Wednesday, October 12, 2011

ಉಸಿರಾಟದಿಂದ ವಿದ್ಯುತ್

ಉಫ್, ಉಫ್ ಅಂತ ಗುಂಡ ಊದುತಾ ಇದ್ದ.. ಏನೋ ಬರ್ತಡೇ ಬತ್ತಿ ಊದಕ್ಕೆ ಅಂತ ಈ ಮಕ್ಳಾಟದ ಕೊಳವೇಲಿ ಪ್ರಾಕ್ಟೀಸ್ ಮಾಡ್ತಿದೀಯ ಅಂತ ಅಲ್ಲಿಗೆ ಬಂದ ಟಾಂಗ್ ತಿಪ್ಪ ಅಲಿಯಾಸ್ ತಿಪ್ಪೇಶಿ. ಹೇ, ಊರಲ್ಲಿ ಅಮ್ಮ ಒಲೆಗೆ ಕೊಳವೇಲೆ ಊದೋದು ನೆನಪಾಯ್ತಾ ಮಾರ್ರೆ.. ಎಷ್ಟು ಪ್ರೀತಿ ಅಮ್ಮನ ಮೇಲೆ ಅಂತ ಬಂದ ಮಂಗಳೂರು ಮಂಜ ಅಲಿಯಾಸ್ ಮಂಜುನಾಥ. ಇಳಾ ಬಂದು ನೋಡ್ತಾಳೆ, ಗುಂಡನ ಬಾಯಲ್ಲಿ ಒಂದು ಪ್ಲಾಸ್ಟಿಕ್ ಕೊಳವೆ, ಸ್ಟ್ರಾ ಅರ್ಧಕ್ಕೆ ಕತ್ತರಿಸಿದಂಗೆ, ಅದರ ತುದಿಗೆ ಸಣ್ಣ ಪ್ಲಾಸ್ಟಿಕ್ ಬುಟ್ಟಿ. ಅದರ ಮೇಲೆ ಅಲ್ಲಲ್ಲ ಗಾಳೀಲಿ ಪ್ಲಾಸ್ಟಿಕ್ ಚೆಂಡು..ವಾ! ಬರ್ನೋಲಿ ನಿಯಮ ಅಂತ ಕೂಗಿದ್ಲು.. ಹಾಂ.. ಎಲ್ಲಿ ಗರ್ನಲ್?..ಅಂತ ತಿಪ್ಪ ಒಂದ್ರೌಂಡು ಕೂತಲ್ಲಿಂದ ಹಾರಿದ.. ಎಲ್ಲ ನಕ್ರು..ಓಯ್ ಗರ್ನಲ್ಲಲ್ಲ ಮಾರ್ರೆ.. ಅವ್ಳು ಹೇಳಿದ್ದು ಗಾಳೀಲಿ ತೇಲಾಡೋ ಬಗೆಗಿನ ಬರ್ನೋಲಿ ನಿಯಮದ ಬಗ್ಗೆ ಅಂದ ಮಂಜ..

 ಹೌದು.. ಉಸಿರಾಟದಿಂದ ವಿದ್ಯುತ್ತು ತಯಾರು ಮಾಡ್ಬೋದಂತೆ. ಅದ್ನ ಓದಿದ ಮ್ಯಾಲಿಂದ ನಂಗೆ ಇದ್ರ ಮ್ಯಾಲೆ ಸ್ಯಾನೆ ಪಿರುತಿ ಹುಟ್ಟೈತೆ ಅಂದ ಗುಂಡ.. ತನ್ನ ಪ್ಲಾಷ್ ಬ್ಯಾಕ್ ಆಟಿಕೆ ತೋರಿಸುತ್ತಾ..ಹೌದೆನ್ಲಾ? ಕೆಲವರ ಬಾಯಿಂದ ವಿಚಿತ್ರ ವಾಸ್ನೆ ಬರ್ತಾ ಇರ್ತೈತೆ. ಹತ್ರಕ್ಕೆ ಹೋದವ್ರು ದೂರ ಓಡೋಗಂಗೆ.. ನಾನೂ ಕಂಡಿವ್ನಿ ಅಂದ ತಿಪ್ಪ.. ಮಂಜಂಗೆ ಮೀನು ಸಂತೆ ದಿನ ಬೆಳಿಗ್ಗೆ ಬಸ್ಸಿಗೆ ಹೋಗಿದ್ದು ನೆನ್ಪಾತು. ಇಳಾಗೆ ಪಕ್ಕದ್ಮನೆ ಆಂಟಿಯ ಬೆಳ್ಳುಳ್ಳಿ ಎಫೆಕ್ಟು ನೆನ್ಪಾತು. ಆದ್ರೆ ಅದ್ರಿಂದ ಕರೆಂಟು ತಯಾರು ಮಾಡದು ಹೆಂಗೆ ಅಂತ ಮಾತ್ರ ಅವ್ರಿಗೆ ಹೊಳಿಲೇ ಇಲ್ಲ. ಕೊನೆಗೆ ಗುಂಡಂಗೇ ಕೇಳಿದ್ರು ಅದು ಹೆಂಗೆ ಅಂತ. ಇದು ನೋಡ್ರಾ ಅಮೇರಿಕದ ವಿನಕಂನ್ಸಿನ್ ವಿಶ್ವವಿದ್ಯಾಲಯದವ್ರು ಕಂಡು ಹಿಡ್ದಿದ್ದು ಅಂತ ತನ್ನತ್ರ ಇದ್ದ ಚಿತ್ರ ತೆಗ್ದು ತೋರ್ಸಿದ.

ಈ ಚಿತ್ರದಾಗೆ lung simulator ಅಂತ ಐತಲಾ.. ಅದು ನಮ್ಮ ಶ್ವಾಸಕೋಶದಂಗೆ ಕೆಲ್ಸ ಮಾಡ್ತೈತೆ. ನಾವು ಉಸ್ರು ತಗಂಡಾಗ, ಬಿಟ್ಟಾಗ ಇದ್ರ ತುದೀಗೈತಲ.. ಆ ಹಳ್ದೀದು.. ಅದು ಅಲುಗಾಡತ್ತೆ ಅನ್ನೋದ್ರಲ್ಲಿ.. ಶೇಖ್ ಅ ಬಾಬ ಬಬ ಶೇಖ್ ಅ ಬಾಬ ಬಬ ಸಯ್ಯಾ ಸಯ್ಯಾ.. ಅಂತ ತಿಪ್ಪ ಹಾಡಕ್ಕೆ ಶುರು ಹಚ್ಕಂಡ.. ಓಯ್ ಸೆಖೆ ಬಾಬ ಸುಮ್ನಿರ್ರಿ ಪ್ಲೀಸ್.. ಮುಂದೇಳಿ ಮಿ. ರೌಂಡ್ ಅಂದ್ಲು ಇಳಾ. ಅದನ್ನು polivinylidene flouride(pvdf) ಅನ್ನೋ ವಸ್ತು ಇಂದ ಮಾಡಿರ್ತಾರೆ ಅಂದ ಗುಂಡ. ಈಗ ನಮ್ಮ ಉಸಿರಾಟದ ವೇಗ ಎಷ್ಟು ಮಾರ್ರೆ? ಹತ್ತತ್ರ ಸೆಕೆಂಡಿಗೆ ೨ ಮೀಟರ್. ಆದರೆ ಅಷ್ಟರಿಂದ ವಿದ್ಯುತ್ ತಯಾರಿಸದು ಹೆಂಗೆ ಅಂದ ಮಂಜ.ಒಳ್ಳೆ ಪ್ರಶ್ನೆ ಮಂಜು. ಮುಂಚೆ ಇದೇ ದೊಡ್ಡ ಸಮಸ್ಯೆ ಆಗಿದ್ದು. ಆದರೆ ಇದು ಪ್ಲಾಸ್ಟೀಕ್ ತರದ್ದು .. ಮಿಲಿ ಮೀಟರನಷ್ಟು ಸೂಕ್ಷ್ಮದ್ದು.ಇದರಿಂದಾಗೇ ಕಂಪನಗಳನ್ನ ವಿದ್ಯುತ್ತಿಗೆ ಪರಿವರ್ತಿಸಿ ಕನಿಷ್ಟ ಮಿಲಿ ವ್ಯಾಟಿನಷ್ಟು ವಿದ್ಯುತ್, ಜಾಸ್ತಿ ವೇಗದ ಉಸಿರಾಟವಿದ್ದಾಗ ೬ ವ್ಯಾಟಿನವರೆಗೂ ವಿದ್ಯುತ್ ಉತ್ಪಾದನೆ ಆಗ್ತಾ ಇದೆ ಈಗ. ಅದನ್ನ ಇನ್ನೂ ಉತ್ತಮ ಪಡಿಸೋ ಪ್ರಯತ್ನ ನಡೀತಾ ಇದೆ . ಕೊಳವೆ ಗಾಳೀಲಿ ಚೆಂಡು ಹಾರ್ತಿದ್ದಿದ್ದು ನೋಡ್ಲಿಲ್ವಾ ಸ್ವಲ್ಪ ಮುಂಚೆ? ಅಂದ ಗುಂಡ.

ಆದ್ರೆ ಇದ್ನ ಮೂಗಿಗೆ ಕಟ್ಕೊಂಡು ನಡ್ಯೋದು ಅಸಹ್ಯ ಅನಿಸತ್ತಪ ನಂಗೆ ಅಂದ ತಿಪ್ಪ. ಕಿವಿ ಇಂದ ವೈರು ಇಳಿದು ಬರೋದು ಫ್ಯಾಷನ್ ಆಗತ್ತೆ ಅಂತ ಈಗ ೧೫ ವರ್ಶದ ಹಿಂದೆ ಯಾರಾದ್ರೂ ಕನ್ಸು ಕಂಡಿದ್ರಾ ತಿಪ್ಪಾ ಅಂದ್ಳು ಇಳಾ.ತಿಪ್ಪನ ಡೌಟೇನೋ ಸ್ವಲ್ಪ ಸರೀನೆ ಉಂಟು..ಎಲ್ಲಿ ಬಳಸ್ಬೋದು ಇದನ್ನ ಈಗ ಅಂದ ಮಂಜ. ಈಗ ವಿದೇಶದಲ್ಲೆಲ್ಲಾ ರೋಗಿಗಳ ದೇಹಸ್ತಿತಿ ಅಳೀತಾ ಇರ್ಲಿ, ಏನಾದ್ರೂ ಏರು ಪೇರು ಆದ್ರೆ ತಕ್ಷಣ ತಿಳಿಸ್ಲಿ ಅಂತ ವೈರ್ಲೆಸ್ ಮೂಲಕ ಸಂವಹಿಸೋ ಉಪಕರಣಗಳನ್ನ ಅಳವಡಿಸಿರ್ತಾರೆ ಗೊತ್ತಾ? ಹಾ ಓದಿದ್ದೆ. use of wireless technology for health moitoring ಅಂತ ಅಂತ ನೆನಪಿಸಿಕೊಂಡ್ಲು ಇಳಾ.. ಹಾ. ಅವುಗಳ ಶಕ್ತಿ ಹೇಗೆ ಬರುತ್ತೆ ಅಂದ..ಬೇರೆ ಕಡೆ ಹಾಕೋ ಅಂತ ಲೀಥಿಯಮ್ ಐಯಾನ್ ಬ್ಯಾಟ್ರಿ ಅಂತೂ ದೇಹದೊಳಗೆ/ಚರ್ಮದೊಳಗೆ ಇಟ್ಟಿರೋ ಈ ತರದ ಉಪಕರಣಗಳಿಗೆ ಹಾಕಕ್ಕಾಗಲ್ಲ ಅನ್ಸತ್ತೆ..ಪದೇ ಪದೇ ಅದು ಖಾಲಿ ಆದ್ರೆ ತೆಗ್ಯದು,ಹಾಕದು ದೊಡ್ಡ ರಗ್ಳೆ ಅಲ್ವಾ ಅಂದ ತಿಪ್ಪ.. ಕರೆಕ್ಟು ತಿಪ್ಪ. ಈಗ ಬಂದೆ ನೀ ಟ್ರ್ಯಾಕಿಗೆ. ತಾನಾಗೆ ಮರುಪೂರಣ ಆಗೋ ಅಂತದ್ದು ಹಾಕ್ಬೇಕು ಅಂದ್ರೆ ರಕ್ತದಲ್ಲಿನ ಸಕ್ಕರೆ ಅಂಶದಿಂದ ಶಕ್ತಿ ಪಡೆಯೋ ಜೈವಿಕ ಕೋಶಗಳನ್ನ ಬ್ಯಾಟರಿ ಆಗಿ ಉಪಯೋಗಿಸಬಹುದು ಅಂದ ಮಂಜ.ಅವಯವಗಳ ಚಲನೆಯಿಂದ ಶಕ್ತಿ ಪಡೆಯೋ piezoelectric ಕೋಶಗಳನ್ನು ಬಳಸಬಹುದು, ವೈರ್ಲೆಸ್ ಮೂಲ್ಕ ಶಕ್ತಿ ಕಳಿಸಬಹುದು ಅವಕ್ಕೆ ಅಂದ್ಲು ಇಳಾ.ಅಲ್ಲೇ ಇರದು ಸಮಸ್ಯೆ. ಇದೂ ಕೂಡ ಹಾಳಾಗೇ ಹಾಳಾಗತ್ತೆ.. ಅವಾಗ ಮತ್ತೆ ಮತ್ತೆ ತೆಗ್ಯದು ಹಾಕದು ಸಮಸ್ಯೆ ಅಲ್ವಾ ಅಂದ ತಿಪ್ಪ. ಈ ಕೋಶಗಳನ್ನು ದೇಹದ ಒಳಗಿಡೋ ಬದ್ಲು ಹೊರಗಡೆ ತಾನಾಗೆ ಮರುಪೂರಣ ಆಗೋ ತರ ಇಟ್ರೆ ಅಂದ ಗುಂಡ.. ಆಗ ಎಲ್ರಿಗೂ ಗುಂಡ ಏನು ಹೇಳಕ್ಕೆ ಹೊರಟಿದ್ದಾನೆ ಅಂತ ಪ್ಲಾಶ್ ಆಯ್ತು.. ಅದೇ.. ಇದು ಅಂದ್ರು ಎಲ್ಲಾ ಒಟ್ಟಿಗೆ
ಮೂಲ:
 Energy and environment science journal:http://pubs.rsc.org/en/Content/ArticleLanding/2011/EE/C1EE02241E

4 comments:

  1. ಪ್ರಶಸ್ತಿ ಒಳ್ಳೆ ಬರಹ..ಹಿಂಗೆ ಬರೀತಾ ಇರು.

    ReplyDelete
  2. olleya maahiti sir.. thanks for the good info

    ReplyDelete
  3. ಧನ್ಯವಾದಗಳು ಆದಿತ್ಯ, ಹರೀಶಣ್ಣ, ಕನ್ನಂತರೇ :-)

    ReplyDelete