Wednesday, November 26, 2014

ಕರ್ನಾಟಕದ ಹೊಯ್ಸಳ ದೇವಾಲಯಗಳು - ೯ : ಚೆನ್ನಕೇಶವ ದೇವಾಲಯ, ಬೇಲೂರು

ಹೊಯ್ಸಳರಸ ಸಕಲವೇದಪಾರಂಗತ ವಿಷ್ಣುವರ್ಧನ ೧೧೧೭ನೇ ಇಸವಿಯಲ್ಲಿ ಕಟ್ಟಿಸಿದ ದೇವಸ್ಥಾನ ಬೇಲೂರು ವಿಜಯನಾರಾಯಣ ಅಥವಾ ಚೆನ್ನಕೇಶವ ದೇವಸ್ಥಾನ. ೧೧೧೬ರಲ್ಲಿ ಚೋಳರ ಮೇಲಿನ ತಲಕಾಡು ಯುದ್ದದಲ್ಲಿ ಗೆದ್ದ ನಂತರ ತನ್ನ ಆಸ್ಥಾನಗುರುಗಳಾದ ಶ್ರೀ ರಾಮಾನುಜಾಚಾರ್ಯರ ಅಣತಿಯಂತೆ ಈ ದೇಗುಲವನ್ನು ಕಟ್ಟಲು ಪ್ರಾರಂಭಿಸಿದ ಅಂತ ಕೆಲವರೆಂದರೆ ತನ್ನ ಸಾಮ್ರಾಟನಾಗಿದ್ದ ಚಾಲುಕ್ಯ ಅರಸ ಆರನೇ ವಿಕ್ರಮಾದಿತ್ಯನಿಂದ ಚಕ್ರಾಧಿಪತ್ಯದಿಂದ ಹೊರಬಂದು ಹೊಸ ಸಾಮ್ರಾಜ್ಯ ಕಟ್ಟಿದ ಸವಿನೆನಪಿಗೆ ಇದನ್ನು ಕಟ್ಟಿದ ಅನ್ನುತ್ತಾರೆ ಉಳಿದವರು. ಇತಿಹಾಸ ಏನೇ ಇರಲಿ, ಇಲ್ಲಿನ ಸೌಂದರ್ಯಕ್ಕೆ ಇದೇ ಸಾಟಿ. ಬೇಲೂರಿನ ಶಿಲಾಬಾಲಿಕೆಯರು ಎಂದೇ ಪ್ರಸಿದ್ಧವಾಗಿರೋ ಇಲ್ಲಿನ ಶಿಲ್ಪಗಳ ನೊಡಲು ಪ್ರತಿನಿತ್ಯ ಜನಜಂಗುಳಿ. ಆ ಜನಜಾತ್ರೆಯ ಮಧ್ಯೆ ಸೆರೆಸಿಕ್ಕ ದೃಶ್ಯಗಳನ್ನು , ಅನುಭವಗಳನ್ನು ತಮ್ಮೆದುರು ತೆರೆದಿಡೋ ಪ್ರಯತ್ನದಲ್ಲಿದ್ದೇನೆ.

ಕೆಲವು ಶಿಲ್ಪಗಳನ್ನು ಕ್ಯಾಮೆರಾದಲ್ಲಿ ತೆಗೆಯುತ್ತಿದ್ದಾಗ ಕ್ಯಾಮೆರಾ ಬ್ಯಾಟ್ರಿ ಖಾಲಿಯಾಗಿ ಮತ್ತೊಮ್ಮೆ ಇಡೀ ದೇಗುಲದ ಸುತ್ತು ಹಾಕಿ ಮೊಬೈಲಲ್ಲಿ ಮತ್ತೆ ಫೋಟೋ ತೆಗೆಯೋ ಪ್ರಸಂಗ ಬಂತು :-( ಕೆಲವು ಕೋನಗಳಲ್ಲಿ ಕೆಲವು ಶಿಲ್ಪಗಳು ಚೆನ್ನಾಗಿ ಕಾಣಬಹುದೆಂಬ ನಿರೀಕ್ಷೆಯಲ್ಲಿ ಎರಡನ್ನೂ ಹಾಕಿದ್ದೇನೆ :-)
Front view of Chennakeshava temple


ದೇಗುಲದ ಮುಂಭಾಗದಲ್ಲಿರುವ "ಭೂಮಿಜ" ಅಂತ ಕರೆಯಲ್ಪಡುವ ಗೋಪುರದ ಒಳಗಿರುವ ದೇವಿಯ ವಿಗ್ರಹ

ದೇಗುಲದ ಪ್ರವೇಶದ್ವಾರದಲ್ಲಿರುವ ಗರುಡ"ಭೂಮಿಜ" ಗೋಪುರ
At the entrance of Chennakeshava temple

ಹೊಯ್ಸಳ ಲಾಂಛನದ ಪಕ್ಕದಲ್ಲಿರುವ ನಾನು

ಗರ್ಭಗುಡಿಯ ಪಕ್ಕದಲ್ಲಿರುವ ಜಯ,ವಿಜಯ

ದೇಗುಲದ ಪ್ರವೇಶದ್ವಾರದಲ್ಲಿರುವ ಉಗ್ರನರಸಿಂಹ


ಶಿಲಾಬಾಲಿಕೆಯರು:
 1. ದರ್ಪಣ ಸುಂದರಿ : ಎಡಗೈಯಲ್ಲಿ ಕನ್ನಡಿಯನ್ನು ಹಿಡಿದುಕೊಂಡು ಬಲಗೈಯಲ್ಲಿ ಕುಂಕುಮವನ್ನು ಹಚ್ಚಿಕೊಳ್ಳುವ ಪ್ರಯತ್ನದಲ್ಲಿದ್ದಾಳೆ ಸುಂದರಿ. ಆಕೆಯ ಎಡಬಲದಲ್ಲಿ ಸಖಿಯರು. ಬಲಭಾಗದ ಸಖಿಯ ಕೈಯಲ್ಲೊಂದು ಕೋತಿ ಮರಿ. ಆ ಕೋತಿಗೆ ಕೊಡಲು ಆಕೆ ಹಿಡಿದ ದ್ರಾಕ್ಷಿ ಗೊಂಚಲನ್ನು ಗಮನಿಸಬಹುದು ! ದ್ರಾಕ್ಷಿಗಾಗಿ ಕಾಯುತ್ತಿರೋ ಕೋತಿಗೆ ಅದು ಸಿಗದ ವೇದನೆಯಾದ್ರೆ ತನ್ನ ಅಲಂಕಾರವ ನೋಡಿ ಮೆಚ್ಚಲು ಇನ್ನೂ ಬಾರದ ಪತಿಯ  ವಿರಹವೇದನೆ ಸುಂದರಿಗಂತೆ !. ಸೊಂಟದ ಪಟ್ಟಿ, ಮುಂಗುರುಳು, ಆಭರಣಗಳು.. ಹೀಗೆ ಸುಂದರ ಕೆತ್ತನೆಯಿದು
ದರ್ಪಣಸುಂದರಿ,ಶುಕಭಾಷಿಣಿಯರ ಕೆಳಗಿರುವ ಗೊಡೆಯಲ್ಲಿ ವಿಷ್ಣುವರ್ಧನ ಮಹಾರಾಜನ ಸಭೆ

2. ಶುಕಭಾಷಿಣಿ: ಎಡಗೈಯಲ್ಲಿ ಗಿಳಿಯನ್ನು ಕೂರಿಸಿಕೊಂಡು ಅದರೊಂದಿಗೆ ಮಾತಾಡುತ್ತಿರುವಂತಹ ಸುಂದರಿ. ಕಾಳಿದಾಸನ ಮೇಘದೂತದಂತೆ, ನಳ ದಮಯಂತಿಯ ಹಂಸಗಳಂತೆ, ಹಿಂದೆಲ್ಲಾ ಬಳಕೆಯಲ್ಲಿದ್ದ ಸಂದೇಶವಾಹಕ ಪಾರಿವಾಳಗಳಂತೆ ಇಲ್ಲಿ ಗಿಳಿಯ ಮೂಲಕ ತನ್ನ ಪ್ರಿಯಕರನಿಗೊಂದು ಸಂದೇಶ ರವಾನಿಸುವ ಪ್ರಯತ್ನದಲ್ಲಿದ್ದಾಳೆ ಇವಳು ಎನ್ನುವುದು ಹಲವರ ಅಂಬೋಣ

3. ಪತ್ರಾವಳಿ : ಎಡಗೈಯಲ್ಲಿ ವೀಳ್ಯದೆಲೆಯ ಪಟ್ಟಿ ಹಿಡಿದಿರೋ ಸುಂದರಿಯ ಬಲಗೈಯ ಮೇಲೆ ಗಿಳಿ ಕೂತಿದೆ. ಎಡಬಲಗಳಲ್ಲಿರುವ ಸಖಿಯರು ಹಣ್ಣುಗಳನ್ನು, ಆಭರಣಗಳನ್ನು ಹಿಡಿದು ಅಲಂಕಾರಕ್ಕೆ ಸಿದ್ದರಾದಂತಿದೆ


4. ತ್ರಿಭಂಗಿ ನೃತ್ಯ: ದೇಹವನ್ನು ತ್ರಿಕೋನಾಕಾರವಾಗಿ ತಿರುಗಿಸಿ ಅಥವಾ ೧೨೦ ಡಿಗ್ರಿಯಲ್ಲಿಟ್ಟು ಮಾಡುವ ನೃತ್ಯದ ಒಂದು ಭಂಗಿ ! ನೃತ್ಯಶಾಸ್ತ್ರದಲ್ಲಿಯೇ ಅಸಾಧ್ಯ ಎಂಬ ಭಾವನೆಯಿರುವ ಇದನ್ನು ಒಂದೇ ಕಾಲಿನಲ್ಲಿ, ಒಂದು ಕೈಯಲ್ಲಿ ಢಮರುಗ ಹಿಡಿದು ಮಾಡುತ್ತಿದ್ದಾಳೆ ಈ ಸುಂದರಿ

5. ವಸಂತ ನೃತ್ಯ ಅಥವಾ ಹೋಳಿಯ ದೃಶ್ಯ : ಹೋಳಿ ಹಬ್ಬ ಈಗಿನದಲ್ಲ. ಮುಂಚೆಯೇ ಇತ್ತೆಂಬುದನ್ನು ಬಿಂಬಿಸುವ ಪಿಚಕಾರಿಯಲ್ಲಿ ಬಣ್ಣ ತುಂಬುತ್ತಿರೋ ಚೆಲುವೆ. ಸೂಕ್ಷ್ಮವಾಗಿ ನೋಡಿದರೆ ಇದರ ಕೆತ್ತನೆಕಾರ ಚಿಕ್ಕ ಹಂಪನ ಹೆಸರನ್ನೂ ಕಾಣಬಹುದಿಲ್ಲಿ


6. ಕೋತಿಯಿಂದ ಕೋಪಗೊಂಡ ಸುಂದರಿ ಅಥವಾ ನಾರಿಯ ಸೀರೆ ಎಳೆಯುತ್ತಿರುವ ಮಂಗ: ಬಲಭಾಗದಲ್ಲಿರುವ ಕೋತಿ ಹಲ್ಲುಕಿರಿಯುತ್ತಾ ಚೆಲುವೆಯ ಸೀರೆಯೆಳೆಲಉ ಪ್ರಯತ್ನಿಸುತ್ತಿದೆ. ಕುಪಿತಳಾದ ನಾರಿ ಕೋಪದಿಂದ ಕೋತಿಯನ್ನು ಹೊಡೆಯಲು ಒಂದು ಬಳ್ಳಿಯನ್ನು ಎತ್ತಿದ್ದಾಳೆ.  ತನ್ನ ಕಪಿ ಮಾಡುತ್ತಿರುವ ಚೇಷ್ಟೆಯಿಂದ ಈಕೆಯ ಅರ್ಧ ಮುಖದಲ್ಲಿ ನಗುವು, ಉಳಿದರ್ಧದಲ್ಲಿ ಸಿಟ್ಟೂ ಮೂಡಿರುವುದನ್ನು ಸೂಕ್ಷವಾಗಿ ಗಮನಿಸಿದರೆ ಕಾಣಬಹುದು ಅನ್ನುತ್ತಾರೆ.ಇದರ ಶಿಲ್ಪಿ ನಾಡೋಜ ಅನ್ನೋದನ್ನು ಇನ್ನೂ ಗಮನಿಸಿ ನೋಡಬಹುದು


7. ವೀರಾಯೋಚಿತೆ ಅಥವಾ ಮಹಿಳಾ ಬಿಲ್ಲುಗಾರ್ತಿ/ಮಹಿಳಾ ಬೇಟೆಗಾರ: ಆಗಿನ ಕಾಲದಲ್ಲಿ ಬೇಟೆಗಾರ್ತಿಯರಾಗಿ ಮಹಿಳೆಯರೂ ಇದ್ದರೆನ್ನುವುದನ್ನು ಈ ಮೂಲಕ ಕಾಣಬಹುದು


8.ಕಪಾಲ ಭೈರವಿ: ಎಡಗೈಯಲ್ಲಿ ರುಂಡದಂಡವನ್ನೂ, ಬಲಗೈಯಲ್ಲಿ ಕಪಾಲಪಾತ್ರೆಯನ್ನೂ ಹಿಡಿದಿರುವ ಈಕೆ ಪಾರ್ವತಿಯ ಅವತಾರವೆಂದು ಹೇಳುತ್ತಾರೆ. ಮುಂದೆ ಕಾಣಸಿಕ್ಕ ಸ್ಮಶಾನ ಭೈರವಿ ಇನ್ನೂ ಭಯಾನಕವಾಗಿದೆ. ಹಳೇಬೀಡಿನಲ್ಲಿ ಕಾಣಸಿಕ್ಕ ಅತಿ ಭಯಂಕರ ಭೈರವಿಯರನ್ನು ಕಂಡಾಗ ಗಮನಿಸೋ ಯಾರಿಗಾದರೂ ಎದೆ ಝಲ್ಲೆನ್ನುವುದೇ !.. ಅದರ ಬಗ್ಗೆ ನಂತರ ನೋಡೋಣ9 .ವೀರಯೋಷಿತೆ ಅಥವಾ ಬಿಲ್ವಿದ್ಯೆಯ ಬಾಲೆ : ಬಿಲ್ಲು ಬಾಣಗಳ ಹಿಡಿದಿರುವ ಈಕೆ ಬಾಣವನ್ನು ಪ್ರಯೋಗಿಸಿಯೇ ಬಿಟ್ಟಿದ್ದಾಳೆ


10. ಕುಟಿಲ ಕುಂತಳ: ಈಕೆ ಕನ್ನಡಿಯನ್ನು ನೋಡಿಕೊಳ್ಳುತ್ತಾ ತನ್ನ ಕೂದಲ ಗುಂಗುರು ತೆಗೆಯುತ್ತಿದ್ದಾಳೆ. ಈ ಮೂಲಕ ಈ ಗುಂಗುರಿನ ಫ್ಯಾಷನ್ ೯೦೦ ವರ್ಷಗಳ ಹಿಂದೇ ಇತ್ತೆಂದು ಕಾಣಬಹುದು !


11. ಗಾರ್ದಭ ಮಾನವ.ಹದಿನಾರನೆಯ ವಯಸ್ಸು ಬಂದಾಗ ಕತ್ತೆಯೂ ಸುಂದರವಾಗಿ ಕಾಣುತ್ತೆ ಅನ್ನೋ ರೂಪಕ12. ಮಯೂರ ಕೇಶಿ:

13. ಮುರಳೀಧರ ಮತ್ತು ತಾಂಡವೇಶ್ವರಿ: ಡೊಳ್ಳು ಬಾರಿಸುತ್ತಾ ನಿಂತಿದ್ದಾಳೆ ತಾಂಡವೇಶ್ವರಿ. ದಾರ, ಅವುಗಳಲ್ಲಿರುವ ಕೈಬೆರಳುಗಳು,ಕಲ್ಲಲ್ಲಿ ಮಾಡಿರುವ ಡೋಲಿನ ಸೂಕ್ಷ್ಮತೆಯನ್ನು ಗಮನಿಸಬಹುದು. ಇವಳಿಗೆ ಸಾಥ್ ಕೊಡುತ್ತಿರುವ ಸಖಿಯರು ಎಡಬಲದಲ್ಲಿ. ಇದರ ಶಿಲ್ಪಿ 'ಮಹಿಣ'

ವೇಣುಗೋಪಾಲನೇ ಬಂದು ಕೊಳಲ ಬಾರಿಸುತ್ತಿರುವಂತೆ ನಿಂತಿರುವ ಮದನಿಕೆ. ಇದರ ಪಕ್ಕದಲ್ಲಿ "ಗಾನಮಂಜರಿ", "ನಾಟ್ಯಮೋಹಿನಿ"ಯನ್ನೂ ಕಾಣಬಹುದು. ನಾಟ್ಯಮೋಹಿನಿಯ ಶಿಲ್ಪದಲ್ಲಿ ಒಂದು ಹಲಸಿನ ಹಣ್ಣು, ಅದರ ಮೇಲೆ ಕೂತಿರುವ ನೊಣ, ಅದರ ರೆಕ್ಕೆಗಳನ್ನೂ ಕಾಣಬಹುದು ಎನ್ನುತ್ತಿದ್ದ ಗೈಡು. ಆದರೆ ಅಷ್ಟರಲ್ಲೇ ಕ್ಯಾಮರಾದ ಬ್ಯಾಟರಿ ಕೈಕೊಟ್ಟಿದ್ದರಿಂದ ಫೋಟೋ ತೆಗೆದು ಜೂಮಿಸಲಾಗಲಿಲ್ಲ. ಮುಂದೆ ಹೋಗುವ ತಾವಾದ್ರೂ ಪ್ರಯತ್ನಿಸಿ :-)

14:ನಾಟ್ಯಮೋಹಿನಿ:  ಕಾಗದದಲ್ಲಿ ಚಿತ್ರ ಬಿಡಿಸಿದಂತೆ ಕೆತ್ತಿದ ಸುಂದರ ಹೂಗಳನ್ನು ಕಾಣಬಹುದು

14. ರುದ್ರವೀಣೆ: ಈ ಶಿಲಾಬಾಲಿಕೆ ಅಥವಾ ಮದನಿಕೆಯ ಕೈಯಲ್ಲಿರುವ ರುದ್ರವೀಣೆಯು ದೇವವಾದ್ಯಗಳಲ್ಲೇ ಸರ್ವ ಶ್ರೇಷ್ಟವಾದದ್ದು ಅಂತ ಭಾವನೆಯಿದೆ. ಇದೇ ತರಹ ನಾಗವೀಣೆಯ(ಕೈಯಲ್ಲಿರುವ ವೀಣೆಯ ಒಂದು ತುದಿ ಹಾವಿನಂತಿರುವುದು) ಹಿಡಿದಿರುವ ಮದನಿಕೆಯನ್ನು ಮುಂದೆ ಕಾಣಬಹುದು


ರುದ್ರವೀಣೆಯಲ್ಲಿರುವ ತಂತಿಗಳನ್ನೂ ಕಾಣಬಹುದು !

ಇಷ್ಟೇ ಅಲ್ಲದೇ ಇದೇ ತರಹದ ನಲವತ್ತಕ್ಕಿಂತಲೂ ಹೆಚ್ಚು ಶಿಲಾಬಾಲಿಕೆಯರಿದ್ದಾರಂತೆ ಅಲ್ಲಿ. ನೋಡಲು, ಅರ್ಥಮಾಡಿಕೊಳ್ಳಲು, ಫೋಟೋ ಕ್ಲಿಕ್ಕಿಸಲು ಒಳ್ಳೆಯ ಕ್ಯಾಮೆರಾ ಮತ್ತು ಸಮಯ ಬೇಕಷ್ಟೆ :-) ಇಲ್ಲಿಯವರೆಗೆ ಹೇಳಿದಷ್ಟನ್ನು ಬಿಟ್ಟು ಬೇರೆ ಎಲ್ಲಾ ಮದನಿಕೆಯರನ್ನು ತೋರಿಸಲು ಅಲ್ಲಿಯ ಗೈಡುಗಳು ಸಿಕ್ಕರೆ ಅದೂ ಪುಣ್ಯವೇ :-)
 

ದೇವಸ್ಥಾನದ ಒಳಭಾಗದಲ್ಲಿರೋ ಮೇಲ್ಛಾವಣಿ. ಕಲ್ಲುಗಳು ಒಂದರೊಳಗೊಂದು ಕೂತಿರೋ ಪರಿ ನೋಡಿ.. ಯಾವುದೇ ಅಂಟಿಲ್ಲದೆ ನೇತಾಡುತ್ತಿರುವ ಕಲಾ ಕೌಶಲ್ಯ


ಒಳಗಿನ ಮೇಲ್ಫಾವಣಿಯ ಶಿಲ್ಪಗಳನ್ನು ನೋಡಲು ಕತ್ತಲಲ್ಲಿ ಸಾಧ್ಯವಾಗದೇ ಇರುವುದರಿಂದ ಇಲ್ಲೊಂದು ಲೈಟಿಟಿದ್ದಾರೆ. ಅದರಲ್ಲಿ ನೋಡಲು ೨೦ ರೂ ! ಇಲ್ಲಿನ ಲೈಟಿನ ಜಗಮಗದಲ್ಲಿ ಮುಂದಿನ ಕೆಲ ಶಿಲ್ಪಗಳು ಮಸುಕಾಗಿವೆ :-(

ದೇಗುಲದ ಒಳಗಿರುವ ನೃತ್ಯರಾಣಿ ಶಾಂತಲೆಯ ಪ್ರತಿಮೆನೋಡ್ತಾ ಕೂತ್ರೆ, ಬರೆಯುತ್ತಾ ಹೋದ್ರೆ ಇಲ್ಲಿರೋ ಶಿಲ್ಪಗಳ ವೈಶಿಷ್ಟ್ಯ ಬರೆದು ಮುಗಿಯುವುದಲ್ಲ. ಏಳೆಂಟು ಸಾಲುಗಳ ಶಿಲ್ಪಗಳಲ್ಲಿ ಮಹಾಭಾರತ, ಪುರಾಣ, ನವಿಲು, ಸಿಂಹ, ಆನೆ ಹೀಗೆ ಇಲ್ಲಿಯವರೆಗೆ ಬರೆದ ದೇವಸ್ಥಾನಗಳಲ್ಲಿ ಇದ್ದ ಎಲ್ಲವೂ ಇವೆ ! ಅದು ಬಿಟ್ಟು ಬೇರೇನಾದ್ರೂ ಇದ್ರೆ ಅದ್ರ ಬಗ್ಗೆ ಹಾಕುತ್ತೇನೆ

ಹಿರಣ್ಯಕಶಿಪುವಿನ ಸಂಹರಿಸಿದ ಉಗ್ರ ನರಸಿಂಹ ಅವನ ಕರುಳನ್ನೇ ಮಾಲೆ ಮಾಡಿ ಹಾಕಿಕೊಂಡಿರುವುದು !
ಹೊರಭಾಗದಲ್ಲಿನ ಶಿಲ್ಪಗಳ ಸಾಲುUgra narasimha

Nrutya ganapati

ಗಜಾಸುರ ಸಂಹಾರ: ಗಜಾಸುರನನ್ನು ಸಂಹರಿಸಿದ ಶಿವ ಅದರ ಹೊಟ್ಟೆಯನ್ನು ಬಗೆದು ಅದರಲ್ಲಿ ನಿಂತು ತಾಂಡವವಾಡುತ್ತಿರುವುದು ! ಆನೆಯ ಕಾಲುಗಳು ಮೇಲೆ ಹೋಗಿರುವುದನ್ನು, ಶಿವನ ಕೈಯ ಒಂದು ಬೆರಳು ಆನೆಯ ಚರ್ಮ ಬಗೆದು ಹೊರಬಂದಿರುವುದನ್ನೂ ಕಾಣಬಹುದು

ಕಪ್ಪೆ ಚೆನ್ನಿಗರಾಯನ ದೇವಸ್ಥಾನ


ಅಕ್ಕ ಪಕ್ಕದಲ್ಲಿರೋ ರಂಗನಾಯಕಿ, ಸೌಮ್ಯನಾಯಕಿಯ ದೇಗುಲಗಳ ಕಡೆ ಮುಖ ಮಾಡಿರೋ ಚೆನ್ನಕೇಶವನ ಸುತ್ತಲಿನ ಪ್ರದಕ್ಷಿಣಾಪಥದಲ್ಲಿ

ಮತ್ಯ್ಸಯಂತ್ರವ ಬೇಧಿಸುತ್ತಿರುವ ಅರ್ಜುನ: ಅರ್ಜುನನ ಬಿಲ್ಲನ್ನ ತಟ್ಟಿದರೆ ಸಂಗೀತ ಬರುತ್ತಿತ್ತಂತೆ. ಅದಕ್ಕಾಗಿ ತಟ್ಟಿದ ಜನ ಬಿಲ್ಲ ಮುರಿದಿದ್ದಾರೆ. ನಂತರ ಅವನ ಕೈ, ಕಾಲುಗಳಲ್ಲೂ ಶಬ್ದ ಬರುತ್ತೆ ಅಂತ ಅದನ್ನೂ ಭಗ್ನಗೊಳಿಸಿರೋ ದೃಶ್ಯ :-(


Varaha avataaraVenu Gopala


Back view of Soumya Nayaki temple
Kalinga Mardhana Krishna


ಇದಾದ ನಂತರ ನಾಲ್ಕು ಮೂಲೆಗಳಲ್ಲಿ ಮೂರೇ ಮೂಲೆಗಳ ಮೇಲೆ ನಿಂತಿರೋ ಕಂಬವನ್ನು ಮತ್ತು ಕೆರೆಯನ್ನೂ ಕಾಣಬಹುದು

ಬರೆಯಹೋದರೆ ಜಾಗ ಸಾಲೋಲ್ಲ. ಅದೇ ಒಂದು ಕಾದಂಬರಿಯಾದೀತೆಂಬ ಭಯದಲ್ಲಿ ಸದ್ಯಕ್ಕೊಂದು ವಿರಾಮ. ಮಾಹಿತಿ ಒದಗಿಸಿದ ಬೇಲೂರ ಬಗೆಗಿನ ಕೈಪಿಡಿಗೆ, ಗೈಡುಗಳಿಗೆ, ಜೊತೆಯಾದ ಹರೀಶಣ್ಣ, ಸುಮುಖ, ಸುಬ್ಬುವಿಗೊಂದು ಜೈ ಅನ್ನುತ್ತಾ ಸದ್ಯಕ್ಕೊಂದು ವಿರಾಮ.

ಮುಂದಿನ ಭಾಗದಲ್ಲಿ : ಹಳೇಬೀಡು

4 comments:

 1. very nice maga... I am sure it will prove as knowledge base for finding details of Hoysala temples...Superb effort.

  ReplyDelete
 2. Excellent effort. Last week I visited the temple. You made me to recollect those memories. Thank you and keep going

  ReplyDelete
 3. ಚಂದದ ಛಾಯಾಗ್ರಹಣ, ಸುಂದರ ಬರವಣಿಗೆ, ಉತ್ತಮ ಮಾಹಿತಿಯುಳ್ಳ ಮತ್ತೊಂದು ಲೇಖನ. ಈ ಪ್ರವಾಸಕ್ಕೆ ಜೊತೆಯಾಗಲು ಕರೆದಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು. ಬ್ಲಾಗನ್ನು ಓದುತ್ತಿದ್ದಾಗ ಇನ್ನೊಮ್ಮೆ ಹೋಗಿಬಂದಂತಾಯ್ತು ಶಿಲ್ಪಕಲಾಕಾಶಿಗೆ.

  ಬರೆಯುತ್ತಿರು ಪ್ರಶಸ್ತಿ, ಹೀಗೇ.

  ReplyDelete
 4. Thanks a lot Srinidhi, Ajey and Subbu. It was a pleasure travelling with you Subbu :-)

  ReplyDelete