Wednesday, June 3, 2015

ಇಕ್ಕೇರಿ ಕೋಟೆಯ ಸುತ್ತ:

ಪೀಠಿಕೆ:
ಹಳೇ ಇಕ್ಕೇರಿ ಕೋಟೆ ಅಂತ ಅಪ್ಪನ ಬಾಯಲ್ಲಿ ಸುಮಾರು ಸಾರಿ ಕೇಳಿದ್ದ ನನಗೆ ಅಲ್ಲಿಗೆ ಹೋಗಬೇಕೆನ್ನೋ ಆಸೆ ಸುಮಾರು ಸಮಯದಿಂದ ಇತ್ತು. ಇಕ್ಕೇರಿ ಕೋಟೆಯ ಸುತ್ತಮುತ್ತಲಿದ್ದ ಕಾವಲು ಮನೆ ಕಲ್ಮನೆಯಾಗಿ,ಶತ್ರುಗಳು ಬಂದರೆ ಸುಳಿವು ಕೊಡುತ್ತಿದ್ದ ಜಾಗ(ಸುಳಿವಿನ ಮನೆ)ಸುಳ್ಮನೆಯಾಗಿ, ದೊಡ್ಡಬೇಲಿ ಎಂಬುದು ದೊಡ್ಡಬಾಳೆಯೆಂಬ ಇಂದಿನ ನಗರವಾಗಿದೆ ಎಂಬ ಮಾತುಗಳನ್ನು ಕೇಳಿದವನಿಗೆ ಆಗಿನ ಕೋಟೆ ಹೆಂಗಿದ್ದಿರಬೇಕೆಂಬ ಕುತೂಹಲ. ದೂರದಿಂದ ನೋಡಿ ಟಾಟಾ ಹೇಳ್ತಿದ್ದ ಹೊಸನಗರ ಕೋಟೆ, ಬಹುಸಮಯದಿಂದ ಅಂದ್ಕೊಂಡಿದ್ದ ಕವಲೇದುರ್ಗ ಕೋಟೆಯೆಲ್ಲಾ ನೋಡಿದ ಮೇಲೆ ಹಳೇ ಇಕ್ಕೇರಿ ಕೋಟೆ ನೋಡಬೇಕೆನ್ನೋ ಆಸೆ ಇನ್ನೂ ಹೆಚ್ಚಾಯ್ತು. ಹಿಂಗೇ ಒಂದಿನ ಬ್ಲಾಗಿಗ ಗೆಳೆಯ ಬೇದೂರು ಆದಿತ್ಯಣ್ಣನ್ನ ಇಕ್ಕೇರಿಗೆ ಕೋಟೆಗೆ ಹೋಗನ ಅಂದಾಗ ಹೂಂ ಸರಿ ಅಂದಿದ್ದ. ಅಂತೂ ಅದಕ್ಕೆ ಮುಹೂರ್ತ ಬಂದಿದ್ದು ಏಪ್ರಿಲ್ ೨೩ಕ್ಕೆ.

ಇಕ್ಕೇರಿ ಕೋಟೆಯ ಇತಿಹಾಸ:
ಕೆಳದಿಯರಸರು ತಮ್ಮ ರಾಜಧಾನಿಗಳನ್ನು ಬದಲಾಯಿಸಿದ ಬಗ್ಗೆ ಇತಿಹಾಸದಲ್ಲಿ ಓದಿರುತ್ತೀರ. ೧೪೯೯ರಿಂದ ಮೊದಲ ಹದಿಮೂರು ವರ್ಷ ಕೆಳದಿಯನ್ನು ತಮ್ಮ ರಾಜಧಾನಿಯನ್ನಾಗಿಸಿಕೊಂಡಿದ್ದ ಅವರು ನಂತರ ಇಕ್ಕೇರಿಯನ್ನು ಆಯ್ಕೆಮಾಡಿಕೊಂಡರು.೧೫೧೨-೧೬೪೦ ರ ವರೆಗೆ ಇಕ್ಕೇರಿಯಿಂದ ರಾಜ್ಯಭಾರ ಮಾಡಿದ ಅವರು ನಂತರ ಆಯ್ಕೆ ಮಾಡಿಕೊಂಡಿದ್ದು ನಗರವನ್ನ. ಈ ಸಂದರ್ಭದಲ್ಲಿ ಕಟ್ಟಲ್ಪಟ್ಟ ಕೋಟೆಯಿದ್ದ ಜಾಗದಲ್ಲೆಲ್ಲಾ ಈಗ ಕಾಡು, ಚದುರಂಗಿ, ಲಂಟಾನದ ಮಟ್ಟಿಗಳು ತುಂಬಿಹೋಗಿದ್ದರೂ ಅಲ್ಲಲ್ಲಿ ನಡೆದಾಡಿರೋ ದಾರಿಯ ಗುರುತಿನ ಮೇಲೆ ಕೋಟೆಯಲ್ಲಿ ಅಳಿದುಳಿದ ಅವಶೇಷಗಳನ್ನು ನೋಡಿಬರಬಹುದು.


ಹೋಗುವುದು ಹೇಗೆ ?


೧)ಇಕ್ಕೇರಿಯ ಅಘೋರೇಶ್ವರ ದೇವಸ್ಥಾನದ ಹಿಂಭಾಗದಿಂದ ಹೋಗುವ ರಸ್ತೆಯಲ್ಲಿ ಹೋದರೆ ಕೆರೆ ಏರಿಯ ಹಿಂಭಾಗದಲ್ಲಿ ಬಲಕ್ಕೆ ಹೋಗುವ ರಸ್ತೆಯೊಂದು ಸಿಗುತ್ತದೆ. ಅದರಲ್ಲಿ ಹಾಗೇ ಹೋದರೆ ಒಂದು ಕಾಳಿ ಗುಡಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಬಂದ್ರೆ ಅಲ್ಲೊಂದು ಪ್ಲಾಂಟೇಷನ್ ಸಿಗುತ್ತದೆ. ಅಲ್ಲಿಂದ ಕೋಟೆಯ ಒಂದು ಪಾರ್ಶ್ವದಿಂದ ಒಳಸಾಗಬಹುದು. ಕಾಳಿ ಗುಡಿಗಿಂತ ಸ್ವಲ್ಪ ಮುಂಚೆ ಒಂದು ಬಯಲಿನತ್ತ ಸಾಗುವ ರಸ್ತೆ ಸಿಗುತ್ತೆ. ಆ ರಸ್ತೆಯ ಬಯಲಿನಲ್ಲಿ ಸ್ವಲ್ಪ ಮುಂದೆ ಹೋದರೆ ಅಲ್ಲಿಂದ ಕೋಟೆಯ ಮತ್ತೊಂದು ಪಾರ್ಶ್ವದಿಂದ ಒಳಸಾಗಬಹುದು.

೨)ಅಘೋರೇಶ್ವರ ದೇಗುಲದಿಂದ ಸ್ವಲ್ಪ ಮುಂದೆ , ಕಲ್ಮನೆಯತ್ತ ಬಂದರೆ ನಿಮ್ಮ ಬಲಭಾಗದಲ್ಲೊಂದು ಮಣ್ಣ ಹಾದಿ ಒಳಕ್ಕೆ ಸಾಗುತ್ತದೆ.
Anjaneya swami devastanakke hogo daari toristiro Adityanna
 ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗೋ ದಾರಿ ಯಾವುದು ಅಂದ್ರೆ ಅಲ್ಲಿ ಯಾರಾದರೂ ತೋರಿಸಬಹುದಾದ ದಾರಿಯಲ್ಲಿ ಸುಮಾರು ಒಂದು ಕಿ.ಮೀ ಮುಂದೆ ಸಾಗಿ ಒಂದು ಕೆರೆಯನ್ನು ದಾಟಿದರೆ ಎಡಭಾಗದಲ್ಲಿ ಸಿಗುವುದೇ ಇಕ್ಕೇರಿಯರಸರ ಕಾಲದ ಆಂಜನೇಯ ಸ್ವಾಮಿ ದೇವಸ್ಥಾನ. ಅದರಿಂದ ಹಾಗೇ ಮುಂದೆ ಸಾಗಿದರೆ ಕಾಳಿಗುಡಿ. ಅವೆರಡರ ಮಧ್ಯ ಸಿಗೋ ಬಲತಿರುವಿನಲ್ಲಿ ಸಾಗಿದರೆ ಮುಂಚೆ ಹೇಳಿದ ಪ್ಲಾಂಟೇಷನ್. ಅದರ ಪಕ್ಕಕ್ಕೆ ಸಾಗಿದರೆ ಕೋಟೆ.

ಇಕ್ಕೇರಿಯ ವೀರಾಂಜನೇಯ ಸ್ವಾಮಿ ದೇವಸ್ಥಾನ:
Sri Veeranjaneya swami temple

  ಸಾಮಾನ್ಯವಾಗಿ ಆಂಜನೇಯನ ಮುಖ ನಮ್ಮನ್ನು ನೋಡದೇ ಬಲಭಾಗಕ್ಕೆ ಹೊರಳಿರುತ್ತದೆ. ಕರ್ನಾಟಕದಲ್ಲಿರುವ ನಮ್ಮನ್ನು ಎದುರು ನೋಡುವ ಕೆಲವೇ ಕೆಲವು ಪುರಾತನ ಆಂಜನೇಯನ ವಿಗ್ರಹಗಳಲ್ಲಿ ಇದೂ ಒಂದು ಎನ್ನುತ್ತಾರೆ. ಇದನ್ನು ನೋಡಿ ಹೊರನಾಡಲ್ಲಿ ಮುಂದೆ ಮಾಡಿದರು ಅಂತ ಇಲ್ಲಿನ ಜನ ಹೇಳಿದ್ರೂ ಹೊರನಾಡಲ್ಲಿ ಎಲ್ಲಿದೆ ಎಂಬುದರ ಬಗ್ಗೆ ಅಲ್ಲಿ ಹೋಗೇ ನೋಡಬೇಕಷ್ಟೇ! ಈ ದೇಗುಲದಲ್ಲಿ ಸ್ವಾಗತಿಸುವ ಆನೆಗಳ ಜೊತೆಗೆ ಸ್ವಾಗತದ್ವಾರದ ಮೆಟ್ಟಿಲಲ್ಲಿ ಕೆಳದಿಯ ಉಳಿದ ದೇಗುಲಗಳಲ್ಲಿರುವಂತೆ ಐದು ಪ್ರಾಣಿಗಳ ಮಿಶ್ರಣವಾದ ಮಖರವೆಂಬ ಕಾಲ್ಪನಿಕ ಪ್ರಾಣಿ ಇದೆ.



ಅದನ್ನು ದಾಟಿ ಮುಂದೆ ಸಾಗಿದರೆ ಮಾರುತಿ, ಎಡಮುರಿ ಗಣಪತಿ, ದ್ವಾರಪಾಲಕರನ್ನೊಳಗೊಂಡ ಮಾರುತಿ,ಸ್ಮಶಾನ ಭೈರವಿ, ನಂದೀಶನ ವಿಗ್ರಹಗಳನ್ನು ನೋಡಬಹುದು. ಸ್ಮಶಾನ ಭೈರವಿಯ ವಿಗ್ರಹ ಚಾಲುಕ್ಯರ ಕಾಲದ ಬೇಲೂರು , ಹಳೇಬೀಡು ದೇಗುಲಗಳಲ್ಲಿ ಹೇರಳವಾಗಿದೆ. ಕೆಳದಿಯ ದೇಗುಲದಲ್ಲಿ ಸಪ್ತ ಮಾತೃಕೆಯರು, ಗಿಳಿ, ಮುನಿಗಳು, ದೇವತೆಗಳು ಮುಂತಾದ ಕೆತ್ತನೆಗಳನ್ನು ಕಂಡಿದ್ದರೂ ಸ್ಮಶಾನ ಭೈರವಿಯಂತಹ ಉಗ್ರ ಕೆತ್ತನೆಯನ್ನು ಕಂಡಿರಲಿಲ್ಲ.ಹಾಗಾಗಿ ಇಲ್ಲಿ ದೇಗುಲದ ಒಳಗೇ ಸ್ಮಶಾನ ಭೈರವಿಯ ವಿಗ್ರಹ ಸಿಕ್ಕಿದ್ದು ಸ್ವಲ್ಪ ಆಶ್ಚರ್ಯ ತರಿಸುತ್ತದೆ.  ಸ್ಮಶಾನ ಭೈರವಿಯ  ವಿಗ್ರಹದ ಮೇಲೆ "ಯಿಕ್ಕೇರಿಯ ತಿರುಮಲೇಶಾಚಾರ್ಯ" ಎಂಬ ಬರಹವಿದ್ದು ಅವರ ಕಾಲದಲ್ಲಿ ಈ ದೇಗುಲ ರಚನೆಯಾದ ಸುಳಿವು ಸಿಗುತ್ತದೆ.

ಸ್ವಾಗತದ್ವಾರದಲ್ಲಿರೋ ಮಖರ

Smashana bhairavi

Smashana bhairaviya mele iruva baraha

ದೇಗುಲದ ಮೇಲ್ಛಾವಣಿಯಲ್ಲಿ ಬಿದ್ದ ಮಳೆನೀರು ಹೊರಹರಿಯಲು ಮಾಡಿರೋ ರಚನೆಗಳಲ್ಲೂ ಸಿಂಹದ ಮುಖದ ಕೆತ್ತನೆಗಳನ್ನು ಕಾಣಬಹುದು !

ವೀರಾಂಜನೇಯ ದೇಗುಲದೆದುರು ನಾನು

ಇತ್ತೀಚೆಗೆ ಕಟ್ಟಲ್ಪಟ್ಟಿರುವ ದಕ್ಷಿಣಮುಖ ಕಾಳಿ ದೇಗುಲ
ಕೋಟೆಯ ಪ್ರವೇಶ:
ಕಾಳಿಗುಡಿಯಿಂದ ಆಂಜನೇಯನ ಗುಡಿಗೆ ಹೋಗೋ ದಾರಿಯಲ್ಲಿ ಎಡಕ್ಕೆ ಹೊರಳಿ ಸ್ವಲ್ಪ ಮುಂದೆ ಹೋದರೆ ಒಂದು ಪ್ಲಾಂಟೇಷನ್ ಸಿಗುತ್ತೆ. ಅದರ ಪಕ್ಕದಲ್ಲೇ ಕೋಟೆಗೆ ಹೋಗೋ ಈ ದಾರಿ ಕಾಣುತ್ತದೆ

ಕೋಟೆಗೆ ಹೋಗೋ ದಾರಿ


ಕೋಟೆಗೆ ಮಾರ್ದದರ್ಶಕನಾಗಿ ಆದಿತ್ಯಣ್ಣ :-)
ಹಾಗೇ ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ಕೋಟೆಯ ಗೋಡೆಗಳು ಕಾಣುತ್ತದೆ. ಅದು ಕಂಡಿತೆಂದರೆ ನೀವು ಸರಿಯಾದ ದಾರಿಯಲ್ಲಿ ಸಾಗುತ್ತಿದ್ದೀರ ಎಂದರ್ಥ.
ಕೋಟೆಯ ಸುತ್ತಲಿನ ಅಗಳ
 ಒಂದೆಡೆ ಮೂರ್ನಾಲ್ಕು ಕಲ್ಲುಗಳು ಸಿಕ್ಕವು. ಕೋಟೆಯಲ್ಲಿ ಏನೋ ಆಗಿ ಈಗ ಉರುಳಿಬಿದ್ದಿರೋ ಸಾಧ್ಯರೆಯಿರುವ ಅದು ನೀವು ಸರಿಯಾದ ಹಾದಿಯಲ್ಲೇ ಸಾಗುತ್ತಿದ್ದೀರ , ಮುಂದೆ ಸಾಗಿ ಎಂದವಾ ಅನಿಸುತ್ತಿತ್ತು :-)
ನಂತರ ಸಿಕ್ಕ ದೊಡ್ಡಾಲದ ಮರದ ಎಡಭಾಗದಲ್ಲಿ ಸಾಗಿದರೆ ಒಂದು ಕಾಡಬೈನೆ ಮರ. ಅದನ್ನು ದಾಟಿ ಮತ್ತೆ ಎಡಕ್ಕೆ ಸಾಗುತ್ತಿದ್ದಂತೆ ಒಂದು ಬಾವಿ ಕಂಡಿತು. ಅಂದರೆ ಸರಿಯಾದ ದಿಕ್ಕಲ್ಲಿ ಹೋಗ್ತಿದ್ದೀವೋ, ಇಲ್ಲವೋ ಎಂಬ ನಮ್ಮ ಸುಮಾರು ಮುಕ್ಕಾಲು ಘಂಟೆಯ ಡೌಟು ಬಗೆಹರಿಯಿತು !
ಕಾಡಬೈನೆ ಮರ
baavi #1
ಬಾವಿ(೧) ಅನ್ನು ದಾಟಿ ಬಲಕ್ಕೆ ಸಾಗುತ್ತಿದ್ದಂತೆಯೇ ಮುಂದೊಂದು ಸುರಂಗದಂತಹ ರಚನೆ ಕಂಡಿತು. ಮುಂದೆ ಸುರಂಗ ಇದ್ದಿರಬಹುದಾದ ಜಾಗ ಈಗ ಮುಚ್ಚಿಹೋಗಿದೆ :-(
Suranga-1

Suranga-1, other view

ಅಲ್ಲೇ ನಮಗೆದುರಾಗಿ ಒಂದು ಅರಳೀ ಕಟ್ಟೆ ಸಿಕ್ಕಿತು. ಮುಂದೆ ದಾರಿ ತಪ್ಪಿ ಇದೇ ಜಾಗಕ್ಕೆ ಬಂದಾಗ ಯಾವ ದಿಕ್ಕಿನಲ್ಲಿ ಸಾಗಬೇಕೆಂದು ಒಂದು ಐಡಿಯಾ ಕೊಟ್ಟಿದ್ದು ಇದೇ ಅರಳೀ ಕಟ್ಟೆ ! ಯಾವ ದಿಕ್ಕಿನಿಂದ ಬಂದಾಗ ಈ ಬಾವಿ, ಈ ಕಟ್ಟೆ ಸಿಕ್ಕಿತು ಅಂತ ಫೋಟೋ ತೆಗೆದು ಇಟ್ಟುಕೊಂಡ್ರೆ ಕೋಟೆಯಲ್ಲಿ ದಾರಿ ತಪ್ಪಿಸಿಕೊಂಡಾಗ ಹೊರಬರಲು ಸಹಾಯವಾಗುತ್ತೆ ಅಂತ ಈ ಕೋಟೆಯಲ್ಲಿ ಗೊತ್ತಾದ ಕತೆ ಆಮೇಲೆ ಹೇಳ್ತೇನೆ !
Arali katte, one of the landmarks in temple to know direction !

ಅಲ್ಲಿಂದ ಬಲಕ್ಕೆ ಸ್ವಲ್ಪ ಮುಂದೆ ಬಂದಾಗ ಮತ್ತೊಂದು ಬಾವಿ(೨) ಸಿಕ್ಕಿತು.
baavi #2
  ಬಾವಿಯ ದಾಟಿ ಮುಂದೆ ಬಂದಾಗ ಮತ್ತೊಂದು ಗುರುತು ನೆನಪಿಟ್ಟುಕೊಳ್ಳುವಂತಹ ಮರ ಸಿಕ್ಕಿತು. ಅದನ್ನು ದಾಟಿ ಎಡಕ್ಕೆ ಬಂದಾಗ ಮತ್ತೆರಡು ಕೋಟೆಯ ಅವಶೇಷಗಳು ಸಿಕ್ಕಿ ದಾರಿ ಸರಿಯಾಗಿವೆ ಎಂಬುದನ್ನು ಪುಷ್ಠೀಕರಿಸಿದವು.














 ಕೋಟೆಯುದ್ದಕ್ಕೂ ಸಿಕ್ಕ ಹಲವು ಜಾತಿಯ ಚಿಟ್ಟೆಗಳು ಮತ್ತು ಅಣಬೆಗಳ ಹೆಸರುಗಳನ್ನು ಇನ್ನೂ ತಿಳಿಯಬೇಕಷ್ಟೇ !


ಇಲ್ಲಿಂದ ಮುಂದಿನ ಹಾದಿ ಕಷ್ಟವಾಗುತ್ತಾ, ಕನ್ ಪ್ಯೂಸ್ ಮಾಡಿಸುತ್ತಾ ಸಾಗಿತು. ಚದುರಂಗಿ ಮಟ್ಟಿಗಳಿಂದ ಮುಚ್ಚಿಹೋದ ಹಾದಿಯ ಆಚೆ ಸಾಗಬೇಕೋ ಬೇಡವೋ, ಮುರಿದ ಮರವ ದಾಟಬೇಕೋ ಬೇಡವೋ ಅನ್ನೋ ಗೊಂದಲ !

ಏಣಿಯಂತಿರೋ ಮರದ ರಚನೆ
After crossing the fallen tree, you see the way again !

One of the mushroom species seen in Kote
ಕೋಟೆಯ ಬಗ್ಗೆ ಸಿಕ್ಕಾಪಟ್ಟೆ ಕೇಳಿದ್ವಿ. ಆದ್ರೆ ಸುಮಾರು ಒಂದು ಒಂದೂವರೆ ಘಂಟೆ ಆದ್ರೂ ಕೇಳಿದ ಸುಮಾರು ಜಾಗಗಳು ಕಂಡೇ ಇಲ್ವಲ್ಲ ಅನ್ನೋ ಬೇಜಾರು. ಏಪ್ರಿಲ್ ತಿಂಗಳ ಬಿಸಿಲು ಕೋಟೆಯ ಒಳಗೂ ಕಾಡುತ್ತಿತ್ತು.ಇಳಿಯುತ್ತಿದ್ದ ಬೆವರಲ್ಲಿ ಎಲ್ಲಾದ್ರೂ ದಾರಿ ತಪ್ಪಿದ್ವಾ ಅನ್ನೋ ಆತಂಕ ಬೇರೆ. ಹೊತ್ತು ಮೇಲೇರುತ್ತಾ ಬಂದಾಗ ಈ ಕೋಟೆಗೆ ಸುಮಾರು ಸಲ ಬಂದಿರೋ ಗಣಪತಣ್ಣನ ಕೇಳಿದ್ರೆ ಹೆಂಗೆ ಅಂತ ಆಯ್ತು. ಗಣಪತಿ ಮೇಷ್ಟ್ರಿಗೆ ಬೆಳಗಿಂದ ಎರಡ್ಮೂರು ಸಲ ಫೋನ್ ಮಾಡಿದ್ರೂ ತಾಗಿರಲಿಲ್ಲ. ನಾವು ಅಂದ್ಕೊಳ್ತಾ ಇರೋ ಹೊತ್ತಿಗೆ ಅವರೇ ಫೋನ್ ಮಾಡ್ಬೇಕೆ ? ಕಾಕತಾಳೀಯ ಅಂದ್ರೆ ಅದೇ ಅನ್ಸುತ್ತೆ. ಮಧ್ಯಾಹ್ನದ ಮೇಲೆ ಸಿಗೋದಾಗೂ ಹೇಳಿದಾಗ ಸ್ವರ್ಗಕ್ಕೆ ಮೂರೇ ಗೇಣಿನಷ್ಟು ಖುಷಿ. ಆದ್ರೆ ಬರೋದು ಬಂದು ಬಿಟ್ಟಿದೀವಿ. ಈಗ ವಾಪಾಸ್ ಹೋಗೋದು ಹೇಗೆ ಅನ್ನೋ ಡೌಟು ಶುರುವಾಯ್ತು
Baavi #3

Baavi #4
 ಹಾಗೇ ಅಲೆಯುತ್ತಿದ್ದಾಗ ಮತ್ತೆ ಮೂರು ಬಾವಿಗಳು ಸಿಕ್ಕಿದವು. ಹಿಂದೆ ಸಿಕ್ಕಿದ ಮರಗಳು, ಅರಳೀಕಟ್ಟೆಯ ತನಕ ಬಂದರೂ ಅಲ್ಲಿಂದ ಮುಂದೆ ದಾರಿ ಗೊತ್ತಾಗಲಿಲ್ಲ. ಅರಳೀಕಟ್ಟೆಯ ಬುಡದಿಂದ ಕೇಳಿಸುತ್ತಿದ್ದ ವಾಹನಗಳ ಶಬ್ದದ ಮೇಲೆ ಇತ್ತಲೇ ದಾರಿಯಿರಬೇಕು ಎಂಬ ಅಂದಾಜಿನ ಮೇಲೆ ಮುಂದಡಿ ಇಟ್ಟೆವು !
ಈ ಬಾರಿ ಮೇಲೆ ಹತ್ತುವ ದಾರಿ ಕಂಡಿತು.
 ಕೋಟೆಯಿಂದ ಹೊರಗೆ ಬರಬಹುದೇನೋ ಅದರಲ್ಲಿ ಅಂತ ಅದನ್ನು ಹತ್ತಿ ಸ್ವಲ್ಪ ಮುಂದೆ ನಡೆದದ್ದಾಯ್ತು.

Baavi#5

Murida choukattu

Baavi#6

ಅಲ್ಲಿ ಮುಂದೆ ನಡೆದರೂ ಹೊರಹೋಗುವ ಲಕ್ಷಣಗಳು ಕಾಣದ ಕಾರಣ ಬಂದ ದಾರಿಗೆ ಸುಂಕವಿಲ್ಲ ಅಂತ ಮತ್ತೆ ವಾಪಾಸ್ ಬಂದೆವು !

Baavi #7
 ಹಾಗೆಯೇ ಮತ್ತೊಂದು ಹಾದಿಯನ್ನು ಹಿಡಿದು ನಡೆಯುತ್ತಿದ್ದಾಗ ಮತ್ತೊಂದು ಬಾವಿ(೭) ಸಿಕ್ಕಿತು. ನಂತರದಲ್ಲಿ ನೀರು ತುಂಬುವ ತೊಟ್ಟಿ ಕೂಡ ಸಿಕ್ಕಿತು.
ನೀರು ತುಂಬುವ ತೊಟ್ಟಿ

ಇಲ್ಲಿಯವರೆಗೆ  ಕೋಟೆಯ ಗೋಡೆ, ನೀರು ತುಂಬುವ ತೊಟ್ಟಿ, ನಾಟ್ಯಮಂದಿರದ ಮುರಿದು ಬಿದ್ದ ಭಾಗದಂತಹ ರಚನೆಗಳು ಕಂಡಿದ್ದವೇ ಹೊರತು, ಹೊರಬರುವ ದಾರಿ ಕಾಣಲಿಲ್ಲ !
ಹೀಗೇ ಹುಡುಕುತ್ತಾ ನಡೆಯುತ್ತಿರಬೇಕಾದ್ರೆ ಅಂತೂ ಕೆಳಗಿಳಿಯುವ ಹಾದಿಯೊಂದು ಕಂಡಿತು !
one more broken remains of the fort

Melakke hatto haadi
 ಅದರಲ್ಲಿ ಕೆಳಗಿಳಿದರೆ ಐವತ್ತು ಅಡಿ ಆಳದ, ನಲವತ್ತು ಅಡಿ ಅಗಲದ ಅಗಳ ಅನ್ನೋ ಹೆಗ್ಗಳಿಕೆಯ ಅಗಳ ಸಿಕ್ಕಿತು. ಅದಾದ ಕೂಡಲೇ ಮೇಲಕ್ಕೆ ಹತ್ತುವಂತಹ ಕಿರಿದಾದ ಹಾದಿ..ಇದೇ ಇರಬೇಕೆನ್ನೋ ಅಂದಾಜಿನಲ್ಲಿ ಅದರಲ್ಲಿ ಹತ್ತಿದೆವು.



ಅದರಲ್ಲಿ ಹತ್ತಿ ಹೊರಬಂದು ನೋಡಿದ್ರೆ ಬಯಲೋ ಬಯಲು. ಅಂತೂ ಕೋಟೆಯಿಂದ ಯಶಸ್ವಿಯಾಗಿ ಹೊರಬಂದ್ವಿ ಅನ್ನೋ ಖುಷಿ.ಸಮಯ ಎರಡೂವರೆ ದಾಟುತ್ತಾ ಬಂದಿದೆ. ಎಲ್ಲಿ ಬಂದಿದ್ದೀವಿ ಗೊತ್ತಾಗ್ತಿಲ್ಲ ! ಇದು ಇಕ್ಕೇರಿ ಸ್ಟೇಡಿಯಂ ಇರ್ಬೇಕು ಅಂದ ಆದಿತ್ಯಣ್ಣ. ಮಾತಾಡ್ತಾ ಎಲ್ಲಾ ಕಡೆ ನೋಡ್ತಿರುವಾಗ ಬಯಲಿನ ಮತ್ತೊಂದು ಮೂಲೆಯಲ್ಲಿ ನಿಂತಿದ್ದ ಲಗೇಜ್ ಕ್ಯಾರಿಯರ್ ಕಂಡಿತು !
 ಶನಿವಾರದ ಮಧ್ಯಾಹ್ನ, ಖಾಲಿ ಬಯಲಲಲ್ಲೊಂದು ಲಗೇಜ್ ಕ್ಯಾರಿಯರ್ ಅಂದ್ರೆ ! ಹಾಸಿಗೆ ರಿಪೇರಿ ಗಾಡಿ ಅಂತ ಹತ್ರ ಹೋದ್ಮೇಲೆ ಗೊತ್ತಾಯ್ತು. ದೇವರು ಬಂದಂಗೆ ಬಂದ ಅವನ ಬಳಿ ನೀರೂ ಇತ್ತು !! ಆದಿತ್ಯಣ್ಣ ತಮ್ಮ ದಾಹ ತೀರಿಸಿಕೊಳ್ಳೋದ್ರಲ್ಲಿ ಮಗ್ನರಾಗಿದ್ರೆ ನಾನು ಆ ಮೂಲೆಯಲ್ಲೂ ಕಂಡ ವಿಚಿತ್ರ ಹಣ್ಣಿನ ಚಿತ್ರ ತೆಗೆಯುತ್ತಿದ್ದೆ !  

Vichitra hannu

Luggage carrier na hattiya simhasana ! :-)

ಲಗೇಜ್ ಕ್ಯಾರಿಯರ್ನವನು ಕಾಳಿ ಗುಡಿಯ ಕಡೆಗೇ ಹೊರಟಿದ್ದ ನಮ್ಮ ಅದೃಷ್ಟಕ್ಕೆ. ಸರಿ ಅಂತ ಹತ್ತಿಯ ಮೆತ್ತಗೆ ಸಿಂಹಾಸನದ ಮೇಲೆ ಕೂತು ಮುಂದೆ ಸಾಗಿದ ನಮಗೆ ಒಂದು ತಿರುವು ದಾಟುವುದರಲ್ಲಿ ಆಶ್ಚರ್ಯ ಕಾದಿತ್ತು. ಆ ತಿರುವಲ್ಲೇ ನಮ್ಮ ಗಾಡಿ ನಿಂತಿದೆ. ಅಂದರೆ ಆ ತಿರುವಲ್ಲೇ ನಾವು ಗಾಡಿಯ ನಿಲ್ಲಿಸಿ ಪ್ಲಾಂಟೇಷನಿನ ಪಕ್ಕದ ಹಾದಿಯಲ್ಲಿ ಕೋಟೆಯ ಒಳಹೊಕ್ಕಿದ್ವಿ !! ಅಂದ್ರೆ ಹೊರಬರ್ತಾ ಸ್ವಲ್ಪ ಆಂಗಲ್ ವ್ಯತ್ಯಾಸ ಆಗಿದೆ ಅಂದ್ರೂ ಬಹುಪಾಲು ಸರಿಯಾಗೇ ಹೊರಬಂದಿದ್ವಿ ಅಂತ ಆಯ್ತು ! ಮಧ್ಯಾಹ್ನ ಮನೆ ಸೇರಿ ಊಟದ ನಂತರ ಮತ್ತೆ ಬರುವ ಪ್ಲಾನ್ ರೆಡಿಯಾಗ್ತಾ ಇತ್ತು. ಸಂಜೆ ಮತ್ತೆ ಕೋಟೆ ಹೊಕ್ಕಾಗ ನಾವು ಹೊರಬಂದ ಹಾದಿಯೇ ಕೋಟೆಯನ್ನು ಹೊಕ್ಕುವ ಸುಲಭದ ಹಾದಿ ಅಂತ ತಿಳೀತು !! ಸಂಜೆ ಕಂಡ ರಾಣಿ ಕೊಳ, ಚಳ್ಳೆ ಹಣ್ಣು, ಕವಲು ಕಾಯಿ, ಮದ್ದರಸನ ಗಿಡ, ಅಂಕೋಲೆ ಸೊಪ್ಪು ಮತ್ತಿತರ ಕತೆ ಮುಂದಿನ ಭಾಗದಲ್ಲಿ ಮುಂದುವರೆಯುತ್ತದೆ.


ಮುಂದುವರೆಯಲಿದೆ....

3 comments:

  1. ಹೌದು ...ಇಕ್ಕೇರಿ ಎಲ್ಲಿ ಬರುತ್ತದೆ?

    ReplyDelete
    Replies
    1. ಇಕ್ಕೇರಿ ಅನ್ನುವುದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಿಂದ ೫ ಕಿ.ಮೀ ದೂರದಲ್ಲಿದೆ.
      ಸಾಗರಕ್ಕೆ ಬೆಂಗಳೂರಿನಿಂದ ೨೬೦ ಮತ್ತು ಶಿವಮೊಗ್ಗದಿಂದ ೭೩ ಕಿ.ಮೀಗಳ ದೂರ.
      ಸಾಗರಕ್ಕೆ ಬೆಂಗಳೂರಿನಿಂದ ನೇರ ರೈಲು ಮತ್ತು ಬಸ್ಸುಗಳಿವೆ

      Delete
  2. ಹೀಗೆ ಮರೆಯಾಗಿ ಇರುವಂತಹವನ್ನು ಹತ್ತಿರದವರು ಗುರುತಿಸಿ ಬೆಳಕಿಗೆ ತರುವುದು ಒಳ್ಳೆಯದು. ಹೀಗೆ ಮಾಹಿತಿ ಬರಲಿ ಬರಲಿ

    ReplyDelete