Thursday, November 13, 2014

ರಾಮನಗರ ಬೆಟ್ಟದ ಟ್ರೆಕ್ಕಿಂಗು

General Timmayya institute of Rock climbing, Ramanagara
ತರಂ ಸಂ ಸಂ, ತರಂ ಸಂ ಸಂ.. ಉಗಿ ಉಗಿ ಊಗಿ..ತರಂ ಸಂ ಸಂ,ಹರಂ ಸಂಸಂ..ಉಗಿ ಉಗಿ ಊಗಿ.. ಡಢಂ ಡಂ ಡಂ, ಡಡಂ ಡಂ ಡಂ .ಚುಪ್.. ಇದೇನಪ್ಪ. ಕಾಡ್ಮಷ್ರ ಭಾಷೆ ಶುರುವಾಯ್ತು ಅಂದ್ಕಂಡ್ರಾ ? ರಾಮನಗರದಲ್ಲಿ ನಮ್ಮ warmup exercise ಶುರುವಾಗಿದ್ದು ಹಿಂಗೇ. ರಾಮನಗರಕ್ಕೆ ಯಾಕೆ ಹೋಗಿದ್ರಿ ಅಂದ್ರಾ ? ಅದೇ ನಮ್ಮ TCS ದು ಮೈತಿ ಅಂತೊಂದು ಚಾರಣಪ್ರಿಯರ ಗುಂಪಿದೆ. ಅದ್ರಿಂದ ೮೮ ಜನ ಟ್ರೆಕ್ಕಿಂಗಿಗೆ ಅಂತ ರಾಮನಗರ ಬೆಟ್ಟಕ್ಕೆ ಬಂದಿದ್ವಿ. ಬೆಳಗ್ಗೆ ಏಳೂಕಾಲಿಗೆ ಆಫೀಸಿಂದ ಬಿಟ್ರೂ ಇಲ್ಲಿಗೆ ಬರೋ ಹೊತ್ತಿಗೆ ಹತ್ತಾಗ್ತಾ ಬಂದಿತ್ತು ! ಬೆಳಬೆಳಗ್ಗೆ ಬಿಡದಿ ತಟ್ಟೆ ಇಡ್ಲಿ, ವಡೆ, ಉಪ್ಪಿಟ್ಟು ತಿಂಡಿಗೆ ಸಿಕ್ಕಿದ್ರೆ ಅದಕ್ಕಿಂತ ಸುಖ ಇನ್ನೇನಿದೆ. ತಗೋ. ಮೈತ್ರಿ ಅವ್ರು ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ, ಚೇತನ ಎಂಬ NGO ಜೊತೆ ಸೇರಿ ನಡೆಸಿದ್ದ ಆ ದಿನದ ಚಟುವಟಿಕೆಗಳು ತಿಂಡಿ ನಂತ್ರ ಲಘು ವ್ಯಾಯಾಮದೊಂದಿಗೆ ಶುರುವಾಯ್ತು.
ಸುಬ್ಬು, ಮೇಡಂ, ವಿನಯ್ ಜೊತೆ ನಾನು


Organizers at Work

೮೮ ಜನ್ರನ್ನ ಎರಡು ಗುಂಪು ಮಾಡಿಸಿ ಒಂದು ಗುಂಪನ್ನು ಟ್ರೆಕ್ಕಿಂಗ್, ರಾಫ್ಲಿಂಗ್ (ಬಂಡೆಗೆ ಹಗ್ಗ ಕಟ್ಟಿ ಅದ್ರ ಮೇಲಿಂದ ಕೆಳಗಿಳಿಯೋದು)ಗೆ ಕಳಿಸಿದ್ರೆ ಮತ್ತೊಂದು ಗುಂಪನ್ನು ಅಲ್ಲೇ ಇರಿಸಿದ್ರು. ನಮ್ಮ ಚಟುವಟಿಕೆಗಳು ಶುರುವಾಗೋ ಮೊದ್ಲು ಅಲ್ಲಿ ಬಳಸೋ ಉಪಕರಣಗಳ ಬಗೆಗಿನ ಪರಿಚಯ ಮಾಡ್ಕೊಟ್ರು ಅಲ್ಲಿದ್ದ ಮಹಿಳಾ ಗೈಡ್ ಕೋಮಲ. ದಾಟೋದಕ್ಕೆ ಉಅಪಯೋಗಿಸೋ static rope, ಜುಮ್ಮಾರಿಂಗ್(ಬಂಡೆಗಳಂತೆ ಯಾವ ಆಧಾರವೂ ಇಲ್ಲದೇ ಎತ್ತರವನ್ನು ಹಗ್ಗದ ಸಹಾಯದಿಂದ ಹತ್ತೋದು)ನಲ್ಲಿ ಬಳಸೋ ಜುಮ್ಮಾರ್, crab, descender or figure of 8, pulley, seat  harness, ಹೆಲ್ಮೆಟ್ಟುಗಳ ಉಪಯೋಗ ಎಲ್ಲೆಲ್ಲಿ ಮತ್ತು ಅವನ್ನು ಹೇಗೆ ಬಳಸಬೇಕು ಅಂತ ಪರಿಚಯ ಮಾಡ್ಕೊಟ್ರು.

Komala explaining rock climbing instruments
 ಸರಿ, ಕತೆ ಕೇಳಾಯ್ತು. ಇನ್ನು ಸಾಹಸದ ಸಮಯ ! ಅದಕ್ಕೇಂತ ನಾವಿದ್ದ ಗುಂಪನ್ನು ಮತ್ತೆ ಮೂರು ಉಪಗುಂಪುಗಳನ್ನಾಗಿ ಮಾಡಿದ್ರು. ನಮ್ಮ ಉಪಗುಂಪಿಗೆ ಕಮಾಂಡೋ ವಾಕ್ ಅಂತ ಶುರುವಾಯ್ತು. ಕಮಾಂಡೋ ವಾಕ್ ಅಂದ್ರೆ ಎರಡು ಮರಗಳ ಮೇಲೆ ಕಟ್ಟಿರೋ ಹಗ್ಗದ ಮೇಲೆ ಮೇಲಿರೋ ಹಗ್ಗ ಹಿಡಿದುಕೊಂಡು ನಡೆಯೋದು ! ಸರಿಯಾದ ರಸ್ತೆ ಮೇಲೆ ನಡಿಬೇಕಾದ್ರೆ ಉರುಡಿ ಬೀಳೋ ನಮಗೆ ಒಂಟಿ ಹಗ್ಗದ ಮೇಲೆ ಮೇಲಿರೋ ಮತ್ತೊಂದು ಹಗ್ಗ ಹಿಡಿದು ನಡೆಯೋಕೆ ಸಾಧ್ಯನಾ ಅನಿಸ್ತು. ಅಲ್ಲಿದ್ದ ನಾಗೇಂದ್ರ , ರಾಜೇಶ್ ಅವ್ರು ಅಲ್ಲಿ ಹತ್ತೋದು ಹೇಗೆ, ಹಗ್ಗದ ಮೇಲೆ ನಡೆಯೋದು ಹೇಗೆ, ಮುಗಿದ ಮೇಲೆ ಮೇಲಿಂದ ಕೆಳಗೆ ಹಾರೋದು ಹೇಗೆ ? ಮಧ್ಯ ಎಲ್ಲಾದ್ರೂ ಕಾಲು ಜಾರಿದ್ರೆ ಸೊಂಟಕ್ಕೆ ಕಟ್ಟಿರೋ ಬೆಲ್ಟುಗಳಿಂದ ಕೆಳಗೆ ಬರದಂತೆ ಮೇಲೆನೇ ಹೇಗೆ ನೇತಾಡ್ತಾ ಇರ್ತೀವಿ ಅಂತ ಒಂದು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದಾಗ ಭಯವೆಲ್ಲಾ ಮಾಯ. ಎಂಟು ಜನರ ಕಮಾಂಡೋ ವಾಕ್ ಚಕ ಚಕನೆ ನಡೆದೇ ಹೋಯ್ತು. ಒಬ್ಬರಿಗೆ ಹಾರ್ನೆಸ್ ಹಾಕೋಕೆ , ಅವರು ಇಳಿದಾದ ಮೇಲೆ ತೆಗೆಯೋಕೆ ಉಳಿದವರು ಸಹಕರಿಸುತ್ತಾ, ಮೇಲೆ ಹತ್ತಿದಾಗ, ಹತ್ತುವಾಗ, ನಡೆಯುವಾಗ ಒಬ್ಬರಿಗೊಬ್ಬರು ಪ್ರೋತ್ಸಾಹಿಸುತ್ತಾ ಸಖತ್ ಖುಷಿ ಪಟ್ವಿ. ಎತ್ರ ಅಂದ್ರೆ ಮೊದ್ಲೇ ಭಯ ನಂಗ. ಮನೇಲಾದ್ರೂ ಏಣಿಯ ಎಂಟನೆಯದೋ ಒಂಭತ್ತನೆಯದೋ ಮೆಟ್ಟಿಲುಗಳಿಗಿಂತ ಜಾಸ್ತಿ ಹತ್ತಲು ಹೆದರುತ್ತಿದ್ದ ನಂಗೆ ಇಲ್ಲಿ ಮರಕ್ಕೆ ಏಣಿಯಿಂದ ಹತ್ತಿ ನಂತರ ಅಲ್ಲಿಂದ ಹಗ್ಗಕ್ಕೆ ಕಾಲಿಟ್ಟು ಅದ್ರ ಮೇಲೆ ನಡೆಯೋದು ಸಾಧ್ಯನಾ ಅನ್ಸಿತ್ತು ಮೊದ್ಲು. ಆದ್ರೆ ನಂಗಿಂತ ಮುಂಚೆ ಹತ್ತಿದ ಮೂರು ಜನರನ್ನು ನೋಡ್ತಿದ್ದಂಗೆ ಫುಲ್ ಜೋಷ್ ಬಂದು ಹತ್ತೇ ಬಿಟ್ಟಿದ್ದೆ.
ನಮ್ಮ ಗುಂಪಿನಲ್ಲಿದ್ದ ಅರ್ಜುನ್ ರಾಮ್, ರಾಮ್, ಸೌಮ್ಯ , ನಿವ್ಯಾ ಮೇಡಂ, ಸುಧಾಕರ ಎಲ್ಲಾ ಆರಾಮಾಗೇ ಎಲ್ಲೂ ಬೀಳದೇ ಈ ಚಟುವಟಿಗೆ ಮುಗ್ಸಿದ್ವಿ.
Our Team member @Commando walk

Our Subgroup. Me getting ready for commando walk

Me :-)

ನಂತರ ಶುರುವಾಗಿದ್ದು ಜುಮಾರಿಂಗ್. ಮೊದ್ಲು ಜುಮಾರಿಂಗಿಗೆ ತೆರಳಿದ್ದ ಉಪಗುಂಪಿನವ್ರು ನಮ್ಮ ಜಾಗಕ್ಕೆ ಬರೋ ಮೊದ್ಲೇ ನಾವು ಅವ್ರ ಜಾಗಕ್ಕೆ ಹೋಗಿದ್ರಿಂದ ಪರ್ವಾಗಿಲ್ವೇ ನಾವು ಪಾಸ್ಟಿದೀವಿ ಅಂತ ಖುಷಿ ಆಯ್ತು. ಅಲ್ಲಿ ಒಂದು ದೊಡ್ಡ ಮರದ ಕೊಂಬೆಗೆ ಹಗ್ಗ ಕಟ್ಟಿದ್ರು. ಅದ್ರ ಒಂದು ಕುಣಿಕೆಯನ್ನು ಸೊಂಟದಲ್ಲಿರೋ ಹಾರ್ನೆಸ್ಸಿಗೆ ಹಾಕಿದ್ರೆ ಇನ್ನೊಂದು ತೆರೆದ ತುದಿಯನ್ನು ಕಾಲಿಗೆ ಕೊಡ್ತಾರೆ. ಮತ್ತೊಂದು ಕಾಲು ಖಾಲಿ ಇರತ್ತೆ. ಕುಣಿಕೆಗೆ ಸಿಕ್ಕಿದ ಕಾಲಿನ ಮೇಲೆ ಭಾರ ಹಾಕಿ ನಿಂತು ಮತ್ತೊಂದು ಕೈಯಲ್ಲಿರೋ ಜುಮಾರನ್ನ ಮೇಲಕ್ಕೆ ಸರಿಸಬೇಕು. ಅದನ್ನು ಮೇಲಕ್ಕೆ ಸರಿಸಿದಂಗೆ ನಾವು ಮೇಲಕ್ಕೆ ಹೋಗ್ತೀವಿ. ಅದು ಮೇಲಕ್ಕೆ ಹೋದ ತಕ್ಷಣ ಅಲ್ಲೇ ಕೂತು. ಕಾಲಿನ ಜುಮಾರನ್ನ ಮೇಲಕ್ಕೆಳೆಯೋದು. ಒಟ್ನಲ್ಲಿ ಕಾಲಿನ ಕುಣಿಕೆ ಮೇಲೆ ಸಾಧ್ಯವಾದಷ್ಟು ನೆಟ್ಟಗೆ ನಿಲ್ಲೋ ಪ್ರಯತ್ನ ಮಾಡಿ ಮೇಲಿನ ಕುಣಿಕೆಯನ್ನು ಮತ್ತೊಂದಿಷ್ಟು ಮೇಲೆ ತಳ್ಳೋದು. ಅಲ್ಲಿ ಹೋದ್ಮೇಲೆ ಅಲ್ಲೇ ಕೂತು ಕಾಲಿನ ಜುಮಾರನ್ನು ಮೇಲಕ್ಕೆಳೆದುಕೊಳ್ಳೋದು. ಈ ಜುಮಾರ್ ಮೇಲ್ಮುಖವಾಗಿ ಮಾತ್ರ ಚಲಿಸುತ್ತೆ. ಕೆಲವರು ನಾಲ್ಕೇ ಎಳೆತಗಳಲ್ಲಿ ಮೇಲಕ್ಕೆ ಹೋದ್ರೆ ಕೆಲವರು ಎರಡ್ಮೂರು ನಿಮಿಷ ಒದ್ದಾಡಿದ್ರು ಮೇಲೆ ತಲುಪೋಕೆ. ಮೊದಲ ಸಲ ನೋಡೋಕೆ ಇದ್ರಲ್ಲಿ ರಟ್ಟೆ ಬಲ ಸಖತ್ ಬೇಕು ಅನಿಸಿದ್ರೂ ಹಾಗೇನಿಲ್ಲ ಇಲ್ಲಿ. ಎಲ್ಲಾ ತಂತ್ರ ಅಷ್ಟೆ. ಗೈಡ್ ವಿಜಯ್ ಹೇಳಿದ ತಂತ್ರ ಪಾಲಿಸಿದ ಕಡ್ಡಿ ಪೈಲ್ವಾನನಾದ ನಾನು ಸಲೀಸಾಗೇ ಮೇಲೆ ಹೋದೆ.


Zummaring

Me after Zummaring

ಇದಾದ ಮೇಲೆ ಪಾನೀಯ ರೆಡಿಯಿದೆ ಅಂದ್ರು. ಅಲ್ಲಿಗೆ ಹೋಗುವಾಗ ಖಾಲಿ. ಮತ್ತೆ ಇಲ್ಲೇ ಬಂದು ನಮ್ಮ ಗುಂಪಿನ ಉಳಿದವ್ರದ್ದೆಲ್ಲಾ ಮುಗ್ಯೋವರ್ಗೂ ಕಾದು ಜಿಪ್ಲಿಂಗ್(zippling) ಗೆ ಹೋದ್ವಿ. ಈ ತಂತ್ರವನ್ನು ಎರಡು ಗುಡ್ಡ ಅಥವಾ ಕಣಿವೆಗಳನ್ನು ದಾಟೋಕೆ ಉಪಯೋಗಿಸ್ತಾರಂತೆ. ಕಾಶ್ಮೀರದಲ್ಲಿ ಪ್ರವಾಹ ಬಂದಾಗ ಜನರನ್ನು ಈ ಕಡೆ ದಾಟಿಸೋಕೆ ಇದೇ ತರದ್ದ ತಂತ್ರವನ್ನು ಬಳಸಿದ ಫೋಟೋ ನೋಡಿರಬಹುದೇನೋ ಕೆಲವರು. ಇಲ್ಲಿ ಇಳಿಜಾರಾಗುವಂತೆ ಒಂದು ಎತ್ತರದ ಮರದ ಕೊಂಬೆಯಿಂದ ಮತ್ತೊಂದು ಮರದ ಬುಡಕ್ಕೆ ಹಗ್ಗ ಕಟ್ಟಿದ್ರು. ಆ ಹಗ್ಗದಲ್ಲಿ ಜೋತು ಬರೋದು. ಇದರಲ್ಲಿ ಮತ್ತೆ ನಮ್ಮ ಸೊಂಟಕ್ಕೆ ಕಟ್ಟಿದ ಹಾರ್ನೆಸ್ಸು, ಎಂಟರಾಕಾರ, pulley ಸಹಾಯಕ್ಕೆ ಬರುತ್ತೆ. ಮರದವರೆಗೆ ಹಗ್ಗದ ಏಣಿಯಲ್ಲಿ ಹತ್ತೋದೇ ಇಲ್ಲಿ ಸಾಹಸ. ಹಗ್ಗಕ್ಕೆ  ಬಿದಿರನ ಕಾಲು ಕೊಟ್ಟಿದ್ರೂ ಹಗ್ಗ ಆಕಡೆ ಈ ಕಡೆ ಒಲಿಯುತ್ತಲ್ವಾ ? ಸಾಮಾನ್ಯ ಏಣಿಯಾದ್ರೆ ಗೋಡೆಗೆ ಒರಗಿರತ್ತೆ. ಸ್ವಲ್ಪ ಆರಾಮಾಗಿ ಹತ್ತಬಹುದು. ಆದ್ರೆ ಇಲ್ಲಿ ಹಂಗಲ್ಲ. ಏಣಿಗೆ ಒರಗಿದಂತೆ ಹತ್ರ ಇದ್ರೆ ಹತ್ತೋದು ಸುಲಭ. ದೂರ ಇದ್ದಷ್ಟೂ ನಮ್ಮ ಭಾರವೇ ನಮ್ಮನ್ನ ಹಿಂದೆಳೆಯುತ್ತೆ. ಹತ್ತೋದೂ ಅಷ್ಟೇ ಕಷ್ಟ. ಈ ಹಗ್ಗದಲ್ಲಿ ಜಾರೋ ಹೊತ್ತಿಗೆ ನಮ್ಮ ಸೊಂಟಕ್ಕೆ ಕಟ್ಟಿರೋ ಹಗ್ಗವನ್ನು ಮಾತ್ರ ಹಿಡಿದುಕೊಳ್ಳಬೇಕು. ಅಪ್ಪಿ ತಪ್ಪಿ ಜಾರುತ್ತಿರೋ ಹಗ್ಗ ಮುಟ್ಟಿದ್ರೋ ಘರ್ಷಣೆಗೆ ಕೈಯೆಲ್ಲಾ ಕಪ್ಪಾಗಿ ಉರಿಯೇಳುತ್ತೆ. ಕೆಲವೆಡೆ ಕೈಗವಚ ಕೊಟ್ರೂ ನಂಗದರ ಅವಶ್ಯಕತೆ ಬರಲಿಲ್ಲ.

Zippling at Ramanagara


Lunch @Ramanagara base camp.. The first ppl to have it ;-)

ಇದಾದ ಮೇಲೆ ಭೂರಿ ಭೋಜನ. ನಮ್ಮ ಊಟ ಆಗೋ ಹೊತ್ತಿಗೆ ಟ್ರೆಕ್ಕಿಂಗಿಗೆ ಹೋದವ್ರು ಅಲ್ಲೇ ಸ್ವಚ್ಛಭಾರತ ಅಭಿಯಾನ ಅಂತ ಬೆಟ್ಟದಲ್ಲಿದ್ದ ಕಸವನ್ನೆಲ್ಲಾ ಹೆಕ್ಕಿ ಒಂದೊಂದು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ತಂದ್ರು. ಮೋಜಿನ ಜೊತೆ ಒಂದಿಷ್ಟು ಸಾಮಾಜಿಕ ಕಳಕಳಿಯನ್ನೂ ತೋರಿದ ಖುಷಿ ಅವ್ರ ಮುಖದಲ್ಲಿದ್ರೆ ಒಳ್ಳೆ ಊಟ ಸಿಕ್ಕ ಖುಷಿ ನಮ್ಮ ಕಂಗಳಲ್ಲಿ. ಅದಾಗಿ ಸ್ವಲ್ಪ ಹೊತ್ತಿನಲ್ಲಿ ನಮ್ಮ ಗುಂಪು ರಾಫ್ಲಿಂಗಿಗೆ ಹೊರಟೆವು. ಮೂಲ ಕ್ಯಾಂಪಿನಿಂದ ಒಂದು ಕಿ.ಮೀ ನಡೆಯೋಷ್ಟ್ರಲ್ಲಿ ಅಲ್ಲಿನ ಬೃಹದಾಕಾರದ ಬಂಡೆಗಳ್ನ ನೋಡಿ ಆಹಾ ಅನಿಸ್ತು. ಒಂದಿಷ್ಟು ಚಿಟ್ಟೆ, ಹೂಗಳು, ಪ್ರಕೃತಿಯ ಫೋಟೋ ತೆಗೆಯುತ್ತಾ ಮುಂದೆ ಸಾಗಿದ ನಮಗೆ ರಾಫ್ಲಿಂಗಿಗೆ ಅಂತ ಹಗ್ಗ ಕಟ್ಟಿದ್ದ ಕಲ್ಲು ಬಂಡೆ ಸಿಕ್ತು. ಆಗ್ಲೇ ಮೂರೂವರೆ. ಬೇಗ ಬೇಗ ಮುಗಿಸಬೇಕಾದ್ದರಿಂದ ಎಲ್ಲರೂ ಪರಸ್ಪರ ಸಹಕರಿಸಿದ್ರೆ ಬೇಗ ಮುಗಿಸಬಹುದು. ಮುಂಚೆ ರಾಫ್ಲಿಂಗ್ ಮಾಡಿದೋರು ಯಾರಾದ್ರೂ ಇದ್ರೆ ಮುಂದೆ ಬರ್ರಪ್ಪ ಅಂದ್ರು.ಒಂದಿಬ್ರು ಮುಂದೆ ಬಂದ್ರು. ಮಾಧ್ಯಮಿಕ ಶಾಲೆಯಲ್ಲಿದ್ದಾಗ ಪ್ರಕೃತಿ ದರ್ಶನ ಶಿಬಿರ ಅಂತ ಶಿವಮೊಗ್ಗದ ಆದಿಚುಂಚನಗಿರಿ ಶಾಲೆಯಲ್ಲಿ ಆಗಿದ್ದು. ಅಲ್ಲಿಗೆ ಬಂದಿದ್ದ ನಾನು ಆ ಶಾಲೆಯ ಮೇಲಿಂದ ಇದೇ ತರ ಹಗ್ಗ ಕಟ್ಟಿ ಇಳಿದಿದ್ದು, ಹಗ್ಗದ ಸಹಾಯದಿಂದ ಮತ್ತೊಂದು ಕಡೆ ಸಾಗಿದ್ದು(ಅವಾಗ ಅದಕ್ಕೆ Rafling ಅಂತ ಕರಿತಾರೆ ಅಂತ ಗೊತ್ತಿರ್ಲಿಲ್ಲ. ನೊಡೋಕೇನೋ ಚೆನ್ನಾಗಿದೆ ಅಂತ ಹೋಗಿದ್ದು ಅವಾಗ !)ಎಲ್ಲಾ ನೆನಪಿಗೆ ಬಂದು ನಾನೂ ಮುಂದೆ ಬಂದೆ.


Photo of a photo. Vijayendra's photo session :-)

Moving towards Rafling point from base camp

Distant view of Ramanagara


Heege summane
೨೫೦೦ ಕೇಜಿ ತೂಕ ತಡೆಯೋ ಆ ಹಗ್ಗಗಳಿಗೆ ಸಪೋರ್ಟ್ ಕೊಡುವ ಕಬ್ಬಿಣದ ಕುಣಿಕೆಗಳನ್ನು, ಬೋಲ್ಟುಗಳನ್ನು ಆ ಬಂಡೆಗಳ ಮೇಲೆ ಹುಗಿಯೋ ಕ್ರಮವೂ ಸ್ವಾರಸ್ಯಕರವಾಗಿದೆ. ಮೊದಲು ಬಂಡೆಯ ಮೇಲೆ ಇದಕ್ಕೋಸ್ಕರವೇ ಇರುವ ಡ್ರಿಲ್ ಬಿಟ್ಗಳಿಂದ ತೂತು ಕೊರೆಯುತ್ತಾರಂತೆ. ಆಮೇಲೆ ಅದರೊಳಗೆ ಬೋಲ್ಟುಗಳನ್ನು ಕೂರಿಸಿ ಅದರ ಮೇಲೆ ಅದೆಂತದೋ ರಾಸಾಯನಿಕದ ಮಿಶ್ರಣದ ಸಿಂಪಡಣೆಯಾಗುತ್ತದೆಯಂತೆ. ಅದಾಗಿ ಕೆಲವೇ ಹೊತ್ತಿನಲ್ಲಿ ಆ ಬೋಲ್ಟು ಮತ್ತೆಂದೂ ಮೇಲೇಳದಂತೆ ಭದ್ರವಾಗಿ ಕೂತುಬಿಡುತ್ತೆ ಅಲ್ಲಿ ! ಹಿಂದುಗಡೆಯಿಂದ ಸುತ್ತಿ ಬಳಸಿ ಬಂಡೆ ಹತ್ತಿದ್ವಿ ಮೊದಲ ಐದು ಜನ.ಇಬ್ಬರು ಗೈಡ್ ಜೊತೆ. ಅಲ್ಲಿ ಕಟ್ಟಿದ್ದ ಹಗ್ಗಗಳು ಭದ್ರವಾಗಿದೆಯ ಅಂತ ಭದ್ರಪಡಿಸಿಕೊಂಡ ಅವ್ರು ನಮಗೆ ಇಳಿಯೋದು ಹೆಂಗೆ ಅಂತ ಮಾಹಿತಿ ಕೊಟ್ರು. ಯಾವ್ದೇ ಕಾರಣಕ್ಕೂ ಮೊಣಕಾಲನ್ನು ಬಗ್ಗಿಸಬಾರದು. ಸೊಂಟವನ್ನು ಮಾತ್ರ ಬಗ್ಗಿಸಬೇಕು. ಗೋಡೆಗೆ ೯೦ಡಿಗ್ರಿ ಕೋನದಲ್ಲಿ ಒಂದು ಕಾಲನ್ನು ಇಡಬೇಕು. ಅದಕ್ಕಿಂತ ಚೂರು ಕೆಳಗೆ ಮತ್ತೊಂದು ಕಾಲು. ಅದನ್ನೆತ್ತಿ ಮತ್ತೊಂದು. ಒಟ್ನಲ್ಲಿ ಸೊಂಟಕ್ಕೆ ಕಟ್ಟಿರೋ ಹಾರ್ನೆಸ್ಸು ಮತ್ತು ಅದರ ಹಗ್ಗದ ಸಹಾಯದಿಂದ ಕೆಳಗಿಳಿತಾ ಹೋಗೋದು. ನಾವು ಇಳಿತಾ ಹೋದಂಗೆ ಮೇಲಿದ್ದವ ಹಗ್ಗ ಚೂರು ಚೂರೇ ಬಿಡ್ತಾ ಹೋಗ್ತಾರೆ. ಮಧ್ಯ ಎಲ್ಲಾದ್ರೂ ಕಲ್ಲಿಂದ ಕಾಲು ತಪ್ಪಿದ್ರೂ ಕೆಳಗೆ ಬೀಳೋಲ್ಲ. ಗೋಡೆಗೆ ಒದ್ದು ಈ ಕಡೆ ಹಾರೋದು, ಮತ್ತೆ ಗೋಡೆ ಕಡೆ ಸಾಗೋದು . ಹೀಗೆ ಮಾಡುತ್ತಾ ಕೆಳಗಿಳೀಬೋದು ಅನ್ನೋ ಟೆಕ್ನಿಕ್ಕುಗಳೆಲ್ಲಾ ಗೊತ್ತಾಯ್ತು ನಾವು ಇಳಿಯೋ ಹೊತ್ತಿಗೆ. ಮೇಲಿಂದ ಕೆಳಗೆ ನೋಡಿದ್ರೆ ಮಾತ್ರ ಭಯ ಅನ್ನೋದು ಬಿಟ್ರೆ ಕೆಳಗಿಳಿಯುವಾಗ ಲವಲೇಷವೂ ಭಯ ಕಾಡ್ಲಿಲ್ಲ.
Rafling @Ramanagara

Sudhakara @Rafling

View of Ramanagara from Rafling point
ಸಹಕರಿಸಬೇಕು ಮತ್ತು ಬಂಡೆಗೆ ಹತ್ತಿ ಬರೋರಿಗೆ ದಾರಿ ತೋರಿಸ್ಬೇಕು ಅಂದಿದ್ನ ನಾನು ಸ್ವಲ್ಪ ಗಂಭೀರವಾಗೇ ತಗೊಂಡು ಬಿಟ್ನಾ ಗೊತ್ತಿಲ್ಲ. ಬಂದೋರಿಗೆಲ್ಲಾ ಬಂಡೆಯ ಮೇಲ್ಗಡೆ ದಾರಿ ತೋರ್ಸೋಕೆ, ಅದಕ್ಕಿಂತ ಮುಂಚೆ ಅವ್ರು ಹಾಕಿಕೊಂಡ ಹೆಲ್ಮೆಟ್ಟು, ಕೈಗವಸು(glouse), ಕಾಲು, ಸೊಂಟದ ಹಾರ್ನೆಸ್ಸಿನ ಬೆಲ್ಟುಗಳು ಗಟ್ಟಿಯಾಗಿದೆಯಾ , ಲೂಸಾಗಿದ್ರೆ ಟೈಟ್ ಮಾಡದೇ ಮುಂದೆ ಸಾಗದಂತೆ ತಡೆಯೋ ಮರಿ ಗೈಡ್ ಆಗಿಬಿಟ್ಟೆ ! ರಾಂ ಪ್ರಕಾಶ್ ಇದೆಲ್ಲ ಇಲ್ದೇ ಮುಂದೆ ಬಿಡ್ಬೇಡಾಂತ ಹೇಳಿದ್ರೂನೂ ಎಲ್ಲ ಮುಗ್ಯೋ ತಂಕ ಅಲ್ಲೊಬ್ಬ ದಾರಿತೋರುಕನಾಗಿ ಸೇವೆ ಸಲ್ಲಿಸಿದ್ದು ನಂಗೇ ಒಂಥರಾ ಖುಷಿ ಆಗೋಯ್ತು!

Group pic of the half set of people

On the way to Trekking after Rafling

Reflections@Ramanagara

ಮಧ್ಯ ಮಧ್ಯ ಅಲ್ಲಿನ ಬೆಟ್ಟಗಳ ಮೇಲಿಂದ ಪ್ರಕೃತಿಯ ಸೌಂದರ್ಯ ಆಸ್ವಾದಿಸೋ ಸದವಕಾಶ. ಚಿಟ್ಟೆಗಳ ಫೋಟೋ ತೆಗೆಯೋ ಖುಷಿ. ಅಂತೂ ನಮ್ಮ ಗುಂಪಿನ ಎಲ್ಲರ rafling ಮುಗಿಯೋ ಹೊತ್ತಿಗೆ ಘಂಟೆ ಐದಾಗಿತ್ತು. ಕತ್ತಲಾಗ್ತಾ ಬಂದಿದ್ರಿಂದ caving ಗೆ ಹೋಗಕ್ಕಾಗಲ್ಲ ಅಂದ್ರು ಗೈಡು. ಸರಿ, ಟ್ರೆಕ್ಕಿಂಗಿಗಾದ್ರೂ ಹೋಗೋಣ ಇನ್ನೂ ಬೆಳಕಿದ್ಯಲ್ಲ ಅಂತ ನಮ್ಮ ಒತ್ತಾಯ. ಸರಿ, ಎಲ್ರನ್ನೂ ಟ್ರೆಕ್ಕಿಂಗಿಗೆ ಕರೆದುಕೊಂಡು ಅಲ್ಲಿಂದಲೇ ಮೂಲಕ್ಯಾಂಪಿಗೆ ಹೋಗೋಣ. ಆದ್ರೆ ಎಲ್ಲಾ ಒಂದೇ ಸಾಲಲ್ಲಿ ಬರ್ಬೇಕು. ಮಧ್ಯ ಎಲ್ಲೂ ಫೋಟೋ ತೆಗ್ಯಕ್ಕೆ ಅಂತ ನಿಲ್ಲಬಾರ್ದು ಅನ್ನೋ ನಿಯಮ ಹಾಕಿದ್ರು. ಮೊದ್ಲು ಇಷ್ಟೆಲ್ಲಾನ ಅನಿಸಿದ್ರೂ ಇಲ್ಲಿ ಯಾರು ಕಳ್ದು ಹೋದ್ರೂ ರಾತ್ರೇಲಿ ಅವರನ್ನು ಹುಡುಕೋದು ಭಾರೀ ಕಷ್ಟ ಅನ್ನೋ ಅವರ ಮಾತಲ್ಲಿ ಸತ್ಯವಿಲ್ಲದೇ ಇಲ್ಲ ಅನಿಸಿತು. ಅಲ್ಲಿನ ಪ್ರಕೃತಿಯ, ಬಿದಿರುಮೆಳೆಗಳ(ಮಲೆನಾಡ ಕಾಡು ಕಂಡವ್ರಿಗೆ ಇದೂ ಒಂದು ಕಾಡಾ ಅನಿಸಬಹುದು. ಆದ್ರೂ ಪೇಟೆಯ ಹುಡುಗರ ಲೆಕ್ಕದಲ್ಲಿನ amazing forest yar !)ಕಾಡು ಹೊಕ್ಕು ಮೂರು ಕಿ.ಮೀ ನಡೆದು ಹೊತ್ತು ಕರಗೋ ಹೊತ್ತಿಗೆ ಕ್ಯಾಂಪ್ ಸೇರಿದ್ವಿ. ಅಲ್ಲಿ ನಮ್ಮ ಶಿವಮೊಗ್ಗದ ಹುಡುಗರಾದ ಸುದೀಪಣ್ಣ,ವಿಜಯೇಂದ್ರ(ಎಲ್ಲಾ ಪರಿಚಯವಾಗಿದ್ದು ಈ ಟ್ರಿಪ್ಪಲ್ಲೇ) , ಕನ್ನಡ ಸಂಘದ ಅಧ್ಯಕ್ಷ ಸುಬ್ಬು, ನಾಗಾರ್ಜುನ್ ಹಿಂಗೆ ಮೊದಲ ಬ್ಯಾಚಿನ ಜನ ಕಾಯ್ತಾ ಇದ್ರು. ಕೆಲವರದ್ದು ಇನ್ನೂ zummaring ನಡಿತಾ ಇತ್ತು ! ಸಾಯಂಕಾಲಕ್ಕೊಂದು ಟೀ, ಪಕೋಡಾ ಸೇವಿಸೋ ಹೊತ್ತಿಗೆ ಮತ್ತೊಂದಿಷ್ಟು ಜನ ಸೇರಿದ್ರು. ಅಂತೂ ಒಂದಿಷ್ಟು ಗ್ರೂಪ್ ಫೋಟೋ ತೆಗೆಸಿ ಎಲೆಕ್ಟ್ರಾನಿಕ್ ಸಿಟಿಯ ಕಡೆಗಿನ ಮತ್ತು ವೈದೇಹಿ ಆಸ್ಪತ್ರೆಯ ಕಡೆಗಿನ ಎರಡು ಬಸ್ಸುಗಳಲ್ಲಿ ಹತ್ತೋ ಹೊತ್ತಿಗೆ ಸಂಜೆ ಏಳರ ಆರೂಮುಕ್ಕಾಲು ಏಳರ ಆಸುಪಾಸು.ಮತ್ತೊಮ್ಮೆ ಹಾಜರಿ ಹಾಕಿ ಅಲ್ಲಿದ್ದ ಎಲ್ಲರಿಗೂ ವಂದಿಸಿ ಬಸ್ಸಿಗೆ ಹತ್ತಿದ್ವಿ. ಬೆಳಗ್ಗೆ ತಣ್ಣಗಿದ್ದ ಬಸ್ಸಲ್ಲಿ ಸಂಜೆಯಾಗುತ್ತಿದ್ದಂತೆ ನೃತ್ಯದ ರಂಗೇರಿತ್ತು. ಒಂದಿಬ್ರು ಹಾಡಿಗೆ ಹೆಜ್ಜೆ ಹಾಕಿದ್ದೇ ತಡ, ಎಲ್ಲರಿಗೂ ಜೋಷ್. ಸುಸ್ತಾದ ಕಾಲುಗಳ ಪರಿವೆಯೇ ಇಲ್ಲದಂತೆ ಒಂದಿಷ್ಟು ಕುಣಿತ. ಆಮೇಲೆ ಸಿಲ್ಕ್ ಬೋರ್ಡು ಬರೋವರೆಗೂ ಅಂತ್ಯಾಕ್ಷರಿ. ಇನ್ನೇನು ಹಾಡುಗಳೆಲ್ಲಾ ಖಾಲಿಯಾಯ್ತು ಅನ್ನೋ ಹೊತ್ತಿಗೆ ಮತ್ತೊಂದು ಎಳೆ ತೆಗೆಯುತ್ತಿದ್ದ ಯಾರಾದ್ರೂ ಕಾಲೇಜು ದಿನಗಳ ನೆನಪು ತರಿಸಿಬಿಟ್ರು. ಎಷ್ಟೋ ವರ್ಷಗಳ ನಂತರ ನಮ್ಮ ವಯಸ್ಸಿನದೇ ಗುಂಪಿನೊಂದಿಗೆ ಹಿಂಗೆ ಒಂದಿಡೀ ದಿನ ಕಳೆದಿದ್ದು ನಾನಿನ್ನೂ ಕಾಲೇಜಲ್ಲೇ ಇದ್ದೀನ ಅನ್ನೋ ಭಾವವನ್ನು ಹೊತ್ತು ತಂದಿದ್ದು ಸುಳ್ಳಲ್ಲ. ಒಂದೊಳ್ಳೆ ಟ್ರಿಪ್ಪಿಗೆ ಕರೆದ ತೃಪ್ತಿಗೆ ಮತ್ತು ಆಯೋಜಕರಾದ ವಿನಯ್, ರಾಮ ಪ್ರಕಾಶ್, ನಾಗಾರ್ಜುನರಿಗೆ, ಅವಕಾಶ ಕೊಟ್ಟ ಮೈತ್ರಿಗೆ , ಜೊತೆ ಸಿಕ್ಕ ಎಲ್ಲಾ ಗೆಳೆಯರಿಗೆ ಎಷ್ಟು ಧನ್ಯವಾದ ಹೇಳಿದ್ರೂ ಕಮ್ಮಿಯೇ :-)

4 comments:

 1. Antu ninna kardiddu sarthaka aythu - Trupthi

  ReplyDelete
  Replies
  1. ಹೆ ಹೆ. ಧನ್ಯವಾದಗಳು ಕಣೇ ತೃಪ್ತಿ :-)

   Delete
 2. ಬಂಡೇನೇ pushingಆಆಆಆಆ....

  ReplyDelete
  Replies
  1. :-) ಧನ್ಯವಾದಗಳು ಬದ್ರಿ ಬಾಯ್ :-)

   Delete