Tuesday, June 14, 2011

ಮಳೆಗೊಂದು ಮನವಿ

ಕಾರ್ಮುಗಿಲುಗಳ ತಾಯೆ
ಮನತಣಿಸಲು ಮಳೆವೀಯೆ
ನಿನ್ನ ಕರೆಯೆ ದೀಪಕವರಿಯೆ
ಸ್ತುತಿಸಲೊಳ್ಳೆ ರೂಪಕವರಿಯೆ
ಮನ ಮುದುಡೋ ಮೊದಲು
ಮಣ್ಣಿನ ಮಕ್ಕಳ ಕಾಯೆ|1|

ಬಿತ್ತಿದ ಬೀಜಗಳೊಣತುತಲಿಹವು
ನೀರಾಕರಗಳು ಬತ್ತುತಲಿಹವು
ಹಸಿರರಸುತಲಿಹ ಹಸಿದ ರಾಸುಗಳು
ಧಗೆ ತಾಳದೆ ಎಲ್ಲೆಡೆ ಬಿಸಿಯುಸಿರು
ಸಾಲಕೆ ಸಿಕ್ಕಿಹ ಹೊದ್ದವ ಹಸಿರು|2|

ಕಣ್ತೆರೆದು ನೋಡಮ್ಮ ತಾಯೆ
ಮಳೆಹನಿಸಿ ತಣಿಸೆಮ್ಮ ಮಾಯೆ
ಉರಿಬಿಸಿಲ ತಡೆಯುವ ಛಾಯೆ
ಹಸಿ ಹೊನ್ನನರಳಿಸೋ ಕಲೆಯೇ
ನಮ್ ನರಳಿಸುವುದು ನಿಂಕಳೆಯೇ?|3|

ಇಳಿದು ಬಾ, ತಾಯೇ ಸುರಿದು ಬಾ
ಮಲೆನಾಡ ಮುಡಿಗೆಂದು, ಸೀಮೆ ಬಯಲೆಂದು
ಕಡಲ ತಡಿಗೆ ದಯ ತೋರಿ ಬಾ
ಹಸಿರುಕ್ಕಿಸೆ ಲಗುಬಗನೆ ಬಾ
ಧಗಧಗಿಸೋ ತಾಪ ತಣಿಸು ಬಾ
ಗಹಗಹಿಸೋ ಅಲಕ್ಷ್ಮಿ ಅಟ್ಟು ಬಾ
ಬಾಯ್ಬಿಡೊ ಮುಂಚೆ ಭೂಮಿಯುಳಿಸು ಬಾ

No comments:

Post a Comment