Monday, November 21, 2011

ಬೇಸರದ ಭಾವಗಳು


ಹಾಡಲೆಂಬತಿಯಾಸೆ ಹೋಗಿ ಕೇಳಿತು ಗುರುವ
ಸದ್ಗುರುವೆ ಎನಗೊಂದು ಸ್ವರವ ನೀಡಿ
ಧ್ವನಿಯೆ ಇಲ್ಲವೊ ನಿನಗೆ ಹೋಗಾಚೆಗೆ
ಇದ ಕೇಳಿದಾ ಬಾಲ ಬೇಸರಿಸಿ ಸರಿಹೋದ
ಬರಹದಲಿ ಗುರಿಯರಸಿ ಕಳೆದುಹೋದ
ಇಂದೆನ್ನ ಕಾಡಿಹುದು ಮತ್ತದೇ ಪ್ರಶ್ನೆ
ಸಿಗುವುದೇ ಸ್ವರವವಗೆ ಲಿಪಿಯಾಚೆಗೆ?||

ಎಂದು ಬಾರದ ನರಿಗಳಿಂದು ಬಂದಿವೆಯೆಂದು
ಹಿಂದು ಮುಂದರಿಯದೇ ನಲಿಯಬೇಡ
ಮೋಸಗಳ ಮುಖವಾಡದಿಂದಿರುವ ಮೊಗ ಮರೆತು
ಮನದ ಬಾಗಿಲ ತೆರೆದು ಬೆರೆಯೆಬೇಡ
ಸತ್ತ ಜೀವವ ನೋಡಿ ಸಾಂತ್ವನಕೆ ಬಂದಿಹರೆ?
ಕರಗದಿರು ಇವರು ಬಂದಿಹುದು ಹಣಕೆ
ನಂಬಿದರೆ ಆರುವುದು ಇರುವ ಹಣತೆ||

 ಹೇಳಲಾಗದ ಹೇಡಿ ಕವನಗಳ ಗೀಚಿಹನು
ಎಂದೆಯಾ ನೀ ಪ್ರಿಯೆ ಮರೆಗೆ ಸರಿಯುವ ಮುನ್ನ
ಬುದ್ದಿಯಲ್ಲವೇ ಎನಗೆ ಒದ್ದರೂ ಬಿದ್ದಿರುವೆ
ನಲ್ಲೆ ನೀ ಒಂದು ದಿನ ಬದಲಾಗೋ ಬಯಕೆಯಲಿ
ಬರೆಯಲ್ಯಾಕಿನ್ನು ನಾ ಮನಸರಿಯದಾಕೆಗೆ
ಪ್ರತಿವಿಷಯದಲೂ ತಪ್ಪೆ ಹಿಡಿವಾಕೆಗೆ?
ಬೊಮ್ಮ ಬರೆದಿಹನಂತೆ ನನಗಾವ ಸಖಿಯನ್ನು
ಕುರುಡಿಯೋ,ಕುಂಟಿಯೋ ಸರಿಹೊಂದೊ ಸತಿಯನ್ನು
ನಿನ್ನ ನೆನಪಲೆ ಸಾಯಲೆನಗೆ ಮರುಳೆ?||

ಸಪ್ಪೆಯಾಗಿಹುದಲ್ಲೋ ನಿನ್ನ ಇಂದಿನ ಬರಹ
ಉಪ್ಪು ಖಾರವೆ ಇರದ ಚಟ್ನಿಯಂತೆ
ನೆತ್ತಿಗೇರಿತೆ ಸೊಕ್ಕು ಮತ್ತಿನಂತೆ?
ಮನ್ನಿಸೋ ಗುರುವರ್ಯ, ಹುಡುಕಾಡುತಿರುವೆನು
ಕಳೆದಿರುವ ಅಸ್ಮಿತೆಯ ಹುಚ್ಚನಂತೆ|

|ಕಳೆದುಹೋಯಿತೇಕೆ ಕವನ
ನುಚ್ಚು ನೂರು ಭಾವನೆ
ಸಿಕ್ಕಲಿಲ್ಲ ಯಶವು ಎಂದು
ನಿನಗೆ ಏಕೆ ವೇದನೆ?
ಜೊಳ್ಳೊ ಕಾಳೊ ಮರುಗಬೇಡ
ಬರೆವದೊಂದೆ ಕೆಲಸ ನಿನಗೆ
ಮೆಚ್ಚೊ ಚುಚ್ಚೊ ಕೆಲಸವವಗೆ
ನಿಲ್ಲದಿರಲಿ ಸಾಧನೆ ||

No comments:

Post a Comment