Saturday, November 19, 2011

ಜಾಬ್ಸ್ ಜಾತ್ರೆಯಲ್ಲಿ ಮರೆತೋದ ರಿಚ್ಚಿ

ಆಪಲ್ ಸ್ಥಾಪಕ ಸ್ಟೀವ್ ಜಾಬ್ಸನ ವಿಚಾರಗಳೆಲ್ಲಾ ಕದ್ದಿದ್ದು. ಅವನ ಸ್ವಂತದ್ದು ಏನೂ ಇಲ್ಲ. ಅವನ ಸಾವಿಗೆ ಅಷ್ಟು ಮನ್ನಣೆ. C, Unix ಗಳನ್ನು ಕಂಡು ಹಿಡಿದ ಡೆನ್ನಿಸ್ ರಿಚ್ಚಿಯ ಸಾವು ಯಾರೂ ಕಂಡೂ ಕೇಳದಂತೆ ಮರೆಯಾಗಿ ಹೋಯಿತಲ್ಲಾ ಎಂಬ ವೇದನೆಯ ಹಲರೂಪಾಂತರಗಳು ಅಂತರ್ಜಾಲದಲ್ಲೆಲ್ಲಾ ಸುತ್ತಾಡುತ್ತಿದ್ದವು ಕೆಲವಾರದ ಹಿಂದೆ. ಇನ್ನೂ ಅಲ್ಲೊಂದು , ಇಲ್ಲೊಂದು ಅಂತಹ ಫೋಟೋಗಳು, ಪೋಸ್ಟುಗಳು ಸುತ್ತಾಡುತ್ತಲೇ ಇವೆ. ಇಬ್ಬರಲ್ಲಿ ಯಾರು ಹೆಚ್ಚೆಂಬ ವಿಮರ್ಶೆಯನ್ನು ಮಾಡೋದು ಆ ದೈತ್ಯ ಪ್ರತಿಭೆಗಳೆದುರು ಪಾಮರನಾದ ನನ್ನಿಂದೆಂತೂ ಅಸಾಧ್ಯ. ಆದರೆ ಇಂದು ಮತ್ತೊಂದು ಅಂತಹದೇ ಪೋಸ್ಟನ್ನೋದಿದಾಗ ನನಗನಿಸಿದ ಭಾವಗಳನ್ನು ಹಂಚಿಕೊಳ್ಳುತ್ತಿದ್ದೇನೆ.

 
ಪಿಯುಸಿಯಲ್ಲಿ ಕಂಪ್ಯೂಟರ್ ಓದಿದವರಿಂದ ಹಿಡಿದು,BCA, BE, BCom (Computers) , Diploma ಹೀಗೆ ಹಲವು ವಿಷಯಗಳನ್ನೋದಿದ ಜನರೆಲ್ಲಾ C ಎಂಬ Programming ಭಾಷೆಯನ್ನು ಓದೇ ಇರುತ್ತಾರೆ. ಬಲ್ಬು ಕಂಡುಹಿಡಿದವರು ಯಾರು ಎಂದರೆ ಎಂಥಾ ಟ್ಯೂಬ್ಲೈಟಾದರೂ ಥಾಮಸ್ ಅಲ್ವಾ ಎಡಿಸನ್ ಅಂತ ಹೇಳ್ತಾರಲ್ವಾ ಹಾಗೇನೆ ಇವರಿಗೆಲ್ಲಾ C ಯನ್ನು ಕಂಡುಹಿಡಿದವರು ಯಾರು ಅಂದರೆ ತಟ್ಟನೆ ಬರುವ ಉತ್ತರ ಡೆನ್ನಿಸ್ ರಿಚ್ಚಿ, ಕೆರಿಂಗ್ ಹ್ಯಾಮ. ನಾನೂ ಓದಿ ಇಷ್ಟಪಟ್ಟ Programming ನ ಮೊದಲ ಪುಸ್ತಕ The C Programming Language . ಆಗ ರಿಚ್ಚಿಯ ಬಗ್ಗೆ ಅಷ್ಟು ತಿಳಿದಿರಲಿಲ್ಲ. ನಂತರ ಮೂರನೆಯ ಸೆಮಿಸ್ಟರಿನಲ್ಲಿ Unix ಅನ್ನೋ ವಿಷಯ ಇತ್ತು. ಅದರ ಬಗ್ಗೆ ಗೊತ್ತಿಲ್ದೇ ಇರೋರಿಗೆ ಹೇಳೋದಾದರೆ ನೀವು ಬಳಸ್ತಾ ಇರೋ Windows XP, Windows 7, Vista ಗಳಂತೆ ದುಡ್ಡು ಕೊಟ್ಟು Genuine ಅವತರಣಿಕೆ ಪಡೆಯಬೇಕೆಂಬ ರೇಜಿಗೆಯಿಲ್ಲದ್ದದು. ಯಾರು ಬೇಕಾದರೂ ಉಚಿತವಾಗಿ ಬಳಸಬಹುದಾದ ದತ್ತಾಂಶ Open Source ಗಳ ಪರಿಕಲ್ಪನೆಯನ್ನು ಹುಟ್ಟಿಹಾಕಿದ್ದೇ Unix ನ ಮತ್ತೊಂದು ರೂಪ Linux. ಇರಲಿ, ಆ Linux ಅನ್ನು ರೂಪಿಸುವಲ್ಲಿಯೂ ಕೆನ್ ಥಾಮ್ಸನ್ ಅನುವವರೊಂದಿಗೆ ಕೈ ಜೋಡಿಸಿದ್ದು ಇದೇ ರಿಚ್ಚಿ.
 
ಸರಿ, ಪ್ರೋರ್ಗಾಮಿಂಗ್ ಭಾಷೆಯನ್ನು , ಇನ್ನೊಂದು ಕಂಪ್ಯೂಟರ್ ಭಾಷೆಯನ್ನು ಕಂಡುಹಿಡಿದಾಕ್ಷಣ ಅದು ಮಹಾನ್ ಸಾಧನೆಯೇ ಎಂಬ ಸಂದೇಹ ಈಗಾಗಲೇ ಬಂದಿದ್ದರೆ ಅದನ್ನು ಪರಿಹರಿಸಲೋಸುಗ ಈ ಕೆಲವು ಸಾಲುಗಳು..ರಿಚ್ಚಿ ಸತ್ತ ದಿನ ಅವರ ದೀರ್ಘ ಕಾಲೀನ ಸಹೋದ್ಯೋಗಿ ರೋಬ್ ಪೈಕ್ ಸೂಚಿಸಿದ ಸಂತಾಪ ನುಡಿಗಳಿಂದ.

" C ಹಳೆಯದಾಗಿದೆ. ಆದರೂ ಇನ್ನೂ ಅದರ ಉಪಯೋಗ ಕಡಿಮೆಯಾಗಿಲ್ಲ. ಯುನಿಕ್ಸ, ಲಿನಕ್ಸ, ಮ್ಯಾಕ್(ಸ್ಟೀವ್ ಜಾಬ್ಸನದು),ವಿಂಡೋಸ್ನ(XP) ಒಳಪದರ(Kernel) ಲನ್ನು ಬರೆದಿರೋದು C ನಲ್ಲೇ:-). ಹೆಚ್ಚಿನ ಎಲ್ಲಾ ಬ್ರೌಸರ್ಗಳನ್ನು, ಪರಿಚಾರಕ(web server) ಬರೆದಿರೋದು C,C++ ನಲ್ಲೇ. ಅಂತರ್ಜಾಲದ ಹೆಚ್ಚೆಲ್ಲಾ ವಾತಾವರಣವಿರುವುದು C, ಅಥವಾ ಅದರಿಂದ ಸ್ಪೂರ್ತಿ ಪಡೆದ Java, Ruby, Python ನಂತಹ ಭಾಷೆಗಳಲ್ಲಿಯೇ. ದೂರವಾಣಿಯನ್ನು ನಿರ್ವಹಿಸುವಂತಹ ಜಾಲವನ್ನೂ C ಯಲ್ಲೇ ಬರೆಯಲಾಗಿದೆ.

ಇಷ್ಟೇ ಅಲ್ಲ. ಮುಂಚೆ ಎಲ್ಲ ಕಂಪ್ಯೂಟರ್ ಕಾರ್ಯನಿರ್ವಹಿಸಲು ಬೇಕಾದ ಮಾಹಿತಿಯನ್ನು ಕೆಳಮಟ್ಟದ ಕಂಪ್ಯೂಟರಿಗೆ ಸುಲಭವಾಗಿ ಅರ್ಥವಾಗುವಂತಹ ಭಾಷೆಗಳಲ್ಲಿ ಬರೆಯುತ್ತಿದ್ದರು(assembly). ಅದನ್ನು ಮೇಲ್ಮಟ್ಟದ, ಮನುಷ್ಯರಿಗೆ ಅರ್ಥವಾಗುವಂತಹ ಭಾಷೆಯಲ್ಲಿ ಬರೆದ ಶ್ರೇಯಸ್ಸು ಸಲ್ಲಬೇಕಾದ್ದು Unix ಮತ್ತು ರಿಚ್ಚಿಗೆ. ಅವರು ಸ್ಟೀವ್ ಜಾನ್ಸನ್ ಜೊತೆ ಸೇರಿ ಒಂದೆಡೆ ಬರೆದ ಪ್ರೋಗ್ರಾಮ್ ಯಾವುದೇ ಕಂಪ್ಯೂಟರಿನಲ್ಲಿ , ಏನೊಂದೂ ಬದಲಾವಣೆಯಿಲ್ಲದಂತೆ ವ್ಯವಹರಿಸುವಂತೆ ರೂಪಿಸಲು ಶ್ರಮಿಸಿದರು. ಮೇಲ್ಗಡೆ ಇರುವ ಆಪರೇಟಿಂಗ್ ವ್ಯವಸ್ಥೆಗೂ ಕೆಳಗಣ ಹಾರ್ಡವೇರ ಮೇಲೆಯೇ ನೇರವಾಗಿ ಅವಲಂಭಿತವಾಗೋ ವ್ಯವಸ್ಥೆ ತಪ್ಪಿಸಿದ ಶ್ರೇಯ ಅವರಿಗೇ ಸಲ್ಲಬೇಕು."


(ಇಂದು ಎಷ್ಟೊಂದು ಬಗೆಬಗೆಯ ಕಂಪ್ಯೂಟರ್ ಹಾರ್ಡವೇರ್ಗಳಿವೆ. ಅದು ಪ್ರತಿಯೊಂದಕ್ಕೂ ಪ್ರತ್ಯೇಕ ತಂತ್ರಾಂಶ ಬರೆಯೋದಂದ್ರೆ ಬರೆಯೋನಿಗೂ ತಲೆನೋವು. ಬಳಸೋನಂತೂ ಹುಡುಕಿ ಹಾಕೋದ್ರೊಳಗೆ ಸುಸ್ತೋ ಸುಸ್ತು.)

"ಸ್ಟೀವ್ ಜಾಬ್ಸನ ಸಂತಾಪಸಂದೇಶದಲ್ಲಿ ಅಂತರ್ಜಾಲ ಕಂಡುಹಿಡಿದ ಬರ್ನರ್ಸ್ ಲೀ, ಜಾಬ್ಸನಿಂದ ಕಂಡುಹಿಡಿದ ನೆಕ್ಟಬಾಕ್ಸನ್ನ ಉಪಯೋಗಿಸಿದ ಅಂತ ಓದಿದೆ. ಆದರೆ ಅದರಲ್ಲಿದ್ದ ಆಪರೇಟಿಂಗ್ ಸಿಸ್ಟಂ ಮತ್ತು ಅದನ್ನು ಬರೆದ ಭಾಷೆ ಯಾವುದಾಗಿತ್ತು ಎಂದು ಮರೆಯಬಾರದು"
 
ಮುಗಿಸುವ ಮುನ್ನ
ಮುಕ್ತ ತಂತ್ರಾಂಶ ಎಂದರೆ ಅದನ್ನು ಯಾರು ಬೇಕಾದರೂ ಉಪಯೋಗಿಸಬಹುದೆಂದೇ ಅರ್ಥ. ಅಂತದ್ರಲ್ಲಿ ಅದನ್ನು ಬೆಳೆಸಿಕೊಂಡು ಬೆಳೆದ ಅಂದ ಮಾತ್ರಕ್ಕೆ ಜಾಬ್ಸ್ ಒಬ್ಬ ಕಳ್ಳನಾಗುತ್ತಾನೆಯೇ? ಅದನ್ನು ಬಳಸಿದವ ಅವನೊಬ್ಬನೇ ಅಲ್ಲವಲ್ಲಾ? ನೂರಾರು, ಸಾವಿರಾರು ಜನರ ಮಧ್ಯೆ ಅವನೂ ಒಬ್ಬ. ಆದರೂ ಜಾಬ್ಸನೇ ಯಾಕೆ ಬೇಕು? ಅವನೇನೂ ಪುಕ್ಕಟೆ ನೀಡಿ ಅಪಪ್ರಚಾರ ಮಾಡಲಿಲ್ಲವಲ್ಲ, ಆಪಲ್ಲನ್ನು ಬಳಸಲು ಇಷ್ಟವಿದ್ದವರೇ ಅದರ ಬೆಲೆ ಹೆಚ್ಚಾದರೂ ತೆಗೆದುಕೊಂಡರು. XWindow ಅನ್ನೋ ಪರಿಕಲ್ಪನೆಯನ್ನು ಮೊದಲಿಗೆ ತಂದಿದ್ದು ಲಿನಕ್ಸು. GUI ಇದ್ದ ಮೊದಲ ಬ್ರೌಸರು Mosaic ಬ್ರೌಸರು ಕೂಡ ಲಿನಕ್ಸಿನದೇ. ಇದನ್ನೆಲ್ಲಾ ಬಳಸಿಕೊಂಡ ಮೈಕ್ರೋಸಾಪ್ಟನ್ನೂ ಕಳ್ಳರೆನ್ನುತ್ತೀರಾ ಹಾಗಾದರೆ?

ಮೊದಲೇ ಹೇಳಿದಂತೆ ಜಾಬ್ಸ ಮತ್ತು ರಿಚ್ಚಿ ಇಬ್ಬರೂ ಅಗಾಧ ಪ್ರತಿಭೆಗಳೆ. ಆದರೆ ರಿಚ್ಚಿ ಹೆಚ್ಚು ಸಮಯ ಕಳೆದಿದ್ದು ಪ್ರಯೋಗಾಲಯದಲ್ಲೇ. ಹೊಸತೊಸತು ಹುಡುಕುವ ಬಗ್ಗೆ , ತಮ್ಮ ಅನ್ವೇಷಣೆಗಳ ಪ್ರಯೋಜನವನ್ನು ಬೇರೆ ಕ್ಷೇತ್ರಗಳಿಗೆ ದಾಟಿಸುವ ಬಗ್ಗೆ ಅವರು ಶ್ರಮಪಟ್ಟಿರಬಹುದೇ, ಆ ವಿಜಯವನ್ನೇ ಆನಂದಿಸಿರಬಹುದೇ ಹೊರತು ಪ್ರಚಾರದಲ್ಲಲ್ಲ. ಆದರೂ ಟ್ಯಾರಿಂಗ್ ಪ್ರಶಸ್ತಿ, ಹಾಮಿಂಗ್ ಪದಕ, ಗಣಕೇತಿಹಾಸ ಸಂಘದ ಗೌರವ ಸದಸ್ಯ,ಜಪಾನ್ ಪ್ರಶಸ್ತಿ, ದೇಶದ ತಂತ್ರಜ್ಞಾನ ಪ್ರಶಸ್ತಿಗಳಂತವು ಅವರನ್ನು ಹುಡುಕಿಕೊಂಡು ಬಂದವು. ಆದರೆ ಜಾಬ್ಸ ಹಾಗಲ್ಲ. ಪ್ರತೀ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ತಂದಾಗಲೂ ಅದಕ್ಕೆ ಪ್ರಚಾರ ನೀಡಲೇ ಬೇಕಲ್ಲವೇ? ಕಂಪೆನಿ ಮೊದಲು , ನಂತರ ತಾನು ಎಂಬತಹ ತತ್ವವನ್ನಿಟ್ಟುಕೊಂಡಿದ್ದರೂ ಆಪಲ್ನ ಹಲವು ಉತ್ಪನ್ನಗಳೊಂದಿಗೆ ಆತನೂ ಪ್ರಖ್ಯಾತನಾದ.

ಮುಗಿಸುವ ಮೊದಲ ಕೊನೆಯ ಪ್ರಶ್ನೆ. ಒಬ್ಬ ವ್ಯಕ್ತಿಯನ್ನು ಹೊಗಳುವಾಗ ಮತ್ತೊಬ್ಬನನ್ನು ತೃಣೀಕರಿಸಲೇ ಬೇಕೆ? ಸರ್ವಕಾಲಿಕ ಸತ್ಯವೆಂಬುದಿರಲು ಸಾಧ್ಯವಿಲ್ಲ. ನನಗೆ ಸತ್ಯವೆಂದನಿಸಿದ್ದು ನಿಮಗೆ ಸುಳ್ಳೆನಿಸಬಹುದು. ಆದರೆ ಎರಡರ ಸಾಧ್ಯತೆಯನ್ನು ಒಟ್ಟಿಗೆ ಅಂಗೀಕರಿಸಬಹುದಲ್ಲವೇ?

ಮಾಹಿತಿ, ಚಿತ್ರ ಮೂಲ: ವಿಕಿಪೀಡಿಯ, ಜೈವೀರ್ ರಾವ್, https://plus.google.com/u/0/101960720994009339267/posts/33mmANQZDtY#101960720994009339267/posts/33mmANQZDtY 
(ವಿನಂತಿ: ನಾನಿಲ್ಲಿ ಬಳಸಿದ ಆಂಗ್ಲ ಪದಗಳಿಗೆ ಪರ್ಯಾಯವಾದ ಕನ್ನಡ ಪದಗಳಿದ್ದರೆ ದಯವಿಟ್ಟು ತಿಳಿಸಿ. ಮುಂದೆ ಬರೆಯುವಾಗ ಅದನ್ನೇ ಬಳಸಲು ಪ್ರಯತ್ನಿಸುತ್ತೇನೆ)

6 comments:

 1. >> ಒಬ್ಬ ವ್ಯಕ್ತಿಯನ್ನು ಹೊಗಳುವಾಗ ಮತ್ತೊಬ್ಬನನ್ನು ತೃಣೀಕರಿಸಲೇ ಬೇಕೆ?

  ಖಂಡಿತ ಇಲ್ಲ! ನನಗೆ ಇಬ್ಬರ ಬಗ್ಗೆಯೂ ಗೌರವವಿದೆ!!

  ReplyDelete
 2. ಹಾ. ಹೌದು . ನನ್ನದೂ ಅದೇ ಅಭಿಪ್ರಾಯ.. ಪ್ರತಿಕ್ರಿಯೆಗೆ ವಂದನೆಗಳು :-)

  ReplyDelete
 3. ಯಾವುದೇ ವ್ಯಕ್ತಿ ದೊಡ್ಡ ಮಟ್ಟಕ್ಕೆ ಬೆಳೆದಿದಾನೆ ಅ0ದ್ರೆ ಅದ್ರಲ್ಲಿ ಅವನ ಪರಿಶ್ರಮ ಇದ್ದೇ ಇರುತ್ತದೆ ಹಾಗಾಗಿ ಯಾರನ್ನೇ ತೆಗಳುವುದು ಸರಿ ಅಲ್ಲ ಏನ0ತೀರ?

  ReplyDelete
 4. ಹಾ. ಹೌದು. ನನ್ನದೂ, ಈ ಲೇಖನದ್ದೂ ಅದೇ ಅಭಿಪ್ರಾಯ . ಬ್ಲಾಗ್ ಭೇಟಿಗಾಗಿ ವಂದನೆಗಳು ಕಾಳೆ :-)

  ReplyDelete
 5. ತಂತ್ರಾಜ್ಞಾನ ಯುಗದಲ್ಲಿ ಅನುಭವಿಸುವುದು ಮಾತ್ರ ನಮ್ಮ ಕೆಲಸ. ಅದು ಈ ಯಾಂತ್ರಿಕ ಬದುಕಿನಲ್ಲಿ ಸ್ವಿಚ್‍ ಅದುಮಿದಂತ ನಮ್ಮ ಚಟುವಟಿಕೆಗಳು.ಅದರ ಅಡಿಪಾಯದಲ್ಲಿ ಮಡಿದವರ ನೆನಪು ಬರುವುದು ಕಡಿಮೆ.ಇಂದಿನ ಸಮಾಜಕ್ಕೆ ಉತ್ತಮ ಮಾಹಿಯ ಲೇಖನವನ್ನು ಬರೆದು ಜ್ಞಾನದ ಬತ್ತಿ ಹಚ್ಚಿದ್ದೀರಿ. ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಹಂಚಿಕೊಳ್ಳುವುದು ಕೆಲವರು ಮಾತ್ರ. ಅದರಲ್ಲಿ ನೀವೂ ಒಬ್ಬರು.ಕಂಪ್ಯೂಟರ ತಂತ್ರಜ್ಞಾನದ ಜನಕರುಗಳನ್ನು ನಾಡಿಗೆ ಪರಿಚಯಿಸಿದ್ದಕ್ಕೆ ಅನಂತಾನಂತ ಅಭಿನಂದನೆಗಳು.

  ReplyDelete
 6. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ರವಿ ಮೂರ್ನಾಡರೇ :-) ನನ್ನ ಮಿನ್ನೆಲೆಯವರೆಗೂ ಬಂದು ಪ್ರತಿಕ್ರಿಯಿಸಿದ್ದೀರ. ಅದಕ್ಕೂ ಮತ್ತೊಮ್ಮೆ ವಂದನೆ :-)

  ReplyDelete