Tuesday, November 19, 2013

ರಿಟೈರಾದ ದೇವರು

"ದೇವರು ರಿಟೈರಾಗುತ್ತಿದ್ದಾನೆ"!!. ಕೆಲವರಿಗೆ ಈ ಶೀರ್ಷಿಕೆಯೇ ವಿಚಿತ್ರವೆನಿಸಿದರೆ ಉಳಿದವರಿಗೆ ನಾನಿಂದು ಯಾರ ಬಗ್ಗೆ ಹೇಳಹೊರಟಿರುವೆನೆಂದು ಹೊಳೆದಿರಬಹುದು. ಹಾಂ, ಹೌದು . ಹೇಳಹೊರಟಿರುವುದು ಇಂದಷ್ಟೇ ತನ್ನ ಕ್ರಿಕೆಟ್ ಜಗತ್ತಿನ ಎಲ್ಲಾ ಪ್ರಕಾರಗಳಿಂದ ಕ್ರಿಕೆಟ್ ಲೋಕದ ದಿಗ್ಗಜನ ಬಗ್ಗೆ. ದಾಖಲೆಗಳ ಮೇಲೆ ದಾಖಲೆಗಳ ಬರೆಯುತ್ತಾ ಹೋದ ಅವನೆಲ್ಲಾ ದಾಖಲೆಗಳು ಕ್ರಿಕೆಟ್ ಪ್ರಿಯರಿಗೆ ಎರಡರ ಮಗ್ಗಿಯಂತೆ ನೆನಪಲ್ಲಿದ್ದರೂ ದಾಖಲಾಗದ ಹಲವು ಸವಿನೆನಪುಗಳು ಅವನ ಆಟದ ಸುತ್ತ. ಕ್ರಿಕೆಟ್ ಜಗತ್ತಿನ ಬಂಗಾರದ ಮನುಷ್ಯ, ಹೆಸರಲ್ಲೇ ಚಿನ್ನ ಇಟ್ಟುಕೊಂಡಿರೋ ಸಚಿನ್ ಎಂದು ಯಾರಾದರೂ ಅಂದರೂ ಅದು ತೀರಾ ಉತ್ಪ್ರೇಕ್ಷೆಯಾಗಲಾರದೇನೋ. ಯಾಕೆಂದರೆ ಆಟದಲ್ಲಿ ಆತನ ತನ್ಮಯತೆ, ಆಟವೇ ತನ್ನ ಸರ್ವಸ್ವವೆಂದು ತನ್ನ ಕೊನೆಯ ಕ್ರಿಕೆಟ್ ದಿನಗಳವರೆಗೂ ತೊಡಗಿಸಿಕೊಂಡ ಆತನ ಪ್ರೀತಿ ಆತನ ವಿರೋಧಿಗಳನ್ನೂ ಸುಮ್ಮನಾಗಿಸುವಂತದ್ದು. ಯುವಪೀಳಿಗೆಗೆ ಮಾದರಿಯಾಗುವಂತದ್ದು. ಕ್ರಿಕೆಟ್ಟೆಂದರೆ ಸಚಿನ್ ಒಬ್ಬನೇ ಅಲ್ಲ , ಅವನಿಗಿಂತ ಪ್ರತಿಭಾವಂತರು ಹಲವರು ಬಂದು ಹೋಗಿದ್ದಾರೆ, ಆದರೆ ಯಾರಿಗೂ ಸಿಕ್ಕದ ಪ್ರಚಾರ ಸಿಕ್ಕಿದ್ದು ಸಚಿನ್ನಿಗೆ ಎಂದು ಸಚಿನ್ ದ್ವೇಷಿಗಳು ಇಂದಿಗೂ ಕುಹಕವಾಡುತ್ತಿರಬಹುದು.. ಹೌದು.  A ಇಂದ Z ತನಕ ಎಲ್ಲಾ ಅಕ್ಷರಗಳ ಆಟಗಾರರು ಬಂದು ಹೋಗಿರಬಹುದು. ಬ್ರಾಡ್ಮನ್, ಬುಚರ್, ಲಾರಾ,ಲಿಲಿ,  ಸೋಬರ್ಸ್, ರಿಚರ್ಡ್ಸ್, ಹೇಡನ್ನಿನಂತ ಹಲವು ದೈತ್ಯ ಪ್ರತಿಭೆಗಳು ಬಂದಿರಬಹುದು. ಭಾರತೀಯ ಕ್ರಿಕೆಟ್ಟಿನಲ್ಲೂ ಅಮರನಾಥ್, ಕಪಿಲ್ ದೇವ್, ಗವಾಸ್ಕರರಂತ ಪ್ರತಿಭಾ ಪರ್ವತಗಳಿರಬಹುದು. ನಮ್ಮ ಪೀಳಿಗೆಯವರೂ ಹಲವು ಪ್ರತಿಭಾವಂತ ಕ್ರಿಕೆಟಿಗರು ಇರಬಹುದು. ಇಲ್ಲವೆಂದಲ್ಲ. ಅವರ್ಯಾರ ಪ್ರತಿಭೆಗಳ ಬಗ್ಗೆ ದೂಸರಾ ಮಾತಿಲ್ಲ. ಆದರೆ ಇಂದಿನ ಗೌರವ ಪಡೆದಿದ್ದು ಸಚಿನ್ ಎಂದಷ್ಟೇ ನಾನು ಹೇಳಹೊರಟಿರೋದು..

ರಿಟೈರಾದ ಸಮಯದಲ್ಲಿ ಅವನ ಕೈಗೆ ರವಿ ಶಾಸ್ತ್ರಿ ಮೈಕ್ ಕೊಟ್ಟು.. Time is yours ಅಂದಾಗ ಸಚಿನ್ ಯಾರ ಬಗ್ಗೆ ಮಾತನಾಡಬಹುದೆಂಬ ಕುತೂಹಲ ಎಲ್ಲರಂತೆ ನನಗೂ ಇತ್ತು. ತಮ್ಮ ಬಾಲ್ಯದ ಗೆಳೆಯ ೬೦೦ ಚಿಲ್ರೆ ರನ್ನಿನ ದಾಖಲೆ ಬರೆದ ಕಾಂಬ್ಳಿಯ ಬಗ್ಗೆಯೋ, ದಾಖಲೆಗಳ ಜೊತೆಯಾಟವಾಡಿದ ಗಂಗೂಲಿಯ ಬಗ್ಗೆಯೋ ಹೇಳಬಹುದೇನೋ ಎಂದುಕೊಂಡಿದ್ದೆ. ಆದರೆ ಸಚಿನ್ ಮಾತು ಶುರುಮಾಡಿದ್ದು ಅಪ್ಪನ ಬಗ್ಗೆ. ಕನಸನ್ನ ಹಿಂಬಾಲಿಸು ಎಂದು ನನ್ನ ಹನ್ನೊಂದನೇ ವರ್ಷದಲ್ಲೇ ನನಗೆ ಪೂರ್ಣ ಸ್ವಾತಂತ್ರ ಕೊಟ್ಟ ಅಪ್ಪ ಎಂದು ಅಪ್ಪನ ಬಗ್ಗೆ ಹೇಳುತ್ತಿದ್ದರೆ ನಾನೊಮ್ಮೆ ಮೂಕನಾಗಿದ್ದೆ. ಅಪ್ಪ, ಅಮ್ಮ, ಬಾಲ್ಯದ ಗೆಳೆಯರು.. ಹೀಗೆ ತಮ್ಮ ದಾಖಲೆಗಳ ಬಗ್ಗೆ ಒಮ್ಮೆಯೂ ನೆನೆಯದ, ಆ ಬಗ್ಗೆ ತುಟಿ ಪಿಟಕ್ಕೆನ್ನದ ಸಚಿನ್ ನೆನೆಸಿಕೊಂಡಿದ್ದು ತಮ್ಮ ಬಾಲ್ಯದ ಕೋಚ್, ಮುಂಬೈ ಅಸೋಸಿಯೇಷನ್, ಬಿಸಿಸಿಐ, ತಮ್ಮೊಂದಿಗೆ ಪ್ರತೀ ಸಲವೂ ಕ್ರಿಕೆಟ್ಟಿನ ಬಗ್ಗೆಯೇ ಮಾತನಾಡೋ ಅಣ್ಣ, ತಮಗೆ ಮೊದಲ ಬ್ಯಾಟನ್ನು ಗಿಫ್ಟ್ ಕೊಟ್ಟ ಅಕ್ಕ, ಪತ್ನಿ, ಮಕ್ಕಳ ಬಗ್ಗೆ. ಹದಿನಾರು ವರ್ಷ ನಿಮ್ಮ ಶಾಲಾ ದಿನ, ಕ್ರೀಡಾ ದಿನ, ಹುಟ್ಟಿದ ದಿನ .. ಹೀಗೆ ನಿಮ್ಮೊಂದಿಗೆ ನಿಮ್ಮ ಮೆಚ್ಚಿನ ದಿನಗಳನ್ನು ಕಳೆಯಲಾಗಿಲ್ಲ. ಇನ್ನು ಮುಂದಿನ ದಿನಗಳನ್ನು ನಿಮ್ಮೊಂದಿಗೇ ಕಳೆಯುವೆನೆಂದು ಭಾಷೆಯಿತ್ತ ಆ ವಾಮನಮೂರ್ತಿ ನಿಜವಾಗೂ ದೊಡ್ಡವನಾಗಿ ಕಾಣುತ್ತಾನೆ. ತಂಡದ ಫಿಸಿಯೋ, ಡಾಕ್ಟರ್, ಮ್ಯಾನೇಜರ್ಗಳಿಂದ ಹಿಡಿದು , ಗ್ರೌಂಡ್ಸಮೆನ್ಗಳವರೆಗೆ, ಮೀಡಿಯಾದವರನ್ನೂ ಬಿಡದೇ ವಂದಿಸಿದ , ಯಾರೂ ಮರೆತು ಹೋಗಬಾರದೆಂದು ಒಂದು ದೊಡ್ಡ ಹಾಳೆಯನ್ನೇ ಹೊತ್ತು ತಂದ ಅವರ ಸೌಮ್ಯ ಸ್ವಭಾವ ಇಷ್ಟವಾಗುತ್ತೆ. ತಮ್ಮ ಕೊನೆಯ ಟೆಸ್ಟ್ ಮ್ಯಾಚಿನಲ್ಲಿ ಗೌರವಪೂರ್ಣ ವಿಧಾಯ  ಹೇಳಿ ವರ್ತಮಾನದ ಭಾಗವೇ ಆದರೂ ಇತಿಹಾಸದ ಪುಟ ಸೇರಿಹೋದ ಸಚಿನ್ನಿನ್ನ ಮಾತುಗಳು ನನ್ನ ನೆನಪುಗಳನ್ನ ಮತ್ತೆ ಮತ್ತೆ ಕೆದಕತೊಡಗಿದವು.


ಮುಂಚೆಯೆಲ್ಲಾ ಟೆಸ್ಟ್ ಮ್ಯಾಚುಗಳೆಂದರೆ ಐದು ದಿನಗಳು ಪೂರ್ತಿ ನಡೆಯೋ ಸಂಭ್ರಮ!. ಇಡೀ ದಿನ ಆಡಿ ಇನ್ನೂರು ರನ್ ಹೊಡೆದರೂ ಅದೊಂದು ಭಯಂಕರ ಬ್ಯಾಟಿಂಗ್. ತಮ್ಮ ಬೌಲಿಂಗ್ ಸಾಮರ್ಥ್ಯವನ್ನೇ ಧಾರೆಯೆರೆಯುತ್ತಿದ್ದ ಬೌಲರ್ಗಳ ನಾನಾ ಎಸೆತಗಳನ್ನ ಎದುರಿಸುವುದು ಬ್ಯಾಟ್ಸಮನ್ನಿನ ನಿಜವಾದ ಸತ್ವಪರೀಕ್ಷೆಯೆ. ಯಾವ ತರಹದ ಎಸೆತಗಳಿಗೂ ಜಗ್ಗದೇ, ಇತ್ತ ರನ್ನನ್ನೂ ಹೊಡೆಯದೇ ಬ್ಯಾಟ್ಸಮನ್ ನೆಲಕಚ್ಚಿ ನಿಂತರೆಂದರೆ ಆಗ ಬೌಲರ್ಗಳ ಸತ್ವ ಪರೀಕ್ಷೆ ಶುರು ವಾಗುತ್ತಿತ್ತು. ಹೇಗಪ್ಪಾ ಈತನನ್ನು ಔಟ್ ಮಾಡೋದು ಎಂದು ಬೆವರಿಳಿಯುತ್ತಿತ್ತು. ಟೆಸ್ಟ್, ಒಂದು ದಿನ ಅನ್ನದೇ ಎಲ್ಲ ಪ್ರಕಾರಗಳಲ್ಲೂ ಒಂದೇ ಸಮನಾಗಿ ರುದ್ರಪ್ರತಾಪ ತೋರೋ ಆಟಗಾರರು ಒಂದಿಷ್ಟು ಜನ ಇರುತ್ತಿದ್ದರು. ಅವರು ಆಟಕ್ಕಿಳಿದರೆಂದರೆ ಎಲ್ಲೆಡೆ ಪುಕುಪುಕು. ತಮ್ಮ ಭಯಾನಕ ವೇಗದಿಂದ, ಪ್ರಚಂಡ ಸ್ಪಿನ್ ಗಾರುಡಿಯಿಂದ ಬ್ಯಾಟ್ಸಮೆನ್ನುಗಳ ಕಂಗೆಡಿಸಿ ವಿಕೆಟ್ ಉರುಳಿಸುತ್ತಿದ್ದ ಬೌಲರ್ಗಳೂ ಇರುತ್ತಿದ್ದರು. ಹಾಗಾಗಿ ಐದು ದಿನದ ಆಟವೆನ್ನೋದು ನಿಜವಾಗಲೂ ದೈಹಿಕ, ಮಾನಸಿಕ ಯುದ್ದದಂತೆ. ಈ ಸತ್ವಪರೀಕ್ಷೆ ಕೊನೆಗೆ ನೀರಸ ಡ್ರಾನಲ್ಲಿ ಅಂತ್ಯವಾದರೂ ಕೆಲವರ ಸೆಂಚುರಿ, ಕೆಲವರ ಐದು , ಹತ್ತು ವಿಕೆಟ್ಗಳ ಸಾಧನೆಗಳು ಇತಿಹಾಸದ ಪುಟಗಳಲ್ಲಿ ಸೇರುತ್ತಿದ್ದವು. ಹೀನಾಯ ಸೋಲಿನ ಹಂತದಲ್ಲಿದ್ದ ಪಂದ್ಯವನ್ನು ಮೇಲೆತ್ತಿ ಗೆಲ್ಲಿಸಿಕೊಟ್ಟ, ತಮ್ಮ ಆಟದ ಬಲದಿಂದ ತಂಡವನ್ನು ಗೆಲುವಿನಂಚಿಗೆ ತಂದಿತ್ತ, ತಂಡ ಗೆಲ್ಲಲಿ, ಸೋಲಲಿ .. ಸೋಲಿನ ಸಂದರ್ಭದಲ್ಲೂ ವೀರೋಚಿತವಾಗಿ ಆಡಿ ಅಭಿಮಾನಿಗಳ ಮನ ಗೆದ್ದೋರು ನಮ್ಮ ತಲೆಮಾರಿನ ಐದಾರು ಆಟಗಾರರು. ಅವರೆಲ್ಲಾ ಇವತ್ತು ಸಚಿನ್ನಿನ ವಿದಾಯದ ಸಂದರ್ಭದಲ್ಲಿ ಮತ್ತೆ ಒಟ್ಟಿಗೆ ಸಿಕ್ಕಿದ್ದು ಕ್ರಿಕೆಟ್ ವೀಕ್ಷಕರ ಅದೃಷ್ಟವೆಂದೇ ಹೇಳಬಹುದೇನೋ..

ಮುಂಚೆಯೇ ಅಂದಂತೆ ಕ್ರಿಕೆಟ್ಟೆಂದರೆ ಸಚಿನ್ನೊಬ್ಬನೇ ಅಲ್ಲ. "ಗೋಡೆ", "ವೆರಿ ವೆರಿ ಸ್ಪೆಷಲ್", "ಬಂಗಾಳದ ಹುಲಿ" ಎಂದು ಖ್ಯಾತಿ ಪಡೆದ ದ್ರಾವಿಡ್, ಲಕ್ಷ್ಮಣ್, ಗಂಗೂಲಿ ಕಮ್ಮಿಯೇನಲ್ಲ. ಇಂದು ಸಚಿನ್ನಿಗೆ ಸಿಕ್ಕಂತ ವಿದಾಯವೇ ಅವರಿಗೂ ಸಿಗಬೇಕಿತ್ತೆನುವ ಮಾತುಗಳನ್ನು ತಳ್ಳಿಹಾಕಲಾಗದಿದ್ದರೂ ಒಂದು ಸುಸಂದರ್ಭವನ್ನು ಹಾಳು ಮಾಡುವಂತಹ ದುಃಖತರುವ ಮಾತುಗಳು ಇಲ್ಯಾಕೋ ಬೇಡವೆನಿಸುತ್ತದೆ. ಇಂದು ಬಂದಿದ್ದ ಈ ಮೂವರನ್ನು ಮತ್ತು ಅಂಗಳದಲ್ಲಿ ಸಚಿನ್ನನ್ನೂ ಕಂಡಂತ ನನಗೆ ಬಾಲ್ಯದ ದಿನಗಳು ನೆನಪಾದವು. ನಾನು, ನಮ್ಮಪ್ಪ, ಅಮ್ಮನ ಕತೆ ಹೋಗಲಿ, ನಮ್ಮಜ್ಜ, ಅಜ್ಜಿಗೂ ಕ್ರಿಕೆಟ್ಟೆಂದರೆ ಪ್ರಾಣವಾಗಿತ್ತಂತೆ. ಶಿವಮೊಗ್ಗದಲ್ಲಿ ಕ್ರಿಕೆಟ್ ಮ್ಯಾಚ್ ನಡೆಯುತ್ತಿದ್ದರೆ ಬೆಳಬೆಳಗ್ಗೆಯೇ ಮನೆಯಿಂದ ನೀರಿನ ಬಾಟಲ್ ಹಿಡಿದು ತನ್ನ ಮಕ್ಕಳನ್ನು ಕಟ್ಟಿಕೊಂಡು ಸಂಜೆಯವರೆಗೂ ಉರಿಬಿಸಿಲಲ್ಲಿ ನಮ್ಮಜ್ಜಿ ಕ್ರಿಕೆಟ್ ನೋಡುತ್ತಿದ್ದರಂತೆ. ನಮ್ಮಜ್ಜನಿಗೆ ಈಗಲೂ ಕ್ರಿಕೆಟ್ಟೆಂದರೆ ಅಚ್ಚುಮೆಚ್ಚು. ಅದೆಷ್ಟು ಹಳೆಯ ಕ್ರಿಕೆಟ್ ಮ್ಯಾಚ್ ಹಾಕಿದರೂ ನೋಡುತ್ತಾ ಕೂತು ಬಿಡುತ್ತೀರ ಅಂತ ನಮ್ಮಜ್ಜಿ ಎಷ್ಟೋ ಸಲ ಬೈದರೂ ಊಹೂಂ.. ಅವರ ಪ್ರೇಮ ಹಾಗೆಯೇ ಮುಂದುವರೆದಿದೆ. ಕ್ರಿಕೆಟ್ ಸ್ಕೋರ್ ನೋಡ್ತೀನಿ ಅಂತ ಖುರ್ಚಿಯಿಂದೆದ್ದು ಟೀವಿಯ ಸಮೀಪ ಹೋದ ಅವರು ಅಲ್ಲಿಯೇ ಮೈಮರೆತು ನಿಂತುಬಿಡೋದೂ ಉಂಟು. ನಾವೇ , ಅಜ್ಜಾ ಟೀವಿ ಕಾಣೊಲ್ಲ , ಈ ಕಡೆ ಬನ್ನಿ ಅಂತ ನಗಾಡೋಕೆ ಶುರು ಮಾಡಿದ ಮೇಲೆ ಅವರು ಈ ದುನಿಯಾಕ್ಕೆ ವಾಪಸ್ ಬರೋದು . ಇನ್ನು ನನ್ನ ಬಾಲ್ಯದ ಪುಟಗಳನ್ನು ತಿರುವುತ್ತಾ ಹಿಂದೆ ಹಿಂದೆ ಹೋದಂತೆಲ್ಲಾ ನೆನಪಾಗೋದು ಇವರೇ. ಆಗ ಶಾಲಾ ದಿನಗಳಲ್ಲಿ ಈಗಿನಂತೆ ಹೋಂ ವರ್ಕುಗಳು ಟೆನ್ಸನ್ನು, ಟೀವಿಗಳಲ್ಲಿ ಧಾರಾವಾಹಿಗಳ ಪೈಪೋಟಿಗಳು ಇರದಿದ್ದರೂ ಮನೆಮಂದಿಯೆಲ್ಲಾ ಒಟ್ಟಿಗೆ ಕೂತು ಟೀವಿ ನೋಡುತ್ತಿದ್ದುದು ಕಡಿಮೆಯೇ. ಆದ್ರೆ ಕ್ರಿಕೆಟ್ ಮ್ಯಾಚ್ ಬಂತಂದ್ರೆ ಮುಗ್ದೇ ಹೋಯ್ತು.. ರಾತ್ರೆ ಕ್ರಿಕೆಟ್ ಇದೆ ಅಂದ್ರೆ ನಂಗೆಂತೂ ಸಖತ್ ಖುಷಿ.  ಆಗ ಸಿಗುತ್ತಿದ್ದ "ಅಶ್ವಿನಿ" ಎಂಬ ಕೋಲ್ಡ್ ಡ್ರಿಂಕ್ಸ್ ತಂದು ಅದು ತಣ್ಣಗಿರಲೆಂದು ಟ್ಯಾಂಕಿಯೊಳಗಿಡೋದ್ರಿಂದ ಹಿಡಿದು ಮ್ಯಾಚ್ ನೋಡ್ತಾ ಬೇಕಾಗುತ್ತೆ ಅಂತ ಕಲ್ಲಂಗಡಿ ಹಣ್ಣೋ, ಮಂಡಕ್ಕಿನೋ ತರೋದ್ರಿಂದ ನಾವು ಮ್ಯಾಚಿಗೆ ತಯಾರಾಗುತ್ತಿದೆವು!. ಅಂತಾ ಹುಟ್ಟಾ ಶ್ರೀಮಂತಿಕೆಯ ದಿನಗಳಲ್ಲದಿದ್ದರೂ, ಸಾಲವೆಂಬುದು ತಲೆಯ ಮೇಲೆ ಕತ್ತಿಯಂತೆ ನೇತಾಡುತ್ತಿದ್ದರೂ ನಮ್ಮಪ್ಪ ಎಂದೂ ಬಡತನದ ಬಿಸಿ ನಮಗೆ ತಾಗದಿರಲೆಂದೇ ಅಪ್ಪ ಬಯಸುತ್ತಿದ್ದರು. ಎಷ್ಟೇ ಕಷ್ಟದ ದಿನಗಳಿದ್ದರೂ ನನ್ನ, ಅಮ್ಮನ ಜೊತೆ ಕೂತು ನನಗೇ ನಾಚಿಕೆಯಾಗುವಂತೆ ಪ್ರತೀ ಫೋರು, ಸಿಕ್ಸರಿಗೆ ಕೂಗಿ, ಸೀಟಿ ಹೊಡೆಯುತ್ತಿದ್ದ ಅಪ್ಪನ ಕ್ರಿಕೆಟ್ ಸಂಭ್ರಮದ ಪರಿ ನೆನೆಸ್ಕಂಡ್ರೆ ಇಂದಿಗೂ ಖುಷಿಯಾಗುತ್ತೆ.ಆದರೆ ನಮ್ಮ ಖುಷಿಗಾಗಿ ತಮ್ಮ ಜೀವವನ್ನೇ ತೇದ ಅವರ ನೆನಪಾಗಿ ಕಣ್ಣಂಚು ತೇವವಾಗುತ್ತೆ.

ಟೀವಿ ಹಚ್ಚಿ ಕ್ರಿಕೆಟ್ ನೋಡ್ತಾ ಕೂತು ಬಿಟ್ರೆ ನಾನು ಪ್ರತೀ ಮ್ಯಾಚೂ ಭಾರತವೇ ಗೆಲ್ಲಬೇಕೆಂದು, ಅವರ ಸೋಲು ಸಹಿಸಲಸದಳವಾಗಿ ಭಾವೋನ್ಮುಖನಾಗಿ ಬಿಟ್ತಿದ್ದೆ. ಸಚಿನ್ ಔಟಾದ ಅಂದ ತಕ್ಷಣ ಬಯ್ಯೋದು, ಭಾರತದ ಬೌಲರ್ಗಳಿಗೆ ಪ್ರತೀ ಫೋರು , ಸಿಕ್ಸರ್ ಬಿದ್ದಾಗ ಛೇ, ಛೇ ಎನ್ನುತ್ತಿದ್ದೆ. ಭಾರತದ ಬ್ಯಾಟ್ಸುಮನ್ನುಗಳು ಏನು ರನ್ನೇ ಹೊಡೀತಿಲ್ಲ ಅಂತ ಗೊಣಗೋಕೆ ಶುರು ಮಾಡಿದಾಗ ಅಪ್ಪ, ಅಮ್ಮ ಹೇ, ನೀನು ಇಷ್ಟೆಲ್ಲಾ ಬೇಜಾರಾಗೋದಾದ್ರೆ ಮ್ಯಾಚ್ ನೋಡ್ಬೇಡ. ನಲವತ್ತು  ಓವರಿಗೆ ಎಬ್ಬಿಸ್ತೀನಿ ಮಲ್ಕೋ ಹೋಗು ಅಂತಲೋ. ಭಾರತ ಸೋಲೋ ಸ್ಥಿತೀಲಿದೆ , ಗೆದ್ರೆ ಗ್ಯಾರಂಟಿ ಕರೀತಿನಿ ಅಂತಲೋ ಸಮಾಧಾನ ಮಾಡುತ್ತಿದ್ದರು. ಮೂಢನಂಬಿಕೆ ಅಂದ್ರೆ ಯಾವ ಪರಿ ಇರುತ್ತಿತ್ತು ಅಂದ್ರೆ ಬಾಗಿಲ ಮೂಲೆಯಿಂದ ನೋಡಿದ್ರೆ ಬೇರೆ ಟೀಮಿನವ್ರು ಔಟಾಗ್ತಾರೆ, ಟೀವಿಯೆದ್ರು ಕೂತ್ರೆ ಭಾರತದ ವಿಕೆಟ್ ಬೀಳತ್ತೆ, ರನ್  ಬರಲ್ಲ.. ಹೀಗೆ ತರಾವರಿ ಆಲೋಚನೆಗಳು ನನ್ನ ಎಳೆಮನದಲ್ಲಿ ! ನಾನು ನೋಡಿದರೆ ಔಟಾಗ್ತಾರೆ ಅನಿಸಿದ ದಿನಗಳಲ್ಲೆಲ್ಲಾ ಸೀಟಿಯೋ, ಕೂಗೋ ಕೇಳಿದಾಗ ಓ ಸಿಕ್ಸರ್ ಬಿತ್ತು, ವಿಕೆಟ್ ಬಿತ್ತು ಅಂತ ಪಕ್ಕದ ಯಾವುದೋ ಕೋಣೆಯಿಂದ ಸಂಭ್ರಮಿಸುತ್ತಿದ್ದೆ !! ದೇವರಿಗೆ ಬೇಡುತ್ತಿದ್ದುದ್ದು ಏನು ಗೊತ್ತಾ ? ದೇವ್ರೆ ದೇವ್ರೆ, ಇವತ್ತಿನ ಮ್ಯಾಚಿನಲ್ಲಿ ಭಾರತ ಗೆಲ್ಲಲಪ್ಪಾ ಅಂತ. ನಂಗೆ ಒಳ್ಳೆ ಬುದ್ದಿ ಕೊಡಪ್ಪಾ, ದುಡ್ಡು ಕೊಡಪ್ಪಾ, ಅದು ಕೊಡಪ್ಪಾ, ಇದು ಕೊಡಪ್ಪಾ ಎಂದು ಬೇಡಿದ ನೆನಪೇ ಇಲ್ಲ.

ಮಧ್ಯ ಮಧ್ಯ ಕರೆಂಟ್ ಹೋಗ್ಬಿಡುತ್ತಿತ್ತು. ಆಗ ಚಾಲ್ತಿಗೆ ಬರ್ತಿದ್ದದೇ ರೇಡಿಯೋ.. ಅಲ್ಲಿನ ಮೈ ರೋಮಾಂಚನಗೊಳ್ಳುವಂತ ಕಾಮೆಂಟ್ರಿ ಕೇಳೋದೇ ಒಂದು ಸುಖ. ಕೆಲವೊಮ್ಮೆ ಟೀವಿಯ ವಾಲ್ಯೂಮ್ ಮ್ಯೂಟ್ ಮಾಡಿ ರೇಡಿಯೋ ಹಚ್ಚಿ ಕೂರುತ್ತಿದ್ದುದೂ ಉಂಟು.ಸಚಿನ್ನಿನ ಸೆಂಚುರಿಗಳು, ಗಂಗೂಲಿಯ ಸಿಕ್ಸರ್ಗಳು, ರಾಬಿನ್ ಸಿಂಗಿನ ಮಿಂಚಿನ ಫೀಲ್ಡಿಂಗ್.. ಹೀಗೆ ಪ್ರತೀ ಮ್ಯಾಚೂ ಒಂದು ವಿಸ್ಮಯ ನನಗೆ. ಸಚಿನ್ ಲೆಗ್ ಸ್ಪಿನ್, ಆಫ್ ಸ್ಪಿನ್ ಎಲ್ಲಾ ಮಾಡುತ್ತಾನೆ ಅಂತ ನಾನೂ ಎರಡೂ ಕಲಿಬೇಕೆನ್ನೋ ಹಂಬಲ ಹುಟ್ಟಿದ್ರಿಂದ , ಎಂಆರ್ ಎಫ್ ಬ್ಯಾಟು ನೋಡಿದ್ರೆ ಇದು ಸಚಿನ್ ಬ್ಯಾಟು, ಬ್ರಿಟಾನಿಯಾ ನೋಡಿದಾಗೆಲ್ಲಾ ಇದು ದ್ರಾವಿಡ್ಡಿನದು ಎನ್ನೋದ್ರವರೆಗೆ, ಮ್ಯಾಚಿನ ಮಾರ್ನೇ ದಿನ ಪೇಪರಿನ ಒಂದಕ್ಷರವೂ ಬಿಡದಂತೆ ಒಂದು ಒಂದೂವರೆ ಗಂಟೆಗಳ ಕಾಲ ಓದೋದ್ರವರೆಗೆ, ಪೇಪರ್ನಲ್ಲಿ ಬರುತ್ತಿದ್ದ ಕ್ರಿಕೆಟ್ಟಿಗರ ಬಗ್ಗೆಯ ಮಾಹಿತಿ, ಫೋಟೋ ಕಟ್ ಮಾಡಿ ಇಡುವವರೆಗೆ ಅದೇನೋ ಹುಚ್ಚು ಸೆಳೆತ ಅದರ ಬಗ್ಗೆ.  ಒಮ್ಮೆ ಕ್ರಿಕೆಟ್ ಆಟವಾಡ್ತಾ ಇದ್ದಾಗ ಹೀಗೆ ಏನೋ ಮಾತು ಬಂದು  ಛೇಢಿಸುತ್ತಿದ್ದ ಅಜ್ಜಿಗೆ ಬ್ಯಾಟೆತ್ತಿ ಹೊಡಿತೀನಿ ಎಂದೂ ಹೋಗಿದ್ದೆನೆಂದು ಇಂದಿಗೂ ಕಿಚಾಯಿಸುತ್ತಾರೆ!. ದವಡೆಯ ಮೂಳೆ ಮುರಿದುಕೊಂಡಿದ್ರೂ ಬೌಲಿಂಗ್ ಮಾಡೋಕೆ ಬಂದ ಕೆಚ್ಚೆದೆಯ ಕುಂಬ್ಳೆ, ಲಕ್ಷ್ಮಣ್, ದ್ರಾವಿಡ್, ಗಂಗೂಲಿಯಂತ ದಿಗ್ಗಜರೆಲ್ಲಾ, ಒಂದೊಂದರ್ಥದಲ್ಲಿ ದೇವರ ಸ್ಥಾನವನ್ನೇ ಪಡೆದಿದ್ದಾರೆ. ಆ ಪರಂಪರೆಯ, ಹಿರಿಯ ಪೀಳಿಗೆಯ ಕೊನೆಯ ಕೊಂಡಿ ಸಚಿನ್.. ಈ ಮೂರ್ನಾಲ್ಕು ವರ್ಷಗಳ ಅಂತರದಲ್ಲೇ ಅವರೆಲ್ಲಾ ರಿಟೈರಾಗಿರೋದು ಸ್ವಲ್ಪ ಬೇಸರದ ಸಂಗತಿಯೇ ಆದರೂ ಅದರ ಬಗ್ಗೆ ಏನೂ ಮಾಡಲಾಗುತ್ತಿಲ್ಲ. ಸಿಡಿಲಬ್ಬರದ ಸೆಹ್ವಾಗ್, ಹೆಲಿಕ್ಯಾಪ್ಟರ್ ಧೋನಿ, ಟರ್ಬನೇಟರ್ ಹರ್ಬಜನ್ರಂತ ಆಟಗಾರರು ಬಂದರೂ, ರೋಹಿತ್, ಕೊಹ್ಲಿ, ಶಿಖರ್ರಂತ ಯುವ ಪೀಳಿಗೆ ತಯಾರಾಗಿದ್ದರೂ ಮೇಲೆ ಹೇಳಿದಂತ ಮೇರು ದಿಗ್ಗಜರ ವಿಧಾಯದ ನೋವು ಉಳಿದೇ ಇದೆ. ದೇವರು ರಿಟೈರಾದ್ನಲ್ಲ ಅನ್ನೋ ಬೇಜಾರು ಕಾಡ್ತಾನೆ ಇದೆ.. ಈ ನೋವನ್ನ ಕಾಲವೇ ಮರೆಸಬೇಕಷ್ಟೆ..

8 comments:

  1. ಕ್ರಿಕೆಟ್ ಅನ್ನ ದ್ವೇಷ ಮಾಡೋ ಅಪ್ಪನಿಗೂ ಕೂಡ ಸಚಿನ್, ದ್ರಾವಿಡ್ ಅಂದ್ರೆ ಅದೇನೋ ಸೆಳೆತ ಪ್ರಶಸ್ತಿ. ಅವರ ಕುರಿತಾಗಷ್ಟೇ ಕ್ರಿಕೆಟ್ ಮಾತೆತ್ತಿದರೆ ಸಹಿಸಿಕೊಳ್ತಾ ಇದ್ದದ್ದು ಅಪ್ಪ. ಅಂತ ಅಪ್ಪನಿಗೆ ಹೆದರಿ ನಾವು ನಮ್ಮ ಮನೆ ಟೀವಿ ಯಲ್ಲಿ ಕ್ರಿಕೆಟ್ ನೋಡಿದ್ದೇ ಇಲ್ಲ. ಕ್ರಿಕೆಟ್ ನೋಡಲೆಂದೇ ಲಾಯಕ್ಕಾದ ಎರಡು ಮನೆಗಳಿದ್ವು. ಇದೇ ಊರಿಗೂರಿನ ಹುಡುಗರೇ ಆ ಎರಡು ಮನೆಯೊಳಗೆ ಜಮಾಯಿಸಿ ಬಿಡ್ತಿದ್ವು. ಈಗ ಆ ಪರಿ ಕ್ರಿಕೆಟ್ ನೋಡುವ ಹುಚ್ಚು ಯಾರಿಗೂ ಇಲ್ಲ ಬಿಡು. ಕ್ರಿಕೆಟ್ ನೋಡುವುದರಲ್ಲೂ ಒಂದು ಖಾಸಗಿ ತನ ಹುಟ್ಕೊಂಡು ಬಿಟ್ಟಿದೆ. ಬಹುಷಃ ಸಚಿನ್, ದ್ರಾವಿಡ್, ಕುಂಬ್ಳೆ, ಲಕ್ಷ್ಮಣ್, ಗಂಗೂಲಿ ಇರುವ ತನಕ ಜೀವ ಭಾವ ಅನ್ನಿಸಿ ಕೊಳ್ತಾ ಇದ್ದ ಕ್ರಿಕೆಟ್ ಇನ್ಮುಂದೆ ಕೇವಲ ಒಂದು ಆಯ್ಕೆ ಆಸಕ್ತಿಯಾಗಷ್ಟೇ ಉಳಿದುಕೊಳ್ಳಬಲ್ಲದು. ಸಚಿನ್ & ದ್ರಾವಿಡ್ ನಿವೃತ್ತಿಗಾಗಿ ದುಃಖಿಸಿದವರಲ್ಲಿ ನಾನೂ ಒಬ್ಬ.

    ಚೆಂದದ ಬರಹ ಪ್ರಶಸ್ತಿ. :)

    ReplyDelete
    Replies
    1. ಓ ಸೂಪರ್.. ಪ್ರತಿಕ್ರಿಯೆನಲ್ಲಿ ಮಿನಿ ಕತೆನೇ ಬರ್ದು ಬಿಟ್ರಲ್ಲಾ ಸತೀಶ್ :-) ನನ್ನ ಪೋಸ್ಟಿಗಿಂತ ನಿಮ್ಮ ಕಮೆಂಟೇ ನೋಡ್ತಾರೇನೋ ಜನ ಅಂತ ಭಯ ಶುರು ಆಗ್ತಿದೆ.. ಹೆ ಹೆ :-)

      Delete
  2. Replies
    1. ಧನ್ಯವಾದ ರಾಘವಣ್ಣ ;-)

      Delete
  3. ಪ್ರಶಸ್ತಿ ಜಿ,
    ಇಲ್ಲಿ ಭಾವಗಳ ಓದೋದು ಬಿಟ್ಟು ತುಂಬಾ ದಿನಗಳಾಗಿದ್ವು. ಆದರೆ ರಿಟೈರಾದ ದೇವರ ಈ ಭಾವವ ಓದಿ ಹಿಂದಿನ ಒಂದೆರಡು ಭಾವಗಳ ಓದೋಕೆ ಪ್ರೇರೆಪಿಸಿದ್ದು ಸುಳ್ಳಲ್ಲ.
    ಬರಿಯ ಸಚಿನ್ ನಾ ಇಷ್ಟಪಡದ ನಾ ಇವತ್ತಿಲ್ಲಿ ಸ್ವಲ್ಪ ಇಷ್ಟ ಪಡೋಕೆ ಕಾರಣ ನೀವಾದ್ರೇನೋ.ಇನ್ನು ನೀವು ಹೇಳಿದ ಹಳ್ಳೀ ಮನೆಯಲ್ಲಿ ಕ್ರಿಕೆಟ್ ನೋಡೋ..ಸೋತಾಗ ನಮ್ಮ ಮೇಲೆ,ನಾವ್ಯಾವ ರೀತಿ ನೋಡಿದ್ದಕ್ಕೆ ಸೋತ್ರು ಅನ್ನೋದನ್ನ ವಿಮರ್ಶಿಸಿಕೊಳ್ತಿದ್ದ ಆ ದಿನಗಳು ನಂಗೂ ನೆನಪಾದ್ವು ಇದ ಓದಿ.ಅಪ್ಪ ,ಅಜ್ಜ ಎಲ್ರೂ ಇಷ್ಟ ಆದ್ರೂ.
    ಕಟ್ಟಿಕೊಟ್ಟ ಬಗೆ ಮನದಲ್ಲಿ ಹಾಗೆಯೇ ಉಳಿದುಬಿಡ್ತು.sooper like

    ReplyDelete
  4. ತುಂಬಾ ಧನ್ಯವಾದಗಳು ಭಾಗ್ಯಾಜೀ :-)
    ಹೆಸರಲ್ಲೇ ಚಿನ್ನ ಇಟ್ಕಂಡಿರೋ ಸಚಿನ್ನನೇ ಹಾಗೆ.. ಎಂತಹವರಿಗೂ ಆಸಕ್ತಿ ಕೆರಳಿಸಿಬಿಡುತ್ತೆ ಅವನ ಬಗೆಗಿನ ಬರಹ..
    ಅಂದಂಗೆ ನಮ್ಮೂರ ಕಡೆ ಕತೆಯ ಬಗ್ಗೆ: ಬರಹ ನಮಗೆ ಆಪ್ತವಾದಷ್ಟೂ ಪರರಿಗೂ ಇಷ್ಟವಾಗುತ್ತಾ ಹೋಗುತ್ತಾ ಅಂತ.. ಅಂದಂಗೆ ಬಹಳ ದಿನಗಳ ನಂತರದ ಭೇಟಿಗೆ ಧ.ವಾ :-)

    ReplyDelete
  5. ಸುಂದರ ಲೇಖನ ಭಾವುಕತೆ ಬೇಡವೆಂದರೂ ಮೂಡುತ್ತೆ. ದಿಗ್ಗಜರು ಬಂದು ಹೋದ ಕ್ಷೇತ್ರದಲ್ಲಿ ಸಚಿನ್ ಅಳಿಯದ ಛಾಪು, ಸೌಮ್ಯತೆಯಲ್ಲಿ ಸಚಿನ್ ದ್ರಾವಿಡ್ ನನ್ನ ನೆಚ್ಚಿನ ಪಟುಗಳು. ಬ್ಯಾಲೆಂಸ್ಡ್ ಮಾತು ನೆರವಾದವರ ನೆನೆವ ಗುಣ ಎಲ್ಲಾ ಈ ವಾಮನ ಮೂರ್ತಿಯ ವ್ಯಕ್ತಿತ್ವಕ್ಕೆ ಮೆರಗು....ಇಷ್ಟ ಾಯ್ತು ಪ್ರಶಾಂತ್ ಲೇಖನ

    ReplyDelete
  6. ತುಂಬಾ ಧನ್ಯವಾದಗಳು ಆಜಾದ್ ಭಾಯ್..ಕೆಲವೊಂದು ವ್ಯಕ್ತಿತ್ವಗಳೇ ಹಾಗೆ.. ಬೇಡ ಬೇಡವೆಂದರೂ ಮನಸೂರೆಗೊಂಡುಬಿಡುತ್ತೆ :-) ನಿಮ್ಮ ಭೇಟಿಯಿಂದ ಖುಷಿಯಾಯ್ತು :-)

    ReplyDelete