Sunday, November 27, 2016

3k ರಾಜ್ಯೋತ್ಸವ ಸಂಭ್ರಮ

ನವೆಂಬರ್ ಒಂದಕ್ಕೆ ನಮ್ಮೂರಲ್ಲೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸಿಕ್ಕಿತ್ತು. ಹತ್ತಕ್ಕೆ ಆಫೀಸಲ್ಲೇ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅನಿರೀಕ್ಷಿತವಾಗಿ ನಿರೂಪಕನಾಗೋ ಭಾಗ್ಯವೂ ಸಿಕ್ಕಿತ್ತು. ನನ್ನ ಭಾವಯ್ಯನ ಹುಟ್ಟಿದಬ್ಬದ ದಿನದ ಸಂಭ್ರಮದಲ್ಲಿ, ಮುಂಬಯಿಯಲ್ಲಿ ಹುತಾತ್ಮರಾದವರ ನೆನಪು ಕಣ್ಣಂಚಿನ ನೀರಾಗೋ  ಹೊತ್ತಲ್ಲಿ 3k ಯ ಕಾರ್ಯಕ್ರಮ ಅವತ್ತು ಮಧ್ಯಾಹ್ನವೇ ಇರುವ ನೆನಪಾಗಿತ್ತು. ಅದಕ್ಕೆ ಸರಿಯಾಗಿ  ೧೬ ದಿನ ಮುಂಚೆ 3k ಯ ಕವನ ಸ್ಪರ್ಧೆಗೆ ಕವನ ಕಳಿಸಿದ್ದೂ ನೆನಪಾಗಿತ್ತು. ಎರಡು ದಿನ ಮುಂಚೆಯೇ 3k ಯ ನವೀನ್ ಅವರು ಫೋನ್ ಮಾಡಿ ಅವತ್ತು ಕವಿಗೋಷ್ಠಿಯೂ ಇರುವ ಬಗ್ಗೆ, ಅದಕ್ಕೆ ಬಂದು ಕವನವಾಚನದಲ್ಲಿ ಪಾಲ್ಗೊಳ್ಳಬೇಕೆಂದು 3k ಯ ಪರವಾಗಿ ಆಹ್ವಾನವಿತ್ತಿದ್ದೂ ನೆನಪಾಗಿ ನಾಗರಭಾವಿಯ ಭೈರವೇಶ್ವರ ಸಂದ್ರದ ಬಳಿಯಿರುವ ಬ್ಲಾಸಂ ಶಾಲೆಯತ್ತ ಹೊರಟು ನಿಂತೆ. ಮಧ್ಯಾಹ್ನ ೧:೩೦ ಕ್ಕೆ ಹೊರಟವನಿಗೆ ಶ್ರೀಕಾಂತಣ್ಣನೂ ಸಿಕ್ಕು ಬ್ಲಾಸಂ ಶಾಲೆ ತಲುಪೋ ಹೊತ್ತಿಗೆ ನಾಲ್ಕೂ ಕಾಲು.

ಕವಿ ಗೋಷ್ಠಿ:

ನಮ್ಮದ್ರುಷ್ಟಕ್ಕೆ ಅವತ್ತಿನ ಕಾರ್ಯಕ್ರಮವೂ ಲೇಟಾಗಿ ಮೊದಲ ಮೂವರ ಕಾವ್ಯವಾಚನ ಮುಗಿದು ನಾಲ್ಕನೇಯವರ ನೀಳ್ಗವನ ವಾಚನ ನಡೆಯುತ್ತಿತ್ತು . ಹೋಗಿ ಮಹೇಶ್ ಗೌಡ, ಗೋರವಿ ಮುಂತಾದವರ ಜೊತೆ ಹಾಯೆನ್ನೋ ಹೊತ್ತಿಗೆ, ಇವರು ಈಗ ಕವನ ಓದ್ತಾ ಇದ್ದಾರೆ ಅಂತ ನನ್ನೆಸರೇ ಕರೆದು ಬಿಡಬೇಕಾ ? ! ಇದೇನಪ್ಪಾ ಅಂದ್ಕೊಳ್ಳೋ ಹೊತ್ತಿಗೆ ಐದನೇಯವ ನಾನೇ ಅಲ್ವಾ ಅಂತ ನೆನಪಾಯ್ತು ! ಸರಿ ಅಂತ ಮೊಬೈಲಲ್ಲಿದ್ದ ಕವನ ಮೇಲೆ ತಂದು ಕೊಳ್ತಾ ವೇದಿಕೆಯತ್ತ ಹೆಜ್ಜೆ ಹಾಕೋ ಹೊತ್ತಿಗೆ ಸತೀಶ ಬಂದು ಹಾರ್ಡ್ ಕಾಪಿ ಕೊಡ್ತಾರೆ ತಡಿ ಅಂದ. ವೇದಿಕೆಯ ಬಳಿಯೇ ಇದ್ದ ರೂಪಕ್ಕ ಇದೇ ಅಲ್ವಾ ನಿಮ್ಮ ಕವನ ಅಂತ ತಮ್ಮತ್ರ ಇದ್ದ ಪ್ರಿಂಟೌಟ್ ಕೊಟ್ಟಿದ್ದು ಐನೂರು ರೂಪಾಯಿ ನೋಟವನಿಗೆ ಚೇಂಜ್ ಕೊಟ್ಟಂಗಾಗಿತ್ತು :-) ಪ್ರಶಸ್ತಿ ಅವರು ಬರ್ತಾರೆ ಅಂದಾಗ ಇದೇನು ಕಾವ್ಯ ನಾಮನಾ , ಉಪಮೆನಾ ಅಂತ ಗೊಂದಲದಲ್ಲಿ ಕೂತಿದ್ದ ಹಲವು ಮುಖಗಳು ನನ್ನತ್ತನೇ ನೋಡ್ತಿದ್ದವು. ವೇದಿಕೆಯ ಮೇಲಿದ್ದ ಶ್ರೀ ಮಣಿಕಾಂತ್ , ಶ್ರೀ ಮಂಜುನಾಥ್ ಕೊಳ್ಳೇಗಾಲ ಅವರು ಮತ್ತು ಶ್ರೀ ಅಶೋಕ್ ಅವರು ಕೂತಿರುವಾಗ ನಾನೇನಪ್ಪ ಓದೋದು ಅನ್ನೋ ಅಳುಕು ಬೇರೆ. ಬ್ಲಾಗಲ್ಲಿ, ಫೇಸ್ಬುಕ್ಕಲ್ಲಿ ಬರೆಯೋದು ಬೇರೆ, ಮೈಕ್ ಕೊಟ್ಟು ಕವನ ಓದು ಅನ್ನೋದು ಬೇರೆ. ಮಾತಾಡು ಅಂದ್ರೆ ಏನಾದ್ರೂ ಒಂದು ಮಾತಾಡ್ಬಹುದು. ಬರೆದಿರೋ ಕತೆಯನ್ನೋ, ಕವನವನ್ನೋ ಓದು ಅಂದ್ರೆ ಅದೆಷ್ಟು ಕಷ್ಟ ಅಂತ ಮೈಕ್ ಹಿಡಿದಾಗ್ಲೇ ಗೊತ್ತಾಗಿದ್ದು. ವೇದಿಕೆ ಅಂತ ಹತ್ತಿ ಕತೆಯನ್ನೋ ಕವನವನ್ನೋ ಓದದೇ ವರ್ಷಗಳಾಗಿದ್ದರೂ ಎಲ್ರಿಗೂ ಒಮ್ಮೆ ನಮಸ್ಕರಿಸಿ, ನನ್ನೆಸ್ರೇ ಪ್ರಶ್ರಸ್ತಿ ಅಂದಾಗ ಎಲ್ಲೆಡೆ ಒಮ್ಮೆ ನಗೆಯ ಅಲೆ. ಆಗ ವಾತಾವರಣವೂ ಸ್ವಲ್ಪ ಲೈಟಾದ ಭಾವವುಂಟಾಗಿ ನನ್ನ ಕವನ "ಸಲಿಲಕ್ಕೊಂದು ಸಾಲು" ಓದೋಕೆ ಪ್ರಾರಂಭಿಸಿದೆ. ಬರೆದಿದ್ದ ಕವನದ ಏಳು ಪ್ಯಾರಾಗಳನ್ನ ಇನ್ನೊಂದಿಷ್ಟು ಚೆನ್ನಾಗಿ ಬರೆಯಬಹುದಿತ್ತು ಅಂತ ಬೆಳಗ್ಗೆ ಅನಿಸಿದ್ರೂ ಕವನಕ್ಕೆ ಆಮೇಲೆ ಸಿಕ್ಕ ಚಪ್ಪಾಳೆಗಳಿಂದ, ಜಯಪ್ರಕಾಸ್ ಸರ್ ಮುಂತಾದವರ ಮೆಚ್ಚುಗೆಗಳಿಂದ ನನ್ನ ಖುಷಿಗೆ ಮೇರೆಯೇ ಇರಲಿಲ್ಲ.

ನಂತರದ ಕವನ ವಾಚನ ಶ್ರೀಕಾಂತಣ್ಣ ಅವರದ್ದಾಗಿತ್ತು. ನನ್ನ ಜೊತೆಗೇ ಬಂದರೂ ಅವರು ಗಾಡಿ ನಿಲ್ಲಿಸೋಕೆ ಹೋಗಿದ್ರಿಂದ ನನ್ನ ಕವನ ಮುಗಿಯೋ ಹೊತ್ತಿಗೆ ಬಂದಿದ್ರು. ಅವರು ಬರ್ತಿದ್ದ ಹಾಗೆಯೇ ಅವರ ಹೆಸರೂ ಬರಬೇಕೇ ?   ಏ, ನಾನು ಆಮೇಲೆ ಓದ್ತೀನಿ ಅಂತ ಮುಂದಿನ ಕವಿಯನ್ನು ಕರೆಯೋಕೆ ಹೇಳಿದ್ರು. ಆದ್ರೆ ಅವರು ಬಾರದಿದ್ದ ಕಾರಣ 3kಯ ನೂತನ್ ಅವರು ಅವರ ಪರವಾಗಿ ಓದಿದ್ರು. ನಂತರ ಮತ್ತೆ ತಪ್ಪಿಸಿಕೊಳ್ಳಲಾಗದ ಶ್ರೀಕಾಂತಣ್ಣ ವೇದಿಕೆಗೆ ಬರಲೇಬೇಕಾಯಿತು :-) ಎದುರಿಗೇ ಕೂತ ಮಡದಿ, ಮಕ್ಕಳ ಮುಂದೆ ಕವಿಗೋಷ್ಠಿಯಲ್ಲಿ ಕವನವೋದುವ ಭಾಗ್ಯ ಶ್ರೀಕಾಂತಣ್ಣನಿಗೆ :-) ಅವರ ಮಹಾಭಾರತದ ಕಾವ್ಯ ಅವರ ಅನುಭವದ ಮಾತುಗಳಿಗೂ ಸಾಕ್ಷಿಯಾಗಿ ಗದ್ಯ-ಪದ್ಯಗಳ ಸಮ್ಮಿಶ್ರಣವಾಗಿ ಒಂತರಾ ಭಿನ್ನ ಭಾವವನ್ನಿತ್ತಿತು. ನಂತರ ಆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಲೇಖಕಿ, ಕವಯಿತ್ರಿ ಶ್ರೀಮತಿ ಜಯಲಕ್ಷ್ಮೀ ಪಾಟೀಲ್ ಅವರ ಕವನವಾಚನ. ನಂತರ ಅಂದಿನ ಅತಿಥಿಗಳಾಗಿದ್ದ ಶ್ರೀ ಮಂಜುನಾಥ ಕೊಳ್ಳೇಗಾಲ ಅವರು ಅಂದಿನ ಕವನವಾಚನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನೂ ತಿಳಿಸಿದರು.

ಕರ್ನಾಟಕ ನಾಟಕ ಪಿತಾಮಹ ಟಿ.ಪಿ ಕೈಲಾಸಂ:
ಎರಡು ವರ್ಷದ ಹಿಂದೆ ಹೀಗೇ 3k ಯ ಕಾರ್ಯಕ್ರಮದಲ್ಲಿ ಮೊದಲು ಕಂಡಿದ್ದು ಶ್ರೀ ಮಂಜುನಾಥ ಕೊಳ್ಳೇಗಾಲ ಅವರನ್ನು. ಅಂದು ಓದಿನ ಮಹತ್ವ ಏನು ಎಂಬುದರ ಬಗ್ಗೆ ಹೇಳುತ್ತಾ ಕುಮಾರ ವ್ಯಾಸ ಭಾರತ, ಬೊಮ್ಮನ ಹಳ್ಳಿಯ ಕಿಂದರಿ ಜೋಗಿ ಮುಂತಾದ ಕೃತಿಗಳ ಸಾರವನ್ನು ಉಣಬಡಿಸಿದ್ದ ಮಂಜುನಾಥ್ ಸರ್ ಅವರ ಪರಿಚಯವನ್ನು ಅಂದು ಮಾಡಿಕೊಟ್ಟಿದ್ದು ಸತೀಶ್ ನಾಯಕ್ ಭದ್ರಾವತಿ. ಇಂದೂ ಅವರೇ :-) ಟಿ.ಪಿ ಕೈಲಾಸಂ ಅವರ ನಾಟಕಗಳ ಬಗ್ಗೆ ಕೇಳಿದ್ದ ನಮಗೆ ಅವರ ವ್ಯಕ್ತಿತ್ವದ ಪರಿಚಯವಾಗಿದ್ದು ಇಂದೇ.

ತಮಿಳು ಮೂಲದ ಜಸ್ಟೀಸ್ ಪರಮಶಿವಯ್ಯ ಮತ್ತು ಕಮಲಮ್ಮ ದಂಪತಿಗಳ ಮಗನಾಗಿ ಬೆಂಗಳೂರಿನಲ್ಲಿ ಹುಟ್ಟಿದ್ದ ಕೈಲಾಸಂ ಅವರು ಭೂವಿಜ್ಞಾನ ಶಾಸ್ತ್ರದಲ್ಲಿ ಬಿ.ಎ, ಎಂ.ಎ ಪಡೆದು ಲಂಡನ್ನಿನ ರಾಯಲ್ ಕಾಲೇಜ್ ಆಫ್ ಸೈನ್ಸಿನಲ್ಲಿ ಏಳು ವಿಷಯಗಳಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದರು. ಅಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಜಾರ್ಜ್ ಬರ್ನಾಡ್ ಶಾ ಅವರ ನಾಟಕಗಳಿಂದ ಅಪಾರ ಪ್ರಭಾವ ಹೊಂದಿದ್ದ ಅವರು ನಂತರ ಕರ್ನಾಟಕ ನಾಟಕ ರಂಗದತ್ತ ಹೊರಳಿದರು. ಉನ್ನತ ದರ್ಜೆಯ ಕುಟುಂಬದಿಂದ ಬಂದ ಕೈಲಾಸಂ ಅವರು ಕನ್ನಡ ಸಾಹಿತ್ಯಕ್ಕಾಗಿ ಒದ್ದಾಡುವುದು ಅವರ ತಂದೆಗೆ ಸುತರಾಂ ಇಷ್ಟವಿರಲಿಲ್ಲ. ಆ ಅಪ್ಪ, ಮಗನ ನಡುವೆ ನಡೆಯೋ ಮನಸ್ತಾಪಗಳನ್ನೂ ಹಾಸ್ಯವಾಗಿ ಪರಿವರ್ತಿಸಿದ ಸನ್ನಿವೇಶಗಳನ್ನು ಕೈಲಾಸಂ ಅವರ ಕೃತಿಗಳಲ್ಲೇ ಓದಬೇಕು. ಆದರೂ ಕೆಲವು ಪ್ರಸಂಗಗಳನ್ನು ನಿನ್ನೆ ಕೇಳಿದ ನೆನಪಿನಲ್ಲಿ ತೆಗೆದುಕೊಳ್ಳುವುದಾದರೆ..


ಪ್ರಸಂಗ ೧: ಕೈಲಾಸಂ ಅವರು ತುಂಬಾ ಕೊಳೆಯಾಗಿದ್ದ ರೂಂ ಒಂದರಲ್ಲಿ ಇರುತ್ತಾರೆ. ಅದಕ್ಕೆ nook(ಮೂಲೆ) ಅಂತ ಕರೆಯುತ್ತಿದ್ದರು.ಅಲ್ಲಿಗೆ ಬಂದ ಅವರ ಹಿತೈಷಿಯೊಬ್ಬರು. ಏನಪ್ಪಾ ಕೈಲಾಸಂ, ನಿನ್ನ ರೂಂ ಇಷ್ಟೊಂದು ಕಸದಿಂದ ತುಂಬಿದೆ ಅಂದ್ರೆ ಕೈಲಾಸಂ ಅವರು, ಸ್ವಾಮಿ ಕಸ ಅಂದರೆ ಏನು ? ಯಾವುದು ಎಲ್ಲಿರಬಾರದು ಅಲ್ಲಿದ್ದರೆ ಕಸ. ಉದಾಹರಣೆಗೆ ನೀವು ಇಲ್ಲಿರಬಾರದು, ನೀವು ಇಲ್ಲಿಗೆ ಬಂದರೆ ಅದು..!!!
ಪ್ರಸಂಗ ೨:ಕೈಲಾಸಂ ಅವರ ತಂದೆಯವರಿಗೆ ತುಂಬಾ ಅನಾರೋಗ್ಯವುಂಟಾಗಿದೆಯೆಂಬುದನ್ನು ತಿಳಿದು ಅವರು ತಮ್ಮ ತಂದೆಯನ್ನು ನೋಡಲು ಬರುತ್ತಾರೆ. ತಂದೆಗೆ ಕೊನೆಗೂ ತಮ್ಮ ಮಗ ತಮ್ಮನ್ನು ನೋಡಲು ಬಂದನಲ್ಲಾ ಅನ್ನೋ ಸಂತೋಷಕ್ಕಿಂತ ಆತ ಹೇಗಿದ್ದಾನೋ ಏನೋ ಎಂಬ ಆತಂಕ. Are you having money to have one square meal per day ಅಂತ ಕೇಳುತ್ತಾರೆ. ಅದಕ್ಕೆ ಕೈಲಾಸಂ ಅವರು ಏನೂ ಉತ್ತರಿಸದಿರುವುದನ್ನ ಕಂಡ ಅವರು what do you need . tell me ಅಂತ ಕೇಳುತ್ತಾರೆ. ಅದಕ್ಕೂ ಸಮರ್ಪಕ ಉತ್ತರ ಸಿಗದಿದ್ದನ್ನ ಕಂಡ ಅವರ ತಂದೆ Are you serious ಎನ್ನುತ್ತಾರೆ . ಅದಕ್ಕೆ ಕೈಲಾಸಂ ಅವರು. I am not serious. you are serious . Take care of your health ಅಂತ ಹೇಳಿ ಅಲ್ಲಿಂದ ತೆರಳುತ್ತಾರೆ !
ಪ್ರಸಂಗ ೩:  ಕೈಲಾಸಂ ಅವರು ಕೊನೆಗೂ ತಮ್ಮ ತಂದೆಯವರಿದ್ದ ಭವ್ಯ ಬಂಗಲೆ whitehouse ಗೆ ಬಂದು ನೆಲಸಬೇಕಾಗುತ್ತದೆ. ಆದರೆ ಅಲ್ಲಿ ಇರುವುದು ಇಷ್ಟವಿಲ್ಲದ ಅವರು ಅದರ ಹೊರಭಾಗದಲ್ಲಿರುವ ಕೊಠಡಿಯೊಂದರಲ್ಲಿ ನೆಲೆಸುತ್ತಾರೆ. ಅದನ್ನು ನೋಡಿದ ಒಬ್ಬರು ಇವರಿಗೆ ಪ್ರಶ್ನಿಸುತ್ತಾರೆ. Finally you are in whitehouse ? ಕೈ:No I am in outhouse !
ಪ್ರಸಂಗ ೪: whitehouse ನಲ್ಲಿ ಕೈಲಾಸಂ ಅವರು ನೆಲೆಸಿದ್ದನ್ನು ತಿಳಿದ ಒಬ್ಬರು ಇವರನ್ನು ಪ್ರಶ್ನಿಸುತ್ತಾರೆ. everything is good in whitehouse ? ಕೈ:yes. I am the only blackspot in it !.  ಕೈಲಾಸಂ ಅವರಿಗೆ ಉತ್ತಮ ಕುಟುಂಬದಿಂದ ಬಂದತಹ ತಾವು ಕೆಳಮಟ್ಟದ ಜೀವನ ನಡೆಸುತ್ತಿರುವುದನ್ನ ಸಮಾಜದಲ್ಲಿ ಕೆಲವರು ಹಾಸ್ಯದ ಸರಕಾಗಿಸಿದ್ದಾರೆ ಅನ್ನೋದು ಗೊತ್ತಿತ್ತು. ಆದರೂ ಅದಕ್ಕೆ ತಲೆಕೆಡಿಸಿಕೊಳ್ಳದ ಅವರು ಅದನ್ನೇ ಹಾಸ್ಯದ ಸರಕಾಗಿಸಿದ್ದರು ಅನ್ನೋದು ಮೇಲಿನ ಪ್ರಸಂಗಗಳಿಂದ ತಿಳಿದುಬರುತ್ತೆ.

ಮೈಸೂರು ಮಹಾರಾಜರ ಧಡೂತಿತನದ ಬಗ್ಗೆಯೂ ಕೈಲಾಸಂ ಅವರು ಹಾಸ್ಯವಾಗಿ ಬರೆದಿದ್ದನ್ನ ಮಂಜುನಾಥ್ ಅವರು ವಿವರಿಸುತ್ತಾ ಹೋಗುತ್ತಾರೆ.
ಪ್ರಸಂಗ ೫: ಕೈಲಾಸಂ:ನೀನು ಮೈಸೂರು ದಸರಾಕ್ಕೆ ಹೋಗ್ತಿದೀಯಲ್ಲ ರಾಜ. ಅಲ್ಲಿನ ಅಂಬಾರಿಯಲ್ಲಿ ಕೆಳಗಿರೋದು ಆನೆ ನೆನಪಿರ್ಲಿ !
ರಾಜ ಅನ್ನೋ ಅವರ ಗೆಳೆಯ/ಪಾತ್ರಧಾರಿ: ಹೂಂ. ಅದು ಗೊತ್ತೇ ಇದ್ಯಲ್ಲ ಸಾರ್,
ಕೈಲಾಸಂ: ಗೊತ್ತಿದ್ರೂ, ಜ್ಞಾಪಕ ಇರ್ಲಿ ಅಂತ ಹೇಳ್ದೆ
ಪ್ರಸಂಗ ೬:  ರಾಜರು ಬರುವಾಗ ಆಗ ೩ ಸಲ ತುಪಾಕಿ ಹಾರಿಸ್ತಿದ್ರಂತೆ. ಅದನ್ನ 3 cheers to his highness ಅಂತ ಕರೀತಿದ್ರಂತೆ. ಅದನ್ನು ಕೈಲಾಸಂ ಅವರು 3 cheers to his anus ಅಂತ ಹಾಸ್ಯ ಹೇಳ್ತಿದ್ರಂತೆ. Ruler of mysore ಬದಲು road roler of mysore ಅಂತಿದ್ರು. ಅವರ sharp wit ಅನ್ನೋದು ಹಾಗಿತ್ತು ಅನ್ನೋದಕ್ಕೆ ಇವು ಕೆಲವು ಉದಾಹರಣೆಗಳಷ್ಟೆ.

ಕೈಲಾಸಂ ಅವರ ಗೆಳೆಯ ವೆಂಕಣ್ಣಯ್ಯನವರು ಅಂತ ಒಬ್ಬರಿದ್ರಂತೆ. ಅವರು ಆರೂಕಾಲಡಿಯ ಆಜಾನುಬಾಹುವಾದ್ರೆ ಕೈಲಾಸಂ ಐದೂಕಾಲಡಿಯವರು.ಅವರ ಜೊತೆ ಹೋಗ್ತಾ ನಡೆದ ಸುಮಾರು ಹಾಸ್ಯ ಪ್ರಸಂಗಗಳನ್ನೂ ಅವರು ಇಲ್ಲಿ ಉಲ್ಲೇಖಿಸುತ್ತಾರೆ
ಪ್ರಸಂಗ ೭:ಹಿಂಗೇ ಒಮ್ಮೆ ನಡೆದು ಹೋಗ್ತಾ .ಸ್ವಾಮಿ ವೆಂಕಣ್ಣಯ್ಯನವರೇ ಹೇಗಿದ್ರೂ ನಿಂತೇ ಇದ್ದೀರಿ. ಹಾಗೇ ಸ್ವಲ್ಪ ಮೇಲೆ ನೋಡಿ. ನಮ್ಮ ಹಿರಿಯರು ಯಾರಾದ್ರೂ ಕಾಣಬಹುದೇನೋ. ಎಲ್ಲಾ ಆರಾಮಿದ್ದಾರಾ ಕೇಳಿ ಹೇಳಿ.

ಪ್ರಸಂಗ ೮:ವೆಂಕಣ್ಣಯ್ಯ ಅವರು ಮತ್ತು ಕೈಲಾಸಂ ಅವರು ಒಮ್ಮೆ ಮಾರ್ಕೇಟಿಗೆ ಹೋಗಿರ್ತಾರೆ
ವೆಂಕಣ್ಣಯ್ಯ: ಏನಮ್ಮಾ, ನಿಂಬೆಹಣ್ಣಿಗೆ ಎಷ್ಟು ?
ಸ್ವಾಮಿ: ಅದು ನಿಂಬೆಹಣ್ಣಲ್ಲ. ಸ್ವಲ್ಪ ಬಗ್ಗಿ ನೋಡಿ, ಅದು ಮೋಸಂಬಿ !!

ಹೀಗೇ ಕೈಲಾಸಂ ಅವರ ಹಾಸ್ಯ ಗಳನ್ನು ತೆರೆದಿಟ್ಟ ಮಂಜುನಾಥ್ ಅವರು ನಂತರ ಕೈಲಾಸಂ ಅವರ ನಾಟಕಗಳ ಪರಿಚಯದತ್ತ ತಿರುಗಿದರು. ಇಂದಿನ ಶೈಕ್ಷಣಿಕ ವ್ಯವಸ್ಥೆಯ ಅಣಕಾಗಿರುವ ಪೋಲಿ ಕಿಟ್ಟಿ, ಟೊಳ್ಳುಗಟ್ಟಿ ನಾಟಕಗಳ ಪರಿಚಯ ಮಾಡಿಕೊಟ್ಟ ಶ್ರೀ ಮಂಜುನಾಥ ಕೊಳ್ಳೇಗಾಲ ಅವರ ಮಾತುಗಳ ಬಗ್ಗೆ ಹೆಚ್ಚು ಬರೆಯೋ ಬದಲು ಅವರ ಮಾತುಗಳನ್ನ ಮತ್ತೊಮ್ಮೆ ಕೇಳೋದೇ ಮೇಲು ಅನಿಸುತ್ತೆ ! ಅವರ ನಾಟಕಗಳಲ್ಲಿ ಬರುವ ಮೋನೋಲಾಗಿನಲ್ಲಿನ ಗುಂಡೂ ಮತ್ತು ಸುಬ್ಬುವಿನ ಬಗ್ಗೆಯಾಗಲಿ, ಐದು ಸಖಿಯರು ಒಂದು ಉದ್ಯಾನವನದ ಬಗ್ಗೆ ಬೇರೆ ಬೇರೆ ಭಾಷೆಗಳಲ್ಲಿ ಹಾಡೋದನ್ನಾಗಲಿ ಬರೆಯೋ ಬದಲು ಅದನ್ನು ಕೇಳಿದ್ರೇ ಮಜ. ಆ ರೆಕಾರ್ಡಿಂಗುಗಳು ಆಸಕ್ತ ಕೇಳುಗರಿಗಾಗಿ..



ಮಣಿಕಾಂತ್ ಸರ್ ಅವರಿಗೆ ರಾಜ್ಯೋತ್ಸವ ಸನ್ಮಾನ
ನಂತರ ಆದಿನದ ಮುಖ್ಯ ಕಾರ್ಯಕ್ರಮವಾಗಿದ್ದ ಶ್ರೀ ಮಣಿಕಾಂತ್ ಸರ್ ಅವರ ಸನ್ಮಾನ ಕಾರ್ಯಕ್ರಮವೂ ನಡೆಯಿತು. ಅದನ್ನು ನಡೆಸಿಕೊಟ್ಟವರು ಸೂರತ್ಕಲ್ಲಿನ ಮಹೇಶ್ ಮೂರ್ತಿ ಅವರು. ಮಣಿಕಾಂತ್ ಸರ್ ಅವರಿಗೆ ನೀಡಲಾದ ಪುರಸ್ಕಾರ ಪತ್ರವನ್ನು ಓದಿ, ಆಲನಹಳ್ಳಿ ಆರ್ ಮಣಿಕಾಂತ್ ಸರ್ ಅವರ ಸಾಧನೆಗಳ ಬಗ್ಗೆ ನೆರೆದ ಸಭಿಕರಿಗೆ ಮತ್ತೆ ನೆನಪಿಸಿಕೊಟ್ಟಿದ್ದು ೩k ಯ ಅಧ್ಯಕ್ಷೆಯಾದ ಶ್ರೀಮತಿ ರೂಪಾ ಸತೀಶ್ ಅವರು. ಪತ್ನಿ ನಾಗರತ್ನ, ಪುತ್ರಿ ನೀಲಿಯವರ ಸಂಸಾರ ಹೊಂದಿದ ಮಣಿಕಾಂತ್ ಅವರ ನೀಲಿಮ ಪ್ರಕಾಶನದ ಬಗ್ಗೆ ಅವರ ಅಮ್ಮ ಹೇಳಿದ ಎಂಟು ಸುಳ್ಳು ಪುಸ್ತಕದ ಒಂದೂವರೆ ಲಕ್ಷಕ್ಕೂ ಹೆಚ್ಚು ಪ್ರತಿಗಳು ಖರ್ಚಾದ ಬಗ್ಗೆ ಮುಂತಾದ ಸಾಧನೆಗಳ ಬಗ್ಗೆ ಕೇಳಿದ ನಮಗೆ ಮೈ ಜುಮ್ಮೆಂದಿದ್ದು ಸುಳ್ಳಲ್ಲ.ಸನ್ಮಾನದ ನಂತರ ಮಣಿಕಾಂತ್ ಸರ್ ಅವರು ಇದು ನಮ್ಮ ಮನೆಯ ಕಾರ್ಯಕ್ರಮವೇ ಅನಿಸುವಷ್ಟು ಚೆನ್ನಾಗಿ ಮೂಡಿಬರುತ್ತಿದೆ. ಖುಷಿ ಕೊಡುತ್ತಿದೆ ಅಂತಲೂ, ೨೦೦೮ರಲ್ಲಿ ಶುರುವಾದ ೩k ಮತ್ತದರ ಕಾರ್ಯಗಳಿಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು. ನಂತರದಲ್ಲಿ ಸಭಿಕರ ಕೋರಿಕೆಗೆ ಕೊಂಚ ಆಶ್ಚರ್ಯದಿಂದಲೇ ಸ್ಪಂದಿಸಿದ ಮಣಿಕಾಂತ್ ಅವರ ಪತ್ನಿ ಶ್ರೀಮತಿ ನಾಗರತ್ನ ಮಣಿಕಾಂತ್ ಅವರು ನಿಸಾರ್ ಅಹಮದ್ ಅವರ ಭಾವಗೀತೆಯೊಂದನ್ನು ಹಾಡಿ ನಾವೆಲ್ಲಾ ಭಾವಲೋಕದಲ್ಲಿ ವಿಹರಿಸುವಂತೆ ಮಾಡಿದರು. 

ಎದ್ದೇಳು ಕನ್ನಡಿಗ:
ನಂತರ ಶ್ರೀ ಸತೀಶ್ ಎಸ್ ಅವರು ಬರೆದು, ಶ್ರೀ ವಿಶಾಲ್ ನಾಯಕ್ ಅವರು ಸಂಗೀತ ನಿರ್ದೇಶಿಸಿರುವ , ಶ್ರೀ ರವಿಕಿರಣ್ ಅವರು ಹಾಡಿರುವ ಎದ್ದೇಳು ಕನ್ನಡಿಗ ಹಾಡನ್ನು ಪ್ರಸ್ತುತ ಪಡಿಸಲಾಯಿತು. ಪರರಿಗೆ ಉಪಕಾರಿಯಾಗಲು ಮುಂದಾಗಿ ಮನೆಗೇ ಮಾರಿಯಾಗುತ್ತಿರುವ ಕನ್ನಡಿಗ ತನ್ನ ನಾಡ, ಸಂಸ್ಕೃತಿಯ ಬಗ್ಗೆ ಹೆಮ್ಮೆ ಹೊಂದಿ ಅದನ್ನು ಉಳಿಸಿಕೊಳ್ಳಲು ಮುಂದಾಗದಿದ್ದರೆ ಅಪಾಯ ತಪ್ಪಿದ್ದಲ್ಲ, ಅದನ್ನು ತಪ್ಪಿಸಲು ಎದ್ದೇಳು ಕನ್ನಡಿಗ ಎಂಬ ಅವರ ಗೀತೆ ಸಭಿಕರ ಗಮನ ಸೆಳೆಯಿತು. ಕಾರ್ಯಕ್ರಮ ಮಿಸ್ ಮಾಡಿಕೊಂಡವರಿಗಾಗಿ ಅವರ ಈ ಹಾಡಿನ ಯೂಟ್ಯೂಬ್ ಕೊಂಡಿ https://www.youtube.com/shared?ci=0mboQXUr1Hs

ಹಾಸ್ಯ ಲಾಸ್ಯ:
ಶ್ರೀ ಶಶಿ ಗೋಪಿನಾಥ್ ಅವರಿಂದ ಹಾಸ್ಯ ಲಾಸ್ಯ ಕಾರ್ಯಕ್ರಮ ನಡೆಯಿತು. ಹಾಸ್ಯ, ಕನ್ನಡದ ನಟರು ಬಂದು 3k ಕಾರ್ಯಕ್ರಮ ನೋಡಿದ್ದರೆ ಹೇಗಿರುತ್ತಿತ್ತು ಎಂಬ ಮಿಮಿಕ್ರಿ ನಡೆಸಿಕೊಟ್ಟ ಅವರು ತಮ್ಮ ಮುಂದಿನ ಕಾರ್ಯಕ್ರಮವಾದ ನೃತ್ಯಕ್ಕೆ ಪೆನ್ ಡ್ರೈವ್ ತರಲು ಮುಂದಾದರೆ ಆ ಗ್ಯಾಪಲ್ಲೇ ಮಿಮಿಕ್ರಿ ನಡೆಸಿಕೊಟ್ಟ ನಿರೂಪಕ ಅರುಣ್ ಶೃಂಗೇರಿ ಅವರ ಸಮಯ ಪ್ರಜ್ಞೆ, ಹಾಸ್ಯ ಪ್ರಜ್ಞೆ ಸಭಿಕರ ಶಿಳ್ಳೆ, ಕರತಾಡನಗಳಿಗೆ ಸಾಕ್ಷಿಯಾಯಿತು

ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ.

3kಕವನ ಸ್ಪರ್ಧೆಯಲ್ಲಿ ಬಹುಮಾನ ವಿಜೇತರಾದ ಕುಮಾರಿ ಮಾನಸ ಭಟ್ ಅವರ ಪರವಾಗಿ ಅವರಣ್ಣ ನಾಗರಾಜ ಹೆಗಡೆ ಅವರು, ಗುಬ್ಬಚ್ಚಿ ಸತೀಶ್ ಅವರು, ಮೌನಯಾನ ಬ್ಲಾಗಿನ(http://vinayakabhatmb.blogspot.in/2016/10/blog-post_25.html) ಮತ್ತು ಕವನ ಸ್ಪರ್ಧೆಯಲ್ಲಿ ಬಹುಮಾನ ವಿಜೇತರಾದ ವಿನಾಯಕ ಭಟ್ ಅವರು ಮತ್ತು ಗುರುನಾಥ್ ಬೋರಗಿಯವರು ಬಹುಮಾನಗಳನ್ನು ಸ್ವೀಕರಿಸಿದರು. ಬಹುಮಾನ ವಿಜೇತರಾಗದಿದ್ದರೂ ಟಾಪ್ ೧೦ನಲ್ಲಿ ಆಯ್ಕೆಯಾಗಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳಿಗೂ ಅಭಿನಂದನಾ ಪತ್ರ, ಪುಸ್ತಕ ಬಹುಮಾನಗಳನ್ನು ವಿತರಿಸಲಾಯಿತು.

ಅಧ್ಯಕ್ಷೀಯ ನುಡಿ:
ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಅಶೋಕ್ ಶೆಟ್ಟಿಯವರು ತಮ್ಮ ಹಾಸ್ಯಭರಿತ ಮಾತುಗಳಿಂದಲೇ ನೆರೆದವರ ಮನಗೆದ್ದರು.

ವಂದನಾರ್ಪಣೆ:
ಕಾರ್ಯಕ್ರಮದ ವಂದನಾರ್ಪಣೆಯನ್ನು ನಡೆಸಿಕೊಟ್ಟವರು 3k ಯ ಗೋಪಿನಾಥ್ ಅವರು. ಬಂದ ಅಧ್ಯಕ್ಷ, ಅತಿಥಿ, ತೀರ್ಪುಗಾರ , ಸಭಿಕರಿಗೆ ವಂದನಾರ್ಪಣೆಗಳನ್ನು ತಿಳಿಸುವುದು ಸಾಮಾನ್ಯ ಶಿಷ್ಟಾಚಾರ. ಆದರೆ ಗೋಪಿನಾಥ್ ಅವರು ಆ ಕಾರ್ಯಕ್ರಮಕ್ಕೆ ಎಳನೀರು ಕೊಚ್ಚಿ ಕೊಟ್ಟವರಿಗೆ, ಸಮೋಸ ಮುಂತಾದ ತಿನಿಸುಗಳನ್ನು ತಂದು ಕೊಟ್ಟವರಿಗೂ ಬಿಡದಂತೆ ವಂದನೆ ತಿಳಿಸೋ ಜೋಷಲ್ಲಿದ್ದಿದ್ದು ಕೊನೆಯ ಬೆಂಚಿನ ಹುಡುಗರಿಗೆ ಭರಪೂರ ಮನೋರಂಜನೆ ತಂದುಕೊಟ್ಟಿತ್ತು. ಅವತ್ತಿನ ವಿಷಯವೇ ಹಾಸ್ಯ ಅಂದ ಮೇಲೆ ಕೇಳಬೇಕೆ ? ವಂದನಾರ್ಪಣೆ ವೇಳೆ ಗೋಪಿನಾಥ್ ಅವರಿಗೆ ಮೊಬೈಲು ಬ್ಯಾಟ್ರಿಯ ಮೂಲಕ ನೆರವಾಗೋಕೆ ಬಂದ ನೂತನ್ ಅವರ ನಡೆ ಸಭಿಕರ ನಗೆಗಡಲಲ್ಲಿ ಮಿಂದೇಳುವಂತೆ ಮಾಡಿತು.

ಕೊನೆಗೊಂದಿಷ್ಟು ತಿಸಿಸು, ಕೊನೆಯಿಲ್ಲದಷ್ಟು ನಗು:
3k ಯ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಬರದಿದ್ದರೂ ತೆರೆಮರೆಯಲ್ಲೇ ಕೆಲಸ ಮಾಡುತ್ತಿದ್ದ ಮಲ್ಲೇಶ್, ಪ್ರಮೋದ್  ಮುಂತಾದವರು ಮಾತಿಗೆ ಸಿಕ್ಕಿದ್ದು, ಫೋಟೋಗಳಲ್ಲಿ ಬಂಧಿಯಾಗಿದ್ದು ಕಾರ್ಯಕ್ರಮ ಮುಗಿದು ತಿಂಡಿಗೆ ವೇದಿಕೆಯಾದಾಗ್ಲೇ. ಎದ್ದೇಳು ಕನ್ನಡಿಗ ಗೀತೆ ಬರೆದ ಸತೀಶ್ ಅವರೊಂದಿಗೂ, ಸಂಗೀತ ಸಂಯೋಜನೆಗಾರ ವಿಶಾಲ್ ಮತ್ತು ಗಾಯಕ ರವಿಕಿರಣ್ ಅವರೊಂದಿಗೂ ನಡೆಸಿದ ಮಾತುಕತೆ ಖುಷಿ ಕೊಟ್ಟಿತು. ಜೇಪಿ, ಗುರುನಾಥ್ ಬೋರಗಿ, ಶ್ರೀಕಾಂತಣ್ಣ, DOM ಮಹೇಶ್ ಗೌಡ, ಸತೀಶ ನಾಯ್ಕ್ ಭದ್ರಾವತಿ ಅವರಿದ್ದಲ್ಲಿ ನಗೆಯಿಲ್ಲದಿರುತ್ಯೆ ? ಇನ್ನೊಂದಿಷ್ಟು ಕಾಲೆಳೆತ, ನಗೆಯ ಅಲೆ. ಕಪ್ಪು-ಹಣ, ಬಿಳಿ-ಹಣ ಮುಂತಾದ ವಿಷಯಗಳ ಚರ್ಚೆಗೂ ನಾಂದಿಯಾದ ತಿಂಡಿ ಕಾರ್ಯಕ್ರಮ ಒಂದಿಷ್ಟು ಫೋಟೋ ಸೆಷನ್ನುಗಳಿಗೂ ಸಾಕ್ಷಿಯಾಯಿತು. ಘಂಟೆ ಏಳೂ ಕಾಲಾಗ್ತಾ ಬಂದಿದ್ರಿಂದ ಹಗೂರಕ್ಕೆ ಒಬ್ಬೊಬ್ಬರೇ ಖಾಲಿಯಾಗುತ್ತಾ ಬಂದಿದ್ರೂ ಬ್ಲಾಸಂ ಶಾಲೆಯಲ್ಲಿನ ನಗೆಯಲೆಗಳು ನಿಂತಿರ್ಲಿಲ್ಲ.  ಇನ್ನೂ ಎರಡೂವರೆ ತಾಸಿನ ಬಸ್ ಪ್ರಯಾಣ ಬಾಕಿಯುಳಿದಿದ್ದ ಕಾರಣ ಅಲ್ಲಿಂದ
ಹೊರಡಲೇ ಬೇಕಾದ ಬಾರದ ಮನಸ್ಸು ನನ್ನದಾದರೂ ಅದೆಷ್ಟೋ ಬ್ಲಾಗಿಗ, ಮುಖ ಹೊತ್ತುಗೆಯ ಗೆಳೆಯರನ್ನು ಮುಖತಃ ಕಂಡ, ಕೈಲಾಸಂ ಅವರ ಸಾಹಿತ್ಯಕ್ಕೆ, ಅವರ ಜೀವನದ ಅನುಭವಗಳಿಗೆ ಕಿವಿಯಾದ ಖುಷಿಯೊಂದಿಗೆ,,ಬರಲಿರೋ ಹುಟ್ಟಿದಬ್ಬಕ್ಕೆ ಮುಂಚೆಯೇ ಒಂದು ಬರ್ತಡೇ ಗಿಫ್ಟ್ ಪಡೆದ ಸಂಭ್ರಮದಲ್ಲಿ.. 











ಹೀಗೊಂದು ಕಾರ್ಯಕ್ರಮ ವರದಿ,..
ಕೊನೆಯ ಬೆಂಚಿನ ಹುಡುಗರಿಂದ..  

24 comments:

  1. ಕಾರ್ಯಕ್ರಮವನ್ನು ಮಿಸ್ ಮಾಡಿಕೊಂಡ ಬಗ್ಗೆ ಖೇದವಿದೆ,,,,, ಆದರೆ ಅದು ಸ್ವಲ್ಪ ಮಟ್ಟಿಗೆ ಕಮ್ಮಿ ಆಯಿತು ನಿಮ್ಮ ಬರಹವನ್ನು ಓದಿದ ಮೇಲೆ,.,,,,,,, ಸಂಪೂರ್ಣ ವಿವರಕ್ಕೆ ಧನ್ಯವಾದಗಳು

    ReplyDelete
    Replies
    1. ನಿಮ್ಮ ಮೆಚ್ಚುಗೆಗೆ ವಂದನೆಗಳು ಮುಗ್ದಸಿಂಚನ ಅವರೇ.
      ಪ್ರಶಾಂತವನಕ್ಕೆ ಸ್ವಾಗತ

      Delete
  2. ಕುಣಿತವೊಂದನ್ನು ಹೊರತುಪಡೆಸಿದರೆ ಮಿಕ್ಕೆಲ್ಲವೂ ಸೊಗಸಾಗಿತ್ತು.

    ReplyDelete
    Replies
    1. Aayojakaraagi namagE aa nrutya pradarshana maadthaare annodu tilidiralilla... dhanyavaada SRM Sir.

      Delete
  3. ಅನಿವಾರ್ಯ ಕಾರಣದಿಂದ ಭಾಗವಹಿಸಲಾಗಲಿಲ್ಲ, ಆದರೂ 3k ಗುಂಪಿನ ಕಟ್ಟಾ ಅಭಿಮಾನಿ ನಾನು. ಚೆಂದದ ನಿರೂಪಣೆಗಾಗಿ ಧನ್ಯವಾದಗಳು

    ReplyDelete
    Replies
    1. ನಿಮ್ಮ ಮೆಚ್ಚುಗೆಗೆ ವಂದನೆಗಳು Nagalakshmi ಅವರೇ.
      ಪ್ರಶಾಂತವನಕ್ಕೆ ಸ್ವಾಗತ :-)

      Delete
  4. ಸಮಯದ ಅಭಾವದಿಂದ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ 3K ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿದ ತಂಡದವರಿಗೆಲ್ಲ ಧನ್ಯವಾದಗಳು .

    ReplyDelete
    Replies
    1. ೩k ಅವರು ಇದನ್ನು ನೋಡಿರುತ್ತಾರೆ ಎಂಬ ಭಾವನೆಯಲ್ಲಿ ಅವರ ಪರವಾಗಿ ನಿಮ್ಮ ಮೆಚ್ಚುಗೆಗೆ ವಂದನೆಗಳು.
      ಪ್ರಶಾಂತವನಕ್ಕೆ ಸ್ವಾಗತ :-)

      Delete
  5. ಹಾಯ್ ಪ್ರಶಸ್ತಿಯವರೆ..ನಿಮ್ಮ ಪದಗಳಲ್ಲಿ 3K ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ಬುತವಾಗಿ ಕಟ್ಟಿಕೊಟ್ಟಿದ್ದೀರ..ಧನ್ಯವಾದಗಳು.ನಿಮ್ಮ ಪರಿಚಯವಾದ್ದು ತುಂಬಾ ಖುಷಿಯ ವಿಚಾರ..ಹೀಗೆ ಬರೆಯುತ್ತಾ ಇರಿ..ಶುಭವಾಗಲಿ

    ReplyDelete
    Replies
    1. ನಿಮ್ಮ ಪರಿಚಯವಾದದ್ದು ನನಗೂ ಸಂತೋಷದ ವಿಷಯ ಸತೀಶ್ ಅವರೇ. ನಿಮ್ಮ ಮೆಚ್ಚುಗೆಗೆ ವಂದನೆ ಮತ್ತು ಪ್ರಶಾಂತವನಕ್ಕೆ ಸ್ವಾಗತ. ಬರುತ್ತಿರಿ

      Delete
  6. ವರದಿ ’ಪ್ರಶಸ್ತ’ವಾಗಿದೆ, ಒಂದಷ್ಟು ಸುಂದರ ಕ್ಷಣಗಳನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಅನುವು ಮಾಡಿಕೊಟ್ಟದ್ದಕ್ಕೆ ಧನ್ಯವಾದಗಳು :)

    ReplyDelete
    Replies
    1. ನಿಮ್ಮ ಮಾತುಗಳ ಕೇಳಿದ್ದಕ್ಕೆ ಮತ್ತು ನಿಮ್ಮ ಮೆಚ್ಚುಗೆಗಳನ್ನು ಸ್ವೀಕರಿಸುತ್ತಿರುವುದಕ್ಕೆ ಸಖತ್ ಖುಷಿಯಾಗ್ತಿದೆ ಮಂಜುನಾಥ ಸರ್
      ಪ್ರಶಾಂತವನಕ್ಕೆ ಸ್ವಾಗತ. ಬರುತ್ತಿರಿ

      Delete
  7. This comment has been removed by the author.

    ReplyDelete
  8. ರಘು ಮುಳಿಯNovember 28, 2016 at 12:52 PM

    ಉದ್ಯೋಗ ನಿಮಿತ್ತ ಪ್ರಯಾಣದಲ್ಲಿದ್ದ ನಿಮಿತ್ತ ಕಾರ್ಯಕ್ರಮಕ್ಕೆ ಬರಲಾಗಲಿಲ್ಲವೆಂಬ ಬೇಸರ ಈ ಬರಹವನ್ನೋದಿ ಸ್ವಲ್ಪ ಹೆಚ್ಚಾಯಿತು. ರಸನಿಮಿಷಗಳನ್ನು ಕಳೆದುಕೊಂಡೆನಲ್ಲಾ..
    ಧನ್ಯವಾದ ಪ್ರಶಸ್ತಿ.

    ReplyDelete
    Replies
    1. ನಿಮ್ಮ ಬೇಸರ ನನ್ನ ಬರಹದಿಂದ ಹೆಚ್ಚಾಗಿದ್ದರೆ ಅದಕ್ಕೆ ಬೇಸರವಿದೆ. ಮುಂದಿನ ಬಾರಿಯಾದರೂ ಕಾರ್ಯಕ್ರಮಕ್ಕೆ ಬರಲು ಈ ಬರಹದ ಬೇಸರ ಕಾರಣವಾದರೆ ಅದೇ ಖುಷಿ :-) ಬರಹದ ಓದಿಗೆ ಮತ್ತು ಮೆಚ್ಚುಗೆಗೆ ವಂದನೆಗಳು ರಘು ಮುಳಿಯ ಅವರೇ :-)

      Delete
  9. ಮತ್ತೊಂದು ಸಲ ಕಾರ್ಯಕ್ರಮಕ್ಕೆ ಹೋಗಿ ಬಂದಂತಾಯಿತು...

    ReplyDelete
  10. ಮತ್ತೊಂದು ಸಲ ಕಾರ್ಯಕ್ರಮಕ್ಕೆ ಹೋಗಿ ಬಂದಂತಾಯಿತು...

    ReplyDelete
  11. ಕಾರ್ಯಕ್ರಮಕ್ಕೆ ಮತ್ತೆ ಹೋಗಬೇಕೆಂದರೆ.. ಗಡಿಯಾರವನ್ನು ಹಿಂದಕ್ಕೆ ತಿರುಗಿಸಬೇಕಿಲ್ಲ.. ಈ ಅಕ್ಷರಗಳ ಜಾತ್ರೆಯೊಳಗೆ ಹೊಕ್ಕರೆ ಸಾಕು.. ಸರಾಗವಾಗಿ ಓಡಾಡಿಕೊಂಡು ಬರಬಹುದು.. ಪ್ರತಿಯೊಂದು ಕ್ಷಣವನ್ನು ಹೆಕ್ಕಿ ಹೆಕ್ಕಿ ಪೋಣಿಸಿ ಮಾಡಿದ ಸರಮಾಲೆ ಸೂಪರ್ ಸೂಪರ್

    ನನ್ನ ತಳಮಳವನ್ನು ಬಿಡಿಸಿ ಬಡಿಸಿದ ಪರಿಗೆ ಹಾಟ್ಸ್ ಆಫ್..

    ಒಂದು ಒಳ್ಳೆಯ ಕಾರ್ಯಕ್ರಮ.. ಒಳ್ಳೆಯ ನಿರೂಪಣೆ.. ಜೊತೆಯಲ್ಲಿ ಪ್ರಶಸ್ತಿಯ ಜೊತೆಗೆ ಪ್ರಶಸ್ತಿ ಬಂದದ್ದು ಐಸಿಂಗ್ ಆನ್ ದಿ ಕೇಕು....
    ಸೂಪರ್ ಸೂಪರ್

    ReplyDelete
    Replies
    1. ಇಷ್ಟೊಳ್ಳೆ ಪ್ರತಿಕ್ರಿಯೆ ಸಿಕ್ಕಿದ್ರೆ ಬರೆದವನಿಗೆ ಇನ್ನೇನು ಬೇಕು. ನಿಮ್ಮನ್ನೆಲ್ಲಾ ಭೇಟಿ ಮಾಡಿದ್ದು, ನಿಮ್ಮೊಂದಿಗೆ ಬಹುಮಾನ ಸ್ವೀಕರಿಸಿದ್ದು ನನಗೂ ಖುಷಿಯ ವಿಷಯವೇ ಶ್ರೀಕಾಂತಣ್ಣ

      Delete
  12. ಸಂಪೂರ್ಣ ಕಾರ್ಯಕ್ರಮದ ವಿವರಣೆ ಅದ್ಬುತವಾಗಿ ಬರೆದಿದ್ದೀರ.. ನಿಜ ಒಂದು ಸುಂದರ ಸಂಜೆ ..ಒಳ್ಳೆಯ ಕಾರ್ಯಕ್ರಮ
    ಒಳ್ಳೆಯ ಬರಹ ..

    ReplyDelete