Thursday, September 8, 2016

ಸೋಂದಾ ಕೋಟೆ

Crossing the bridge in Sonda to reach sonda fort
A Frog/Monkey at the door of Fort
ಸೋಂದಾ ಅರಸರು:
ವಿಜಯನಗರದ ಸಾಮಂತರಸರಾಗಿದ್ದ ಸೋಂದಾ ಅರಸರು ಈ ಪ್ರಾಂತ್ಯವನ್ನು ತಮ್ಮ ರಾಜಧಾನಿಯನ್ನಾಗಿಸಿಕೊಂಡು ೧೫೯೦ರಿಂದ ೧೭೬೨ರ ವರೆಗೆ ಆಳಿದರು ಎನ್ನುತ್ತದೆ ಇತಿಹಾಸ. ಇವರ ಮೊದಲ ಅರಸನೇ ಅರಸಪ್ಪ ನಾಯಕ(೧೫೫೫-೧೫೯೮). ಈತನ ಕಾಲದಲ್ಲೇ ಇಲ್ಲಿನ ಒಂದು ಈಶ್ವರ ದೇಗುಲವನ್ನು ಕಟ್ಟಿಸಲಾಯಿತೆಂದು ಹೇಳಲಾಗುತ್ತದೆ. ಇವನ ವಂಶಸ್ಥರಾದ ಸದಾಶಿವನಾಯಕನ ಉಲ್ಲೇಖ ಸಹಸ್ರಲಿಂಗದಲ್ಲಿ ಸಿಗುವ ಶಿವಲಿಂಗಗಳಲ್ಲಿ ಬರುತ್ತದೆ.

ಸೋಂದಾ ಮಠದ ಆವರಣದಲ್ಲಿ ಪ್ರಾತಕರ್ಮಗಳನ್ನು ಪೂರೈಸಿದ ನಾವು ಸೋಂದಾ ಕೋಟೆಯನ್ನು ನೋಡಲು ಹೊರಟೆವು. ಸೋಂದಾ ಮಟಕ್ಕೆ ತೆರಳುವಲ್ಲಿ ಸಿಗುವ ಅತಿಥಿಗೃಹದ ಎದುರಲ್ಲೇ ಶಾಲ್ಮಲೆಯನ್ನು ದಾಟಿ ಕೋಟೆಗೆ ಸಾಗುವ ದಾರಿಯೊಂದು ಸಿಗುತ್ತದೆ. ನೀರು ಹೆಚ್ಚಿದ್ದ ಪಕ್ಷದಲ್ಲಿ ಪಕ್ಕದಲ್ಲಿರೋ ಸೇತುವೆಯಲ್ಲಿ ನದಿಯನ್ನು ದಾಟಿ ಮತ್ತೊಂದು ಬದಿಗೂ ತೆರಳಬಹುದು. ಅಲ್ಲಿಂದ ಎಡಕ್ಕೆ ಸಾಗೋ ದಾರಿಯಲ್ಲಿ ಸಾಗಿದರೆ ತೋಟವೊಂದು ಸಿಗುತ್ತದೆ. ಅದರ ಪಕ್ಕದಲ್ಲೇ ಸಾಗುವ ದಾರಿಯಲ್ಲಿ ಒಂದೆರಡು ನಿಮಿಷ ಸಾಗುವಷ್ಟರಲ್ಲಿ ಕೋಟೆಯ ಪ್ರಾಂಗಣ ಸಿಗುತ್ತದೆ.

way to reach the Sonda fort
ದ್ವಾರಪಾಲಕ ಮಂಡೂಕರಾಯ:
ಈ ಕೋಟೆಯ ದ್ವಾರದಲ್ಲೇ ಒಂದು ಕಪ್ಪೆ ಸಿಗುತ್ತದೆ. ಕೋಟೆಯ ಸ್ವಾಗತ ಕೋರೋ ಆನೆಗಳೋ, ಭಟರೋ ಸಿಗುವುದು ಸಾಮಾನ್ಯ. ಆದರೆ ಆದರೆ ಕಪ್ಪೆಯೋ ಮಂಗವೋ ಕೋಟೆಗೆ ಸ್ವಾಗತ ಕೋರುವಂತಿರುವುದನ್ನು ನೋಡಿದ್ದು ಇದೇ ಮೊದಲು. ಇದರ ಬಗ್ಗೆ ಹೆಚ್ಚಿನ ಹಿನ್ನೆಲೆಯನ್ನು ಸ್ಥಳೀಕರು ತಿಳಿಸಬಹುದೇನೋ

ಆದಿವಾಸಿ ಹನುಮ:
ಹಾಗೇ ಮುಂದೆ ಹೋದರೆ ಒಂದು ಗುಡಿ ಸಿಗುತ್ತದೆ. ಅದರಲ್ಲೊಂದು ಹನುಮನಿದ್ದಾನೆ. ಇಲ್ಲಿನ ಹನುಮನನ್ನು ಸೂಕ್ಷ್ಮವಾಗಿ ಗಮನಿಸಿದರೆ ಆತನ ಶಿಲ್ಪದಲ್ಲಿನ ವಿಶೇಷತೆಯನ್ನು ಗಮನಿಸಬಹುದು. ಆದಿವಾಸಿಯಂತಿರುವ ಆತನ ಶಿಲ್ಪ ಗಮನ ಸೆಳೆಯುತ್ತದೆ
Hanuman statue at Sonda Fort. See the Architecture

ಶೈವ ದೇಗುಲ:
ಕೋಟೆಗೆ ಹೋಗುತ್ತಿದ್ದ ಹಾಗೆ ಎಡಕ್ಕೆ ಕಾಣುವುದೇ ಶಿವನ ದೇಗುಲ. ಎದುರಿಗೆ ನಂದಿಯಿರುವ ಉತ್ತರ ದಿಕ್ಕಿಗೆ ಮುಖ ಮಾಡಿರುವ ಈ ದೇಗುಲದ ಪ್ರವೇಶದಲ್ಲಿ ನಂದಿಕೇಶ್ವರ, ಚಂಡಿಕೇಶ್ವರರಿದ್ದಾರೆ. ದೇಗುಲದ ಸುತ್ತಲ ಗೋಡೆಗಳಲ್ಲಿ ಯಾವ ಕೆತ್ತನೆಗಳಿಲ್ಲದಿದ್ದರೂ ಅದರ ಕೆಳಭಾಗದ ಪಟ್ಟಿಗಳಲ್ಲಿ ಆನೆಗಳು, ನವಿಲು, ಹೂಗಳು ಮುಂತಾದ ಕೆತ್ತನೆಗಳಿವೆ.  ಅದರ ಎದುರಲ್ಲೇ ರಾಜನ ಪೀಠವಿದೆ
Carvings at the Shiva temple of Sonda
Shivalinga and dwara palakas at Sonda shiva temple
King's tomb at sonda fort
ರಾಜನ ಪೀಠ:
ಒಂದೇ ಕಲ್ಲಿನಿಂದ ಮಾಡಿರುವ ಪೀಠದ ನಾಲ್ಕು ಕಾಲುಗಳಲ್ಲಿ ಕಾಳಿಂಗಮರ್ಧನ ಕೃಷ್ಣ, ಹಾಲುಣಿಸುತ್ತಿರುವ ಕಾಮಧೇನು ಮುಂತಾದ ಕೆತ್ತನೆಗಳಿವೆ. ಇತ್ತೀಚೆಗೆ ಆ ಸ್ಮಾರಕದ ಸಂರಕ್ಷಣೆಗೆ ಪ್ರಯತ್ನ ಮಾಡುವಾಗ ಅದರ ಮಧ್ಯದಲ್ಲೊಂದು ಕಲ್ಲನ್ನು ಕೊಡಲಾಗಿದೆ ಎನ್ನುತ್ತಾರೆ ಸ್ಥಳೀಯರು. ಇದರ ಪಕ್ಕದಲ್ಲೊಂದಿಷ್ಟು ಪಿರಂಗಿಗಳನ್ನು ಕೂರಿಸಲಾಗಿದೆ. ಇದರ  ಪಕ್ಕದಲ್ಲಿ ಆ ಕಾಲದ ಮೂತ್ರಾಲಯ ಮತ್ತು ಬಾವಿಯೂ ಇದೆಯೆಂದು ಹೇಳುತ್ತಾರಾದರೂ ಗಮನ ಕೊಡದಿದ್ದರೆ ಅದು ಮಿಸ್ಸಾಗೋ ಸಾಧ್ಯತೆಯೇ ಹೆಚ್ಚು.

ಮಿಸ್ಸಾದ ಇನ್ನೊಂದಿಷ್ಟು:
೧೬೮೨ರಲ್ಲಿ(ಛತ್ರಪತಿ ಶಿವಾಜಿ) ಮತ್ತು ೧೭೪೫(ಬಾಲಾಜಿ ಬಾಜಿ ರಾವ್ ಪೇಶ್ವೆ) ರಿಂದ  ೧೭೬೨(ಮಾಧವರಾವ್ ಪೇಶ್ವೆ)ರವರೆಗೆ ಮರಾಠರಿಂದ ಈ ಕೋಟೆ ನಿರಂತರವಾಗಿ ದಾಳಿಗೊಳಗಾಯಿತೆಂದು ನಂತರ ೧೭೬೪ರಲ್ಲಿ ಹೈದರಾಲಿಯ ದಾಳಿಗೆ ಸಿಕ್ಕು ಇಡೀ ಕೋಟೆಯೇ ನಾಶವಾಯಿತೆನ್ನುತ್ತದೆ ಸಿಕ್ಕ ಅಲ್ಪಸ್ವಲ್ಪ ಇತಿಹಾಸ. ಆದರೆ ೧೬೭೧ರಿಂದ ೧೬೯೬ರವರೆಗೆ ಕೆಳದಿ ಸಂಸ್ಥಾನವನ್ನು ಆಳಿದ್ದ, ಔರಂಗಜೇಬನನ್ನು ಎದುರಿಸಿ ಮರಾಠರಸ ರಾಜಾರಾಮನಿಗೆ ರಕ್ಷಣೆ ಕೊಟ್ಟಿದ್ದ, ಕುಮಟಾ ಬಳಿಯ ಮಿರ್ಜಾಂನಲ್ಲಿ ಕೋಟೆಯನ್ನೂ ಕಟ್ಟಿದ್ದ ಕೆಳದಿ ಚೆನ್ನಮ್ಮನಿಗೂ ಈ ಸೋಂದೆಯರಸರಿಗೂ ನಡುವೆ ಇದ್ದ ಸೌಹಾರ್ದ ಸಂಬಂಧಗಳ ಬಗ್ಗೆಯಾಗಲೀ, ವೈರತ್ವದ ಬಗ್ಗೆಯಾಗಲೀ ದಾಖಲೆಗಳೇ ಸಿಗುವುದಿಲ್ಲ. ಕೆಳದಿಯರಸರೂ ವಿಜಯನಗರದ ಸಾಮಂತರಸರಾಗಿದ್ದವರೇ. ಅಕ್ಕಪಕ್ಕದಲ್ಲಿದ್ದವರ ಪ್ರಸ್ಥಾಪ ಬಿಡಿ, ತಮ್ಮ ಪಾಡಿಗೆ ತಾವಿದ್ದ ಸೋಂದಾ ಅರಸರ ಮೇಲೆ ಹಿಂದೂ ಅರಸರೇ ಆಗಿದ್ದ ಮರಾಠರು ಯಾಕೆ ದಾಳಿ ಮಾಡಿದರು ? ಅದು ಯಾವ್ಯಾವ ಯುದ್ದಗಳು ಅನ್ನೋ ಯಾವ ಮಾಹಿತಿಗಳೂ ಸಿಕ್ಕೋಲ್ಲ. ಅದರ ಬಗೆಗಿರೋ ಮಾಹಿತಿ ಮೂಲವೆಂದ್ರೆ ಡಿಜಿಟಲ್ ಸೌತ್ ಏಶಿಯಾ ಲೈಬ್ರರಿಯ Imperial Gazetteer of India, v. 23, p. 82 ಅಷ್ಟೇ. ಅಂತರ್ಜಾಲದ ಕೊಂಡಿ
http://dsal.uchicago.edu/reference/gazetteer/pager.html?objectid=DS405.1.I34_V23_088.gif . ಬ್ರಿಟಿಷರ ಬಹುಪರಾಕ್ ಇತಿಹಾಸಕಾರರಿಂದ ಅವರು ಬರೆದಿದ್ದೇ ವೇದ್ಯವಾಯಿತೇ ಹೊರತು ಉಳಿದ ದಾಖಲೆಗಳು ತಲೆಮಾರುಗಳ ಅಂತರದಲ್ಲಿ ಮಾಯವಾದವು. ಹಾಗಾಗಿ ಸೋಂದಾದೆದುರಿಗಿರುವ ಕಪ್ಪೆಯ ಬಗ್ಗೆಯೋ, ದ್ವಾರದ ಹನುಮನ ಬಗ್ಗೆಯೋ, ಕೋಟೆಯೊಳಗೆ ಅಡಗಿರಬಹುದಾದ ಇನ್ನೆಷ್ಟೋ ಸ್ಮಾರಕಗಳ ಬಗ್ಗೆಯೋ ನಮಗೊಂಚೂರೂ ತಿಳಿದಿಲ್ಲ. ಆ ಕಡೆಯ ಹಿರಿಯರೇನಾದ್ರೂ ಮಾತಿಗೆ ಸಿಕ್ಕರೆ ತಲೆತಲೆಮಾರುಗಳ ನಂತರವೂ ದಂತಕತೆಗಳಾಗೋ, ಅಚ್ಚರಿಯಾಗೋ ಬದುಕುಳಿದ ಕೆಲ ಮಾಹಿತಿಗಳನ್ನು ದಾಟಿಸಬಹುದಷ್ಟೆ.  ಉದಾಹರಣೆಗೆ: ರಾಜಾರಾಮನನ್ನ ಚೆನ್ನಮ್ಮ ರಕ್ಷಿಸಿದ್ದು ಇದೇ ಕೋಟೆಯಲ್ಲಿ ಅಂತಿದ್ದರು ಒಬ್ಬರು ಹಿರಿಯರು. ಆದರೆ ಇದರ ಪ್ರಮಾಣಕ್ಕೋ, ನಿರಾಕರಣೆಗೋ ಯಾವ ದಾಖಲೆಗಳೂ ಸಿಕ್ಕುತ್ತಿಲ್ಲ. ಚೆನ್ನಮ್ಮನಿಗೂ, ಸೋಂದಾ ಅರಸರ ನಡುವಿನ ಸಂಬಂಧಕ್ಕೇ ಪುರಾವೆಯಿರದಿದ್ದ ಮೇಲೆ ಇದಕ್ಕೆಲ್ಲಿ ಸಿಕ್ಕೀತು ? ಟಿಪ್ಪುವೇ ಮೊದಲ ಬಾರಿಗೆ ಬ್ರಿಟಿಷರ ವಿರುದ್ದ ಪಿರಂಗಿಗಳನ್ನು ಬಳಸಿದವನು ಅನ್ನುತ್ತಾರೆ ಕೆಲವರು. ಆದ್ರೆ ಇಲ್ಲಿನ ಕೋಟೆಯಲ್ಲಿ ಅದಕ್ಕಿಂತ ಮುಂಚೆಯೇ ಬಳಕೆಯಲ್ಲಿದ್ದ ಪಿರಂಗಿಗಳನ್ನು ತದನಂತರ ಸಿಕ್ಕಿದ್ದನ್ನು ಕಾಣಬಹುದು ! ಇಲ್ಲಿಗೆ ಬಂದಾಗ ಎಲ್ಲಾ ಅಯೋಮಯವೆನಿಸಿದ್ರೂ ಅನಿಸೋ ಭಾವವೊಂದೇ. ನಮಗೆ ಗೊತ್ತಿರೋ ಇತಿಹಾಸಕ್ಕಿಂತ ಗೊತ್ತಿಲ್ಲದಿದ್ದು ಎಷ್ಟೋ ಇದೆ ಅಂತ.
Missiles at Sonda Fort



ಸೋಂದಾದಿಂದ ಶಿರಸಿಗೆ :
ಸೋಂದಾದಿಂದ ಉಳಿಕೊಪ್ಪ ಮೂಲಕ ಬಂದರೆ ಸಿಗೋದು ಯಲ್ಲಾಪುರ ಕ್ರಾಸ್ ಅಥವಾ ಸೋಂದಾ ಕ್ರಾಸ್. ಅಲ್ಲಿಂದ ಯಲ್ಲಾಪುರ ೨೪ ಕಿ.ಮೀ. ಅಲ್ಲಿ ಕೆಳಕ್ಕಿಳಿಯದೇ ಸೀದಾ ಮುಂದೆ ಬಂದರೆ ಗುಂಡಿಗದ್ದೆ,ಹಕ್ಕಿಮನೆ, ಪೇರಳಕುಂಬ್ರಿ,ಸಹಸ್ರಲಿಂಗ,ಭೈರುಂಬೆ ಸಿಗುತ್ತೆ. ಸಹಸ್ರಲಿಂಗದಿಂದ ಸೇತುವೆ ದಾಟಿ ಶಿವಗಂಗಾ, ಗಣೇಶಫಾಲ್ ನೋಡಿದ್ದರ ಬಗ್ಗೆ ಹಿಂದಿನ ಲೇಖನದಲ್ಲಿ ಓದಿದ್ದೆವು. ಅಲ್ಲಿಂದ ಮತ್ತೊಂದು ಬದಿಯಿಂದ ನಾವು ಸೋಂದಾಕ್ಕೆ ಬಂದಿದ್ದೆವು. ಈಗ ಮತ್ತೆ ಸಹಸ್ರಲಿಂಗಕ್ಕೇ ಬಂದು ಸೇರೋದ್ರೊಂದಿಗೆ ಸಹಸ್ರಲಿಂಗದ ಮತ್ತು ನದಿ ಶಾಲ್ಮಲೆಯ ಪ್ರದಕ್ಷಿಣೆಯೊಂದನ್ನು ಹಾಕಿದಂಗಾಗಿತ್ತು.ಭೈರುಂಬೆಯಿಂದ ಶಿರಸಿಗೆ ೧೩ ಕಿ.ಮೀ. ಆ ಹಾದಿಯಲ್ಲಿ ಸಿಗೋ ಮುಖ್ಯ ಊರುಗಳಂದ್ರೆ ಆಶೀಸರ, ತಾರಗೋಡು,ದಾಸನಗದ್ದೆ. ಇನ್ನೊಂದಿಷ್ಟು ಸಿಕ್ಕಿದ್ರೂ ನೆನಪಲ್ಲುಳಿದಿದ್ದಿಷ್ಟೆ :-)

ಮುಂದಿನ ಭಾಗದಲ್ಲಿ: ಯಾಣದತ್ತ ನಮ್ಮ ಪಯಣ

2 comments:

  1. ಮತ್ತೊಂದು ಪ್ರವಾಸಕ್ಕೆ ನಮ್ಮನ್ನು ಅಣಿಗೊಳಿಸಿದ ಈ ಬರಹಕ್ಕೆ ಧನ್ಯವಾದಗಳು.

    ReplyDelete