Friday, October 28, 2011

ಯಾರಿವನು -೨


ಮಂದಹಾಸದ ಮೊಗದಿ ಒಲ್ಲೆನೆಂದನು ಬಾಲ
ಮುಂದೆ ಬರುವಾಘಾತ ನೋಡೆನೆಂದುಸುರಿ ಶಶಿ
ಮೋಡದಲಿ ಮರೆಯಾದ ಆ ಊರ ಜನರಂತೆ
ಮನೆಸೇರಿ ದನಕರು, ನಿರ್ಜನವು ರಸ್ತೆ
ಬೇಡಿದವು ಹೆಂಗರುಳು ಆ ದೇವಿಯತ್ತೆ|೪|

ಯಾರು ಬೇಡಿದರೇನು, ಹರಿವ ಕಣ್ಣೀರೇನು?
ಅದಕಿಹುದೆ ಭಾವನೆ? ಅರಿಯುವುದೆ ವೇದನೆ?
ಯಮನ ಗಾಂಭೀರ್ಯದಲಿ ಬಂದಿಹನು ವ್ಯಾಘ್ರ
ಎದುರು ಕುಳಿತಿಹ ನರನ ಬಲಿಗಯ್ಯೆ ಛಿದ್ರ|೫|

ಮತ್ತೊಮ್ಮೆ ಮುಗುಳುನಗೆ ಬೀರಿ ಆ ಎಳೆಯೋಗಿ
ಏನು ಮಗು ಬಂದೆಯಾ? ಕೂರಿಲ್ಲಿ ಅಂದಿಹನು
ಇಂದೇನು ಅಪವಾದ, ಕೂತಿತದು ಮಗುವಂತೆ
ತಾಯ ಮಡಿಲಲಿ ಮಲುಗೊ ಹಸುಗೂಸಿನಂತೆ
ನಿದ್ರಿಸಿತು ಅವನ ಜೊತೆ ಗೆಳೆಕಾರನಂತೆ|೬|

ಬೆಳಗಾಗಲೆದ್ದಿಹರು ಬಾಗಿಲನು ತೆರೆದಿಹರು
ಅಚ್ಚರಿಯ ನೋಡತಲೆ ಅಡ್ಡಡ್ಡ ಬಿದ್ದಿಹರು
ಒಕ್ಕೊರಲ ಕೋರಿಕೆ ಇಲ್ಲೆ ಇರು ಸ್ವಾಮಿ
ಇರಲಾರೆ ನಾನಿಲ್ಲಿ ಹೊರಟಿಹೆನು ಉತ್ತರಕೆ
ಎಂದು ನಡೆದನು ಚಿತ್ತ ನೆಟ್ಟಮರನಾಥಕ್ಕೆ|೭|


(ದೆಹಲಿಯ ಅಕ್ಷರಧಾಮ ದೇವಾಲಯದಲ್ಲಿ ಕಂಡ ಸ್ವಾಮಿ ಅಗ್ನಿ ನಾರಾಯಣರ ಬಗೆಗಿನ "ನೀಲಕಂಠ ಯಾತ್ರಾ" ಎಂಬ ಚಿತ್ರವೇ ಇದಕ್ಕೆ ಸ್ಪೂರ್ತಿ..
 ಬರೆಯುವುದಾದರೆ ಬಹಳುಂಟು
ಮಹಿಮರ ಚರಿತೆ, ಹಾಡದ ಕವಿತೆ
ಭವ್ಯಭಾರತದೇನಿದೆ ಕೊರತೆ..)

4 comments:

  1. ವರ್ಣನೆ ಬಲು ಸೊಗಸಾಗಿದೆ.... :)
    ಕೊನೆಯಲ್ಲಿ ಕೊಟ್ಟ ಮಾಹಿತಿ ನೋಡಿದ ಮೇಲೆ ಮತ್ತೊಮೆ ಇದನ್ನು ಓದಿದೆವು..
    ಸಂಪೂರ್ಣ ಅರ್ಥಗರ್ಭಿತವಾದ ಬರಹ...

    ReplyDelete
  2. ಧನ್ಯವಾದಗಳು ಪ್ರಶಾಂತರೇ :-)

    ReplyDelete
  3. ಪ್ರಶಸ್ತಿ, ಒಳ್ಳೆ ಕವನ! ಮತ್ತೆ ಈ ಬಗ್ಗೆ ನನ್ನ ಅಧ್ಯಯನ ಇಲ್ಲ !

    ಕೆಲವು ವ್ಯಾಕರಣ ಸಂಬಂಧಿತವಾದ ದೋಷಗಳನ್ನ ಸರಿಪಡಿಸಿಕೊಳ್ಳಬೇಕು. ಉದಾಹರಣೆಗೆ "ಚಿತ್ತಮರನಾಥಕ್ಕೆ "ಚಿತ್ತವಮರನಾಥಕ್ಕೆ" ಆಗಬೇಕು .

    ReplyDelete
  4. ತಿದ್ದಿದ್ದಕ್ಕೆ ಧನ್ಯವಾದಗಳು ಕಿರಣಣ್ಣ.. ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ :-)

    ReplyDelete