Sunday, October 16, 2016

ಆಗುಂಬೆಯ ಜೋಗಿಗುಂಡಿ, ಭರ್ಕಣ,ಒನಕೆ ಅಬ್ಬಿ ಜಲಪಾತಗಳು


At bharkana falls view point

ಪೀಠಿಕೆ:
ಆಗುಂಬೆಯ ಭರ್ಕಣ,ಒನಕೆ ಅಬ್ಬಿ ಜಲಪಾತಕ್ಕೆ ಹೋಗೋ ಪ್ಲಾನಿದೆ ಬರ್ತೀರ ಅಂತ ಟ್ರೆಕ್ಕರ್ ಶಿವಸುಬ್ರಹ್ಮಣ್ಯ ಹೇಳ್ದಾಗ ಮರುಮಾತಿಲ್ದೇ ಜೈಯೆಂದಿದ್ದೆ. ದಶಮಿ ಹಬ್ಬಕ್ಕೆ ಸೋಮವಾರ, ಮಂಗಳವಾರಗಳೂ ರಜಾ ಸಿಕ್ಕಿದ್ರಿಂದ ಆರಾಮಾಗಿ ಹೋಗ್ಬರಬಹುದು ಅಂತ ನನೈಡಿಯ. ಆದ್ರೆ ಬೆಂಗ್ಳೂರಿಂದ ಶುಕ್ರವಾರ ರಾತ್ರಿ ೧೦ಕ್ಕೆ ಹೊರಡಬೇಕಾದವ್ನು ಟ್ರಾಫಿಕ್ಕಲ್ಲೇ ೨ಘಂಟೆ ಲೇಟಾಗಿ ೧೧:೩೦ಕ್ಕೆ ಹೊರಟರೂ ೨:೧೫ ಆದ್ರೂ ಯಶವಂತಪುರನೇ ದಾಟಕ್ಕಾಗಲ್ಲ ಅಂತೆಂತೂ ಅಂದ್ಕೊಂಡಿರಲಿಲ್ಲ :-) ಯಶವಂತಪುರದ ಬಳಿ ಅಡ್ಡಾದಿಡ್ಡಿ ನಿಲ್ಸಿರೋ ಖಾಸಗಿ ಬಸ್ಸುಗಳು, ಮಧ್ಯಮಧ್ಯ ರಸ್ತೆಗೆ ಡಾಂಬರು ಹಾಕ್ಬೇಕು ಅಂತ ಅರ್ಧರ್ಧ ರಸ್ತೆಗಳನ್ನೇ ಬ್ಲಾಕ್ ಮಾಡಿದ್ದು, ಹಬ್ಬಕ್ಕೇಂತ್ಲೇ ಹೊರಟು ನಿಂತ ಎಲ್ಲಾ ಜನಗಳಿಂದ ರಸ್ತೆಗಳೆಲ್ಲಾ ತುಂಬಿ ತುಳುಕಿ ಭವ್ಯ ಬೆಂಗಳೂರಿಗೆ ನಮೋ ಎಂದ ಬಸ್ಸುಗಳೆಲ್ಲಾ ನಿಂತಲ್ಲೇ ಮಲಗಿಬಿಟ್ಟಿದ್ವು ! ಅಂತೂ ಯಶವಂತಪುರ ದಾಟಿದ್ಮೇಲೆ ಬಸ್ಸು ಬಸ್ಸಂತೆ ಮುಂದೆಹೊರಟಿದ್ದು, ನಮಗೊಂದಿಷ್ಟು ನಿದ್ರಾಭಾಗ್ಯ ದಕ್ಕಿದ್ದು. ಬಸ್ಸು ಲೇಟಾಗೋದ್ರೊಂದಿಗೆ ಬೆಳಗ್ಗೆ ನಾಲ್ಕೂವರೆ ಶಿವಮೊಗ್ಗ ತಲುಪಿ ಆರಕ್ಕೆ ಆಗುಂಬೆಗೆ ಹೊರಡಬೇಕು ಅಂತಿದ್ದ ನಮ್ಮ ಪ್ಲಾನು ಮಕಾಡೆ ಮಲಗಿದ್ದೂ ಆಯ್ತು. ಹಿಂದಿನ ದಿನವೇ ಲೇಟಾದ ಕತೆ ಹೇಳಿದ್ರಿಂದ ಆರರವರೆಗಾದ್ರೂ ಬರ್ಬೋದೇನೋ ಅಂದ್ಕೊಂಡಿದ್ದ ಶಿವಣ್ಣ ಆರಕ್ಕೆ ಫೋನ್ ಮಾಡಿದ್ರೆ ನಾನು ಬೀರೂರು ದಾಟಿ ತರೀಕರೆ ಹತ್ರತ್ರ ಬಂದಿದ್ದೆ ಅಷ್ಟೆ . ಶಿವಮೊಗ್ಗಕ್ಕೆ ಬರೋದು ಏಳೂವರೆ ಆಗ್ಬೋದು, ಎಂಟಕ್ಕೆ ಹೊರಡೋಣ. ಎರಡೂ ಜಾಗಗಳಾಗದಿದ್ರೆ ಒಂದಾದ್ರೂ ನೊಡೋಣ ಅಂತ ಪ್ಲಾನನ್ನ ಸ್ವಲ್ಪ ಬದಲಾಯಿಸಾಯ್ತು.

ಮಂಡಗದ್ದೆಯಾಸಿ ನಾವು
Mandagadde Vird Sanctuary
ಬೆಳಗ್ಗೆಯೇ ಶಿವಮೊಗ್ಗದ ಅಜ್ಜಿಮನೆಗೆ ಭೇಟಿಯಿತ್ತು, ಆರಾಮಾ ಅಂತ ಆಸ್ರಿಗೆ ಕುಡಿದು, ರೆಡಿಯಾಗಿ ಎಂಟೂಮುಕ್ಕಾಲರ ಹೊತ್ತಿಗೆ ಬಸ್ಟಾಂಡಿಗೆ ತಲುಪಿದ್ರೂ ಬಸ್ ಸಿಕ್ಕಿದ್ದು ಒಂಭತ್ತಕ್ಕೆ. ತೀರ್ಥಹಳ್ಳಿಗೆ ಹೋಗಿ ಅಲ್ಲಿಂದ ಆಗುಂಬೆಗೆ ಬೇರೆ ಬಸ್ಸಿಡಿಯೋ ಪ್ಲಾನಲ್ಲಿದ್ದ ನಮಗೆ ಆಗುಂಬೆ ಬಸ್ಸೇ ಸಿಕ್ಕಿದ್ದು ಒಳ್ಳೇದಾಗಿತ್ತು. ಕಾಲೇಜ್ ಮೇಟ್ ರಂಜಿತ್ ಕೂಡ ಅದೇ ಬಸ್ಸಲ್ಲಿ ಉಡುಪಿಗೆ ಹೊರಟಿದ್ರಿಂದ ನಮ್ಮ ಮಾತಿಗೆ ಜೊತೆ ಸಿಕ್ಕಿತ್ತು. ಮಂಡಗದ್ದೆ ಬಳಿಯ ಹಿನ್ನೀರಿನಲ್ಲಿ ಮರಗಳ ಪ್ರತಿಬಿಂಬವನ್ನು ಸವಿಯುತ್ತಾ ಮಲೆನಾಡೇ ಬರಗಾಡಾಗ್ತಿರೋ ಬಗ್ಗೆ ಮಾತಾಡ್ತಿರೋವಾಗ್ಲೇ ಮಂಡಗದ್ದೆ ಪಕ್ಷಿಧಾಮದ ಸ್ಟಾಪು. ಮಂಡಗದ್ದೆ ಅಂದ್ರೆ ರಂಗನತಿಟ್ಟು,ಗುಡವಿ ರೇಂಜಿಗೆ ದೊಡ್ಡದಿರುತ್ತೆ ಅಂದ್ಕೊಂಡಿದ್ದ ನನಗೆ ಭ್ರಮನಿರಸನವಾಗಿತ್ತು. ಎದ್ರಿಗೊಂದಿಷ್ಟು ಮರ. ಅದ್ರ ಮೇಲೊಂದಿಷ್ಟು ಹಕ್ಕಿಗಳು ! ಮಂಡಗದ್ದೆ ಅಂದ್ರೆ ಸಖತ್ ದೊಡ್ಡ ಪಕ್ಷಿಧಾಮ ಅಂದ್ಕೋಬೇಡಿ. ಇದಿರೋದೇ ಈ ತರ, ಇಲ್ಲಿಗೇ ಅಂತ್ಲೇ ನಾ ಬಂದಿದ್ದೆ ಒಂದ್ಸಲ ಅಂತ ಶಿವಣ್ಣ ಹೇಳ್ತಾ ಇದ್ರೆ ಇಲ್ಲಿ ಇಳಿಯದೇ ಒಳ್ಳೆ ಕೆಲ್ಸ ಮಾಡಿದ್ವಾ ಅನಿಸ್ತಾ ಇತ್ತು. ಅಲ್ಲಿಂದ ಮುಂದೆ ಸಾಗಿದ ನಾವು ಹತ್ತೂಹತ್ತಕ್ಕೆ ತೀರ್ಥಹಳ್ಳಿಗೆ ತಲುಪಿ ೧೧:೨೫ಕ್ಕೆ ಆಗುಂಬೆ ತಲುಪಿದ್ವಿ. ಶಿವಮೊಗ್ಗದಿಂದ ಆಗುಂಬೆಗೆ ೯೩ ಕಿ.ಮೀ ದೂರ. ಸುಮಾರು ೨ ಘಂಟೆಯ ಪಯಣ. ಅದೇ ಸಾಗರದಿಂದ ಹೋಗೋದಾದ್ರೆ ೧೦೮ ಕಿ.ಮೀ. ತೀರ್ಥಹಳ್ಳಿಯಿಂದ ಸಾಗರಕ್ಕೇ ಬಸ್ಸಲ್ಲಿ ಎರಡು ಘಂಟೆ ತಗೋತಾರೆ :-)
<script async src="https://pagead2.googlesyndication.com/pagead/js/adsbygoogle.js"></script>
<ins class="adsbygoogle"
     style="display:block"
     data-ad-format="fluid"
     data-ad-layout-key="-gq-2e-1k-1g+qa"
     data-ad-client="ca-pub-5071889101438500"
     data-ad-slot="7647446493"></ins>
<script>
     (adsbygoogle = window.adsbygoogle || []).push({});
</script>

ಮೇಗರವಳ್ಳಿ ಸುತ್ತಮುತ್ತ:ಆಗುಂಬೆಗಿಂತ ಮುಂಚೆ ಮೇಗರವಳ್ಳಿ ಅಂತ ಸಿಗುತ್ತೆ. ಇದು ಸಕಲೇಶಪುರದಿಂದ ಮುಂದೆ ಸಿಗೋ ಬ್ಯಾಕರವಳ್ಳಿ ಜಂಕ್ಷನ್ ತರ.ಇಲ್ಲಿಂದ ೨೨ ಕಿ.ಮೀ ಆಗುಂಬೆಗೆ. ಇಲ್ಲಿಂದ ಶೃಂಗೇರಿ, ಕುಂದಾದ್ರಿಗೆ ಹೋಗಬಹುದು. ಇಲ್ಲಿಂದ ಕುಂದಾದ್ರಿ ಬೆಟ್ಟಕ್ಕೆ ೫ ಕಿ.ಮೀ ಅಷ್ಟೆ.ಆಗುಂಬೆಗೆ ಬಂದರೆ ಅಲ್ಲಿಂದ ೨ ಕಿ.ಮೀ ದೂರದಲ್ಲಿ ಸೂರ್ಯಾಸ್ತ ತಾಣ, ೧.೫ ದಾಟಿ, ೩ ಕಿ.ಮೀ ಟ್ರೆಕ್ ಮಾಡುವ ನಿಶಾನಿ ಮೊಟ್ಟೆ, ೬ ಕಿ.ಮೀ ದೂರದಲ್ಲಿ ೨೧ ಕಿ.ಮೀ ಟ್ರೆಕ್ಕಿಂಗಿನ ನರಸಿಂಹ ಪರ್ವತಗಳಿವೆ. ನರಸಿಂಹ ಪರ್ವತ ಹೆಸರಿನಷ್ಟೇ ಭಯಾನಕ ಟ್ರೆಕ್ಕಿಂಗು. ಯಾಕೆ ಅಂತೀರಾ ? ಸಖತ್ ದೂರ ಮತ್ತು ಆಗುಂಬೆಯಲ್ಲಿರೋ ವಿಪರೀತ ಜಿಗಣೆಗಳ ಕಾರಣದಿಂದಾಗಿ.

ಜೋಗಿಗುಂಡಿ ಜಲಪಾತ
ಆಗುಂಬೆಗೆ ತಲುಪಿದ ನಾವು ಒನಕೆ ಅಬ್ಬಿ ಫಾಲ್ಸಿಗೆ ಮೊದಲು ಹೋಗೋ ಪ್ಲಾನಿದ್ದರಿಂದ ಅಲ್ಲಿಗೆ ಹೋಗೋಕೆ ಪರ್ಮೀಷನ್ ಬೇಕಾ ಅಂತ ಕೇಳ್ತಾ ಇದ್ವಿ. ಅದು ಕುದುರೆಮುಖ ವನ್ಯಜೀವಿ ವಿಭಾಗ, ಸೋಮೇಶ್ವರ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರೋದ್ರಿಂದ ಅರಣ್ಯ ಇಲಾಖೆಯ ಪರ್ಮೀಷನ್ ಬೇಕೂಂತ ಕೆಲವು ಬ್ಲಾಗುಗಳಲ್ಲಿ ಬರದಿದ್ರೆ, ಬೇಡಾಂತ ಕೆಲವು ಬ್ಲಾಗುಗಳಲ್ಲಿದೆ. ಅಲ್ಲಿ ಅಂಗಡಿಗಳಲ್ಲೂ ಕೆಲವರು ಪರ್ಮೀಷನ್ ಬೇಡ ಅಂತ ಇನ್ನು ಕೆಲವ್ರು ಪರ್ಮೀಷನ್ ಬೇಕಾದ್ರೆ ಅಲ್ಲಿ ಎದ್ರಿಗಿರೋ ಪೋಲೀಸ್ ಸ್ಟೇಷನ್ನಲ್ಲಿ ಪರ್ಮೀಷನ್ ತಗೊಳ್ಳಿ ಅಂತ !! ಆಟೋದವ್ರಿಗೆ ಕೇಳಿದ್ರೆ ಸುಮಾರು ಸುಲಿಗೆ ಮಾಡ್ತಾರೆ ಗುರು, ಪೋಲೀಸ್ ಸ್ಟೇಷನ್ನಿಗೇ ಹೋಗೋಣ ಅಂತ ಶಿವಣ್ಣ :) ಅರಣ್ಯ ಇಲಾಖೆಗೆ ಸಂಬಂಧಪಟ್ಟ ಚಾರಣಕ್ಕೆ ಪೋಲೀಸ್ ಸ್ಟೇಷನ್ನಿಂದ್ಯಾಕೆ ಪರ್ಮೀಷನ್ ಗುರು, ಆಟೋದವ್ರಿಗೆ ಪಕ್ಕಾ ಗೊತ್ತಿರುತ್ತೆ, ಸ್ವಲ್ಪ ಜಾಸ್ತಿಯಾದ್ರೂ ಪರ್ವಾಗಿಲ್ಲ, ಕರೆಕ್ಟಾಗಿ ಹೇಳೋದು ಅವ್ರೇ ಅಂತ ಆಟೋ ಸ್ಟಾಂಡಿಗೇ ಹೋದ್ವಿ. ಶಿವಣ್ಣ ಹಿಂದಿನ ವಾರ ಚಾರಣಕ್ಕೆ ಅಂತ ಇಲ್ಲಿಗೇ ಬಂದಾಗ ಅವ್ರನ್ನ ಆಗುಂಬೆಯಿಂದ ೨ ಕಿ.ಮೀ ದೂರದಲ್ಲಿರೋ ಸೂರ್ಯಾಸ್ತದ ತಾಣಕ್ಕೆ ಬಿಟ್ಟ ಡ್ರೈವರೊಬ್ರಿದ್ರಂತೆ. ಅವ್ರನ್ನೇ ಆಟೋ ಸ್ಟಾಂಡಲ್ಲಿ ಕಂಡ ಶಿವಸುಬ್ರಹ್ಮಣ್ಯ ಅವ್ರತ್ರನೇ ಹೋದ್ರು. ಆಟೋದವ್ರು ಒನಕೆ ಅಬ್ಬಿಗೆ ಜಾಸ್ತಿ ದೂರವಿಲ್ಲ. ಅಲ್ಲಿಗೆ ೩೦ ರೂ ಚಾರ್ಜು ತಗೋತೀವಷ್ಟೆ. ಆದ್ರೆ ನೀವು ಜೋಗಿ ಗುಂಡಿ ನೋಡಿಲ್ಲ ಅಂದ್ರೆ ಅಲ್ಲಿಗೆ ಹೋಗಿ. ಅಲ್ಲಿಂದ ಭರ್ಕಣಕ್ಕೂ ಕರ್ಕೊಂಡು ಹೋಗ್ತೇನೆ. ಎರಡೂ ಮಧ್ಯಾಹ್ನದ ನೋಡಿದ್ರೆ ಮಧ್ಯಾಹ್ನ ಒನಕೆ ಅಬ್ಬಿಗೆ ತಗೊಂಡು ಹೋಗಿ ಬಿಡ್ತೇನೆ. ಅದ್ನೂ ನೋಡಿದ್ರೆ ಸಂಜೆಗೆ ನಿಶಾನಿ ಮೊಟ್ಟೆಯನ್ನೂ ನೋಡ್ಬೋದು ಅಂದ ಅವ ! ಗುರೂ ಈಗ್ಲೇ ಹನ್ನೊಂದೂವರೆ. ಇದೆಲ್ಲಾ ಆಗತ್ತಾ ಅಂದ್ರೆ, ಬೇಗ್ಬೇಗ ನೋಡಿದ್ರೆ ಎಲ್ಲಾ ಆಗತ್ತೆ ಅಂದ. ಸರಿ, ಎಲ್ಲಾ ಆಗದಿದ್ರೂ ಮೊದಲ ಮೂರೆಂತೂ ನೋಡ್ಬೋದು ಅಂದ್ಕೊಂಡು ಅವ್ನ ಪ್ಲಾನಿಗೆ ಒಪ್ಪಿ ಅವನ ಆಟೋ ಹತ್ತಿದ್ವಿ. ಮುಂದಿನ ಬಾರಿ ಆಗುಂಬೆಯ ಫಾಲ್ಸುಗಳನ್ನ ನೋಡೋಕೆ ಬರೋದಿದ್ರೆ ಪರ್ಮಿಟ್ಟು ಅಂತ ಎಲ್ಲೂ ಸಮಯ ವ್ಯರ್ಥ ಮಾಡ್ಬೇಡಿ. ಸೀದಾ ಯಾವ್ದಾದ್ರೂ ಆಟೋ ಹತ್ತಿ. ಜೋಗಿಗುಂಡಿ ಹತ್ರ ಅರಣ್ಯ ಇಲಾಖೆಯವ್ರು ಒಬ್ರಿರ್ಥಾರೆ. ಅವ್ರತ್ರ ೨೦೦ರೂನ ಟಿಕೇಟ್ ತಗೊಳ್ಳಿ. ಆ ಟಿಕೇಟಲ್ಲಿ ಜೋಗಿ ಗುಂಡಿ, ಭರ್ಕಣ, ಒನಕೆ ಅಬ್ಬಿ, ನಿಶಾನಿ ಮೊಟ್ಟೆ ಅಷ್ಟೇ ಅಲ್ದೇ ನರಸಿಂಹ ಪರ್ವತವನ್ನೂ ನೋಡಬಹುದು ! ಈ ಐಡಿಯಾ ಕೊಟ್ಟಿದ್ದು ನಮಗೆ ಅಲ್ಲಿದ್ದ ಅರಣ್ಯ ಇಲಾಖೆಯವ್ರು ಮತ್ತು ಮತ್ತು ನಮ್ಮ ಆಟೋ ವಾಲಾ ರಜಾಕ್ :-)

ಆಗುಂಬೆಯಿಂದ ೫ ಕಿ.ಮೀ ದೂರವಿರೋ ಜೋಗಿಗುಂಡಿಗೆ ೧೧:೪೫ ಕ್ಕೆ ತಲುಪಿದ ನಾವು ಅಲ್ಲೇ ಆಟೋ ನಿಲ್ಲಿಸಿ, ೨೦೦ ರೂ ನ ಟಿಕೇಟ್(ಅದು ಒಂದು ಗ್ರೂಪಿಗೆ,ಒಬ್ಬರಿಗಲ್ಲ :-) ) ಪಡೆದು ಸುಮಾರು ಒಂದು ಕಿ.ಮೀ ದೂರವಿರೋ ಜೋಗಿಗುಂಡಿ ಜಲಪಾತ ನೋಡೋಕೆ ಸ್ವಲ್ಪ ಕಾಡ ಹಾದಿ, ನಂತರವಿರೋ ಮೆಟ್ಟಿಲುಗಳಲ್ಲಿ ಸಾಗಿದ್ವಿ. ಇಲ್ಲಿ ವಾಹನಗಳಲ್ಲಿ ಬರೋರಿಗೆ ದ್ವಿಚಕ್ರ ವಾಹನಗಳಿಗೆ ೧೦,  ಕಾರು, ಟ್ಯಾಕ್ಸಿ, ಆಟೋಗಳಿಗೆ ೩೦ ಮತ್ತು ಬಸ್ಸು, ಟೆಂಪೋಗಳಿಗೆ ೫೦ರ ಪಾರ್ಕಿಂಗ್ ಶುಲ್ಕವಿದೆ. ಆದ್ರೆ ಜಾಸ್ತಿ ಜನ ಬಂದರೆ ಪಾರ್ಕಿಂಗ್ ಶುಲ್ಕ ನಗಣ್ಯವೆನಿಸುತ್ತೆ ಮತ್ತೆ ಪರ್ಮಿಟ್ಟೂ ವರ್ಕೌಟ್ ಆಗುತ್ತೆ :-) ಇದು ಅಂತಾ ದೊಡ್ಡ ಜಲಪಾತವೇನಲ್ಲ. ಅದ್ರ ಬಗ್ಗೆ ಬರೆಯೋ ಬದಲು ಅದ್ರ ಚಿತ್ರಗಳನ್ನೇ ಹಾಕೋದು ಮೇಲನಿಸುತ್ತೆ. 


Side stream of the Jogigundi Falls

Main stream of the Jogigundi falls which is dried up now(At the center)
Way to JogiGundi falls
Huge tree roots on the way to Bharkana falls
 ಭರ್ಕಣ ಜಲಪಾತ
ಇಲ್ಲಿಂದ ಮುಂದೆ ನಾಲ್ಕು ಕಿ.ಮೀ ಸಾಗಿದ್ರೆ ಬರ್ಕಣ ಜಲಪಾತದ ತಿರುವು ಸಿಗುತ್ತೆ. ಇವೆರಡೂ ಜಲಪಾತಗಳು ಮಲಂದೂರು ಗ್ರಾಮದ ವ್ಯಾಪ್ತಿಗೆ ಬರುತ್ತೆ. ಭರ್ಕಣಕ್ಕೆ ಹೋಗದೇ ಹಾಗೇ ಮುಂದೆ ಹೋದರೆ ನರಸಿಂಹ ಪರ್ವತಕ್ಕೂ ಹೋಗಬಹುದಂತೆ. ಮಲಂದೂರಲ್ಲಿ ಬರ್ಕಣ ಜಲಪಾತಕ್ಕೆ ಬಲಕ್ಕೆ ತಿರುಗಿ ಮಣ್ಣ ರಸ್ತೆಯಲ್ಲಿ ಹೋಗಬೇಕು. ಅಲ್ಲಿಂದ ಭರ್ಕಣ ಜಲಪಾತದ ವೀಕ್ಷಣಾ ತಾಣದವರೆಗೂ ಮಣ್ಣ ರಸ್ತೆಯಿದೆ. ಆದ್ರೆ ಸುಮಾರು ಒಂದೂವರೆ ಕಿ.ಮೀ ದಾಟುತ್ತಿದ್ದಂಗೆ ಒಂದು ಗೇಟಿದೆ. ಆ ಗೇಟ್ ಬಳಿ ಯಾರೂ ಇರದಿದ್ದರೂ ಆ ಗೇಟು ಯಾವಾಗ್ಲೂ ಹಾಕಿರುತ್ತೆ. ಹಂಗಾಗಿ ಆಟೋದಲ್ಲಿ ಬರುವವರು ಇಲ್ಲಿಯವರೆಗೆ ಬರಬಹುದು. ಇಲ್ಲಿಂದ ಮುಂದೆ ಸುಮಾರು ನಾಲ್ಕು ಕಿ.ಮೀ ನಡೆದ್ರೆ ಭರ್ಕಣ ಜಲಪಾತದ ವೀಕ್ಷಣಾ ತಾಣ ಸಿಗುತ್ತೆ.
Shivasubramanya @The Bharkana Gate. Our auto can be seen at the back
 ೧೨:೨೦ ಕ್ಕೆ ಜೋಗಿಗುಂಡಿಯ ಕ್ರಾಸ್ ಬಿಟ್ಟಿದ್ದ ನಾವು ೧೨:೩೦ಕ್ಕೆ ಭರ್ಕಣದ ಆ ಗೇಟಿನ ಬಳಿ ತಲುಪಿದ್ವಿ. ಆ ಆಟೋ ರಜಾಕರ ಪ್ರಕಾರ ಇಲ್ಲಿಂದ ನಡೆಯೋಕೆ ಅರ್ಧ ಘಂಟೆ, ಅಲ್ಲಿ ಅರ್ಧ ಘಂಟೆ, ವಾಪಾಸ್ ಬರೋಕೆ ಅರ್ಧ ಘಂಟೆ.ಬೇಗ ನಡೆದ್ರೆ ಇನ್ನೂ ಬೇಗ ಬರಬಹುದು. ಹಂಗಾಗಿ ನಾನು ೨ಕ್ಕೆ ಇಲ್ಲಿಗೆ ಮರಳಿ ಬರ್ತೀನಿ ಅಂತಿದ್ರು ಅವ್ರು. ಏ, ಅಷ್ಟು ಬೇಗ ಬೇಡ, ಎರಡೂ ಕಾಲಿಗೆ ಬನ್ನಿ ಅಂತ ನಾನು. ೧೨:೩೫ಕ್ಕೆ ಗೇಟಿಂದ ಬಿಟ್ಟ ನಾವು ೧:೧೫ಕ್ಕೆ ವೀಕ್ಷಣಾ ತಾಣ ತಲುಪಿದ್ವಿ. ಅಲ್ಲಿಂದ ೧:೫೦ಕ್ಕೆ ಹೊರಟ ನಾವು ೨:೨೦ಕ್ಕೆ ವಾಪಾಸ್ ಬಂದಿದ್ವಿ. ಮಧ್ಯ ಅಲ್ಲಲ್ಲಿ ಕೊಟ್ಟ ಫೋಟೋಗ್ರಾಫಿ ಬ್ರೇಕುಗಳನ್ನೂ ಸೇರಿಸಿ :-) ಚಿತ್ರಗಳಿಲ್ದೇ ಅಲ್ಲಿನ ಅನುಭವಗಳನ್ನು ಹೇಳೋದು ಕಷ್ಟವಾಗಿದ್ರಿಂದ ಚಿತ್ರಗಳ ಅಡಿ ಟಿಪ್ಪಣಿಗಳಲ್ಲೇ ಅಲ್ಲಿನ ಅನುಭವಗಳನ್ನು ಕಟ್ಟಿಕೊಡೋಕೆ ಪ್ರಯತ್ನಿಸ್ತೇನೆ.ಅದ್ರಲ್ಲೂ ಮಳೆಯ ನಾಡ ಜಲಧಾರೆಗೆ ಬಿಸಿಲು ಸೋಕದಂತೆ ಅಡ್ಡಬರೋ ಮೋಡ ಟೋಪಿಯಂತೆ ಕಾಣೋದು, ಸುತ್ತ ಹಸಿರ ಕೇಶರಾಶಿಯ ಮಧ್ಯ ಬೈತಲೆಯಂತೆ ಸಾಗುವ ಕಣಿವೆ, ಬಿಸಿಲು ನೆರಳುಗಳ ಆಟದಲ್ಲಿ ನಿಮಿಷ ನಿಮಿಷಕ್ಕೂ ಬದಲಾಗೋ ಪ್ರಕೃತಿಯನ್ನು ಸವಿಯೋಕೆ ಅಲ್ಲಿಯೇ ಹೋಗಬೇಕು. ಆ ಸವಿಯನ್ನು ಸವಿಯೋಕೆ ಆಗುಂಬೆಯ ಅತಿರಸ, ಬಾಳೆಕಾಯಿ ಚಿಪ್ಸುಗಳಿದ್ದರಂತೂ ಇನ್ನೂ ಸುಖ :-)
Greenery on the way to Bharkana falls

Bharkana view point
Bharkana falls

View of Nature @Bharkana view point


ಮಳೆಯ ನಾಡ ಜಲಧಾರೆಗೆ ಬಿಸಿಲು ಸೋಕದಂತೆ ಮೋಡದ ಟೋಪಿ
ಆಗುಂಬೆಯ ಮಧ್ಯಾಹ್ನದೂಟ
ಆಗುಂಬೆಯಲ್ಲಿ ಮಧ್ಯಾಹ್ನದೂಟಕ್ಕೆ ಹಲವಾರು ಆಯ್ಕೆಗಳಿವೆ. ಅದರಲ್ಲಿ ನಾನಿಷ್ಟಪಡೋ ಆಯ್ಕೆ ಆಗುಂಬೆಯ ಕೇಂದ್ರಭಾಗದಲ್ಲಿರೋ ಅಮ್ಮ ಮನೆ. ಹಿಂದಿನ ಸಲ ಬಾಲಣ್ಣನ ಜೊತೆಗೆ ಅಲ್ಲಿಗೆ ಹೋದಾಗ ಅಮ್ಮನ ಮನೆ ಊಟ ಸವಿಯೋದಲ್ಲದೇ ಅವರ ಸಂದರ್ಶನವನ್ನೂ ಮಾಡಿದ್ದ ನಾನು ಆಗಲೇ ಎರಡೂಮುಕ್ಕಾಲಾಗಿದ್ರಿಂದ ಅಲ್ಲಿಗೆ ಹೋಗಿ ತೊಂದರೆ ಕೊಡಲಿಷ್ಟಪಡದೇ ಬೇರೆ ಹೋಟೇಲಿಗೆ ಹೋಗೋಕೆ ಇಷ್ಟಪಡ್ತಿದ್ವಿ. ಸಸ್ಯಾಹಾರಿಗಳಾದ್ರೆ ಬಸ್ಟಾಂಡಿನ ಪಕ್ಕದ ಮಯೂರ ಹೋಟೇಲ್ಲಿದೆ. ಇಲ್ಲಾ ಒನಕೆ ಅಬ್ಬಿಯ ಹಾದಿಯಲ್ಲೇ ಇರುವ ಗಣೇಶ ಹೋಟೆಲ್ ಮತ್ತು ಲಾಡ್ಜಿದೆ. ಗಣೇಶ ಹೋಟೆಲ್ಲಿಗೆ ನಾವು ಹೋಗೋ ಹೊತ್ತಿಗೆ ತುಂಬಿದ ಬಸ್ಸೊಂದು ಬಂದು ನಿಂತು ಅದ್ರಲ್ಲಿದ್ದ ನಲವತ್ತೈವತ್ತು ಜನ ಅಲ್ಲಿಗೆ ನುಗ್ಗಿದ್ರಿಂದ ಇಲ್ಲಿ ನಮಗೆ ಊಟ ಸಿಗೋದು ಲೇಟಾಗುತ್ತೇಂತ ಅದಕ್ಕಿಂದ ಮುಂಚೆ ಬಲಬದಿಗೆ ಸಿಕ್ಕ ಕ್ಯಾಂಟೀನಿಗೆ ನುಗ್ಗಿದ್ವಿ. ಈ ರಸ್ತೇಲಿರೋ ಸಸ್ಯಾಹಾರಿ ಕ್ಯಾಂಟೀನಿದೊಂದೆ :-) ಇಲಿ ೨೫ರ ಪ್ಲೇಟು ಪರೋಟ, ೨೦ರ ಪ್ಲೇಟು ಪಲಾವು ಸಖತ್ತಾಗಿದ್ದು ನಮ್ಮ ಮಧ್ಯಾಹ್ನದ ಹಸಿವು ನೀಗಿಸಿದ್ದಲ್ಲದೇ ಮುಂದೆ ಒನಕೆ ಅಬ್ಬಿಯಲ್ಲಿ ೧೨ ಕಿ.ಮೀ ನಡೆಯೋಕೆ Energy booster ಆಗಿದ್ದೂ ಸುಳ್ಳಲ್ಲ :-)
Way to OnakeAbbi falls, The indicator at the Agumbe, Udupi highway

ಒನಕೆ ಅಬ್ಬಿ ಜಲಪಾತ
ಒನಕೆ ಅಬ್ಬಿ ಫಾಲ್ಸಿನಲ್ಲೂ ಫಾಲ್ಸಿನ ಮೆಟ್ಟಿಲುಗಳವರೆಗೂ ಸಾಗೋ ರಸ್ತೆಯಿದ್ದರೂ ಅದಕ್ಕಿರೋ ಗೇಟು ಮುಚ್ಚೇ ಇರುತ್ತೆ. 
ರಸ್ತೆ ಮಧ್ಯ ಅನೇಕ ಕಡೆ ಮರ ಬಿದ್ರೂ ಅದನ್ನು ತೆಗೆಯೋರಿಲ್ಲ. 
ಈ ಜಲಪಾತಕ್ಕೆ ಬರೋರು ಅದೆಷ್ಟೋ ಜನರಿದ್ರೂ ಅವ್ರೆಲ್ಲಾ ಸುಮಾರು ಆರು ಕಿ.ಮೀ ನಡೆದು ಬರೋರೆ ಅಂತ ಇಲ್ಲಿ ಬಿದ್ದಿರೋ ಮರಗಳನ್ನ ನೋಡಿದ್ರೇ ಗೊತ್ತಾಗತ್ತೆ :-) ಪ್ರಕೃತಿ ಅನ್ನೋದು ತನ್ನನ್ನು ಬಯಸಿ ಬರೋ ಚಾರಣಿಗರಿಗೆ ಮಾತ್ರ ದಕ್ಕುವಂತಿರಬೇಕೇ ಹೊರತು ಮೋಜು ಮಸ್ತಿ ಮಾಡಿ ಹಾಳು ಮಾಡೋ ಪುಂಡು ಪೋಕರಿಗಳಿಗಲ್ಲ ಅಂತ ಇಲ್ಲೆಲ್ಲೂ ಕಾಣದ ಬೀರು ಬಾಟಲಿಗಳಿಂದ ಸ್ಪಷ್ಟವಾಗ್ತಿತ್ತು :-) ನಮ್ಮನ್ನ ಒನಕೆ ಅಬ್ಬಿ ಗೇಟಿನ ಬಳಿ ಇಳಿಸಿದ ಡ್ರೈವರ್ರು ವಾಪಾಸ್ ಬರ್ತಾ ಬೇಕಾದ್ರೆ ನನ್ನ ಕರೀರಿ ಅಂತ ಅವ್ರ ಫೋನ್ ನಂಬರನ್ನೂ ಕೊಟ್ಟು ಹೋದ್ರು. ಅವ್ರಿಗೆ ದಿನದ ಚಾರ್ಜು ೫೦೦ ಕೊಟ್ಟು ನಮ್ಮ ನಡಿಗೆಯನ್ನು ಮುಂದುವರೆಸಿದ್ವಿ. ಆಗುಂಬೆಯ ಈ ಫಾಲ್ಸ ಹಾದಿಯಲ್ಲೆಲ್ಲಾ ನೆಟ್ವರ್ಕು ಸಿಗುತ್ತಿದ್ದುದು ಒಮ್ಮೆ ಅಹೋಬಿಲಂನ ನೆನಪಿಸ್ತು. ಅಷ್ಟು ದೊಡ್ಡ ಕ್ಷೇತ್ರವಾದ್ರೂ ಒಂದೂ ಮೊಬೈಲ್ ಟವರ್ರಿಡದ ಅದಕ್ಕಿಂತ ಎಲ್ಲೋದ್ರೂ ನೆಟ್ವಕ್ರು ಸಿಗೋ ನಮ್ಮಾಗುಂಬೆಯೇ ಮೇಲು ಅನಿಸಿದ್ದು ಸುಳ್ಳಲ್ಲ. ಎಡಕ್ಕೆ, ಬಲಕ್ಕೆ ಎಲ್ಲೂ ಹೋಗೋದು ಬೇಡ. ನೇರವಾಗಿ ಹೋಗಿ , ಜೋಗಿಗುಂಡಿಯಲ್ಲಿ ಸಿಕ್ಕಂತದ್ದೇ ಮೆಟ್ಟಿಲುಗಳು ಇಲ್ಲಿ ಸಿಗುತ್ತೆ ಅಂದ ಅವ್ರ ಮಾತುಗಳಂತೆಯೇ ಮುಂದೆ ಹೊರಟ್ವಿ.

ಇಲ್ಲಿ ಸುಮಾರು ಎರಡೂವರೆ ಕಿ.ಮೀ ನಡೆಯೋ ಹೊತ್ತಿಗೆ ಎಡಕ್ಕೆ ಮೇಲಕ್ಕೆ ಸಾಗೋ ಮೆಟ್ಟಿಲುಗಳು ಸಿಗುತ್ತೆ. ಆದರೆ ಈ ಹಾದಿಯಲ್ಲಿ ಮಾತ್ರ ಸಾಗಬೇಡಿ ಅಂತ ಹೇಳೋಕೆ ಅದ್ರ ಚಿತ್ರವನ್ನೂ ಹಾಕಿದ್ದೇನೆ.
Don't go in this way
 ಕಾಡೊಳಗೆ ಕರೆದುಕೊಂಡು ಹೋಗೋ ಈ ಹಾದಿಯಲ್ಲಿ ಹದಿನೈದು ನಿಮಿಷ ನಡೆದ್ರೂ ಜಲಪಾತ ಸಿಕ್ಕದ್ದರಿಂದ ನಾವು ಅಲ್ಲಿ ಸಿಕ್ಕ ನೆಟ್ವರ್ಕಿಂದ ನಮ್ಮ ಡ್ರೈವರ್ ರಜಾಕ್ ಅವ್ರಿಗೆ ಫೋನ್ ಮಾಡಿದ್ವಿ. ಅವ್ರು ನೀವು ಇಷ್ಟು ಬೇಗ ಫಾಲ್ಸಿಗೆ ಹೋಗೋಕೆ ಸಾಧ್ಯನೇ ಇಲ್ಲ. ನೇರ ರಸ್ತೇಲಿ ಹೋಗಿ ಅಂದ. ಮತ್ತೆ ಎಡಕ್ಕಿರೋ ಮೆಟ್ಟಿಲುಗಳು ಎಲ್ಲಿಗೆ ಹೋಗುತ್ತೆ ಅಂದ್ರೆ ಅದು ಕಾಡೊಳಗೆ ಹೋಗತ್ತೆ ಅಷ್ಟೇ ಅಂದ್ರು. ಆದ್ರೆ ಅದು ಸೂರ್ಯಾಸ್ತ ತಾಣದಿಂದ ಈ ಕಡೆ ಬರೋಕೆ ಇರೋ ದಾರಿಯಿರಬಹುದು ಅಂತ ಶಿವು ಹಿಂದಿನ ಸಲ ಬಂದಾಗ ಕೇಳಿದ ಮಾತುಗಳ ಆಧಾರದ ಮೇಲೆ ಹೇಳ್ತಿದ್ರು. ಆ ಹಾದಿಯಲ್ಲಿ ಮುಂದೆ ಹೋದ ಹಾಗೆ ಬಸ್ಸುಗಳ ಶಬ್ದ ಜಾಸ್ತಿಯಾಗುತ್ತಾ ಇದ್ದಿದ್ರಿಂದ ಹಾಗೇ ಇದ್ದಿರಬೇಕು ಅಂದ್ಕೊಂಡು ವಾಪಾಸ್ ಬಂದ್ವಿ.
One of the indicators which tells that we are in correct path
ಇಲ್ಲಿನ ಮಣ್ಣು ಎಷ್ಟು ಫಲವತ್ತಾದ ನೆಲ ಅಂದ್ರೆ ಇಲ್ಲಿ ಒಂದಲ್ಲ, ಎರಡಲ್ಲ ಅಣಬೆಗಳ ರಾಶಿ ರಾಶಿಯೇ ಬೆಳೆಯುತ್ತೆ, ಮಲ್ಲಿಗೆಯ ದಂಡು ಹಾಸಿದಂತೆ ! ಅದ್ರಲ್ಲೂ ಅದೆಷ್ಟು ವೆರೈಟಿಗಳು. ಕೆಂಪು, ಹಳದಿ, ಕಂದು, ಬಿಳಿ ಅದ್ರಲ್ಲೂ ಬಗೆ ಬಗೆಯ ಆಕಾರ, ರೂಪಗಳು. ಮರಗಜ ಎಂದು ಕರೆಯಲ್ಪಡೋ ಹಬ್ಬುಗೆ ಜಾತಿಯ ಸಸ್ಯಗಳು, ಮತ್ತಿ, ಹಲಸು ಮುಂತಾದ ಹಲ ಮರಗಳು ಯಾರ ನಿಯಂತ್ರಣವೂ ಇಲ್ಲದಂತೆ ಬೆಳೆದಿರೋದ್ನ ನೋಡೋದೇ ಒಂದು ಖುಷಿ. ಜೊತೆಯಲ್ಲೊಂದಿಷ್ಟು ವಿಚಿತ್ರ ಚಿಟ್ಟೆಗಳು. ಸಾಮಾನ್ಯವಾದ ಚಾಕೊಲೇಟ್ ಪ್ಯಾಂಸಿ,ಲೆಮನ್ ಪ್ಯಾಂಸಿ, ಜೆಜೆಬೆಲ್, ಕಾಮನ್ ಯೆಲ್ಲೋ, ಕಾಮನ್ ೪ ರಿಂಗ, ಬ್ಲೂ ಬಾಟಲ್ಗಳಲ್ಲದೇ ಹೆಸರೇ ಗೊತ್ತಿಲ್ಲದ ಒಂದಿಷ್ಟು ಚಿಟ್ಟೆಗಳೂ ಸಿಕ್ಕಿದ್ದವು ದಾರೀಲಿ.  ಅವೆಲ್ಲವನ್ನೂ ಸೆರೆಹಿಡಿಯೋಣವೆಂದ್ರೆ ಮೂರೂವರೆಗೇ ಕತ್ತಲಾಗುತ್ತಿರೋ ಇಲ್ಲೇ ದಾರಿತಪ್ಪಿದ್ರೆ ವಾಪಾಸ್ ಹೋಗೋಕಾದ್ರೂ ಒಂಚೂರು ಬೆಳಕು ಬೇಕಲ್ವಾ . ಕತ್ತಲಾಗೋದ್ರೊಳಗೆ ಜಲಪಾತವನ್ನಾದ್ರೂ ತಲುಪೋ ಧಾವಂತ. ಮಿಸ್ಸಾಗೋ ಚಿತ್ರಗಳಿಗೆ ಬರ್ತಾ ಆರಾಮಾಗಿ ಒಂದಿಷ್ಟು ಚಿತ್ರ ಸೆರೆಹಿಡಿಯಬಹುದೆನ್ನೋ ಸಮಾಧಾನ.
Lots and Lots of Mushroom growing at a single place in Onake abbi falls.
ಆರು ಕಿ.ಮೀ ಭಯಾನಕ ಏರು, ತಕ್ಷಣದ ಇಳಿವುಗಳನ್ನ ದಾಟಿ ಸಾಗಿ ಜಲಪಾತದ ತಲೆ ಮೇಲೇ ನಿಲ್ಲುವ ಅನುಭವವಿದ್ಯಲ್ಲ. ಅದು ಅದ್ಭುತ. ಜಲಪಾತ ಹಾರುವಲ್ಲಿಂದ್ಲೇ ನಾವು ಕೆಳಗೆ ನೋಡಬಹುದಾದ್ರೂ ಇಲ್ಲಿ ಬರುವವರ ಸುರಕ್ಷತೆಗೆ ಯಾವ ಕ್ರಮಗಳನ್ನೂ ಕೈಗೊಂಡಿಲ್ಲ. ಕೊನೆ ಪಕ್ಷ ನೋಡಲೊಂದು ಕಟ್ಟೆ, ಜನ ಆಯತಪ್ಪಿ ಬೀಳದಂತೆ ಕಂಬಗಳೂ ಇಲ್ಲ. ಹಂಗಾಗಿ ಇಲ್ಲಿ ಫೋಟೋ ತೆಗ್ಯೋಕೆ ಹೋದಾಗ ಎಚ್ಚರ ತಪ್ಪಿದ್ರೆ ಅಪಾಯ ತಪ್ಪಿದ್ದಲ್ಲ. ಮಲೆನಾಡವನಾಗಿ ಎಷ್ಟೆಲ್ಲಾ ಉಂಬುಳ(ಜಿಗಣೆ/leeches) ಕಚ್ಚಿಸಿಕೊಂಡ ನನಗೇ ಇಲ್ಲಿನ ಉಂಬುಳಗಳು ಸಿಕ್ಕಾಪಟ್ಟೆ ಹೆಚ್ಚೆನಿಸಿಬಿಟ್ಟಿತ್ತು. ನಮ್ಮ ನಡಿಗೆಯ ಟಾಪ್ ಗೇರಲ್ಲಿ ನಡೆಯುತ್ತಿದ್ದು ಪ್ರತೀ ಹತ್ತು ನಿಮಿಷಕ್ಕೊಮ್ಮೆ ಕಾಲನ್ನು ನೋಡ್ಕೋತಿದ್ರೂ ಅಲ್ಲಲ್ಲಿ ಉಂಬುಳಗಳು ಹತ್ತಾಗಿರ್ತಿತ್ತು. ತೆಗೆದ ಉಂಬುಳಗಳ ಹಾವಳಿ ಎಷ್ಟಾಗಿತ್ತು ಅಂದ್ರೆ ಇಲ್ಲಿ ಚಪ್ಪಲಿ ತೆಗೆದು ನೀರಿಗಿಳಿದ್ರೆ ನನ್ನ ಕಾಲಿಂದ ಸುರಿಯುತ್ತಿದ್ದ ರಕ್ತದಿಂದ ನೀರು ಕೆಂಪಾಗತೊಡಗಿತ್ತು. ಕಾಲ ಎಲ್ಲ ಕಡೆಯಿಂದ ರಕ್ತ ಹರೀತನೇ ಇದೆ. ರಕ್ತ ನೋಡಿ ಭಯ ಪಡೋರಾದ್ರೆ ಕಷ್ಟವಿದೆ ಪರಿಸ್ಥಿತಿಯಿಲ್ಲಿ. ಉಂಬುಳ ಕಚ್ಚದಂತೆ ಅದೆಂತದೋ ಲಿಕ್ವಿಡ್ ಸಿಗುತ್ತೆ, ಸುಣ್ಣ ಹಚ್ಚಬಹುದು, ಉಪ್ಪು ಹಚ್ಚಬಹುದು, ಹೊಗೆಸೊಪ್ಪು ಹಚ್ಚಬಹುದು ಅಂತೆಲ್ಲಾ ಅಂತಾರೆ. ಆದ್ರೆ ಅವೆಲ್ಲ ಎಷ್ಟು ವ್ಯರ್ಥ ಅಂತ ಕುದುರೆಮುಖ ಟ್ರೆಕ್ಕಲ್ಲಿ ನೋಡಾಗಿದ್ರಿಂದ ಆಗಿದ್ದಾಗಲಿ ಅಂತ ಹಾಗೇ ಬಂದಿದ್ವಿ ಈ ಬಾರಿ. ಅದ್ರ ಪ್ರಭಾವ ಚೆನ್ನಾಗೇ ಆಗಿತ್ತು. ಇಲ್ಲಿಗೆ ಬಂದ ಅನುಭವವೂ ಚಿತ್ರಗಳಿಲ್ದೇ ರಸಹೀನವಾದ್ರಿಂದ ಚಿತ್ರಗಳೊಂದಿಗೆ ಆ ನೆನಪುಗಳ ಮೆಲುಕು ಹಾಕಬಹುದು. ಒನಕೆ ಅಬ್ಬಿಯ ಶುರುವಿನಿಂದ ೩:೦೮ಕ್ಕೆ ಶುರು ಮಾಡಿದ್ದ ನಾವು ೩:೫೫ಕ್ಕೆ ಅದರ ತುದಿ ತಲುಪಿದ್ವಿ. ಅಲ್ಲಿಂದ ೪:೨೦ಕ್ಕೆ ಬಿಟ್ಟ ನಾವು ಕೆಳಗೆ ತಲುಪುವಾಗ ೫ ಘಂಟೆ
Finally reaching the way to Onake Abbi falls
View from the Top of Onake abbe falls
Sunlight creating beauty at Onake Abbi falls
 ಮರಳಿ ಮನೆಗೆ:
ಐದಕ್ಕೆ ಮತ್ತು ಆರೂವರೆಗೆ ಸಾಗರಕ್ಕೆ ನೇರ ಬಸ್ಸುಗಳಿವೆ ಎಂದಿದ್ರು ರಜಾಕ್. ಐದರ ಬಸ್ಸನ್ನೇ ಹಿಡಿಯೋಣ ಅಂತ ನಾವು ಬರೋಷ್ಟರಲ್ಲಿ ಎದುರಿಗೊಂದು ಬಸ್ಸು ಬಂತು. ಆದ್ರೆ ಅಲ್ಲಿ ಕೈಯಡ್ಡ ಮಾಡಿದ್ರೂ ನಿಲ್ಲಿಸ್ಲಿಲ್ಲ ಅವ. ಸರಿ ಅಂತ ನಡೆದುಕೊಂಡೇ ವಾಪಾಸ್ ಹೊರಟ ನಾವು ನಿಶಾನಿ ಮೊಟ್ಟೆಯ ಕ್ರಾಸು ದಾಟಿ, ಗಣೇಶ ಹೋಟೆಲನ್ನೂ ದಾಟಿ ಮುಂದೆ ಬಂದೆವು.
Nishani motte Cross
ಆಗುಂಬೆಯ ಪ್ರಸಿದ್ದ ರಂಗನಾಥ ದೇಗುಲಕ್ಕೆ ಹೋಗಬೇಕೆಂದು ಅಲ್ಲಿಗೆ ಹೋದ್ರೂ ಅದು ಬಾಗಿಲು ಹಾಕಿದ್ದು, ತೆಗೆಯೋದು ೬:೩೦ ಕ್ಕೆ ಅಂದರು. ಅಷ್ಟೆಲ್ಲಾ ಕಾಯೋಕಾಗಲ್ಲವೆಂದ ನಾವು ಮುಂದೆ ಬಸ್ಟಾಂಡಿಗೆ ಬರುವಷ್ಟರಲ್ಲಿ ಶಿವಮೊಗ್ಗಕ್ಕೆ ಹೋಗೋ ಬಸ್ಸೊಂದಿತ್ತು. ಆದ್ರೆ ಅದ್ರಲ್ಲಿ ನಾ ತೀರ್ಥಳ್ಳಿವರೆಗೆ ಹೋಗ್ಬೋದಿತ್ತು.  ಕಾಲಿಡೋಕೂ ಜಾಗವಿಲ್ಲದಷ್ಟು ರಷ್ಷಿದ್ದ ಆ ಬಸ್ಸಲ್ಲಿ ಹೋಗೋದು ಬೇಡ ಮುಂದಿನದ್ರಲ್ಲಿ ಹೋಗೋಣ ಅಂತ ಶಿವಣ್ಣ. ಮುಂದಿನದ್ದು ಬಂದಿದ್ದು ಆರಕ್ಕೆ. ಅದ್ರದ್ದೂ ಅದೇ ಕತೆ. ಉಡುಪಿ, ಮಣಿಪಾಲಲ್ಲಿ ಓದ್ತಿದ್ದ ಹುಡುಗ ಹುಡುಗಿಯರೆಲ್ಲಾ ಶಿವಮೊಗ್ಗದ ಮೇಲೆ ತಂತಮ್ಮ ಊರಿಗೆ ಹೊರಟಿದ್ರಿಂದ ಆ ಕಡೆಯಿಂದ ಬರ್ತಿದ್ದ ಬಸ್ಸುಗಳೆಲ್ಲಾ ಫುಲ್ಲೇ. ಘಾಟಿಯಲ್ಲಿ ಗಜಾನನ ಗಾಡಿ ಕೆಟ್ಟು ನಿಂತಿದೆಯಂತ ಬೇರೆ ಕೇಳಿದ್ದ ನಾನು ಈ ಬಸ್ಸು ಬಿಟ್ರೆ ಮತ್ತೆ ಬಸ್ಸಿದ್ಯೋ ಇಲ್ವೋ, ಇದಕ್ಕೇ ನಾನು ತೀರ್ಥಳ್ಳಿ ತಂಕ ಹೋಗೋದೇ ಅಂತ. ಇದ್ರಲ್ಲಿ ಹೋದ್ರೆ ತೀರ್ಥಳ್ಳಿಯಿಂದ ಮುಂದೆ ಬಸ್ ಸಿಗುತ್ತೆ ಅಂತ ಕಂಡಕ್ಟರಿಂದ ಖಾತ್ರಿನೂ ಮಾಡ್ಕೊಂಡ್ರಾಯ್ತು. ಸರಿ ಅಂತ ತುಂಬಿದ್ದ ಬಸ್ಸಲ್ಲೇ ಹೆಂಗೋ ಜಾಗ ಮಾಡ್ಕೊಂಡು ಹತ್ತಿದ ನಾವು, ನಿಂತ್ಕೊಂಡೇ ೭ ಕ್ಕೆ ತೀರ್ಥಳ್ಳಿ ತಲುಪಿದ್ವಿ. ಅಲ್ಲಿಂದ ೭:೧೦ರ ಭಾಗ್ಯಲಕ್ಷ್ಮಿ ಹತ್ತಿದ ನಾನು ಸಾಗರಕ್ಕೆ ಬರೋ ಹೊತ್ತಿಗೆ ೯ ಘಂಟೆ ! ಇಲ್ಲಿ ಸೂರ್ಯಾಸ್ತ ಅಂತ ೬:೩೦ ವರೆಗೆ ಕಾದುಕೊಂಡು ಅಲ್ಲಿಂದ ಆಮೇಲೆ ಸಾಗರಕ್ಕೆ ಬರೋಣ ಅಂದ್ಕೊಂಡ್ರೆ ಹೇಗೆ ಬರ್ತಿದ್ನೋ ಗೊತ್ತಿಲ್ಲ. ಶಿವಮೊಗ್ಗಕ್ಕೆ ಅಂದ್ರೆ ಸಂಜೆ ೭:೩೦ಕ್ಕೆ ಹೊರಡೋ ಕೊನೆಯ ಗಾಡಿ ಸ್ಲೀಪರ್ ಬಸ್ಸಿದೆ. ಆದ್ರೆ ಸಾಗರಕ್ಕೆ ಹಂಗಲ್ಲ. ಆರೂವರೆಗೆ ಕೊನೆಯ ಗಾಡಿ ತಪ್ಪಿಸಿಕೊಂಡ್ರೆ ಶಿವಮೊಗ್ಗಕ್ಕೆ ಬಂದು ಅಲ್ಲಿಂದ ಸಾಗರಕ್ಕೆ ಬರ್ಬೇಕು! ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂಗೆ. ಶುರುವಾಗಿದ್ದು ಲೇಟಾದ್ರೂ ಅಂದ್ಕೊಂಡಿದ್ದ ಜಾಗಗಳನ್ನೆಲ್ಲಾ ನೋಡಿದೆನೆಂಬ ಖುಷಿಯಲ್ಲಿ ನಾನು ಮನೆ ಸೇರಿದೆನೆಂಬ ಸಂತಸದಲ್ಲೇ ಸದ್ಯಕ್ಕೊಂದು ವಿರಾಮ.

4 comments:

  1. ಎಷ್ಟು ಚೆಂದದ ಸ್ಠಳ ಪ್ರಶಸ್ತಿ, ಸುಂದರ ಫೋಟೋಗಳು. ನನ್ನ ಅಮ್ಮನ ಮೂಲ ತವರುಮನೆ ಆಗೊಂೆಯೇ ಆಗಿದ್ದರೂ ನಾನು ಈ ಎಲ್ಲಾ ಸ್ಥಳಗಳನ್ನು ನೋಡಲು ಸಾಧ್ಯವಾಗಿಲ್ಲ, ಈ ಫೋಟೋಗಳನ್ನ ನೋಡಿದರೆ ಆದಷ್ಟು ಬೇಗ ಹೋಗಲೇ ಬೇಕು ಅನ್ನಿಸತ್ತಿದೆ.

    ReplyDelete
  2. ನಾನು ಹೋಗ್ಬೇಕು. ಯಾವಾಗ ಗೊತ್ತಿಲ್ಲ :) ನೀನೇ ದಾರಿತೋರಿಸಬೇಕು

    ReplyDelete