Friday, March 10, 2017

ಸಿದ್ದಾಪುರದ ಐತಿಹಾಸಿಕ ತಾಣಗಳು


ಸಿದ್ದಾಪುರದಿಂದ ಹೊನ್ನಾವರಕ್ಕೆ ಹೋಗುವಾಗ ಸಿಗುವ ಕ್ಯಾದಗಿಯ ಬಳಿಯ ಐನಕೈಯ ಭಾಗ್ಯತ್ತೆಯ ಮನೆಗೆ ಹೋಗಿ ಬರೋಣ ಅಂತ ಅಮ್ಮ ಯಾವಾಗ್ಲೂ ಹೇಳ್ತಿದ್ರು. ಮನೆಗೆ ಕ್ಷಿಪ್ರನ ಆಗಮನವಾದಾಗಿಂದ ಊರಿಗೆ ಹೋದಾಗ್ಲೆಲ್ಲಾ ಎಲ್ಲಾದ್ರೂ ಸುತ್ತೋದೇ ಆಗಿತ್ತಲ್ಲ, ಸರಿ ಅಂದೆ. ಸುಮ್ನೆ ಹೋಗ್ಬರೋದೇನು, ಸಿದ್ದಾಪುರದ ಸುತ್ತಮುತ್ತ ಏನೇನಿದೆ ಅಂತ ಕೇಳಿದಾಗ ಸಿಕ್ಕ ಸುಮಾರಷ್ಟು ಜಾಗಗಳನ್ನ ಮೊದಲ ಬಾರಿ ನೋಡಿದ್ದು ನಾನು. ಇದರಲ್ಲಿ ಸುಮಾರಷ್ಟು ಓದುಗರಾದ ನಿಮಗೂ ಹೊಸದಾಗಿರಬಹುದು, ಮುಂದಿನ ಬಾರಿಯ ನಿಮ್ಮ ಸಿದ್ದಾಪುರ ಟ್ರಿಪ್ಪಲ್ಲಿ ಅವುಗಳನ್ನ ಸೇರಿಸ್ಕೊಳ್ಳಬಹುದು ಅನ್ನೋ ಉದ್ದೇಶದಿಂದ ಅವುಗಳ ಬಗ್ಗೆ ಬರೀತಿದ್ದೀನಿ.

ಶಂಕರ ಮಠ:
ಸಿದ್ದಾಪುರಕ್ಕೆ ಹೋದವರಿಗೆಲ್ಲಾ ಅಲ್ಲಿನ ಶಂಕರಮಠ ಎಲ್ಲಿದೆ ಅಂತ ಗೊತ್ತೇ ಇರುತ್ತೆ. ಸಿದ್ದಾಪುರ ಪೇಟೆಯಿಂದ ಕುಮಟಾ ರಸ್ತೆಯ ಕಡೆ ತಿರುಗಿ ಸುಮಾರು ಒಂದು ಕಿ.ಮೀ ಬರುವಷ್ಟರಲ್ಲಿ ಶಂಕರ ಮಠ ಸಿಗುತ್ತೆ. ಇದು ಐತಿಹಾಸಿಕ ಸ್ಥಳವಲ್ಲ ಮತ್ತು ಇದನ್ನು ಕಟ್ಟಿಸಿದ್ದು ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ರಾಮಕೃಷ್ಣ ಹೆಗಡೆಯವರ ಸೋದರ. ಆದರೂ ಇದನ್ನು ನೋಡಲೋಗ್ಯ ಸ್ಥಳಗಳಲ್ಲಿ ಸೇರಿಸೋಕೆ ಕಾರಣ ಇಲ್ಲಿನ ಧ್ಯಾನಮಂದಿರ. ಇಲ್ಲಿನ ಧ್ಯಾನ ಮಂದಿರದಲ್ಲಿ ಮೌನವಾಗಿ ಕೂತು ಧ್ಯಾನ ಮಾಡುತ್ತಿದ್ದರೆ ಸಿಗುವ ಅನುಭೂತಿಯೇ ಬೇರೆ


ಭಾನ್ಕುಳಿ ರಾಮದೇವರ ಮಠ:
ಹಾಗೆಯೇ ಮುಂದೆ ಬರುತ್ತಿದ್ದಾಗ ಕೆಕ್ಕಾರು ರಾಮದೇವರ ಮಠ ಎಂಬ ಬೋರ್ಡು ಕಂಡು ಆ ದಾರಿಯಲ್ಲಿ ಸುಮಾರು ಒಂದೂವರೆ ಕಿ.ಮೀ ಬಲಕ್ಕೆ ಸಾಗುತ್ತಿದ್ದಾಗ ಸಿಕ್ಕಿದ್ದು ಕೆಕ್ಕಾರು ಮಠ. ಆ ಮಠದ ಪರಿಸರ, ಅಲ್ಲಿರುವ ರಾಮದೇವರ ದೇಗುಲಕ್ಕಿಂತ ಅಲ್ಲಿಗೆ ಸಾಗೋ ಹಾದಿಯೇ ಹೆಚ್ಚು ಹಿಡಿಸಿತ್ತು. ಹಾದಿಯಲ್ಲಿ ಕಂಡ ನವಿಲುಗಳು, ಕೌಳಿಮಟ್ಟಿಗಳು ಬೆಳಗ್ಗೆಯಿಂದ ಸಾಗುತ್ತಿದ್ದ ಟಾರ ರಸ್ತೆಯಿಂದ ಹೊರತಂದು ಬೇರೆಯದೇ ಪ್ರಪಂಚಕ್ಕೆ ಕರೆತರುವಂತಿದ್ದವು
ಗೋಲಬಾವಿ:
ಸಿದ್ದಾಪುರದಿಂದ ಕುಮಟಾ ರಸ್ತೆಯಲ್ಲಿ ಸುಮಾರು ೧೩ ಕಿ.ಮೀ ಸಾಗಿದರೆ ನೋಡಲೋಗ್ಯವಾದಂತಹ ಮೂರು ಮುಖ್ಯ ಸ್ಥಳಗಳಿವೆ. ಅವುಗಳೆಂದರೆ ಗೋಲಬಾವಿ, ಶ್ವೇತಪುರ ರತ್ನತ್ರಯ ಬಸದಿ, ಬಿಳಗಿಯರಸರ ವಿರೂಪಾಕ್ಷ ಮಂದಿರ. ಬಿಳಗಿ ಎಂಬ ಊರನ್ನು ದಾಟಿ ಸ್ವಲ್ಪ ಮುಂದೆ ಬರುತ್ತಿದ್ದಂತೆ ಅಲ್ಲೊಂದು ಧ್ವಜಸ್ಥಂಭ ಇರುವ ಸರ್ಕಲ್ ಸಿಗುತ್ತೆ. ಅದಕ್ಕಿಂತ ಸ್ವಲ್ಪ ಮುಂದೆ ಬಂದರೆ ಸಿಗುವುದೇ ಗೋಲಬಾವಿ. ಸುಮಾರು ೭೦೦-೮೦೦ ವರ್ಷಗಳಷ್ಟು ಹಳೆಯದೆಂದು ನಂಬಲಾದ ಈ ಬಾವಿಯ ಬಳಿ ಆಗಿನ ರಾಜರ ಕಾಲದ ಕಲ್ಲಿನ ಮರಿಗೆಗಳು, ಬಾನಿಗಳು ಇವೆ. ಇದು ಯಾವ ರಾಜರ ಕಾಲದಲ್ಲಿ ಕಟ್ಟಿಸಿದ್ದೆಂದು ಹೇಳುವ ಶಾಸನಗಳು ಮಾಹಿತಿಯಿಲ್ಲದಿದ್ದರೂ ಈ ಬಾವಿಯ ರಚನೆ, ಒಳಗೆ ಇಳಿಯಲು ಮಾಡಿರುವ ಮೆಟ್ಟಿಲುಗಳು, ಒಳಗಿರುವ ಗೋಲಾಕಾರದ ಕಮಾನುಗಳು ನೋಡಲೋಗ್ಯವಾಗಿವೆ

ಶ್ವೇತಪುರ ರತ್ನತ್ರಯ ಬಸದಿ:
ಮುಂಚೆ ಸಿಕ್ಕಿದ್ದ ಸರ್ಕಲ್ಲಿನ ಬಲಭಾಗದಲ್ಲಿ(ಸಿದ್ದಾಪುರದ ಕಡೆ ಹೋಗುವವರ ಎಡಭಾಗದಲ್ಲಿ) ಸ್ವಲ್ಪ ಮುಂದೆ ಹೋದರೆ ಅಲ್ಲಿ ಮಾರುತಿ ಮಂದಿರಕ್ಕೆ ದಾರಿ ಅನ್ನೋ ಬೋರ್ಡ್ ಕಾಣುತ್ತದೆ. ಅದೇ ರಸ್ತೆಯಲ್ಲಿ ಎಡಕ್ಕೆ ತಿರುಗಿ  ಸುಮಾರು ಐನೂರು ಮೀಟರ್ ಮುಂದೆ ಹೋಗುವಷ್ಟರಲ್ಲಿ ನಿಮ್ಮ ಎಡಭಾಗಕ್ಕೆ ಪುರಾತತ್ವ ಇಲಾಖೆಯ ಬೋರ್ಡ್ ಸಿಗುತ್ತದೆ. ಅದರ ಪಕ್ಕದಲ್ಲೇ ಇದೆ ರತ್ನತ್ರಯ ಬಸದಿ.
ಬಿಳಗಿ ಅರಸರ ಕಾಲದಲ್ಲಿ ಕಟ್ಟಿಸಿದ್ದೆನ್ನಲಾದ ಈ ಬಸದಿಯಲ್ಲಿ ದಾನಶಾಸನ ಮತ್ತು ಬಸದಿಯ ಬಗ್ಗೆ ತಿಳಿಸುವ ಮತ್ತೊಂದು ಕಲ್ಲಿನ ಶಾಸನ ಇನ್ನೂ ಸುಸ್ಥಿತಿಯಲ್ಲಿದೆ. ಇಲ್ಲಿ ಜೈನಮತದ ಮುಖ್ಯ ತೀರ್ಥಂಕರರಾದ  ಇವರ ಮೂರ್ತಿಗಳಿರುವುದರಿಂದ ಇದನ್ನು ರತ್ನತ್ರಯ ಬಸದಿ ಎಂದು ಕರೆಯಲಾಗಿದೆ. ಇದರ ಹೊರಬಾಗದಲ್ಲಿರುವ ಮತ್ತೆರಡು ಮಂದಿರಗಳಲ್ಲಿ ಒಂದರಲ್ಲಿ ಚಂದ್ರಪ್ರಭರ ಮೂರ್ತಿಯಿದ್ದರೆ ಮತ್ತೊಂದರಲ್ಲಿ ಇದ್ದಿರಬಹುದಾದ ಮೂರ್ತಿಯನ್ನು ಕಳುವು ಮಾಡಲಾಗಿದೆ :-(

ಈ ಬಸದಿಯಲ್ಲಿರುವ ಶಿಲ್ಪಗಳ ವೈಶಿಷ್ಟ್ಯತೆಯ ಬಗ್ಗೆ ಹೇಳಲೇಬೇಕು. ಇಲ್ಲಿನ ಮೂರ್ತಿಗಳನ್ನು ಅವುಗಳ ಶಿಲ್ಪದ ಕೆಳಭಾಗದಲ್ಲಿರುವ ಚಿತ್ರಗಳಿಂದ ಗುರುತಿಸಲಾಗುತ್ತದೆಯಂತೆ. ಚಂದ್ರನ ಚಿಹ್ನೆಯಿರುವ ಶಿಲ್ಪ ಚಂದ್ರಪ್ರಭರದ್ದಾಗಿದ್ದರೆ ಹೊರಭಾಗದಲ್ಲಿರುವ ಪದ್ಮಾವತಿ ದೇವಿಗೆ ಕೋಳಿ ವಾಹನ. ಆ ಕೋಳಿಗೆ ಹಾವಿನ ಹೆಡೆಯೂ ಇದ್ದು ಅದಕ್ಕೆ ಕುಕ್ಕುಟ ಸರ್ಪ ಎಂದು ಹೆಸರಂತೆ. ಪಾರ್ಶ್ವನಾಥನ ಕಾಲಬಳಿಯಲ್ಲಿ ಜ್ವಾಲಾ ಮತ್ತು ಮಾಲಿನಿ ಎಂಬ ಎರಡು ಸ್ತ್ರೀ ಶಿಲ್ಪಗಳಿವೆ


ಇಲ್ಲಿ ಮೂರು ಬಾಗಿಲುಗಳಿವೆ. ಈ ಮೂರು ಬಾಗಿಲುಗಳಿಂದ ಪ್ರವೇಶ.ದ್ವಾರದ ಎಡಭಾಗದಲ್ಲಿ  ಧರಣೇಂದ್ರ ಆಮೆ(ಕೂರ್ಮ)ವಾಹನನಾಗಿದ್ದರೆ ಬಲಭಾಗದಲ್ಲಿರುವ ಪದ್ಮಾವತಿಗೆ ಕುಕ್ಕುಟ ಸರ್ಪ ವಾಹನ. ಒಳಗಿರುವ ರತ್ನತ್ರಯರು ಮತ್ತು ಅವುಗಳ ಕಾಲ ಬಳಿಯಲ್ಲಿರುವ ವಾಹನದ ಚಿಹ್ನೆಗಳು ಇಂತಿವೆ. ಶಾಂತಿನಾಥ/ನೇಮಿನಾಥ(ಶಂಖ),ಪಾರ್ಶ್ವನಾಥ(ಹಾವು), ಮಹಾವೀರ(ಸಿಂಹ). ಇಲ್ಲಿರುವ ಲಾಂಛನಗಳ ಮೇಲೆಯೇ ತೀರ್ಥಂಕರರ ಗುರುತುಹಿಡಿಯುವಿಕೆ ನಡೆಯುತ್ತದೆ ಎಂದು ಇಲ್ಲಿರುವ ಪುರಾತತ್ವ ಇಲಾಖೆಯ ಗೈಡ್ ನಾಗರಾಜ್ ಅವರು ಹೇಳುತ್ತಿದ್ದರು. ಮೇಲ್ಗಡೆ ಹಾವಿನ ಹೆಡೆಯಿರುವಿಕೆ ಮೂಡಬಿದರೆಯಲ್ಲೂ ಇಲ್ಲ. ಪಾರ್ಶ್ವನಾಥನ ಮೇಲೆ ಹಾವಿನ ಹೆಡೆಯಿರುವಿಕೆ ಸ್ವಲ್ಪ ವಿಶೇಷವಾದ ಶಿಲ್ಪವೆನಿಸಿತು. ಯಾಕೆಂದರೆ ಮೂಡುಬಿದರೆಯ ಸಾವಿರಕಂಬದ ಬಸದಿಯಲ್ಲೂ ಈ ತರದ ಶಿಲ್ಪವನ್ನು ನೋಡಿರಲಿಲ್ಲ.

ಈ ಬಸದಿಯ ಮೇಲ್ಛಾವಣಿಯಲ್ಲಿರುವ ಕೆತ್ತನೆಗಳು ಸುಂದರವಾಗಿವೆ. ಇಲ್ಲಿರುವ ಕೆಳದಿಯರಸರ ಲಾಂಛನವಾಗಿದ್ದ ಗಂಡಭೇರುಂಡ ಮುಂತಾದ ಶಿಲ್ಪಗಳಿಂದ ಇಲ್ಲಿಯರಸರಿಗೂ ಕೆಳದಿಯರಸರಿಗೂ ಇದ್ದಿರಬಹುದಾದ ಕೊಡುಕೊಳ್ಳುವಿಕೆಯ ಬಗ್ಗೆ ಅಂದಾಜಿಸಬಹುದು


ಹೊರಗಡೆ ಉತ್ಖನನದ ಸಮಯದಲ್ಲಿ ಸಿಕ್ಕಿರೋ ಕೆಲವು ಮೂರ್ತಿಗಳನ್ನು ಇಡಲಾಗಿದೆ. ಇಲ್ಲೇ ಹತ್ತಿರದಲ್ಲಿ ಕಲ್ಯಾಣೇಶ್ವರ ದೇಗುಲವೂ ಇದೆ. ಆದರೆ ಅದಕ್ಕೆ ಹೋಗೋದು ಕಷ್ಟವೆಂದು ತಿಳಿದ ನಾವು ವಿರೂಪಾಕ್ಷ ದೇಗುಲದತ್ತ ಹೊರಟೆವು.

ವಿರೂಪಾಕ್ಷ ದೇಗುಲ:
ಮತ್ತೆ ಗೋಲಬಾವಿಯ ಬಳಿಗೆ ಬಂದು ಅದರ ಪಕ್ಕದಲ್ಲಿರುವ ಕಂಪ್ಯೂಟರ್ ಸೆಂಟರ್ ಬಳಿ ಇರುವ ಸಿಮೆಂಟ್ ರಸ್ತೆಯಲ್ಲಿ ಕೆಳಗೆ ಸಾಗಿದರೆ ಸುಮಾರು ಒಂದೂವರೆ ಕಿಲೋಮೀಟರ್ ದೂರ ಸಾಗುವಷ್ಟರಲ್ಲಿ ಸಿಗೋದು ವಿರೂಪಾಕ್ಷ ದೇಗುಲ. ಇಲ್ಲಿನ ಪುರುಷಾಮೃಗ/ಚಪ್ಪೆರಾಯ ಮುಂತಾದ ಶಿಲ್ಪಗಳು ನೋಡಲರ್ಹವಾಗಿವೆಇಟಗಿ ಮಾತೋಬಾರ ಶ್ರೀರಾಮೇಶ್ವರ ದೇವಸ್ಥಾನ:
ಈ ದೇಗುಲವೂ ಬಿಳಗಿ ಅರಸರ ಕಾಲದಲ್ಲಿ ಕಟ್ಟಿಸಿದ್ದೆಂದು ನಂಬಲಾದರೂ ಇದು ಯಾವ ರಾಜನ ಕಾಲದಲ್ಲಿ, ಯಾವ ಇಸವಿಯಲ್ಲಿ ಕಟ್ಟಿಸಿದ್ದು ಎನ್ನುವಂತಹ ಹೆಚ್ಚಿನ ಮಾಹಿತಿ ದಕ್ಕಲಿಲ್ಲ. ಇದರ ಬಗೆಗಿನ ಮಾಹಿತಿಯನ್ನು ಇನ್ನೂ ಜಾಲಾಡಬೇಕಿದೆ. ಆದರೆ ಇಲ್ಲಿರುವ ಶಿಲ್ಪಗಳು ಮನಸೆಳೆಯುತ್ತವೆ.
ಇಲ್ಲಿರುವ ಎರಡು ರಥಗಳನ್ನು ಪ್ರತೀ ವರ್ಷ ಆಗೋ ಜಾತ್ರೆಯ ಸಮಯದಲ್ಲಿ ಹೊರತೆಗೆಯಲಾಗುತ್ತದೆ. ಇಲ್ಲಿನ ಧ್ವಜಸ್ಥಂಭದ ಎದುರಿಗಿರುವ ಬಲಿಪೀಠದ ರಚನೆ ವಿಚಿತ್ರವೆನಿಸಿತು. ಮುಂಚೆ ಪ್ರಾಣಿಗಳ ಬಲಿ ನೀಡಿರಬಹುದಾಗಿದ್ದ ಜಾಗದಲ್ಲಿ ಈಗ ಅನ್ನದ ಬಲಿಹಾಕಲಾಗುತ್ತದೆ


ಭುವನಗಿರಿ ಭುವನೇಶ್ವರಿ ದೇಗುಲ: ಕನ್ನಡ ರಾಜ್ಯೋತ್ಸವಗಳ ಸಂದರ್ಭದಲ್ಲಿ ಭರ್ಜರಿ ಆಚರಣೆಯನ್ನು ಕಾಣೋ ಕನ್ನಡತಾಯಿ ಭುವನೇಶ್ವರಿಯ ದೇಗುಲ ಭುವನಗಿರಿಯಲ್ಲಿದೆ. ಸೌರಭನ ಮದುವೆಯ ನಂತರ ಅಲ್ಲಿಗೆ ಹೋಗಿರದಿದ್ದ ನಾನು ಅಲ್ಲಿಗೆ ಮತ್ತೆ ಹೋಗೋ ಅವಕಾಶ ದೊರಕಿದ್ದು ಅಮ್ಮನ ಕಾರಣಕ್ಕೆ. ಆ ದೇವಸ್ಥಾನವನ್ನು ನೋಡಿಲ್ಲ ಅಂತಿದ್ದ ಅಮ್ಮನಿಗೆ ಆ ದೇವಸ್ಥಾನವನ್ನು ತೋರಿಸೋಕೆ ನೆವದಲ್ಲಿ ನನಗೂ ಆ ದೇಗುಲದ ದರ್ಶನ ಭಾಗ್ಯ ಒದಗಿತ್ತು. ಸಿದ್ದಾಪುರದಿಂದ ಕುಮಟಾ ರಸ್ತೆಯಲ್ಲಿ ಸಿಗೋ ಈ ದೇಗುಲವನ್ನು ನೋಡಲು ಎರಡು ದಾರಿಗಳಿವೆ. ನಡೆದು ಬರೋದಾದ್ರೆ ಕೆಳಗಡೆ ಇರೋ ಕೆರೆಯ ಬಳಿಯಿಂದ ಇರೋ ಮೆಟ್ಟಿಲುಗಳನ್ನ ಹತ್ತಿ ಬರಬಹುದು. ಗಾಡಿಯಲ್ಲಿ ಬರೋದಾದ್ರೆ ದೇಗುಲದ ಬೋರ್ಡಿರುವ ಮಣ್ಣ ರಸ್ತೆಯಿಂದ ಬರಬಹುದು. ಯಾವುದರಲ್ಲಿ ಬಂದರೂ ದೇಗುಲದ ಎದುರಿಗಿರುವ ಮೂಷಿಕ , ಭುವನೇಶ್ವರಿಯ ವಾಹನವಾದ ಸಿಂಹ ಮತ್ತು ಧ್ವಜಸ್ಥಂಭದಲ್ಲಿರುವ ಕೆತ್ತನೆಗಳನ್ನು ನೋಡಲು ಮರೆಯದಿರಿ


3 comments:

  1. ಗೊತ್ತೇ ಇರಲಿಲ್ಲ ಇವೆಲ್ಲಾ! ಮಾಹಿತಿಗೆ ಧನ್ಯವಾದ.

    ReplyDelete
  2. ಹೊಸ ಸ್ಥಳಗಳ ಪರಿಚಯ ನೀಡುವ ಮಾಹಿತಿಗೆ ಧನ್ಯವಾದಗಳು

    ReplyDelete
  3. Bahala chennagide. Dhanyavadagalu. :)

    ReplyDelete