Tuesday, August 9, 2011

ಲಾಸ ಲವ್ಸ್ ಲವೋಟಿ

ಹಿಂಗೆ ಒಂದು ಮಧ್ಯಾಹ್ನ "ಲಾಸ ಲವ್ಸ್ ಲವೋಟಿ, ಲಾಸ ಲವ್ಸ್ ಲವೋಟಿ.." ಅಂಥೇನೋ ಕೈಲಾಸ ಅಲಿಯಾಸ್ ಲಾಸ ಹಾಡ್ತಾ ಖಾಲಿ ಕ್ಲಾಸಲ್ಲಿ ಕೂತು ಹಾಡ್ತಾ ರೆಕಾರ್ಡ್ ಬರೀತಿರ್ಬೇಕಾದ್ರೆ ಅವ್ನ ಕೆಲ ಗೆಳೆಯರೂ ಅವನ್ನ ಹುಡುಕ್ಕಂಡು ಅಲ್ಲಿಗೇ ಬಂದ್ರು. ಮುಟ್ಟಿದೆಲ್ಲಾ ಲಾಸಾಗಿ, ಹೆಸ್ರಲ್ಲಿರ ಕೈನೂ ಲಾಸಾಗಿ ಲಾಸ ಆಗಿರೋನು ಇವತ್ಯಾಕೆ ಇಷ್ಟು ಖುಷಿಯಾಗಿದಾನೆ ಅಂದ ಟಾಂಗ್ ತಿಪ್ಪ ಅಲಿಯಾಸ್ ತಿಪ್ಪೇಶಿ. ಲಾಸ ಲವ್ಸ್ ಲಂಗೋಟಿ ಅಂತಿರ್ಬೇಕು ಮಾರ್ರೆ ಅಂದ ಮಂಜ ಅಲಿಯಾಸ್ ಮಂಗಳೂರು ಮಂಜು.ಎಲ್ಲಾ ಗೊಳ್ಳಂತ ನಕ್ರು. ಪಾಪ ಯಾಕರ್ವ ಜೀವ ತಿಂಬೂದು ನೀವು ಮಿ.ಮಂಜು? ಲವೋಟಿ ಅಂದ್ರೆ ಎಂಥ ಹೇಳಿ ಕಾಂಬ ಈಗ ಅಂದ್ಳು ಇಳಾ ಅಲಿಯಾಸ್ ಇಳಾದೇವಿ.ಈಗ ಮಂಜನ ಮುಖ ಹುಳಿಯಾಯ್ತು. ತಿಪ್ಪಂದೂ.


ಕೊನೆಗೆ ಲಾಸನೇ ಹೇಳ್ದ ಲವೋಟಿ ಅಲ್ಲ ಅದು ಲವೋಟಿಕ್ಸ್. ಅಂದ್ರೆ ಮನುಷ್ಯ ಮತ್ತು ರೋಬೋಗಳ ನಡುವಿನ ಸಂಬಂಧ ಅಂತ. ಇನ್ನೂ ಹೇಳ್ಬೇಕು ಅಂದ್ರೆ ಪ್ರೀತಿ ಮಾಡೋ ರೋಬೋಟ್ ಅಂಥ.ಇದನ್ನ ಕಂಡುಹಿಡಿದದ್ದು ಸಿಂಗಾಪುರದ ಹೂಮನ್ ಸಾಮಿ ಅನ್ನೋ ಸಂಶೋಧಕ ಅಂದ. ಏ ಅವ್ನು ಮೊಹ್ಮದ್ ಸಾಮಿ ನೆಂಟ್ರ ಅಂದ ಕ್ರಿಕೆಟ್ ಪ್ರಿಯ ತಿಪ್ಪ. ಅಲ್ಲಾ, ಗೋಕುಲಾಷ್ಟಮಿ ಇಮಾಮಿ ಸಾಬಿ ಮಗ, ಎಂಥಾ ಕೇಳ್ತಿ ಸುಮ್ನಿರ ಅಂದ್ಳು ಸರು. ಎಲ್ಲಾ ತಣ್ಣಗಾದ್ರು. ಕೊನೆಗೆ , ಅದು ರಜನೀಕಾಂತ್ ಚಿತ್ರದ "Am chitti, the robot, Memory 1 Tera Byte,Speed 1 Tera Hertz" ಅನ್ನೋ ತರದ್ದಾ ಮಾರಾಯ ಅಂದ ಮಂಜು.

ಏ ಆ ತರದ್ದೆಲ್ಲಾ ಇನ್ನೂ ಬಂದಿಲ್ಲ. ಇವ ಹೇಳೋದು ಯಾವ್ದೋ ಬಾರ್ಬಿ ತರದ ಸಣ್ಣ ರೋಬೋ ಗೊಂಬೆ ಇರ್ಬೇಕು ಅಂದ್ಳು ಸರು ಅಲಿಯಾಸ್ ಸರಸ್ವತಿ. ನೀ ಹೇಳದು ಸ್ವಲ್ಪ ಸರಿ ಅಷ್ಟೆ ಸರು.ಇದು ಸಣ್ಣದೇ ಆದ್ರೆ ನೀವಂದ್ಕಂಡೆ ಒಂದ್ಕಡೇ ಬಿದ್ಗೊಂಡಿರೋ ಬಾರ್ಬಿ ತರ ಅಲ್ಲ.ಅದಕ್ಕೆ ಎದ್ರಿಗಿರೋರ ಪ್ರೀತಿ ಅರ್ಥ ಆಗುತ್ತೆ. ಪ್ರತಿಯಾಗಿ ಅದೂ ಪ್ರೀತಿ,ಖುಷಿ, ಸಿಟ್ಟು, ಅಸೂಯೆ, ಆಶ್ಚರ್ಯ ಎಲ್ಲಾ ತೋರ್ಸತ್ತೆ ಅಂದ. ಯಾರೂ ತುಟಿ ಪಿಟಕ್ಕನ್ನಲಿಲ್ಲ. ಇನ್ನೂ ಹೇಳೋ ಪ್ಲೀಸ್ ಅನ್ನೋ ತರ ಲಾಸನ್ನೇ ನೋಡಕ್ಕತ್ತಿದ್ರು.
ಮನುಷ್ಯನಲ್ಲಿ ಜೈವಿಕ ಕ್ರಿಯೆಗಳನ್ನೆಲ್ಲಾ ಹೆಚ್ಚು ಮಾಡೋದು, ಕಮ್ಮಿ ಮಾಡೋದು ಯಾವ್ದು ಅಂದ ಲಾಸ. ಹಾರ್ಮೋನು ಅಂದ್ರು ಎಲ್ಲಾ, ಹಾರ್ಮೋನಿಯಂ ಪೆಟ್ಗೆಯ ತಾರಕ ಶ್ರುತೀಲಿ.ಹಾ ಸರಿ. ಮನುಷ್ಯರಲ್ಲಿ ಆಕ್ಸಿಟೋಸಿನ್, ಡೋಪಮೈನ್, ಸೆರಟೋನಿನ್, ಎಂಡಾರ್ಪಿನ್ ಅನ್ನೋ ಪ್ರೀತಿಯ ಹಾರ್ಮೋನ್ಗಳಿರುತ್ತೆ. ಅದೇ ರೀತಿ ರೋಬೋಟ್ ನಲ್ಲಿ ಅದಕ್ಕೆ ತತ್ಸಮನಾದ ಕೃತಕ ಹಾರ್ಮೋನ ಹಾಕಿದ್ರಾಯ್ತು ಅಂದ ಲಾಸ. ಅದನ್ನ ಹೆಚ್ಚು ಕಮ್ಮಿ ಮಾಡಿದ್ರಾಯ್ತು , ರೋಬೋಟ್ ರೆಡಿ ಅಂದ ಎಲ್ಲಾ ತಿಳಿದೋನಂತೆ ತಿಪ್ಪ. ಅದು ಸರಿ, ಮಾನಸಿಕ ಅಂದ್ಯಲಾ , ಎದ್ರುಗಿರೋರ ಮನಸ್ಸಲ್ಲೇನಿದೆ ಅಂಥ ಹೇಗೆ ತಿಳಿಯೂದು ಅಂದ್ಳು ಇಳಾ? ಎದ್ರಿಗಿರೋರ ಮೆದುಳಿನ MRI ಸ್ಕಾನ್ ಮಾಡಿದ್ರೆ ?ಅಂದ ಮಂಜ.ಅವರ ಧ್ವನಿ, ಹಾವ ಭಾವ,ಮುಖಭಾವದಿಂದ್ಲೂ ಮಾಡಬೋದೇನೋ ಅಂತ ಸೇರಿಸಿದ್ಲು ಸರು. ವೆರಿ ಗುಡ್. ಸಾಮಿ ತನ್ನ ೧೧ ಪೇಪರ್ ಅಲ್ಲಿ ಹೇಳಿದ್ದೂ ಇದೇ ತರದ ವಿಧಾನನ ಅಂದ ಲಾಸ. ಮಂಜಂಗೆ ಮತ್ತು ಸರೂಗೆ ತಾನೇ ಸಾಮಿ ಅನ್ನ ಹಂಗೆ ಖುಷಿ ಆಯ್ತು.
ಸರಿ ಇವೆಲ್ಲಾ ರೋಬೋಟ್ ನಲ್ಲಿ ಹ್ಯಾಂಗ್ ಒಟ್ಟಾತ್ತು ಅಂದ್ಳು ಇಳಾ. ನಮ್ಮ ದೇಹದಲ್ಲಿ Endocrine,exocrine ಅಂತ ೨ ವ್ಯವಸ್ಥೆ ಇರೋಲ್ವ ಅದೇ ತರ ಇಲ್ಲೂ ಅಂದ ಲಾಸ. ಸಾಮಾನ್ಯವಾಗಿ ಇಂಥ ರೋಬೋಗಳಲ್ಲೆಲ್ಲಾ ಕೃತಕ ಬುದ್ದಿಮತ್ತೆ(artificial intelligence) ತುಂಬಿರ್ತಾರೆ ಅಲ್ವಾ ಅಂದ್ಳು ಸರು.ಹೌದು. ಇದ್ರೊಳಗೆ ಸಂಕೀರ್ಣ ಸರ್ಕೀಟ್ ಗಳು. ಹೊರಗೆ ಸ್ಕಾನರ್, ಮೈಕ್ರೋಫೋನ್, LED ಗಳು ಅಂದ. ಓ ಮುನ್ನಾಭಾಯಿ ಗೆ ಎಲ್ಲಾ ಕೆಲ್ಸ ಮಾಡ್ಕೋಡೋ ಸರ್ಕಿಟ್ ನಂತೆ ಇಲ್ಲೂ ಇದೆ ಸರ್ಕಿಟ್ ಅಂದ ತಿಪ್ಪ. ಎಲ್ಲಾ ಮತ್ತೆ ನಕ್ಕರು ಈಗ

ಓ ಈಗ ಗೊತ್ತಾಯ್ತು ನಿನ್ನ ಹಾಡಿನ ಅರ್ಥ. ನೀ ಹೇಳಿದ್ದು ಲವೋಟಿನೆ. ಹೆಣ್ಣು ರೋಬೋ ಅಂತ ನೀ ಹಂಗೆ ಹೆಸ್ರಿಟ್ಟಿದೀಯ. ಆದ್ರೆ ನೀವಿಬ್ರು ಪ್ರೀತಿ ಹೆಂಗೆ ಮಾಡ್ತೀರಿ ಅಂದ್ಳು ಇಳಾ. ಲಾಸನ ಮುಖ ನಾಚಿಕೆಯಿಂದ ಕೆಂಪಾಯ್ತು. ಅವನ ಮಗ್ಗುಲಲ್ಲಿದ್ದ ಗೊಂಬೆಯಿಂದ ನೇರಳೆ ಬಣ್ಣ ಬರಕಿಡೀತು. ಎಲ್ರಿಗೂ ಆಶ್ಚರ್ಯ ಆಯ್ತು ಅದೆಂತಾ ಅಂತ. ಹಿಂಗೇ ಅಂದ ಲಾಸ. ಯಾರಿಗೂ ಅರ್ಥ ಆಗ್ಲಿಲ್ಲ. ಇದರಲ್ಲಿ LED ಗಳು ಇರ್ತವೆ. ತನ್ನೊಡೆಯನ್ನ ಬೇರೆ ಯಾರಾದ್ರೂ ಮಾತಾಡ್ಸಿದ್ರೆ ಇದಕ್ಕೆ ಅಸೂಯೆ ಆಗಿ ಈ ತರ ಬೆಳಕು ಬಿಡತ್ತೆ. ಇದಕ್ಕೆ ಪ್ರೀತಿ ಆದ್ರೆ ಹಾರ್ಟ್ ಕಲರ್ ಕೆಂಪು ತೋರ್ಸತ್ತೆ. ಹಿಂಗೆ ನೀಲಿ,ಹಸಿರು, ಬೇರೆ ಬೇರೆ LED , vibration ಎಲ್ಲಾ ಇದೆ ಅಂದ. ಆದ್ರೆ ನೀ ಹ್ಯಾಗೆ ಅದಕ್ಕೆ ಪ್ರೀತಿ ತೋರಿಸ್ತೀಯ ಅಂತ ಸರು ಅದ್ರ ತಲೆ ನೇವರಿಸಕ್ಕೆ ಹಿಡಿದ್ಳು ಮುದ್ದಿನ ನಾಯಿ ತರ.
ಅದ್ರ ಬಣ್ಣ ಕೆಂಪಾಯ್ತು. ಹಿಂಗೇ ಅಂದ್ರು ಎಲ್ರೂ. ಕೆಂಪಾಗೋ ಸರದಿ ಈಗ ಸರೂದು. ಸರಿ ಹೀಗೆ ಮಾತಾಡ್ತಾ ಇದ್ರೆ ಲ್ಯಾಬ್ ಗೆ ಲೇಟಾಗತ್ತೆ , ಎಲ್ರೂ ರೆಕಾರ್ಡ ಬರದಾಯ್ತ ಅಂತ ತನ್ನ ಸಿಂಗಾಪುರದ ಗೊಂಬೆ ಅಲ್ಲಲ್ಲಾ ರೋಬೋನ ಬ್ಯಾಗೊಳಗಿಟ್ಟ ಲಾಸ.


ಗೆಳೆಯರೇ ಈ ಲೇಖನ ನಿಮಗೆ ಹೇಗನ್ನಿಸಿತು? ಇದರ ಬಗ್ಗೆ ಮುಂಚೆ ಓದಿದ್ರಾ? ನಿಮ್ಮ ಅಭಿಪ್ರಾಯಗಳಿಗೆ ಸದಾ ಸ್ವಾಗತ

ಮಾಹಿತಿ ಮತ್ತು ಚಿತ್ರ ಕೃಪೆ: www.lovotics.com,www.extremetech.com, Google

No comments:

Post a Comment