Monday, December 1, 2014

ಕರ್ನಾಟಕದ ಹೊಯ್ಸಳ ದೇಗುಲಗಳು-೧೨ : ಚೆನ್ನಕೇಶವ , ನಾಗೇಶ್ವರ ದೇಗುಲಗಳು, ಮೊಸಳೆ

ಪ್ರೇರಣೆ:
ಹೊಯ್ಸಳ ದೇವಸ್ಥಾನಗಳನ್ನ ನೋಡ್ಬೇಕಂದ್ರೆ ಹಾಸನಕ್ಕೆ ಬರ್ಬೇಕು ಕಣಪ್ಪ ಅಂತ ಜಾವಗಲ್ಲಿನ ಭಟ್ರು ಹೇಳ್ತಿದ್ದ ಮಾತು ಮನಸಲ್ಲೇ ಕೂತು ಬಿಟ್ಟಿತ್ತು ಅದ್ಯಾಕೋ. ಹಾಸನದ ಭಾರತತ್ತೆ ಮನೇಲಿ ಯಾವಾಗ್ಲೂ ಕರೀತಿದ್ರಿಂದ ಅವ್ರ ಮನೆಗೆ ಒಮ್ಮೆ ಹೋಗಬೇಕೆಂಬ ಪ್ಲಾನೂ ಇತ್ತು ಸುಮಾರು ದಿನದಿಂದ.  ಅಲ್ಲಿಗೆ ಹೋಗ್ಬಂದಂಗೂ ಆಯ್ತು, ದೇವಸ್ಥಾನ ಸುತ್ತಿದಂಗೂ ಆಯ್ತು ಅಂತ ಪ್ಲಾನ್ ಹಾಕ್ದೆ ಒಂದು ವಾರಾಂತ್ಯಕ್ಕೆ. ಹಾಸನದ ಹತ್ರ ಇರೋ ಸುಮಾರಷ್ಟು ದೇಗುಲಗಳ ಹೆಸ್ರ ಗೆಳೆಯ ಗಿರಿ ಬಾಯಲ್ಲಿ ಹಲವು ಸಲ ಕೇಳಿದ್ರೂ ಯಾವ್ಯಾವ್ದು ನೋಡಬಹುದು ಈ ವಾರಕ್ಕೆ ಅಂತ ಪ್ಲಾನ್ ಮಾಡೋ ಸಲುವಾಗಿ ಗೂಗಲ್ಲ ಮರೆಹೋದೆ. ಅಲ್ಲಿ ನನ್ನ ಮನಸ್ಸ ಸೆಳೆದದ್ದು "ಮೊಸಳೆ" ಎಂಬ ಊರು. ಹಾಸನದಿಂದ ಹದಿಮೂರು ಕಿ.ಮೀ ದೂರ ಇರೋ ಈ ಊರಲ್ಲಿ ಚೆನ್ನಕೇಶವ, ನಾಗೇಶ್ವರ ಎಂಬ ಅವಳಿ ದೇಗುಲಗಳಿವೆ ಅಂತ ಓದಿದ ಮೇಲಂತೂ ಇಲ್ಲಿಗೆ ಹೋಗಲೇಬೇಕೆಂದು ನಿರ್ಧರಿಸಿದ್ದೆ.

ಹೋಗೋದು ಹೇಗೆ ?
ಬೆಂಗಳೂರಿಂದ ಆರೂವರೆಗಿರೋ ರೈಲಿಗೆ ಅರಸೀಕೆರೆ ತನಕ  ಹೊರಡಬೇಕೆಂದು ಐದೂಕಾಲಿಗೆ ಮನೆಬಿಟ್ಟರೂ ಬಸ್ಟಾಂಡಿಗೆ ಬರೋ ಹೊತ್ತಿಗೆ ೬:೩೫. ಅರಸೀಕೆರೆಯಲ್ಲಿರೋ ಹೊಯ್ಸಳರ ಕಾಲದ್ದೇ ಆದ ಈಶ್ವರ ದೇಗುಲ ನೋಡಿ ಅಲ್ಲಿಂದ ಮೊಸಳೆಗೆ ಬರುವ ಪ್ಲಾನೊಂದಿತ್ತು. ಆದ್ರೆ ಲೇಟಾಗಿದ್ರಿಂದ ತಗೋ ಇನ್ನೇನು ರೈಲು ಹೋಗಿರತ್ತೆ ಅಂತ ಹಾಸನಕ್ಕೆ ಸಿಕ್ಕಿದ ನೇರ ಬಸ್ಸು ಹತ್ತಿದೆ.ಅದರಲ್ಲಿ  ೧೯೨ ರೂ ತೆತ್ತು ಹಾಸನ ತಲುಪೋ ಹೊತ್ತಿಗೆ ೧೦:೨೫. ಅಲ್ಲಿನ ಮುಖ್ಯ ಬಸ್ ನಿಲ್ದಾಣದಲಿ ಪ್ಲಾಟಫಾರಂ ೧೧ರಲ್ಲಿ ಮೊಸಳೆಗೆ ನೇರ ಬಸ್ಸುಗಳಿವೆ. ಮೊಸಳೆ ಊರಿಗೆ ೧೨ ಘಂಟೆಗೆ ನೇರ ಬಸ್ಸಿದೆ. ಅದು ಬಿಟ್ಟರೆ ಪ್ರತೀ ಅರ್ಧಘಂಟೆಗೆ ಇರುವ ಮೊಸಳೆಹೊಸಳ್ಳಿಗೆ ಹೋಗುವ ಬಸ್ಸುಗಳಲ್ಲಿ ಹೋಗಿ ಮೊಸಳೆ ಗಡಿಯಲ್ಲಿ ಇಳಿದು ಎರಡು ಕಿ.ಮೀ ನಡೆದುಹೋಗಬಹುದು. ಹನ್ನೆರಡರವರೆಗೆ ಕಾಯೋ ಮನಸ್ಸಿಲ್ಲದ ಕಾರಣ ಹನ್ನೊಂದರ ಬಸ್ಸು ಹತ್ತಿದೆ. ಹಲವು ಬ್ಲಾಗುಗಳಲ್ಲಿ ಮೊಸಳೆಗೆ ಬಸ್ಸೇ ಇಲ್ಲ. ನಡೆದು ಹೋಗಬೇಕೆ, ಅದಿಲ್ಲ. ಇದಿಲ್ಲ ಅಂತ ನೂರೆಂಟು ವರಾತಗಳನ್ನೇ ಓದಿದ್ದ ನಾನು ಅವುಗಳ ಸತ್ಯಾಸತ್ಯತೆಯ ಪರೀಕ್ಷಿಸಲಾದ್ರೂ ಈ ಬಸ್ಸಲ್ಲಿ ಹೊಗಬೇಕಿತ್ತು :-)

Mosale Gadi Stop.

ಹಾಸನದಿಂದ ಮೊಸಳೆಗಡಿಗೆ ೧೫ರೂ ಚಾರ್ಚು.ಹಾಸನದಿಂದ ೧೧:೦೫ ಕ್ಕೆ ಬಿಟ್ಟ ಬಸ್ಸು ಮೊಸಳೆಗಡಿ ತಲುಪಿದ್ದು ೧೧:೧೮ಕ್ಕೆ. ಅಲ್ಲಿಂದ ಕೆಳಗೆ ಸಾಗೋ ಹಾದಿಯಲ್ಲಿ ಇಳಿದು ಬಲಕ್ಕೆ ತಿರುಗಿ ಸ್ವಲ್ಪ ಮುಂದೆ ಹೋಗೋ ಹೊತ್ತಿಗೆ ಕೆರೆ ಏರಿ ಕಾಣುತ್ತದೆ. ಕೆರೆ ಏರಿಯ ಎಡಕ್ಕೆ ಸಾಗೋ ಮೆಟ್ಟಿಲುಗಳ ಮೂಲಕ ಎಡಭಾಗದ ಎತ್ತರದ ಏರಿಗಳನ್ನೇರಿ ಇಪ್ಪತ್ತು ನಿಮಿಷ ನಡೆಯುವಷ್ಟರಲ್ಲಿ ಮೊಸಳೆ ಸಿಗುತ್ತೆ. ಫುಲ್ ಚದುರಂಗದ ಗಿಡಗಳಿಂದ  ಕಂಗೊಳಿಸೋ ಆ ಏರಿಯನ್ನೇ ತಮ್ಮ ಸಾಮ್ರಾಜ್ಯವನ್ನಾಗಿಸಿಕೊಂಡ ಚಿಟ್ಟೆಗಳನ್ನ ನೋಡುವುದೇ ಒಂದು ಹಬ್ಬ. ಅವುಗಳಲ್ಲಿ ಕೆಲವನ್ನು ಫೇಸ್ಬುಕ್ಕಿನ ನನ್ನ ಚಿಟ್ಟೆ ಆಲ್ಬಮ್ಮಿನಲ್ಲಿ ಹಾಕಿದ್ದೇನೆ ನೋಡಿ

Kereya eri



ಕೆರೆ ಏರಿ ಮುಗಿಯುತ್ತಿದ್ದಂತೆಯೇ ಒಂದು ಹನುಮಂತನ ಕಲ್ಲು ಸಿಗುತ್ತೆ
ಅದರ ಪಕ್ಕದಲ್ಲೇ ಹೋಗೋ ರಸ್ತೆಯಲ್ಲಿ ಬಲಕ್ಕೆ ಹೋದರೆ ಮತ್ತೊಂದು ಆಂಜನೇಯನ ಗುಡಿ ಸಿಗುತ್ತೆ. ಈ ಆಂಜನೇಯನ ಗುಡಿಯ ಬಳಿಯಿಂದ ಮುಂದೆ ಕಾಣೋದೇ ಹೊಯ್ಸಳ ದೇಗುಲಗಳು. ಇಲ್ಲಿ ಅವಾಗಾವಾಗ ಓಡಾಡುತ್ತಿರುವ ಬೈಕು, ಜನರಲ್ಲಿ ಯಾರತ್ರ ಈ ದೇಗುಲಗಳ ಬಗ್ಗೆ ಕೇಳಿದ್ರೂ ಅದನ್ನ ತೋರಿಸ್ತಾರೆ ಅನ್ನೋದು ಬೇರೆ ಪ್ರಶ್ನೆ ಬಿಡಿ

ಆಂಜನೇಯನ ಗುಡಿ

ಹೊಯ್ಸಳದೇಗುಲಗಳ ಹೆಬ್ಬಾಗಿಲು
ಅದನ್ನು ದಾಟಿ ಮುಂದೆ ಬಂದರೆ ಎರಡು ದೇಗುಲಗಳು ಕಾಣಸಿಗುತ್ವೆ. ಬಲದಲ್ಲಿರೋದು ಚೆನ್ನಕೇಶವ. ಎಡದಲ್ಲಿರೋದು ನಾಗೇಶ್ವರ. ಹರಿಹರರ ದೇಗುಲಗಳು ಪಕ್ಕಪಕ್ಕದಲ್ಲೇ ಇರೋ ಭಾಗ್ಯವ ಕಾಣಲು ಒಳಹೋಗುವಷ್ಟರಲ್ಲೇ ದೇಗುಲಗಳಿಗೆ ಬೀಗ ಜಡೆದಿದ್ದು ಕಂಡುಬಂತು. ಅಷ್ಟರಲ್ಲಿ ಬೆಂಗಳೂರಿಂದ ಇವನ್ನು ನೋಡಲೆಂದೇ ಬಂದದ್ದ ಕೇಳಿ ಊರವರೊಬ್ಬರು ಅಲ್ಲಿನ ಬೀಗ ತೆಗೆಯಲು ಮುಂದೆ ಬಂದರು . ಅಲ್ಲಿಂದ ಪ್ರಾರಂಭವಾಯ್ತು ದೇಗುಲ ದರ್ಶನ

ಚೆನ್ನಕೇಶವ ದೇವಸ್ಥಾನ, ಮೊಸಳೆ

ನಾಗೇಶ್ವರ ದೇವಸ್ಥಾನ, ಮೊಸಳೆ

ದೇಗುಲದ ಸ್ಥಾಪನೆಯ ಬಗೆಗಿರುವ ದೇಗುಲಗಳು

ಇತಿಹಾಸ ಮತ್ತು ವೈಶಿಷ್ಟ್ಯ:
ಮೊಸಳೆಯಲ್ಲಿನ ಹೊಯ್ಸಳ ದೇಗುಲಗಳನ್ನು ಹೊಯ್ಸಳರಸ ಎರಡನೆಯ ವೀರಬಲ್ಲಾಳ ೧೨೦೦ ರಲ್ಲಿ ಕಟ್ಟಿಸಿದನಂತೆ. ಇಲ್ಲಿನ ಬಹುತೇಕ ಶಿಲ್ಪಗಳ ಮೂಗು, ಕಣ್ಣುಗಳನ್ನು ಹಾಳುಮಾಡಿದ್ದರೂ ಇಲ್ಲಿಯವರೆಗೆ ಎಲ್ಲೂ ಕಂಡಿಲ್ಲದ ಶಿವಜಲೇಂದ್ರ ಸ್ವಾಮಿ, ಇಲ್ಲಿಯವರೆಗಿನ ಹೊಯ್ಸಳ ದೇಗುಲಗಳಲ್ಲಿ ಇಲ್ಲದ ಶಿಖರದಲ್ಲಿರುವ ಕಲಶ, ಎಲ್ಲೆಡೆ ಇರುವಂತೆ ಕೆಳಗಿರದೇ ಶಿಖರದ ಮೇಲಿರುವ ಹೊಯ್ಸಳನ ಶಿಲ್ಪ , ನೇರವಿರದೇ ಪೂರ್ವಕ್ಕೆ ತಿರುಗಿದ ಗರುಡ, ಪ್ರತೀ ಶಿಲ್ಪದ ಕೆಳಗೆ ಅದನ್ನ ಕೆತ್ತಿದವನ ಹೆಸರು ಅಥವಾ ಆ ಶಿಲ್ಪದ ಹೆಸರಿರುವುದು ಮುಂತಾದ ವೈಶಿಷ್ಟ್ಯಗಳನ್ನು ಕಾಣಬಹುದು 

ನಾಗೇಶ್ವರ ದೇಗುಲದ ಪ್ರವೇಶದ್ವಾರ

ನರ್ತಿಸುತ್ತಿರುವ ಪಾರ್ವತಿ ಮತ್ತು ಒಡ್ಡೋಲಗವನ್ನು ಗಮನಿಸಿ

ಬಾಗಿಲ ಮೇಲ್ಛಾವಣಿ. ದ್ವಾರಪಾಲಕರದ ಭೃಂಗೀಶ್ವರ, ನಂದೀಶ್ವರರನ್ನೂ ಕಾಣಬಹುದು

ಮೇಲ್ಛಾವಣಿಯ ನೋಟ ಸ್ವಲ್ಪ ಹತ್ತಿರದಿಂದ. ನರ್ತಿಸುತ್ತಿರುವ ಪಾರ್ವತಿಯ ಮತ್ತೊಂದು ಭಂಗಿ

 
ದ್ವಾರಪಾಲಕ ನಂದೀಶ್ವರ

ದ್ವಾರಪಾಲಕ ಭೃಂಗೀಶ್ವರ
ಕೈಲಾಸದ ಚಿತ್ರಣವನ್ನು ಕಾಣಬಹುದು ಮೇಲ್ಛಾವಣಿಯ ಮತ್ತೊಂದು ಮಗ್ಗುಲಲ್ಲಿ

ಪ್ರವೇಶದ್ವಾರದಲ್ಲಿರುವ ಹೊಯ್ಸಳ ಶಿಲ್ಪ

ನಾಗೇಶ್ವರ ದೇಗುಲದಲ್ಲಿ ಏನೇನಿದೆ ? :
ನಾಗೇಶ್ವರ ದೇಗುಲ ಹೊಕ್ಕುತ್ತಿದ್ದಂತೆಯೇ ಮೊದಲಿಗೆ ಕಾಣಸಿಗೋದು ಸಪ್ತಮಾತೃಕೆಯರ ವಿಗ್ರಹ. ನಂತರದ ಖಾಲಿ ಮಂಟಪದಲ್ಲಿ ಕಳ್ಳರು ಕದಿಯೋ ಮುಂಚೆ ಸರಸ್ವತಿಯ ವಿಗ್ರಹವಿತ್ತಂತೆ :-( ತದನಂತರದಲ್ಲಿ ಗಣಪತಿ, ನಂತರ ನಾಗೇಶ್ವರನ ಗರ್ಭಗೃಹ, ನಂತರದ ಖಾಲಿ ಮಂಟಪದಲ್ಲಿ ಚಾಮುಂಡೇಶ್ವರಿಯ ವಿಗ್ರಹವಿತ್ತಂತೆ. ನಂತರದಲ್ಲಿ ಆತ್ಮಲಿಂಗ, ಚೆನ್ನಕೇಶವನ ವಿಗ್ರಹಗಳನ್ನು ಸಾಲು ಮಂಟಪಗಳಲ್ಲಿ ಕಾಣಬಹುದು. ಚೆನ್ನಕೇಶವನ ವಿಗ್ರಹವನ್ನೂ ಕದಿಯಲು ಪ್ರಯತ್ನಿಸಿ, ಸಾಧ್ಯವಾಗದ್ದು ಅಲ್ಲಿ ಆಗಿರುವ ಗಾಯಗಳಿಂದ ತಿಳಿಯುತ್ತೆ. ನಾಗೇಶ್ವರನ ಎದುರಲ್ಲಿ ನಂದಿಯಿದ್ದಾಗೆ. ನಂದಿಯ ಕೊಂಬುಗಳ ಮೇಲೆ ಕೈಯ ಬೆರಳುಗಳನ್ನಿಟ್ಟು ಅದರ ಮಧ್ಯದಲ್ಲಿ ಶಿವನ ನೋಡಿ ನಮಸ್ಕರಿಸಿದ ನಾವು ನಂದಿಯ ತಲೆ ಮೇಲಿರುವ ಕೈಲಾಸದ ಚಿತ್ರಣ ಮತ್ತು ಅದರ ಎದುರಿಗೆ ನಾಗೇಶ್ವರನ ವಿಗ್ರಹವಿದ್ದ ಗರ್ಭಗೃಹಕ್ಕಿಂತ ಮುಂಚಿನ ಪ್ರಾಕಾರ ಅಥವಾ ಸುಖನಾಸಿಯಲ್ಲಿದ್ದ ನೃತ್ಯಗಣಪನನ್ನೂ ಕಂಡೆವು
ಹೊರಬಂದಾಗ ಕಂಡ ದೇವಿ. ಇಲ್ಲಿ ಎಂಟು ಮೂಲೆಗೆ ಎಂಟು ಕಲಶಗಳಿವೆಯೆಂತೆ. ಒಂದು ಮೂಲೆಯ ಕಲಶವನ್ನು ಚಿತ್ರದ ಕೊನೆಯಲ್ಲಿ ಕಾಣಬಹುದು

ನಾಗೇಶ್ವರ ದೇಗುಲದ ಪಾರ್ಶ್ವ ನೋಟ


ನಾಗರಾಣಿಯ ವಿಗ್ರಹ.. ಇನ್ನು ಇದನ್ನು ಹಾಳುಮಾಡೋದಕ್ಕೆ ಸಾಧ್ಯವಿದೆಯೇ ?

ವಿಷ್ಣು. ಪಕ್ಕದ ಮೂರ್ತಿಯ ಕಾಲೇ ಮಾಯವಾಗಿದೆ !

ನರ್ತಿಸುತ್ತಿರುವ ಪಾರ್ವತಿಯ ಮತ್ತೊಂದು ಭಂಗಿ. ಇದೇ ಭಂಗಿಯಲ್ಲಿನ ಷಡ್ಭುಜ ಸರಸ್ವತಿಯನ್ನು ಕಾಣಬಹುದು. ಆದ್ರೆ ಅವಳ ಕೈಯಲ್ಲಿ ಇರದ ಬಿಲ್ಲುಬಾಣಗಳನ್ನು ಇಲ್ಲಿ ಕಾಣುತ್ತಿರುವುದರಿಂದ. ಸೌಮ್ಯ ಭಾವದ ಬದಲು ಉಗ್ರ ಭಾವವ ಕಾಣಬಹುದಾದ್ದರಿಂದ ಇದನ್ನು ಪಾರ್ವತಿಯೆನ್ನಬಹುದು

ಅದೇ ಶಿಲ್ಪದ ಮತ್ತೊಂದು ನೋಟ .ಇಲ್ಲಿ ಆಯುಧಗಳಾದ ರುಂಡ ಮಾಲೆಯನ್ನೂ ಕಾಣಬಹುದು


ಬ್ರಹ್ಮನ ವಿಗ್ರಹ ಹಲವು ಹೊಯ್ಸಳ ದೇಗುಲಗಳಲ್ಲಿದೆಯಾದರೂ ಕುಂತ ಭಂಗಿಯ ಬ್ರಹ್ಮನ ಇಲ್ಲೇ ನೊಡಿದ್ದು

ಇಲ್ಲಿನ ವೈಶಿಷ್ಟ್ಯವಾದ ಶಿಲ್ಪ, ಶಿವಜಲೇಂದ್ರ ಸ್ವಾಮಿ. ಇದಕ್ಕೆ ಕರ್ನಾಟಕದ ಬೇರೆ ಕಡೆ ಬೇರೆ ಬೇರೆ ಹೆಸರಿದ್ದಿರಲೂ ಬಹುದು. ನಾಲ್ಕನೆಯ ತಲೆ ತಲೆಯ ಮೇಲ್ಗಡೆ ಇರುವುದನ್ನು ಗಮನಿಸಿ !

ದೇಗುಲದ ಶಿಖರದ ಹತ್ತಿರವಿರುವ ಹೊಯ್ಸಳ ಶಿಲ್ಪ

ಉಗ್ರನರಸಿಂಹ

ಚವಳಗ ಬೀಸೋರು

ನಾಗೇಶ್ವರ ದೇಗುಲದ ಹಿಂಬಾಗದ ನೋಟ


ಬಲಿಯ ದಾನ

ಮೂರ್ಲೋಕ ಅಳೆದ ತ್ರಿವಿಕ್ರಮ

ಪೂರ್ವ ದಿಕ್ಕಿಗೆ ತಿರುಗಿ ನಿಂತ ಗರುಡ. ಮುಖ ಹೊರಳಿಸಿರೋ ಗರುಡ ಕೂಡ ಇಲ್ಲಿನ ಅಪರೂಪದ ಶಿಲ್ಪ

ವಿಷಕನ್ಯೆ ಅನ್ನೋದನ್ನು ಚೇಳುಗಳಿಂದ ತೋರಿಸಲಾಗಿದೆ

ಚೆನ್ನಕೇಶವ ದೇಗುಲದ ಮೇಲ್ಛಾವಣಿ


ಚೆನ್ನಕೇಶವ ದೇಗುಲದ ಪಾರ್ಶ್ವನೋಟ

ದೇವಿ ಪಾರ್ವತಿ


ಇಲ್ಲಿನ ಶಿಲ್ಪಗಳಲ್ಲಿ ಶಿಲ್ಪಿಯ ಹೆಸರನ್ನೋ, ಅಥವಾ ಅದು ಯಾವ ಶಿಲ್ಪ ಅಂತಲೋ ಕೆತ್ತಿರುವುದನ್ನು ಕಾಣಬಹುದು. ಮುಂಬರುವ ಶಿಲ್ಪಗಳಲ್ಲಿ ವಜ್ರಭೂಷ, ರಾಕ್ಷಸಿ ಮಂತಾದ ಅಕ್ಷರಗಳನ್ನು ಕಾಣಬಹುದು. ಶಿಲ್ಪದ ಕಾಲಭಾಗದಲ್ಲಿ


ರುದ್ರದಂಡದೊಂದಿಗೆ ಇರುವ ಸ್ಮಶಾನಭೈರವಿ






ಬೇಲೂರು ಹಳೇಬೀಡಲ್ಲಿ ಕಂಡ ವೇಣುಗೋಪಾಲನ ವಿಗ್ರಹ. ಈ ದೇವಸ್ಥಾನ ಅದಕ್ಕಿಂತ ಪುರಾತನವಾದದ್ದರಿಂದಲೋ ಸರಿಯಾದ ರಕ್ಷಣೆ ದಕ್ಕದ್ದರಿಂದಲೋ ಗೊತ್ತಿಲ್ಲ. ಉಳಿದ ಮೂರ್ತಿಗಳಂತೆ ಇದೂ ಹಾಳಾಗಿದೆ

ಉಗ್ರನರಸಿಂಹ


ಹನುಮ ? !

ಯೋಗನರಸಿಂಹ

ಚೆನ್ನಕೇಶವನ ದೇಗುಲದ ಒಳಗೆ ಅಷ್ಟದಿಕ್ಪಾಲಕರನ್ನು ಚಾವಣಿಯಲ್ಲಿ ಕಂಡರೆ ಲಕ್ಷ್ಮೀ ನಾರಾಯಣ, ಸರಸ್ವತಿ, ಗಣಪತಿ, ವೈಷ್ಟಮಿ(ಸ್ಥಳೀಯರ ಬಾಯಲ್ಲಿನ ಹೆಸರು), ಲಕ್ಷ್ಮಿ, ಯೋಗನರಸಿಂಹರನ್ನು ಕಾಣಬಹುದು. ಒಳಗಡೆಯ ಛಾವಣಿಯಲ್ಲಿ ರುದ್ರತಾಂಡವ ಮತ್ತು ಉಗ್ರನರಸಿಂಹರನ್ನು ಕಾಣಬಹುದು.

ತ್ರಿಮೂರ್ತಿಗಳು



ಚೆನ್ನಕೇಶವ ದೇಗುಲದ ಹೊಯ್ಸಳ ಶಿಲ್ಪ

ಜೋಡಿದೇಗುಲಗಳ ಹಿನ್ನೋಟ

ಶಿಲ್ಪಗಳು ಕರಗಿಹೋಗೋದು ಅಂದ್ರೆ ಹೀಗೆ !!

ಚೆನ್ನಕೇಶವ ದೇಗುಲದ ಮತ್ತೊಂದು ನೋಟ

ವಾಪಾಸ್ ತೆರಳೋದು ಹೇಗೆ ?
ಇಲ್ಲಿ ೧೨ ಕ್ಕೆ ಬಂದ ಬಸ್ಸು ೧೨:೩೦ಕ್ಕೆ ವಾಪಾಸ್ ಹೋಗತ್ತೆ. ಅದು ಜಸ್ಟ್ ಮಿಸ್ಸಾದ ಕಾರಣ ಮತ್ತೊಂದು ಸುತ್ತು ದೇಗುಲ ಪ್ರದಕ್ಷಿಣೆ ಹಾಕಿ ಮೊಸಳೆ ಗಡಿಯವರೆಗೆ ನಡೆದು ೧:೧೦ರ ಹೊತ್ತಿಗೆ ತಲುಪಿದ್ದೆ. ಹತ್ತು ನಿಮಿಷ ಕಾಯುವಷ್ಟರಲ್ಲೇ ಬಂದ ಟ್ಯಾಕ್ಸಿ ಹತ್ತಿ ಹದಿನೈದು ರೂಗಳ ಚಾರ್ಜಿಗೆ ಮತ್ತೆ ಹಾಸನ ತಲುಪಿದ್ದೆ.


ಮುಂದಿನ ಭಾಗದಲ್ಲಿ :ದೊಡ್ಡಗೊದವನ ಹಳ್ಳಿ ದೇಗುಲ, ಹಾಸನ

4 comments:

  1. ಇಡೀ ಮಾಲಿಕೆಯೂ ನನಗೆ ಸಂಗ್ರಹ ಯೋಗ್ಯವೆನಿಸಿತು.
    ಪ್ರವಾಸ ಮಾಲಿಕೆ ಎಂದರೆ ಹೀಗೆಯೇ ಇರಬೇಕು ಎನ್ನುವ ಹಾಗೆ, ಸಚಿತ್ರ ಮತ್ತು ತಲುಪುವ ವ್ಯವಸ್ಥೆಗಳ ಸಹಿತವಿದ್ದರೆ ನಮ್ಮಂತಹ ಆರಂಭಿಕರಿಗೆ ಉಪಯುಕ್ತ.

    ReplyDelete
    Replies
    1. ನಿಮ್ಮ ಬೆನ್ನುತಟ್ಟುವಿಕೆಗೆ ಧನ್ಯವಾದಗಳು ಬದ್ರಿ ಭಾಯ್.

      Delete
  2. ಅಪೂರ್ವ ಹಾಗು ಅಪರೂಪ ಸಂಗ್ರಹ. ಸೂಪರ್. ನಿನ್ನ ಕುತೂಹಲಕ್ಕೆ ನನ್ನ ಪ್ರಣಾಮ ಆದರೆ ಒಂದು ಮಿಸ್ಸಿಂಗ್. ದೇವಸ್ತಾನದ ಇತಿಹಾಸ ಇರುವ ಫಲಕ.

    ReplyDelete
  3. ತಾಳ್ಮೆಯಿಂದ ಓದಿದ್ದಕ್ಕೆ ಧನ್ಯವಾದಗಳು ಶ್ರೀನಿಧಿ. ಸಿಕ್ಕಾಪಟ್ಟೆ ಫೋಟೋಗಳ ನಡುವೆ ದೇಗುಲದ ಇತಿಹಾಸ ಇರೋ ಫಲಕ ಹಾಕೋದು ಮಿಸ್ಸಾಯ್ತು. ಇತಿಹಾಸದ ಬಹುಭಾಗವನ್ನು ಚಿತ್ರಗಳು ಬಂದಾಗ ಅಲ್ಲಲ್ಲಿ ಹಾಕಿದ್ದೇನಲ್ಲ :-)

    ReplyDelete