Wednesday, September 3, 2014

ನಾನೋದಿದ ಪುಸ್ತಕ: ಯಾನ

ನಾನೋದಿದ ಪುಸ್ತಕ: ಯಾನ

ಸತ್ಯವನ್ನೋದ್ರಲ್ಲಿ ಸಾರ್ವಕಾಲಿಕ ಸತ್ಯವನ್ನೋದಿರುತ್ತಾ ಅನ್ನೋದು ಸ್ವಲ್ಪ ಮುಂಚೆಯಿಂದ ಕಾಡುತ್ತಿದ್ದ ಪ್ರಶ್ನೆಗಳಲ್ಲೊಂದು. ಅಂದರೆ ಎಲ್ಲರಿಗೂ ಎಲ್ಲ ಕಾಲದಲ್ಲೂ, ಎಲ್ಲಾ ದೇಶದಲ್ಲೂ ಇದೇ ಸತ್ಯ ಅನಿಸುವಂತದ್ದು ? ನಂಗೆ ಸತ್ಯವೆನಿಸಿದ್ದು ನಿಮಗೆ ಸತ್ಯವೆನಿಸಲೇ ಬೇಕಾ ? ನಿಮಗೆ ಸುಳ್ಳೆನಿಸಿದ್ದು ನನಗೆ ಸತ್ಯವೆನಿಸಲೇಬಾರದಾ ? ನಮ್ಮಿಬ್ಬರಿಗೂ ಸತ್ಯವೆನಿಸಿದ್ದು, ಪ್ರಪಂಚದ ಇನ್ನೊಂದು ಮೂಲೆಯಲ್ಲಿದ್ದವನಿಗೂ ಸತ್ಯವೆನಿಸಬೇಕಾ ? ಈ ಕಾಲಕ್ಕೆ ಸತ್ಯವೆನಿಸಿದ್ದು ಭೂತದಲ್ಲಿ ಹುಚ್ಚು ಕಲ್ಪನೆಯಂತೆ ಅನಿಸಿ, ಭವಿಷ್ಯದಲ್ಲಿ ವಿವೇಚನೆಯಿಲ್ಲದ ಮಂಗಾಟದಂತೆಯೂ ಅನಿಸಬಾರದೇಕೆ ? ವಿಷಯದ ಅರಿವಿಲ್ಲದವನ ಬಳಿ ನಾನು ಹೇಳುವುದು ಸತ್ಯವಾದರೂ ಸುಳ್ಳೆನೆಸಿದಂತೆಯೇ , ಸುಳ್ಳೇ ಸತ್ಯದಂಎ ಭಾಸವಾಗೋ ಸಾಧ್ಯತೆಯೂ ಇಲ್ಲದಿಲ್ಲ.ಇನ್ನು  ಕಾಲವೆಂಬುದು ಸರಳ ರೇಖೆ ಅನ್ನೋ ಭಾವ ಹೊಡೆದು ಹಾಕಿ ಅದೊಂದು ಸುರುಳಿ ಸುತ್ತಿಕೊಂಡಿರೋ ಸರ್ಪದಂತೆಂಬ ವೈಜ್ನಾನಿಕ ಸಿದ್ದಾಂತದ ಪ್ರಕಾರ ನೋಡೋದಾದ್ರೆ ಕಾಲದಲ್ಲಿ ಕತೃ, ಕರ್ಮಗಳೆಂಬುದು,  ಭೂತ, ವಾಸ್ತವ, ಭವಿಷ್ಯಗಳೆಂಬ ಕಲ್ಪನೆಗಳೇ ಅಲ್ಲೋಲ ಕಲ್ಲೋಲ. ವಾಸ್ತವದಲ್ಲಿನ ನಮ್ಮ ಭಾವ, ಪ್ರತಿಜ್ನೆ, ಆಣೆ, ಭಾಷೆಗಳಿಗೆಲ್ಲಾ ನಮ್ಮ ನೆಲೆಯಾಗಿರೋ  ಭೂಮಿಯನ್ನೇ ದಾಟಿದ ಮೇಲೆ ಬೆಲೆಯುಂಟೆ ? ಸರ್ವ ಸಾಕ್ಷಿಯಾದ ಸೂರ್ಯನಿಂದ ಮರೆಯಾದ ಮೇಲೂ ಮೌಲ್ಯವುಂಟೇ ?  ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಮೂಡುತ್ತಾ ಹೋಗತ್ತೆ ಯಾನದ ಪುಟಗಳಲ್ಲಿನ ಪದಗಳಿಗೆ ಕಲ್ಪನೆಗಳ ಗರಿಗಳು ಮೂಡುತ್ತಾ ಸಾಗಿದಂತೆ.

ಯಾನದಲ್ಲಿರೋ ವಿಷಯವೈವಿಧ್ಯ, ಮಾಹಿತಿ ಸಂಗ್ರಹಣೆ ಕನ್ನಡದ ಓದುಗನಾದ ನನ್ನ ಮಟ್ಟಿಗೆಂತೂ  ಒಂದು ಹೊಸ ಅನುಭವ, ಖುಷಿ ಕೊಟ್ಟಿದ್ದು ಸುಳ್ಳಲ್ಲ. ಮೊದಲೇ ಅಂದಂತೆ ನನಗೆ ರುಚಿಸಿದ್ದು ಎಲ್ಲರಿಗೂ ರುಚಿಸಬೇಕೆಂಬ ನಿರೀಕ್ಷೆಗಳಿಲ್ಲದ ಸಾಮಾನ್ಯ ಓದುಗನ ಅನಿಸಿಕೆಯಷ್ಟೇ ಇದು. ಭೂಮಿಯಾಚೆಗಿನ ಜೀವದ ಹುಡುಕುವಿಕೆ ಅನ್ನೋ ವಿಷಯ ಬಾಹ್ಯಾಂತರಿಕ್ಷ ಕ್ಷೇತ್ರದ ಬಗೆಗಿನ ಸಾಹಿತ್ಯದ ಓದುಗರಿಗಾಗಲಿ , ಹಿನ್ನುಡಿಯಲ್ಲಿ ಭೈರಪ್ಪನವರೇ ಹೇಳುವಂತೆ "ವಿಜ್ನಾನ ಸಾಹಿತ್ಯ" ಅನ್ನೋ ಪ್ರಕಾರದ ಇಂಗ್ಲೀಷ್ ಸಾಹಿತ್ಯದ ಕೃತಿಗಳ ಓದುಗರಿಗಾಗಲೀ ಹೊಸತಲ್ಲ. ಸುಮ್ನೇ ಭೂಮಿ ಬಿಟ್ಟು ಇನ್ನೆಲ್ಲೋ ಹೊರಟಿರೋ ನೌಕೆಯ ಕುರಿತ ಕೃತಿ ಅನ್ನೋ ಭಾವ ಕೃತಿಯ ಶೀರ್ಷಿಕೆ ನೋಡಿ ಮೂಡುತ್ತಾದರೂ ಕೃತಿಯಲ್ಲಿರೋದು ಇಷ್ಟೇ ಅಲ್ಲ. ಅಂಟಾರ್ಟಿಕಾ ಇದೆ, ಹಿಮಾಲಯವಿದೆ, ಅವೆರಡರ ನಡುವಿನ ಭಾವನಾತ್ಮಕ, ವೈಜ್ನಾನಿಕ ನೆಲೆಗಟ್ಟಿನ ಹೋಲಿಕೆಗಳಿವೆ. ಬದರೀ ಕೇದಾರಗಳಿವೆ, ಬೆಂಗಳೂರಿದೆ, ಕಪ್ಪು ರಂದ್ರಗಳಿವೆ, ಪ್ಲಾಸ್ಮಾ ಸೆಂಟಾರಿ, warm holes ಗಳ ಕಲ್ಪನೆ ಇದೆ. ಹೇಳಹೋದರೆ ಹತ್ತು ಹಲವು ವಿಷಯಗಳು. ಅಂಡಾಣು, ವೀರ್ಯಾಣು, ಯುಗ್ಮಾಣು(zygote) ಗಳ ಜೀವಶಾಸ್ತ್ರವಿದೆ, ಆಧ್ಯಾತ್ಮವಿದೆ, ಮನಶ್ಯಾಸ್ತ್ರವಿದೆ, ಭಾರತೀಯ ವಾಯುಸೇನೆಯ ನೌಕರರ ಚಿತ್ರಣವಿದೆ. ಆದರೆ ಈ ಎಲ್ಲಾ ಬಿಡಿ ಬಿಡಿ ಮಾಹಿತಿಗಳನ್ನು ಸಂಯೋಜಿಸಿದರೆ ಅದೇ ಒಂದು ಪುಸ್ತಕವಾಗಿಬಿಡುತ್ತಾ ? ಇಲ್ಲವನ್ನುವಂತೆ ಇವೆಲ್ಲವನ್ನೂ ಎಲ್ಲೂ ಅಧಿಕವಾಗದಂತೆ ಹಿಡಿದಿಡೋ ನಿರೂಪಣಾ ಶೈಲಿ, ಒಂದೆರಡು ಬಿಟ್ಟರೆ ಯಾವ ಪಾತ್ರವನ್ನೂ ತುಚ್ಚೀಕರಿಸದೇ ಚಿತ್ರಿಸೋ ಆಯಾಮಗಳಿವೆ. ಮೊದಲೇ ಹೇಳಿದಂತೆ ನಾನು ಭೈರಪ್ಪನವರ ಕಟ್ಟಾಭಿಮಾನಿಯಲ್ಲ. ಮೂರ್ತಿಗಳ ಅನುಯಾಯಿಯೂ ಅಲ್ಲ. ಆ ಪಂಥ, ಈ ಪಂಥ ಅಂತ ತಲೆಕೆಡಿಸಿಕೊಳ್ಳದೇ ಓದುವ ಸಾಮಾನ್ಯ ಓದುಗನಷ್ಟೇ.

ಪುಸ್ತಕ ಹೇಗಿದೆ. ಏನು ಕತೆ ಅಂತ ಈಗಾಗ್ಲೇ ಹೇಳಿಬಿಟ್ಟೆ. ಇನ್ನೇನು ಪುಸ್ತಕ ಓದೋದು ಅಂದ್ಕಂಡ್ರಾ ? ಹಂಗೇನಾದ್ರೂ ಅಂದ್ಕೊಂಡಿದ್ರೆ ಅದು ಖಂಡಿತಾ ತಪ್ಪು. ಪುಸ್ತಕದ ಮೊದಲ ಇಪ್ಪತ್ತು ಪೇಜುಗಳಲ್ಲಿ ನನಗಿದ್ದ ನಿರೀಕ್ಷೆ ಹಠಾತ್ತನೆ ಬದಲಾಯ್ತು. ಇನ್ನೇನು ಕೊನೆಯ ಹದಿನಾರು ಪೇಜುಗಳಿವೆ ಅನ್ನುವಷ್ಟರಲ್ಲಿ ಮತ್ತೆ ತಿರುಗಿತದು. ಏನೋ ಆಯಿತು ಅಂದುಕೊಳ್ಳುವಷ್ಟರಲ್ಲಿ ಕತೆಗೆ ಮತ್ತೇನೋ ಅಂತ್ಯ. ಇದರಲ್ಲಿ ಕತೆಯ ಅಲ್ಲಲ್ಲಿ ಬರುವ ಅನಿರೀಕ್ಷಿತ ತಿರುವುಗಳ ಬಗ್ಗೆ ಹೇಳುತ್ತಿಲ್ಲ. ಕತೆ ಮೇಧಿನಿ, ಆಕಾಶ, ಸುದರ್ಶನ್, ಉತ್ತರಾ, ಯಾದವ್ ಹೀಗೆ ಮುಖ್ಯವಾಗಿ ಐವರ ನಿರೂಪಣೆಯಲ್ಲಿ ಸಾಗುತ್ತದಾದರೂ ಅಲ್ಲಲ್ಲಿ ಬರುವ ಉತ್ತರೆಯ ತಂದೆತಾಯಿ, ಸುದರ್ಶನನನ ಕುಟುಂಬದ ಕಲ್ಪನೆ. ವೈಜ್ನಾನಿಕ ಸಂಶೋಧನೆಗಳು, ಎಡ್ವರ್ಡ್, ಲೀಸಾ, ಎಂಗಾ, ರಜನಿ, ವೆಂಕಟೇಶ್ವರ್, ಎ.ಎಸ್. ಸಾನಿ, ಹೀಗೆ ಹಲವು ಪಾತ್ರಗಳ  ನಿಲುವುಗಳಲ್ಲಿ ಹೊಯ್ದಾಡುತ್ತದೆ. ಮುಂದೇನು ಬರಬಹುದು ಅನ್ನೋ ನಿರೀಕ್ಷೆಯನ್ನ ಹುಟ್ಟು ಹಾಕೋಕೂ ಬಿಡದಂತೆ ಕೆಲವು ಘಟನಾವಳಿಗಳು ಓದಿಸಿಕೊಂಡು ಹೋಗುತ್ತೆ. ಮುಂದೆ ಹೀಗಾಗಬಹುದು ಅಂತ ನಿರೀಕ್ಷೆ ಹೊಡಿಸಿ ಬೋರ್ ಹೊಡಿಸಿದ ಪ್ರಸಂಗಗಳ ನಂತರ ಆಗೋದು ಇನ್ನೊಂದೇ.

ಹಂಗಂತಾ ಇದರಲ್ಲಿದ್ದುದೆಲ್ಲಾ ಇಷ್ಟವಾಯಿತೆಂದಲ್ಲ. ಇದು ಕನ್ನಡ ಸಾಹಿತ್ಯ. ಹಾಗಾಗಿ ಇಲ್ಲಿ ಬಂದಿರೋ ಕೃತಿಗಳಲ್ಲಿ ಈ ಮಟ್ಟಿನ ಹೊಸತನ ತಂದಿದ್ದೇ ಹೆಚ್ಚು ಅಂತ ತೃಪ್ತಿಪಟ್ಟುಕೊಳ್ಳುವ ಹಂತ ದಾಟಿ ವೈಜ್ನಾನಿಕ ಸಾಹಿತ್ಯದ ಸಾಮಾನ್ಯ ಓದುಗನಾಗಿ ನೋಡಿದ್ರೆ ಅನೇಕ ವಿರೋದಾಭಾಸಗಳು ಕಣ್ಣಿಗೆ ರಾಚುತ್ತೆ. ಅಂಟಾರ್ಟಿಕಾ ಪ್ರಸಂಗದಲ್ಲಿ ಆರು ಸಾವಿರ ಮೀಟರ್ ಹಿಮದ ಮೇಲಿನ ನಡಿಗೆ ಅಂತ ಮೊದಲ ಉಲ್ಲೇಖದಲ್ಲಿದ್ದರೆ ಮತ್ತೆ ಬರುವ ಉಲ್ಲೇಖದಲ್ಲಿ ಅದು ನಾಲ್ಕು ಸಾವಿರ ಮೀಟರ್ ಅಂತಾಗಿರುತ್ತೆ ! ತಮ್ಮ ತಾಯಿಗೆ ಅರವತ್ತು ವರ್ಷವಾದರೂ ಇನ್ನೂ ಕಳೆಯಿಂದಿದ್ದಾಳೆ ಅಂತ ಯೋಚಿಸುವ ಮೇಧಿನಿಗೆ ೨೪ ವರ್ಷ, ಆಕಾಶನಿಗೆ ಅವಳಿಗಿಂತ ಮೂರು ವರ್ಷ ಸಣ್ಣ ಪ್ರಾಯ ಅಂತ ಬರುತ್ತೆ. ಇಲ್ಲಿಯವರೆಗೆ ಸರಿ. ಆದ್ರೆ ನಂತರ ಉತ್ತರಾ ನಲವತ್ತು ವರ್ಷಕ್ಕೆ ತಾಯಿಯಾಗೋ ಸಂದರ್ಭ ಅಂತ ಬರುತ್ತೆ. ನಲವತ್ತು ಮತ್ತು ಇಪ್ಪತ್ನಾಲ್ಕು ಅಂದುಕೊಂಡರೂ ಉತ್ತರೆಗೆ ಅರವತ್ನಾಲ್ಕಾಗಬೇಕಲ್ಲವೇ  ಅನ್ನೋ ಪ್ರಶ್ನೆ ಛಂಗನೆ ಎದುರಾಗುತ್ತೆ.  ಕಾದಂಬರಿ ಶುರುವಾಗೋದ್ರಲ್ಲೇ ಹೇಳುವ ಭೂಮಿಯೆಂಬ ಭೂಮಿಯಿಂದ ಬಿಟ್ಟು ಮೂವತ್ತೇಳಿ ವರ್ಷವಾಯಿತಂತೆ ಅನ್ನೋ ಮಾತಿದೆ,ಭೂಮಿ ಬಿಡುವಾಗ ಉತ್ತರೆಗೆ ಇಪ್ಪತ್ತೆಂಟರ ಪ್ರಾಯ ಮತ್ತೆ ಇಲ್ಲಿಗೆ ಬಂದು ಹದಿಮೂರು ವರ್ಷದ ನಂತರ ಮಕ್ಕಳಾಗೋ ಯೋಚನೆ ಮೂಡಿ ನಲವತ್ತಕ್ಕೆ ಮೊದಲ ಮಗುವೆಂಬ ಲೆಕ್ಕಾಚಾರ ಬಂದರೂ ಮಕ್ಕಳ ಆಯಸ್ಸು, ಅಮ್ಮನ ಆಯಸ್ಸಿನ ಲೆಕ್ಕ ಹೊಂದೋಲ್ಲ. ಇನ್ನು ಸೆಕೆಂಡಿಗೆ ಒಂದು ಲಕ್ಷ ಕಿ.ಮೀ ವೇಗದಲ್ಲಿ ಚಲಿಸುತ್ತಿರುವ ವಾಹನ. ಅದಕ್ಕೂ ಮಾಹಿತಿಯನ್ನು ಮುಟ್ಟಿಸಿ, ವಾಪಾಸ್ ಸಂದೇಶಗಳನ್ನು ಪಡೆಯುವಷ್ಟು ತಂತ್ರಜ್ನಾನ ಬೆಳೆಯುತ್ತೆ ಅಂದುಕೊಂಡ್ರೂ ಈಗಿನ ವಾಹನಕ್ಕಿಂತ ಹತ್ತುಪಟ್ಟು ಹೆಚ್ಚು ವೇಗವಾಗಿ ಚಲಿಸೋ ವಾಹನ ತಯಾರಿಸಿ ಅಂತ ಸ್ವತಃ ವಿಜ್ನಾನಿಯಾದ ಸುದರ್ಶನ್ ಹೇಳೋದು ಯಾಕೋ ಆಭಾಸವೆನಿಸುತ್ತೆ. ಯಾಕೆಂದರೆ e=mc2 ಎಂಬ ಸಾಮಾನ್ಯ ಸೂತ್ರದ ಪ್ರಕಾರ ಯಾವುದೇ ವಸ್ತುವಿನ ವೇಗ ಬೆಳಕಿನ ವೇಗ ಮುಟ್ಟಿದಾಗ ಅದು ವಸ್ತು ಸ್ಥಿತಿಯಿಂದ ಶಕ್ತಿ ಸ್ಥಿತಿಗೆ ಬದಲಾಗುತ್ತೆ ಅಂತ. ಒಂದು ಲಕ್ಷ ಕಿ.ಮೀ ವೇಗದ ಹತ್ತು ಪಟ್ಟು ಅಂದರೆ ಬೆಳಕಿನ ವೇಗಕ್ಕಿಂತಲೂ ಮೂರು ಪಟ್ಟು ಹೆಚ್ಚು ವೇಗವಾಗಿ ಚಲಿಸೋ ವಾಹನ !! ವಾಹನವಾಗಿಯೇ ಉಳಿಯದಿರುವ ಸಂದರ್ಭದಲ್ಲಿ ಅದರೊಳಗಿನ ಯಾನದ ಕಲ್ಪನೆ.. !!! ಅಷ್ಟೆಲ್ಲಾ ಮುಂದೆ ಹೋಗೋ ಅನಿವಾರ್ಯತೆಯಿರಲಿಲ್ಲ. ಇದೊಂದು ಕತೆ. ಕತೆಯ ದೃಷ್ಠಿಯಲ್ಲೇ ನೋಡೋದಾದ್ರೆ ವಿಭಿನ್ನವಾದ ಉತ್ತಮ ಕತೆಯೇ. ಆದ್ರೆ ವೈಜ್ನಾನಿಕ ಅನ್ನೋ ಪರಿಕಲ್ಪನೆ ಹೊತ್ತಾಗ ಅದಕ್ಕೆ ತಕ್ಕ ನಿರೀಕ್ಷೆಗಳೂ, ಅಂಕಿ ಅಂಶಗಳಲ್ಲಿನ ವೈರುಧ್ಯವಿರದ ಅಪೇಕ್ಷೆಯೂ ಇರುತ್ವೆ ಅನಿಸುತ್ತೆ. ವಿಷಯವನ್ನು ಬೌದ್ಧಿಕ, ಭೌತಿಕವೆಂದು ವಿಭಜಿಸಿದ ಪಾಶ್ಚಾತ್ಯರ ದೃಷ್ಠಿಕೋನದ ಬಗ್ಗೆ, ವಿವೇಕಾನಂದರ ಬಗ್ಗೆ, ಎಸ್ಕಿಮೋಗಳ ಬಗ್ಗೆ.. ಹೀಗೆ ಹಲವಷ್ಟು ಹೊಸ ಹೊಳವುಗಳ ಕೊಟ್ಟ ಪುಸ್ತಕವೊಂದರ ಬಗ್ಗೆ ವಿಮರ್ಶಿಸುವಷ್ಟಾಗಲೀ, ಟೀಕಿಸುವಷ್ಟಾಗಲೀ ಓದು ನನಗಿಲ್ಲ. ಎರಡು ದಿನ ಬಿಟ್ಟೂ ಬಿಡದೇ ಓದಿಸಿದ ಪುಸ್ತಕವೊಂದರ ಬಗ್ಗೆ ಪ್ರಾಮಾಣಿಕ ಅನಿಸಿಕೆ ತಿಳಿಸೋ ಸಾಮಾನ್ಯ ಓದುಗನ ನಾಲ್ಕು ಸಾಲುಗಳಷ್ಟೇ ಇವು. ಇದನ್ನ ಓದಿದವರು ಮೆಚ್ಚಬಹುದು. ಖಂಡಿಸಬಹುದು. ಅದರ ನಿರೀಕ್ಷೆಗಳಿಲ್ಲ. ಮುಂದೊಮ್ಮೆ ನಾನೇ "ಯಾನ" ವನ್ನೋದಿ ಈ ಅಭಿಪ್ರಾಯವನ್ನೋದಿದಾಗ ಆಗ ಬೇರೆ ಅಭಿಪ್ರಾಯಗಳನ್ನೋದಿ ಇದರ ಬಗ್ಗೆ ಭಿನ್ನಾಹಿಪ್ರಾಯ ಮೂಡಲೂಬಹುದು. ಆದರೆ ಇದು ಸದ್ಯದ ಭಾವಗಳ ದಾಖಲೆಯಷ್ಟೇ. ಅಂದ ಹಾಗೆ ಸಾರ್ವಕಾಲಿಕ ಸತ್ಯವೆಂಬುದೇನಿಲ್ಲವಲ್ಲ..

ಪುಸ್ತಕ ಕೊಟ್ಟ ಮತ್ತು ಓದೋಕೆ ಪ್ರೇರೇಪಿಸಿದ ಹರೀಶಣ್ಣ ದ್ವಯರಿಗೊಂದು ಧ.ವಾ

1 comment:

  1. ಇನ್ನೂ ಓದಲಾಗದಂತಹ ನನ್ನಂತವರನ್ನೂ ಯಾನದತ್ತ ಸೆಳೆದೊಯ್ಯುವ ಲೇಖನ.

    ReplyDelete