Sunday, March 10, 2013

ಕೆಳದಿ

ಹಿಂಗೇ ಕಾರ್ಯಕ್ರಮದಲ್ಲಿ, ಎಫ್ಬಿ ಹರಟೆ ಕಾರ್ಯಕ್ರಮದಲ್ಲಿ ಸಿಕ್ಕೋರು, ಮಾತಾಡ್ತಾ ಆಡ್ತಾ ಪರಿಚಯ ಆದೋರು ಮಾತಾಡ್ತಾ ಆಡ್ತಾ ಊರಿನ ಸುದ್ದಿ ಬಂದೇ ಬರುತ್ತದೆ
ಪ್ರ:ನಿಮ್ಮೂರು ಯಾವದು ?
ಉ:ಸಾಗರದತ್ರ ಒಂದಳ್ಳಿ
ಪ್ರ:ಓ ಸಾಗರದತ್ರ ಎಲ್ಲಾ ?
ಉ: ಸಾಗರದತ್ರ ಕೆಳದಿ ಹೇಳಿ
ಪ್ರ:ಓಹೋ, ಕೆಳದಿ ಯಾರ್ಮನೆಯಾ ಮಾಣಿ ?
ಉ: ಕೆಳದಿ ಅಲ್ಲ. ಅದರತ್ರ ಇರೋ ಅಕ್ಕಿಮನೆ..

ಹಿಂಗೆ ನಮ್ಮೂರು ಕೇಳೋರಿಗೆಲ್ಲಾ ನನ್ನ ಪರಿಚಯ ಮಾಡ್ಕೊಳೋದು ಹೀಗೇನೆ :-)
ಅಂದಂಗೆ ಕೆಳದಿಗೆ ಬರದಿದ್ದರೂ ಕೆಳದಿ ಚೆನ್ನಮ್ಮ, ಶಿವಪ್ಪ ನಾಯಕನ ಹೆಸರು ಹೇಳಿ ಆ ಕೆಳದಿ ಅಂದ್ರೆ ಸುಮಾರು ಜನಕ್ಕೆ ಗೊತ್ತಾಗತ್ತೆ. ಗೊತ್ತಾಗದಿದ್ದವರಿಗೆ ಹೇಗೆ ಹೇಳದಪ್ಪಾ ? ಅದಕ್ಕೇ ಈ ಲೇಖನ

ಕೆಳದಿ ಅನ್ನೋದು ಶಿವಮೊಗ್ಗ ಜಿಲ್ಲೆಯ,ಸಾಗರ ತಾಲೂಕಿನ ಒಂದೂರು. ಸಾಗರದಿಂದ ೮ ಕಿ.ಮೀ ದೂರ.
ಸಾಗರದಿಂದ ಕೆಳದಿಗೆ ಹೋಗೋರು ನಮ್ಮೂರು ಅಕ್ಕಿಮನೆಯ ಮೇಲೇ ಹೋಗ್ಬೇಕು. ಅಲ್ಲಿಂದ ಮೂರು ಕಿ.ಮೀ ಮಾತ್ರ ಆಗ್ತಿದ್ದರಿಂದ ನಮ್ಮನೆಗೆ ಬಂದ ಕೆಳದಿ ನೋಡಬೇಕು ಅಂದ ಎಲ್ಲಾ ನೆಂಟರಿಗೆಲ್ಲಾ ನಾನೇ ಮರಿ ಗೈಡ್ ! ಯಾವ ನೆಂಟರೂ ಬರದಿದ್ದರೂ ೩-೪ ತಿಂಗಳಿಗೊಮ್ಮೆ ಆದ್ರೂ ಸೈಕಲ್ ಹತ್ತಿ ಕೆಳದಿಗೆ ಹೋಗ್ತಿದ್ದೆ. ಅಲ್ಲಿನ ದೇವಸ್ಥಾನದಲ್ಲಿ ಕೂತರೆ, ಆ ತಣ್ಣಗಿನ, ಪ್ರಶಾಂತ ವಾತಾವರಣದಲ್ಲಿ ಏನೋ ಸಮಾಧಾನ. ಅಲ್ಲಿನ ದೇವಸ್ಥಾನದಲ್ಲಿ ಓದಿದ, ನೋಡಿದ, ಕೇಳಿದ ಕಥೆಗಳೇ ಈ ಲೇಖನಕ್ಕೆ ಸ್ಪೂರ್ತಿ.

ಇತಿಹಾಸ:
ಕೆಳದಿಗೆ ಹೋಗ್ತಾ ನಮ್ಮೂರು ದಾಟಿದ ಮೇಲೆ ಸಿಗೋ ಊರು ಹಳ್ಳಿಬೈಲು. ಕೆಳದಿಯಲ್ಲಿ ಈಗಿರೋ ರಾಮೇಶ್ವರ, ವೀರಭದ್ರ ದೇವಸ್ಥಾನಗಳ ಕಾಲಕ್ಕೆ ಹೋಗೋಣ.. ಹಳ್ಳಿಬೈಲಲ್ಲಿದ್ದ ಚೌಡಗೌಡ, ಭದ್ರಗೌಡ ಎಂಬ ಅಣ್ಣತಮ್ಮಂದಿರಿಗೆ ಯಾದವ, ಮುರಾರಿ ಎಂಬ ಸೇವಕರು. ಒಮ್ಮೆ ಚೌಡಗೌಡನಿಗೆ ಹೊಲ ಉಳುವ ಸಮಯದಲ್ಲಿ ನೇಗಿಲಿಗೆ ನಿಧಿಯ ಕೊಪ್ಪರಿಗೆಯ ಬಾಯಿ ಸಿಗುತ್ತದೆ. ಅದನ್ನು ತೆಗೆಯಲು ಹೆದರಿ ಹಾಗೇ ಬಿಟ್ಟ ಆತನಿಗೆ ರಾತ್ರಿ ನರಬಲಿ ಕೊಟ್ಟರೆ ಆ ನಿಧಿಯನ್ನು ಪಡೆಯಬಹುದೆಂಬ ಕನಸು ಬೀಳುತ್ತದೆ. ಒಡೆಯನಿಗಾಗಿ ಯಾದವ, ಮುರಾರಿ ತಮ್ಮ ನಾಗಮುರಿ(೨) ಕತ್ತಿಯಲ್ಲೇ ಬಲಿಯಾಗುತ್ತಾರೆ. ನಂತರ ಪಡೆದ ಸಂಪತ್ತಿನಿಂದ ಚೌಡಗೌಡ ಪುಟ್ಟ ಪಾಳೇಗಾರನಾಗಿ ಸುತ್ತಮುತ್ತಲ ಊರುಗಳನ್ನು ಆಳಲಾರಂಭಿಸುತ್ತಾನೆ. ಸುದ್ದಿ ತಿಳಿದ ವಿಜಯನಗರ ಅರಸರು ಈತನನ್ನು ಬಂಧಿಸುತ್ತಾರೆ.ಅದೇ ಸಮಯದಲ್ಲಿ ಬೈಲಹೊಲದ ಪಾಳೇಗಾರ ವಿಜಯನಗರದ ವಿರುದ್ದ ದಂಗೆ ಎದ್ದಿರುತ್ತಾನೆ. ಅವನನ್ನು ಸದೆ ಬಡಿದ ಚೌಡಗೌಡನ ಮತ್ತೆ ವಿಜಯನಗರದ ಕೃಪೆಗೆ ಪಾತ್ರನಾಗಿ ಮುದ್ರೆಯೊಂದನ್ನು ಪಡೆಯುತ್ತಾನೆ. ಹುಟ್ಟೂರಿಗೆ ಮರಳಿ ರಾಮೇಶ್ವರ ದೇವಸ್ಥಾನವನ್ನು ಕಟ್ಟಿಸುತ್ತಾನೆ. ನಂತರ ಕೆಳದಿ ವೀರಭೂಮಿ(೩) ಎಂದರಿತು ಅಲ್ಲೇ ವಿಜಯನಗರಕ್ಕೆ ಅಧೀನನಾಗಿ ತನ್ನ ಸಾರ್ಮಾಜ್ಯ ಸ್ಥಾಪಿಸುತ್ತಾನೆ. ನಂತರ ವಿಜಯನಗರದ ಸದಾಶಿವರಾಯನ ಕೃಪೆಗೆ ಪಾತ್ರ ಎಂದು ಈತನ ಮಗ ಸದಾಶಿವನಾಯಕನೆಂದು ರಾಜ್ಯವಾಳಲು ಪ್ರಾರಂಭಿಸುತ್ತಾನೆ..

Murari -Vijaya

ಕೆಳದಿಗೆ ಹೋಗುತ್ತಿದ್ದಂತೆಯೇ ಎದುರಿಗೆ ರಾಮೇಶ್ವರ ದೇವಸ್ಥಾನ. ರಾಮೇಶ್ವರನ ಎಡಭಾಗದಲ್ಲಿ ಪಾರ್ವತಿ, ಬಲಭಾಗದಲ್ಲಿ ವೀರಭದ್ರನ ಗುಡಿಗಳಿವೆ. ಹೊಯ್ಸಳ ದ್ರಾವಿಡ ಶೈಲಿಯಲ್ಲಿರೋ ದೇವಸ್ಥಾನಗಳು. ಮೊದಲು ರಾಮೇಶ್ವರನ ಸನ್ನಿಧಿಗೆ ಹೋಗೋಣ.

ಇಲ್ಲಿ ಇಕ್ಕೇರಿ, ಬನವಾಸಿಗಳಲ್ಲಿದ್ದಂತೆ ಆಳೇತ್ತರದ ನಂದಿಯಿರದೇ, ಶಿವನೆದುರು ಪುಟ್ಟ ನಂದಿಯಿದ್ದಾನೆ. ಬೆಳಗ್ಗಿನ ಸಮಯದಲ್ಲಿ ಅಥವಾ ಸಂಜೆ ೫ ರ ಮೇಲೆ ಹೋದರೆ ದೇವರ ದರ್ಶನ ಪಡೆಯಬಹುದು. ಇಲ್ಲದಿದ್ದರೆ ಸರಳ ಹಿಂದಿನಿಂದ ದರ್ಶನ ಭಾಗ್ಯ. ಇಲ್ಲಿನ ನೆಲದಲ್ಲಿ, ಕೆಲವು ಶಿಲ್ಪಗಳ ಕೆಳಗೆ ಹಳೆಗನ್ನಡದ ಬರಹಗಳಿವೆ. ಅವುಗಳನ್ನೆಲ್ಲಾ ಓದುವ ಆಸಕ್ತಿಯಿದ್ದರೆ ಓದಬಹುದು. ಹಳಗನ್ನಡದ ಕೆಲವು ಅಕ್ಷರಗಳು ಅರ್ಥವಾಗದೇ ಹ್ಯಾಪು ಮೊರೆ ಹಾಕೋ ಮೊದಲು ಪಕ್ಕದಲ್ಲಿನ ಪಾರ್ವತಿ ಗುಡಿಗೆ ಹೋಗೋಣ. ಇಲ್ಲಿನ ಛಾವಣಿಯೇ ಇಲ್ಲಿನ ಆಕರ್ಷಣೆ.  ಇಲ್ಲಿರೋ ೪೦-೫೦ ಬಗೆಯ ಹೂವಿನ ಕೆತ್ತನೆಗಳಲ್ಲಿ ಪ್ರತಿಯೊಂದೂ ಭಿನ್ನವಾಗಿರೋದು ಆ ಶಿಲ್ಪಿಗಳ ಕರಕುಶಲತೆಗೆ, ಸೃಜನ ಶೀಲತೆಗೆ ಸಾಕ್ಷಿ. ಕತ್ತೆತ್ತಿ ನೋಡಿ ಕತ್ತು ನೋವು ಬಂದರೂ ಒಂದು ಹೂವು ಇನ್ನೊಂದರ ತರ ಇರುವುದು ಹುಡುಕುವುದು ಕಷ್ಟ. ಅತಿಶಯೋಕ್ತಿ ಎನಿಸಿದರೆ ಮುಂದಿನ ಬಾರಿ ಹೋದಾಗ ಒಂದೇ ತರ ಇರೋ ಯಾವುದಾದರೂ ಎರಡು ಹೂಗಳಿವೆಯೋ ಎಂದು ಕೂಲಂಕುಷವಾಗಿ ಪರೀಕ್ಷಿಸಬಹುದು !

ಇಲ್ಲಿನ ಮೇಲ್ಚಾವಣಿಯ ಮೂಲೆ ಮೂಲೆಗಳಲ್ಲಿ  ದೇವಾನು ದೇವತೆಗಳಿದ್ದಾರೆ. ಈ ಭಾಗದಲ್ಲಿ ಮೇಲ್ಚಾವಣಿಯಲ್ಲಿ ಈ ರೀತಿಯ ಕೆತ್ತನೆಯನ್ನು ನೋಡಿದ್ದು ಇಲ್ಲೇ ಮೊದಲು. ಇಲ್ಲಿ ೩೨ ಕೈಗಳ ಗಣಪತಿಯ ವಿಗ್ರಹವೊಂದಿದೆ. ಇಕ್ಕೇರಿಯ ಅಘೋರೇಶ್ವರ ದೇಗುಲದ ೩೨ ಕೈಗಳ ಗಣಪನನ್ನು ಮಾಡುವ ಮೊದಲು ಸಣ್ಣ ಪ್ರಮಾಣದಲ್ಲಿ (ಮಾಡೆಲ್ ಅನ್ನುವಂತೆ) ಇದನ್ನು ಕೆತ್ತಿದ್ದರಂತೆ.
ಅದನ್ನು ನೋಡಿ ದೇವಿಗೆ ಕೈ ಮುಗಿದು ಹಾಗೇ ತಾಗಿಕೊಂಡಂತಿರೋ ರಾಮೇಶ್ವರನ ಗುಡಿಗೆ ಬಂದು ಅದರ ಪಕ್ಕದಲ್ಲಿರೋ ವೀರಭದ್ರನ ಗುಡಿಗೆ ಹೋಗೋಣ. ಪಾರ್ವತಿ- ರಾಮೇಶ್ವರ ದೇಗುಲಗಳ ಮಧ್ಯೆ ಇರೋ ಪ್ರದಕ್ಷಿಣಾ ಪಥದ ಇಕ್ಕೆಲಗಳ ಗೋಡೆಗಳಲ್ಲಿ ಅನೇಕ ದೇವಾನುದೇವತೆಗಳ, ಅಪ್ಸರೆಯರ, ರಾಮಾಯಣ ಮಾಹಾಭಾರತಗಳ ಚಿಕ್ಕ ಚಿಕ್ಕ ವಿಗ್ರಹಗಳನ್ನು ನೋಡಬಹುದು.
ganda berunda- outside temple



ವೀರಭದ್ರನ ಗುಡಿಯಲ್ಲಿ ಹಾಗೇ ತಲೆಯೆತ್ತಿ ನೋಡಿದರೆ ಕೆಳದಿ ಸಾಮ್ರಾಜ್ಯದ ಲಾಂಛನ ಗಂಢಭೇರುಂಡ ಕಾಣುತ್ತದೆ. ಆಗ ಕೆಲವು ಸಾರ್ಮಾಜ್ಯಗಳದ್ದು ಆನೆ ಲಾಂಛನವಾಗಿತ್ತಂತೆ, ಕೆಲವದ್ದು ಸಿಂಹ. ಈ ಆನೆ, ಸಿಂಹಗಳೆರಡನ್ನು ತನ್ನ ಕಾಲುಗಳಲ್ಲಿ ಬಂಧಿಸಿದ ಎರಡು ತಲೆಯ ಗಂಢಭೇರುಂಡವನ್ನು ಲಾಂಛನವನ್ನಾಗಿಸಿದ ಕೆಳದಿಯ ಅರಸರು ತಮ್ಮ ಸಾರ್ಮಾಜ್ಯ ಎಲ್ಲರಿಗಿಂತಲೂ ಶಕ್ತಿಶಾಲಿಯಾಗಿ ಬೆಳೆಯಲೆಂಬ ಆಸೆ ಪಟ್ಟಿದ್ದರು ಎನ್ನುತ್ತಾರೆ ಕೆಲವರು.

ವೀರಭದ್ರನ ಗುಡಿಗೆ ಕೈ ಮುಗಿದು ಅಲ್ಲೇ ಆ ಗರ್ಭಗೃಹದ ಬಾಗಿಲನ್ನು ನೋಡಿದರೆ ಮೇಲ್ಗಡೆ ಕೃಷ್ಣನ ಪುಟ್ಟ ವಿಗ್ರಹ ಕಾಣುತ್ತದೆ. ವಿಜಯನಗರದ ಸಾರ್ಮಾಜ್ಯದ ಶ್ರೀ ಕೃಷ್ಣದೇವರಾಯನಿಗೆ ಸಾಮಂತರಾದ ಕೆಳದಿ ಅರಸರ ಗೌರವವನ್ನು ಇದು ಬಿಂಬಿಸುತ್ತದಂತೆ.  ವೀರಭದ್ರ ದೇವಸ್ಥಾನದಿಂದ ಗಂಡಭೇರುಂಡ ಇರುವ ದಿಕ್ಕಿನ ಬಾಗಿಲಲ್ಲಿ ಹೊರಬಂದರೆ ಒಂದು ಧ್ವಜ ಸ್ಥಂಬ ಸಿಗುತ್ತದೆ. ಸಪ್ತ ಮಾತೃಕೆಯರು, ಗಣಪತಿ ಇದರ ವಿಶೇಷತೆ. ಇದೇ ಕಂಬದ ಮೇಲೆ ದೇಗುಲ ಸ್ಥಾಪನೆಯ ಬಗ್ಗೆ ಹಳಗನ್ನಡದಲ್ಲಿ ಬರೆಯಲಾಗಿದೆ. ಹಾಗೇ ದೇಗುಲವನ್ನೊಮ್ಮೆ ಪ್ರದಕ್ಷಿಣೆ ಹಾಕೋಣ.



ದೇಗುಲದ ಗೋಡೆಗಳ ಮೇಲೆ ದಶಾವತಾರದ ಕೆತ್ತನೆಗಳಿವೆ. ಅಲ್ಲೇ ಒಂದೆಡೆ ನಾಗರಬನವಿದೆ.  ಪ್ರತಿಯೊಂದಕ್ಕೂ ಪ್ರತ್ಯೇಕ ನಮಸ್ಕಾರ ಹಾಕಲು ಹೋದರೆ ಅಲ್ಲೇ ಐದತ್ತು ನಿಮಿಷವಾದರೂ ಕಳೆದುಹೋಗುತ್ತದೆ! ಅಲ್ಲಿರೋ ಎಲ್ಲಾ ನಾಗರಗಳಿಗೂ ಒಮ್ಮೆ ಮನಸ್ಸಲ್ಲೇ ವಂದಿಸಿ ಬರುವಾಗ ಆಗಿನ ಕಾಲದ ಪಣತವನ್ನು ಕಾಣಬಹುದು. ಅಲ್ಲಿಂದ ಹೊರಳಿ ಮತ್ತೆ ದೇಗುಲದ ಗೋಡೆಗಳತ್ತ ಬಂದರೆ ವಾಸ್ತುಪುರುಷ, ಶುಕಮುನಿ ಮತ್ತು ಗಿಳಿ, ನರಸಿಂಹ ಹೀಗೆ ಹಲವಾರು ಕೆತ್ತನೆಗಳನ್ನು ನೋಡಬಹುದು. ಇಲ್ಲಿಗೆ ಬಂದವರು ವಾಸ್ತುಪುರುಷನ ಪಕ್ಕದಲ್ಲಿರೋ ಆಗಿನಕಾಲದ ಅಳತೆಪಟ್ಟಿಯನ್ನು ನೋಡಲು ಮರೆಯದಿರಿ.


ವಾಸ್ತುಪುರುಷನ ಪಕ್ಕದಲ್ಲಿ ತಾಗಿಕೊಂಡಿರೋ ವೀರಭದ್ರ ರಾಮೇಶ್ವರ ದೇಗುಲದ ಮಧ್ಯೆ ಒಂದು ಕಳ್ಳದಾರಿ. ವೀರಭದ್ರ ದೇಗುಲದ ಪ್ರಧಾನ ಬಾಗಿಲ ಬಳಿ ತೆರೆಯೋ ಈ ಕಳ್ಳದಾರಿಯಿಂದ ದೇಗುಲದ ಎಲ್ಲಾ ದಿಕ್ಕಿನ ಬಾಗಿಲು ಹಾಕಿದರೂ ಒಳ-ಹೊರಗೆ ಹೋಗಬಹುದು ! ಅದು ಹೇಗಿದೆ ಅಂತ ಹೇಳುವುದಕ್ಕಿಂತ ಅಲ್ಲಿ ಹೋಗಿ ನೋಡಿದರೇ ಚೆನ್ನಾಗಿ ಕಾಣಬಹುದು. ಈ ಕಳ್ಳದಾರಿಯ ಅಕ್ಕಪಕ್ಕದಲ್ಲೂ ಕೆತ್ತನೆಗಳಿವೆ. ಇಲ್ಲಿ ದೇಗುಲ ಅಂದರೆ, ಅದರ ಒಳಗೆ-ಹೊರಗೆ ಎಲ್ಲೆಲ್ಲಾ ಕೆತ್ತನೆಗಳು..

ಹಾಗೇ ಹೊರಗೆ ಬರುವಾಗ ಬಲಿಯಾದ ಮುರಾರಿ-ವಿಜಯ ತಮ್ಮ ಪತ್ನಿಯೊಂದಿಗಿರುವ ಗೊಂಬೆಗಳನ್ನು ನೋಡಬಹುದು. ಕೆಳದಿಯ ತೇರಿನ ಸಮಯದಲ್ಲಿ ಇವನ್ನು ಹೊರ ತೆಗೆಯಲಾಗುತ್ತದೆ.
ಹಾಗೇ ಹೊರ ಬರುತ್ತಿದ್ದಂತೆ ಒಂದು ವಿಶಾಲವಾದ ಪಡಸಾಲೆ. ಅಲ್ಲೆಲ್ಲಾ ಕಲ್ಲಲ್ಲಿ ಕೆತ್ತಿದ ಪಗಡೆಯ ಮಣೆಗಳು ಕಾಣಸಿಗುತ್ತದೆ. ಅಂದ ಹಾಗೇ ಇಲ್ಲಿನ ದೇಗುಲದ ಒಳಗೂ ಅಲ್ಲಲ್ಲಿ ಪಗಡೆ, ಮತ್ತೆ ಹುಲಿ ಹಸು ಎಂಬೋ ಒಂದು ಆಟದ ಮಣೆಗಳು ಕಾಣುತ್ತದೆ. (ಹುಲಿ ಹಸು ಮಣೆ ಹೇಗಿರುತ್ತೆ ಅಂದಿರಾ ? ಅದರ ಚಿತ್ರವೊಂದನ್ನು ಹಿಂದೊಮ್ಮೆ ತೆಗೆದ ನೆನಪು. ಸಿಕ್ಕಿದರೆ ಖಂಡಿತಾ ಹಾಕುತ್ತೇನೆ.)

ಹಾಗೇ ಹೊರಬಂದಾಗ ಎದುರಿಗೆ , ಎಡಭಾಗದಲ್ಲಿ ಕೆಳದಿ ಮ್ಯೂಜಿಯಂ ಕಾಣುತ್ತದೆ. ಇದು ಸಂಜೆ ಐದರವರೆಗೆ ತೆಗೆದಿರುತ್ತದೆ. ಇದರಲ್ಲಿ ಕೆಳದಿಯ ಬಗ್ಗೆ ಏನಿದೆ ಅನ್ನೋದಕ್ಕಿಂತ ಏನಿಲ್ಲ ಅಂತ ಕೇಳೋದೇ ಉತ್ತಮ ಅನಿಸುತ್ತದೆ. ನಾಣ್ಯ, ಹಲತರದ ಶಾಸನ, ತಾಳೇಗರಿ ಹೀಗೆ ಇತಿಹಾಸದ ಪುಟಗಳೇ ಬಂದಿಯಾಗಿ ಇಲ್ಲಿ ಕುಳಿತಂತೆ, ನೋಡುಗರನ್ನು ತನ್ನ ಕಾಲಕ್ಕೆ ಕೊಂಡೊಯ್ಯುತ್ತಿರುವಂತೆ ಭಾಸವಾಗುತ್ತದೆ. ಈಗ ಅಲ್ಲೇ ಸ್ವಲ್ಪ ಮುಂದೆ (ಸಾಗರಕ್ಕೆ ಮರಳುವ ಹಾದಿಯಲ್ಲಿ)ಹೊಸ ಪ್ರಾಚ್ಯ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ. ಕೆಳದಿಗೆ ಬಂದವರು ಇದನ್ನು ನೋಡದೇ ಹೋದರೆ ಅನೇಕ ಅಪೂರ್ವ ಕ್ಷಣಗಳನ್ನು ಕಳೆದುಕೊಂಡಂತೆಯೇ.
 
ಹಾಗೇ ವಾಪಾಸ್ ಮರಳುವಾಗ ಗೋಪಾಲಕೃಷ್ಣನ ಗುಡಿಯನ್ನು, ಅದರ ಪಕ್ಕದಲ್ಲಿ ಮನೆಯನ್ನೇ ಮೀರಿ ಬೆಳೆಯಹತ್ತಿರುವ ಬೃಹತ್ ಹುತ್ತವನ್ನು ನೋಡಬಹುದು. ಹಾಗೇ ಮುಂದೆ ಬಂದಾಗ ರಾಮೇಶ್ವರ ಕ್ರೀಡಾಂಗಣ. ಅದನ್ನು ದಾಟಿ ಮುಂದೆ ಬಂದಾಗ ಹಳ್ಳಿಬೈಲಿನ ತಿರುವು. ಆ ತಿರುವಿನಲ್ಲಿ ಇಳಿಯುವಾಗ ಹಳ್ಳಿಬೈಲು ಎಂಬ ಬೋರ್ಡು ಕಾಣುತ್ತದೆ. ಇದೇ ಚೌಡಪ್ಪನಾಯಕನ ಹಳ್ಳಿಬೈಲು. ಅಲ್ಲೇ ಎದುರಿಗೆ ಪಾಳುಬಿದ್ದ ಕೆರೆ ಕಾಣುತ್ತದೆ. ಇದು ಬಲಿಯಾದ ವಿಜಯ-ಮುರಾರಿಯ ನೆನಪಿಗೆ ಕಟ್ಟಿಸಿದ ಕೆರೆಯಂತೆ. ಎರಡು ಕೆರೆಗಳನ್ನು ಕಟ್ಟಿಸಿದ್ದರಂತೆ. ಇನ್ನೊಂದು ಎಲ್ಲಿದೆಯೋ ಗೊತ್ತಿಲ್ಲ.

ಅಂದ ಹಾಗೆ ಇಂದು ಕೆಳದಿಯಲ್ಲಿ ಅಲ್ಲಿನ ಖ್ಯಾತ ಸಂಶೋಧಕರಾದ ವೆಂಕಟೇಶ್ ಜೋಯಿಸ್ ಅವರ "ಕೆಳದಿಯ ಇತಿಹಾಸ" ಎಂಬ ಸೀಡಿ ಬಿಡುಗಡೆಯಾಗುತ್ತಿದೆಯಂತೆ. ನಾನು ಈ ಲೇಖನ ಬರೆಯೋ ಹೊತ್ತಿಗೆ ಅಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ನಾಡಿದ್ದು ಕೆಳದಿಯಲ್ಲಿ ವರ್ಷದ ತೇರು ಮತ್ತು ಜಾತ್ರೆ. ಈ ವರ್ಷ ಅದಕ್ಕೆ ಹೋಗಲಾಗದ ಬೇಸರದೊಂದಿಗೆ, ಸಾಗರದ ಜಾತ್ರೆಗಾದರೂ ಹೋಗಬಹುದೇನೋ ಎಂಬ ಆಸೆಯೊಂದಿಗೆ ವಿರಮಿಸುತ್ತಿದ್ದೇನೆ. ಕೆಳದಿಯ ಬಗ್ಗೆ ನಾನು ಹೇಳಿದ್ದಕ್ಕಿಂತ ಹೇಳಲಾಗಿದ್ದೇ ಹೆಚ್ಚಿರಬಹುದು. ಅಂತಹ ಅಂಶಗಳು ಕಂಡರೆ ತಾವೆಲ್ಲಾ ಈ ಕಿರಿಯನ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಹಂಚಿಕೊಳ್ಳಬಹುದು.

ಹೋಗುವ ಮಾರ್ಗ:
ಶಿವಮೊಗ್ಗೆಯಿಂದ ೮೦ ಕಿ.ಮೀ
ಸಾಗರದಿಂದ ೮ ಕಿ.ಮೀ
ಸಾಗರದಿಂದ ಕನಿಷ್ಟ ಪ್ರತೀ ಅರ್ಧಗಂಟೆಗಾದರೂ ಒಂದರಂತೆ ಕೆಳದಿಗೆ ಬಸ್ಸುಗಳಿವೆ

ಕೆಳದಿಯ ಬಗೆಗಿನ ದಂತಕತೆಗಳು
೧) ಶಿವಲಿಂಗ ಸಿಕ್ಕ ಕತೆ:
 ಹೀಗೇ ಒಂದು ದಿನ ಹೊಲವೊಂದರ ಹುತ್ತದ ಮೇಲೆ ಹಸು ಹಾಲು ಸುರಿಸುತ್ತಿರುವ ಆಶ್ಚರ್ಯದ ದೃಶ್ಯವನ್ನು ಚೌಡಗೌಡ ನೋಡುತ್ತಾನೆ. ಆ ಹುತ್ತವನ್ನು ಅಗೆದು ನೋಡಿದಾಗ ಅಲ್ಲೊಂದು ಶಿವಲಿಂಗ ಸಿಗುತ್ತದೆ.ಅದಕ್ಕೆ ಪುಟ್ಟಗುಡಿಯನ್ನು ಕಟ್ಟಿಸುತ್ತಾನೆ.
ನಂತರ ವಿಜಯನಗರ ಸಾಮ್ರಾಜ್ಯದ ಮೊಹರನ್ನು ಪಡೆದು, ಅವರ ಅಧೀನರೆಂದು ಸಾಮ್ರಾಜ್ಯ ಕಟ್ಟೋ ಸಂಭ್ರಮದಲ್ಲಿ ರಾಮೇಶ್ವರ ದೇಗುಲವನ್ನು ಕಟ್ಟಿಸುತ್ತಾನೆ

೨)ನಾಗರಮುರಿ:
ಯಾದವ, ಮುರಾರಿ ಸಹೋದರರು ಒಮ್ಮೆ ಹೊಲವೂಳುತ್ತಿದ್ದಾಗ ಖಡ್ಗವೊಂದು ಅವರ ನೇಗಿಲಿಗೆ ಸಿಗುತ್ತದೆ. ಅದರ ಮಹತ್ವವೇನೆಂದು ಅರಿಯದಿದ್ದರೂ ಅದನ್ನು ತಂದು ಮನೆಯ ಸೂರಿನ ಮೇಲೆ ಇಡುತ್ತಾರೆ. ಕೆಲದಿನಗಳಲ್ಲೇ ಮನೆಯ ಸೂರಿನ ಮೇಲೆ ಬಂದು ಕೂರುವ ಯಾವುದೇ ಹಕ್ಕಿಯನ್ನು ಈ ಕತ್ತಿ ಹಾವಿನ ರೂಪ ತಾಳಿ ಕೊಲ್ಲುವ ಸೋಜಿಗವನ್ನು ಈ ಅಣ್ಣತಮ್ಮಂದಿರು ನೋಡುತ್ತಾರೆ. ಅಂದೇ ಅದನ್ನು ನಾಗರಮುರಿ ಅಂತ ಹೆಸರಿಟ್ಟು, ಚೆನ್ನಾಗಿ ತೊಳೆದು ಮನೆಯ ಒಳಗೆ ತಂದು ಇಡುತ್ತಾರೆ.  

೩)ಕೆಳದಿಯೆಂಬೋ ವೀರನೆಲ:
ಕೆಳದಿ ಚೌಡಪ್ಪಗೌಡ/ಚೌಡಪ್ಪನಾಯಕ ವಿಜಯನಗರದಿಂದ ತನ್ನೂರಿಗೆ ಮರಳುತ್ತಿರುವಾಗ ಒಂದೆಡೆ ಚಿಗರೆಯೊಂದು ಚಿರತೆಯನ್ನು ಬೆನ್ನಟ್ಟೋ ದೃಶ್ಯವನ್ನು ನೋಡುತ್ತಾನೆ. ಈ ಅಪೂರ್ವ ದೃಶ್ಯದಿಂದ ಬೆರಗಾದ ಆತ ಈ ನೆಲ ಸಾಮಾನ್ಯದ್ದಲ್ಲ. ಇದು ವೀರಭೂಮಿ ಎಂದು ತನ್ನ ಸಾಮ್ರಾಜ್ಯವನ್ನು ಅಲ್ಲೇ ಪ್ರಾರಂಭಿಸುತ್ತಾನೆ.

ಕೆಳದಿಯ ಸುತ್ತಮುತ್ತಲು ಈಗಲೂ ಅಲ್ಲಲ್ಲಿ ಯುದ್ದದಲ್ಲಿ ಮಡಿದ ವೀರರ ವೀರಗಲ್ಲುಗಳು, ಸತಿಯಾದವರ ಸತಿ ಕಲ್ಲುಗಳು ಸಿಕ್ಕುತ್ತವೆ. ನಮ್ಮೂರು ಅಕ್ಕಿಮನೆಯ ಪಕ್ಕದ ಹಾದಿಯಲ್ಲಿ, ಸಾಗರಕ್ಕೆ ಹೋಗೋ ಹಾದಿಯ ಪಕ್ಕದಲ್ಲೊಂದು ವೀರಕಲ್ಲುಗಳನ್ನು ಚಿಕ್ಕಂದಿನಲ್ಲೂ ನೋಡುತ್ತಲೇ , ಅವುಗಳಲ್ಲಿನ ಭಿನ್ನತೆಯ ಹಿಂದಿರೋ ಹಲವು ಅರ್ಥಗಳನ್ನು ನಿಧಾನವಾಗಿ ತಿಳಿಯುತ್ತಾ ನಾವೆಲ್ಲಾ ದೊಡ್ಡವರಾಗಿದ್ದು.ಈಗಲೂ ಊರಿಗೆ ಹೋದರೆ ಹಸುಗಳ ಕೋಡು ತಿಕ್ಕಲೋ, ಇನ್ಯಾವುದಕ್ಕೋ ಸಹಾಯಕವಾಗಿ ಗಾಳಿ ಮಳೆಗೆ ಮೈಯೊಡ್ಡಿರುವ ಆ ಕಲ್ಲುಗಳು ಕಾಣುತ್ತವೆ. ತಮ್ಮ ದುಸ್ಥಿತಿಗೆ ಯಾರಿಗೆ ಶಾಪ ಹಾಕಬೇಕೆಂಬುದು ತಿಳಿಯದ ಇತರ ಅಸಂಖ್ಯ ಶಿಲ್ಪಗಳಂತೆ ಇವೂ ಕಾಲನಲ್ಲಿ ತಮ್ಮ ದನಿಯನ್ನು ಬೆಸೆದು ಮೂಕವಾಗಿವೆ.

ಚಿತ್ರಕೃಪೆ:
ಸನಾತನ ಸಮರ್ಥ, ಜಿಗಳೇಮನೆ

8 comments:

  1. ಕೆಳದಿಯ ಬಗ್ಗೆ ಹಾಗು ದೇವಸ್ಥಾನದ ಬಗೆಗಿನ ಲೇಖನ ತುಂಬಾ ಸೊಗಸಾಗಿದೆ. ಪ್ರತಿಯೊಂದು ಪುಟ್ಟ ಪುಟ್ಟ ವಿವರವನ್ನು ಒಪ್ಪವಾಗಿ ಬರೆದಿರುವ ಶೈಲಿ ನಿಮ್ಮ ಆಸಕ್ತಿ, ಪರಿಶ್ರಮದ ಗುರುತಾಗಿ ಕಾಣುತ್ತದೆ. ಒಳ್ಳೆಯ ಲೇಖನ ಇಕ್ಕೆರಿಗೆ ಬಂದಿದ್ದೆ, ಆದರೆ ಕೆಳದಿಗೆ ಹೋಗಲಾಗಿರಲಿಲ್ಲ. ಮುಂದಿನ ಭೇಟಿಯಲ್ಲಿ ಖಂಡಿತ ಕೆಳದಿಗೆ ಮುತ್ತಿಗೆ ಹಾಕಿ ಬರುವೆ. ಸೊಗಸಾದ ಲೇಖನ ಅಭಿನಂದನೆಗಳು

    ReplyDelete
  2. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಶ್ರೀಕಾಂತ್ ಜೀ.. ಮುಂದಿನ ಬಾರಿ ಬಂದಾಗ ಖಂಡಿತಾ ಬನ್ನಿ :-)

    ReplyDelete
  3. ತುಂಬಾ ಚೆನ್ನಾಗಿದೆ , ನಮ್ಮನೆಗೆ ಇಷ್ಟು ಹತ್ತಿರದ ಐತಿಹಾಸಿಕ ಸ್ಥಳದ ಬಗ್ಗೆ ನನಗೇ ಬಹಳ ಮಾಹಿತಿಪೂರ್ಣ ಎನಿಸಿತು. ಸರಳ ಸುಂದರ ಬರಹ. ಅಭಿನಂದನೆಗಳು

    ReplyDelete
    Replies
    1. ಧನ್ಯವಾದಗಳು ಹೆಗ್ಡೇರೆ :-)

      Delete
  4. ಅದೆಷ್ಟೊ೦ದೆಲ್ಲ ಬರೆತ್ಯೋ ಮಾರಾಯ!!! ಫುಲ್‍ಟೈಮ್ ರೈಟರ್ ಆಪುದೊಳ್ಳೇದು...

    ReplyDelete
    Replies
    1. ಪ್ರಶಾಂತವನಕ್ಕೆ ಇದು ನಿಮ್ಮ ಮೊದಲ ಭೇಟಿ ಅಂದ್ಕತ್ತಿ !
      ಮೆಚ್ಚುಗೆಗೆ ಧನ್ಯವಾದಗಳು.
      ಬರಹಗಾರ ಆಗಕ್ಕು ಅಂತ ಇದ್ದು.. ಪೇಪರಿಗೆಲ್ಲಾ ಕಳಿಸ್ತಿರ್ತಿ.ಬರಕಾತಲ..

      Delete