Tuesday, June 14, 2011

ಅಮ್ಮನಿಗೊಂದು ಪ್ರಣಾಮ

ಗರ್ಭದಲೇ ನೀ ನಗುತಾ ಸಹಿಸಿದೆ
ನನ್ನ ಒದೆತಗಳ ಪೆಟ್ಟ
ಹೇಗೆ ಮರೆಯಲಿ ನನ್ನ ತಿದ್ದಲು
ನಿನ್ನ ಸಾತ್ವಿಕ ಸಿಟ್ಟ|1|

ಮೊದಲ ತೊದಲನೂ ಇಷ್ಟಪಟ್ಟೆ
ಕೆಟ್ಟ ಮಾತಿಗೆ ಪೆಟ್ಟು ಕೊಟ್ಟೆ
ಬೀಳದಿರಲಿ ದ್ರುಷ್ಟಿಯೆಂದು ಬೊಟ್ಟನಿಟ್ಟೆ
ನವಮಾಸಗಳು ನನ್ನ ಹೊತ್ತೆ
ನೀ ರಕ್ತ ಹಂಚಿ ಆಕಾರವಿತ್ತೆ|2|

ಆಹಾರವಿತ್ತೆ, ನಿನ್ನ ನಿದ್ರೆ ಬಿಟ್ಟೆ
ನನ್ನಿಷ್ಟಕಾಗೆಷ್ಟು ಕಷ್ಟ ಪಟ್ಟೆ
ನಿನ್ನಿಷ್ಟದಂತೆ ನಾನೇನು ಕೊಟ್ಟೆ?
ಬರೀ ದುಖ: ಅಳುಗಳೇ?
ಯಶ,ಸಂತೋಷದ ಬಳೆಗಳೇ ?|3|

ನನ್ನ ನೋವುಗಳು ನಿನ್ನದೆಂದೆ
ನೀ ಮುಳ್ಳಲಿದ್ದರದು ಹೂವು ಎಂದೆ
ನೀ ಪಟ್ಟ ಕಷ್ಟ ನಾ ಅರಿಯೆನೆಂದೆ?
ಒಡೆದ ಕಾಲ್ಗಳು, ಸೂರ್ಯ ಸುಟ್ಟ
ಮುಖ ಕಾಣದಿರಲೆಂದು ದೂರ ನಿಂದೆ|4|

ಮರೆಯಲ್ಹೇಗೆ ನೀನಿರುವ ನೆಲ
ಹಿತನುಡಿಗಳ ಅನುಭವದ ಫಲ
ಕಷ್ಟಗಳನೆ ಹೆದರಿಸುವ ಛಲ
ನಿನಗೆ ನಮನ ಮತ್ತೊಂದು ಸಲ|5|

No comments:

Post a Comment