Monday, March 27, 2017

ನಾನೋದಿದ ಪುಸ್ತಕ - ಅಷ್ಟಾವಕ್ರ ೧,೨

ಯಂಡಮೂರಿ ವೀರೇಂದ್ರನಾಥರ "ತುಳಸಿ", "ತುಳಸೀ ದಳ" ಕಾದಂಬರಿಗಳನ್ನು ಓದಿದ್ದರೆ, ಅವು ಇಷ್ಟವಾಗಿದ್ದರೆ ಇಷ್ಟವಾಗಬಹುದಾದ ಮತ್ತೆರಡು ಪುಸ್ತಕಗಳು "ಅಷ್ಟಾವಕ್ರ ಭಾಗ ೧" ಮತ್ತು "ಅ.ಭಾಗ ೨" ಆ ಕತೆಗಳಲ್ಲಿ ಬರುವ ಕ್ಷುದ್ರ ದೇವತೋಪಾಸಕರಾದ ವಿಷಾಚಿ, ಕಾದ್ರಾ, ದಾರ್ಕಾ ಮಾಂತ್ರಿಕರು, ಕುಟ್ಟಿ ಸೈತಾನ್,ಕಾಷ್ಮೋರ,ಖೇಛರಿ ಮುದ್ರೆಗಳ ಮೆಲುಕು,ಪಾತ್ರಗಳಾದ ಸಂತಾನ್ ಫಕೀರ, ಶ್ರೀಧರರ ನೆನಪು ಇಲ್ಲೂ ಬಂದರೂ ಆ ಕತೆಗೂ ಈಕತೆಗೂ ಸುಮಾರು ೨೫ ವರ್ಷಗಳ ಅಂತರವಿದೆ. ಅದೇನು ಅಂದಿರಾ ? ಮೊದಲೆರಡು ಭಾಗಗಳಲ್ಲೂ ಇಲ್ಲಿಯೂ ಇರುವ ಏಕೈಕ ಪಾತ್ರ ಪ್ರೊಫೆಸರ್ ಜಯದೇವ್ ಆದರೂ ಇದರಲ್ಲಿ ಬರುವ ಪ್ರಧಾನ ಪಾತ್ರಗಳಲ್ಲಿ ಅವರ ಮೊಮ್ಮಗಳು ರಂಜಿತಾ ಬರುತ್ತಾಳೆ. ಹಿಂದಿನ ಕತೆಯಲ್ಲಿ ಮುಖ್ಯ ಪಾತ್ರವಾಗಿದ್ದ ಯುವಕ ಜಯದೇವ್ ಗೆ ಇಪ್ಪತ್ತೈದು ವರ್ಷಗಳಲ್ಲಿ ಮೊಮ್ಮಗಳಾಗಿ ಅವಳೂ ಬಿ.ಎಸ್ಸಿ ಓದುವಷ್ಟು  ದೊಡ್ಡವಳಾಗಿದ್ದು ಹೇಗಪ್ಪಾ ಅನ್ನುವಂತಹ ಪ್ರಶ್ನೆ ಬಂದರೂ ಮೊದಲೆರಡು ಕಾದಂಬರಿಗಳಲ್ಲಿದ್ದಷ್ಟು ಈ ತರದ ಲಾಜಿಕ್ಕಿಗೆ ಪ್ರಾಮುಖ್ಯತೆಯಿಲ್ಲವೇನೋ ಅನಿಸುತ್ತದೆ. ಕಾದಂಬರಿಯ ಮಧ್ಯದಲ್ಲೇ ಬರುವ ರಾಕೇಶನೆಂಬ ಪಾತ್ರ ತಾಳೆಗರಿಯಲ್ಲಿವ ಮಾಹಿತಿಯನ್ನು ಡಿಕೋಡ್ ಮಾಡಿದಾಗ ಅದರಲ್ಲಿರುವ ನಾಲ್ಕನೆಯ ಅಂಶ ಕ್ಷುದ್ರಯಜ್ಞವನ್ನು ನಡೆಸುವುದರ ಬಗ್ಗೆಯಾಗಿರುತ್ತದೆ. ಆದರೆ ಆ ತಾಳೆಗರಿಯ ಪ್ರಸ್ತಾಪವನ್ನು ಮತ್ತೊಂದು ಪಾತ್ರವಾದ ಸಿದ್ದಾರ್ಥನ ಬಳಿ ಮಾಡುವಾಗ ನಾಲ್ಕನೆಯ ಅಂಶ ಸೂಫಿ ಅಕ್ಷರಗಳ ಬಗ್ಗೆಯಾಗಿತ್ತು ಎಂದು ತಿಳಿಸುತ್ತಾನೆ. ತಾಳೆಗರಿಯಲ್ಲಿ, ಕಾದಂಬರಿಯಲ್ಲಿ ಉಲ್ಲೇಖವೇ ಇರದ ಸೂಫಿಯ ವಿಷಯ ಇದ್ದಕ್ಕಿಂದಂತೆ ಪ್ರತ್ಯಕ್ಷವಾಗೋದೇಕೆ ? ಮೊದಲೆರಡು ಕಾದಂಬರಿಯಲ್ಲಿ ನಾಡಿಗಳ, ಚಕ್ರಗಳ, ಗಾಯತ್ರೀ ಮಂತ್ರದ ಪ್ರಸ್ತಾಪವಾದ್ದರಿಂದ ಈ ಸಲ ಸೂಫಿಸಂ ಬಂತೇ ಅನ್ನೋ ಅನುಮಾನ ಕಾಡಿದರೂ ಆಶ್ಚರ್ಯವಿಲ್ಲ. ಈ ತರದ ಋಣಾತ್ಮಕ ಅಂಶಗಳನ್ನು ಬದಿಗಿಟ್ಟು ನೋಡುವುದಾದರೆ
ಪಾತ್ರಗಳ ವೈವಿಧ್ಯತೆಯಲ್ಲಿ, ಅವುಗಳ ಪೋಷಣೆ ಮತ್ತು ಸಂಬಂಧಗಳ ಸೃಷ್ಠಿಯಲ್ಲಿ ಮೊದಲೆರಡು ಕಾದಂಬರಿಗಳಿಗಿಂತಲೂ ಚೆನ್ನಾಗಿರುವ ಇದನ್ನು ಮೊದಲೆರೆಡು ಕಾದಂಬರಿಗಳಿಗೆ ಸಂಬಂಧವಿಲ್ಲದ ಒಂದು ಕಾದಂಬರಿಯಂತೆಯೇ ಓದಿದರೆ ಇದರ ರಸಾಸ್ವಾದನೆ ಮಾಡಬಹುದು.

ಈ ಕಾದಂಬರಿಯಲ್ಲಿ ಚೈನೀಸ್, ಜಪಾನೀಸ್ ಬ್ರೈನ್ ವಾಷಿಂಗ್, ಅಗ್ರಿಕಲ್ಚರಲ್ ಬಿ.ಎಸ್ಸಿ, ಜೀನುಗಳ ಬಗ್ಗೆ ಹೇಳುವ  ಜೆನೆಟಿಕ್ಸ್, ರೋಗಗಳ ಬಗೆಗಿನ ಪೆಥಾಲಜಿ, ವಿಕಿರಣ ಬಗ್ಗೆ ಹೇಳೋ ರೆಂಟ್ಜನ್ , ಥರ್ಮೋ ನ್ಯೂಕ್ಲಿಯರ್ ಬಾಂಬ್ಗಳು, ಭ್ರಮಾಸ್ತಿತಿಯಲ್ಲಿನ ಜನರ ಮನೋಸ್ಥಿತಿ,ಹಳ್ಳಿಗರಲ್ಲಿನ ಮೂಢ ನಂಬಿಕೆಗಳು ಮತ್ತದನ್ನು ದುರುಪಯೋಗ ಮಾಡಿಕೊಳ್ಳೋ ಜನರು,  ಕೃತಕ ಗರ್ಭಧಾರಣೆಯ ಐ.ವಿ.ಎಚ್ ಮತ್ತು ಐ.ವಿ.ಡಿ ತಂತ್ರಜ್ಞಾನಗಳು, ಯಕ್ಷಿಣಿ, ಕ್ಷುದ್ರದೇವತೋಪಾಸನೆ,ಕಮ್ಯುನಿಸಂ, ರಹಸ್ಯವಾಗಿ ಕಾರ್ಯನಿರ್ವಹಿಸೋ ದೇಶವೊಂದರ ಪ್ರಧಾನಿಯನ್ನೋ ಕೊಲ್ಲಲು ಮುಂದಾಗೋ ಎಸ್ಸೋಕ್ ಎಂಬ ಸಂಘಟನೆ, ಅಂಗವೈಕಲ್ಯತೆಯಿರುವ ಜನರಲ್ಲಿರುವ ಕೀಳರಿಮೆ ಮುಂತಾದ ಹಲವಾರು ವಿಷಯಗಳನ್ನು ತರಲಾಗಿದೆ.ಯಕ್ಷಿಣೆಯ ರೂಪಕವಾಗಿ ರಂಜಿತಾ, ವೈಟ್ ಶಾಡೋ/ರವಿ, ಫ್ರೊಫೆಸರ್ ರವಿ ಬಂದರೆ , ತಮ್ಮ ಮನೋವೈಕಲ್ಯಗಳಿಂದ ಜಗತ್ತಿಗೇ ಕಂಟಕರಾಗ ಹೊರಟ ಮಹಾದ್ರಷ್ರ/ಡಾ| ಹರಹರಿರಾವ್ , ಅವತಾರ್ ಬಾಬಾ/ಡಾ| ವಂಶೀಕೃಷ್ಣ ,ರಾಕೇಶ್ ಕಾಣಸಿಗುತ್ತಾರೆ. ಅರ್ಧಂಬದ್ರ ಕಮುನಿಷ್ಟರಾಗಿ ಶಂಕರಶಾಸ್ತ್ರಿ/ಭವಾನಿಶಂಕರ್, ಡಾ| ವಿಲಿಯಮ್ಸ್ ಕಂಡರೆ , ತಮ್ಮ ರೂಪ, ಅಂಗವೈಕಲ್ಯತೆಯ ಮೆಟ್ಟಿನಿಂತು ಯಾವ ಪರಿಸ್ಥಿತಿಗೂ ಎದೆಗುಂದದ ಹೋರಾಟಗಾರರಾಗಿ ಸಿದ್ದಾರ್ಥ ಮತ್ತು ಕೇದಾರಗೌರಿ ಕಾಣುತ್ತಾರೆ. ಸ್ಪರ್ಮ್ ಸೆಲ್ಲಿಂಗ್ ಏಜೆನ್ಸಿಯ ಮತ್ತು ಪರಿಸ್ಥಿತಿಯ ಕೈಗೊಂಬೆಗಳಂತೆ ಆಗುವ ಶೇಟ್ ದಂಪತಿ, ಕಾದಂಬರಿಗೆ ಹೊಸ ತಿರುವು ಕೊಡೋ ಡಾ| ನಿವೇದಿತಾ.  ಕ್ಲೈಮಾಕ್ಸಿನಲ್ಲಿ ಬರೋ ಸೂಫಿಯಲ್ಲಿನ ಅತ್ಯುನ್ನತ ಸಂತೆ ಮುರ್ಷಿದಾ , ಅಲ್ಲಲ್ಲಿ ಬರೋ ಬ್ಲೂ/ಬ್ಲಾಕ್/ವೈಟ್/ಯೆಲ್ಲೋ/ರೆಡ್ ಸ್ಕೆಲಿಟನ್ಗಳು ಪ್ರತೀ ಪುಟವನ್ನು ಕುತೂಹಲಕಾರಿಯಾಗಿಟ್ಟಿದ್ದಾರೆ. ಕಾದಂಬರಿಯಲ್ಲಿ ಬರೋ ಮತ್ತೊಂದು ಮುಖ್ಯ ಪಾತ್ರ ಡಾ| ರಂಗಪ್ರಸಾದ್. ಕೃತಕ ಗರ್ಭದಾರಣೆಯ ಪರವಿರೋಧಗಳ ಬಗ್ಗೆ ನಡೆಯೋ ವಿಚಾರವಿನಿಮಯಗಳು ಕಾದಂಬರಿ ಸೃಷ್ಠಿಯಾದಕಾಲವನ್ನು ಗಮನಿಸಿದಾಗ ಅಚ್ಚರಿಮೂಡಿಸದೇ ಇರವು. ಇದರಲ್ಲಿ ಮೂಡಿದ ಅನೇಕ ಚರ್ಚೆಗಳು ಇಂದಿಗೂ ಪ್ರಸ್ತುತ ಅನ್ನೋದೇ ಇಲ್ಲಿನ ಸ್ವಾರಸ್ಯ.

ಇಷ್ಟೆಲ್ಲಾ ಪಾತ್ರಗಳು ಬಂದಿದೆಯಲ್ಲಾ ಅವರೆಲ್ಲಾ ಯಾರು ಅಂದ್ರಾ ? ಕಾದಂಬರಿ ಮುಗಿಯೊ ಹೊತ್ತಿಗೆ ಅವರೆಲ್ಲಾ ಒಂದೇ ಎಳೆಯಲ್ಲಿ ಒಗ್ಗೂಡುತ್ತಾರೆ.ಈ ಸ್ಕೆಲಿಟನ್ನು, ಮುರ್ಷಿದಾ ಯಾರೆನ್ನೋ ಕುತೂಹಲಕ್ಕೆ ಕಾದಂಬರಿಯನ್ನೇ ಓದಬೇಕು. ಅದೆಲ್ಲಾ ಸರಿ, ಕಾದಂಬರಿಗೆ ಅಷ್ಟಾವಕ್ರ ಅಂತಲೇ ಹೆಸರಿಟ್ಟಿದ್ದೇಕೆ? ಅವನೇನು ವಿಲನ್ನಾ ? ಹೀರೋವಾ ಅನ್ನೋ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಹೇಳಲಾರೆ. ಯಾಕೆಂದರೆ ಅಷ್ಟಾವಕ್ರನ ಜನನ ಮೇಲೆ ಬಂದ ಎಲ್ಲಾ ಪಾತ್ರಗಳಿಗೂ ಸಂಬಂಧಿಸಿದೇ ಆಗಿದೆ ! ಇನ್ನು ಕುಟ್ಟಿಸೈತಾನ್ ಮತ್ತು ಕಾಷ್ಮೋರಾ . ಮೊದಲೆರಡು ಕಾದಂಬರಿಗಳಲ್ಲಿ ಬಂದಷ್ಟು ಅಧಿಕವಾಗಿ ಇದರ ಬಗ್ಗೆ ಮಾಹಿತಿಯಿಲ್ಲದಿದ್ದರೂ ಅದನ್ನು ಇಂದಿನ ದಿನಕ್ಕೆ ಪ್ರಸ್ತುತವಾಗಿಸಿದ ಇಲ್ಲಿನ ರೀತಿ ಮೊದಲೆರಡಕ್ಕಿಂತ ಭಿನ್ನ. ಮೊದಲೆರಡರಲ್ಲಿ ಕ್ಷುದ್ರ ದೇವತೋಪಾಸನೆಯನ್ನು ಮನೋಶಾಸ್ತ್ರ, ವೈದ್ಯಕೀಯ ಶಾಸ್ತ್ರ, ಹಿಪ್ನಾಟಿಸಂಗಳೊಂದಿಗೆ ತಳುಕು ಹಾಕಿದ್ದರೆ ಇಲ್ಲದನ್ನು ಭ್ರಾಂತಿ, ಜೀನ್ ಮ್ಯುಟೇಷನ್, ಬ್ರೈನ್ ವಾಷಿಂಗ್ ಮುಂತಾದ ಅಂಶಗಳೊಂದಿಗೆ ಹೋಲಿಸಲಾಗಿದೆ. ಮೊದಲೆರಡರಲ್ಲಿ ವಿಜಯ ಯಾವುದರದ್ದು ಎಂದು ತೀರ್ಮಾನಿಸೋ ಆಯ್ಕೆಯನ್ನು ನಮಗೇ ಕೊಟ್ಟರೆ ಇಲ್ಲಿ ಬರೋ ಡಾ| ವಂಶೀಕೃಷ್ಣರ ಮಾತುಗಳುದೊಂದಿಗೆ ಒಂದು ಸಾಧ್ಯತೆಯನ್ನು ಲೇಖಕರೇ ಕೊಂದು ಹಾಕುತ್ತಾರೆ. ಆದರೂ ಹಿಡಿದ ಪುಸ್ತಕ ಕೆಳಗಿಳಲು ಬಿಡದಂತೆ ಓದಿಸಿಕೊಂಡ ಪುಸ್ತಕಗಳಿವು. ಒಮ್ಮೆ ಓದೋಎ ಯಾವ ಅಡ್ಡಿಯೂ ಇಲ್ಲ.

No comments:

Post a Comment