Sunday, September 11, 2011

"ಕುಂದಾಪ್ರುದ ಕಥೆ"


ಸಿಟೌಟಿನ ಗೋಳಾಕೃತಿಯ ಕಮಾನಿನೊಳಗೆ ಮಿನಿಗೋಲದಂತೆ ಎದುರಿನ ಗುಡ್ಡ ಕಾಣ್ತಾ ಇತ್ತು. ಹತ್ತಿರ ಕಾಣೋ ಮರಗಳೆಲ್ಲಾ ಗಿಳಿಹಸಿರಾಗಿ, ದೂರದ್ದೆಲ್ಲಾ ಗಾಢ ಹಸಿರಾಗಿ ಹೊಳಿತಾ ಇತ್ತು. ಅರರೇ, ಗಿಳಿ ಹಸಿರಿಂದ ಗಾಢಕ್ಕೆ, ಗಾಢದಿಂದ ಗಿಳಿಹಸಿರಿಗೆ ಬದಲಾಗ್ತಾ ಇದೆ.ಓ, ಸೂರ್ಯನ ಕಣ್ಣಾಮುಚ್ಚಾಲೆ. ಅಲ್ಲಲ್ಲ, ಸೂರ್ಯ ಮತ್ತು ಮೋಡಗಳ ಆಟ. ಗುಡ್ಡದ ಒಂದು ಬದಿಯಿಂದ ಮಂಜಾಗಿ ಮೇಲೇರುತ್ತಿದ್ದ ಪಾವನಗಂಗಾಬಿಂದುಗಳು ಮಳೆಯಾಗಿ ಕೊಳೆ ತೊಳೆಯೋದು ನಾವೇ ಅನ್ನುತ್ತಿದ್ದವು. ಮತ್ತೊಂದು ಬದಿ ಗುಡ್ಡ ಕಡಿದು ಲಾವಂಚ ಹಾಕಿದ್ದರು. ಮಧ್ಯೆ ಅಲ್ಲಲ್ಲಿ ಶುಭ್ರಾಕಾಶದಲಿನ ನಕ್ಷತ್ರಗಳಂತೆ ಬಿಳಿ ಕೊಟ್ಟೆ ಕಟ್ಟಿದ ರಬ್ಬರ್ ಸಸಿಗಳು ಕಂಗೊಳಿಸುತಿದ್ದವು. ಆ ಬದಿಯ ದಟ್ಟ ಕಾಡಿಗೆ ಹೋಲಿಸಿದರೆ, ಈ ಬದಿಯ ಲಾವಂಚ ಬೊಕ್ಕ ತಲೆಯಂತೆ, ಒಂದಕ್ಕಾಗಿ ಇನ್ನೊಂದನ್ನು ಬಿಡಬೇಕಾದ ಅನಿವಾರ್ಯತೆಯನ್ನು ಧ್ವನಿಸುವಂತಿದ್ದವು. ಕುಳಿತ ಕಡೆಯಿಂದ ಕಮ್ಡ ಜೋಡಿ ತೆಂಗಿನ ಮರಗಳು ಗುಡ್ಡಕ್ಕಿಂತ ಅರ್ಧ ಅಡಿ ಹೆಚ್ಚಾದಮ್ತೆ ಅನಿಸುತಿದ್ದವು. ದೂರದ ಅಡಿಕೆ ಮರದ ತುದಿಯಲ್ಲೇನೋ ಕೆಂಪು.. .ಆಗಲೇ ಹಣ್ಣಾಯಿತೇ ಅಡಿಕೆ? ಓ ಅದು ಅಡಿಕೆ ಹಣ್ಣಲ್ಲ. ಕೆಂಬಣ್ಣದ ಜೋಡಿ ಹಕ್ಕಿ. .ಅಗೋ, ಪುರ್ರನೆ ಹಾರಿ ಅದೆಲ್ಲಿಗೋ ಮರೆಯಾಯ್ತು. ಪೇರಳೆ ಮರದಿಂದ ಹಾರ್ತಾ ಇರೋ ಗಿಳಿ ಹಿಂಡು, ಸಂಪಿಗೆ ಮರದತ್ರ ಕಾಳು ಹೊಕ್ತಿರೋ ಕಾಡು ಪಾರಿವಾಳ, ಅಲ್ಲೇ ಹಿಂದೆ ಪಪ್ಪಾಳೆ ಮರದತ್ರ ಬಂದ ಕೆಂಬೂತ, ಈ ಹಳೇ ಮಾವಿನ ಮರದ ಮೇಲೆ ಕೂತ ಕುಟುರುಶೆಟ್ಟಿ ಗುಂಪು, ಮಕರಂಧ ಹೀರ್ತೀರೋ ಉದ್ದಬಾಲದ ಸಣ್ಣದೇಹದ ಜೋಡಿ ಕರಿಹಕ್ಕಿಗಳು.. ಹೀಗೆ ಹಲವಾರು ಹೆಸರರಿಯದ ಹಕ್ಕಿಗಳು ತಮ್ಮದೇ ಲೋಕ ಸೃಷ್ಟಿಸಿದ್ದವು..



ಐದು ದಿನ ಆಯ್ತು. ಯಾರೂ ಕೆಲಸದವರಿಲ್ಲ. ಮಕ್ಕಳೆಲ್ಲಾ ಹೊರಗೆ ಓದ್ತಾ ಇದಾರೆ. ಕೈ ಪೆಟ್ಟಾಗಿ ತಂಗೂ ಕೆಲಸ ಮಾಡೋಕೆ ಆಗ್ತಾ ಇಲ್ಲ. ಇದು ಪೂರ್ತಿ ಸರಿ ಆಗೋಕೆ ಆರು ತಿಂಗಳಾದ್ರೂ ಬೇಕು ಅಂದಿದ್ರು ಕೋಟೇಶ್ವರದ ಡಾಕುಟ್ರು. ಗುಡ್ಡಕ್ಕೆ ಮುತ್ತಿಕ್ತಿದ್ದ ಬಿಳಿ ಮೋಡ ನೋಡ್ತಾ ಇದ್ದ ರಾಮಯ್ಯನ ಕಣ್ಣೆದ್ರು ನಿರಾಸೆಯ ಕಾರ್ಮೋಡ ಕವಿದಿತ್ತು. ಯಾವಾಗ ಫೋನ್ ಮಾಡಿದ್ರೂ ನಾಳೆ ಬತ್ತೆ ಸಾವ್ಕಾರ್ರೆ ಅಂಬುದು ಆ ರಾಮಿ. ನಾಟಕ್ಕೆ ಹೇಳಿ ಮರ ತಗಂಡೋದ ಆ ನಟರಾಜ ಪತ್ತೆ ಇಲ್ಲೆ. ಆ ಆಚಾರಿನೂ ಬರೂದಿಲ್ಲೆ. ಈ ಸೂಲ್ಯ ಸೋಮ ಎಲ್ಲ ಹ್ವಾದ್ದು ಎತ್ಲಗೆ? ಸೂಲ್ಯ ಸ್ವಂತ ಗೆದ್ದೆ, ತ್ವಾಟ ಮಾಡ್ಕಂಡಿದ್ನಂಬ್ರು. ಅವ್ನ ಮಗ ಅದೆಂಥದೋ ಡಿಪಲೋಮ ಮಾಡಿ ಬೆಂಗ್ಳೂರು ಸೇರ್ಕಂಡಿದ. ಹಂಗಾಗಿ ಅವನೂ ಕಾಣೆ. ಆ ಮಂಜುಳ ಮದ್ವೆ ಆದ್ಮೇಲೆ ಗೇರುಬೀಜದ ಫ್ಯಾಕ್ಟರಿ ಸೇರ್ಕಂಡಿದ್ಲು. ಮುಂಚೆ ನಮ್ಮನೀಲೆ ಆಯ್ಕಂಬ ಜನ ಇದ್ರು. ಈ ನಕ್ಸಲ್ ಕಾಟದಲ್ಲಿ ಘಟ್ಟ ಇಳಿಯಕೇ ಹೆದ್ರುತ್ರು ಆಳು. ಅಂತಾದ್ರಾಗೆ ಹೊಸ ಆಳ್ನ ಎಲ್ಲಿಂದ ಹುಡೀಂಕ ಬಪ್ಪುದು? ಹಿಂಗೆ ಆದ್ರೆ ಕಥೆ ಎಂತ. .ಆ ಲಾವಂಚದ ಕೆಲಸಕ್ಕೆ ಆ ಮಲಬಾರಿ ಅಷ್ಟೊಂದು ಜನೀನ ಕರ್ಕಂಬತ್ತ. ನಮ್ ಕೆಲ್ಸಕ್ಕೆ ಯಾರೂ ಬರೂದಿಲ್ಲೆ. ಗಂಟಿಗೆ ಹುಲ್ಲು ಕೊಯ್ದು ಹಾಕೂಕು ಜನ ಇಲ್ಲೆ. ಒಳ್ಳೇ ಗೋಳು ಇದು ಅಂಥ ಶಾಪ ಹಾಕ್ತಾ ಕಾಫಿ ತಂದ್ಕೊಟ್ರು ಸಾವ್ಕಾಣ್ರಿ ಸುಬ್ಬಮ್ಮ



ಮುದೂರು ಹತ್ರ ರಬ್ಬರ್ ಹಾಕಿದ್ನಲಾ ಮಲ್ಬಾರಿ, ಹಾ ಅವ್ನೆ ಮೋಚು.. ಅಂವ ಖರ್ಚು ಎಲ್ಲಾ ಕಳೆದು ದಿನಕ್ಕೆ ೨ ಸಾವಿರ ಆದಾಯ ಬತ್ತಂಬ್ರು ಅದ್ರಿಮ್ದ. ಅಂದ್ರೆ ವರ್ಷಕ್ಕೆ ೬೦,೦೦೦. ಅಲ್ದೇ ಆ ಪ್ಲಾಸ್ಟಿಕ್ ಸಂಗ್ರಹಣೆ ಮಡೋ ಮಡಿಕೇನೂ ಇವ್ನೇ ಮಾಡ್ಕಂಡ್ರೆ ದಿನಕ್ಕೆ ೫೦೦ ಜಾಸ್ತಿ ಉಳೀತಂಬ್ರು..ಅದಕ್ಕೆ ನವೆಂಬರಲ್ಲಿ ಅರ್ಜಿ ಹಾಕೂಂಕಬ್ರು. ಸರ್ಕಾರದ ರಬ್ಬರ್ ಬೋರ್ಡಿಂದ ಹೆಕ್ಟೇರ್ ಗೆ ೨೪,೦೦೦ ಕೊಡ್ತಂಬ್ರು, ಜೊತೆಗೆ ವಿಮೇನೂ ಇರ್ತಂಬ್ರು. ಈ ಲಾವಂಚದೆಣ್ಣೆಗೆ ಹ್ವಾದ ವರ್ಷ ಲೀಟರಿಗೆ ೧೨,೦೦೦ ದವರಿಗೂ ಇತ್ತು. ಕಮ್ಮಿ ಅಂದ್ರೂ ೮೦೦೦ ಕ್ಕೆ ಮೋಸ ಇರ್ಯ್ಲಂಬ್ರು. ಅದಕ್ಕೆ ಹಾಳು ಬೋಳು ಗುಡ್ಡ ಕಡಿದು ಲಾವಂಚ ಹಾಕಂಬವ್ಕೆ ಗೇಣಿ ಕೊಟ್ಟಿದ್ದು. ಮಧ್ಯೆ ಗೇರು ಗಿಡ ಅವ್ರೆ ನೆಟ್ಕೊಡ್ತ್ರು. ಜೊತಿಗೆ ಒಂದಿಷ್ಟು ಅಂತ ದುಡ್ಡೂ ಕೊಡ್ತ್ರು. ಅಂತ ಲೆಕ್ಕಾಚಾರ ಹಾಕ್ತಾ ಇದ್ದ ರಾಮಯ್ಯಂದು. ಎಲ್ಲಿಂದಲೋ ಬಂದು ಬಿದ್ದ ಮಳೆ ಹನಿಗೆ ಅವ್ರು ಈ ಲೋಕಕ್ಕೆ ಬಂದ್ರು. ರಬ್ಬರಿಗೆಲ್ಲ ಹುಳ ಬೀಳುತಾ ಇತ್ತು. ಅದ್ಕೆ ಔಷಧಿ ಹೊಡ್ಸುಕು, ಗೊಬ್ಬರ ಹಾಕ್ಸೂಕು. ಜನ ಇಲ್ದೇ ಹೆಂಗಪಾ ಹೇಳಿ ತಲೆಬಿಸಿ. ಜೊತಿಗೆ ಈ ಬಿಸಿಲು ಮಳೆಯಿಂದ ಕೊಳೆ ಕಾಟ ಬೇರೆ. ನೀರ್ಗೊಳೆ, ಹಾರ್ಗೊಳೆ ಅಯ್ದೇ ಇದ್ರೆ ಸಾಕಪಾ ಅಂತ ಆನೆಮೂತಿಯವ್ನ ಬೇಡ್ಕ್ಯಂಡ್ರು ಒಂದ್ಸಲ. ಬೆನ್ನು ನೋವು, ಇನ್ನೆರ್ಡು ಮೂರು ದಿನದಂಗೆ ಬತ್ತೆ ಅಕಾ ಅಂದಿದ್ನಂಬ್ರು ರಾಜ. ಗಣಪತಿ ಹಬ್ಬಕ್ಕೆ ಹೇಳಿ ಮನಿಗೆ ಬಂದಿದ್ದ ಮಗನ್ನ ಬೈಕು ಕೊಟ್ಟು ಓಡ್ಸಿದ್ದೆ ನಿನ್ನೆ ಎಲ್ಲಾ. ಎಂತಾತ್ತು ಕಾಂಬ ಇವತ್ತು. ಗಂಟೆ ಒಂಭತ್ತಾತ ಬಂತು. ಈ ಹಾಳು ದೇವ್ರ ಪೂಜೆ ಮಾಡೂಕು ಆತಿಲ್ಲೆ ಈ ಕೈಯಲ್ಲಿ. ಕಲ್ಲು ಕುಟಕಂಗೆ ಕಾಯಿ ಒಡ್ದಿಲ್ಲೆ, ಬೊಬ್ಬಯ್ರಂಗೆ ಕೋಳಿ ಕೊಟ್ಟಿಲ್ಲೆ ಅದಕ್ಕೆ ಒಡೇರಿಗೆ ಹಿಂಗಾದ್ದು ಹೇಳಿ ಹೇಳ್ತ್ರಂಬ್ರು ಕೂಲಿ ಜನ.. ಎಂಥ ಕರ್ಮವೋ, ಇಷ್ಟೆಲ್ಲಾ ಕಷ್ಟದ ಮಧ್ಯೆ ಪೂಜೆನಾದ್ರೂ ಎಂಥಕೆ ಅಂತನೂ ಅನುಸ್ತು ರಾಮಯ್ಯಂಗೆ. ಮಗನ ಫ್ರೆಂಡು ಸಾಗರದಿಂದ ಬತ್ತಾ ಇದ್ನಂಬ್ರು ಇವತ್ತು. ಮೂರ್ನಾಕು ದಿನ ಆಯ್ಕಣಿ ಹೇಳಿ ಹೇಳುಕು. ಅವ ಇರವರಿಗಾದ್ರೂ ಎಂಥಾರು ಗೆಲುವಾತ್ತ ಕಾಂಬ. ಏ ಸುಬ್ಬು,ನೀರು ಕಾದಿತ್ತಾ? ಬಾಗ್ಲು ಹಾಯ್ಕಣಿನಿ, ನಾ ಘಂಟೀನ ಅತ್ಲಾಗೆ ಬೇರ್ಸಿ, ಎರಡು ಹೂ ಕೊಯ್ಕಂಬತ್ತೆ . ಗಿಡ ತಿಂಬುಲೆ ನುಗ್ಗಿತ್ತು ಇಲ್ಲಿ ಹೇಳಿ ಎದ್ದು ಹೊರಟ್ರು ರಾಮಯ್ಯ.

No comments:

Post a Comment