ಇದ್ದಕ್ಕಿದ್ದಂತೆ ಮಧ್ಯರಾತ್ರಿ ವಿಪರೀತ ಮಳೆಯಾದ್ರೆ ಏನಾಗುತ್ತೆ ಅಂದ್ರೆ ನಾವು ಯಾವ ಜಾಗದಲ್ಲಿದ್ದೀವಿ ಅನ್ನೋದ್ರ ಮೇಲೆ ಉತ್ತರ ಕೊಡಬಹುದು ಅನ್ನಿಸುತ್ತೆ. ಬೆಂಗಳೂರಲ್ಲಾದ್ರೆ ಅಪಾರ್ಟುಮೆಂಟುಗಳಲ್ಲೆಲ್ಲಾ ನೀರು ತುಂಬಬಹುದು ಅಂತಲೋ, ಮಲೆನಾಡಲ್ಲಾದ್ರೆ ಒಂದಿಷ್ಟು ಫಸಲು ಕೊಚ್ಚಬಹುದು ಅಂತಲೋ ಅನ್ನಬಹುದು. ಆದರೆ ಮೊಬೈಲ್ ಕ್ಯಾಮೆರಾ ಮಟಾಷ್ ಆಗುತ್ತೆ ಅಂತ ಕನಸಲ್ಲೂ ಅಂದುಕೊಂಡಿರಲಿಲ್ಲ !
ಕ್ಯಾಮರಾ ಮತ್ತು ನೀರು:
ಏನಾಯ್ತು ಅಂದ್ರಾ ? ಹಿಂದಿನ ದಿನ ರಾತ್ರಿಯ ಭಾರಿ ಮಳೆಗೆ ಬೇಸ್ಮೆಂಟಿನಲ್ಲಿದ್ದ ನಮ್ಮ ಅಪಾರ್ಟುಮೆಂಟಿಗೆ ನೀರು ನುಗ್ಗಿ ಮೊಬೈಲು, ಲ್ಯಾಪ್ತಾಪು, ಬೆಡ್ಡುಗಳೆಲ್ಲಾ ನೀರಲ್ಲಿ ತೇಲಾಡಿದ್ವು ! ನೀರು ಹೊರಗಾಕೋಕೆ ಎರಡೂವರೆ ಘಂಟೆ ಒದ್ದಾಡಿದ ಮೇಲೆ ಮಲಗೋಕೆ ಒಂದಿಷ್ಟು ಒಣ ನೆಲ ಸಿಕ್ಕಿತ್ತು ! ಬ್ಯಾಟರಿ ತೆಗೆದು ಅಕ್ಕಿಡಬ್ಬದೊಳಗಿಟ್ಟ ಮೊಬೈಲಿಗೆ ಮಾರನೇ ದಿನ ಜೀವ ಬಂತು. ಕಾಲ್ ಹೋಗ್ತಿದೆ, ವಾಟ್ಪಾಸ್ ಆನಾಗ್ತಿದೆ ಅಂದ ಮೇಲೆ ನನ್ನ ಖುಷಿಗೆ ಮೇರೆಯೇ ಇಲ್ಲ. ಆ ಮಧ್ಯಾಹ್ನವಷ್ತೇ ಕ್ಯಾಮೆರಾ ಯಾಕೋ ಆನಾಗ್ತಿಲ್ಲವಲ್ಲ ಅಂತ ಗಮನಿಸಿದ್ದು. ಕಂಪ್ಯೂಟರಲ್ಲೂ ಕೆಲವೊಮ್ಮೆ ಸ್ಪೀಕರ್ ಕೆಲಸ ಮಾಡದಿದ್ದಾಗ , ವೆಬ್ ಕ್ಯಾಮ್ ಕೆಲಸ ಮಾಡದಿದ್ದಾಗ ಅದನ್ನು ರೀಬೂಟ್ ಮಾಡಿದಾಗ ಸರಿಯಾಗುತ್ತಲ್ಲ ಅದೇ ತರಹ ಇಲ್ಲೂ ಪ್ರಯತ್ನ ಮಾಡಾಯ್ತು. ಪ್ರಯೋಜನವಿಲ್ಲ. ಮೊಬೈಲಿನ ಸೆಟ್ಟಿಂಗ್ಸಿಗೆ ಹೋಗಿ ಅಲ್ಲಿನ ಅಪ್ಲಿಕೇಶನ್ ಮ್ಯಾನೇಜುಮೆಂಟಿನಲ್ಲಿ ಕ್ಯಾಶೆ ಕ್ಲಿಯರ್ ಮಾಡಾಯ್ತು. ಊಹೂಂ. ಅದರಲ್ಲಿದ್ದ ಡಾಟಾ ಕೂಡ ಕ್ಲಿಯರ್ ಮಾಡಾಯ್ತು. ಊಹೂಂ. ಮೊಬೈಲು ಆಫ್ ಮಾಡಿ , ಬ್ಯಾಟರಿ ತೆಗೆದು ಒಂದೆರಡು ಘಂಟೆಯ ಬಿಟ್ಟು ಮತ್ತೆ ಹಾಕಾಯ್ತು. ಊಹೂಂ. ಮತ್ತದೇ 'unfortunately camera has stopped working' ಅನ್ನೋ ಸಂದೇಶ. ಲೆನೊವೋ ಮೊಬೈಲಾದ ಕಾರಣ ಲೆನೊವೋ ಸಹಾಯಕ್ಕೆ ಹೋಗಿ ಅದರಲ್ಲಿ self diagnostics ಗೆ ಹೋಗಿ ಅಲ್ಲಿದ್ದ ಎಲ್ಲ ಟೆಸ್ಟುಗಳನ್ನೂ ಮಾಡಾಯ್ತು. ಬ್ಲೂಟೂತ್, ವೈಫೈ ಎಲ್ಲಾ ಸ್ರಿಯಾಗೇ ಇದೆ. ಆದರೆ ಮೊಬೈಲಿನ ಮುಂದಿನ ಮತ್ತು ಹಿಂದಿನ ಕ್ಯಾಮೆರಗಳೆರಡಕ್ಕೂ ಇದು ಕೆಲಸ ಮಾಡುತ್ತಿಲ್ಲ ಅನ್ನೋ ಎರರ್ ಮೆಸೇಜ್. ಎರಡು ವರ್ಷವಾಗೋ ಹೊತ್ತಿಗೆ ಮೊಬೈಲು ಎಸೆಯೋ ಹಾಗಾಗಿರುತ್ತೆ ಅಂತಿರ್ತಾರೆ. ಆದರೆ ಚೆನ್ನಾಗೇ ಇಟ್ಟುಕೊಂಡಿದ್ದ ಮೊಬೈಲಿನ ಎರಡೂ ಕ್ಯಾಮೆರಾಗಳು ಇದ್ದಕ್ಕಿದ್ದಂತೆ ಬಂದಾದ್ರೆ ಏನನ್ನೋದು ? ಎಲ್ಲ ಕಡೆ ಇದ್ದಂತೆ ಕಾಂಟಾಕ್ಟುಗಳ ಬ್ಯಾಕಪ್ ತೆಗೆದುಕೊಂಡು ಫಾರ್ಮಾಟೂ ಮಾಡಾಯ್ತು. ಆದರೆ ಅದರಿಂದ ಕ್ಯಾಮರಾ ಸರಿಯಾಗಲಿಲ್ಲ. ಹೊಸ ಸಮಸ್ಯೆಗಳು ಶುರುವಾದ್ವು.
ಫಾರ್ಮಾಟು ಮತ್ತು ವಾಟ್ಸಾಪು:
ಫಾರ್ಮಾಟು ಮಾಡೋ ಮೊದಲು ಅಪ್ಲಿಪ್ಕೇಷನ್ನುಗಳ ಬ್ಯಾಕಪ್ ತೆಗೆದುಕೊಂಡಿದ್ರೂ ಹೊಸದಾಗಿ ಶುರುವಾಗೋ ಮೊಬೈಲಿನಲ್ಲಿ ವಾಟ್ಸಾಪು ಹೊಸದಾಗಿ ಇನ್ ಸ್ತಾಲ್ ಆಗುತ್ತೆ. ವಾಟ್ಸಾಪಿನ ಪಾಲಿಗೆ ಅದು ಹೊಸ ಮೊಬೈಲಿನಂತೆಯೇ. ಹಾಗಾಗಿ ಸಹಜವಾಗೇ ಅದು ವೆರಿಫಿಕೇಶನ್ನಿಗೆ ಪ್ರಯತ್ನಿಸುತ್ತೆ. ವೆರಿಫಿಕೇಶನ್ನಿನ ಸಂದೇಶ ಸ್ವೀಕರಿಸಲು ನನ್ನ ಭಾರತೀಯ ಸಂಖ್ಯೆ ರೀಚಬಲ್ ಆಗಿದ್ರೆ ತಾನೇ ! ಇಂತಿಪ್ಪ ವಾಟ್ಸಾಪು ಮತ್ತು ಅಲ್ಲಿ ನನ್ನ ಭಾರತೀಯ ಹೆಸರಿನ ಮೂಲಕ ನನ್ನ ಪರಿಚಯವಿದ್ದ ಎಲ್ಲರ ಸಂದೇಶಗಳಿಗೂ ಇತಿಶ್ರಿ ಹಾಡಿತ್ತು ಮೊಬೈಲ್ ಫಾರ್ಮಾಟು ! ಇನ್ನು ಮಾಡೋದಿನ್ನೇನು, ಇದ್ದ ಮೆಕ್ಸಿಕೋ ಸಂಖ್ಯೆಯ ಮೂಲಕ ಹೊಸದಾಗಿ ರಿಜಿಸ್ಟರ್ ಮಾಡಿ ಖಾಲಿ ವಾಟ್ಸಾಪಿನ ದುನಿಯಾಕ್ಕೆ ಪ್ರವೇಶಿಸಿದೆ.
ಕಳೆದೋದ ಕಾಂಟಾಕ್ಟುಗಳ ಹುಡುಕಿ:
ಕಾಂಟಾಕ್ಟುಗಳು ಕಾರ್ಡಿಗೆ ಎಕ್ಸ್ ಪೋರ್ಟೆಂತೂ ಆಗಿದ್ವು. ಆದರೆ ಇಂಪೋರ್ಟಿಗೆ ಹೋದರೆ ಅದು ವೀ ಕಾರ್ಡಿನ ರೂಪದಲ್ಲಿ ಬೇಕು ಅಂತಿದೆ. ಆದರೆ ಎಕ್ಸ್ ಪೋರ್ಟಾಗಿದ್ದು ಟೆಕ್ಸ್ಟ್ ಫಾರ್ಮಾಟಿನಲ್ಲಿ.ಅದನ್ನು ನಾನು ಓದಬಹುದಾಗಿತ್ತಾದರೂ ಮೊಬೈಲಿಗೆ ಗೊತ್ತಾಗುತ್ತಿಲ್ಲವೇ ? ಪ್ರತಿಯೊಂದನ್ನೂ ಓದಿ ಓದಿ ಹೊಸದಾಗಿ ಸೇವ್ ಮಾಡಬೇಕಾ ಶಿವನೇ ಅಂದುಕೊಳ್ಳುವ ಹೊತ್ತಿಗೆ ಗೂಗಲ್ ಕಾಂಟಾಕ್ಟಿನಲ್ಲಿಟ್ಟಿದ್ದ ಬ್ಯಾಕಪ್ ನೆನಪಾಯ್ತು. ಗೂಗಲ್ಲಿಗೆ ಹೋಗಿ ನೊಡಿದ್ರೆ ಬರೀ ೧೯೦ ಮಾತ್ರವೇ ತೋರಿಸ್ತಿದೆ. ಆ ೧೯೦ ಆಗಲೇ ಮೊಬೈಲಿಗೆ ಬಂದಾಗಿತ್ತು. ಇದ್ದ ೯೦೦ ಚಿಲ್ಲರೆ ಕಾಂಟಾಕ್ಟುಗಳಲ್ಲಿ ಉಳಿದಿದ್ದು ಎಲ್ಲೋಯ್ತಪ್ಪ ಅಂತ ತಲೆಬಿಸಿಯಾಯ್ತು. ಆಫೀಸಿನ ಸಹೋದ್ಯೋಗಿಗಳ ನಂಬರು ಇತ್ಯಾದಿ ಸದ್ಯಕ್ಕೆ ಸೇವ್ ಮಾಡಿಕೊಂಡ ಯಾವೊಂದೂ ಗೂಗಲಿನಲ್ಲಿರಲಿಲ್ಲ. ಅಂತೂ ಹುಡುಕುಡುಕಿ ಸೆಟ್ಟಿಂಗ್ಸಿಗೆ ಹೋಗಿ ಅಲ್ಲಿದ್ದ recover from sd card ಅನ್ನೋ ಆಯ್ಕೆ ಸಿಕ್ಕಿದ ಮೇಲೆ ಅಲ್ಲಿದ್ದ ಕಾಂಟ್ಯಾಕ್ಟಿನ ಬ್ಯಾಕಪ್ ಸಿಕ್ಕಿತು ! ಅಲ್ಲಿಂದ ರಿಕವರ್ ಕೊಟ್ಟ ಮೇಲೆ ಎಲ್ಲ ಕಾಂಟಾಕ್ಟುಗಳೂ ವಾಪಾಸ್ಸಾದ್ವು. ಅದರ ಮಧ್ಯೆ ಗೂಗಲ್ಲಿಂದ ಕಾಪಿ ಮಾಡೋಕೆ ಹೋಗಿ ಅದೇ ಕಾಂಟ್ಯಾಕ್ಟುಗಳು ಮೂರು ಮೂರು ಬಾರಿ ತೋರಿಸೋಕೆ ಶುರುವಾದ್ವು ! ಕಾಂಟಾಕ್ಟ್ಸು ಗಳಲ್ಲಿನ ಉನ್ನತ ಆಯ್ಕೆಗಳಿಗೆ ಹೋಗಿ merge contacts ಆಯ್ಕೆ ಮಾಡಿದ ಮೇಲೆ ಅವು ಮುಂಚೆಯಿದ್ದ ಸ್ಥಿತಿಗೆ ಬಂದವು. ನಂತರ ಮಾಡಿದ್ದ ಮೊದಲ ಕೆಲಸವೆಂದ್ರೆ ಅವೆಲ್ಲವನ್ನೂ ಗೂಗಲ್ ಕಾಂಟಾಕ್ಟಿಗೆಸೇರಿಸೋಕೆ ಪ್ರಯತ್ನಿಸಿದ್ದು. ಆದರೆ ಈಗಿನ ಗೂಗಲ್ ಕಾಂಟಾಕ್ಟಿಗೆ ಮೊಬೈಲಿಂದ ಸೇರಿಸೋಕೆ ಆಗೋಲ್ಲ. ಅದಕ್ಕೇಂತ ಹಳೆಯ ಆವೃತ್ತಿಗೆ ಹೋದರೆ ಅದು ಮೊಬೈಲಿದ್ದ ವಿಕಾರ್ಡ್ ಕೇಳಬೇಕೆ ? ಜೊತೆಗೆ ಮೊಬೈಲು ಮೆಕ್ಸಿಕೋದಲ್ಲಿದ್ದ ಕಾರಣ ಜೀಮೇಲಿನ ಭಾಷೆ ಇಂಗ್ಲೀಷಾಗಿ ಬದಲಾಗ್ತಿದ್ದಿದ್ದು ಬೇರೆ. ಕಾಂಟಾಕ್ಟಿಗೆ ಮತ್ತೆ ಮರಳಿ ಅದನ್ನು ವಿಕಾರ್ಡಾಗಿ ಎಕ್ಸ್ ಪೋರ್ಟ್ ಮಾಡಾಯ್ತು. ಜೀಮೇಲ್ ಕಾಂತಾಕ್ಟಿನ ಹಳೆಯ ಆವೃತ್ತಿಗೆ ಬಂದು ಅಲ್ಲಿ ಆ ವೀಕಾರ್ಡನ್ನು ಅಪ್ಲೋಡ್ ಮಾಡಿದರೆ ಮುಂಚೆಯಿದ್ದ ಕಾಂಟಾಕ್ಟುಗಳ ಜೊತೆ ಇವು ಡೂಪ್ಲಿಕೇಟಾದವು. ಅಲ್ಲಿದ್ದ ಸೇರಿಸುವ ಆಯ್ಕೆ ಉಪಯೋಗಿಸಿ ಕೊನೆಗೂ ಮೊಬೈಲಿನಲ್ಲಿದ್ದ ಎಲ್ಲಾ ಕಾಂಟಾಕ್ಟುಗಳನ್ನೂ ಗೂಗಲ್ಲಿಗೆ ಸೇರಿಸೋ ಹೊತ್ತಿಗೆ ಮಧ್ಯರಾತ್ರಿ ಹನ್ನೆರಡು ದಾಟಿತ್ತು.
ಸ್ಕೈಪ ಸಾಹಸ:
ಬೇರೆ ಎಲ್ಲಕ್ಕಿಂತ ಬೇಜಾರಾದ ವಿಷಯವಂದ್ರೆ ಅಮ್ಮನೊಂದಿಗೆ ಹೇಗೆ ಮಾತಾಡೋದು ಅಂತ. ದಿನಾ ಮಾತಾಡುತಿದ್ದ ವಾಟ್ಸಾಪಿನ ವೀಡಿಯೋ ಕಾಲ್ ಕೆಲಸ ಮಾಡುತ್ತಿಲ್ಲ. ಸ್ಕೈಪ್ ಬಳಸಿ ಲ್ಯಾಪ್ಟಾಪಿನ ಮೂಲಕ ಮಾತಾಡಬಹುದಾದರೂ ಊರಲ್ಲಿದ್ದ ಅಮ್ಮನ ಮೊಬೈಲಲ್ಲಿ ಅದನ್ನು ಹೇಗೆ ಇನ್ಸ್ಟಾಲ್ ಮಾದೋದು ಅಂತ . ಅಂತೂ ಅಮ್ಮನಿಗೆ ಕಾಲ್ ಮಾಡಿ ಗೂಗಲ್ಲಿಂದ ಆದನ್ನು ಡೌನ್ಲೋಡು ಮಾಡಿ ಇನ್ಟಾಲ್ ಮಾಡೋಕೆ ಹೇಳಾಯ್ತು. ಆದರೆ ಜಾಗವಿಲ್ವೆ. ವಾಟ್ಸಾಪಿನ ವೀಡಿಯೋ, ಫೋಟೋಗಳನ್ನು ಡಿಲಿಟ್ ಮಾಡಿಸಿದ್ರೂ ಜಾಗವಿಲ್ಲ. ಕೊನೆಗೆ ಸೆಟ್ಟಿಂಗ್-ಅಪ್ಲಿಕೇಷನ್ ಮ್ಯಾನೇಜ್ಮೆಂಟ್ ಗೆ ಹೋಗಿ ಅದರಲ್ಲಿದ್ದ ಕೆಲವು ಆಟಗಳನ್ನು ತೆಗೆದ ಮೇಲೆ ಜಾಗವಾಯ್ತು.ಅವರಿಗಾಗಿ ಒಂದು ಹೊಸ ಮೈಕ್ರೊಸಾಫ್ಟ್ ಖಾತೆ ತೆರೆದು ಅವರ ಮೊಬೈಲಿಗೆ ಬಂದ ವೆರಿಫಿಕೇಷನ್ ಕೋಡ್ ಕೇಳಿ ಅವರ ಮೊಬೈಲಲ್ಲಿದ್ದ ಸ್ಕೈಪೆಯಲ್ಲಿ ಅವರನ್ನು ಲಾಗಿನ್ ಮಾಡಿಸಿದ್ದೂ ಆಯ್ತು. ಇಷ್ಟೆಲ್ಲ ಕತೆಯಾಗಿ ಅವರಲ್ಲಿಂದ ಕಾಲ್ ಮಾಡೋಕೆ ಪ್ರಯತ್ನಿಸೋ ಹೊತ್ತಿಗೆ ನನ್ನ ಲ್ಯಾಪ್ಟಾಪಲ್ಲಿದ್ದ ಸ್ಪೀಕರ್ ಮಟ ಹತ್ತಬೇಕೆ ? ಮಳೆಯ ಹೊಡೆತಕ್ಕೆ ಇದ್ದ ಹೆಡ್ ಫೋನೂ ಮಟ :-( ಸರಿ ಅಂತ ಲ್ಯಾಪ್ಟಾಪ್ ರಿಬೂಟ್ ಮಾಡಿ ಸ್ಪೀಕರ್ ಸರಿಯಾಗಿಸೋ ಹೊತ್ತಿಗೆ ಭಾರತದಲ್ಲಿ ಮಧ್ಯರಾತ್ರಿ. ಅಂತೂ ಎರಡು ದಿನಗಳ ನಂತರ ಮಗನ ಮುಖ ಕಂಡಾಗ ಅವರಿಗದೆಷ್ಟೋ ಖುಷಿ. ಬೆಳಗ್ಗಿಂದ ಒದ್ದಾಡಿ ಕೊನೆಗೂ ಯಶಸ್ವಿಯಾಗಿದ್ದಕ್ಕೆ ನನಗೂ ಖುಷಿ.
ಫಾರ್ಮಾಟು ಮತ್ತು ಉಬರ್:
ಫಾರ್ಮಾಟಾದ ಮೇಲೂ ಕ್ಯಾಮೆರಾ ವರ್ಕಾಗಲಿಲ್ಲ ಅನ್ನೋದು ಬಿಟ್ಟರೆ ಬೇರೆಲ್ಲಾ ಅಪ್ಲಿಕೇಶನ್ನುಗಳು ಕೆಲಸ ಮಾಡುತ್ತಿದ್ದವು. ಹೊರಹೋದವ ಬರಬೇಕು ಅಂತ ಉಬರ್ ತೆರೆದರೆ ಅದೇ ಕೆಲಸ ಮಾಡುತ್ತಿಲ್ವೇ ? ಕ್ಯಾಮೆರಾಕ್ಕೆ ಬಂದ ಸಂದೇಶವೇ ಇಲ್ಲಿ ! ಕ್ಯಾಶೆ, ಡಾಟಾ ಕ್ಲಿಯರ್ ಮಾಡಿದ್ರೂ ಉಪಯೋಗವಾಗದಿದ್ದಾಗ ಅದನ್ನೂ ಅನ್ ಇನ್ತಾಲ್ ಮಾಡಿ ಮತ್ತೆ ಡೌನ್ಲೋಡ್ ಮಾಡಿದೆ. ಹೊಸದು ಓಪನ್ನೇನೋ ಆಯ್ತು. ಆದ್ರೆ ಮತ್ತೆ ವೆರಿಫಿಕೇಷನ್ ಸಾಹಸ ! ಈಮೇಲಿನ ಸಹಾಯದಿಂದ ಲಾಗಿನ್ ಆಗೋಕೆ ಪ್ರಯತ್ನ ಪಟ್ಟು ಮೆಕ್ಸಿಕನ್ ಸಂಖ್ಯೆ ನೀಡಿದ್ರೂ ವೆರಿಫಿಕೇಷನ್ ಕೋಡ್ ಬರುತ್ತಿಲ್ಲ. ಅದನ್ನೇ ಉಪಯೋಗಿಸಿ ರಿಜಿಸ್ಟರ್ ಮಾಡೋಣ ಅಂದರೆ ಈ ಈಮೇಲ್ ಆಗಲೇ ನೋಂದಣಿಯಾಗಿದೆ ಅನ್ನೋ ಸಂದೇಶ. ಒಳ್ಳೆ ತಲೆನೋವಾಯ್ತಲ್ಲ ಗುರುವೇ ಅಂತ ಫೇಸ್ಬುಕ್ಕಿನ ಮೂಲಕ ಲಾಗಿನ್ ಆಗೋಕೆ ಪ್ರಯತ್ನ ಪಟ್ರೆ ನನ್ನ ಭಾರತೀಯ ನಂಬರಿನ ಮೂಲಕವೇ ಲಾಗಿನ್ ಆಯ್ತು ! ಅದೂ ಯಾವ ವೆರಿಫಿಕೇಷನ್ ಕೊಡ್ ಕೇಳದೇ ! ಇದ್ದ ಉಬರಿನ ಮೂಲಕವೇ ಬೇರೆ ದೇಶಕ್ಕೆ ಹೋದಾಗ ಅಲ್ಲಿನ ಸಂಖ್ಯೆಗೆ ಬದಲಾಯಿಸೋಕೆ ಹೋದ್ರೆ ಆ ದೇಶದ ನಂಬರಿಗೆ ಮಾತ್ರ ಬದಲಾಯಿಸಬಹುದು. ಬೇರೆ ದೇಶದ ಸಂಖ್ಯೆಗೆ ಬದಯಾಯಿಸಬೇಕಂದ್ರೆ ಒಂದು ವೆಬ್ ಸೈಟಿಗೆ ಹೋಗಬೇಕನ್ನೋ ಆಯ್ಕೆ ಬರುತ್ತೆ. ಅಲ್ಲಿಗೆ ಹೋಗಿ ಪ್ರಯತ್ನ ಪಟ್ರೂ ಆಗಿರಲಿಲ್ಲ ನನಗೆ. ಆದರೆ ಅನ್ ಇನ್ಸ್ಟಾಲ್ ಮಾಡಿ, ಹೊಸದಾಗಿ ಇನ್ ಸ್ಟಾಲ್ ಮಾಡಿದಾಗ ಆದ ಲಾಭವೆಂದರೆ ಇಲ್ಲಿನ ಸಂಖ್ಯೆಗೆ ಬದಲಾಯಿಸೋ ಅವಕಾಶ ಸಿಕ್ಕಿದ್ದು. ಸುಮ್ಮನೇ ನೊಡೋಣ ಅಂತ ಬದಲಾಯಿಸೋಕೆ ನೋಡಿದ್ರೆ ವೆರಿಫಿಕೇಷನ್ ಕೋಡ್ ಬರಬೇಕೆ ? ಮಳೆಯಿಂದ ಎಷ್ಟೆಲ್ಲಾ ಅದ್ವಾನವಾಗಿದ್ರೂ ಇದಾದ್ರೂ ಒಳ್ಳೆದಾಯ್ತಲ್ಲ ಅಂತಂದ್ಕೊಂಡು ಮನೆಗೆ ಬಂದೆ.
ಕೆಲವು ಗೆಳೆಯರಿಗೆ ಹೊಸ ಸಂಖ್ಯೆಯಿಂದ ಮೆಸೇಜ್ ಮಾಡಿ ಈ ತರ ಆಗಿದೆ ಅಂತ ಹೇಳಿದ್ಮೇಲೆ ಅವರ ಮೂಲಕ ಮುಂಚೆಯಿದ್ದ ಹಳೆಯ ವಾಟ್ಸಾಪ್ ಗುಂಪುಗಳಿಗೆ , ಅಮ್ಮನ ಮೂಲಕ ನೆಂಟರ ಗುಂಪುಗಳಿಗೆ ಮರಳಿ ಬಂದರೂ ಮುಂಚೆಯಿದ್ದ ವಾಟ್ಸಾಪಿನ ಕಳೆಯಿಲ್ಲ ಇದಕ್ಕೆ. ಉಪಯೋಗಿಸದೇ ಇದ್ದರೆ ೨೦೨೧ರ ವರೆಗೆ ವ್ಯಾಲಿಡಿಟಿ ಇದ್ದ ಸಿಮ್ಮನ್ನೂ ೩ ತಿಂಗಳಲ್ಲಿ ಡಿ ಆಕ್ಟಿವೇಟ್ ಮಾಡ್ತಾರೆ ಅನ್ನೋ ಹೊಸ ಹುಳ ತಲೆಯೊಳಗಿ ಬಿಟ್ಟಿದ್ದಾರೆ ಒಂದಿಷ್ಟು ಜನ. ಕ್ಯಾಮೆರಾ ಕೊನೆಗೂ ಸರಿಯಾಗುತ್ತಾ ಅಥವಾ ಅದಕ್ಕಾಗಿ ಹೊಸ ಮೊಬೈಲೇ ಕೊಳ್ಳಬೇಕಾ ಅಂತ ಮೊಬೈಲ್ ಸರ್ವೀಸ್ ಸೆಂಟರವರಿಂದಲೇ ಖಚಿತಪಡಿಸಿಕೊಳ್ಳೋ ಅಗತ್ಯವಿದೆ. ಎರಡು ದಿನವಾದರೂ ಒಣಗಲಿಟ್ಟ ಬೆಡ್ ಇನ್ನೂ ಆರದೇ ಇರೋ ಕಾರಣ ಹೊಸ ಬೆಡ್ ಕೊಳ್ಳೋ ಖರ್ಚೊಂದು ಕಾದಿದೆಯಾ ಗೊತ್ತಿಲ್ಲ. ಮಳೆಯ ಹೊಡೆತಕ್ಕೆ ಮನೆಯ ಹೊರಗಿದ್ದ ಹೀಟರಿನ ಇಗ್ನೈಟರಿಗೆ ನೀರು ನುಗ್ಗಿ ದಿನಾ ಬೆಳಗೆದ್ದರೆ ಸ್ನಾನಕ್ಕಾಗಿ ಕೊರೆಯೋ ತಣ್ಣೀರಲ್ಲಿ ಮಾಡಬೇಕಾದ ಐಸ್ವಾಟರ್ ಛಾಲೆಂಜಿಗೆ ಎಂದು ಮುಕ್ತಿಯೋ ಗೊತ್ತಿಲ್ಲ. ರಿಪೇರಿಯವನಿಗೆ ಹೇಳಿದರೂ ಅವರು ತಕ್ಷಣಕ್ಕೆ ಬರಬೇಕಲ್ಲ. ಎರಡು ದಿನವಾದರೂ ಒಣಗದ ಲ್ಯಾಪ್ಟಾಪ್ ಬ್ಯಾಗಿನ ಒಳಾಂಗಣಗಳ ಕಾಟ ಲ್ಯಾಪ್ಟಾಪಿಗೆ ಎಂದು ಬಿಡುಗಡೆಯೋ ಗೊತ್ತಿಲ್ಲ. ಏನೇ ಅಂದರೂ ಮೆಕ್ಸಿಕೋಕೆ ಬಂದು ಮೂರು ತಿಂಗಳಲ್ಲಿ ಕಾಡದಷ್ಟು ಸಮಸ್ಯೆಗಳನ್ನು ಮತ್ತು ಸಾಧ್ಯತೆಗಳನ್ನು ಒಟ್ಟಿಗೇ ತಂದಿಟ್ಟ ಶ್ರೇಯ ಇಲ್ಲಿನ ಮಳೆಗೆ ಅನ್ನೋ ಮಾತನ್ನಂತೂ ತಳ್ಳಿ ಹಾಕೋಕೆ ಸಾಧ್ಯವಿಲ್ಲ ಅನ್ನುತ್ತಾ ಸದ್ಯಕ್ಕೊಂದು ವಿರಾಮ.