡ್ರೆ ನಾನೂ ಉಚಿತ ಅಂತ ಜೊತೆಗಿದ್ದ ಸಾಸು ಸ್ಯಾಚೆ ಆಣಕಿಸಿದಂತಾಯ್ತು. ತಿಂದ ಶಾಸ್ತ್ರ ಮುಗಿಸಿದ ನಾವು ಮತ್ತೆ ಹಿಂದಿನ ರಾತ್ರೆಯಂತೆ ಹರಟತೋಡಗಿದೆವು. ಹಗಲೆಲ್ಲಾ ಕೆಳಗಿನ ಬರ್ತ್ನಲ್ಲಿ ಕೂತು ಹರಟೋದು, ಮಲಗಬೇಕು ಅನ್ನಿಸಿದ್ರೆ ಮಧ್ಯದ ಬರ್ತ್ ಬಿಚ್ಚಿ ಅಥವಾ ಮೇಲಿಂದಕ್ಕೆ ಹತ್ತಿ ಮಲಗೋದು.. ಇದೇ ರೈಲಿನ ಬಹುತೇಕರಂತೆ ನಮ್ಮ ಘನಂದಾರಿ ಕೆಲಸ ಆಯ್ತು. ಇಸ್ಪೀಟಾಡೋರು, ಬರ್ತಲ್ಲಿ ಕೂತೋ , ಮಲಗಿಯೋ ತರಹೇವಾರಿ ಪುಸ್ತಕ ಓದೋರು, ಕಾಲಕಾಲಕ್ಕೆ ಭಜನೆ ಮಾಡೋ ಅಜ್ಜಿಯರು, ಕುಣಿದಾಡುತ್ತಿದ್ದ ಮಕ್ಕಳು ಹೀಗೆ ಹಲವಾರು ತರದವರು ನಂ ಭೋಗಿಲಿದ್ರಿಂದ ಭಾರತದ ಸಣ್ಣ ತುಣುಕೊಂದು ಒಂದು ಕಾಲದಿಂದ ಇನ್ನೊಂದಕ್ಕೆ, ಒಂದು ಪ್ರದೇಶದಿಂದ ಇನ್ನೊಂದಕ್ಕೆ ರೈಲೆನ್ನೋ ಚುಕುಬುಕು ವಾಹಕದಲ್ಲಿ ಹೋಗ್ತಿದೆಯೇನೋ ಅನ್ನಿಸ್ತಿತ್ತು.

ಹಿಂದಿನ ದಿನ ರಾತ್ರಿಯೇ ಕರ್ನಾಟಕ ದಾಟಿ ಆಗಿದ್ದರಿಂದ ಆಂರ್ಧದ ತರಾವರಿ ಬೋರ್ಡುಗಳು ಕಾಣುತ್ತಿದ್ದವು. ಸೆಖೆಯೂ ಏರತೊಡಗಿತ್ತು. ದೆಲ್ಲಿ ದಂಪತಿ ತಾವು ತಂದಿದ್ದ ರೊಟ್ಟಿ ತಿಂದರು. ಬೆಂಗಳೂರಿನ ಅಣ್ಣನ ಜೊತೆ ಮಜಾ ಮಾಡಲು ಬಂದಿದ್ದ ನೋಯ್ಡಾ ಹುಡುಗ ಹಿಂದಿನ ದಿನದ ರೈಲು ತಪ್ಪಿಸಿಕೊಂಡು ನಮ್ಮ ರೈಲಿಗೆ ಬಂದಿದ್ದ. waiting list ಅಲ್ಲಿ ಇದ್ದಿದ್ದರಿಂದ ಅವನ ಸ್ಥಿತಿ ಅತಂತ್ರವಾಗಿತ್ತು. ನಮ್ಮ ಭೋಗಿಯಲ್ಲಿ ನಮ್ಮೆದುರ ಸೀಟು ಖಾಲಿ ಇದ್ದುದರಿಂದ, ರಾತ್ರಿಯಿಡೀ ಟಿ.ಟಿ ಚೆಕಿಂಗ್ ಗೆ ಬರದಿದ್ದರಿಂದ ಅವರೂ ನಮ್ಮೊಡನೆ ಖುಷಿಯಾಗಿ ಕೂತಿದ್ದರು. ಲೌಡು ಸ್ಪೀಕರು ಅಳವಡಿಸಿದ ಅವನ ಮೊಬೈಲಲ್ಲಿ ಪಂಜಾಬಿ ಹಾಡು ಕೇಳುತ್ತಾ, ಹರಟುತ್ತಾ, ಪ್ರಕೃತಿ ಸೌಂದರ್ಯ ವೀಕ್ಷಿಸುತ್ತಾ ಕಾಲ ಕಳೆಯೋ ಹೊತ್ತಿಗೆ ಮಧ್ಯಾಹ್ನ ಆಯ್ತು. ಹೊಟ್ಟೆ ಚುರುಗುಟ್ಟೋಕೆ ಶುರು ಆಯ್ತು.ಸರಿ ಅಂತ ಪ್ಯಾಂಟ್ರಿಯವರು ತಂದ ರೈಲಿನ ವೆಜ್ ಬಿರಿಯಾನಿಯನ್ನು ತಿಂದೆ. ಅದು ಎಷ್ಟು ಚೆನ್ನಾಗಿತ್ತು ಅಂದ್ರೆ ರಾತ್ರೆ ರೈಲಲ್ಲಿ ಏನೂ ತಿನ್ನಬಾರದು ಅನ್ಸೋಕೆ ಶುರುವಾಯ್ತು ಅದರ ರುಚಿಯಿಂದ. ಬೆಲೆಗೆ ಅಷ್ಟೆಲ್ಲಾ ಹೆದರುತ್ತಿರಲಿಲ್ಲ ನಾನು. ಅದರ ಅನುಭವವೂ ಆಯಿತು.

ಆಂದ್ರದಲ್ಲಿ ಆಡು ಸಾಕುತ್ತಾರೆ. ನಮ್ಮಲ್ಲಿ ದನ ಎಮ್ಮೆಗಳಂತೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ದನ, ಪಂಜಾಬಿನಲ್ಲಿ ಎಮ್ಮೆ. ಹೀಗೆ ರೈಲಲ್ಲಿ ಕೂತಂಗೇನೆ ಬೇರೆ ಬೇರೆ ಸಂಸ್ಕೃತಿಗಳ ದರ್ಶನ ಆಯ್ತು.ರೈಲಿನುದ್ದಕ್ಕೂ ಬತ್ತಿದ ವಿಶಾಲ ನದಿಗಳು, ಅವುಗಳ ಅಗಾಧ ಮರಳುಹಾಸುಗಳು, ಖಾಲಿಯಾದ ತೊರೆಗಳನ್ನು ನೋಡಿದಾಗ ವರುಣನಿಗೆ ಹಿಡಿಶಾಪ ಹಾಕುವಂತೆ ಅನಿಸುತ್ತಿತ್ತು. ಶಿಥಿಲಾವಸ್ಥೆಯಲ್ಲಿದ್ದ ಜನರಿಲ್ಲದ ಹಳೇ ಮನೆಗಳು ಹಂಚಿಲ್ಲದೇ , ಕಿಟಕಿ ಬಾಗಿಲಿಲ್ಲದಿದ್ದರೂ ತಮ್ಮ ಅಸ್ತಿತ್ವ ಕಾಯ್ದುಕೊಂಡು ಅರಿಯದ ಯಾವುದೋ ಪುರಾತನ ಕಾಲಕ್ಕೆ, ನೋವು ನಲಿವುಗಳಿಗೆ ಸಾಕ್ಷಿಯಾದಂತಿದ್ದವು.ಸಂಜೆಯಾಗುತ್ತಿದ್ದಂತೆ ಕವಿದ ದಟ್ಟ ಮೋಡಗಳು ಎಲ್ಲೋ ಭಾರಿ ಮಳೆಯಾಗುತ್ತಿರೋ ಸೂಚನೆ ನೀಡುತ್ತಿದ್ದವು. ಆ ಮಳೆ ಇಲ್ಲಾದ್ರೂ ಬರಬಾರದೇ, ಬತ್ತಿರೋ ಈ ತೊರೆಗಳನ್ನ ತುಂಬಿಸಬಾರದೇ ಅನಿಸುತಿತ್ತು. ಸುಮಾರು ಸಮಯದ ನಂತರ ರೈಲ ಮೇಲೂ ಬಿದ್ದ ಕೆಲ ಮಳೆ ಹನಿಗಳಿಂದ ಸ್ವಲ್ಪ ತಂಪೆನಿಸಿದ್ರೂ ಆಮೇಲೆ ಅದರ ಸುಳಿವೂ ಇಲ್ಲ.ಸೆಖೆಯೂ ವಿಪರೀತ ಏರತೊಡಗಿತ್ತು. ಇದರ ಮಧ್ಯೆ ಬರುತ್ತಿದ್ದ ಕಾಫಿ, ಟೀ ಯವರು, ಕೀ ಚೈನು, ಪುಸ್ತಕ ಮಾರುವವರು ಆ ಸೆಖೆಗೇ ಹೊಂದಿಕೊಂಡು ಇದುವೇ ಇಲ್ಲಿನ ಜೀವನ ಎಂದತಾಗುತ್ತಿತ್ತು..

ಫ್ಯಾನುಗಳು ತಿರುಗುತ್ತಿವೆ. ಆದರೂ ಸ್ವಲ್ಪ ತಂಪಿಲ್ಲ. ನಮ್ಮ ರೈಲು ಸೂಪರ್ ಫಾಸ್ಟ ಆದ್ದರಿಂದ ಬರೀ ೭ ನಿಲ್ದಾಣಗಳಲ್ಲಿ ಮಾತ್ರ ನಿಲ್ಲಿಸುವುದಾಗಿತ್ತು. ನಿರಂತರ ಸಂಚಾರದಿಂದ ಭೋಗಿಯೂ ಬಿಸಿಯೇರತೊಡಗಿತ್ತು. ಬಾಣಲೆಯ ಹತ್ತಿರ ನಿಂತಂತಹ ಅನುಭವ. ದೆಲ್ಲಿಯಲ್ಲಿ ಇನ್ನೂ ಸೆಖೆ ಅನ್ನೋ ದೆಲ್ಲಿ ದಂಪತಿಗಳ ಎಚ್ಚರಿಕೆ ಮಾತಿಂದ ನಮಗೆ ಗಾಯದ ಮೇಲೆ ಉಪ್ಪು ಸುರಿದಂತಾಯ್ತು


ಆಂದ್ರಕ್ಕೆ ಹೋಲಿಸಿದರೆ ಮಹಾರಾಷ್ಟ್ರ ಕಾಡುಗಳು ಸ್ವಲ್ಪ ತಂಪು. ಅಂದು ಸಂಜೆ ರೈಲು ಹತ್ತಿದ ಮಹಾರಾಷ್ಟ್ರದ ಕುಟುಂಬ ಇಡೀ ರೈಲು ತಮ್ಮದೇ ಅನ್ನುವಂತೆ ವರ್ತಿಸತೊಡಗಿದರು.ಕಾಡಿನ ಶಾಂತ ಸ್ವಭಾವ ಅವರಲ್ಲಿ ಸ್ವಲ್ಪವೂ ಇದ್ದಂತೆ ಕಾಣಲಿಲ್ಲ. ಅವರ ೧೬ ಸೀಟು waiting ನಲ್ಲಿ ಇತ್ತು. ಇದ್ದವರು ೨೭ ಮಂದಿ. ಆದರೂ ಪೂರ್ತಿ ಗಲಾಟೆ. ನಮ್ಮನ್ನೂ, ದೆಲ್ಲಿ ದಂಪತಿಗಳನ್ನೂ ಬೇರೆ ಸೀಟಿಗೆ ಹೋಗಿ ಅಂತ ಎಬ್ಬಿಸಲು ನೋಡುತ್ತಿದ್ದರು. ನಾವು ಅದಕ್ಕೆ ಸೊಪ್ಪು ಹಾಕದಿದ್ದರೂ, ನೋಯ್ಡಾ ಹುಡುಗರು ಮಾತ್ರ ಬೇರೆ ಭೋಗಿಗೆ ಹೋಗುವಂತಾಯಿತು. ಎಲ್ಲಾ ಝಣ ಝಣ ಕಾಂಚಾಣ.. ಟಿ.ಟಿ ಕೃಪೆ. ಅವರು ಎಲ್ಲೆಡೆ ಸಾಮಾನು ಎಳೆಯುವುದು, ಜೋರು ಮಾತು, ಕೆಳಗಿನ ಬರ್ತ್ನಲ್ಲಿ ಆರಾಮಾಗಿ ಕೂರಲಾಗದಷ್ಟು ತಾವೇ ಕೂತು ನಮ್ಮೆಲ್ಲರ ನೆಮ್ಮದಿ ಕೆಡಿಸಿದ್ದರು. ಅದುವರೆಗೆ ಆರಾಮಾಗಿದ್ದ ನಮಗೆ ಆಗ ಬಿಸಿ ತುಪ್ಪ ಬಾಯಿಗೆ ಹಾಕಿಕೊಂಡಂತ ಅನುಭವ. ಎದ್ದು ಹೋಗಿ ಅನ್ನೋಕಾಗುತ್ತಾ ? ನೆಲದಲ್ಲೇ ಹಾಸಿ ಮಲಗಿದ ಅವರು ರಿಸರ್ವೇಷನ್ ಇಲ್ಲದ ಪ್ರಯಾಣ ಎಷ್ಟು ಕಷ್ಟ ಅಂತ ನೆನಪಿಸಿದ್ರು.

ಹೇಗೋ ಮಾರನೇ ದಿನ ಬೆಳಗಾಯಿತು. ಕೆಳಗೆ ನೋಡಿದರೆ ನಮ್ಮ ಕಾಲಿಡಲೂ ಆಗದಂತೆ ಮಲಗಿದ್ದಾರೆ. ಹೇಗೋ ಮೂಲೆಯಲ್ಲಿದ್ದ ಚಪ್ಪಲಿ ಹುಡುಕಿ ನಿನ್ನೆಯಂತೆ ನಿತ್ಯಕರ್ಮ. ಮಥುರ, ಆಗ್ರಾಗಳನ್ನು ನಿನ್ನೆಯೇ ನೋಡಿದ್ದರಿಂದ ದೆಲ್ಲಿ ಬರುವುದರ ನಿರೀಕ್ಷೆಯಲ್ಲೇ ಬೆಳಗಾಗಿತ್ತು. ಪರಿಚಯವಾಗಿದ್ದ ದೆಹಲಿ ದಂಪತಿ ಚೂಡಾ(ಒಣ ಅವಲಕ್ಕಿಗೆ ಹಸಿಗಡಲೆ ಮೆಣಸು ಹೆಚ್ಚಿ ಹಾಕಿ ತಯಾರಿಸಿದ್ದು) ತಿನ್ನುತ್ತಿದ್ದರು. ನಮಗೂ ಸ್ವಲ್ಪ ನೀಡಿದರು. ನಾವೂ ನಾವು ತಗೊಂಡ ವೇಫರ್ಸ್ ನೀಡಿದೆವು. ಎರಡೂ ರುಚಿಯಾಗಿತ್ತು. ಅಂತೂ ಬೆಳಗ್ಗೆ ೯:೩೦ ಕ್ಕೆ ದೆಲ್ಲಿ ಬಂತು. ಮುಖ, ಕೈಗಳಿಂದ ಇಳಿಯುತ್ತಿದ್ದ ಬೆವರ ಧಾರೆ ಒರೆಸುತ್ತಾ ಸೆಖೆಯ ನಗರಿ ದೆಲ್ಲಿಯಲ್ಲಿಳಿದೆವು. ದೇಶದ ರಾಜಧಾನಿ ದಿನನಿತ್ಯ ಬರುವ ಸಾವಿರಾರು ಪ್ರವಾಸಿಗರಂತೆ , ಕೋಟ್ಯಾಂತರ ನಿವಾಸಿಗರಂತೆ ಬೇಸರವಿಲ್ಲದೆ ಬರಮಾಡಿಕೊಂಡಿತು.

No comments:

Post a Comment