Saturday, November 12, 2011

ಬೈಲೂರ ಬಸ್ಸು ಹತ್ತಿ

ಮನೇಲಿ ಕಾರ್ಯಕ್ರಮ ಇದೆ, ಬರಲೇ ಬೇಕು ಅಂತ ಕರೆದಿದ್ರು ಅನ್ಸತ್ತೆ. ಹನ್ನೊಂದೂಕಾಲಿಗೆ ಹಸಿರು ಬಣ್ಣದ ಬಸ್ಸು ಬರತ್ತೆ , ಅದ್ರಲ್ಲಿ ಬಾ ಅಂತ ಸೂಚನೆ. ಸರಿ, ವಿಶ್ವಾಸದ ಮೇಲೆ ಕರೆದ ಮೇಲೆ ಬಿಡೋಕಾಗತ್ತಾ? ಹೂಂ ಜೈ ಅಂತ ಹನ್ನೊಂದ್ಘಂಟೆಗೇ ಬಸ್ಟಾಂಡಲ್ಲಿ ಹಾಜರು.ಎಲ್ಲಿಳ್ಯದು, ಯಾವ ಬಸ್ಸು ಎಂತನೂ ಗೊತ್ತಿಲ್ಲ. ಫೋನಲ್ಲಿ ಕೇಳಿದ್ದಷ್ಟೆ. ಹೋಗ್ಬೇಕಾಗಿರೋ ಊರ ಹೆಸ್ರನ್ನೇಳಿ ಕಂಡಕ್ಟ್ರಣ್ಣಂಗೆ ಕೇಳ್ದಾಗ "ಬೇಲೂರು ಗಾಡಿ ಬರತ್ತೆ ಹನೊಂದು ಕಾಲಿಗೆ. ಅದ್ರಲ್ಲೋಗಿ" ಅಂದ. ನಾ ಹೋಗ್ಬೇಕಾಗಿದ್ದು ಸೈದೂರು ದಾರಿ. ಬೇಲೂರಿಗೂ ಸೈದೂರಿಗೂ ಎಲ್ಲಿಂದೆಲ್ಲಿ ಸಂಬಂಧ ಅಂತ ಅರ್ಥ ಆಗ್ಲಿಲ್ಲ.ಹಂಗಂತಾ? ಗಣೇಶ ಸ್ಟೈಲಲ್ಲಿ ತಲೆ ಕೆರ್ಕಳಕೆ ಆಗತ್ತಾ? ಅದೂ ಬಸ್ಟಾಂಡ್ ಬೇರೆ :-)

ಹನ್ನೊಂದು ಕಾಲಾಯ್ತು. ಬಂದಿರ್ಲಿಲ್ಲ ಬಸ್ಸು. ಬಿಸಿಲು ಬೇರೆ ಏರ್ತಾ ಇತ್ತು. ಬಸ್ಟಾಂಡಲ್ಲೊಂದು ಅಂಗಡಿ ಎದ್ರಿದ್ದ ನೆರಳಲ್ಲಿ ಜಾಗ ಖಾಲಿ ಇತ್ತು. ನಂತರನೇ ನೆರಳನರಸಿ ಸುಮಾರು ಜನ್ರಿದ್ರು ಬಿಡ್ರಿ.. ಕಾದ ತಗಡ ಶೀಟು. ಕೆಳಗೆ ನಾನು. ಕೇಳಬೇಕೆ? ಸೆಖೆ ಹೊಡ್ತ. ಬೆವ್ರೊರ್ಸದು, ಗಡಿಯಾರ ನೋಡದು ಇದೇ ಕೆಲ್ಸ ಆಯ್ತು. ಹನ್ನೊಂದು ಇಪ್ಪತ್ತೈದು. ಅಲ್ಲಿದ್ದೋರಲ್ಲಿ ಅನ್ಸತ್ತೆ ಊರಿಗೋಗೋರೂ ಇದ್ರು ಹೇಳೋದು ಅವರ ಮಾತಿಂದ ಗೊತ್ತಾಯ್ತು. ಇದ್ದಿದ್ರಲ್ಲಿ ಅದೊಂದು ಸಮಾಧಾನ. ಅದೇ ಊರಿಗಂತೂ ಹೋಗ್ತಾರೆ. ಅವ್ರ ಮನೇಗೆ ಹೋಗ್ಬೋದು ಅಂತ ಮನ್ಸು ಹೇಳಕ್ಕಿಡೀತು. ಆದ್ರೂ ಕೇಳಕ್ಕೆ ಬಾಯಿ ಬರ್ಲಿಲ್ಲ. ಫಿಲ್ಮಲ್ಲಿ ಹೀರೋಗೆ ಹೀರೋಯಿನ್ ಎದ್ರು ಮಾತು ಬರಲ್ವಲ ಹಂಗೆ ಅಂದ್ಕಂಡ್ರಾ? ಥೋ..ಅವ್ರೆಲ್ಲಾ ವಯಸ್ಸಾದವ್ರು :-)

ತಡ್ಯಕ್ಕಾಗ್ದೇ ಕಾಲು ಮತ್ತೆ ಕಂಡಕ್ಟ್ರಪ್ಪನ ಹತ್ರನೇ ಎಳ್ಕಂಡೋಯ್ತು. ಅಲ್ಲೊಬ್ಬ ಹೋತಲ್ರಿ ಬಸ್ಸು ಹನ್ನೊಂದು ಕಾಲಿಗೇನೆ ಅಂದ. ಏ ಇಲ್ಲ ಕಣ್ರಿ, ಇಲ್ಲೇ ಕಾಯ್ತಿದೀನಿ ಅರ್ಧ ಘಂಟೆ ಆಯ್ತು ಅಂದೆ. ಥೋ. ಬೇಲೂರು ಬಸ್ಸು ಬಸ್ಟಾಂಡಿಗೆ ಬಂದೂ ಆಯ್ತು. ಹೋಗೂ ಆಯ್ತು ಅಂದ ಇನ್ನೊಬ್ಬ.ಮುಂದಿನ ಬಸ್ಸು ಒಂದೂಕಾಲಿಗೆ ಅಂದ ಮತ್ತೊಬ್ಬ. ಥೋ, ಒಳ್ಳೇ ಕೆಲ್ಸ ಆಯ್ತಲ ಅಂತ ಮತ್ತೆ ಮಾಮೂಲಿ ತಗಡು ಕೆಳಗೆ ಬಂದೆ. ಅಲ್ಲಿದ್ದೋರು ಗೌರ್ಮೆಂಟು ಬಸ್ಟಾಂಡ್ಕಡೆಗೆ ಹೊಂಟ್ರು. ನಮ್ಮ ಸಾಗರದಲ್ಲಿ ಗೌರ್ಮೆಂಟು ಬಸ್ಡಿಪೋ ಆಗಿದ್ದೀತ್ತೀತ್ಲಗೆ. ಹಂಗಾಗಿ ಕೆಲೋ ಊರಿಗೆ ದಿನಕ್ಕೊಂದೋ, ಎರಡು ಬಸ್ಸಷ್ಟೇ ಹೋಗದು.

ಅಲೆಲೆಲೆ, ಶಿಮೋಗ ಕಡೇ ಇಂದ ಹಸ್ರು ಬಸ್ಸು ಬಂದಗಾಯ್ತು. ಓ, ಬೇಲೂರು ಅಲ್ಲಲ್ಲ ಬೈಲೂರು ಬಸ್ಸು. ಅದೇ. ಇವತ್ತಿಪ್ಪತ್ತು ನಿಮ್ಷ ಲೇಟು ಅವ. ಬರ್ತಿದ್ದಂಗೆ ಫುಲ್ಲು ರಷ್ಷಾಯ್ತು. ಸೀಟು ಸಿಕ್ಕಿದ್ದಕ್ಕೂ ಕಾದಿದ್ದಕ್ಕೂ ಸಾರ್ಥಕ ಆಯ್ತು. ಅಂತೂ ಬಂತಲ್ಲಪಾ, ಒಂದೂಕಾಲ್ವರೆಗೆ ಕಾಯದು ತಪ್ತು ಹೇಳಿ ಖುಷಿ ಆಗಿದ್ದೊಂದೇ ಬಂತು. ಎಂತಕೆ ಅಂದ್ರಾ? ಡ್ರೈವರು ಗಾಡೀನ ತಗಂಡೋಗಿ ಗ್ಯಾರೇಜತ್ರ ನಿಲ್ಸಿ ಬಿಡೋದ? ಇದ್ನ ಸ್ವಲ್ಪ ವೆಲ್ಡಿಂಗ್ ಮಾಡಿ ಸ್ವಾಮಿ ಅಂತ. ತಗಳಪಾ, ಏಜೆಂಟ್ರೂ ಬಂದ್ರು ಟಿಕೇಟು ಬುಕ್ಕು ಹಿಡ್ಕಂಡು. ಗಾಡಿ ಹೊಂಡ್ಸದು ಲೇಟಾಗಿ ಇರೋ ಜನಾನು ಬಸ್ಸಿಂದ ಓಟ ಕಿತ್ರೆ ಹೆಂಗೆ ಹೇಳೋ ಡೌಟು ಬಂತೇನೋ ಅವ್ರಿಗೆ. ಎಲ್ಲಾ ನೂರರ ನೋಟು, ಹತ್ತರ ನೋಟು ಕೊಡೋರು. ಎಷ್ಟು ಜನಕ್ಕೆ ಅಂತ ಅವ ಚಿಲ್ರೆ ಕೊಡ್ತಾನೆ.ಜೇಬು ತಡಕೀ ತಡಕೀ ಸುಸ್ತಾಗೋದ್ನೇನೂ ಅವ್ನೂ. "ದಿನಾ ಬರೋರಿಗೆ ಚಿಲ್ರೆ ತರೋಕಾಗಲ್ವಾ" ಅಂತ ಕೆಲ ಹುಡುಗ್ರಿಗೆ ಬಯ್ದ. ವಯಸ್ಸಾದವ್ರೂ ಅದೇ ಕೆಲ್ಸ ಮಾಡಿ ಒಂದು ಸ್ಮೈಲು ಕೊಟ್ರು.. :-)

ಗಾಡಿ ಮುಂದೆ ಹೋಗತ್ತೆ, ಹಿಂದೆ ಬರತ್ತೆ.. ಅದೆಷ್ಟು ದಿವ್ಸದ್ದು ವೆಲ್ಡಿಂಗುಳ್ಸಿಕೊಂಡಿದ್ನೇ ಪುಣ್ಯಾತ್ಮ. ಎಲ್ಲಾ ಒಂದೇ ದಿನ, ಅದೂ ನಾ ಹತ್ತಿದ ದಿನವೇ ಆಗ್ಬೇಕೆ. ಮೊದ್ಲೇ ಬಸ್ಸೂ ಕಾದು ಹೋಗಿದೆ. ಒಳಗೆ ಕೂತು ಗಡಿಯಾರ ನೋಡೋ ನಮ್ಮ ಪಾಡು..ತಣ್ಣಗಿರೋ ನಿಮಗೆಲ್ಲಾ ಈ ಸಂಕಟ ಅರ್ಥ ಆಗ್ದೇ ಇರ್ಬೋದು. .. ಬೆಂಗ್ಳೂರಿಂದ ಒಮ್ಮೆ ಬೇರೆ ಎಲ್ಲಿಗಾರೂ ಸಾಧಾರಣ ಸರ್ಕಾರಿ ಬಸ್ಸಲ್ಲಿ ಹೋಗಿ. ಅದೂ ಮಧ್ಯಾಹ್ನ ಹನ್ನೊಂದೂ ಮುಕ್ಕಾಲು ಘೋರ ಬಿಸ್ಲಿರೋ ಹೊತ್ತಿಗೆ. ಆ ಬಸ್ಸು ಹೊರಡೋಕಿಂತ ಕಾಲು ಘಂಟೆ ಮುಂಚೆ ಅದ್ರಲ್ಲಿದ್ರೇನೆ ನಿಮ್ಗೆ ನಾ ಈಗೇಳ್ತಿರೋ ಸುಖ ಏನು ಹೇಳಿ ಅರಿವಾಗೋದು.. ಸ್ವಲ್ಪ ಓವರ್ ಆಯ್ತಾ? :-) ಸರಿ, ಉತ್ತರ ಕರ್ನಾಟಕದಷ್ಟು, ಅಥವಾ ದೆಲ್ಲಿಯಷ್ಟು ಸೆಖೆ ಇಲ್ಲಿಲ್ಲ ಬಿಡಿ, ಪುಣ್ಯ.. :-)

ಅಂತೂ ಹೊರಡ್ತು ಬಸ್ಸು. ಬಸ್ಸು ಹೊರಟ ಮೇಲೆ ಏಜೆಂಟನದೇನು ಕೆಲಸ. ಅವ ಇಳ್ಕಂಡ. ಇದ್ರಲ್ಲೆಂತಾ ವಿಶೇಷ ಅಂದ್ರಾ? ಅವ ಸುಮಾರು ಜನ್ರಿಗೆ ಚಿಲ್ರೆ ಕೊಟ್ಟಿರ್ಲಿಲ್ಲ ಮಾರ್ರೆ :-) ಕಂಡೆಕ್ಟರು ಬರ್ತಿದ್ದಂಗೆ ಹಿಡ್ಕಂಡ್ರು ಜನ. ನಂಗೆ ಎಂಟು ರೂಪಾಯಿ, ನಂಗೆ ಮೂವತ್ತು ಹೇಳಿ. ಆ ಪುಣ್ಯಾತ್ಮ ಏಜೆಂಟು ಟಿಕೇಟ್ಮೇಲೂ ಬರ್ದಿರ್ಲಿಲ್ಲ. ಕಂಡೆಕ್ಟ್ರಿಗೂ ಹೇಳಿರ್ಲಿಲ್ಲ. ಹಂಗಂತಾ ಚಿಲ್ರೆ ಕೊಡ್ದೇ ಇರಕ್ಕಾಗತ್ತಾ? ಕೊಡಕ್ಕೋಗಿ ಯಾರಿಗಾದ್ರೂ ಹೆಚ್ಚು ಕೊಟ್ರೆ ಕಂಡಕ್ಟರು ದಿವಾಳಿ ಕೊನೆಗೆ.ಯಾರ್ಯಾರಿಗೆ ಅಂಥ ಕೊಡದು. ಪುಕ್ಸಟೆ ಸಿಕ್ಕದು ಅಂದ್ರೆ ನಂಗೊಂದು, ಮನೆಗೊಂದು ಅನ್ನೋ ತರದವ್ರು ಎಲ್ಲ ಕಡೆಗೋ ಇರ್ತಾರಲ್ಲ ಮಾರ್ರೆ:-)

ಏಜೆಂಟಿಗೆ ಫೋನು ಹಚ್ಚಿದರೆ ಅವ ತೆಗೀತಾನೆ ಇಲ್ಲ. ಕರೆದರೂ ಕೇಳದೆ ಕಾಲರ್ ಟ್ಯೂನ್. ಥೋ, ಬಸ್ಸು ನಿಲ್ಸು ಮಾರಾಯ ಅಂದ ಡ್ರೈವರಿಗೆ. ಇದೊಳ್ಳೆ ತಾಪತ್ರಯ ಆತಲ. ಕೊನೆಗೂ ಎತ್ತಿದ ಆ ಏಜೆಂಟ. ಡ್ರೈವರಿಂದ ಹಿಂದೆ ಎರಡನೇ ಸೀಟಲ್ಲಿರೋ ಬುರ್ಖಾಗೆ ೩೦ , ಉದ್ದ ಸೀಟಲ್ಲಿರೋ ಯಜಮಾನ್ರಿಗೆ ೮ ಅಂದ. ಏಜೆಂಟಿಗೆ ಅರ್ಥ ಆಗ್ಲಿಲ್ಲ. ಫೋನು ಅವ್ರಿಗೇ ಕೊಟ್ಟ ಕಂಡೆಕ್ಟರು. ಏ, ಪಕ್ಕದ ಅಜ್ಜಿಗೆ ಕೇಳಿ, ಮುಂದಿನ ಅವ್ರಿಗೆ ಕೇಳಿ , ಇವ್ರಿಗೆ ಕೇಳಿ ಅಂತ ಹಲವಾರು ಸಾಕ್ಷಿ ಹೇಳಿ ನೀವು ಹಿಂಗೆಲ್ಲಾ ಮೋಸ ಮಾಡ್ಬೋದಾ ಅಂತ ಮಿನಿ ಲೆಕ್ಚರು ತಗಂಡ್ರು ಅವ್ರು. ಇತ್ಲಗೆ ಕಂಡಕ್ಟ್ರನ ಕರೆನ್ಸಿ ಪುಕ್ಸಟೆ ಖಾಲಿ ಆಗ್ತಿದೆ. ಆ ಕಡೆ ಏಜೆಂಟಿಗೆ ಏನು ಆಗ್ತಿದ್ಯೋ ಗೊತ್ತಾಗ್ಲಿಲ್ಲ. ಸ್ವಲ್ಪ ಹೊತ್ತು ಪುಕ್ಕಟೆ ಮನೋರಂಜನೆ ಆಯ್ತು ಕೆಲೋರಿಗಂತೂ. ಕೊನೆಗೆ ಕೊಡ್ತಾರೆ ಬಿಡಮ್ಮಾ ಅಂತ ಸಮಾಧಾನ ಮಾಡಿದ್ವಿ.

ನಾ ಹೊರಟಿದ್ದ ಬಸ್ಸನ್ನ ಅದ್ರ ಹಿಂದಿನ ಬಸ್ಸು ಸೈಡಾಕಿ ಅದೇ ಬೇಗ ಹೋಗದು, ನಾ ಹೊರಟ ಬಸ್ಸೇ ದಾರೀಲಿ ಕರ ಹಾಕದು(ಪಂಕ್ಚರ್ ಇತ್ಯಾದಿ), ಇಲ್ಲ ಅದಕ್ಕೇ ಟ್ರಾಫಿಕ್ ಜ್ಯಾಮಾಗದು ಇಂತದ್ದೆಲ್ಲಾ ನೋಡಿದೀನಿ. ಅದ್ರೆ ಪುಣ್ಯ ಅಂತದ್ದೇನೂ ಆಗ್ಲಿಲ್ಲ ಇವತ್ತು. ಒಳ್ಳೇ ತಣ್ಣನೆ ಗಾಳಿ ಸವೀತಾ ಅನ್ಸತ್ತೆ ಮನೆಗೆ ಆರಾಮಾಗಿ ಹೋಗಿ ಮುಟ್ಟಿದ್ವಿ. ಎದ್ರಿಗಿನ ಅಡಕೆ ಮರ ಗಾಳಿಗೆ ಒಲಿತಾ ಇತ್ತು. ನಮ್ಮುಖನೂ ಸಂತೋಷದಿಂದ ನಲಿತಾ ಇತ್ತು :-) :-)

4 comments:

  1. ಅಯ್ಯೋ..ಪ್ರಶಸ್ತಿ...ಯಮ್ಮನೆಗೆ ಬಂದಿದ್ದು ಹೆಂಗೆ ಅಂತಾನೇ ಗೊತ್ತಾಗಿರ್ಲೆ...ಇಲ್ಲಿ ನಿನ್ನ ಕಥೆ ಮೂಲಕ ನಮ್ಮೂರಿಗೆ ಬರೋದು ಎಸ್ಟು ಕಸ್ಟ ಅಂತ ಬಹಳ ಚೆನ್ನಾಗಿ ಬರೆದು ನಿರೂಪಿಸಿದ್ದೆ...ಇನ್ಮೇಲೆ ಸರಿಯಾಗಿ ಹೆಂಗೆ ಹೇಳ್ಲಕ್ಕು ಅನ್ನೋ ನನ್ನ ಆಲೋಚನೆಗೆ ಒಂದು ದಿಕ್ಚೂಚಿ ಇದು..ಅಂತ ತಿಳಿತಾ ನಿನ್ನ ಬರವಣಿಗೆ ಚೆನ್ನಾಗಿದ್ದು ಅಂತ ಹೇಳೋದನ್ನೇ ಮರೆತೆ ನೋಡು...

    ReplyDelete
  2. ಹ ಹ. ಧನ್ಯವಾದ ಅನ್ಸತ್ತೆ.. ಮೊದಲನೇ ಸಲ ಬರೋರಿಗೆ, ಅದೂ ಅವತ್ತು ನಮ್ಮ ಅದೃಷ್ಟ ಸರಿ ಇಲ್ದೇ ಇದ್ದ ಕಾರಣ ಸ್ವಲ್ಪ ಕಷ್ಟ ಆತು ಅಷ್ಟೆ..

    ReplyDelete