Sunday, March 27, 2016

ನಾನೋದಿದ ಪುಸ್ತಕ ತುಳಸೀದಳ

ಚಿತ್ರಕೃಪೆ:newshunt.com
ಒಂದು ಪುಸ್ತಕವನ್ನ ಒಂದೇ ಗುಕ್ಕಿಗೆ ಓದಿ ಮುಗಿಸದೇ ಬಹಳ ಸಮಯವಾಗಿತ್ತು. ಮಧ್ಯಾಹ್ನ ಒಂಚೂರು ಓದೋಣವೆಂದು ಹಿಡಿದುಕೊಂಡು ಪುಸ್ತಕವನ್ನ ಈಗ ಮುಗಿಸಿಟ್ಟ ಮೇಲೇ ನೆಮ್ಮದಿ ! ದೆವ್ವವೆನ್ನೋದು ಮೂಡನಂಬಿಕೆಯೆನ್ನಿ,ಭಾವನೆಗಳ ಭ್ರಮೆಯೆನ್ನಿ, ನಂಬುವವರಿಗೆ ದೇವರೆಷ್ಟು ಸತ್ಯವೋ ದೆವ್ವವೂ ಅಷ್ಟೇ. ಅಣು-ಪರಮಾಣುಗಳೆಂದು ವಸ್ತುವನ್ನು ಒಡೆಯುತ್ತಾ ಹೋದ ವಿಜ್ಞಾನಿಗಳು ಹಿಗ್ಸ್ ಬೋಸಾನುಗಳೆಂಬ ವಿವರಣೆಗೆ ಸಿಕ್ಕದ್ದಕ್ಕೆ ಗಾಡ್ಸ್ ಪಾರ್ಟಿಕಲ್ಲೆಂದು ಹೆಸರಿಟ್ಟಿದ್ದಕ್ಕೂ ,ವಿವರಣೆಗೆ ಸಿಕ್ಕದಕ್ಕೆಲ್ಲ,ಎದುರಾಗೋ ಒಳಿತು ಕೆಡಕುಗಳಿಗೆಲ್ಲಾ ದೇವರನ್ನೋ ದೆವ್ವವನ್ನೋ ಹೊಣೆಯಾಗಿಸೋ ಜನರಿಗೂ ಸಾಮ್ಯತೆ ಕಂಡರದು ಅಚ್ಚರಿಯಲ್ಲ. ಮಾಟ-ಮಂತ್ರ, ಹಿಪ್ನೊಟಿಸಂ, ಅನಾಟಮಿ, ಗಣಿತ, ಮೋರ್ಸ್ ಕೋಡ್, ಫಿಸಿಕ್ಸ್ .. ಹೀಗೆ ಹಲವಾರು ವಿಷಯಗಳ ಸುತ್ತ ಸುತ್ತೋ ಕಾದಂಬರಿಯಲ್ಲಿ ಮಾನವನ ದುರಾಸೆಗೆ ಮುಗ್ದ ಜೀವಗಳು ಹೇಗೆ ಬಲಿಯಾಗುತ್ತವೆಂಬ ಪ್ರಸಂಗಗಳು ಇಂದೂ ಪ್ರಸ್ತುತವೆನಿಸುತ್ತದೆ. ರೇಕಿ, ಪ್ರಾಣಿಕ್ ಹೀಲಿಂಗ್, ಸುದರ್ಶನ ಕ್ರಿಯೆ, ಪಿರಮಿಡ್ಗಳ ಹಿಂದೆ ವೈಜ್ಜಾನಿಕ ನೆಲೆಗಟ್ಟಿದೆ ಎಂದರೆ ಮೂಲಾಧಾರ ಚಕ್ರ, ಪ್ರಾಣಾಯಾಮ, ಸುಷುಮ್ನು , ಢಾಕಿನಿಯೆಂಬ ತತ್ವಗಳಿಗೂ ಇರಬೇಕಲ್ಲ. ಕಣ್ಣಿಗೆ ಕಂಡಿದ್ದಷ್ಟೇ ಸತ್ಯವೆಂದರೆ ಕಾಣದ ಅಣುವನ್ನೇಗೆ ಒಪ್ಪೋದು, ಉಸಿರಾಡೋ ಆಮ್ಲಜನಕವನ್ನೇಗೆ ಒಪ್ಪೋದು ಅನ್ನೋ ವಾದಸರಣಿಗಳನ್ನೆಲ್ಲಾ ಸದ್ಯಕ್ಕೊಂದಿಷ್ಟು ಪಕ್ಕಕ್ಕಿಟ್ಟು ಪೂರ್ವಾಗ್ರಹವಿಲ್ಲದೇ ಓದುವುದಾದರೆ ಒಂದೊಳ್ಳೆ ಪುಸ್ತಕ "ತುಳಸೀದಳ"

ಬ್ಲಾಕ್ ಮಾಸ್ ಎಂದು ಹಣಮಾಡುವವರು, ಕಾಷ್ಮೋರ ಎಂದು ಪೆಟ್ರೋಲಿನಲ್ಲಿ ಕೈಸುಟ್ಟುಕೊಂಡವರು, ೨೩೪ ಬಿ.ಸಿ ಎಂದು ಬರೆದುಕೊಂಡಿದ್ದ ಶವಪೆಟ್ಟಿಗೆ ! ಇವೆಲ್ಲಾ ಜನರ ಮುಗ್ದತೆಯ ದುರುಪಯೋಗ ಪಡೆಯೋ,ಗೇಲಿ ಮಾಡೋ ಪ್ರಸಂಗಗಳಾದ್ರೆ , ಲಂಪಟ ಸ್ವಾಮಿ, ಅವನ ಬಾಸ್ ,ದುಡ್ಡಿನಾಸೆಗೆ ತಾನೇ ಬಲಿಯಾದ ಸಾಹೀರ್ , ಪುಟ್ಟಯ್ಯ ಮತ್ತು ಸರಸ್ವತಿಯರ ಷಡ್ಯಂತ್ರಗಳು ನಮ್ಮೊಡನೆಯೂ ಇರಬಹುದಾದ ವ್ಯಕ್ತಿತ್ವಗಳ ಸಾಣೆ ಹಚ್ಚುತ್ತದೆ. ಬಿಸ್ತಾದ ಮಾಂತ್ರಿಕನ ಕೃತ್ಯಗಳನ್ನು ಅವನ ಸೇಡು ಸಮರ್ಥಿಸಿದಿದ್ದರೂ ಅವನು ಬದುಕಿದ್ದೇ ಹಾಗೆ. ಅವನ ದೃಷ್ಠಿಯಲ್ಲಿ ಅದೇ ಸರಿ. ಮಧ್ಯೆ ಮಧ್ಯೆ ಬಂದು ಹೋಗೋ ಇಸ್ಮಾಯಿಲ್, ಸಂತಾನ ಫಕೀರನಂತಹ ಪಾತ್ರಗಳು ಕಥೆಗೆ ಆಗಾಗ ಒಂದಿಷ್ಟು ಟ್ವಿಸ್ಟ್ ಕೊಡೋದ್ರ ಮಜಾವನ್ನು ಪುಸ್ತಕವನ್ನು ಓದೇ ತಿಳಿಯಬೇಕು.

ಇನ್ನು ಶೀರ್ಷಿಕೆಯಲ್ಲೇ ಇರುವಂತೆ ಕಥೆಯ ನಿಜವಾದ ನಾಯಕಿ ಎಂದರೆ ಬಾಲಕಿ ತುಳಸಿ ಮತ್ತವಳ ಕುಟುಂಬ. ಅವಳ ಸಾವಿಗೆ ಅನೇಕರು ತರತರದಲ್ಲಿ ಹೊಂಚು ಹಾಕ್ತಿದ್ರೆ, ಅವಳು ಮರಣಶಯ್ಯೆಯಲ್ಲಿ ಒದ್ದಾಡ್ತಿದ್ರೆ ಓದುಗನಿಗೆ ಈ ಕಷ್ಟ ಯಾವಾಗ ಮುಗಿಯುತ್ತಪ್ಪ, ಯಾವಾಗ ಬದಲಾಗೋದಪ್ಪ ಅನ್ನೋ ಕುತೂಹಲ ಕೊನೆಯ ಘಟ್ಟದವರೆಗೂ ಓದಿಸಿಕೊಳ್ಳುತ್ತೆ. ಇನ್ನು ಇಂಜಿನಿಯರ್ ಶ್ರೀಧರ್ ಮತ್ತವನ ಕಂಪೆನಿಯ ಬಾಸ್, ಅವನ ಪತ್ನಿ ಶಾರದೆ ಮತ್ತವಳ ಮೂಗ ತಮ್ಮ, ಅಮಾಯಕಿ ಅನಿತಾ, ಅಬ್ರಕದಬ್ರ ಎಂದೇ ಖ್ಯಾತವಾಗೋ ಬ್ರಾಹ್ಮಿಣ್, ವಕೀಲ ವಿದ್ಯಾಪತಿ ಕಥೆಯಲ್ಲೆಲ್ಲಾ ಆವರಿಸಿಕೊಂಡ್ರೆ ನಂತರ ಬರೋ ಸೈಕಾಲಜಿಸ್ಟ್ ಫ್ರೊಫೆಸರ್ ಜಯದೇವ, ಡಾಕ್ಟರ್ ಪಾರ್ಥಸಾರಥಿ ಏಕಮುಖವಾಗಿದ್ದ ಕಥೆಗೆ ಮತ್ತೊಂದು ಮುಖವನ್ನೇ ಕೊಡುತ್ತಾರೆ. ಮನೆಯಾಳು ರಾಮಯ್ಯನ್ನಂತೂ ಮರೆಯೋಕೆ ಸಾಧ್ಯವೇ ಇಲ್ಲ ! ಇನ್ನು ಬಂದೂ ಬರದಂತಿರೋ ಆಶ್ರಮದ ಮಂಗಳಮ್ಮ, ಇಂಜಿನಿಯರ್ ಸುಧೀರ್ ಕೂಡ ಮುಖ್ಯ ಘಟ್ಟಗಳಲ್ಲಿ ಕತೆಯ ವೇಗ ಹೆಚ್ಚಿಸುತ್ತಾರೆ.  ಒಟ್ನಲ್ಲಿ ನಾ ಚಿಕ್ಕಂದಿನಿಂದ ಹೆಸರು ಕೇಳ್ತಿದ್ದ ಪುಸ್ತಕ ಓದೋ ಮುಹೂರ್ತ ಬಂದಿದ್ದು ಇವತ್ತು ! ನಾನೇನು ಯಂಡಮೂರಿಯವರ ಹುಟ್ಟಾ ಫ್ಯಾನಲ್ಲ. ಆದ್ರೂ ಪುಸ್ತಕವೊಂದು ಆರು ಘಂಟೆಗಳ ಕಾಲ ನಿಮ್ಮ ಗಮನ ಹಿಡಿದಿಡುತ್ತೆ ಅಂದ್ರೆ ಅಂತದ್ದೊಂದರ ಬಗ್ಗೆ ವಾವ್ ಅನ್ನದೇ ಇರೋಕೆ ಮನಸ್ಸು ಬರಲ್ಲ. ಇನ್ನೂ ಅದನ್ನೋದದೇ ಇದ್ದವರಿಗೆ ಓದಲು ಮರೆಯದಿರಿ ಅಂತ ಹೇಳೋಕೂ ಮರೆಯೊಲ್ಲ :-) ಅಂದಾಗೆ ಡೈಲಿ ಹಂಟ್(ಮುಂಚಿನ ನ್ಯೂಸ್ ಹಂಟ್) ಅಲ್ಲಿ ಕನ್ನಡ ಪುಸ್ತಕಗಳನ್ನೂ ಖರೀದಿಸಬೇಕೆಂಬ ಮಾಹಿತಿಯನ್ನ ವಿಕಾಸಣ್ಣ ನೀಡಿರದಿದ್ರೆ ಪ್ರಾಯಶ: ನಾನು ಆ ಆಪ್ನ install ಮಾಡಿಕೊಳ್ಳುತ್ತಿರಲಿಲ್ಲ, ಅದರ ಹುಡುಕಾಟದಲ್ಲಿ ಇವತ್ತು ಅಚಾನಕ್ಕಾಗಿ ಈ ಪುಸ್ತಕ ಸಿಗುತ್ತಿರಲಿಲ್ಲ ಅನ್ನಿಸುತ್ತೆ. ಹಾಗಾಗಿ ವಿಕಾಸಣ್ಣಂಗೊಂದು ಧವಾ.

2 comments:

  1. ಕೊಂಡು ಓದಿದ್ದಕ್ಕೆ ನಿಂಗೂ ಧವಾ. :) ಇದು ಸಿನೆಮಾ ಕೂಡ ಆಗಿದೆ. ಸಾಧ್ಯವಾದಾಗ ನೋಡು.

    ReplyDelete
    Replies
    1. ಪ್ರತಿಕ್ರಿಯೆಗೆ ಧವಾ. ಸಿನಿಮಾ ಆಯ್ದು ಅಂತ ನೋಡಿದೆ.ನೋಡ್ತಿ ಒಂದ್ಸಲ. ಆದ್ರೆ ಪುಸ್ತಕ ಓದಿದ ಮೇಲೆ ನೊಡೋ ಮೂವಿಗಳು ಯಾಕೋ ಸಪ್ಪೆ ಅನ್ನಿಸಿಬಿಡ್ತು..

      Delete