ಬೆಟ್ಟದ ಪ್ರವೇಶ ದ್ವಾರ:
Entrance to Ramadevara betta |
Steps on the way to Sri Ramadevara betta |
One of the Hanuman statues in Ramadevara betta |
ಅದರೆದುರೇ ಇನ್ನೊಂದು ಗುಡಿಯಿದ್ದ ಲಕ್ಷಣವಿದ್ದರೂ ಹೆಚ್ಚಿನ ದಿನಗಳಲ್ಲಿ ಕಾಣಸಿಗೋದು ಬೀಗಮುದ್ರೆಯೇ. ಅಲ್ಲಿಂದ ಹಾಗೇ ಮುಂದೆ ಸಾಗಿದರೆ ಬೆಟ್ಟದ ಮಧ್ಯಕ್ಕೆ ಬರುತ್ತೇವೆ.
We infront of Sri Ramadevara betta |
ಇಲ್ಲಿರೋ ರಾಮೇಶ್ವರ ದೇವರಿಂದಲೇ ರಾಮನಗರಕ್ಕೆ ಆ ಹೆಸರು ಬಂತೆಂದು ಜನ ಹೇಳುತ್ತಾರೆ. ಆದರೆ ಇಲ್ಲಿನ ಜಾತ್ರೆ ಮತ್ತು ಉಳಿದ ದಿನಗಳಲ್ಲಿ ಇದರ ಬೀಗವನ್ನೇ ಕಾಣಬೇಕಾದೀತು. ಅದನ್ನು ದಾಟಿ ಹಾಗೇ ಮುಂದೆ ಹೋದರೆ ಒಂದು ವೀಕ್ಷಣಾ ಗೋಪುರ ಮತ್ತು ನೀರಿನ ತೊಟ್ಟಿಗಳನ್ನು ಕಾಣಬಹುದು. ಇಲ್ಲಿಂದ ಸುತ್ತಲ ಬೆಟ್ಟಗಳ ನೋಟ ವಿಹಂಗಮ.
View of Sri Pattabhirama temple and its lake from Rameshwara temple |
ಶ್ರೀರಾಮನಿದ್ದ ಮೇಲೆ ಹನುಮಾನ್ ಇಲ್ಲದಿದ್ದರೆ ಹೇಗೆ ? ಹಾಗೆಂದೇ ಇರೋದು ಇರೋದು ಇಲ್ಲಿನ ಜೈ ಹನುಮಾನ್ ಘಂಟೆ ಮಂಟಪ. ಒಳಗೆ ಘಂಟೆಯಿಲ್ಲದಿದ್ದರೂ ಅದರ ಆಕಾರದಿಂದ ಅದಕ್ಕೆ ಆ ಹೆಸರಿರಬಹುದೇನೋ. ಇಲ್ಲಿಂದ ಸುತ್ತಲ ನೋಟ ಸವಿಯೋಕೆ ಮತ್ತು ಹೆಚ್ಚು ಬಿಸಿಲು, ಮಳೆಗಳಿದ್ದಾಗ ರಕ್ಷಣೆ ಪಡೆಯೋಕೆ ಅನುಕೂಲವಾಗುತ್ತೆ.
Jai Hanuman Ghante Mantapa |
ರಾಮೇಶ್ವರ ದೇಗುಲದ ಎದುರಿಗೆ ಒಂದು ಭೋಜನಶಾಲೆಯಂತಹ ಕಟ್ಟಡವಿದೆ. ಇಲ್ಲಿನ ಜಾತ್ರೆ ಮುಂತಾದ ಸಂದರ್ಭಗಳಲ್ಲಿ ಇಲ್ಲಿ ಹೋಮಹವನಗಳನ್ನು ನಡೆಸಲು ಬಳಸುತ್ತಾರೇನೋ ಇದನ್ನು. ಅದರ ಹಿಂಭಾಗದಲ್ಲಿರುವುದೇ ಸಪ್ತರ್ಷಿಗಳ ಬೆಟ್ಟ. ಹೆಸರಿಗೆ ತಕ್ಕಂತೆಯೇ ಇದು ಏಳು ದೊಡ್ಡ ದೊಡ್ಡ ಬಂಡೆಗಳನ್ನು ಹೊಂದಿದೆ
View of Saptarshi Betta |
ಪಟ್ಟಾಭಿರಾಮ ದೇವಸ್ಥಾನ:
Sri Pattabhirama Temple |
ದೇವದರ್ಶನದ ಉದ್ದೇಶಕ್ಕೆ ಇಲ್ಲಿಗೆ ಬಂದಿದ್ದಾದರೆ ನೀವು ಭೇಟಿ ಕೊಡಬೇಕಾದ ಇಲ್ಲಿನ ದೇವಸ್ಥಾನ ಶ್ರೀ ಪಟ್ಟಾಭಿರಾಮ ದೇವಸ್ಥಾನ. ಕೋದಂಡರಾಮನಾಗಿಯೋ, ಸೀತಾರಾಮನಾಗಿಯೋ ಶ್ರೀರಾಮನನ್ನು ನೋಡಿರಬಹುದಾದ ನೀವು ವೆಂಕಟೇಶ್ವರ ಸ್ವಾಮಿಯಂತೆ ಮೂರು ನಾಮ ಹೊಂದಿದ ರಾಮನನ್ನು ನೋಡಿರೋ ಸಾಧ್ಯತೆ ಕಡಿಮೆ. ಹಾಗಾಗಿ ಒಂದು ಭಿನ್ನ ಅನುಭವವಿಲ್ಲಿ. ಚಾರಣದ ಉದ್ದೇಶಕ್ಕೇ ಬಂದಿದ್ದರೂ ಇಲ್ಲಿನ ಕೊಳ, ದೇಗುಲದ ಪರಿಸರ ಮತ್ತು ಅಲ್ಲಿನ ಪ್ರಶಾಂತತೆಯನ್ನು ಅನುಭವಿಸಲು ಈ ದೇಗುಲಕ್ಕೆ ಬರಬಹುದು. ೧೯೭೫ರಲ್ಲಿ ಈ ದೇಗುಲಕ್ಕೆ ಬಂದವರೊಬ್ಬರು ಅಂದಿನ "ಉದಯವಾಣಿ" ಯಲ್ಲಿ ಬರೆದ ಲೇಖನವನ್ನು ಕಟ್ಟು ಹಾಕಿಸಿಟ್ಟಿದ್ದಾರೆ ಈ ದೇಗುಲದಲ್ಲಿ. ಈ ಜಾಗ ಅಂದು ಹೇಗಿತ್ತು, ಈಗ ಹೇಗಿದೆ ಎಂದು ಚಿತ್ರಗಳೊಂದಿಗಿನ ಫ್ಲಾಷ್ ಬ್ಯಾಕ್ ಅನುಭವಗಳನ್ನು ನೋಡಲಾದರೂ ಈ ದೇಗುಲಕ್ಕೆ ಭೇಟಿ ಕೊಡಬಹುದು.
ಕೋಟೆಯ ಬಾಗಿಲು:
ಪಟ್ಟಾಭಿರಾಮ ದೇಗುಲದ ಬಲಭಾಗದಲ್ಲಿ(ನಮ್ಮ ಎಡಕ್ಕೆ) ಬೆಟ್ಟದ ಮೇಲಕ್ಕೆ ಹತ್ತೋ ದಾರಿ ಸಿಗುತ್ತೆ. ಅದರಲ್ಲಿ ಸ್ವಲ್ಪ ದೂರ ಹೋಗುವ ಹೊತ್ತಿಗೆ ಕೋಟೆಯ ಬಾಗಿಲು ಸಿಗುತ್ತೆ.
Walls of the Fort and way to enter it |
ಧನು ಕಂಬಿ:
ಸಿಗೋ ಮತ್ತೊಂದು ಆಂಜನೇಯನಿಗೆ ನಮಸ್ಕರಿಸಿ ಮುಂದೆ ಸಾಗಿದರೆ ಬೆಟ್ಟದ ಮೇಲ್ಗಡೆ ಹತ್ತೋ ಮೆಟ್ಟಿಲುಗಳು ಕಾಣುತ್ತೆ. ಕೆಲವೆಡೆ ತೀರಾ ಓರೆಯಾಗಿರೋ ಇವುಗಳನ್ನು ಹತ್ತುವಾಗ ನೆರವಾಗಲೆಂದು ಎರಡೂ ಬದಿಗಳಲ್ಲಿ ಕಂಬಿಗಳನ್ನು ಕಟ್ಟಿದ್ದಾರೆ. ಸಾಮಾನ್ಯವಾಗಿ ಹತ್ತುವಾಗ ಕಂಬಿಗಳು ಬೇಡದಿದ್ದರೂ ಹೆಚ್ಚಿನ ಗಾಳಿ ಮತ್ತು ಮಳೆಯಿದ್ದಾಗ ಕಂಬಿಗಳು ಬೇಕನಿಸುತ್ತೆ. ನಾವು ಕೆಳಗಿಳಿಯುವಾಗ ನಮ್ಮನ್ನೇ ಹಾರಿಸಿಕೊಂಡು ಹೋಗುವಂತ ಗಾಳಿ ಬೀಸುತ್ತಿತ್ತು. ಆಗ ನಮಗೊಂದಿಷ್ಟು ಧೈರ್ಯ ತುಂಬಿದ್ದು "ಧನು ಕಂಬಿ" ಎಂಬ ಹೆಸರಿನ ಈ ಕಂಬಿಗಳೇ.
Dhanu Kambi |
ರಾಮ ತೀರ್ಥ:
ಬೆಟ್ಟದ ಮೇಲೆ ಹತ್ತಿದರೆ ಹಿಂದೆ ಯಾವುದೋ ಮಂಟಪವೊಂದು ಇದ್ದಿರಬಹುದಾದ ಕುರುಹು ಕಾಣುತ್ತೆ.
Remains of some mantapa at the top of hill |
Me standing on the remaining walls of Fort |
ಅದನ್ನು ಬಿಟ್ಟು ಸುತ್ತಲೊಂದು ಪ್ರದಕ್ಷಿಣೆ ಹೊರಟರೆ ಗಮನ ಸೆಳೆಯೋದು ರಾಮತೀರ್ಥ. ಮೊದಲು ನೋಡಿದಾಗ ಇದು ಮಳೆನೀರು ನಿಂತಿರೋ ಗುಂಡಿ ಅಂತ ಅಂದುಕೊಂಡ್ವಿ. ಅದರ ಮತ್ತೊಂದು ಬದಿಗೆ ಹೋದಾಗ ಅದರಿಂದ ಹೊರಕ್ಕೆ ಹರಿಯುತ್ತಿರೋ ನೀರನ್ನು ಕಂಡಾಗಲೇ ಇಲ್ಲೊಂದು ಜಲಮೂಲವಿರೋ ಬಗ್ಗೆ ಕಂಡುಬಂದಿದ್ದು. ಅಷ್ಟು ದೊಡ್ಡ ಬೆಟ್ಟದ ಮೇಲೊಂದು ನೀರಿನ ಸೆಲೆಯಿರೋದು ಅಚ್ಚರಿಯೇ. ಅದರ ಸುತ್ತಲಿದ್ದ ಮತ್ತು ನಮ್ಮ ಕೈಗೆ ಸಿಕ್ಕ ಅಷ್ಟೂ ಪ್ಲಾಸ್ಟಿಕ್ಕನ್ನು ಎರಡು ಚೀಲಗಳಲ್ಲಿ ತುಂಬಿ ತಂದರೂ ತೀರ್ಥದ ಒಳಕ್ಕೂ ಕೆಲವು ಕಿಡಿಗೇಡಿಗಳು ಎಸೆದಿದ್ದ ಪ್ಲಾಸ್ಟಿಕ್ ಬಾಟಲಿಗಳನ್ನು ಸ್ವಚ್ಛ ಮಾಡಲಾಗದಿದ್ದಿದ್ದು ಬೇಸರ :-(
Sri Rama teertha |
ರಾಮ ತೀರ್ಥ ಮತ್ತು ಅದರ ಸುತ್ತಲಿನ ವಿಹಂಗಮ ಪ್ರಕೃತಿಯನ್ನು ನೋಡುತ್ತಾ ಕುಳಿತಿದ್ದ ನಮಗೆ ಎದ್ದು ಬರುವಾಗ ಅದರ ಪಕ್ಕದಲ್ಲೊಂದು ಪ್ಲಾಸ್ಟಿಕ್ ಕಂಡಿತು. ಇದನ್ನು ತೆಗೆದುಕೊಂಡು ಕೆಳಗೆ ಹಾಕೋಣ ಅಂತಂದುಕೊಂಡಾಗ ಮತ್ತೊಂದು. ಅದನ್ನು ಹೆಕ್ಕಿದಾಗ ಪೊದೆಯ ಬಳಿಯಲ್ಲಿ ಇನ್ನೊಂದು. ಕ್ರಶ್ ಮಾಡಿ ಬ್ಯಾಗಿನ ಎರಡೂ ಬದಿಗೆ ತುಂಬಿಸಿಕೊಂಡರೂ ಸಿಗುತ್ತಲೇ ಹೋದವು ಪ್ಲಾಸ್ಟಿಕ್ :-( ಸರಿ, ಎಲ್ಲರೂ ಎರಡೂ ಕೈಗಳಲ್ಲಿ ಎರಡೆರಡು ಹಿಡಿದು ಕೆಳಗೆ ಹೋಗೋದು ಅಂತಂದುಕೊಂಡು ಸ್ವಲ್ಪ ಮುಂದೆ ಹೋದಾಗ ಪ್ಲಾಸ್ಟಿಕ್ ಕವರ್ರೇ ಸಿಗಬೇಕೇ ? ಸರಿ ಅಂತ ಆ ಕವರಲ್ಲೇ ಅಲ್ಲಿ ಸಿಕ್ಕಿದ ಎಲ್ಲಾ ಪ್ಲಾಸ್ಟಿಕ್ ಬಾಟಲುಗಳನ್ನೂ ಕ್ರಷ್ ಮಾಡಿ ಮಾಡಿ ತುಂಬಿಸಿದೆವು. ಅಲ್ಲಿ ಸಿಕ್ಕ ಎರಡು ಕವರುಗಳಲ್ಲಿ ತುಂಬಿಸಿ ಕೆಳತಂದ ನಮಗೆ ಅಲ್ಲಿನ ಯಾವುದೋ ಸಿಮೆಂಟ್ ಕೆಲಸಕ್ಕೆ ಅಂತ ತಂದ ಚೀಲವೊಂದು ಸಿಕ್ಕಿತು. ಅದರಲ್ಲಿ ಪಟ್ಟಾಭಿರಾಮೆ ದೇಗುಲದ ಬಳಿ ಬಿಸಾಡಿದ್ದ ಪ್ಲಾಸ್ಟಿಕ್ ಬಾಟಲುಗಳನ್ನು ತುಂಬಿಸಿ ಕೆಳಗೆ ತೆಗೆದುಕೊಂಡು ಹೋದೆವು. ಪಟ್ಟಾಭಿರಾಮ ದೇಗುಲಕ್ಕೆ ಹತ್ತಲು ಶುರುವಾಗೋ ಮೆಟ್ಟಿಲುಗಳ ಶುರುವಲ್ಲಿ ಮತ್ತು ಮಧ್ಯದಲ್ಲಿ ಕಸ ಹಾಕಲೆಂದೇ ತೊಟ್ಟಿಗಳಿವೆ. ರಣಹದ್ದು ವಿಭಾಗದ ಗೇಟಿನೊಳಗೆ ಬರೋ ಮುಂಚೆಯೂ ಪ್ಲಾಸ್ಟಿಕ್ ಎಸೆಯಬೇಡಿ ಎಂಬ ಬೋರ್ಡಿದೆ. ಆದರೂ ಹೀಗೆ ಪರಿಸರ ಹಾಳು ಮಾಡೋ ಜನರಿಗೆ ಏನನ್ನಬೇಕೋ ಗೊತ್ತಿಲ್ಲ. ಕೇರಳದಂತೆ ಎಲ್ಲಾ ಬ್ಯಾಗು ತಪಾಸಣೆ ಮಾಡಿ ತಲಾ ನೂರು ರೂ ಇಸ್ಕೊಂಡು, ಬಾಟಲಿ ವಾಪಾಸ್ ತಂದರೆ ಮಾತ್ರ ನೂರು ರೂ ವಾಪಾಸ್ ಅಂತ ಮಾಡಿದರೆ ಮಾತ್ರ ಇದೆಲ್ಲಾ ಸರಿಯಾಗುತ್ತೋ ಅನಿಸಿಬಿಡುತ್ತೆ ಒಮ್ಮೊಮ್ಮೆ.
Our Group at the top of Ramadevara betta |
ರಣಹದ್ದುಗಳು ಕಾಣದ ಬೇಸರದಲ್ಲಿ, ಹೊಸ ಜಾಗವನ್ನು ನೋಡಿದ, ಅದನ್ನು ಶುದ್ದೀಕರಿಸಿದ ಖುಷಿಯಲ್ಲಿ ನಮ್ಮ ಪಯಣ ಮುಂದುವರೆಯಿತು..