Saturday, December 3, 2011

ಚಿಟ್ಟೆಯ ಹಾಡು

ಕಂಬಳಿಯ ಹುಳವೆಂದು ದೂರತಳ್ಳದಿರಿನ್ನು
ಮತ್ತೆ ಹುಟ್ಟಿರುವೆ ನಾ ಚಿಟ್ಟೆಯಾಗಿ
ಹಸಿರ ಕಾನನದಲ್ಲಿ ಮರೆಯಾಗೆ ಘಮಘಮಿಸೊ
ಪುಷ್ಪಗಳ ಸುಮ ಹೀರೋ ಚಿಟ್ಟೆಯಾಗಿ|1|
 

ಪ್ರಖರ ಭಾಸ್ಕರನಿಗೂ ಅಡ್ಡ ನಿಂತಿಹ ಗುಡ್ಡ
ಮೇಘಗಳ ತಡೆಹಿಡಿವೆ ಮಳೆಯ ಒಡ್ಡೊಂದು
ಮಂದಮಾರುತ ತಡೆವೆ ತಂಪನೀಯೆಂದು
ಅಲ್ಲೆ ಸುಳಿವೆನು ನಾನು ಚಿಟ್ಟೆಯಾಗಿ|2|

ಹೂವ ಕಂಪಿನ ಜೊತೆಗೆ
ಹಸಿರ ಹೊದಿಕೆಯ ತಂಪು
ಕಣ್ಮನವ ತಣಿಸುವ ಬಣ್ಣವಾಗಿ
ಪರಾಗ ರೇಣುಗಳ
ಹೊರುವುದೇ ಸಹಾಯ
ಹರ್ಷದೊಡೆ ಬಳಿಸಾರಿ ಮಿತ್ರನಾಗಿ|3|


ನಿಲುಕದಾಗಸ ಮರೆತು
ಭುವಿಯಲ್ಲೆ ಹಾರುವೆನು
ಬಣ್ಣ ರೆಕ್ಕೆಯ ಬಡಿದು ಹಕ್ಕಿಯಂತೆ
ನೋಡಿದರೆ ಮನಸರಳಿ ಹಾಯೆಂದು
ಸುಖವಾಗಿ ಹಾರಬಯಸುವೆ
ನೀನೂ ಚಿಟ್ಟೆಯಂತೆ
|4|

No comments:

Post a Comment