Thursday, November 16, 2017

ಮೆಕ್ಸಿಕೋ ಮಳೆಗಾಲ

ನಾವು ಸಣ್ಣವರಿದ್ದ ದಿನಗಳಲ್ಲಿ ಮಳೆಗಾಲ ಬಂತಂದ್ರೆ ಕಂಬಳಿಕೊಪ್ಪೆ ತಯಾರಿಮಾಡೋ ಬಗ್ಗೆಯೋ, ಕೆಲಸಕ್ಕೆ ಹೋಗೋಕೆ ಪ್ಲಾಸ್ಟಿಕ್ ಕೊಪ್ಪೆ ಮಾಡೋ ಬಗ್ಗೆಯೋ, ಮಳೆಗಾಲಕ್ಕಾಗುವಷ್ಟು ಹಪ್ಪಳ-ಸಂಡಿಗೆ ಮಾಡೋ ಬಗ್ಗೆಯೋ ಮಾತುಕತೆ ನಡೆಯುತ್ತಿತ್ತು. ಶಾಲಾ ಕಾಲೇಜಿಗೆ ಹೋಗೋ ಸಮಯದಲ್ಲಿ ರೈನ್ ಕೋಟು, ಛತ್ರಿ ಖರೀದಿಯ ಬಗ್ಗೆಯೋ, ಸೈಕಲ್ಲಿಗೆ ಓವರಾಲ್ ಮಾಡಿಸೋ ಬಗ್ಗೆಯೋ ಚರ್ಚೆ ನಡೆಯುತ್ತಿತ್ತು. ಬೆಂಗಳೂರಿಗೆ ಬಂದ ದಿನಗಳಲ್ಲಿ ಇವತ್ತು ಮಳೆ ಬರತ್ತಾ ಇಲ್ಲವಾ, ಯದ್ವಾ ತದ್ವಾ ಮಳೆಯಾಗಿ ರಸ್ತೆಗಳೆಲ್ಲಾ ಮುಳುಗಡೆಯಾಗಿ ಆಫೀಸಿಗೇನಾದ್ರೂ ರಜೆ ಸಿಕ್ಕಬಹುದಾ ಅಂತಲೋ, ಆಫೀಸಿಗೋಕೋಕೆ ಆಗದೇ ಇದ್ದರೂ ಕರೆಂಟಿಲ್ಲದಿದ್ದರೂ ವರ್ಕ್ ಫ್ರಂ ಹೋಮ್ ಮಾಡಿ ಅಂತೇನಾದ್ರೂ ಕಾಲ್ ಬರಬಹುದಾ ಅನ್ನೋ ಆಲೋಚನಾ ಲಹರಿಗಳಿರುತ್ತಿದ್ದವು. ಆದರೆ ಮೆಕ್ಸಿಕೋಕೆ ಬಂದ ಮೇಲೆ ಮಳೆಗಾಲ ಅಂದ್ರೆ ಹೊಸ ಬೆಡ್, ಹೊಸ ಮೊಬೈಲ್ ತಗೊಳ್ಳೋ ಕಾಲ ಅನ್ನುವಂತಾಗೋಯ್ತು !. ಯಾಕೆ ಅಂದ್ರಾ ? ಅದೇ ಇವತ್ತಿನ ಲೇಖನದ ವಿಷಯ

೮.೫ ಮತ್ತು ೭.೧ ತೀವ್ರತೆಯ ಭೂಕಂಪಗಳು ಎರಡು ವಾರಗಳಲ್ಲಿ ಆಗಿ ಮೆಕ್ಸಿಕೋದಲ್ಲಿದ್ದವರ ಮತ್ತು ಅವರಿಗೆ ಸಂಬಂಧಪಟ್ಟಂತೆ ವಿಶ್ವದಾದ್ಯಂತ ಇದ್ದವರನ್ನ ನಡುಗಿಸಿದ್ದವು. ಮೆಕ್ಸೀಕೋ ದೇಶದಲ್ಲಿ ಭಾರತೀಯರು ಹೆಚ್ಚಿರುವ ಗ್ವಾದಲಹರ ಮತ್ತು ಮಾಂಟೆರರಿ ನಗರಗಳಿಗೆ ಏನೂ ಆಗದಿದ್ದರೂ, ಮೆಕ್ಸಿಕೋ ನಗರದಲ್ಲೇ ಇದ್ದ ಭಾರತೀಯರಿಗೆ ಹೆಚ್ಚೇನೂ ತೊಂದರೆಯಾಗದಿದ್ದರೂ ಭೂಕಂಪಗಳು ತಂದಿತ್ತ ಭಯ ಅಷ್ಟಿಷ್ಟಲ್ಲ. ಕಣ್ಣೆದುರೇ ಮಗುಚಿ ಬಿದ್ದ ಕಟ್ಟಡಗಳ ಕಂಡವರಿಗೆ ದಿನಗಟ್ಟಲೇ ನಿದ್ದೆಯಿಲ್ಲ. ಬೆಳಗಾಗೆದ್ದು ನ್ಯೂಸ್ ನೋಡಿದ ಅವರ ಭಾರತದಲ್ಲಿದ್ದ ಹೆತ್ತವರಿಗೆ ಮಕ್ಕಳಿಗೆ ಕಾಲ್ ಮಾಡೋವರಿಗೆ ಸಮಾಧಾನವಿಲ್ಲ. ಭಾರತಕ್ಕಿಂದ ಹದಿಮೂರೂವರೆ ಘಂಟೆ ಹಿಂದಿರುವ ಕಾರಣ ರಾತ್ರಿಯಿಡೀ ಭಾರತದಿಂದ ಬರುತ್ತಿದ್ದ ಕಾಲು, ಮೆಸೇಜುಗಳಿಗೆ ಉತ್ತರಿಸುತ್ತಾ ಇಷ್ಟೆಲ್ಲಾ ಜನರಿಗೆ ನಮ್ಮ ಮೇಲಿರೋ ಕಾಳಜಿಗೆ ಖುಷಿ ಪಡೋದಾ ? ಅಥವಾ ಅದೇ ಉತ್ತರ ಎಲ್ಲರಿಗೂ ಹೇಳೇಳಿ ಬೇಜಾರು ಮಾಡ್ಕೊಳ್ಳೋದಾ ಗೊತ್ತಾಗುತ್ತಿರಲಿಲ್ಲ. ವಾರಗಟ್ಟಲೆ ಇಲ್ಲಿನ ವೃತ್ತಪತ್ರಿಕೆಗಳಲ್ಲಿ ಬಿದ್ದ ಕಟ್ಟಡಗಳ , ನೊಂದ ಜೀವಗಳ ಸುದ್ದಿಯೇ.  ಮೂರನೆಯ ವಾರ ನಾಲ್ಕರ ತೀವ್ರತೆಯ ಮತ್ತೊಂದು ಭೂಕಂಪವಾದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ಸಮಯವಿರಲಿಲ್ಲ. ಮೊದಲೆರಡರಿಂದ ಹಾನಿಗೊಳವಾದವರಿಗೆ ನೆರವಾಗಬೇಕಲ್ಲ. ಕೆಂಪೆನಿಗಳು, ಎನ್ಜಿವೋ ಗಳು ತಮ್ಮ ಉದ್ಯೋಗಿಗಳಿಂದ ಬಟ್ಟೆ, ಆಹಾರ, ದುಡ್ಡು.. ಹೀಗೆ ಕೈಲಾದದ್ದನ್ನು ಸಂಗ್ರಹಿಸಿ ಹಂಚೋ ಪ್ರಯತ್ನದಲ್ಲಿದ್ದಾಗ ನಮ್ಮಿಂದಲೂ ಆದಷ್ಟು ಸಹಾಯ ಮಾಡೋ ಭಾವ. ದೇವರ ದಯೆಯಿಂದ ನಮಗೇನೋ ಆಗಿಲ್ಲವಲ್ಲ ಅನ್ನೋ ನೆಮ್ಮದಿಯ ನಿಟ್ಟುಸಿರು ಕೂಡ. 

ಭೂಕಂಪಗಳು ಸಾಕಾಗಿಲ್ಲ ಅಂತ ಅವುಗಳ ಜೊತೆ ಚಂಡಮಾರುತ ಇರ್ಮ ದ ಕಾಟ ಬೇರೆ. ಮಾಂಟೆರರಿ ಮುಂತಾದ ನಗರಗಳಲ್ಲಿ ಚಂಡಮಾರುತ ನೇರವಾಗಿ ಕಾಡದಿದ್ದರೂ ಅದರ ಪರೋಕ್ಷ ಪರಿಣಾಮಗಳು ಕಾಡುತ್ತಿದ್ದವು. ಇದ್ದಕ್ಕಿದ್ದಂಗೆ ಶುರುವಾಗಿ ಧೋ ಎಂದು ಸುರಿಯೋ ಮಳೆ. ಸಾಯಂಕಾಲ ಶುರುವಾದ್ರೆ ರಾತ್ರೆಯವರೆಗೂ ಬಿಡುವಿಲ್ಲದೇ ಸುರಿಯೋ ಕುಂಭದ್ರೋಣ ಮಳೆ. ಸಂಜೆಯೆಲ್ಲ ಮೋಡ ಮುಸುಕಿದ ವಾತಾವರಣವಿದ್ದರೆ ಮಧ್ಯರಾತ್ರಿಯೆಲ್ಲೋ ಶುರುವಾಗೋ ಮಳೆಗೆ ಬೆಳಗಾಗೋ ಹೊತ್ತಿಗೆ ಕಂಡಲ್ಲೆಲ್ಲಾ ನೀರು. ಇಂತದ್ದೇ ಒಂದು ರಾತ್ರಿ ಸುರಿದ ಮಳೆಗೆ ಟ್ರಾನ್ಸ್ ಫಾರ್ಮರ್ ಉಡೀಸ್ ಆಗಿ ಆಫೀಸಿಗೆ ೪ ಪಟ್ಟು ಹೆಚ್ಚು ದುಡ್ಡು ಕೊಟ್ಟು ತಲುಪಿದ್ದ ನಮಗೆಲ್ಲಾ ಆಘಾತ.ದಿನಾ ಬರುವ ಮುಕ್ಕಾಲು ಕಿ.ಮೀ ಸುರಂಗದ ಲೈಟುಗಳೆಲ್ಲಾ ಬಂದಾಗಿ ಬೆಳಗ್ಗೆಯೂ ಘೋರ ಕತ್ತಲೆ. ಟ್ರಾಫಿಕ್ ಲೈಟುಗಳೆಲ್ಲಾ ಬಂದು, ನೀರು ನಿಂತ ರಸ್ತೆಗಳಲ್ಲಿ ದಿನಾ ಇರಬೇಕಾದ ಚೆಂದದ ಪೋಲೀಸವಳೂ ಇಲ್ಲ ! ಅಂತೂ ಆಫೀಸಿಗೆ ತಲುಪಿದ್ರೆ ಅಲ್ಲೂ ಕತ್ತಲ ಸಾಮ್ರಾಜ್ಯ. ಆಫೀಸಲ್ಲಿದ್ದ ಪವರ್ ಬ್ಯಾಕಪ್ಪೂ ಮಟಾಷ್ ಆಗಿ ಇಂಟರ್ನೆಟ್ಟಿದೆ. ಕರೆಂಟಿಲ್ಲ. ಲ್ಯಾಪ್ಟಾಪಲ್ಲಿ ಪವರಿರುವಷ್ಟು ಹೊತ್ತು ಕತ್ತಲಲ್ಲೇ ಕೆಲಸ ಮಾಡಿ ಮನೆಗೆ ಹೋಗಿ ಕನೆಕ್ಟ್ ಮಾಡಿ ಅನ್ನೋ ಆದೇಶ ಅಲ್ಲಿಯವರಿಂದ. ಅಂತೂ ಹೀಗೇ ಮುಕ್ಕಾಲು ಘಂಟೆ ಕಳೆಯುವಷ್ಟರಲ್ಲಿ ಟ್ರಾನ್ಸ್ ಫಾರ್ಮರ್ ಸರಿಯಾಗಿ ಕರೆಂಟ್ ಬಂತು ಅನ್ನುವಲ್ಲಿಗೆ ಅವತ್ತಿನ ವ್ಯಥೆ ಕೊನೆಯಾಗಿತ್ತು. 
 

ಮಳೆಗಾಲದ ಆಟಗಳು ಅಲ್ಲಿಗೇ ಮುಗಿಯಲಿಲ್ಲ. ಆ ದಿನ ರಾತ್ರಿಯೇ ನಾವೆಲ್ಲಾ ಮಲಗಿರುವಾಗ ಶುರುವಾದ ಭಯಂಕರ ಮಳೆಗೆ ಬೇಸ್ಮೆಂಟಿನಲ್ಲಿದ್ದ ನಮ್ಮ ಅಪಾರ್ಟ್ ಮೆಂಟಿಗೆ ನೀರು ನುಗ್ಗಿತ್ತು. ಮುರು ಅಂತಸ್ತುಗಳ ನಮ್ಮ ಕಟ್ಟಡದಲ್ಲಿ ಬಿದ್ದ ಮಳೆ ನೀರೆಲ್ಲಾ ನಮ್ಮ ರೂಮಿನ ಪಕ್ಕದಲ್ಲೇ ಕೆಳಕ್ಕೆ ಬಂದು ಹೊರ ಹೋಗೋ ವ್ಯವಸ್ಥೆ. ಮೇಲಿನವರು ಎಸೆದ ತೋರ್ತಿಲ್ಲ(ರೊಟ್ಟಿಯಂತಹ ತಿಂಡಿ) ಮುಂತಾದ ಖಾಲಿ ಕವರುಗಳಿಂದ ನೀರು ಹೊರಹೋಗೋ ಜಾಗ ಬ್ಲಾಕಾಗಿ ನೀರಿಗೆ ಹೊರಹೋಗೋಕೆ ಕಷ್ಟವಾಗಿತ್ತು ಅಂತ ಹಿಂದಿನ ದಿನಗಳ ಮಳೆಯಿಂದ ನಮಗೆ ಅಂದಾಜಾಗಿರಲಿಲ್ಲ. ಬಿದ್ದ ಭಾರೀ ಮಳೆಗೆ ನೀರು ಹೊರಹೋಗೋಕೆ ಜಾಗವಿಲ್ಲದೆ ನಮ್ಮ ರೂಮಿಂದ ಆ ಪ್ಯಾಸೇಜಿಗೆ ಹೋಗೋ ಜಾಗವೆಲ್ಲ ಬಂದಾಗಿ ಅಲ್ಲಿದ್ದ ಬಾಗಿಲಿನ ಮೂಲಕ ಮನೆಗೆ ನೀರು ನುಗ್ಗಿತ್ತು. ಹತ್ತಿರದಲ್ಲಿದ್ದ ಅಡಿಗೆ ಮನೆ, ಹಾಲುಗಳನ್ನೆಲ್ಲಾ ಆವರಿಸಿದ ನೀರು ನಂತರದ ಬಚ್ಚಲುಗಳನ್ನೂ ದಾಟಿ ಮುಂದಿದ್ದ ನನ್ನ ರೂಮಿಗೆ ಬಂದರೂ ನನಗೆ ಎಚ್ಚರವಿಲ್ಲ. ಪಕ್ಕದೆರೆಡು ರೂಂ ಮೇಟುಗಳ ಕಾಟಿನ ಮೇಲೆ ಬೆಡ್ಡಿದ್ದರಿಂದ ಅವರಿಗೆ ಅಷ್ಟೇನೂ ತೊಂದರೆಯಾಗದಿದ್ದರೂ ಅವರು ಎಚ್ಚರವಾಗಿ ನೀರು ಹೊರಚೆಲ್ಲೋ ಕೆಲಸದಲ್ಲಿ ತೊಡಗಿದ್ದರು. ಹೊಸದಾಗಿ ಬಂದವನಾದ ನಾನು ಕಾಟಿಲ್ಲದೇ ನೆಲದ ಮೇಲೆ ಬೆಡ್ ಹಾಕಿದ್ದೆ. ಮಲಗಿದ್ದವನಿಗೆ ಕಾಲ್ಯಾಕೋ ತೇವವಾದಂತಿದೆಯಲ್ಲ ಅನಿಸಿ ಎದ್ದು ನೋಡಿದರೆ ಸುತ್ತೆಲ್ಲಾ ನೀರು ! ತೆಪ್ಪದಲ್ಲಿ ಕೂತವನಿಗೆ ಕಾಣುವಂತೆ ಸುತ್ತೆಲ್ಲಾ ನೀರು ! ಪಕ್ಕ ನೋಡಿದ್ರೆ ಚಾರ್ಜಿಗಿಟ್ಟಿದ್ದ ಮೊಬೈಲು ನೀರಲ್ಲಿ ತೇಲಾಡುತ್ತಿತ್ತು. ಲ್ಯಾಪ್ಟಾಪಿನ ಬ್ಯಾಗೂ ನೀರಲ್ಲಿ ಒದ್ದೆಯಾಗಿದೆ. ಎದ್ದೆನೋ ಬಿದ್ದೆನೋ ಅಂತ ಮೊಬೈಲನ್ನು ಚಾರ್ಜಿಂಗಿದ ತೆಗೆದೆ. ಲ್ಯಾಪ್ಟಾಪನ್ನು ಬ್ಯಾಗಿಂದ ತೆಗೆದು ಆದಷ್ಟು ನೀರೊರೆಸಿ ಮೇಲಿಟ್ಟೆ. ಆಫೀಸಿನ ಲ್ಯಾಪ್ಟಾಪು ಮಟ ಹತ್ತಿದರೆ ಎಷ್ಟು ದಂಡ ಕಟ್ಬೇಕಾಗತ್ತಪ್ಪ ಅನ್ನೋ ಭಯ. ಅದನ್ನು ಸದ್ಯಕ್ಕೆ ಅತ್ತಲಿರಿಸಿ ಮೊಬೈಲಿನ ಬ್ಯಾಟರಿ ತೆಗೆದು ಅಕ್ಕಿ ಡಬ್ಬದೊಳಗಿಟ್ಟೆ. ಮಧ್ಯರಾತ್ರಿ ಒಂದೂವರೆಯಾಗಿದೆ. ರೂಮಲ್ಲೆಲ್ಲಾ ನೀರು. ರೂಮಲ್ಲೇನು, ಎಲ್ಲೆಡೆ ನೀರು. ರೂಂ ಮೇಟು ಅವನ ರೈನ್ ಕೋಟ್ ಹೊರತೆಗೆದು ಹೊರಗಡೆಯಿದ್ದ ಮಳೆನೀರು ಹೋಗೊಕೆ ಇದ್ದ ಬ್ಲಾಕ್ ಸರಿ ಮಾಡಿ ಬರೋ ಹೊತ್ತಿಗೆ ನಾನು ಮತ್ತು ಮತ್ತೊಬ್ಬ ರೂಂ ಮೇಟು ನೀರು ಹೊರಹಾಕೋ ಪ್ರಯತ್ನದಲ್ಲಿದ್ದೆವು. ಸ್ವೀಪರ್ ಇಲ್ಲದ ಕಾರಣ ನೀರನ್ನು ಮಗೆದು ಹೊರಹಾಕೋದು ಕಷ್ಟದ ವಿಷಯವೇ. ಮೊಪ್ ಇಂದ ಎಷ್ಟೂಂತ ಗುಡಿಸೋದು ಅಥವಾ ಕಾಲುಗಳಿಂದ ಎಷ್ಟೂಂತ ತಳ್ಳೋದು ? ಆಗ ಹೊಳೆದ ಐಡಿಯಾವೇ ಬೆಡ್ ಶೀಟು !


ಬೆಡ್ ಶೀಟನ್ನೇ ನೀರಲ್ಲಿ ಉದ್ದ ಹಾಸೋದು. ಅದು ಹೀರಿಕೊಳ್ಳೋ ನೀರ ಜೊತೆಗೆ ಅದನ್ನು ಹೊರಗೆಳೆದು ಹಿಂಡೋದು ಅನ್ನೋ ಐಡಿಯಾ ವರ್ಕಾಯ್ತು. ಎರಡೂ ಕಾಲವರೆಗೂ ಎಳೆದೆಳೆದು ಕೈಗಳೆಲ್ಲಾ ನೋವ ತೊಡಗಿ ಉಳಿದೆರೆಡು ರೂಂ ಮೇಟುಗಳು ನಾವು ಸ್ವಲ್ಪ ಹೊತ್ತು ಮಲಗ್ತೀವಿ ಅಂತ ಹೊರಟ್ರು. ಮತ್ತೆ ನೀರು ನುಗ್ಗಿದ್ರೆ ಗೊತ್ತಾಗ್ಲಿ ಅಂತ ಹಾಲ ಮತ್ತು ಅಡಿಗೆ ಮನೆಯ ಲೈಟುಗಳ ಹಾಗೇ ಇಟ್ಟೆವು. ಅವರ ಮಂಚಗಳೇನೂ ಆಗಿರಲಿಲ್ಲ. ಆದ್ರೆ ನನ್ನ ಬೆಡ್ ಪೂರ್ತಿ ನೀರು ಮಯ. ನಾ ಮಲಗೋದೆಲ್ಲಿ ? ನೀವು ಮಲ್ಕೊಳ್ಳಿ ನಾನು ಉಳಿದ ನೀರ ಸಾಧ್ಯವಾದಷ್ಟು ತಳ್ತೀನಿ ಅಂತ ನೋಯುತ್ತಿದ್ದ ಕೈಗಳಲ್ಲಿ ನಾ ಎರಡನೆಯ ಇನ್ನಿಂಗ್ಸಿಗೆ ಮುಂದಾದೆ. ಬರೀ ಮಳೆ ನೀರಾಗಿದ್ರೆ ಬೇಜಾರಾಗ್ತಿರಲಿಲ್ಲ. ಅದು ಕಾಲೊರೆಸೋ ಮ್ಯಾಟಿನ ಮಣ್ಣು, ಬಾತ್ರೂಮಿನ ಹೊರಗಿದ್ದ ಕಸ ಎಲ್ಲವನ್ನೂ ತಂದು ಎಲ್ಲೆಡೆ ಹರಡಿತ್ತು. ಬೆಡ್ಡನ್ನು ಗೋಡೆಗೆ ಸಾಚಿದ್ರೆ ಅದರೊಳಗಿಂದ ಮಳೆಗಾಲದಲ್ಲಿ ಗುಡ್ಡದಿಂದ ಜಿಮುರುವಂತೆ ನೀರು ಜಿಮುರುತ್ತಿತ್ತು. ಅದರ ಕೆಳಗೆ ಒರಸಿ ರೂಮಿನ ಒಂದು ಮೂಲೆ ಉರಸುವಷ್ಟರಲ್ಲಿ ಬೆಡ್ಡಿಂದ ಮತ್ತಷ್ಟೆ ನೀರು ! ಅಂತೂ ಇಂತೂ ರೂಂ ಕ್ಲೀನ್ ಮಾಡಿ ಹೊರಗಡೆಯಿದ್ದ ನೀರು ಮುಕ್ಕಾಲು ಭಾಗ ಖಾಲಿ ಮಾಡಿ ಹೊರಗಡೆಯಿದ್ದ ಏಸಿಯ ಫ್ಯಾನನ್ನು ಹಾಕುವಷ್ಟರಲ್ಲಿ ಮುಖದಲ್ಲೆಲ್ಲಾ ಬೆವರ ಧಾರೆ ! ಘಂಟೆ ಎರಡೂಮುಕ್ಕಾಲಾಗುತ್ತಾ ಬಂದಿತ್ತು. ಮತ್ತೊಮ್ಮೆ ಹೊರಗೋಗಿ ಮತ್ತೆ ಬ್ಲಾಕಾಗೋಕೆ ರೆಡಿಯಾಗಿದ್ದ ನೀರು ಹೊರಹೋಗೋ ದಾರಿಯನ್ನು ಸರಿ ಮಾಡಿ ಅಲ್ಲಿದ್ದ ಕಸವೆಲ್ಲಾ ಹೊರಹೋಗಿ ನೀರು ಸಾಮಾನ್ಯವಾಗಿ ಹೋಗ್ತಿದೆ ಅಂತ ಖಾತ್ರಿಪಡಿಸಿಕೊಂಡೇ ಒಳಬಂದೆ. 

ಘಂಟೆ ಮೂರಾಗ್ತಾ ಬಂದಿದೆ. ಆದ್ರೇನು. ಬೆಳಗ್ಗೆ ಆಫೀಸಿಗೆ ಏಳಲೇಬೇಕು. ಏಳೋದಾದ್ರೂ ಹೇಗೆ ? ಅಲಾರಾಮಿಡಲು ಮೊಬೈಲು ಬ್ಯಾಟರಿಯಿಲ್ಲದೆ ಅಕ್ಕಿಡಬ್ಬದಲ್ಲಿ ಮಲಗಿದೆ. ಇನ್ನೊಂದು ಮೊಬೈಲು ನೋಡೋಣ ಅಂದರೆ ಅದರಲ್ಲಿ ಚಾರ್ಜೇ ಇಲ್ಲದೆ ಅದು ಆನೂ ಆಗುತ್ತಿಲ್ಲ. ಅದರ ಚಾರ್ಜರ್ ಹುಡುಕಿ ಅದನ್ನು ಚಾರ್ಜಿಗೆ ಹಾಕಿ ಹದಿನೈದು ನಿಮಿಷ ಕಷ್ಟಪಟ್ಟು ನಿದ್ರೆ ತಡೆದುಕೊಳ್ಳೋ ಹೊತ್ತಿಗೆ ಅದಕ್ಕೆ ಸ್ವಲ್ಪ ಜೀವ ಬಂತು. ಅದರಲ್ಲಿ ಬೆಳಗ್ಗಿಗೆ ಅಲಾರಾಮಿಟ್ಟು ಒದ್ದೆಯಾಗದೇ ಇದ್ದ ಒಂದು ಜೊತೆ ಬೆಡ್ ಶೀಟುಗಳನ್ನೇ ಹಾಸಿಕೊಂಡು ಮಲಗಿಬಿಟ್ಟೆ. ಹಾಸಿಗೆಯ ಮೇಲೆ ಮಲಗಿದ್ದವರಿಗೆ ಖಾಲಿ ಬೆಡ್ ಶೀಟಿನ ಮೇಲೆ ನಿದ್ದೆಯಾದ್ರೂ ಹೇಗೆ ಬರಬೇಕು ?   ಮಾರನೆಯ ದಿನ ನನಗೆ ಕಾದಿರಬಹುದಾದ ಇನ್ನಷ್ಟು ಆಘಾತಗಳ ಅರಿವಿಲ್ಲದಿದ್ದರಿಂದ ಆ ರಾತ್ರಿಯ ಸುಸ್ತಿನಿಂದ ಮಲಗಿದಲ್ಲೇ ನಿದ್ದೆ ಹತ್ತಿತ್ತು

No comments:

Post a Comment